- ಮುಂಗಾರು ಮಳೆಯ ಕೆಸರಭಿಷೇಕಕೆ…………… - ಆಗಸ್ಟ್ 2, 2026
- ‘ಜೀವದನಿ’ ಜೀವಪರ ದನಿ ಎತ್ತುವ ಕೃತಿ - ಮಾರ್ಚ್ 8, 2026
- ಸ್ನೇಹವೆಂದರೆ… - ಆಗಸ್ಟ್ 3, 2025
ಮುಂಗಾರಿನ ಅಭಿಷೇಕಕೆ ಮಿದುವಾಯಿತು ನೆಲವು ಧಗೆ ಆರಿದ ಹೃದಯದಲ್ಲಿ ಪುಟಿದೆದ್ದಿತು ಚೆಲುವು….. ಎಂಥಾ ಮೋಹಕ ಸಾಲುಗಳು ಅಲ್ವಾ ಮುಂಗಾರು ಮಳೆಯ ಕುರಿತು ! ಆದರೆ ಈ ಸಾಲುಗಳು ನಮಗೇ ಅನ್ವಯವಾಗದು ಬಿಡಿ ಆದರೆ “ಮುಂಗಾರಿನ ಮಳೆ ಅಭಿಷೇಕಕೆ ಕೆಸರಾಯಿತು ಲಂಗವು ಇಂಬಳದ ರಕುತ ಹೀರುವಿಕೆಗೆ ಜುಮ್ಮೆಂದಿತು ಮನವು..” ಎನ್ನುವ ಮಾತು ಸರಿಹೊಂದತ್ತೆ. ಮಳೆಯಲಿ ಚಳಿಯಲಿ ಶಾಲೆಯೆಡೆಗೆ ಹೆಜ್ಜೆ ಹಾಕಿದ ಎಷ್ಟೋ ಜನರಿಗೆ ಕೆಸರಿನ ಸಿಂಚನ ಒಂದಿಲ್ಲೊಂದು ರೀತಿ ಆಗಿಯೇ ಇರುತ್ತದೆ. ಕೆಲವರಿಗೆ ಕೆಸರನ್ನು ಪಟ ಪಟ ಹಾರಿಸುವುದರಲ್ಲಿ ತುಂಬಾ ಖುಷಿ. ಸರಿಯಾದ ಅಳತೆ ಚಪ್ಪಲ್ ಹಾಕಿಲ್ಲ ಅಥವಾ ಹವಾಯಿ ಚಪ್ಪಲ್ ಹಾಕಿದರೆ ಇಂಥದೊಂದು ಇನ್ಸೆನ್ಟಿವ್ ಪಡೆಯಬಹುದು. ಮಳೆನಾಡಿನ ಮಳೆಯ ಪರಿಚಯವಿಲ್ಲದೆ ಹವಾಯ್ ಚಪ್ಪಲಿಧರಿಸಿ ಬಂದ ಸುಷ್ಮ ಆದಿನ ಬಿಸಿ ಬಿಸಿ ಸುದ್ದಿಯ ಕೇಂದ್ರ ಬಿಂದುವಾಗಿದ್ದಳು. ಬುಧವಾರ ಬಿಳಿ ಯೂನಿಫಾರ್ಮ ಸ್ಕರ್ಟ್ ಧರಿಸಿ ಬ್ಯಾಗ್ ಏರಿಸಿ ಕೊಡೆ ಹಿಡಿದುಕೊಂಡು ದೂರದ ಕಾಫಿ ತೋಟದ ಬದಿಯಿಂದ ನಡೆದು ಬರುಷ್ಟರಲ್ಲಿ ಶಾಲೆಯ ಪ್ರೆಯರ್ ಬೆಲ್ ಆಗಿತ್ತು . ಪಿಟಿ ಟೀಚರ್ ಅವಳನ್ನು ಮುಂಬಾಗಿಲ್ಲೆ ತಡೆದು ನಿಲ್ಲಸಿದ್ದರು . ಸಹಪಾಠಿಗಳು ಪ್ರೆಯರ್ ಮುಗಿಸಿ ಕ್ಲಾಸ್ ರೂಮಿಗೆ ಹೋಗುವಾಗ ಸುಷ್ಮಳ ಕಾಲಲ್ಲಿ ರಕ್ತ ಸೋರುತ್ತಿರುವುದನ್ನು ಗಮನಿಸಿ ತರಾವರಿ ಮಾತನಾಡಲು ಪ್ರಾರಂಭಿಸುತ್ತಿದ್ದಂತೆ ಪಿಟಿ ಟೀಚರಿಂದ ಅವಳ ವಿಚಾರಣೆಯೂ ಪ್ರಾರಂಭವಾಗಿತ್ತು.


“ಹವಾಯ್ ಚಪ್ಪಲಿಯ ಶಬ್ದ ಕೇಳಿಸಿತು ಅದರೆ ಬಟ್ಟೆಗೆ ಹೀಗೆ ಕೆಸರು ಹಾರಬಹುದು ಎನ್ನುವ ಅಂದಾಜಿರಲಿಲ್ಲ” ಎಂದು ಸಮಜಾಯಿಷಿಕೆ ಕೊಡುತ್ತಿದ್ದಳು “ಇವತ್ತೆ ಕಡೆ ಇನ್ನು ಶಾಲೆಗೆ ಸಮಯಕ್ಕೆ ಸರಿಯಾಗಿ ಸರಿಯಾದ ಸಮವಸ್ತ್ರದಲ್ಲಿ ಬರಬೇಕು ತಿಳೀತಾ…” ಎಂಬ ವಾರ್ನಿಂಗ್ ಜೊತೆಗೆ ತರಗತಿಯಲ್ಲಿ ಕೂರಲು ಅನುಮತಿ ದೊರೆತಿದ್ದೆ ಜೀವಭಿಕ್ಷೆ ಎಂದು ತಿಳಿದಿದ್ದ ಸುಷ್ಮಳಿಗೆ ತರಗತಿಗೆ ಬರುತ್ತಿದ್ದಂತೆ ಇನ್ನೂ ಆಘಾತ ಕಾದಿತ್ತು ದೇವರು ವರ ಕೊಟ್ಟರೂ ಪೂಜಾರಿ ವರಕೊಡುವುದಿಲ್ಲ ಎಂಬಂತೆ ಸಹಪಾಠಿಗಳು ಅಣಕು ದೃಷ್ಟಿಯಿಂದ ನೋಡುತ್ತಿದ್ದಾಗ “ನನ್ ಮುಖದಲ್ಲಿ ಮಂಗ ಕುಣಿತ್ತಿದ್ಯಾ?” ಎಂದು ಕೇಳಿಯೇ ಬಿಟ್ಟಳು ಅದಕ್ಕವರು “ನಿನ್ ಕಾಲಲ್ಲಿ ರಕ್ತ ಸೋರ್ತ ಇದೆ.. ನೋಡ್ಕೊಂಡಿದ್ಯಾ ಹೈಜಿನ್ ಅಗಿ ಬರೋದಲ್ವಾ?” ಎಂದು ಮೂಗು ಮುರಿಯುತ್ತಿದ್ದರು ಆ ವೇಳೆಗೆ ಮೊದಲ ಅವಧಿಯ ಪಾಠಕ್ಕೆ ಬಂದ ಟೀಚರ್ಗೆ ಕ್ಷಣಾರ್ಧದಲ್ಲಿ ಕ್ಲಾಸ್ ರೂಮಿನ ಅಸ್ವಸ್ಥತೆ ತಿಳಿದು ಕೇಳಿದಾಗ ಎಲ್ಲರೂ ಸುಷ್ಮಳ ಕಾಲನ್ನು ತೋರಿಸಿ ಕಿಸಕ್ಕೆನ ನಕ್ಕರು.
ಪಾಪದ ಟೀಚರ್ ಸುಷ್ಮಾಗೆ “ನೀನ್ ಮನೆಗೆ ಹೋಗ್ಬಹುದು” ಎಂದು ಮನೆಗೆ ಕಳಿಹಿಸುವ ತೀರ್ಮಾನ ಮಾಡಿ ಅವಳನ್ನು ಹೊರಡಿಸುವಾಗ ಥಟ್ಟನೆ ಜ್ಞಾನೋದಯವಾದವರಂತೆ “ಬಿಡಿಸಬೇಕು! ಬಿಡಿಸಬೇಕು! ಆಯಾ ಕರೀರಿ ! ಹಿಡುಗುಲು….. ಕಸದ ಮೊರ….. ಕುಡಿಲಿಕೆ ನೀರು ತರ್ಲಿ” ಎನ್ನುತ್ತಿದ್ದಂತೆ “ಇವಳಿಗೇನಾಗಿದೆ ಏನ್ ಬಿಡಿಸ್ತಾರೆ ಗಾಳೀನ…. ದೆವ್ವನಾ….”ಎಂದು ಬಹಳ ಅಡ್ವಾನ್ಸ್ ಆಗಿ ಯೋಚಿಸಿ ಅದನ್ನೇ ರಿಪೇಟ್ ಮಾಡುತ್ತಿದ್ದರು. ಏದುಸಿರು ಬಿಡುತ್ತಾ ಬಂದ ಅಯಾ ಕುರಿತು ಟೀಚರ್ “ ಅವಳ ಕಾಲಲ್ಲಿ ಜಿಗಣೆ ಇದೆ ಬಿಡಿಸಿ ಮೊದಲು ನೀರ್ ಕುಡಿಸಿ” ಎಂದಾಗ ಎದ್ದಿದ್ದ ಎಲ್ಲಾ ಉಹಾಪೋಹಗಳು ತಣ್ಣಗಾದವು. ಸರಾಗವಾಗಿ ರಕ್ತ ಕುಡಿದು ಮೈಒಡೆದುಕೊಳ್ಳುವಂತೆ ಇದ್ದ ಜಿಗಣೆಯನ್ನೇ ಬಿಟ್ಟ ಕಣ್ ಬಿಟ್ಟ ಹಾಗೆ ಎಲ್ಲರೂ ನೋಡುತ್ತಾ ಇದ್ದರು. ಸುಷ್ಮ ಗಾಬರಿಯಾಗದೆ ನಾಳೆ ಬೇರೆ ಚಪ್ಪಲಿ ಹಾಕಿಕೊಂಡು ಬೇಲಿಬದಿ ಬಿಟ್ಟು ಸ್ವಲ್ಪ ಈಚೆ ನಡ್ಕೊಂಡ್ ಬರ್ತೀನಿ ಅಷ್ಟೆ! ಎಂದು ಕೆಸರಾದ ಲಂಗವನ್ನು ಸರಿಪಡಿಸಿಕೊಂಡು ಕುಳಿತುಕೊಂಡಾಗ ಉಳಿದವರು ಪೆಚ್ಚಾದರು.


ಮಳೆ ನಾಡಿನ ಲೀಲೆಯ ಬಗ್ಗೆ ಇನ್ನೂ ಹೇಳಬೇಕೆಂದರೆ
ಮಳೆನಾಡಿನಲ್ಲಿ ಕೊಡೆ ಹಿಡಿಯುವುದೂ ಒಂದು ಕೌಶಲ್ಯವೇ ಸರಿ! ಕೊಡೆ ಹಿಡಿಯಲು ಬಾರದವರು ಮಳೆನಾಡಿನಲ್ಲಿ ವೇಸ್ಟ್ ಬಾಡಿಗಳು ಎಂದೆ ಕರೆಸಿಕೊಳ್ಳಬೇಕಾಗುತ್ತದೆ. ಹೀಗೆ ಒಂದು ಮದ್ಯಾಹ್ನ ಆಗಷ್ಟೆ ನಾನೆ ಇಸ್ತ್ರಿ ಹಾಕಿದ ಕಾಟನ್ ಚೂಡಿದಾರ್ ಧರಿಸಿ ಅದಕ್ಕೆ ಬಹುಮಡಿಕೆಯಲ್ಲಿ ಗರಿಗರಿಯಾಗಿ ಮಡಿಚಿದ ಕಾಟನ್ ವೇಲನ್ನು ತಿರು ತಿರುಗಿ ಸರಿಮಾಡಿಕೊಂಡು ಹೆಗಲ ಮೇಲೆ ಏರಿಸಿಕೊಂಡು ಹೊರಟೆ ಸ್ವಲ್ಪ ದೂರದಲ್ಲೇ ಮಳೆಯ ಮುನ್ಸೂಚನೆ ದೊರಕಿತು . ಬ್ಯಾಗಿನಿಂದ ಸ್ವಿಚ್ ಕೊಡೆ ತೆಗೆದು ಬಿಡಿಸಿ ಹಿಡಿದುಕೊಂಡು ಸರಿಯಾಗಿ ನಿಲ್ಲಬೇಕು ಎನ್ನುವಷ್ಟರಲ್ಲಿ ಗಾಳಿಯ ರಭಸ ಹೆಚ್ಚಾಗಿ ಕೈಯಿಂದ ಕೊಡೆ ಜಾರಿದ ಪರಿ ತಿಳಿಯಲೇ ಇಲ್ಲ. ಕೊಡೆ ಸ್ವಲ್ಪ ಮೇಲ್ಮುಖವಾಗಿ ಚಲಿಸಿ ಅಷ್ಟೆ ರಭಸದಲ್ಲಿ ಅಂಗಾತ ಬಿದ್ದು ಸರಿ..ಸರಿದು ಮುಂದೋಡುತ್ತಿತ್ತು ಅದನ್ನು ಹಿಡಿಯುವ ಸಾಹಸ ಮಾಡಲು ಪ್ರಾರಂಭಿಸಿ ಓರೆ ಕಣ್ಣಿನಲ್ಲಿ ನೋಡಿದರೆ ಅಲ್ಲಿದ್ದವರೆಲ್ಲ ಕಣ್ ಬಾಯ್ ಬಿಟ್ಟು ನೋಡುತ್ತಿದ್ದರೆ ವಿನಃ ಸಹಾಯಕ್ಕೆ ಬರುವ ಲಕ್ಷಣ ಕಾಣಿಸುತ್ತಿರಲಿಲ್ಲ ಅಷ್ಟು ಜನ ನೋಡಿದರೂ ನೋಡುತ್ತಲೇ ಇರಲಿ ಎಂದುಕೊಂಡು ಮುಂದೋಡುತ್ತಿದ್ದ ಕೊಡೆಯನ್ನು ಬೆನ್ನಟ್ಟಿ ಮಡಿಚಿದರೆ ಅದು ತ್ರಿಬ್ಬಲ್ ಫೋಲ್ಡ್ ಅಲ್ಲ ಡಬ್ಬಲ್ ಫೋಲ್ಡಿಗೂ ಬಗ್ಗುತ್ತಿರಲಿಲ್ಲ ಅದರ ಕಡ್ಡಿಗಳು ತಮ್ಮ ಸ್ವಸ್ಥಾನ ಬಿಟ್ಟು ಕದಲಿ ಬಾಗಿಲ ಸೆರೆಯಿಂದ ಇಣುಕಿ ನೋಡುವ ಪಕ್ಕದ ಮನೆಯವರ ಇಣುಕು ಗೋಣಿನಂತೆ ಕಾಣುತ್ತಿದ್ದವು . ಇದು ಸರಿ ಹೋಗಲ್ಲ! ಆಟೋ ಹಿಡಿಯಣ ಎಂದು ಆಟೋಗೆ ಕೈ ಬೀಸಿದರೆ ಆ ಅಟೋವೂ ನಿಲ್ಲಿಸದೆ ದೌಡಾಯಿಸಿತು. ಇನ್ನೊಂದು ಆಟೋವೂ ಕಿರ್ರನೆ ಕೀಚಲು ಮಾಡಿಕೊಂಡು ಬಂದು ನಿಲ್ಲಿಸದೆ ತೆರಳಿತು . ಅದರೆ ಅದರ ಹಿಂದೆ ಬಂದ ಆಟೋ ಸದ್ದಿಲ್ಲದೆ ಬಂದು ಇದ್ದ ಕೆಸರನ್ನು ಹಾರಿಸಿ ಮುಂದೋಡಿತು ನನಗೇನಾದರೂ ಅಗಿದ್ದರೆ ಪರವಾಗಿಲ್ಲ ಅದೇ ತಾನೆ ಇಸ್ತ್ರಿಹಾಕಿದ ಬಟ್ಟೆ ಕೆಸರ ಮಯವಾಯಿತಲ್ಲ ಸ್ವಿಚ್ ಕೊಡೆ ಹುಚ್ ಕೊಡೆ ಅಯಿತಲ್ಲ ಎನ್ನುವ ಬೇಸರವಾಯಿತು . ಸ್ವಲ್ಪ ಹೊತ್ತಿನಲ್ಲಿ ಮಳೆಯೂ ಕಡಿಮೆಯಾಯಿತು ಮನೆಗೆ ಹೊರಟೆ.


ಮನೆಗೆ ವಾಪಾಸ್ ಹೋಗುವಾಗ ಮಳೆ ಇಲ್ಲದ್ದರಿಂದ ಕೊಡೆಗೆ ಏನೂ ಆಗಿಲ್ಲವೆಂದು ಬಿಂಬಿಸುವ ಪ್ರಯತ್ನ ಮಾಡಿದೆ ಮರು ದಿನ ಬೆಳಗ್ಗೆ ಅಪ್ಪ ಹಾಲು ತರಲು ಕೊಡೆ ಕೇಳಿದಾಗ ಪೀಕಲಾಟ ಪ್ರಾರಭವಾಯಿತು ಅಯ್ಯೋ! ಗಾಳಿ ರಭಸವಾಗಿ ಬೀಸ್ತಿದೆ ಸ್ವಿಚ್ಕೊಡೆ ತಗೊಂಡು ಹೋಗಬೇಡಿ ಎಂದು ಪರಿಪರಿಯಾಗಿ ಕೇಳಿಕೊಂಡರು ಬಿಡದೆ ಕೊಡೆ ತೆಗೆದುಕೊಂಡು ಹೊರಟ ನನ್ನ ಅಪ್ಪ ಮುಂಬಾಗಿಲಲ್ಲೆ ಹಲ್ಲುಗಿರುಚಿದ ಕೊಡೆಯ ದರ್ಶನವನ್ನು ಮನೆಮಂದಿಗೆ ಮಾಡಿಸಿದಾಗ ಎಲ್ಲರ ರಿಯಾಕ್ಷನ್ 50-50 ಬಂದು ಸಮಾಧಾನ ಪಡಿಸಿತು! ಕೊಡೆಯೂ ಸ್ವಸ್ಥಾನ ಸೇರಿತು. ಸಂಜೆ ಆಗುತ್ತಲೆ ಕೋಡುಬಳೆ ಮಾಡುವ ತಯಾರಿ ಮಾಡಿಕೊಳ್ಳುತ್ತಿದ್ದ ನನ್ನಮ್ಮನಿಗೆ ಕೊಡೆ ಕಡ್ಡಿ ಬೇಕಾಗಿತ್ತು ಸೌಲಭ್ಯಾಕಾಂಕ್ಷೆಯಿಂದೆ ಕೊಡೆಯೊಳಗಿನಿಂದ ಇಣುಕಿ ನೋಡುತ್ತಿದ್ದ ಕಡ್ಡಿಯೊಂದನ್ನು ಶೀಘ್ರವಾಗಿ ಕೊಡುವ ತೀರ್ಮಾನ ಮಾಡಿದೆ! ಬರಲಿಲ್ಲ! ಅನಾಯಾಸವಾಗಿ ಕತ್ತರಿಯಿಂದ ಬಿಡಿಸಿ ಕೊಟ್ಟೆ. ಬಿಸಿ ಬಿಸಿ ಕೋಡುಬಳೆ ರುಚಿಸುತ್ತಿರುವಾಗಲೆ ಅಪ್ಪ ಬಂದು “ಕೊಡೆ ಕೊಟ್ಟರೆ ರಿಪೇರಿ ಮಾಡಿಸಿಕೊಂಡು ಬರುವೆ” ಎಂದಾಗ ನಖಶಿಕಾಂತ ಅದುರಿ ಹೋದೆ ಇನ್ನೇನು ಮಾಡಲಾಗದು ಎಂದು ಕೊಡೆ ಬಿಡಿಸಿ ಕೊಡೆರಿಪೇರಿ ಮಾಡಲಾಗದು ಎಂದು ಅಣಕಿಸುವ ನಾನೆ ಕತ್ತರಿಸಿ ಮಾಡಿದ ತೂತೊಂದನ್ನು ತೋರಿಸುತ್ತಾ ಬಲದವಡೆಯಲ್ಲಿದ್ದ ಕೋಡುಬಳೆ ಈಗ ಎಡದವಡೆಗೆ ಬರುವಂತೆ ಕಪಾಳ ಮೆಚ್ಚುಗೆ ಸಿಗುತ್ತೆ ಎಂದುಕೊಳ್ಳುತ್ತಿದ್ದೆ ಅಷ್ಟರಲ್ಲಿ ಮನೆಮಂದಿಯೆಲ್ಲಾ ಹಹಹಾ… ಹೊಹೊಹೋ … ಎಂಬ ರಾಗಾಲಾಪದಲ್ಲಿ ಮುಳುಗಿದ್ದು ಬದುಕಿತು ಬಡಜೀವ ಎನ್ನುವ ಸಮಾಧಾನ ತರಿಸಿತು.







Hi! Do you use Twitter? I’d like to follow you
if that would be okay. I’m undoubtedly enjoying your
blog and look forward to new posts.
This answered several questions I had. Great job! https://trading.com.im/how-aave-v4-and-next-gen-defi-lending-protocols-work/