- ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ - ಸೆಪ್ಟೆಂಬರ್ 12, 2024
- ಹಾಲಾಡಿಯಲ್ಲಿ ಹಾರುವ ಓತಿ - ಜುಲೈ 20, 2024
- ನಾಡೋಜ ಕಮಲಾಮೇಡಂಗೆ ಅಂತಿಮ ನಮನಗಳು - ಜೂನ್ 22, 2024
ಆಕಾರದಲ್ಲಿ ವಾಮನ ಸಾಹಿತ್ಯದಲ್ಲಿ ತ್ರಿವಿಕ್ರಮ ಎಂಬ ಮಾತು ವೈದೇಹಿಯವರಿಗೆ ಅಕ್ಷರಶಃ ಹೊಂದಿಕೆಯಾಗುವಂಥದ್ದು. ಅಂಥ ಭಾಷೆಯ ಸೆಳವಿನಿಂದಲೇ ಓದುಗರನ್ನು ಹಿಡಿದಿಟ್ಟಿರುವ ಛಾತಿ ಇವರದ್ದು. ಎಪ್ಪತ್ತೈದರ ತುಂಬು ಜೀವನವನ್ನು ಯಶಸ್ವಿಯಾಗಿ ಸಾರ್ಥಕಗೊಳಿಸಿಕೊಂಡರೂ ಇನ್ನೂ ಇನ್ನೂ ಬತ್ತದ ಉತ್ಸಾಹ ಇವರಲ್ಲಿದೆ. ಇವರ ಮೂಲ ಹೆಸರು ಜಾನಕಿ ಶ್ರೀನಿವಾಸ ಮೂರ್ತಿ. ಕಾವ್ಯನಾಮ ‘ವೈದೇಹಿ’ . 1945 ಫೆಬ್ರವರಿ 12 ರಂದು ಕುಂದಾಪುರದಲ್ಲಿ ಶ್ರೀ.ಎ.ವಿ.ಎನ್ನ ಹರಬ್ಬಾರ್ ಮತ್ತು ಮಹಾಲಕ್ಷ್ಮಿಯಮ್ಮ ಅವರ ಮಗಳಾಗಿ ಜನಿಸುತ್ತಾರೆ. 1968ರಲ್ಲಿ ಶಿಕ್ಷಣ ಮುಗಿಸಿದ ಇವರ ಸಾಹಿತ್ಯ ಕೃತಿಗಳು 1979 ರಿಂದ ಮೊದಲ್ಗೊಂಡು ಇಲ್ಲಿಯವರಗೆ ನಿರಂತರ ಪ್ರಕಟವಾಗುತ್ತಿವೆ. ಇವರ ಕೃತಿಗಳು ರಂಗಭೂಮಿ ಮತ್ತು ಸಿನೆಮಾವಾಗಿ ಕೂಡ ಯಶಸ್ಸು ಕಂಡಿವೆ.ಅನನ್ಯ ಸಾಹಿತ್ಯ ಕೃಷಿಯನ್ನು ಮಾಡಿರುವ ಕನ್ನಡದಲ್ಲಿ ಬರೆಯುವ ಭಾರತೀಯ ಕತೆಗಾರ್ತಿ ಎಂದು ಕರೆಸಿಕೊಂಡಿರುವುದು ಇವರ ಶ್ರೇಷ್ಠತೆಯನ್ನು ಹೇಳುತ್ತದೆ. ಹಲವರನ್ನು ಏಕ ಕಾಲಕ್ಕೆ ತಲುಪಬೇಕೆನ್ನುವುದನ್ನು ಬಿಟ್ಟು ಕೆಲವರನ್ನೇ ಸರಿಯಾಗಿ ತಲುಪಬೇಕೆಂಬ ನಿಲುವಿನಿಂದ ಕುಂದಕನ್ನಡ ಅಂದರೆ ಕುಂದಾಪುರ ಕನ್ನಡದಲ್ಲಿ ಜನರ ಅಂತರಾಳವನ್ನು ಹೊಕ್ಕಿರುವರು.
ಅತ್ಯಂತ ಪ್ರೌಢ ಹಾಗು ಗಂಭೀರ ಶೀರ್ಷಿಕೆಗಳನ್ನು ಇರಿಸಿಕೊಂಡು ವಿಚಾರ ಮಂಡಿಸುವುದರ ಬದಲು ಸರಳವಾಗಿಯೇ ಹೇಳಿ ವಿಚಾರದ ಗಹನತೆಯಿಂದ ಓದುಗರನ್ನು ತಲುಪಿದವರು. ಅಹಲ್ಯಾ, ಸೀತಾ, ತಾರಾ, ಮಂಡೋದರಿ ಹೀಗೆ ಎಲ್ಲಾ ಪಾತ್ರಗಳನ್ನು ನಮ್ಮ ಕಾಲ, ದೇಶಗಳಿಂದ ಹೊರಗಿಟ್ಟು ಅವರನ್ನು ನಮ್ಮ ಸುತ್ತ ಮುತ್ತಲೇ ಕಂಡುಕೊಳ್ಳುವ ಅನುಭವಗಮ್ಯತೆ ಇವರ ಬರವಣಿಗೆಯ ಮೂಲದ್ರವ್ಯ. “ಆಸೆ ಹೆಚ್ಚಾಯಿತು ಆಯುಷ್ಯ ಕಡಿಮೆಯಾಯಿತು” ಎಂತಲೇ ತಾನು ಮಾಡಬೇಕಾದ ಕೆಲಸಗಳ ಬಗ್ಗೆ ಎಚ್ಚರವಿರುವವರು. ಬದುಕಿನಲ್ಲಿ ಡ್ರೈವ್ ಮಾಡುವುದಕ್ಕಿಂತ ಡೈವ್ ಮಾಡುವುದು ಮುಖ್ಯ ಎಂದು ಅಂತರ್ಮುಖಿ ಚಿಂತನೆಗಳ ಮೂಲಕ ಹೆಸರಾದವರು.ಇವರ ಸರಳ ಶೀರ್ಷಿಕೆಗಳೆ ಇವರ ವೈಕ್ತಿತ್ವ ಹಾಗು ಅಂತರ್ಗತವಾಗಿರುವ ಸೌಧರ್ಮಿಕೆಯನ್ನು ಎತ್ತಿ ತೋರಿಸುತ್ತದೆ.
‘ಇರುವಂತಿಗೆ’ ಇವರಿಗೆ ಸಮರ್ಪಿತವಾಗಿರುವ ಗೌರವಗ್ರಂಥ 2019 ರಲ್ಲಿ ಬಿಡಿಗಡೆಯಾಗಿದೆ. ಇವರ ಅನನ್ಯ ವ್ಯಕ್ತಿತ್ವ ದರ್ಶನವನ್ನು ಈ ಕೃತಿ ಮಾಡಿಸುತ್ತದೆ ಎಂದರೆ ತಪ್ಪಿಲ್ಲ. ನನಗೇನು ಗೊತ್ತಿಲ್ಲ! ಕಾವ್ಯ ಗೊತಿಲ್ಲ! ಎಂದೇ ಹೆಣ್ಣಿನ ಧ್ವನಿಯನ್ನು ಬುದ್ಧಿಯಿಂದ ಹೃದಯಕ್ಕೆ ತಲುಪಿಸಿದವರು. ಅದರಲ್ಲೂ ಮಧ್ಯಮ ವರ್ಗದ ಹೆಣ್ಣು ಮಕ್ಕಳ ಪ್ರಾಮುಖ್ಯತೆ ಅವರ ತಲ್ಲಣಗಳನ್ನು ಬಹಳ ತಲಸ್ಪರ್ಶಿಯಾಗಿ ಚಿತ್ರಿಸಿದ್ದಾರೆ.ಧಾಂ, ಧೂಂ ಎನ್ನದೆ ಅಡುಗೆಮನೆಯ ಹೊಗೆಯ ಸೇವನೆಗೆ ಸೀಮಿತವಾಗಿದ್ದ ಅಡುಗೆ ಮನೆಹುಡುಗಿಯನ್ನು ಸರಳವಾಗಿಯೇ ಪ್ರಬಲವಾಗಿಯೇ ಅಡುಗೆ ಮನೆಯಿಂದ ಅಂಗಳಕ್ಕೆ ಕರೆತರುತ್ತಾರೆ. ಅಡಿಗಡಿಗೆ ಹೆಣ್ಣು ಅನುಭವಿಸುವ ಮಾನಸಿಕ ಸೂಕ್ಷ್ಮಗಳನ್ನು ತೆರೆದಿಡುತ್ತಾರೆ. ಆಕೆಯ ದೈಹಿಕ ನೋವು-ನಲಿವುಗಳು ಆಕೆಯ ಮಾನಸಿಕ ವೇದನೆಗಳ ಮುಂದೆ ನಗಣ್ಯ ಎಂದವರು. ಅಡುಗೆಯ ಮನೆ ಹುಡುಗಿಯ ಕನವರಿಕೆಗಳು ಅಲ್ಲೇ ಬಿದ್ದ ಮಸಿಯಿಂದ ಬರೆದು ,ಗೀಚಿ , ಒರೆಸಿ ವ್ಯರ್ಥವಾಗ ಬಾರದು ಎಂಬುದನ್ನು ಬಹಳ ಸುಂದರ ಪದಗಳ ಮೂಲಕ ಹೇಳಿದ್ದಾರೆ. ಆಕೆ ಅಡುಗೆ ಮನೆಯಲ್ಲ್ಲಿರುವಾಗ ವಿಮಾನದ ಸದ್ದು ಕೇಳೀಸಿಕೊಂಡಾಗ ಕಿವಿ ಚುರುಕಾಗುತ್ತದೆ. ಎತ್ತಪಯಣ? ಎಂದಾಗ ಇಪ್ಪತ್ತೊಂದನೆಯ ಶತಮಾನ ಎಂದು ಹೇಳಿರುವಲ್ಲಿ ಅವರಿಗೆ ಬದಲಾವಣೆ ಅತ್ಯವಶ್ಯವಾಗಿ ಆಗಬೇಕೆಂಬ ಅಭಿಲಾಷೆ ಹಾಗು ಕನಸುಗಳಿದ್ದುವೆಂದು ತಿಳಿಯಬಹುದು. “ಅಭಾವವಿದ್ದರೆ ವೈರಾಗ್ಯ ತಾನೆ” ಎಂಬಲ್ಲಿ ಎನೂ ಮಾಡಲಾಗದ ಪರಿಸ್ಥಿತಿಗೆ ಹೊಂದಿಕೊಂಡು ಹೋಗುವ ಹೆಣ್ಣನ್ನು ದಿಟ್ಟಿಸಿ ನೋಡುತ್ತಾರೆ.
ಇವರ ಅನುಕಂಪ ಔದಾರ್ಯ ಪ್ರೀತಿಯ ಅಪ್ಪುಗೆ ಎಲ್ಲವೂ ಧ್ವನಿಯಾಗಿ ಇಲ್ಲಿ ಹೊರಹೊಮ್ಮುತ್ತವೆ. ‘ವ್ಯಾನಿಟಿ ಬ್ಯಾಗು’ ಇವರ ಇನ್ನೊಂದು ಹೆಣ್ಣು ಸಮುದಾಯದ ಒಳನೋಟವನ್ನು ಬೀರಿದ ಪ್ರಮುಖ ಕವಿತೆ. ಇವರ ಪ್ರಕಾರ ವ್ಯಾನಿಟಬ್ಯಾಗು ವನಿತೆಯರ ಬ್ಯಾಗೇ ಸರಿ!. ಊರೂರು ಅಲೆದು ಬಂದ ಗಂಡನನ್ನು ಒಮ್ಮೆಯೂ ಏನನ್ನೂ ಕೇಳದೆ ಇದ್ದಾಗ ಆತ ಬಂದು ವ್ಯಾನಿಟಿ ಬ್ಯಾಗಲ್ಲಿ ಏನಿದೆ ಎಂದರೆ ಸುಮ್ಮನಿರುವಳೇ ತಕ್ಷಣಕ್ಕೆ ತಿರುಗಿ ಬೀಳುವ ಗಂಡನ್ನು ತರಾಟೆಗೆ ತೆಗೆದುಕೊಳ್ಳುವ ಹೆಣ್ಣಿನಲ್ಲಿ ಅಸಹನೆಯ ಮೂರ್ತಿಯನ್ನು ಕಾಣಬಹುದು. ಅವಳಿಗೆ ಇಲ್ಲಿ ವ್ಯಾನಿಟಿ ಬ್ಯಾಗು ನೋಡಿದ್ದು ತಪ್ಪಲ್ಲ ಮನಸ್ಸನ್ನೆ ಇಣುಕದವನು ಬ್ಯಾಗು ಏಕೆ ಇಣುಕಬೇಕು ಎಂಬ ಸರಿಯಾದ ವಾದ ಅಷ್ಟೆ.
‘ಸ್ತ್ರೀವಾದಿ’ ಚಿಂತನೆ ಇವರಲ್ಲಿದೆ ಆದರೆ ಇವರು ಎಂದಿಗೂ ಪುರುಷ ವಿರೋಧಿಯಲ್ಲ. ಪರುಷರನ್ನೂ ಒಳಗೊಂಡಂತೆ ಹೆಣ್ಣಿನ ಅಸ್ಮಿತೆಯನ್ನು ಕಾಪಾಡಬೇಕು ಎಂದುಕೊಂಡವರು. “ಶಿವನ ಮೀಸುವ ಹಾಡು ಕವಿತೆಯಲ್ಲಿ ಗೌರಿ ಶಿವನಿಗೆ ಅಭ್ಯಂಗ ಮಾಡಿಸಬೇಕು ಹಾಗೆ ಪಾದ ಒತ್ತುತ್ತ ಕಾಲಲ್ಲಿ ಅಂಟಿದ ಆ ಧೂಳಿನ ಕಣವನ್ನೆ ಹಿಡಿದು “ಮುಗಿಯಿತೇ ಬೇಟೆ” ಎಂದು ಒಂದೇ ಮಾತಿನಲ್ಲಿ ತನ್ನೆಲ್ಲಾ ನೋವು, ಮಾನಸಿಕ ವೇದನೆಗಳನ್ನು ಹೇಳಿ ತಕ್ಷಣಕ್ಕೆ ಗಂಡನಿಗೆ ನೀರೆರೆಯಲು ಹೋಗುತ್ತಾಳೆ. ನೀರಿನ ತಂಬಿಗೆಯಲ್ಲಿ ಇವಳ ಕಣ್ಣ ಹನಿಯೊಂದು ಸೇರಿ ನೀರು ಇನ್ನು ಬಿಸಿಯಾಗುತ್ತದೆ. ಗಂಡ ಆಕೆಗೆ ನಿನ್ನನ್ನು ಒಬ್ಬಳನ್ನು ಬಿಟ್ಟು ನಾನು ಬೈರಾಗಿ ಎಂದರೆ ಸೂಕ್ಷ್ಮಮತಿ ಹೆಂಡತಿ ಕೇಳುತ್ತಾಳೆಯೇ . ಎಲ್ಲ ನದಿಗಳ ನೆನೆದು ಮಲಗು ದೇವಾ ಎನ್ನುತ್ತಾಲೆ ಮತ್ತೆ ಹೊರಟರೆ ಬಂದೇ ಬರುವನು ಎಂದೇ ನಂಬುತ್ತಾಳೆ . ಗಂಡನ ಮನಸ್ಥಿತಿ ತಿಳಿದದದ್ದರೂ ಎನನ್ನೂ ಪ್ರಶ್ನಿಸಲಾಗದ ಅಸಹಾಯಕತೆ ಅವಳಲ್ಲಿರುತ್ತದೆ ಜೋರಾಗಿ ಮಾತನಾಡಿದರೆ ಎಲ್ಲಿ ಮತ್ತೆಲ್ಲಿಕೈಬಿಟ್ಟು ಹೋಗುವನೋ ಎಂಬ ಭಾವದಿಂದ ಸುಮ್ಮನಾಗುತ್ತಾಳೆ, ಗಂಗೆ ಗೌರಿಯ ಕಾಲದಿಂದ ಮೊದಲ್ಗೊಂಡು ಇಲ್ಲಿಯವರೆಗೆ ಇಂಥ ಅದೆಷ್ಟು ಹೆಣ್ಣು ಮಕ್ಕಳು ನಮ್ಮಲ್ಲಿಲ್ಲ? ಅದೆಷ್ಟು ಗಂಡುಗಳು ಇದನ್ನೆ ಬಂಡವಾಳ ಮಾಡಿಕೊಂಡಿಲ್ಲ? ಆದಿತ್ಯ ಹೃದಯ ದೀಪವನ್ನು ಋಷಿಮುನಿಗಳಿಗೂ ಆರಿಸಲೂ ಸಾಧ್ಯವಿಲ್ಲ ಎಂದು ಬರೆದು ಹೆಣ್ಣು ಮಕ್ಕಳ ಧೈರ್ಯ ಹೆಚ್ಚಿಸಿದವರು. ಅಮ್ಮಂದಿರಂತಾಗಬೇಡಿ ಅವರಂತೆ ತಲೆತಗ್ಗಿಸಬೇಡಿ ಎಂದು ಸ್ವಯಂವರಕ್ಕೆ ಅಣಿಗೊಂಡ ರಾಜಕುಮಾರಿಯ ಸ್ವಗತಗಳ ಮೂಲಕ ಹೇಳಿಸಿ ಸ್ವಾಭಿಮಾನಿಗಳಾಗಿ ಎಂಬ ಕರೆಯನ್ನು ಹೆಣ್ಣುಮಕ್ಕಳಿಗೆ ಕೊಡುತ್ತಾರೆ.
ಬರೆ ಹುಡುಗಿ ಅಲ್ಲ ಗಂಡ ಅಲ್ಲ ಇವರಿಗೆ ಅಮ್ಮನೂ ಮುಖ್ಯ. ವೈದೇಹಿಯವರ ಕವಿತೆಯಲ್ಲಿ ಹೆಣ್ಣೊಬ್ಬಳು ಅಮ್ಮನ ಕನವರಿಕೆಯನ್ನು ಮಾಡಿದವಳು ಮನೆಯ ಹೊಸ್ತಿಲು ಧಾಟದ ಹುಡುಗಿ ಈಗ ದಾರಿಯಿಲ್ಲದ ದಾರಿಯಲ್ಲಿ ಅರಸಿ ಹೊರಟಿದ್ದಾಳೆ. ಅಮ್ಮನಿಗೆ ಮುಕ್ತಿ ಸಿಗಬಾರದು ಭೂಮಿ ಬರಡಾಗುತ್ತದೆ ಎಂದು ಭಾವಿಸುತ್ತಾಳೆ ಅಂದರೆಆಕೆಗೆ ಮಮತೆಯ ತಾಯಿಯ ಅಮ್ಮನ ಮೇಲೆ ಎಷ್ಟು ಗೌರವ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ . ಅಮ್ಮನಿಗೆ ಮತ್ತೆ ಹುಟ್ಟು ಬರಲೂಬಾರದು ಸ್ವರ್ಗ ಬರಡಾಗುತ್ತದೆ ಎಂದು ಅಮ್ಮನ ಬಗೆ ಬರದವರು ತೀರಾ ವಿರಳ.
ಸಮಾಜಶಾಸ್ತ್ರಜ್ಞೆಯ ಟಿಪ್ಪಣಿಗೆ ಎಂಬ ಕತೆಗಾರ್ತಿ ವಿಧವೆ ಹೆಣ್ಣು ಮಕ್ಕಳ ಅಂತರಂಗವನ್ನು ತೆರೆದಿಟ್ಟಿರುವ ಬಗೆ ಅನನ್ಯವಾಗಿದೆ . ವಿಧವೆಯರ ಸಂಕಷ್ಟಗಳು ಅಂದಿನ ದಿಗಳಲ್ಲಿ ಹೇಗಿತ್ತು ಎಂಬುದನ್ನು ನೊಂದು ಹಿಡಿಯಾಗಿ ಮಾತನಾಡುವ ಅವರ ಅಂತಃಕರಣವನ್ನು ನೋಡಿದಾಗ ಇಂಥ ಒಬ್ಬ ಕವಯಿತ್ರಿ , ಬರೆಹಗಾರ್ತಿ ಬೇಕಾಗಿತ್ತಲ್ಲ ಅನ್ನಿಸುತ್ತದೆ. ಇವರ ಅಕ್ಕು, ಸಿರಿ, ಸೌಗಂಧಿ, ಕಮಲಾವತಿ ಸುಬ್ಬಕ್ಕ, ಅಮ್ಮಚ್ಚಿಯರು ಈ ಭಾವನೆಯನ್ನು ತರಿಸುತ್ತಾರೆ ಬರಹಗಾರ್ತಿಯರ ಮೇಲೂ ಇವರಿಗೆ ಇನ್ನಿಲ್ಲದ ಅಕ್ಕರೆ ಹಾಗಾಗಿ ಸಾಹಿತ್ಯ ರಚನೆಗೆ ಅನುಸಂಧಾನಕ್ಕೆ ಪ್ರತ್ಯೇಕ ಸಮಯ ಬೇಕೆನ್ನುವ ಚಿಂತೆ ಇಲ್ಲ . ಸಮಯವಿಲ್ಲ ಎಂದು ಹೇಳುವುದಕ್ಕಿಂತ ಇರುವ ಸಮಯವನ್ನು ಗುಣಾತ್ಮಕವಾಗಿ ಬಳಸಿಕೊಳ್ಳಬೇಕೆನ್ನುವುದು ಇವರ ವಾದ.
‘ಶೀಲ’ ಎಂಬುದು ಸ್ತ್ರೀಪುರುಷ ಇಬ್ಬರಿಗೂ ಅನ್ವಯಿಸುವಂಥದ್ದು . “ಉದ್ಯೋಗಂ ಪುರುಷ ಲಕ್ಷಣಂ” ಎನ್ನುವುದು “ಉದ್ಯೋಗಂ ಸ್ತ್ರೀಪುರುಷ ಲಕ್ಷಣಂ” ಎಂಬುದಾಗಿ ಸಾರ್ವತ್ರಿಕವಾಗಿ ಬದಲಾಗಬೇಕೆಂದವರು. ಸಮಾಜದ ಮೌಲ್ಯಗಳು, ಭಾವಗಳು ಸೂಕ್ಷ್ಮವಾಗಬೇಕು ಭಾವನಾತ್ಮಕ ಭದ್ರತೆಯಿರಬೇಕು ಎನ್ನುತ್ತಾ ಹೆಣ್ಣು ಗಂಡು ಎಲ್ಲರೂ ಈ ಭೂಮಿಯ ಮೇಲೆ ಸಮಾನವಾಗಿ ಬದುಕಬೇಕೆಂಬ ಸದಾಶಯವನ್ನು ಇರಿಸಿಕೊಂಡವರು. “ತಿಳೀ ಸಾರು ಎಂದರೆ ಏನೆಂದು ಕೊಂಡಿರಿ ಅದಕ್ಕೂ ಬೇಕು ಜಲತತ್ವ, ಗಂಧತತ್ವ”, ಬೇಕೆಂದು ಬದುಕಿನ ಅವಶ್ಯಕತೆಗಳನ್ನು ಕುರಿತು ಹೇಳಿ “ನಂಗದೆಯೂ ನಂಗದಂತಿದ್ದ ಕೆಂಡದೊಲೆಯ ಮೇಲೆ ಕುದಿ ಕುದಿದು ಬತ್ತಿ ರಾತ್ರಿಯಾದರೂ ಹಳಸದೆ” ಎಂದು ಸಾಮಾನ್ಯ ಹೆಣ್ಣಿನ ಬದುಕನ್ನು ತಿಳಿಯಾಗಿಯೇ ಮಹತಿಯತ್ತ ಕೊಂಡೊಯ್ಯುತ್ತಾರೆ. ಎಪ್ಪತ್ತೈದಾದರೂ ಇಪ್ಪತ್ತೈದರ ಲವಲವಿಕೆಯ ವೈದೇಹಿಯವರೆ ಮನಸ್ಸನ್ನು ಅಡುಗೆಮನೆಹುಡುಗಿ, ವ್ಯಾನಿಟಿಬ್ಯಾಗು, ಶಿವನಮೀಸುವ ಹಾಡು, ತಿಳೀ ಸಾರು ಕವಿತೆಗಳ ಮೂಲಕ ನೋಡುವ ಚಿಕ್ಕ ಪ್ರಯತ್ನವಷ್ಟೆ. ಸಾಗರ ಹಿರಿದು ಬೊಗಸೆ ಕಿರಿದು ಎಂಬಂತೆ ವೈದೇಹಿಯವರ ಪರಿಚಯವನ್ನು ಅಕ್ಷರಗಳಲ್ಲಿ ಹಿಡಿದಿಡುವುದು ಕಷ್ಟ ಸಾಧ್ಯವೇ. ಎಪ್ಪತ್ತೈದಾದರೂ ಇಪ್ಪತ್ತೈದರ ಬತ್ತದ ಉತ್ಸಾಹ ಇವರ ಲವಲವಿಕೆಯ ಶಾರೀರದಲ್ಲಿ ಎದ್ದು ಕಾಣುತ್ತದೆ. ಕಿರಿಯರಿಗೆ ಮಾರ್ಗದರ್ಶಕರಾಗಿ ಇನ್ನೂ ನಮ್ಮ ಜೊತೆಗಿರಿ ಎಂದು ಬಯಸುತ್ತೇನೆ.
ಹೆಚ್ಚಿನ ಬರಹಗಳಿಗಾಗಿ
ಗಣೇಶನ ಕೈಯಲ್ಲಿಯ ಲಾಡು
ಹರಿಹರಪುರ ಗ್ರಾಮವೂ, ಲೊವೆಂಥಾಲ್ ಎಂಬ ಪಾದ್ರಿಯೂ..
ಬೇಂದ್ರೆ ಸಂಗೀತ: ಒಂದು ವಿಶ್ಲೇಷಣೆ