- ಅಪ್ಪಟ ಧಾರವಾಡ ನೆಲದ ಕಾದಂಬರಿ : ಗಂಗವ್ವ ಗಂಗಾಮಾಯಿ - ಜನವರಿ 2, 2021
ಗಂಗವ್ವ ಗಂಗಾಮಾಯಿ ಅಪ್ಪಟ ಧಾರವಾಡ ನೆಲದ ಸೊಗಡಿನ ಕೃತಿ. ಮೂರು ಕುಟುಂಬಗಳ ಸುತ್ತಲೇ ಸುತ್ತುವ ಕಾದಂಬರಿ, ಧಾರವಾಡವನ್ನು ಹಾಗೂ ಆ ಭಾಷೆಯನ್ನು ಬಹಳ ಚೆನ್ನಾಗಿ ಲೇಖಕರು ಈ ಕಾದಂಬರಿ ಅಲ್ಲಿ ಬಳಸಿಕೊಂಡಿದ್ದಾರೆ. ಮೊದಲನೆಯ ಕುಟುಂಬ ಗಂಗವ್ವ, ಅವಳ ಮಗ ಕಿಟ್ಟಿ ಮತ್ತು ಗಂಗವ್ವಳ ತಮ್ಮ ರಾಘಪ್ಪನದ್ದು. ಇನ್ನೊಂದು ದೇಸಾಯಿಯವರ ಕುಟುಂಬ. ಇದು ಗಂಗವ್ವನಿಗೆ ಬೆನ್ನೆಲುಬಾಗಿ ನಿಂತ ಕುಟುಂಬ.
ತನ್ನ ಮಗ ಕಿಟ್ಟಿಯನ್ನು ಓದಿಸಿ ಸ್ವತಂತ್ರನನ್ನಾಗಿ ಮಾಡುವುದೇ ಗಂಗವ್ವನ ಗುರಿ. ಈ ಕುಟುಂಬದಲ್ಲಿ ಗಂಗವ್ವಳ ತಮ್ಮ ರಾಘಪ್ಪ ಪ್ರವೇಶ ಪಡೆದ ಮೇಲೆ ಕಥೆ ಮತ್ತಷ್ಟು ಚುರುಕು ಪಡೆಯುತ್ತದೆ. ರಾಘಪ್ಪನನ್ನು ದ್ವೇಷಿಸುತ್ತಿದ್ದ ಗಂಗವ್ವ ,ಆದರೆ ಕಿಟ್ಟಿ ರಾಘಪ್ಪನ ಮಗಳನ್ನೇ ಮದುವೆಯಾಗುತ್ತಾನೆ.
ನಂತರ ಕಥೆಯು ರಾಘಪ್ಪನ ಸುತ್ತ ಗಿರಕಿ ಹೊಡೆಯುತ್ತದೆ. ಅವನ ಅಂತರಂಗ, ಚಾಣಾಕ್ಷತೆ ಮತ್ತು ಬಲ ಹೀನತೆಗಳ ಪರಿಚಯವಾಗುತ್ತದೆ. ರಾಘಪ್ಪನ ಉಪಾಯ ಮತ್ತು ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ಇರುವ ಪ್ರಮುಖ ಅಡ್ಡಿ ಎಂದರೆ ದೇಸಾಯಿ ಕುಟುಂಬದ್ದು. ಇತ್ತ ದೇಸಾಯಿ ಕುಟುಂಬದಲ್ಲಿ, ದೇಸಾಯಿಯವರ ಎರಡನೇ ಮಗ ವಸಂತ ಅವರ ಬಲ ಹೀನತೆ. ರಾಘಪ್ಪ ಮತ್ತು ದೇಸಾಯಿ ಇಬ್ಬರು ತಮ್ಮ ಚದುರಂಗದಾಟದಲ್ಲಿ ತಮ್ಮ ಕಾಯಿಗಳನ್ನು ನಡೆಸುತ್ತ ಹೋಗುತ್ತಾರೆ. ಆ ಶೀತಲ ಸಮರದಲ್ಲಿ ರಾಘಪ್ಪನಿಗೆ ಸೋಲುಂಟಾಗುತ್ತದೆ. ಇದರ ಜೊತೆಯಲ್ಲಿ ನಡೆಯುವ ಘಟನೆಗಳಲ್ಲಿ, ರಾಘಪ್ಪನ ಪ್ರೇಯಸಿ ಮೆಹಬೂಬಾಳ ಮತ್ತು ಪತ್ನಿಯ ಸಾವು, ರಾಘಪ್ಪನನ್ನು ಮಾನಸಿಕವಾಗಿ ಜರ್ಜರಿತನನ್ನಾಗಿ ಮಾಡುತ್ತವೆ. ಕುಗ್ಗಿ ಹೋದ ರಾಘಪ್ಪ ಆತ್ಮಹತ್ಯೆಗೆ ಶರಣಾಗುತ್ತಾನೆ. ಆದರೆ ನೀತಿವಂತರಾದ ದೇಸಾಯಿ ತಮ್ಮ ಮಗ ವಸಂತನ ಮದುವೆಯನ್ನು ರಾಘಪ್ಪನ ಎರಡನೇ ಮಗಳ ಜೊತೆಗೆ ನೆರವೇರಿಸುತ್ತಾರೆ. ಇದರ ಜೊತೆಗೆ ಗಂಗವ್ವಳ ಕುಟುಂಬವು ಸಹಜ ಜೀವನಕ್ಕೆ ಮರಳುತ್ತದೆ.
ಗಂಗವ್ವ ಗಂಗಾಮಾಯಿ ಎಂಬ ಹೆಸರಿದ್ದರೂ ಕೂಡ ಗಂಗವ್ವ ಇಲ್ಲಿ ಮುಖ್ಯವಾಹಿನಿಯಾಗಿ ಇರದೇ ನೇಪಥ್ಯದಲ್ಲಿಯೇ ಇದ್ದರೂ ಕೂಡ ಓದುಗರನ್ನ ಆವರಿಸಿಕೊಳ್ತಾಳೆ. ಯಾವುದೇ ರೂಪಕ, ಪ್ರತಿಮೆಗಳ ಹಂಗಿಲ್ಲದೆ ನೆಲಭಾಷೆಯಲ್ಲಿಯೇ ಇದನ್ನು ಬರೆದಿರುವದರಿಂದ ಇದು ನಮ್ಮದು ಎಂದೆನಿಸಿ ಮತ್ತಷ್ಟು ಆಪ್ತವಾಗುತ್ತದೆ. ಇದನ್ನು ಓದಿದ ಮೇಲೆ ಅಲ್ಲಿ ಬಂದಿರುವ ಸ್ಥಳಗಳನ್ನೆಲ್ಲ ಹುಡುಕಿಕೊಂಡು ಹೋಗಬೇಕು ಎನ್ನುವ ಹೊಸ ಆಸೆಯೊಂದು ಉದಯಿಸಿದೆ. ಸಾವಧಾನವಾಗಿ ನಿಧಾನಗತಿಯಲ್ಲಿ ಸಾಗುವ ಈ ಪುಸ್ತಕವು ಓದಲೇಬೇಕಾದಂತಹ ಪುಸ್ತಕವಾಗಿದೆ.
ಹೆಚ್ಚಿನ ಬರಹಗಳಿಗಾಗಿ
ಹಾಲಾಡಿಯಲ್ಲಿ ಹಾರುವ ಓತಿ
ದೂರ ಸಮೀಪಗಳ ನಡುವೆ…
ಬದುಕಿನ ನೆಲೆ ಶೋಧಿಸುವ ʼಕಡಿದ ದಾರಿʼ