ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಸಂಗತ

'ಶಮ್ಮಿ'
ಇತ್ತೀಚಿನ ಬರಹಗಳು: 'ಶಮ್ಮಿ' (ಎಲ್ಲವನ್ನು ಓದಿ)

ನೀನೆಂದರೇನೆಂದು
ತಿಳಿದಿಲ್ಲ ನಾನು,ನಾನೆಂದರೆ
ಏನೆಂದು ಕೂಡ ನೀ ಅರಿತಿಲ್ಲ…

ಎಲ್ಲೋ ಉದ್ದುದ್ದ‌ ಚಾಚಿಕೊಂಡ
ಆಕಾರವೆ ಇರದ ಈ‌ ಬದುಕಿನ
ಯಾವುದೋ ಬದಿಯಲ್ಲಿ ಸುರಿದ
ಮಳೆ ನೀನೇ ಇರಬೇಕು…
ಅಥವಾ
ನಿನ್ನೊಳಗಿನ ಕಲ್ಲು ಮಣ್ಣು‌ಹೊಲಸನೆಲ್ಲ ಹೊತ್ತು ಹಸಿರಾಗಿ ನಾನು ಕಾಣಿಸಿಕೊಳ್ಳುವಾಗ,
ಸಮುದ್ರದ ಅಷ್ಟೂ ತೆರೆಗಳಲ್ಲಿ‌
ಹೊಳೆಯುವನಂತೆ ತೋರಿಕೊಂಡ ಚಂದ್ರಬಿಂಬ ನೀನೇ ಇರಬೇಕು…

ಹೀಗೆ ನೀನು ನಾನೆಂಬ
ಹಳಹಳಿಕೆಗಳೆಲ್ಲ ನಮ್ಮೊಳಗೆ‌ ಜಮೆಯಾಗುವ‌ ಹೊತ್ತಿಗೆ ಹುಟ್ಟಿದ ಅಪರಿಚಿತತೆಯ ತಂದೆತಾಯಿಗಳು ನಾವು..

ಆದರು ನಾವಿಬ್ಬರು ಕಂಡ ಚಂದ್ರ
ಬೇರೆಯೇ ಆಗಿದ್ದನ್ನು…
ಮರೆಯಬಾರದು…

ಮತ್ತೊಮ್ಮೆ ಯಾವಾಗಲಾದರೂ
ಇದೇ ತೀರಕ್ಕೆ ಬಂದಾಗ‌ ನಾನು ಹೂತಿಟ್ಟ‌ ನನ್ನ‌ಅನಾಥ ಭಾವವನ್ನೂ
ನೀನು‌ ಮರೆತು ಬಿಟ್ಟು‌ಹೋದ‌ ಅಹಂಕಾರವನ್ನೂ‌ ಎತ್ತಿಟ್ಟುಕೊಳ್ಳುವೆ….
ಆದರೂ ಉತ್ತರಿಸದ‌ ಪ್ರಶ್ನೆ ಬಾಕಿಯಿದೆ
ನೀನು ಯಾಕಾದರೂ ಬರಬೇಕಿತ್ತು?