ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

“ಅರ್ಧ” ಟೀ “ಫುಲ್” ಕುಡಿದ ಮೇಲೆ….

ಸುಧೀರ್ ಹೊದಿಗೆರೆ
ಇತ್ತೀಚಿನ ಬರಹಗಳು: ಸುಧೀರ್ ಹೊದಿಗೆರೆ (ಎಲ್ಲವನ್ನು ಓದಿ)

ಯಾವ ಕಾರಣಕ್ಕೋ ಸ್ವರ್ಗಲೋಕದಿಂದ ಭೂಮಿಗಿಳಿದು, ಬೆಳದಿಂಗಳ ಹಾದಿಯಲ್ಲಿ ಮೆಲ್ಲಗೆ  ನಡೆದು ಬರುತ್ತಿದ್ದ ಕಾಮಧೇನುವನ್ನು ಚಿಂತಾಮಣಿಯವರು  ಪ್ರೀತಿಯ ಮಾತುಗಳ ಬಲೆಯಲ್ಲೇ ಸಿಲುಕಿಸಿಕೊಂಡಿರಬೇಕು!

“ಪಯಣವಂತೂ ದೀರ್ಘವಿದೆ, ನಕ್ಕು ಸಾಗಿರಿ; 
ಹಾದಿಯಲ್ಲೇ ನಮ್ಮ ಮನೆ, ಸಿಕ್ಕು ಹೋಗಿರಿ” 

ಎಂದು ಮುಗುಳ್ನಗೆಯ ಆಹ್ವಾನವಿತ್ತು, ಮನೆಗೆ ಕರೆದು (calling), ಯಾರ ಕಣ್ಣಿಗೂ ಬೀಳದಂತೆ ಆ ಮಾಯದ ಹಸುವನ್ನು ಕಟ್ಟಿ ಹಾಕಿಕೊಂಡು, ಅದರ ಹಾಲನ್ನು ಬೇಕಾದಷ್ಟು ಕರೆದು (milking) ಕೊಳ್ಳುತ್ತಿದಾರೆ ಎಂಬುದು ನಮ್ಮ ಗಾಢವಾದ ಗುಮಾನಿ! 

ಹಾಗೆ ಕರೆದ ಹಾಲನ್ನು ಏನು ತಾನೆ ಮಾಡತ್ತಾರೆ ?

ಅದರಲ್ಲಿ ಪದಗಳನ್ನು ಕುದಿಸಿ, ಪ್ರಾಸವನ್ನು ಬೆರೆಸಿ, ಕಲ್ಪನೆಯನ್ನು ಕಲಕಿ, ಕಾವ್ಯದ ಪರಿಮಳವಿಳಿಸಿ, ಸ್ವಾದಿಷ್ಟವಾದ ಟೀ ತಯಾರಿಸುತ್ತೀರಿ. ಅದೂ ಸಾಮಾನ್ಯ ಟೀಯಲ್ಲ; ದೊಡ್ಡ ಲೋಟದ ಫುಲ್ ಟೀಯನ್ನು ಅರ್ಧ ಟೀ ಎಂಬಂತೆ ಜಾಣ್ಮೆಯಿಂದ ಹಂಚುತ್ತಾರೆ!

ಹೀಗಿರುವಾಗ, ಚಿಂತಾಮಣಿ ಅವರ  ಪದಗಳ ಪಾಕಶಾಲೆಯಲ್ಲಿ ಕಲ್ಪನೆ ಹೇಗೆ ಕುದಿಯುತ್ತದೆ, ಪ್ರಾಸ ಹೇಗೆ ಪರಿಮಳಿಸುತ್ತದೆ, ಭಾವ ಹೇಗೆ ಕಾವ್ಯವಾಗಿ ಅರಳುತ್ತದೆ? ತಿಳಿದುಕೊಳ್ಳಲು, ಅವರ  ಕವಿತೆಗಳ ಸಾಲುಗಳೊಳಗೆ ಇಳಿಯಬೇಕು, ಆ  ಕಾವ್ಯಾಮೃತದ ರುಚಿಯನ್ನೊಮ್ಮೆ ಸವಿಯಬೇಕು. ಅದಕ್ಕೆ ಸಿಕ್ಕ ಟಿಕೆಟ್, ಅವರ  ಹೊಸ  ಹನಿಗವನಗಳ ಸಂಕಲನ “ಫುಲ್ ಅರ್ಧ ಟೀ” !

*****

ಅರ್ಧ ಟೀಯಲ್ಲಿ ಪೂರ್ಣತತ್ವ, ಸೀನಿನೊಳಗೆ ವಿಧಿಯಾಟ, ಇಡ್ಲಿಯೊಳಗೆ ವ್ರತ, ಮೆಣಸಿನೊಳಗೆ ಸಾಕ್ಷಾತ್ಕಾರ – ಇವೆಲ್ಲವನ್ನೂ ಚುಟುಕಿನ ಚೌಕಟ್ಟಿನಲ್ಲಿ ಹಿಡಿದಿಡುವ ಚಿಂತಾಮಣಿ ಅವರ ಕೈಚಳಕವೇ ಅವರ  ಹಾಸ್ಯಕಾವ್ಯದ ವೈಶಿಷ್ಟ್ಯ!

ಕೆಲವು ಕವಿತೆಗಳು ನಮ್ಮನ್ನು ಗಂಭೀರವಾಗಿ ಯೋಚಿಸುವಂತೆ ಮಾಡುತ್ತವೆ. ಇನ್ನು ಕೆಲವು ಕವಿತೆಗಳು ನಮ್ಮನ್ನು ಗಟ್ಟಿಯಾಗಿ ನಗಿಸುತ್ತವೆ. ಆದರೆ ಅಪರೂಪದ ಕೆಲವು ಕವಿತೆಗಳಿವೆಯಲ್ಲ, ಅವಂತು ಮೊದಲು ನಗಿಸಿ, ಆ ನಗುವಿನ ಬೆನ್ನಿಗೇ ಒಂದು ಚಿಟಿಕೆ ಚಿಂತನೆಯನ್ನು ಚುಚ್ಚಿ, “ಅರೆ, ಇದೇನಿದು!” ಎಂದು ನಮ್ಮನ್ನು ಅಚ್ಚರಿಗೊಳಿಸುತ್ತವೆ. ಇಲ್ಲಿ ಪದಗಳು ಸುಮ್ಮನೆ ಅರ್ಥ ಹೊತ್ತು ತರುವ ನೆರಳುಗಳಲ್ಲ; ಅವು ಅರ್ಥವನ್ನೇ ಬೆಳಗಿಸುವ ದೀಪಗಳು.! ಒಂದು ಪದವನ್ನು ತುಸು ತಿರುಗಿಸಿದರೆ ಹಾಸ್ಯ, ತುಸು ಮುರಿದರೆ ವ್ಯಂಗ್ಯ, ಎರಡು ಪದಗಳನ್ನು ಜೋಡಿಸಿದರೆ ಹೊಸ ಅರ್ಥದ ಜನನ. ಅಕ್ಷರಗಳ ಅಂಗಡಿಯಲ್ಲಿ ಕವಿಯೊಬ್ಬರು ಕುಳಿತು ಅರ್ಥಗಳ ವ್ಯಾಪಾರ ಮಾಡುತ್ತಿದ್ದಾರೆ; ಕೊಳ್ಳುವವನಿಗೆ ನಗು ಉಚಿತ, ಚಿಂತನೆ ಅನಿವಾರ್ಯ! 

“ಫುಲ್ ಅರ್ಧ ಟೀ” ಎಂಬ ಶೀರ್ಷಿಕೆಯಲ್ಲೇ ಚಿಂತಾಮಣಿ ಅವರ  ಮೊದಲ ಕಿಡಿ ಕಾಣಿಸುತ್ತದೆ. ಫುಲ್ ಎಂದರೆ ಪೂರ್ಣ, ಅರ್ಧ ಎಂದರೆ ಅಪೂರ್ಣ. ಇವೆರಡೂ ಒಂದೇ ಕಪ್‌ನಲ್ಲಿ ಹೇಗೆ ಸಂಸಾರ ಮಾಡುತ್ತವೆ? ಸಾಮಾನ್ಯವಾಗಿ ಅರ್ಧ ಟೀ ಎಂದರೆ ಅರ್ಧ ಬೆಲೆ, ಅರ್ಧ ಪ್ರಮಾಣ, ಅರ್ಧ ತೃಪ್ತಿ ಎಂದುಕೊಳ್ಳುತ್ತೇವೆ. ಆದರೆ ಚಿಂತಾಮಣಿ ಹೇಳುತ್ತಾರೆ; 

“ಸಂಪೂರ್ಣತೆಯ ತತ್ವ ತಿಳಿದರೆ 
ಅರ್ಧ ಟೀ ಕೂಡ ಫುಲ್ಲು”

ಇಲ್ಲಿ ಟೀ ಕೇವಲ ಟೀಯಾಗಿ ಉಳಿಯುವುದಿಲ್ಲ; ಅದು ತತ್ವಶಾಸ್ತ್ರದ ಕಪ್ಪಾಗುತ್ತದೆ. ಪ್ರಮಾಣದಲ್ಲಿ ಅರ್ಧವಾದರೂ ಅನುಭವದಲ್ಲಿ ಪೂರ್ಣವಾಗಬಹುದು ಎಂಬ ಸರಳ ಸತ್ಯವನ್ನು ಟೀಯ ಮೂಲಕ ಬಿಚ್ಚಿಟ್ಟಿದ್ದಾರೆ . “ಫುಲ್” ಮತ್ತು “ಅರ್ಧ” ಎಂಬ ವಿರುದ್ಧಾರ್ಥಕ ಪದಗಳ ಮುಖಾಮುಖಿಯಲ್ಲೇ ಹಾಸ್ಯವೂ ತತ್ವವೂ ಒಂದಾಗುತ್ತವೆ.

ಇಂಥದ್ದೇ ಇನ್ನೊಂದು ಪದಚಮತ್ಕಾರ “ಸಾಕ್ಷಾತ್ಕಾರ”ದಲ್ಲಿ ಕಾಣುತ್ತದೆ. ದೇವರು ಸಿಕ್ಕರೆ “ಸಾಕ್ಷಾತ್ಕಾರ”; ಮೆಣಸು ಸಿಕ್ಕರೆ “ಸಾಕ್ಷಾತ್ – ಖಾರ” ! ಒಂದೇ ಪದದೊಳಗೆ ಅಡಗಿದ್ದ ಅರ್ಥವನ್ನು ಕವಿ ಸೀಳಿದಾಗ, ಅಧ್ಯಾತ್ಮದ ಗಂಭೀರತೆ ಅಡುಗೆಮನೆಯ ಖಾರದಲ್ಲಿ ಕರಗುತ್ತದೆ. ದೇವರನ್ನು ಕಾಣುವ ಅನುಭವಕ್ಕೆ ಇರುವ ಗಾಂಭೀರ್ಯ ಮತ್ತು ಮೆಣಸಿನ ಖಾರಕ್ಕೆ ಇರುವ ತೀಕ್ಷ್ಣತೆ -ಎರಡನ್ನೂ ಧ್ವನಿಸಾಮ್ಯದ ಸೇತುವೆಯಲ್ಲಿ ಜೋಡಿಸಿರುವುದು ಚುಟುಕಿನ ಚಮತ್ಕಾರ. 

“ಏಕ ತಿಂಡಿ ವ್ರತ”ದಲ್ಲಂತೂ ಇಡ್ಲಿಯೇ ಕವಿಯ ತಪಸ್ಸಿನ ಕೇಂದ್ರಬಿಂದು:

“ಟೇಬಲ್ ಮೇಲೆ ಬಿಸಿ ಬಿಸಿಯಾಗಿ 
ಏನೇ ತಂದು ಇಡ್ಲಿ
ನೋ ನೋ ನೋ ನೋ
ನಾನ್ ತಿನ್ನೊದು 
ಇಡ್ಲಿ”

“ಏನೇ ತಂದು ಇಡ್ಲಿ” ಎಂಬ ಮಾತಿನಲ್ಲಿ “ಏನೇ ತಂದಿಡಲಿ?” ಎಂಬ ಪ್ರಶ್ನೆಯ ಧ್ವನಿಯೂ ಇದೆ; ಕೊನೆಯಲ್ಲಿ “ನಾನ್ ತಿನ್ನೊದು ಇಡ್ಲಿ” ಎಂಬ ದೃಢನಿರ್ಧಾರವೂ ಇದೆ. ಇಂಗ್ಲಿಷಿನ “No, no, no” ಮತ್ತು ಕನ್ನಡದ “ನಾನ್”  (ನಾನು) ನಡುವಿನ ಧ್ವನಿಸಾಮ್ಯವೂ ನಗುವಿಗೆ ತುಪ್ಪ ಸುರಿಯುತ್ತದೆ. ಇದು ಆಹಾರ ನಿಯಮದ ಚುಟುಕಷ್ಟೇ ಅಲ್ಲ; ಆಯ್ಕೆಯ ಸ್ವಾತಂತ್ರ್ಯವನ್ನು ಒಂದೇ ತಿಂಡಿಗೆ ಒತ್ತೆ ಇಟ್ಟ ಭಕ್ತನ ಕಥೆ. 

“ಸ್ವರ್ಗಕ್ಕೆ ಹೋದ್ರೆ” ಎಂಬ ಚುಟುಕಿನಲ್ಲಿ ಸ್ವರ್ಗ, ನರಕ, ಸಜ್ಜನ, ದುರ್ಜನ ಎಂಬ ಧಾರ್ಮಿಕ ಪರಿಕಲ್ಪನೆಗಳ ನಡುವೆ ಸರ್ಜನ್ ಎಂಬ ವೈದ್ಯಕೀಯ ವೃತ್ತಿಯ ವ್ಯಕ್ತಿಯನ್ನು ತಂದು ನಿಲ್ಲಿಸುತಾರೆ.

“ಎರಡೂ ಲೋಕಕ್ಕೆ ಒಬ್ರೆ ಏಜಂಟು 
ನಮ್ಮಸ್ಪತ್ರೆ ಸರ್ಜನ್ನು”

ಸ್ವರ್ಗಕ್ಕೆ ಹೋಗುವವರಿಗೂ ನರಕಕ್ಕೆ ಹೋಗುವವರಿಗೂ ಒಬ್ಬನೇ ಏಜೆಂಟ್ ! ಮರಣಾನಂತರದ ಲೋಕಕ್ಕೆ ದಾರಿ ತೋರಿಸುವವನಂತೆ ಸರ್ಜನ್‌ನನ್ನು ಪರಿಚಯಿಸುವ ಈ ಸಾಲು, ಈಗಿನ ವೈದ್ಯಕೀಯ ವೃತ್ತಿಯ ಕುರಿತು ಕಟುವಾದ ಹಾಸ್ಯವನ್ನೂ ಹುಟ್ಟಿಸುತ್ತದೆ (ನನ್ನ ಮಗನೂ ವೈದ್ಯನಾಗಿರುವುದರಿಂದ, ವೈದ್ಯ ವೃತ್ತಿಯ ಬಗ್ಗೆ ನನಗೆ ವಿಶೇಷ ಗೌರವವಿದೆ) . ಶಸ್ತ್ರಚಿಕಿತ್ಸಕ ಜೀವ ಉಳಿಸುವವನಾದರೂ, ಆಸ್ಪತ್ರೆಯ ಅನುಭವದಲ್ಲಿ ರೋಗಿ ಮತ್ತು ಕುಟುಂಬದವರಿಗೆ ಮರಣದ ನೆರಳು ಸದಾ ಹತ್ತಿರದಲ್ಲಿರುವುದನ್ನು ಈ ಚುಟುಕು ನೆನಪಿಸುತ್ತದೆ. “ಸಜ್ಜನ್ನ್ರು”, “ದುರ್ಜನ್ರು”, “ಸರ್ಜನ್ನು” ಎಂಬ ಪ್ರಾಸಬದ್ಧ ಧ್ವನಿಗಳ ಸರಣಿ ಹಾಸ್ಯಕ್ಕೆ ವೇಗ ಕೊಡುತ್ತದೆ. ಕೊನೆಯ “ಏಜಂಟು ” ಎಂಬ ಪದ ಬಿದ್ದಾಗಲೇ ಚುಟುಕಿನ ಬಾಗಿಲು ಧಿದೀರ್ ಎಂದು ತೆರೆಯುತ್ತದೆ!

ಆತುರ ಆತುರವಾಗಿ ಇಲ್ಲಿನ ಚುಟುಕುಗಳನ್ನು ಓದಿಕೊಳ್ಳಬೇಡಿ. ಏಕೆಂದರೆ, ಹಾಗೆ ಓದಿದರೆ, ಚುಟುಕಿನ ಒಂದು ಅನಿರೀಕ್ಷಿತ ಪ್ರಾಸ ಕಳೆದುಕೊಂಡು ಬಿಡುತ್ತೀರಿ.  ಉದಾಹರಣೆಗೆ, “ಆಥರ” ಚುಟುಕಿನಲ್ಲಿ ಇಂಗ್ಲಿಷ್ ಓದುತ್ತಾ ಬರೆಯುತ್ತಾ ಒಬ್ಬ ವ್ಯಕ್ತಿ “ಆ ಥರ” ಆಗುತ್ತಾನೆ; ಕೊನೆಗೆ “ಆಥರ್” ಆಗುತ್ತಾನೆ. ಇಂಗ್ಲಿಷಿನ “ಆಥರ್” ಮತ್ತು ಕನ್ನಡದ  “ಆ ಥರ” . ಈ ಎರಡರ ನಡುವಿನ ಧ್ವನಿಸಾಮ್ಯವನ್ನು ಕವಿ ಹಿಡಿದುಕೊಂಡು, ಒಂದು ಭಾಷೆಯ ಪದವನ್ನು ಇನ್ನೊಂದು ಭಾಷೆಯ ಮಾತಿನೊಳಗೆ ಬೆರೆಸಿ ಹೊಸ ಅರ್ಥ ಹುಟ್ಟಿಸುತ್ತಾರೆ. ಇಂಗ್ಲಿಷ್ ಪುಸ್ತಕ ಓದಿದವರೆಲ್ಲ ಲೇಖಕರಾಗುತ್ತಾರೆಯೇ ಎಂಬ ಪ್ರಶ್ನೆಯನ್ನು ವಿಡಂಬನೆಯ ದನಿ  ಎತ್ತುವುದರ ಜೊತೆಗೆ, ಭಾಷಾ ಮಿಶ್ರಣದ ಮೂಲಕವೇ ಹಾಸ್ಯವನ್ನು ಸೃಷ್ಟಿಸುತ್ತಾರೆ.

ಕವಿಯ ಈ ಪದಚಮತ್ಕಾರಕ್ಕೆ ಪ್ರತಿಯಾಗಿ ನನ್ನದೊಂದು ತುಂಟ ಪ್ರಯತ್ನವನ್ನೂ ಇಲ್ಲಿ ಸೇರಿಸುತ್ತೇನೆ.( “ಅಪರಾಧಗಳನ್ನು ಮನ್ನಿಸಿ”, ಓದುಗರೇ). ಮೊದಲ ಸಾಲಿನ “ಕಲೆ” ಯನ್ನು ಇಂಗ್ಲಿಷ್ ಪದದ “stain” ಎಂದು ಅರ್ಥೈಸಿಕೊಳ್ಳಿ.

“ಇಂಗ್ಲಿಷ್ ನಮಗೆ ಒಂದು ಕಲೆ
ಇಂಗ್ಲಿಷ್ ಪದವನ್ನು ಕನ್ನಡದ ತುಂಟಾಟಕ್ಕೆ ಒಗ್ಗಿಸುವುದೇ 
ಚಿಂತಾಮಣಿಯವರ ಕಲೆ”

“ಪ್ರೇಮಕಥೆ”ಯಲ್ಲಿ ಚಿಂತಾಮಣಿ ಅವಾ  ಪದದ ಆಟ ಇನ್ನಷ್ಟು ತುಂಟವಾಗುತ್ತದೆ. ಕನ್ನಡದ “ಗೌರಿ”, “ಶೌರಿ” ಜೊತೆ ಇಂಗ್ಲಿಷ್  dow-ರಿ, how-ರಿ, love-ರಿ” ಎಂಬ ಧ್ವನಿಗಳ ಮೂಲಕ ಪ್ರೀತಿ, ಮದುವೆ, ವರದಕ್ಷಿಣೆ ಮತ್ತು ಪ್ರೇಮದ ನಡುವಿನ ಸಂಬಂಧವನ್ನು ಕವಿ ಹಳ್ಳಿಯ ಮಾತಿನ ಶೈಲಿಯಲ್ಲಿ ಕಟ್ಟುತ್ತಾರೆ. Dowry, How, Love ಮುಂತಾದ ಇಂಗ್ಲಿಷ್ ಪದಗಳ ಧ್ವನಿಗಳನ್ನು ಕನ್ನಡೀಕರಿಸುವ ಮೂಲಕ ಭಾಷೆಯ ಉಚ್ಚಾರಣೆಯನ್ನೇ ಹಾಸ್ಯದ ವಸ್ತುವಾಗಿಸುತ್ತಾರೆ. ಪ್ರೇಮದ ಕಥೆ ಪ್ರಾರಂಭವಾಗುವುದೇ ಪ್ರೀತಿಯಿಂದ; ಆದರೆ ಮದುವೆಯ ಹೊಸ್ತಿಲಿಗೆ ಬಂದಾಗ ವರದಕ್ಷಿಣೆಯ ಪ್ರಶ್ನೆ ಬಂದು ನಿಂತರೆ, ಆ ಪ್ರೀತಿಯ ಗತಿ ಏನು? ಈ ಚುಟುಕಿನ ಪದಚಮತ್ಕಾರದ ಹಿಂದೆ ಸಾಮಾಜಿಕ ವಿಡಂಬನೆಯೂ ಅಡಗಿದೆ.

“ಕನ್ನಡಕೆ” ಎಂಬ ಚುಟುಕು ನಗಿಸುವುದಕ್ಕಿಂತ ಹೆಚ್ಚು ಚುಚ್ಚುತ್ತದೆ: ಇಲ್ಲಿ ಪ್ರಸಿದ್ದ ಕವಿತೆಯ ಕೊನೆಯ ಒಂದು ಪದವನ್ನು ಬದಲಾಯಿಸಿ, ಇಡೀ ಕವಿತೆಯನ್ನು ತನ್ನದಾಗಿ ಮಾಡಿಕೊಂಡು  ಬಿಡುತ್ತಾರೆ !

“ಕನ್ನಡಕೆ ಹೋರಾಡು 
ಕನ್ನಡದ ಕಂದಾ 
ಕನ್ನಡವ ಕಾಪಾಡು 
ಕನ್ನಡಿಗರಿಂದಾ”

ಮೊದಲ ಮೂರು ಸಾಲುಗಳಲ್ಲಿ ಕುವೆಂಪು ಅವರ ಕನ್ನಡದ ಬಗ್ಗೆ ಅಭಿಮಾನ ತುಂಬಿದ ಕರೆ ಕೇಳಿದರೆ, ಕೊನೆಯ ಸಾಲು ಬರುವಷ್ಟರಲ್ಲಿ, ಚಿಂತಾಮಣಿ ಅವರು ಆ ಅಭಿಮಾನಕ್ಕೆ ಕನ್ನಡಿಯನ್ನೇ ಹಿಡಿಯುತ್ತಾರೆ. ಕನ್ನಡವನ್ನು ಕಾಪಾಡಬೇಕಾದವರು ಕನ್ನಡಿಗರೇ; ಹಾಗಿದ್ದರೆ ಕನ್ನಡವನ್ನು ಕನ್ನಡಿಗರಿಂದಲೇ ಕಾಪಾಡಬೇಕಾದ ಪರಿಸ್ಥಿತಿ ಏಕೆ ಬಂದಿದೆ?

ಇದು ಸರಳ ಪ್ರಾಸದೊಳಗೆ ಅಡಗಿರುವ ಗಂಭೀರ ವ್ಯಂಗ್ಯ. “ಕನ್ನಡಕೆ”, “ಕನ್ನಡದ”, “ಕನ್ನಡವ”, “ಕನ್ನಡಿಗರಿಂದಾ” ಎಂಬ ಪದಗಳ ಪುನರಾವರ್ತನೆ ಕನ್ನಡದ ಘೋಷಣೆಯಂತೆ ಕೇಳಿಸಿದರೂ, ಕೊನೆಯ “ರಿಂದಾ” ಇಡೀ ಘೋಷಣೆಯ ಅರ್ಥವನ್ನೇ ತಲೆಕೆಳಗಾಗಿಸುತ್ತದೆ. ಭಾಷೆಯ ಮೇಲಿನ ಪ್ರೀತಿ ಮಾತಿನಲ್ಲಷ್ಟೇ ಉಳಿದು, ನಡವಳಿಕೆಯಲ್ಲಿ ಕಾಣೆಯಾಗುವಾಗ ಹುಟ್ಟುವ ವೈರುಧ್ಯವನ್ನು ಕವಿ ಒಂದೇ ಸಾಲಿನಲ್ಲಿ ಹಿಡಿದಿಟ್ಟಿದ್ದಾರೆ. ಕನ್ನಡದ ರಕ್ಷಣೆಗೆ ಹೋರಾಡುವವನು ಕನ್ನಡದ ಕಂದನಾಗಿರಬಹುದು; ಆದರೆ ಕನ್ನಡದ ಹೆಸರಿನಲ್ಲಿ ಕನ್ನಡವನ್ನೇ ನಿರ್ಲಕ್ಷಿಸುವವನಾದರೆ? ಭಾಷೆಯ ಶತ್ರು ಯಾವಾಗಲೂ ಹೊರಗಿನಿಂದಲೇ ಬರಬೇಕೆಂದಿಲ್ಲ. ಕೆಲವೊಮ್ಮೆ ಒಳಗಿನ ನಿರ್ಲಕ್ಷ್ಯವೇ ಹೊರಗಿನ ಆಕ್ರಮಣಕ್ಕಿಂತ ಅಪಾಯಕಾರಿ. ಈ ಚುಟುಕಿನಲ್ಲಿ ನಗು ಸ್ವಲ್ಪ ಕಹಿ; ಆದರೆ ಆ ಕಹಿಯೇ ಅದರ ಔಷಧೀಯ ಗುಣ.

“ನೋಡಿರಣ್ಣ” ಎಂಬ ಚುಟುಕಿನಲ್ಲಿ ಮದುವೆಯಾಗಿ ತಿಂಗಳೂ ಕಳೆದಿಲ್ಲ; ಅಷ್ಟರಲ್ಲೇ ಸೀತಾಪತಿಯ ಹೊಟ್ಟೆ ಮುಂದೆ ಮುಂದೆ ಸಾಗಿದೆ! ಹೊಸದಾಗಿ ಮದುವೆಯಾದ ಗಂಡನ ದೇಹದ ಬದಲಾವಣೆಯನ್ನು ಕವಿ ಅತಿಶಯೋಕ್ತಿಯ ಮೂಲಕ ಹಾಸ್ಯಗೊಳಿಸುತ್ತಾರೆ. “ಮುಂದೆ ಮುಂದೆ ಸಾಗಿದೆ” ಎಂಬ ಮಾತು ಹೊಟ್ಟೆಯ ಬೆಳವಣಿಗೆಯನ್ನೂ ಸೂಚಿಸುತ್ತದೆ, ಬದುಕು ಮುಂದಕ್ಕೆ ಸಾಗುತ್ತಿರುವುದನ್ನೂ ನೆನಪಿಸುತ್ತದೆ. ಆದರೆ ಇಲ್ಲಿ ಜೀವನದ ಪ್ರಗತಿಯ ಸೂಚಕವಾಗಿ ಕಾಣಿಸಿಕೊಳ್ಳುವುದು ಹೊಟ್ಟೆ ಮಾತ್ರ. 

ಮದುವೆಯ ನಂತರದ ಸುಖ, ಸೌಕರ್ಯ, ಊಟೋಪಚಾರ, ಸೋಮಾರಿತನ – ಇವೆಲ್ಲವನ್ನೂ ಓದುಗ ತನ್ನ ಕಲ್ಪನೆಯಿಂದ ತುಂಬಿಕೊಳ್ಳಬಹುದು. ಕವಿ ಎಲ್ಲವನ್ನೂ ಬಿಡಿಸಿ ಹೇಳುವುದಿಲ್ಲ; ಹೊಟ್ಟೆಯನ್ನು ಮಾತ್ರ ಮುಂದೆ ಕಳಿಸಿ, ಓದುಗನ ಕಲ್ಪನೆಯನ್ನು ಹಿಂದಿನಿಂದ ಓಡಿಸುತ್ತಾರೆ. ಇದೇ ಚುಟುಕಿನ ಮಿತವ್ಯಯದ ಸೊಗಸು. ಕವಿತೆಯಲ್ಲಿ ಪದಗಳು ಕಡಿಮೆ; ಹೊಟ್ಟೆಯ ವ್ಯಾಪ್ತಿ ಮಾತ್ರ ಹೆಚ್ಚು! ಇಲ್ಲಿ ಸೀತಾಪತಿಯ ಬದಲಿಗೆ ಸೀತೆಯ ಹೊಟ್ಟೆಯೇ ಕವಿತೆಯ ವಸ್ತುವಾಗಿದ್ದರೆ, ಅದು ಕೇವಲ ಹಾಸ್ಯಕ್ಕೆ ಸೀಮಿತವಾದ ಪೋಲಿ ಕವಿತೆಯಾಗುತ್ತಿತ್ತು. ಆದರೆ ಕವಿಯ ಉದ್ದೇಶ ಕೇವಲ ನಗಿಸುವುದಲ್ಲ; ಹಾಸ್ಯದ ಜೊತೆಗೆ ವಿಡಂಬನೆಯನ್ನೂ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸುವುದೇ ಅವರ ಮುಖ್ಯ ಆಶಯವಾಗಿದೆ. ಹಾಗಾಗಿ “ಸತಿ” ಬದಲು “ಪತಿ” ಈ ಚುಟುಕಕ್ಕೆ ಆಹಾರವಾಗಿದ್ದಾನೆ!

“ಕನ್ನಡಿ ಮುಂದೆ” ಎಂಬ ಚುಟುಕಿನಲ್ಲಿಯೂ ದೈನಂದಿನ ಬದುಕಿನ ದೃಶ್ಯವನ್ನು ಪದಗಳ ತುಣುಕುಗಳಿಂದ ಕಟ್ಟುವ ಪ್ರಯತ್ನವಿದೆ. ಗಂಡ, ಹೇನು, ಹಣಿಗೆ, ಬೈತಲೆ ಎಂಬ ಪದಗಳ ಸುತ್ತ ಹೆಣ್ಣಿನ ಅಲಂಕಾರ, ಕೂದಲು ಬಾಚುವಿಕೆ ಮತ್ತು ಕನ್ನಡಿಯ ಮುಂದೆ ನಡೆಯುವ ಸಿದ್ಧತೆಯ ದೃಶ್ಯ ಮೂಡುತ್ತದೆ. “ಬೈತಲೆ ಬೈತಲೆ” ಎಂಬ ಪುನರುಕ್ತಿಯು ಮಾತಿನ ಲಯವನ್ನೂ ಕ್ರಿಯೆಯ ಪುನರಾವರ್ತನೆಯನ್ನೂ ಒಟ್ಟಿಗೆ ತರುತ್ತದೆ. ಇಲ್ಲಿ ನಗು ದೊಡ್ಡ ಪಂಚ್‌ನಲ್ಲಿ ಮಾತ್ರವಲ್ಲ; ಪದಗಳ ತುಂಡುಗಳನ್ನು ಜೋಡಿಸಿ ದೃಶ್ಯವೊಂದನ್ನು ಕಟ್ಟುವ ರೀತಿಯಲ್ಲಿಯೂ ಇದೆ.

“ಅತ್ತೇ” ಎಂಬ ಚುಟುಕು ನಮ್ಮ ಕೌಟುಂಬಿಕ ಸಂಬಂಧದಲ್ಲಿರುವ ಒಂದು ವಿಚಿತ್ರ ಸತ್ಯವನ್ನು ಹಿಡಿದಿಡುತ್ತದೆ:

“ಸೊಸೆ ಆಗ ಬೈಸಿಕೊಂಡು 
ಅತ್ತು ಅತ್ತು ಅತ್ತೇ 
ಒಂದು ದಿನ ಸೊಸೆ ಕೂಡ 
ಆಗ್ಬಿಡ್ತಾಳೆ ಅತ್ತೇ”

ಇಲ್ಲಿ “ಅತ್ತೇ” ಎಂಬ ಪದದ ದ್ವಂದ್ವಾರ್ಥವೇ ಹಾಸ್ಯದ ಕೇಂದ್ರ. “ಅತ್ತು ಅತ್ತು ಅತ್ತೇ ” ಎನ್ನುವುದು ಅಳುವುದನ್ನು ಸೂಚಿಸಿದರೆ, “ಅತ್ತೇ” ಎಂಬುದು ಅತ್ತೆಯ ಸ್ಥಾನವನ್ನು ಸೂಚಿಸುತ್ತದೆ. ಅತ್ತೆಯ ಕಾಟಕ್ಕೆ ಅಳುವ ಸೊಸೆ, ಮುಂದೆ ತಾನೇ ಅತ್ತೆಯಾಗುವಾಗ ಅದೇ ಅಧಿಕಾರದ ಕುರ್ಚಿಯಲ್ಲಿ ಕುಳಿತುಕೊಳ್ಳುವ ಸಾಧ್ಯತೆ ಇದೆ. ಅಂದರೆ ಸಂಸಾರದ ನಾಟಕದಲ್ಲಿ ಪಾತ್ರ ಬದಲಾಗುತ್ತದೆ; ಆದರೆ ನಾಟಕದ ಪಠ್ಯ ಮಾತ್ರ ಬದಲಾಗದೇ ಉಳಿಯುತ್ತದೆ! ಇದು ಕೇವಲ ಅತ್ತೆ-ಸೊಸೆಯ ನಡುವಿನ ತಮಾಷೆಯಲ್ಲ. ಅಧಿಕಾರ ಅನುಭವಿಸಿದವನು ಮುಂದೆ ಅದೇ ಅಧಿಕಾರವನ್ನು ಇನ್ನೊಬ್ಬರ ಮೇಲೆ ಪ್ರಯೋಗಿಸುವ ಮಾನವಸ್ವಭಾವದ ವಿಡಂಬನೆಯೂ ಹೌದು. ಇಂದು ಅಳುವವಳು ನಾಳೆ ಅಳಿಸುವವಳಾಗಬಹುದು. ಇಂದು ಬೈಸಿಕೊಳ್ಳುವವಳು ನಾಳೆ ಬೈಯುವವಳಾಗಬಹುದು. ಕಾಲಚಕ್ರದ ಈ ತಿರುವನ್ನು ಕವಿ “ಅತ್ತು” ಮತ್ತು “ಅತ್ತೇ” ಎಂಬ ಎರಡು ಧ್ವನಿಗಳಿಂದಲೇ ಹಿಡಿದಿಟ್ಟಿದ್ದಾರೆ. ದೊಡ್ಡ ಸಮಾಜಶಾಸ್ತ್ರದ ಪ್ರಬಂಧ ಹೇಳಬೇಕಾದುದನ್ನು ಎರಡು ಸಾಲುಗಳ ಅಳುವಿನಲ್ಲೇ ಮುಗಿಸಿದ್ದಾರೆ!

“ಮಾರುತಿ ಪ್ರತಾಪ”ದಲ್ಲಿ “ಕೂರುತಿ”, “ಹಾರುತಿ”, “ಜಾರುತಿ”, “ಮಾರುತಿ” ಎಂಬ ಪ್ರಾಸಗಳ ಸರಣಿ ಹುಡುಗನ ಚಲನವಲನವನ್ನು ಚಲನಚಿತ್ರದ ದೃಶ್ಯಗಳಂತೆ ನಮ್ಮ ಮುಂದೆ ತರುತ್ತದೆ. ಒಂದು ಕಡೆ ಕೂರುವುದು, ಇನ್ನೊಂದು ಕಡೆ ಹಾರುವುದು, ಮೇಲಿಂದ ಜಾರುವುದು — ಹುಡುಗನ ಚಟುವಟಿಕೆಗಳಿಗೆ ಕೊನೆಯಿಲ್ಲ. ಏಕೆ ಹೀಗೆ ಎಂದು ಕೇಳಿದಾಗ ಅವನ ಹೆಸರು ಮಾರುತಿ ಎಂದು ಉತ್ತರ ಸಿಗುತ್ತದೆ. ಹೆಸರಿನಲ್ಲಿರುವ ಪೌರಾಣಿಕ ವೀರತ್ವವನ್ನು ಹುಡುಗನ ತುಂಟ ಚಟುವಟಿಕೆಗಳಿಗೆ ಜೋಡಿಸುವುದರಲ್ಲೇ ಹಾಸ್ಯವಿದೆ. ಹೆಸರೇ ಸ್ವಭಾವಕ್ಕೆ ಕಾರಣವೇ ?

“ಸೀನು” ಎಂಬ ಚುಟುಕು ಪದದ ಧ್ವನಿಯನ್ನೇ ವಿಧಿಯನ್ನಾಗಿ ಪರಿವರ್ತಿಸುತ್ತದೆ. ಜೋಯಿಸರ ಮಗ ಹೆಣ್ಣು ನೋಡಲು ಹೋದಾಗ ಒಂದು ಒಂಟಿ ಸೀನು ಬರುತ್ತದೆ. ಅದೇ ಅವನ ಜೀವನದ ಸಂಪೂರ್ಣ ಸೀನನ್ನೇ ಬದಲಾಯಿಸುತ್ತದೆ. ಇಲ್ಲಿ “ಸೀನು” ಎಂಬುದು ಸೀನುವ ಕ್ರಿಯೆಯನ್ನೂ, ಇಂಗ್ಲೀಷ್  ಪದ “Scene” ನನ್ನು,  “ಸೀನು” ಎಂಬ ಹೆಸರಿನವನನ್ನೂ ಸೂಚಿಸುತ್ತದೆ.  ಒಂದೇ ಪದಕ್ಕೆ ಕೆಲವೇ ಸಾಲುಗಳಲ್ಲಿ ಹಲವಾರು ಅರ್ಥ ಬರುವಂತೆ ಕಟ್ಟಿಕೊಟ್ಟಿರುವುದು ವಿಶೇಷವೇ ಸರಿ. 

ಸೀನುವುದು ಸಾಮಾನ್ಯ ದೈಹಿಕ ಕ್ರಿಯೆ. ಆದರೆ ಮದುವೆಯ ಮಾತುಕತೆಯ ಸಂದರ್ಭದಲ್ಲಿ, ನಮ್ಮ ಅರಿವಿಗಿಲ್ಲದಂತೆ ಬಂದ ಅದನ್ನು ಅಪಶಕುನವೆಂದು ಪರಿಗಣಿಸಲ್ಪಟ್ಟರೆ? ಒಂದು ಸಣ್ಣ ಸೀನು, ದೊಡ್ಡ ನಿರ್ಧಾರಕ್ಕೆ (unpleasant scene!) ಕಾರಣವಾಗುತ್ತದೆ. ಕೊನೆಯಲ್ಲಿ “ಜೋಯಿಸರ ಸೀನುವೂ ಒಬ್ಬಂಟಿ” ಎಂಬ ಸಾಲು ಬರುವ ಹೊತ್ತಿಗೆ, ಸೀನಿನ ಧ್ವನಿಯೇ ಮದುವೆಯ ನಿರಾಕರಣೆಯ ಧ್ವನಿಯಾಗಿ ಕೇಳಿಸುತ್ತದೆ. ಜೋಯಿಸರ ಮನೆಯಲ್ಲಿ ಜ್ಯೋತಿಷ್ಯದ ಲೆಕ್ಕಾಚಾರ ಎಷ್ಟೇ ಸರಿಯಾಗಿದ್ದರೂ, ಒಂದು ಸೀನಿನ ಲೆಕ್ಕ ತಪ್ಪಿದರೆ ಮದುವೆಯ ಲೆಕ್ಕಾಚಾರವೇ ಉಲ್ಟಾ! ಇಲ್ಲಿ ಕವಿಯ ವ್ಯಂಗ್ಯ ಮೂಢನಂಬಿಕೆಯ ಕಡೆಗೂ ಚಾಚುತ್ತದೆ. ಮನುಷ್ಯನ ಗುಣ, ಹೊಂದಾಣಿಕೆ, ಬದುಕಿನ ಸಾಮರ್ಥ್ಯಗಳನ್ನು ನೋಡಬೇಕಾದ ಸಂದರ್ಭದಲ್ಲಿ ಒಂದು ಆಕಸ್ಮಿಕ ದೈಹಿಕ ಕ್ರಿಯೆಗೆ ಅತಿಯಾದ ಮಹತ್ವ ಕೊಡುವ ಸಮಾಜದ ಮನೋಭಾವವನ್ನು ಕವಿ ನಗಿಸುತ್ತಾರೆ. 

“ತಿನ್ನಿ” ಎಂಬ ಚುಟುಕಿನಲ್ಲಿ ಪ್ರಸಿದ್ಧ ಗಾದೆ “ಕೈ ಕೆಸರಾದರೆ ಬಾಯಿ ಮೊಸರು” ಹೊಸ ತಿರುವು ಪಡೆಯುತ್ತದೆ. ಮೊಸರನ್ನು ತಿನ್ನಬೇಕೆಂದರೆ ಕೈ ಕೆಸರಾಗಬೇಕು ಎಂಬ ಗಾದೆಯ ಅರ್ಥವನ್ನು ಕವಿ ಸರಳವಾಗಿ ತಲೆಕೆಳಗಾಗಿಸುತ್ತಾರೆ:

“ಕೈ ತೊಳೆದುಕೊಂಡು 
ತಿನ್ನಿ ಮೊಸರು”

ಗಾದೆಯ ಮೂಲ ಆಶಯ ಪರಿಶ್ರಮದಿಂದ ಫಲ ಸಿಗುತ್ತದೆ ಎಂಬುದು. ಆದರೆ ಕವಿ ಆರೋಗ್ಯ ಮತ್ತು ಸ್ವಚ್ಛತೆಯ ದೃಷ್ಟಿಯಿಂದ ಕೈ ತೊಳೆದುಕೊಂಡು ತಿನ್ನುವಂತೆ ಹೇಳುತ್ತಾರೆ. ಗಾದೆಯ ಪರಿಚಿತ ರೂಪವನ್ನು ಓದುಗನ ಮನಸ್ಸಿನಲ್ಲಿ ಮೊದಲು ಎಬ್ಬಿಸಿ, ಕೊನೆಯಲ್ಲಿ ಅದರ ವಿರುದ್ಧದ ಮಾತನ್ನು ಹೇಳುವುದರಿಂದ ಸಣ್ಣ ಹಾಸ್ಯ ಹುಟ್ಟುತ್ತದೆ. ಇದು ಗಾದೆಯನ್ನೇ ತಿರಸ್ಕರಿಸುವುದಲ್ಲ; ಸಂದರ್ಭ ಬದಲಾದಾಗ ಅರ್ಥವೂ ಬದಲಾಗಬಹುದು ಎಂಬುದನ್ನು ತೋರಿಸುವ ಆಟ.

“ಬದುಕು” ಎಂಬ ಚುಟುಕು ಮಾತ್ರ ಈ ಹಾಸ್ಯದ ಲೋಕದಿಂದ ನಮ್ಮನ್ನು ಕ್ಷಣಮಾತ್ರದಲ್ಲಿ ಗಂಭೀರತೆಯ ಕಡೆಗೆ ಕರೆದೊಯ್ಯುತ್ತದೆ:

“ಹುಟ್ಟಿದ ಕೂಡಲೆ ಶುರುವಾಗಲಿಲ್ಲ 
ಸತ್ತ ಕೂಡಲೆ ಮುಗಿಯುವುದಿಲ್ಲ”

ಬದುಕು ಜನನ ಮತ್ತು ಮರಣದ ನಡುವಿನ ಅಂತರ ಮಾತ್ರವಲ್ಲ ಎಂಬ ತಾತ್ವಿಕ ಸೂಚನೆ ಇಲ್ಲಿ ಅಡಗಿದೆ. ಹುಟ್ಟುವ ಮೊದಲೇ ಮನುಷ್ಯನ ಬದುಕನ್ನು ರೂಪಿಸುವ ಪರಿಸ್ಥಿತಿಗಳಿರುತ್ತವೆ; ಸತ್ತ ಮೇಲೂ ಅವನ ನೆನಪು, ಪ್ರಭಾವ, ಕೃತಿಗಳು, ಸಂಬಂಧಗಳು ಮುಂದುವರಿಯುತ್ತವೆ. ಇದರ ಮುಂದುವರಿಕೆಯಂತೆ “ಮರಣ” ಎಂಬ  ಚುಟುಕಿನಲ್ಲಿ ಕವಿ ಮರಣವನ್ನು “ಅರ್ಥ ಇಲ್ಲದೆ ಇರುವ ಬಹು ದೊಡ್ಡ ವಾಕ್ಯಕ್ಕೆ ಕೊಟ್ಟ ಪೂರ್ಣ ವಿರಾಮ” ಎಂದು ವರ್ಣಿಸುತ್ತಾರೆ. ಈ ರೂಪಕದಲ್ಲಿ ಮರಣವು ವಾಕ್ಯದ ಕೊನೆಯ ಚುಕ್ಕಿಯಂತೆ ಕಾಣಿಸಿದರೂ, ಬದುಕಿನ ಅರ್ಥವನ್ನು ಪ್ರಶ್ನಿಸುವ ಶಕ್ತಿಯನ್ನೂ ಹೊಂದಿದೆ. ವಾಕ್ಯ ಎಷ್ಟು ದೊಡ್ಡದಾಗಿದ್ದರೂ ಪೂರ್ಣವಿರಾಮವಿಲ್ಲದೆ ಮುಗಿಯುವುದಿಲ್ಲ; ಹಾಗೆಯೇ ಬದುಕು ಎಷ್ಟು ದೀರ್ಘವಾಗಿದ್ದರೂ ಒಂದು ದಿನ ಅಂತ್ಯಗೊಳ್ಳುತ್ತದೆ. ಆದರೆ ಬದುಕಿನ ವಾಕ್ಯಕ್ಕೆ ಅರ್ಥವಿದೆಯೇ ಇಲ್ಲವೇ ಎಂಬುದು ನಮ್ಮ ಬದುಕುವ ರೀತಿಯ ಮೇಲೆ ಅವಲಂಬಿತ. “ಅರ್ಥ ಇಲ್ಲದೆ ಇರುವ” ಎಂಬ ಮಾತು ಮರಣದ ಅನಿವಾರ್ಯತೆಯ ಜೊತೆಗೆ ಬದುಕಿನ ಅರ್ಥಶೋಧನೆಯನ್ನೂ ನೆನಪಿಸುತ್ತದೆ. ಇಲ್ಲಿ ನಗು ಹಿಂದೆ ಸರಿಯುತ್ತದೆ; ಚಿಂತನೆ ಮುಂದೆ ಬರುತ್ತದೆ.

ಚುಟುಕುಗಳಲ್ಲಿ ಕವಿ ಪದಗಳ ಚಮತ್ಕಾರದಿಂದ ನಗಿಸಿದರೆ, ಹೈಕುಗಳಲ್ಲಿ ಅಲ್ಪ ಪದಗಳಿಂದ ವಿಶಾಲ ಅನುಭವವನ್ನು ಹುಟ್ಟಿಸುತ್ತಾರೆ.

“ಗುಡುಗಿದರೆ 
ಹೂವರಳದು. 
ಸುರಿ ಬೇರಿಗೆ ನೀರು” 

ಇದು ಪ್ರಕೃತಿಯ ಎಂಥ ಸರಳ ಸತ್ಯ ! ಗುಡುಗು ದೊಡ್ಡದಾಗಿ ಸದ್ದು ಮಾಡಬಹುದು; ಆದರೆ ಹೂವು ಅರಳಲು ಬೇಕಾಗಿರುವುದು ನೀರು. ಶಬ್ದ ಮತ್ತು ಕ್ರಿಯೆಯ ನಡುವಿನ ಅಂತರವನ್ನು ಈ ಹೈಕು ಸೂಚಿಸುತ್ತದೆ. ಕೇವಲ ಗುಡುಗುವುದರಿಂದ ಫಲವಿಲ್ಲ; ಬೇರುಗಳಿಗೆ ನೀರು ತಲುಪಬೇಕು. ಮಾತಿನ ಗದ್ದಲಕ್ಕಿಂತ ಕಾರ್ಯದ ಮೌಲ್ಯವೇ ಮುಖ್ಯ ಎಂಬ ಸಾಮಾಜಿಕ ಅರ್ಥವನ್ನೂ ಇದರಲ್ಲಿ ಕಾಣಬಹುದು.

“ಕಸ ತುಂಬಿದೆ 
ಮನದಲ್ಲಿ. ಬಂದವ 
ಕೂರುವುದೆಲ್ಲಿ?” 

ಎಂಬಲ್ಲಿ ಕವಿ ಮನಸ್ಸನ್ನು ಮನೆಯಾಗಿ ಕಲ್ಪಿಸಿದ್ದಾರೆ. ಮನೆಯೊಳಗೆ ಕಸ ತುಂಬಿದ್ದರೆ ಅತಿಥಿ ಕುಳಿತುಕೊಳ್ಳಲು ಜಾಗವಿರುವುದಿಲ್ಲ. ಹಾಗೆಯೇ ಮನಸ್ಸು ದ್ವೇಷ, ಅಸೂಯೆ, ಪೂರ್ವಗ್ರಹಗಳಿಂದ ತುಂಬಿದ್ದರೆ ಹೊಸ ಆಲೋಚನೆಗಳಿಗೆ, ಪ್ರೀತಿಗೆ, ಮತ್ತೊಬ್ಬರ ಅನುಭವಗಳಿಗೆ ಜಾಗವೆಲ್ಲಿ? ಇಲ್ಲಿ “ಕಸ” ಎಂಬ ಸರಳ ಪದವು ಮನಸ್ಸಿನ ಒಳಮಾಲಿನ್ಯದ ರೂಪಕವಾಗುತ್ತದೆ. ಇಲ್ಲಿ ಅಧ್ಯಾತ್ಮದ ಬೆಳಕು, ಜೊತೆಗೆ  ಹಾಸ್ಯದ ಸಣ್ಣ ನೆರಳೂ ಇದೆ

“ಹಾಲು ಚೆಲ್ಲಿದೆ, 
ಬೆಳದಿಂಗಳ ರಾತ್ರಿ, 
ತಂಬಿಗೆ ಚಂದ್ರ” 

ಎಂಬ ಹೈಕು ದೃಶ್ಯಕಾವ್ಯದ ಸೊಗಸನ್ನು ತೋರಿಸುತ್ತದೆ. ಚೆಲ್ಲಿದ ಹಾಲಿನ ಬಿಳುಪು, ಬೆಳದಿಂಗಳ ಬೆಳಕು, ತಂಬಿಗೆಯಂತೆ ಕಾಣುವ ಚಂದ್ರ- ಈ ಮೂರೂ ಚಿತ್ರಗಳು ಒಂದಕ್ಕೊಂದು ಬೆರೆತು ಕಣ್ಣಿಗೆ ಕಾಣುವ ಕಾವ್ಯವಾಗುತ್ತವೆ. ಹಾಲು ಚೆಲ್ಲಿದ (ನಷ್ಟದ ?) ದೃಶ್ಯವೇ ಬೆಳದಿಂಗಳ ಸೌಂದರ್ಯದಲ್ಲಿ ಪರಿವರ್ತನೆಯಾಗುತ್ತದೆ. ಅಲ್ಪ ಪದಗಳಲ್ಲಿ ದೃಶ್ಯ, ಬೆಳಕು ಮತ್ತು ಕಲ್ಪನೆಗಳನ್ನು ಕಟ್ಟುವ ಕವಿಯ ಸಾಮರ್ಥ್ಯ ಇಲ್ಲಿ ಸ್ಪಷ್ಟವಾಗುತ್ತದೆ.

“ಗಂಟೆ, ಆರತಿ, 
ಶಂಖ, ಜಾಗಟೆ, ಮಂತ್ರ
ಮುಗಿದು ಮೌನ” 

ಎಂಬಲ್ಲಿ ಧಾರ್ಮಿಕ ಆಚರಣೆಯ ಶಬ್ದಗಳು ಒಂದರ ಹಿಂದೆ ಒಂದಾಗಿ ಕೇಳಿಸುತ್ತವೆ. ಗಂಟೆಯ ನಾದ, ಶಂಖದ ಮೊಳಗು, ಜಾಗಟೆಯ ಸದ್ದು, ಮಂತ್ರಗಳ ಉಚ್ಚಾರ – ಎಲ್ಲವೂ ಸೇರಿ ಒಂದು ಪವಿತ್ರ ವಾತಾವರಣವನ್ನು ಸೃಷ್ಟಿಸಿದರೂ, ಕೊನೆಯಲ್ಲಿ ಬರುವುದು ಮೌನ. ಶಬ್ದಗಳೆಲ್ಲ ನಿಂತ ಮೇಲಿನ ಮೌನವೇ ಬಹುಶಃ ಪ್ರಾರ್ಥನೆಯ ಅತ್ಯಂತ ಆಳವಾದ ಕ್ಷಣ. ಈ ಹೈಕುವಿನಲ್ಲಿ “ಮುಗಿದು ಮೌನ” ಎಂಬ ಅಂತ್ಯ, ಆಚರಣೆಯ ಬಾಹ್ಯ ಸದ್ದಿನಿಂದ ಒಳಗಿನ ನಿಶ್ಶಬ್ದದ ಕಡೆಗೆ ನಮ್ಮನ್ನು ಕರೆದೊಯ್ಯುತ್ತದೆ.

ಈ ಹೈಕುಗಳಲ್ಲಿ ಚುಟುಕುಗಳಲ್ಲಿರುವ ಸ್ಪಷ್ಟ ಪದಪಂಚ್ ಇಲ್ಲ; ಬದಲಾಗಿ ದೃಶ್ಯ, ವಿರೋಧಾಭಾಸ, ರೂಪಕ ಮತ್ತು ಮೌನದ ಮೂಲಕ ಅರ್ಥ ಹುಟ್ಟುತ್ತದೆ. ಚುಟುಕಿನಲ್ಲಿ ಕವಿ ನಮ್ಮನ್ನು ನಗಿಸಿ ಎಚ್ಚರಿಸಿದರೆ, ಹೈಕುವಿನಲ್ಲಿ ಕ್ಷಣವೊಂದನ್ನು ತೋರಿಸಿ ಅದರೊಳಗೆ ನಮ್ಮನ್ನೇ ಹುಡುಕಿಕೊಳ್ಳುವಂತೆ ಮಾಡುತ್ತಾರೆ.

“ಕವಿಯ ತೂಕ ಎಷ್ಟು? 
ಕಾಂತಾಮಣಿಯ ಪ್ರೀತಿ ಅಷ್ಟು”

“ಕವಿ ತೂಕ” ಎಂಬ ಚುಟುಕಿನಲ್ಲಿ ಚಿಂತಾಮಣಿಯವರ ತೂಕಕ್ಕೆ ಕಾರಣ ಕಾಂತಾಮಣಿ ಎಂದು ಹೇಳುವಾಗ, ದೇಹದ ತೂಕವನ್ನು ಪ್ರೀತಿ ಮತ್ತು ಗೃಹಜೀವನದ ಹಾಸ್ಯದೊಂದಿಗೆ ಜೋಡಿಸುತ್ತಾರೆ. “ಚಿಂತಾಮಣಿ”, “ಕಾಂತಾಮಣಿ” ಎಂಬ ಪದಗಳ  ಧ್ವನಿಸಾಮ್ಯವಿರುವುದರಿಂದ ಸಾಲುಗಳಿಗೆ ಒಂದು ಲಯ ಬರುತ್ತದೆ. ತೂಕವೆಂಬುದು ಕೇವಲ ದೇಹದ ಮಾಪನವಲ್ಲ; ಪ್ರೀತಿಯ ಭಾರವೂ ಆಗಬಹುದು, ಸಂಸಾರದ ಸುಖಸೌಕರ್ಯದ ಫಲವೂ ಆಗಬಹುದು.  ಕವಿಯೇ ತನ್ನನ್ನು ಹಾಸ್ಯಕ್ಕೆ ಒಳಪಡಿಸಿಕೊಳ್ಳುವ ಈ ಗುಣ, ಡುಂಡಿರಾಜರ ಆತ್ಮವಿಡಂಬನಾತ್ಮಕ ಕವಿತೆ “ನನ್ನ ಕವೆತೆ ನನ್ನ ಹಾಗೆ” ನೆನಪಿಸುತ್ತದೆ. ” 

“ಮಗ” ಎಂಬ ಚುಟುಕಿನಲ್ಲಿ “ಊರಿಗೆ ಅರಸ, ತಾಯಿಗೆ ಮಗ” ಎಂಬ ಮಾತಿನ ಮೂಲಕ ಸಾರ್ವಜನಿಕ ಜೀವನ ಮತ್ತು ವೈಯಕ್ತಿಕ ಸಂಬಂಧಗಳ ನಡುವಿನ ವ್ಯತ್ಯಾಸ ಕಾಣುತ್ತದೆ. ಊರಿಗೆ ಅರಸನಂತೆ ಕಾಣುವವನು ತಾಯಿಯ ಪಾಲಿಗೆ ಸದಾ ಮಗನೇ. ಆದರೆ ಊರಿನ ಚಿಂತೆಯಲ್ಲಿ ಮುಳುಗಿರುವವನಿಗೆ ತಾಯಿಯ ಬಳಿಯಲ್ಲಿ ಸಿಗುವ ಸಮಯ ಎಷ್ಟು? ಅಧಿಕಾರ, ಹೊಣೆಗಾರಿಕೆ, ಸಾರ್ವಜನಿಕ ಸೇವೆ ಮತ್ತು ಕೌಟುಂಬಿಕ ಪ್ರೀತಿಗಳ ನಡುವಿನ ಸೂಕ್ಷ್ಮ ಸಂಘರ್ಷವನ್ನು ಕವಿ ಅಲ್ಪ ಪದಗಳಲ್ಲಿ ಹಿಡಿದಿಡುತ್ತಾರೆ. ಇಲ್ಲಿ ಹಾಸ್ಯಕ್ಕಿಂತ ಮಾನವೀಯ ಭಾವವೇ ಹೆಚ್ಚು.

ಓಟ್ಟೀನಲ್ಲಿ ಚಿಂತಾಮಣಿಯವರ  ಚುಟುಕುಗಳನ್ನು ಗಮನಿಸಿದರೆ ಕೆಲವು ವಿಶಿಷ್ಟ ತಂತ್ರಗಳು ಮತ್ತೆ ಮತ್ತೆ ಕಾಣಿಸುತ್ತವೆ. ಪದವನ್ನು ಒಡೆದು ಹೊಸ ಅರ್ಥ ಹುಟ್ಟಿಸುವುದು, ಧ್ವನಿಸಾಮ್ಯದಿಂದ ಅರ್ಥದ ತಿರುವು ಬದಲಾಯಿಸುವುದು, ಪ್ರಾಸದ ಮೂಲಕ ಪಂಚ್‌ಗೆ ವೇಗ ಹೆಚ್ಚಿಸುವುದು, ವಿಡಂಬನೆಯ ಮೂಲಕ ಸಾಮಾಜಿಕ ಟೀಕೆ ಮತ್ತು ಸಾಮಾನ್ಯ ಬದುಕಿನೊಳಗೆ ಕಾವ್ಯ ಹುಡುಕುವುದು.  ಈ ಚುಟುಕುಗಳ ಮತ್ತೊಂದು ವಿಶೇಷವೆಂದರೆ, ಕವಿ ಓದುಗನ ಬುದ್ಧಿಶಕ್ತಿಯ ಮೇಲೆ ನಂಬಿಕೆ ಇಟ್ಟಿದ್ದಾರೆ. ಎಲ್ಲವನ್ನೂ ವಿವರಿಸಿ ಹೇಳುವುದಿಲ್ಲ. ಒಂದು ಪದವನ್ನು ಬಿಟ್ಟುಬಿಡುತ್ತಾರೆ, ಒಂದು ಧ್ವನಿಯನ್ನು ತಿರುಗಿಸುತ್ತಾರೆ, ಒಂದು ಸಾಲನ್ನು ಅನಿರೀಕ್ಷಿತವಾಗಿ ಮುಗಿಸುತ್ತಾರೆ. ಆ ಖಾಲಿ ಜಾಗವನ್ನು ಓದುಗನೇ ತುಂಬಬೇಕು. ಹಾಸ್ಯದ ನಿಜವಾದ ಆನಂದವೂ ಅಲ್ಲಿಯೇ ಇದೆ. ಪಂಚ್‌ಲೈನ್ ಓದಿದ ಕೂಡಲೇ ನಗುವು ಬರಬಹುದು; ಆದರೆ ಅದರ ಹಿಂದಿನ ಪದದಾಟವನ್ನು ಗುರುತಿಸಿದಾಗ ಎರಡನೇ ನಗು ಬರುತ್ತದೆ. ಅದರೊಳಗಿನ ಸಾಮಾಜಿಕ ವ್ಯಂಗ್ಯ ಅರ್ಥವಾದಾಗ ಮೂರನೆಯದಾಗಿ ಒಂದು ಸಣ್ಣ ಯೋಚನೆ ಹುಟ್ಟುತ್ತದೆ.

ಚಿಂತಾಮಣಿ ಕೊಡ್ಲೆಕೆರೆಯವರ ಚುಟುಕುಗಳಲ್ಲಿ ಭಾಷೆ ಆಟವಾಡುತ್ತದೆ, ಅರ್ಥ ತಿರುವು ಪಡೆಯುತ್ತದೆ, ಪ್ರಾಸ ಕುಣಿಯುತ್ತದೆ, ವ್ಯಂಗ್ಯ ಚುಚ್ಚುತ್ತದೆ. ಕೆಲವೆಡೆ ಹಾಸ್ಯ ಹೊಟ್ಟೆ ಹಿಡಿದು ನಗಿಸಿದರೆ, ಇನ್ನು ಕೆಲವೆಡೆ ತುಟಿಯಂಚಿನಲ್ಲಿ ನಗು ಮೂಡಿಸಿ ಯೋಚನೆಗೆ ಹಚ್ಚುತ್ತದೆ. ಪದಗಳ ಮೇಲಿನ ಪ್ರೀತಿಯ ಜೊತೆಗೆ ಅವುಗಳನ್ನು ತುಂಟವಾಗಿ ಬಳಸುವ ಜಾಣ್ಮೆಯೂ ಈ ಕವಿತೆಗಳ ಜೀವಾಳ. ಟೀಯ ಅರ್ಧ ಕಪ್‌ನಿಂದ ಬದುಕಿನ ಪೂರ್ಣವಿರಾಮದವರೆಗೆ, ಇಡ್ಲಿಯ ವ್ರತದಿಂದ ಮನಸ್ಸಿನ ಕಸದವರೆಗೆ –  ಈ ಕಾವ್ಯಲೋಕದಲ್ಲಿ ಯಾವುದೂ ಚಿಕ್ಕದಲ್ಲ. ಏಕೆಂದರೆ ಚುಟುಕಿನ ಗಾತ್ರವನ್ನು ಅಳೆಯುವುದು ಸಾಲುಗಳ ಸಂಖ್ಯೆಯಿಂದಲ್ಲ; ಅದು ಹುಟ್ಟಿಸುವ ನಗುವಿನ ಆಳದಿಂದ ಮತ್ತು ಚಿಂತನೆಯ ತೂಕದಿಂದ!

ಅವರ ಕವಿತೆಗಳ ಮುಂದೆ ಕುಳಿತಾಗ ಮತ್ತೊಮ್ಮೆ ಒಂದು ಕಪ್ ಚಹಾ ಕುಡಿಯಲೇಬೇಕು. ಆ ಚಹಾದ ಜೊತೆಗೆ ಒಂದು ಚುಟುಕು ಓದಬೇಕು. 

*****

ಪುಸ್ತಕದ ಮುನ್ನುಡಿಯಲ್ಲಿ ಕವಿ ಡುಂಡಿರಾಜ್ ಅವರು, “ಕನ್ನಡದಲ್ಲಿ ಈಗ ಚಿಂತಾಮಣಿಯವರಷ್ಟು ಚುಟುಕಾಗಿ, ಧ್ವನಿಪೂರ್ಣವಾಗಿ ಹನಿಗವನಗಳನ್ನು ಬರೆಯುವವರು ಹೆಚ್ಚಿಲ್ಲ. ಅವರದು ಚೇತೋಹಾರಿಯಾದ ‘ಚಹದ ಪರಿಮಳದ ಹಾದಿ” ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇನ್ನು ಬೆನ್ನು ತಟ್ಟುತ್ತ  ಜೋಗಿಯವರು, “ಶುಂಠಿ ಪೆಪ್ಪರ್‌ಮಿಂಟ್‌ನ ರುಚಿಯಂತೆ ಬಹಳ ಕಾಲ ನಾಲಗೆಯಲ್ಲಿ ನೆಲೆಸುತ್ತದೆ” ಎಂದು ಹೇಳುವ ಮೂಲಕ ಈ ಕವನಗಳ ಸವಿಯನ್ನು ಮನದುಂಬಿ ಸವಿದಿದ್ದಾರೆ.

ಚಿಂತಾಮಣಿಯವರು ಡಾ. ಎಚ್ಚೆಸ್ವಿ ಯವರನ್ನು ಕರೆಯುತ್ತಿದ್ದದ್ದು “ನನ್ನ ಹಿರಿಯಣ್ಣ” ಎಂದು.  ಇವರ ಇನ್ನೊಂದು ಹೊಸ ಕವನ ಸಂಕಲನ “ಬೆಳದಿಂಗಳ ಹಾದಿ” ಯನ್ನು ಎಚ್ಚೆಸ್ವಿ ಯವರಿಗೆ ಅರ್ಪಿಸಿದ್ದಾರೆ.  ಇದಕ್ಕಾಗಿ ಎಚ್ಚೆಸ್ವಿ ಕುಟುಂಬದ ಪರವಾಗಿ ಚಿಂತಾಮಣಿ ಅವರಿಗೆ ನನ್ನ ಹೃದಯಪೂರ್ವಕ ವಂದನೆಗಳು.

“ಹನಿಗವಿತೆಗಳು ಸಾಕಷ್ಟು ಬರಲಿ, ಅವು ಕೂಡ ಕವಿತೆಗಳಾಗಿರಲಿ” ,  ಎಂಬ ಎಚ್ಚೆಸ್ವಿ  ಅವರ  ಆಶಯವು ಚಿಂತಾಮಣಿ ಅವರು  ಪ್ರತಿಬಾರಿಯೂ ಹನಿಗವಿತೆ ಬರೆಯುವಾಗ ಅವರ ಹೃದಯದಲ್ಲಿ ಸದಾ ನೆಲೆಸಿರಲಿ ಎಂದು ಆಶಿಸುತ್ತ……

“ವಿಜಯದಶಮಿ”  ಹಬ್ಬ ಮುಗಿದ ನಂತರದ ದಿನ ಇಂದು. ಇವತ್ತಿನ ಬೆಂಗಳೂರಿನ ಸಂಜೆ ಮೌನದಲ್ಲಿ ಮಿಂದಿದೆ. ಮೋಡಗಳ ಮರೆಯಲ್ಲಿ ಕಣ್ಣಾಮುಚ್ಚಾಲೆಯಾಡುವ ಚಂದ್ರ, ಮೆಲ್ಲಗೆ ಸುರಿಯುವ ತುಂತುರು ಮಳೆ, ರಸ್ತೆಯ ದೀಪಗಳಲ್ಲಿ ಮಿನುಗುವ ಮಳೆಹನಿಗಳು, ಒದ್ದೆಯಾದ ಮಣ್ಣಿನ ಸುವಾಸನೆ, ಮೈಯನ್ನು ಸವರಿ ಹೋಗುವ ತಂಪಾದ ಗಾಳಿ – ಇವೆಲ್ಲವೂ ಸೇರಿ ಮನಸ್ಸನ್ನು ಮಧುರ ಲೋಕಕ್ಕೆ ಕರೆದೊಯ್ಯುತ್ತವೆ. ಇಂತಹ ಹೊತ್ತಿನಲ್ಲಿ ನೆನಪಾಗುವುದು ಒಂದೇ ಒಂದು ಸಂಗತಿ – ಅರ್ಧ ಲೋಟ ಬಿಸಿಬಿಸಿ ಟೀ!

ಬೆರಳುಗಳ ನಡುವೆ ಬೆಚ್ಚಗಿನ ಟೀ ಲೋಟವನ್ನು ಹಿಡಿದು, ಮೇಲೇಳುವ ಹಬೆಯನ್ನು ನೋಡುತ್ತಾ, ಹೊರಗೆ ಸುರಿಯುವ ಮಳೆಯ ಸದ್ದಿಗೆ ಕಿವಿಯಾಗುತ್ತಾ, ಒಂದೊಂದೇ ಗುಟುಕು ಟೀ ಹೀರುತ್ತ ಚಿಂತಾಮಣಿ ಅವರ  ಕವನಗಳನ್ನು ಓದುವ ಸುಖವೇ ಅನನ್ಯ.

ಮುಂದೆಯೂ ಹೀಗೆ ಮಳೆ ಸುರಿಯುತ್ತಿರಲಿ; ಬಿಸಿಬಿಸಿ ಫುಲ್ ಅರ್ಧ ಟೀ ಸಿಗುತ್ತಿರಲಿ!