- ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ - ಸೆಪ್ಟೆಂಬರ್ 12, 2024
- ಹಾಲಾಡಿಯಲ್ಲಿ ಹಾರುವ ಓತಿ - ಜುಲೈ 20, 2024
- ನಾಡೋಜ ಕಮಲಾಮೇಡಂಗೆ ಅಂತಿಮ ನಮನಗಳು - ಜೂನ್ 22, 2024
ವಚನ ಸಾಹಿತ್ಯಾಕಾಶದ ಉಜ್ವಲ ನಕ್ಷತ್ರ ಅಕ್ಕಮಹಾದೇವಿ. ಈಕೆ ತನ್ನ ವೈಚಾರಿಕತೆ ಮತ್ತು ಆತ್ಮಪ್ರತ್ಯಯದ ಮೂಲಕ ಬೆಳಕಾದವಳು. ಈಕೆ ಸಂಸಾರದಲ್ಲಿದ್ದೂ ಇಲ್ಲದ ಹಾಗೆ ಅದರ ಜಂಜಡದಲ್ಲಿ ಸಿಲುಕದೆ ತಾವರೆಯ ಎಲೆಯ ಮೇಲಿನ ನೀರಿನಂತೆ ಅಂಟಿಯೂ ಅಂಟದಂತೆ ಇದ್ದವಳು. ‘ಸಾಮಾಜಿಕ ಪ್ರಭುತ್ವ’ ಮತ್ತು ‘ರಾಜಪ್ರಭುತ್ವ’ ಎರಡನ್ನೂ ಏಕಕಾಲಕ್ಕೆ ಧಿಕ್ಕರಿಸಿದವಳು. ಅರ್ಥಾತ್ ‘ಅಂಗಭಾವ’ವನ್ನು ತ್ಯಜಿಸಿ ‘ಲಿಂಗಭಾವ’ವನ್ನು ಬೆಳೆಸಿಕೊಂಡವಳು.
ಸುಖಲೋಲುಪತೆಯ ತುತ್ತತುದಿ ತಲುಪಿ ವೈರಾಗ್ಯಕ್ಕೆ ಹೊರಳಿದವನು ಆದಿ ತೀರ್ಥಂಕರ, ಪರಾಕ್ರಮದ ತುತ್ತತುದಿ ತಲುಪಿ ವೈರಾಗ್ಯಕ್ಕೆ ಹೊರಳಿದ ಬಾಹುಬಲಿ ಅಂತೆಯೇ ಸೌಂದರ್ಯದ ತುತ್ತತುದಿ ವೈರಾಗ್ಯವನ್ನು ತಳೆದವಳು ಅಕ್ಕಮಹಾದೇವಿ. ಈಕೆ ಸಮಾಜಮುಖಿಯಾಗಿ ಹೊರಟವಳು. ಅಂದಿಗೂ ಇಂದಿಗೂ ಈಕೆಯ ವೈಚಾರಿಕ ನಿಲುವು ಔಪಚಾರಿಕವಾಗಿಲ್ಲ, ಪ್ರಚಾರಪ್ರಿಯವಾಗಿಲ್ಲ. ‘ನಿಂದನೆ’ ಹಾಗು ‘ನಿವೇದನೆ’ಯ ಮೂಲಕ ಈಕೆಯ ವೈಚಾರಿಕ ನಿಲುವುಗಳು ಜಗತ್ತಗೇ ಆದರ್ಶದ ಪಾಠವನ್ನು ಹೇಳಿವೆ.
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹೆಣ್ಣಿನಧ್ವನಿಯನ್ನು ಮೊದಲು ಎತ್ತಿದವರು ಅಕ್ಕಮಹಾದೇವಿ ಈಕೆ ಮೊದಲನೆ ವಚನಕಾರ್ತಿ. ಸ್ತ್ರೀಪರ ನಡೆದ ಬಂಡಾಯ ಹೋರಾಟದ ಆದ್ಯಪ್ರವರ್ತಕಿ ಎಂದೂ ನಮಗೆ ಚಿರಪರಿಚಿತವಾಗಿದ್ದಾಳೆ. ಕವಿ ಜಿ.ಎಸ್.ಎಸ್ ರವರು “ಕನ್ನಡ ಸಾಹಿತ್ಯದಲ್ಲಿ ಎರಡು ಮಾದರಿಯ ಹೋರಾಟ ಗಮನಿಸಬಹುದು ಎಂದಿದ್ದಾರೆ.
ಒಂದು ಸ್ತ್ರೀಪ್ರತಿಭಟನೆಯ ರೀತಿ ಅದು ಅಕ್ಕಮಹಾದೇವಿಯದ್ದು, ಇನ್ನೊಂದು ಒಪ್ಪಿಸಿ ಸ್ಥಾಪಿಸುವ ಬಗೆ ಅದು ಸಂಚಿಹೊನ್ನಮ್ಮಳದು.
ಇವೆರಡರಲ್ಲಿ ಅಕ್ಕಮಹಾದೇವಿಯ ಹೋರಾಟ ಸ್ತ್ರೀಸಮುದಾಯದ ಕುರಿತಾದ ಚಿಂತನೆಯ ದಿಕ್ಕನ್ನೇ ಬದಲಿಸಿತು” ಎನ್ನುತ್ತಾರೆ. ಅಕ್ಕನ ವಚನಗಳು ಕಾವ್ಯದ ದೃಷ್ಠಿಯಿಂದಲೂ ಅಲಂಕಾರ, ದೃಷ್ಟಾಂತಗಳಿಂದ ಕೂಡಿದ್ದು ಸಂಕೀರ್ಣವಾಗಿ ಹಾಗು ಸಂಗತದಿಂದ ಕೂಡಿವೆ. ನಮಗೆ ದೊರೆತಿರುವ ಅಕ್ಕನ ಒಂದೊಂದು ವಚನಗಳು ಒಂದೊಂದು ಒಂದೊಂದು ಅಣಿಮುತ್ತುಗಳು.ಅಜ್ಞಾನದಿಂದ ಸುಜ್ಞಾನದ ಕಡೆಗೆ ಕೊಂಡೊಯ್ಯುವ ಕೈದೀವಿಗೆಗಳಾಗಿವೆ.
ಬನವಾಸಿಯ ಉಡುತಡಿ ಎಂಬ ಗ್ರಾಮದಲ್ಲಿ ಮಹಾದೇವಿ ಹಾಗು ನಿರ್ಮಲಸೆಟ್ಟಿ ಎಂಬುವರ ಪುತ್ರಿಯಾಗಿ ಕ್ರಿ.ಶ. ೧೧೬೦ ರಲ್ಲಿ ಜನಿಸುತ್ತಾರೆ. ಹೆಣ್ಣಿನ ಭಾವನೆಗಳು ಕೈ ಹಿಡಿದವರಿಗೇ ಮೀಸಲು ಎಂಬಂತೆ ತನ್ನ ವಚನಗಳಲ್ಲಿ “ನೀನು,ನಾನು,ಚನ್ನಮಲ್ಲಿಕಾರ್ಜುನ” ಎಂಬ ಪದಗಳನ್ನು ಬಳಸಿದ್ದಾರೆ. ಒಟ್ಟಾರೆ ಹೇಳಬೇಕೆಂದರೆ ಅಕ್ಕನ ವಚನಗಳು ಆತ್ಮ,ಪರಮಾತ್ಮ,ಸಂಸಾರ,ಬಂಧನ ಬಿಡುಗಡೆ ಮುಂತಾದವುಗಳ ಪರಿಮಿತಿಯಲ್ಲಿ ಪರಿಭ್ರಮಿಸುವ ಭಕ್ತೆಯೊಬ್ಬಳ ಹೋರಾಟದಂತಿದೆ. ಈಕೆ ತನ್ನ ದಾಂಪತ್ಯವನ್ನು ಆತ್ಮಸಾಧನೆಗೆ ಒಪ್ಪಿಸಿಕೊಂಡವಳು.
“ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚೆಲುವಂಗೆ ಆನೊಲಿದೆನಲ್ಲ………” ಎಂಬ ವಚನದಲ್ಲಿ ಭವ,ಭಯ ಎರಡೂ ಇಲ್ಲದ ನಿಸ್ಸೀಮ ಚೆಲುವಂಗೆ ಆನೊಲಿದೆ ಎಂದು ಭಗವಂತನಲ್ಲಿ ಆಕೆಗೆ ಇದ್ದಂತಹ ಅನನ್ಯತೆಯನ್ನು ಹೇಳಿಕೊಳುತ್ತಾಳೆ. ಅಕ್ಕ ವಾಸ್ತವ ಬದುಕಿನಿಂದ ವಿಮುಖ ಆದಳು…. ಪಲಾಯನವಾದಿಯಾದಳು.. ಎನ್ನುವ ಹಾಗಿಲ್ಲ . ಲೌಕಿಕ ಗಂಡರಲ್ಲಿ ಕಾಣದ ಅನ್ಯೋನ್ಯತೆಯನ್ನು , ಭಾವಪರವಶತೆಯನ್ನು ಪರಮಾತ್ಮನಲ್ಲಿ ಕಂಡೆ ಎನ್ನುತ್ತಾಳೆ. ಹಾಗಾಗಿ “ಸಾವಕೆಡುವ ಗಂಡರನೊಯ್ದು ಒಲೆಯೊಳಗಿಕ್ಕು” ಎಂದಿರುವುದು.
ಕೌಶಿಕ ಮಹಾರಾಜನನ್ನು ಬಿಟ್ಟುಹೊರಟಳು ಎಂಬಲ್ಲಿ ಆಕೆ ಮದುವೆಯನ್ನು ನಿರಾಕರಿಸಲಿಲ್ಲ.ಮದುವೆಯ ವ್ಯವಸ್ಥೆಯನ್ನು ನಿರಾಕರಿಸಿದಳು ಅಷ್ಟೆ. ಮದುವೆಯಲ್ಲಿ ಹೆಣ್ಣಿಗೆ ಆಯ್ಕೆ ಸ್ವಾತಂತ್ರ್ಯ ತಿರಸ್ಕರಿಸಿದ್ದರ ವಿರೋಧವಾಗಿ ಪುಟಿದೇಳುತ್ತಾಳೆ.ಈಕೆಯ ಪ್ರಕಾರ ಸಂಸಾರ ವರ್ಜ್ಯ ಅಲ್ಲ.”ಹಾವಿನಬಾಯ ಹಲ್ಲ ಕಳೆದು ಹಾವನಾಡಿಸಬಲ್ಲಡೆ ಹಾವಿನ ಸಂಗವೇ ಲೇಸು ಕಂಡಯ್ಯ” ಎಂದು ಸಂಸಾರದಲ್ಲಿ ಅರಿಷರ್ಡ್ವ್ಗಗಳನ್ನು ನೀಗಬಲ್ಲನಾದಡೆ, ಶಿವಚಿಂತನೆಯನ್ನು ಮಾಡಬಲ್ಲನಾದೊಡೆ ಸಂಸಾರವೂ ಆಗಬಹುದು ಎಂಬ ನಿಲುವನ್ನು ವ್ಯಕ್ತಪಡಿಸುತ್ತಾಳೆ. ಇದೇ ಅಭಿಪ್ರಾಯವನ್ನು ಆದ್ಯವಚನಕಾರ ದಾಸಿಮಯ್ಯನು “ಸತಿಪತಿಯೊಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ” ಎಂದರೆ ಬಸವಣ್ಣನವರು “ಮರ್ತ್ಯ ಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ” ಎಂದಿದ್ದಾರೆ. ಅಂದರೆ ಅಧ್ಯಾತ್ಮಿಕ ಸಾಧನೆಗೆ ಸಂಸಾರ ತ್ಯಜಿಸಿ ವಾನಪ್ರಸ್ಥವನ್ನೇ ಪ್ರವೇಶಿಸಬೇಕಿಲ್ಲ ಎಂಬ ಭಾವ.
ಕೌಶಿಕ ಮಹಾರಾಜನ ಆಕ್ರಮಣಕಾರಿ ನೀತಿಯನ್ನು ಹೇಳುವ ಸಂದರ್ಭದಲ್ಲಿ ಸೌಂದರ್ಯ ಮತ್ತು ಗುಣಗಳನ್ನು ಕುರಿತ ವಚನವನ್ನು ಹೇಳುತ್ತಾಳೆ.
ಚಂದನವ ಕಡಿದು ಕೊರೆದು ತೇದೊಡೆ ನೊಂದೆನೆಂದು
ಕಂಪ ಬಿಟ್ಟಿತ್ತೆ ಅಯ್ಯಾ ಸುವರ್ಣವ ಕಡಿದೊಡೆ
ಬೆಂದು ಕಳಂಕ ಹಿಡಿದಿತ್ತೆ ಸಂದು ಸಂದು ಕಡಿದ ಕಬ್ಬ
ಕಬ್ಬುನವ ಗಾಣದಲಿಕ್ಕೆ ಬೆಂದು ಪಾರಾಗುಳ್ಳ
ಸಕ್ಕರೆಯಾಗಿ ನೊಂದೆನೆಂದು ಸಿಹಿಬಿಟ್ಟಿತ್ತೆ
ನಾ ಹಿಂದೆ ಮಾಡಿದೆ ಹೀನಂಗಳೆಲ್ಲವ ತಂದು
ಮುಂದಿಳುಹಲು ನಿಮಗೆ ಹಾನಿಯೇ
ಎನ್ನ ತಂದೆ ಮಲ್ಲಿಕಾರ್ಜುನ ದೇವಯ್ಯ
ಕೊಂದಡೆ ಶರಣನೆಂಬುದು ಮಾಣೆ
ಗಂಧ ಏನೇ ಆದರೂ ತನ್ನ ಕಂಪನ್ನು ಬಿಡುವುದಿಲ್ಲ ಹಾಗೆ ಬಂಗಾರವೂ ಎಷ್ಟೇ ಕತ್ತರಿಸಿ ಬಡಿಸಿಕೊಂಡರೂ ತನ್ನ ಹೊಳಹನ್ನು ಕಳೆದುಕೊಳ್ಳುವುದಿಲ್ಲ ಹಾಗೆಯೇ ಕಬ್ಬೂ ಸಹ ಎಷ್ಟೇ ಅರೆದರೂ, ಕಾಯಿಸಿದರೂ ತನ್ನ ಸಿಹಿಯನ್ನು ಬಿಡುವುದಿಲ್ಲ. ಅಂತೆಯೇ ಸಜ್ಜನರು ಎಷ್ಟೇ ಕಷ್ಟವಾದರೂ ಸತ್ಪಾತ್ರರಾಗಿರಬೇಕೇ ವಿನ: ಸತ್ಕಾರ್ಯ ಬಿಟ್ಟು ಮೂಢರಾಗಬಾರದು ಎಂದು ತಿಳಿವಳಿಕೆ ಹೇಳುತ್ತಾಳೆ.
ಹೆಣ್ಣಿನ ಅಸ್ಮಿತೆ
ಮಹಿಳಾ ಸಂವೇದನೆಯನ್ನು ಜಾಗತಿಕ ಮಟ್ಟದಲ್ಲಿ ಅರ್ಥಪೂರ್ಣವಾಗಿ ಹೇಳಿದವರು ವಚನಕಾರ್ತಿಯರು. ಹಾಗೆ ಸೂತಕ ಎಂದು ಹೆಣ್ಣನ್ನು ಆ ಬೇಲಿಯೊಳಗೇ ಬಂಧಿಸಿಡುತ್ತಿದ್ದ ಕಾಲದಲ್ಲಿ
ಹೆಣ್ಣು ಹೆಣ್ಣಾದರೆ ಗಂಡಿನ ಸೂತಕಕ್ಕೆ ಮರುಳಾಯ್ತು ಜಗವೆಲ್ಲಾ
ಗಂಡು ಗಂಡಾದರೆ ಹೆಣ್ಣಿನ ಸೂತಕ
ಮನದ ಸೂತಕ ಹಿಂಗದಡೆ
ತನುವಿನ ಸೂತಕಕ್ಕೆ ತೆರಹುಂಟೇ
ಅಯ್ಯಾ! ಮೊದಲಿಲ್ಲದ ಸೂತಕ್ಕೆ ಮರುಳಾಯ್ತು ಜಗವೆಲ್ಲ
ಎನ್ನ ದೇವ ಚೆನ್ನಮಲ್ಲಿಕಾರ್ಜುನಂಗೆ ಜಗವೆಲ್ಲಾ ಹೆಣ್ಣು ನೋಡಾ
ಎಂದು ಸೂತಕ ಮನಸ್ಸಿಗೆ ಹೊರತು ಮನುಷ್ಯನ ದೇಹಕ್ಕಲ್ಲ ಎಂದು ಬಲವಾಗಿ ಪ್ರತಿಪಾದಿಸುತ್ತಾರೆ. ಹೆಣ್ಣಿಗೂ ಪ್ರತ್ಯೇಕಸ್ಥಾನ,ಆತ್ಮಸಾಕ್ಷಿ,ಚಿಂತನೆ ಮಾಡುವ ಅಧಿಕಾರ ಇದೆ ಎನ್ನುತ್ತ ಪರುಷ ಸರ್ವಾಧಿಕಾರವನ್ನು ಪ್ರತಿಭಟಿಸಿದವರು ಅಕ್ಕಮಹಾದೇವಿ ನಂತರದ ದಿನಗಳಲ್ಲಿ ಅಕ್ಕನ ಈ ನಿಲುವು ಹೆಣ್ಣನ್ನು ನೋಡುವ ದೃಷ್ಠಿಕೋನವನ್ನೇ ಬದಲಿಸಿತು.
ಲಿಂಗ ಸಮಾನತೆ
ಪ್ರಸ್ತುತ ದಿನಮಾನಗಳಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. ಈ ಅಸಮತೋಲನವನ್ನು ೯೦೦ ವರ್ಷಗಳ ಹಿಂದೆಯೇ ಊಹಿಸಿದ್ದ ಅಕ್ಕಮಹಾದೇವಿ ಹೆಣ್ಣಿನ ಸ್ವಂತಿಕೆ ವೈಯುಕ್ತಿಕತೆಯನ್ನು ಕಡೆಗಣಿಸಿ ಭಾವನೆಗಳನ್ನು ನಿಯಂತರಿಸಿ ‘ಸ್ತ್ರೀ’ ಎಂದರೆ ದೇಹ ಮಾತ್ರ ಸಂತಾನೋತ್ಪತ್ತಿಯ ಭಾಗವೆಂದು ಭಾವಿಸಿದವರಿಗೆ “ಭಾವದಲಿ ಹೆಂಗಸಾದರೇನಂತೆ ಭಾವಿಸಲು ಗಂಡು ರೂಪು ನೋಡಾ” ಎಂದು ಖಡಕ್ ಎಚ್ಚರಿಕೆ ನೀಡಿದ್ದಾಳೆ.
ಪುರುಷನ ಮುಂದೆ ಮಾಯೆ ‘ಸ್ತ್ರೀ’ ಯೆಂಬ ಅಭಿಮಾನವಾಗಿ ಕಾಡುವುದು
ಸ್ತ್ರೀಯ ಮುಂದೆ ಮಾಯೆ ಪರುಷನೆಂಬ ಅಭಿಮಾನವಾಗಿ ಕಾಡುವುದು
ಲೋಕವೆಂಬ ಮಾಯೆಗೆ ಶರಣಚಾರಿತ್ರ್ಯ ಮರುಳಾಗಿ ತೋರುವುದು
ಚೆನ್ನಮಲ್ಲಿಕಾರ್ಜುನನೊಲಿದ ಶರಣಂಗೆ ಮಾಯೆಯಿಲ್ಲ ಮರೆಹಿಲ್ಲ ಅಭಿಮಾನವೂ ಇಲ್ಲ ಎಂದು ಆಷಾಢಭೂತಿತನವನ್ನು ಅಲ್ಲಗಳೆಯುತ್ತಾಳೆ.
‘ಆತ್ಮ’, ‘ಪರಮಾತ್ಮ’ ಎಂದು ಹೇಳಿ ಲಿಂಗಾತೀತವಾಗಿ ಸ್ತ್ರೀ-ಪರುಷ ಇಬ್ಬರನ್ನೂ ಲೌಕಿಕ ವ್ಯಾಮೋಹಕ್ಕೆ ಒಳಗಾಗಬೇಡಿ ಎಂದು ಅಹಂಕಾರ, ಅಭಿಮಾನವೂ ಎಲ್ಲವು ‘ಮಾಯೆ’ ಎಂದು ಕರೆದಿದ್ದಾರೆ.
ಬದುಕಿನ ಅಗತ್ಯತೆ
ಚನ್ನಮಲ್ಲಿಕಾರ್ಜುನನ್ನು ಒಲಿದು ಕೌಶಿಕಮಹಾರಾಜನನ್ನು ಬಿಟ್ಟು ಹೊರಬರುವಾಗ ಅನೇಕರು ಅಕ್ಕನಲ್ಲಿ ಪ್ರಶ್ನೆಗಳನ್ನು ಎತ್ತುತ್ತಾರೆ. ಆ ಸಂದರ್ಭದಲ್ಲಿ ಅಕ್ಕ..
“ ಹಸಿವಾದೊಡೆ ಭಿಕ್ಷಾನ್ನಗಳುಂಟು
ತೃಷೆಯಾದರೆ ಕೆರೆಹಳ್ಳ ಬಾವಿಗಳುಂಟು
ಶಯನಕ್ಕೆ ಹಾಳು ದೇಗುಲಗಳುಂಟು ಚೆನ್ನಮಲ್ಲಿಕಾರ್ಜುನಯ್ಯನ ಆತ್ಮಸಂಗಾತ ನೀನೆಗುಂಟು”
ಎಂದು ಹೇಳುವ ಮೂಲಕ ‘ಅಪರಿಗೃಹವೃತ್ತಿ’ಯನ್ನು ‘ಅಸಂಗ್ರಹವೃತ್ತಿ’ಯನ್ನು ಬಿಡಬೇಕು ಎನ್ನುತ್ತಾಳೆ.
ಹೆಸರಿನ ಖ್ಯಾತಿ ಹಣದ ಹಿಂದೆ ಹೊರಟರೆ ನಮ್ಮ ಶರೀರ ಕಾಮದ ಒಡಲಾಗುತ್ತದೆ, ಕ್ರೋಧದ ಹುತ್ತವಾಗುತ್ತದೆ, ಲೋಭದ ತಡಿಕೆಯಾಗುತ್ತದೆ, ಮೋಹದ ಮಂದಿರವಾಗುತ್ತದೆ, ಮದದ ಮಂಟಪವಾಗುತ್ತದೆ, ಮತ್ಸರದ ಹಂದರವಾಗುತ್ತದೆ ಹಾಗಾಗಿ ಹೆಣ್ಣು,ಹೊನ್ನು, ಮಣ್ಣುಗಳ ಸಂಗಾತ ಬಿಟ್ಟು ಬಿಡಬೇಕು ಎಂದು ಕೊಳ್ಳುತ್ತಾಳೆ.
ಆತ್ಮ ವಿಶ್ವಾಸ
ಯಾರೂ ಇಲ್ಲದವಳೆಂದು ಅಳಿಗೊಳಲು ಕೊಂಡೆಯಾ
ಏನೂ ಮಾಡಿದರೂ ಆನಂಜುವಳಲ್ಲ
ತರಗೆಲೆಯ ಮೆಲಿದು ಆನಿಹೆನು
ಸರಿಯ ಮೇಲೆ ಒರಗಿ ಆನಿಹೆ
ಒಳಗೆ ಶೋಧಿಸಿಹೊರಗೆ ಶುದ್ಧಯಿಸಿ ಒಳಹೊರಗೆಯುಭಯ ಶಂಕೆಯ ಕಳೆದು ಸ್ಫಟಿಕದ ಶಲಾಕೆಯಂತೆ ತಲವೆಳಗು ಮಾಡಿ ಸುಕ್ಷೇತ್ರವನರಿದು ಬೀಜವ ಬಿತ್ತುವಂತೆ
ಶಿಷ್ಯನ ಸರ್ವ ಪ್ರಪಂಚ ನಿವೃತ್ತಿಯ ಬೆಳವಣಿಗೆಗೆ ಸಹಾಯಕವಾಗುವ ಉತ್ತಮ ವ್ಯಕ್ತಿತ್ವ ಹಾಗು ಚಾರಿತ್ರ್ಯನಿರ್ಮಾಣಕ್ಕೆ ಬೇಕಾಗುವ ಜ್ಞಾನಗುರು”ವಿನ ವ್ಯಾಖ್ಯೆ ಮರು ವ್ಯಾಖ್ಯಾನಗೊಂಡಾಗ ಮೌಲ್ಯಗಳು ಚಿರಾಯುವಾಗುತ್ತವೆಂದು ಇಲ್ಲಿ ಅಕ್ಕಮಹಾದೇವಿ ಶಬ್ದಚಿತ್ರದೊಂದಿಗೆ ಇಲ್ಲಿ ನೀಡಿ ಇಂದಿನ ಶಿಕ್ಷಣದಲ್ಲಿ ಇವುಗಳ ಬಳಕೆಯಾಗಬೇಕು ಎನ್ನುತ್ತಾರೆ.
ಅನನ್ಯತೆ
ಹಿಂಡನಗಲಿದ ಕುಂಜರ ತನ್ನ ವಿಂಧ್ಯವ ನೆನೆವಂತೆ
ಬಂಧನಕ್ಕೆ ಬಂದ ಗಿಳಿ ತನ್ನ ಬಂಧುವ ನೆನೆವಂತೆ
ನಾ ನೆನೆವೆನಯ್ಯಾ ಕಂದಾ
ನೀನಿತ್ತ ಬಾ ಎಂದು ನಿಮ್ಮಂದವ ತೋರ
ಚೆನ್ನಮಲ್ಲಿಕಾರ್ಜುನ
ಎಂದು ನಿನ್ನ ಸಂಗಾತ ನನಗೆ ಇಲ್ಲದಿದ್ದರೆ ನನಗೆ ಉಸಿರೇ ಇಲ್ಲ ಎಂದು ಎಲ್ಲರೂ ‘ನಿಧಿ’ಯನ್ನು ಬಯಸುವ ಈಕಾಲದಲ್ಲಿ ಸನ್ನಿಧಿಯ ಮಹತ್ವವನ್ನು ಅಕ್ಕ ಹೇಳುತ್ತಾಳೆ.
ಅನುಭವ ಮಂಟಪವನ್ನು ಪ್ರವೇಶಿಸುವ ಸಂದರ್ಭದಲ್ಲಿ ಗಂಡನ ಹೆಸರು ಹೇಳು ಎಂದಾಗ ಅವನನ್ನು ‘ಶಿವ’,’ಶಂಕರ’, ‘ಸರ್ವೇಶ’,ಗಿರಿಜೇಶ’, ‘ವ್ಯೋಮಕೇಶ’ ಎಂದೆಲ್ಲಾ ಕರೆಯುತ್ತಾರೆ ನಾನು ಯಾವ ಹೆಸರನ್ನು ಹೇಳಲಿ ಎಂದು ಭಗವಂತ ನಿರ್ಮೋಹ, ನಿರಹಂಕಾರಿ ಎಂದು ಸಾಧಿಸಿದವಳು. ಸತ್ವದ ದೃಷ್ಠಿಯಿಂದ ಈಕೆಯ ವಚನಗಳು ಮೇರುಸದೃಶವಾದವು ಹಾಗಾಗಿ ಈಕೆಯ ಅನೇಕ ವಚನಗಳು ಬಾರತೀಯ ಭಾಷೆಗಳು ಅಲ್ಲದೆ ವಿದೇಶಿ ಭಾಷೆಗಳಿಗೂ ತರ್ಜುಮೆ ಆಗಿರುವುವು.
ಅಕ್ಕನ ‘ಯೋಗಾಂಗ ತ್ರಿವಿಧಿ’ ಕೂಡ ಸಾಹಿತ್ಯದ ದೃಷ್ಠಿಯಿಂದ ಮಹತ್ವದ ಕೃತಿ,ತ್ರಿಪದಿಗಳಿಂದ ಕೂಡಿರುವ ಈ ಕೃತಿಯನ್ನು ಸ್ವರ ವಚನಗಳೆಂದು ಕರೆಯುವುದಿದೆ .ಅಂದರೆ ವಚನಗಳಿಗೆ ಹೊಂದಿಕೆಯಾಗುವಂತೆ ರಾಗ ಸಂಯೋಜನೆ ಮಾಡಿ ಹಾಡಬಹುದಾಗಿದೆ. ಹರಿಹರನ ‘ಮಹಾದೇವಿಯಕ್ಕನ ರಗಳೆ’. ಹೆಚ್. ತಿಪ್ಪೇರುದ್ರಸ್ವಾಮಿಯವರ ‘ಕದಳಿಯ ಕರ್ಪೂರ’, ಎಲ್. ಬಸವರಾಜುರವರ ‘ಶಿವದಾಸ ಗೀತಾಂಜಲಿ’ ಮುಂತಾದವುಗಳು ಅಕ್ಕನ ವೈಚಾರಿಕತೆಯನ್ನು ಶ್ರೇಷ್ಠತೆಯನ್ನು ಸಾದರಪಡಿಸುತ್ತವೆ.
ಅನುಭವ ಮಂಟಪವನ್ನು ಬಿಡುವ ಸಂದರ್ಭದಲ್ಲಿ ಭಾವುಕಳಾಗಿ ಬಸವಣ್ಣನವರನ್ನು ಕುರಿತು ಅಯ್ಯಾ ಬಸವಣ್ಣ ನಿಮ್ಮ ಮನದ ಸುಜ್ಞಾನವ ಕಂಡು ಎನಗೆ ಜಂಗಮ ಸಂಬಂಧವಾಯಿತು ಎಂದು ಹೊರಟು ನಿಂತಾಗ “ನಿಮ್ಮ ಮಂಡೆಗೆ ಹೂವ ತರುವೆನಲ್ಲದೆ ಹುಲ್ಲ ತಾರೆನು” ಎಂದು ಹೇಳಿ ಎಲ್ಲರಿಗೂ ಒಳ್ಳೆಯ ಹೆಸರನ್ನೇ ತರಬೇಕು ಎಂಬ ತತ್ವವನ್ನು ಹೇಳುತ್ತಾಳೆ.
ತಾನಂದುಕೊಂಡಂತೆ ಬದುಕಿದವಳು ಅಕ್ಕಮಹಾದೇವಿ. ತನ್ನ ಬದುಕನ್ನೇ ಬಂಡಾಯಗೊಳಿಸಿಕೊಂಡವಳು. ವಚನ ಎಂದರೆ ಕೇವಲ ಬುದ್ಧಿವಂತಿಕೆಯ ವೇದಾಂತವಲ್ಲ ಅದೊಂದು ಕೊಟ್ಟ ಮಾತು ಎಂಬ ಅರ್ಥದಲ್ಲಿ ತೆರೆದ ಪ್ರಯೋಗಶಾಲೆಯಂತೆ ಹೇಳಿದ್ದನ್ನು ಪ್ರಯೋಗಿಸಿ ತೋರಿಸಿದವಳು. ಒಟ್ಟಾರೆಯಾಗಿ ಅನುಭವವನ್ನೇ ಹಾಡಾಗಿಸಿ ಅನುಭವ ಗಮ್ಯ, ವೇದಾಂತಗಮ್ಯವಾಗಿ ತನ್ನ ಅಕ್ಷರಗಳನ್ನು ವಚನವೆಂಬ ಆಭರಣಗಳನ್ನಾಗಿ ಪೋಣಿಸಿದ್ದಾಳೆ. ಹಾಗಾಗಿ ಚೆನ್ನಬಸವಣ್ಣ ತನ್ನದೊಂದು ವಚನದ ಅಂತ್ಯದಲ್ಲಿ “ಮಹಾದೇವಿಯಕ್ಕನ ಒಂದು ವಚನ ನಿರ್ವಚನ ಕಾಣಾ ಸಿದ್ಧರಾಮಯ್ಯ” ಎಂದು ಅಕ್ಕ ವಚನಗಳ ಪಾರಮ್ಯವನ್ನು ಎತ್ತಿ ಹಿಡಿದಿದ್ದಾರೆ.
ಆಧಾರ ಗ್ರಂಥಗಳು
೧. ವಚನಧರ್ಮಸಾರ-ಎಂ.ಆರ್ .ಶ್ರೀನಿವಾಸಮೂರ್ತಿ
೨. ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ; ವಚನ ಸಾಹಿತ್ಯ ಸಂಪುಟ ೫
ಪ್ರಸಾರಾಂಗ ಬೆಂಗಳೂರು ವಿಶ್ವವಿದ್ಯಾಲಯ
೩.ಅಕ್ಕನ ವಚನಗಳು ಎಲ್. ಬಸವರಾಜು
ಅಂತರ್ಜಾಲ: ವಿಕಿಪೀಡಿಯಾ
ಜಗದಗಲ ಮಂಟಪ : ಪ್ರಧಾನ ಸಂಪಾದಕರು ಡಾ. ಶೀಲಾ ದೇವಿ ಎಸ್ . ಮಳೀಮಠ
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್