ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಪರಿಚಿತ

ರಾಮ್‌ ಕುಮಾರ್‌ ಡಿ.ಟಿ.
ಇತ್ತೀಚಿನ ಬರಹಗಳು: ರಾಮ್‌ ಕುಮಾರ್‌ ಡಿ.ಟಿ. (ಎಲ್ಲವನ್ನು ಓದಿ)

ಅಲ್ಲೊಂದು ಊರು ಇದ್ದಂತಿತ್ತು
ನನ್ನದೆಂದು ತಿಳಿದ ಅರಿವಿಗೆ
ಚಂದ ಹೊದಿಸಿದ, ಚಳಿಯಲಿ
ಬೆಚ್ಚನೆಯ ಹೊದಿಕೆ ಇತ್ತಂತಿತ್ತು.
ಅಕ್ಕ, ಪಕ್ಕದವರಷ್ಟೇ ಅಲ್ಲದೆ
ಊರಕೇರಿಗುಂಟಲೂ ಎಲ್ಲರೂ
ಪರಿಚಿತರು …
ಅಪರಿಚಿತ ಅಲ್ಲಿ ನಾನು ಇಂದು.

ಈಗ ಆ ಊರಲಿ
ನನ್ನವರಾರೂ ಇದ್ದ ಹಾಗಿಲ್ಲ
ಎಲ್ಲ ಹೊಸ ಮುಖ, ಹೊಸ ಪರಿಚಯ
ಈಗ ಆ ಊರು, ನನ್ನದಲ್ಲವೊ,
ಹೌದೊ ಎಂಬ
ಪ್ರಶ್ನೆಯೂ ಸಹ ಹೊಸತು.
ಈ ದಿನ ಕಾಡಿದೆ ಅಷ್ಟೆ, ನಿನ್ನೆಯವರಗೆ ಹಾದರೂ
ಹಾದಿರಬಹುದೇನೊ! ಅದುವೂ ಸಹ
ನೆನಪಿಗೆ ಬಾರದಾಗಿದೆ.

ಆ ನನ್ನ ಹಳೆಯ
ಮನೆಯ ದಾರಿಯೂ
ನನ್ನ ಮರೆತಂತಿದೆ
ಮನೆಯ ಅಂಗಳದ
ಮಾವಿನ ಮರವು ಸತ್ತಂತಿದೆ
ಹಿತ್ತಲ ಮನೆಯ ತೆಂಗಿನಮರವೇಕೊ
ಗಾಳಿಗೂ ತೂಗದ ಭಾರವ ಹೊತ್ತಂತಿದೆ.
ನಗುವೇ ಕೇಳ ಸಿಗಲಿಲ್ಲ
ಆ ಓಣಿಯಲ್ಲಿ.
ಇದ್ದಂಗಿಲ್ಲ ನಾ ಕಂಡ …
ನನ್ನೂರು.
 
ಮೊನ್ನೆ ಅದೆಲ್ಲೊ ಹೋಗುವಾಗ
ಹಾದು ಹೋಗುವ ನಮ್ಮೂರಿನ
ಸರಹದ್ದಿನ ಅಂಚಿನಲ್ಲೆ
ನಿಂತ ನನಗೆ
ಊರಿನ ಫಲಕವ ನೋಡಿಯೆ
ನನ್ನದಲ್ಲವೆನ್ನಿಸಿತು ಊರು,
ಒಂದಾನೊಂದು ಕಾಲದಲಿ …
ನನ್ನೂರು.