ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಪ್ಪನಾಗುವುದೆಂದರೆ ಸುಲಭವಲ್ಲ

ಡಾ. ಪ್ರೀತಿ ಕೆ.ಎ.
ಇತ್ತೀಚಿನ ಬರಹಗಳು: ಡಾ. ಪ್ರೀತಿ ಕೆ.ಎ. (ಎಲ್ಲವನ್ನು ಓದಿ)

ಅಪ್ಪನಾಗುವುದೆಂದರೆ ಸುಲಭವಲ್ಲ
ಅವಳಲ್ಲಿ ಪ್ರಸವ ವೇದನೆಯಿಂದ
ಆಕ್ರಂದಿಸುವಾಗ
ಇವನಿಗಿಲ್ಲಿ ಕರುಳು ಹಿಂಡುವಂತಾದರೂ
ನಿರುಮ್ಮಳನಂತೆ ಇದ್ದು ಬಿಡಬೇಕು

ಮಗು ಹುಟ್ಟಿದ ಸಂಭ್ರಮದಲ್ಲಿ
ಅವರೆಲ್ಲ ಮಿಂದೇಳುತ್ತಿರುವಾಗ
ಇವನಿಲ್ಲಿ ತನ್ನ ಆನಂದಭಾಷ್ಪವನ್ನು
ಯಾರಿಗೂ ಕಾಣದಂತೆ
ಒರೆಸಿಕೊಳ್ಳಬೇಕು

ಮುದ್ದಾದ ಮಗುವಿನ ಆಟ ಪಾಠಗಳನ್ನು
ಅಮ್ಮ ಕಣ್ಣು ತುಂಬಿಕೊಳ್ಳುವಾಗ
ಇವನು ಅದಾವುದನ್ನೂ ನೋಡಲಾಗದಂತೆ
ಆಫೀಸಿನ ಗುಂಗಿನಲ್ಲಿ
ಕಳೆದು ಹೋಗಬೇಕು

ಮಕ್ಕಳ ಆಸೆಯನ್ನು ಅವರ
ಕಣ್ಣಿಂದಲೇ ಅಳೆದು
ಬೇಡಿಕೆ ಬರುವ ಮೊದಲೇ ಪೂರೈಸಿ
ಸಂತೃಪ್ತ ನಗೆಯನ್ನು ತನ್ನೊಳಗೇ
ಸೂಸಿ ಬಿಡಬೇಕು

ಮಗಳು ಮುಟ್ಟಿನ ನೋವಿನಿಂದ
ಮುಖ ಕಿವುಚಿ ಒದ್ದಾಡುವಾಗ
ಏನು ಮಾಡಬೇಕೆಂದು ತೋಚದೆ
ತನ್ನಷ್ಟಕ್ಕೇ
ಕಳವಳಗೊಳ್ಳಬೇಕು

ಎದೆಯೆತ್ತರ ಬೆಳೆದ ಮಗ
ದಾರಿ ತಪ್ಪುತ್ತಿದ್ದಾನೆಂದು ಗೊತ್ತಾದಾಗ
ಒಳಗೊಳಗೇ ಅಂಜಿದರೂ ತೋರಗೊಡದೆ
ಗದರಿಸುವ, ಶಿಕ್ಷಿಸುವ ತಾನು
ಅವನ ಕಣ್ಣಿಗೆ ವೈರಿಯಂತೆ
ಕಾಣಬೇಕು

ಅಮ್ಮನ ಹಿಂದೆ ಮುಂದೆ ಸುತ್ತುತ್ತಾ
ಮಕ್ಕಳು ಆಡುವ ಪಿಸು ಪಿಸು ಮಾತು
ಕಿಲ ಕಿಲ ನಗು
ತಾನು ಬಳಿ ಹೋದರೆ ಮಾತ್ರ
ಸ್ತಬ್ದವಾಗುವುದನ್ನು ಕಂಡು ಅಚ್ಚರಿಯಾದರೂ
ತನಗೇನೂ ಗೊತ್ತಿಲ್ಲವೆಂಬಂತೆ
ಇದ್ದು ಬಿಡಬೇಕು

ಕಣ್ಣೆದುರೇ ಆಡಿ ಬೆಳೆದ ಮಗಳು
ಉದ್ದುದ್ದ ಡಿಗ್ರಿಗಳನ್ನು ಪಡೆದಾಗ
ಹೆಮ್ಮೆಯಿಂದ ನಕ್ಕ ಕಂಗಳು
ಅಪರಿಚಿತ ವರನಿಗೆ ಅವಳನ್ನು ಧಾರೆಯೆರೆಯುವಾಗ
ತೇವವಾಗಿದ್ದು ಸುಳ್ಳೇನೋ ಎಂಬಂತೆ
ಹುಸಿ ನಗೆಯ ಬೀರಬೇಕು

ಅಂದು ತನ್ನಿಂದ ಏಟು ತಿಂದ ಮಗ
ಇಂದು ತನಗಿಂತ ಹೆಚ್ಚು ಸಂಪಾದಿಸುವಾಗ
ತನ್ನ ಭಾರವಾದ ಜೇಬನ್ನು
ಅವನ ತೆಳುವಾದ ಡೆಬಿಟ್ ಕಾರ್ಡುಗಳು
ಅಣಕಿಸಿದಂತಾದಾಗ
ಒಮ್ಮೆಯೂ ತೋರಗೊಡದೆ
ಯಜಮಾನನ ಪಟ್ಟದಿಂದ ಮೆಲ್ಲಗೇ
ಕೆಳಗಿಳಿಯಬೇಕು

ಅಪ್ಪನಾಗುವುದೆಂದರೆ ಸುಲಭವಲ್ಲ !