- ಸಾಜಿದಾ ಅಲಿಯಾಸ್ ಸಲ್ಮಾ - ಅಕ್ಟೋಬರ್ 29, 2024
- ರೇಟಿಂಗ್ ಗಳ ಧೋರಣೆ - ಅಕ್ಟೋಬರ್ 20, 2024
- ಬೇಲಿಯೇ ಎದ್ದು….. - ಸೆಪ್ಟೆಂಬರ್ 29, 2024
ಐಪಿಎಲ್ ಬಗ್ಗೆ ನಾನು ಭಾರತೀಯರಿಗೆ ಹೊಸದಾಗಿ ಹೇಳುವುದೇನೂ ಇಲ್ಲ. ಕರೋನಾ ಹಾವಳಿಗೆ ಸಿಕ್ಕಿ ೨೦೨೦ ರಲ್ಲಿ ಟೂರ್ನಮೆಂಟ್ ಮುಂದೂಡುತ್ತ ಬಂದು, ಆಡುತ್ತಾರೆ ಅಥವಾ ಇಲ್ಲ ಎನ್ನುವ ಡೋಲಾಯಮಾನ ಪರಿಸ್ಥಿತಿಯಲ್ಲಿದ್ದ ಈ ಜಾತ್ರೆ ಕೊನೆಗೆ ಸಂಯುಕ್ತ ಅರಬ್ ಎಮಿರೇಟ್ಸ್ ಅವರು ಸೋಂಕಿಲ್ಲದ ವಾತಾವರಣದ ಕ್ರೀಡಾಂಗಣ ಕೊಟ್ಟ ಮೇಲೆ ಅಕ್ಟೋಬರ್ ತಿಂಗಳಲ್ಲಿ ಮೊದಲಾಗಿ ಪ್ರೇಕ್ಷಕರಿಲ್ಲದೇ ನಡೆದು ನಮಗೆಲ್ಲಾ ಆಟದ ಮಜ ನೀಡಿತ್ತು. ಹೋದ ಆಟಗಾರರಲ್ಲಿ ಕೆಲವರು ಸೋಂಕು ಸೋಕಿಸಿಕೊಂಡು ಸ್ವಲ್ಪ ಗಾಬರಿ ಎಬ್ಬಿಸಿದ್ದು, ಪ್ರತೀ ಸಲ ಪ್ಲೇ ಆಫ್ ಗೆ ಬಂದು ದಾಖಲೆ ನಿರ್ಮಿಸಿದ ತಂಡ ಈ ಸಲ ನೀರಸದ ಆಟ ಪ್ರದರ್ಶಿಸಿದ್ದು, ಕೊನೆಯ ಪಂದ್ಯ ಒನ್ ಸೈಡೆಡ್ ಆಗಿ ಮತ್ತೆ ಮುಂಬೈ ತಂಡ ವಿಜಯ ಪತಾಕೆ ಹಾರಿಸಿದ್ದು ನಮಗೆ ನೆನಪಿದೆ ಅಲ್ಲವೇ !
೨೦೦೭ ರಿಂದ ಆಡಲು ಶುರುವಾದ ಈ ಟೂರ್ನಮೆಂಟ್ ಈಗ ನಮ್ಮ ವಾರ್ಷಿಕ ಕ್ರಿಕೆಟ್ ಷೆಡ್ಯೂಲಿನ ಅಂಗವಾಗಿ ಹೋಗಿದೆ. ಇನ್ನೇನು ಒಂದು ವಾರದ ಅವಧಿಯಲ್ಲಿ ೨೦೨೧ ರ ಆಟಗಾರರ ಆಯ್ಕೆ ಅಲ್ಲ ಅಲ್ಲ ಲೀಲಾವು ನಡೆಯಲಿದೆ. ಇದರಲ್ಲಿ ತಮ್ಮ ಪ್ರತಿಭೆ ತೋರಿದ ಆಟಗಾರರು ಭಾರತೀಯ ತಂಡದಲ್ಲಿ ಆಯ್ಕೆಯಾಗುವುದು ಮೊದಲಾದಮೇಲೆ ಈ ಟೂರ್ನಿಗೆ ಒಂದು ದರ್ಜೆ ಬಂದಂತಾಗಿದೆ. ಇಷ್ಟಕ್ಕು ಮುಂಚೆ ಆಟಗಾರರ ಆಯ್ಕೆಗೆ ಕಾರಣವಾಗುತ್ತಿದ್ದ ರಣಜಿ ಟ್ರೋಫಿ, ದುಲೀಪ್ ಟ್ರೋಫಿ ಮುಂತಾದ ದೇಶೀ ಪಂದ್ಯಾವಳಿಗಳ ಜೊತೆಗೆ ಐಪಿಎಲ್ ಸಹ ಸೇರಿಕೊಂಡಿದೆ. ಈಗ ಇದರ ಕಥೆ ಇಲ್ಲಿಗೆ ನಿಲ್ಲಿಸಿ ಮತ್ತೆ ಅದರ ಉಸಾಬರಿಗೆ ಬರೋಣ.
ಇಷ್ಟಕ್ಕೂ ಈ ಐಪಿಎಲ್ ನ ಉಗಮ ಹೇಗಾಯಿತು ಎನ್ನುವುದನ್ನು ನೋಡೋಣ. ಭಾರತದ ತಂಡದಲ್ಲಿ ೧೫ ಜನಕ್ಕೆ ಮಾತ್ರ ಸ್ಥಾನವಿರುತ್ತದೆ. ಆ ಸ್ಥಾನಗಳಿಗಾಗಿ ತುಂಬಾ ಸ್ಪರ್ಧೆ ಇರುತ್ತದೆ. ಮತ್ತೆ ಒಂದೊಂದು ಕೆಟಗರಿಯ ಆಟಗಾರರು ಇಷ್ಟೇ ಇರಬೇಕು ಎನ್ನುವ ಮಿತಿ ಇರುತ್ತದೆ. ಹಾಗಾಗಿ ಅಷ್ಟು ಸ್ಥಾನಗಳು ಭರ್ತಿಯಾದ ಮೇಲೆ ಪ್ರತಿಭೆ ಇದ್ದರೂ ಸಹ ಉಳಿದವರಿಗೆ ಸ್ಥಾನ ಸಿಗುವುದಿಲ್ಲ. ಆಯ್ಕೆಯಾದವನು ಯಾವ ರೀತಿಯಲ್ಲಾದರೂ ಆಟವಾಡಲು ಅವಕಾಶವಿರದಿದ್ದರೆ ಮಾತ್ರ ಆ ಪಟ್ಟಿಯಲ್ಲಿಯ ಮತ್ತೊಬ್ಬನಿಗೆ ಸ್ಥಾನ ಸಿಗುತ್ತದೆ. ಹಾಗಾಗಿ ಹಲವಾರು ಪ್ರತಿಭಾಶಾಲಿ ಆಟಗಾರರು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗದೆ ಆಟದಿಂದ ನಿವೃತ್ತರಾದದ್ದು ಇದೆ. ಆಟಗಾರರ ಈ ಸ್ಥಿತಿಯನ್ನು ಕಂಡ ಝೀ ಟೀವಿಯ ಮಾಲೀಕರು ಶ್ರೀ ಸುಭಾಶ್ ಚಂದ್ರ ಇಂಡಿಯನ್ ಕ್ರಿಕೆಟ್ ಲೀಗ್ ( ಐ ಸಿ ಎಲ್) ಅನ್ನು ಶುರುಮಾಡಿದ್ದರು. ನಂತರ ಈ ಲೀಗನ್ನು ಸಮರ್ಥಿಸುತ್ತ ಹಿರಿಯ ಆಟಗಾರರಾದ ಕಪಲ್ ದೇವ ಮತ್ತು ಕಿರನ್ ಮೊರೆ ಅದರ ಜೊತೆ ಸೇರಿದರು. ಹದಿಮೂರು ತಂಡಗಳನ್ನು ಮಾಡಿ, ಟೂರ್ನಮೆಂಟ್ ನಡೆಸಿ ಆ ಪಂದ್ಯಗಳಿಂದ ಬಂದ ಹಣವನ್ನು ಆಟಗಾರರಿಗೆ ಹಂಚುವ ಕಾರ್ಯಕ್ರಮ ಇದು. ಇದರಿಂದ ದೇಶದ ತಂಡಕ್ಕೆ ಆಯ್ಕೆಯಾಗದೆ ಉಳಿದುಹೋದ ಆಟಗಾರರಿಗೆ ಆದಾಯ ಸಿಕ್ಕ ಹಾಗಾಗಿತ್ತು. ಇದು ಕ್ರಮೇಣ ಜನಪ್ರಿಯವಾಗುತ್ತ ಹಣ ಗಳಿಸತೊಡಗಿದಾಗ ನಮ್ಮ ದೇಶದ ಕ್ರಿಕೆಟ್ ಆಡಳಿತ ಮಂಡಳಿಯಾದ ಬಿಸಿಸಿಐ ನ ಕಣ್ಣು ಅದರ ಮೇಲೆ ಬಿತ್ತು. ಐಸಿಎಲ್ ತನ್ನ ಪಂದ್ಯಗಳನ್ನಾಡಿಸಲು ಮೈದಾನಗಳಿಗಾಗಿ ಬಿಸಿಸಿಐ ಅನುಮತಿ ತೆಗೆದುಕೊಳ್ಳಬೇಕಿತ್ತು. ಆಗ ಬಿಸಿಸಿಐ ಈ ತರದ ಪಂದ್ಯಾವಳಿಯನ್ನು ತಾವೇ ಯಾಕೆ ಮಾಡಬಾರದು ಎಂದೆಣಿಸಿ ಐ ಪಿ ಎಲ್ ಶುರುಮಾಡಿತು. ನಂತರ ಬೋರ್ಡಿಗಿರುವ ಹಣ ಮತ್ತು ಪ್ರಭಾವದಿಂದ ಎಲ್ಲ ಆಟಗಾರರೂ ಈ ಪಂದ್ಯಾವಳಿಯಲ್ಲೇ ಆಡಬೇಕೆಂದು ತಾಕೀತು ಮಾಡಿತು. ಹೀಗೆ ೨೦೦೮ ರಲ್ಲಿ ಮೊದಲ ಬಾರಿಗೆ ಪ್ರಾರಂಭವಾದ ಪಂದ್ಯಾವಳಿ ಮೇಲೆ ಹೇಳಿದ ಹಾಗೆ ಅತ್ಯಂತ ಜನಪ್ರಿಯತೆ ಗಳಿಸಿ, ಹೊರದೇಶದ ಆಟಗಾರರ ಮನವೂ ಸೆಳೆಯುತ್ತಿದೆ. ಎಷ್ಟೋ ವಿದೇಶೀ ಆಟಗಾರರು ಈ ಪಂದ್ಯಾವಳಿಯಲ್ಲಿ ಆಡಿ ಹಣ ಗಳಿಸುತ್ತಿದ್ದಾರೆ. ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಗಳಲ್ಲಿ ಸಹ ಇಂಥ ಲೀಗ್ ಗಳು ಶುರುವಾಗಿ ಅಲ್ಲಿಯ ಆಟಗಾರರಿಗೆ ನೆರವಾಗುತ್ತಿವೆ. ಐಪಿಎಲ್ ಅವುಗಳಿಗೆಲ್ಲ ಮಾದರಿಯಾಗಿದೆ ಎನ್ನಬಹುದು. ಮತ್ತೆ ಇದರ ಟಿಕೆಟ್ ಗಳಿಕೆಯಿಂದ ಮಂಡಳಿ ಇನ್ನೂ ಶ್ರೀಮಂತವಾಗಿದೆ. ಆಟಗಾರರು ಹಣವಂತರಾಗುತ್ತಿದ್ದಾರೆ. ಬಡ ಸ್ಥಿತಿಯಲ್ಲಿದ್ದ ಹಲವಾರು ಆಟಗಾರರಿಗೆ ಐಪಿಎಲ್ ಒಂದು ಬದುಕನ್ನು ಕೊಟ್ಟಿದೆ. ಮೊನ್ನೆ ಆಸ್ಟ್ರೇಲಿಯದ ಜೊತೆಯ ಸರಣಿಯ ಕೊನೆಯ ಟೆಸ್ಟ್ ಪಂದ್ಯದಲ್ಲಿ ಅತ್ಯಂತ ರೋಚಕ ವಿಜಯವನ್ನು ಸಾಧಸಿಕೊಟ್ಟ ರಿಷಭ್ ಪಂತ್ ಅವರು ಈ ಐಪಿಎಲ್ ನಿಂದಲೇ ತನ್ನ ಆಟಕ್ಕೆ ಪರಿಣತಿ ಕಂಡುಕೊಂಡದ್ದು ಮತ್ತು ಭಾರತಕ್ಕೆ ವಿಜಯ ತಂದುಕೊಟ್ಟದ್ದು. ಹಾಗೇ ಶಾರ್ದೂಲ್ ಠಾಕೂರ್, ವಾಷಿಂಗ್ಟನ್ ಸುಂದರ್, ಸಂಜು ಸಾಂಸನ್ ಇವರೆಲ್ಲ ಸಹ ಐಪಿಎಲ್ ಗೇಟಿನಿಂದ ಒಳ ಬಂದವರೇ ! ಮತ್ತೆ ಇವರ ಆರ್ಥಿಕ ಸ್ತರ ಇಂದು ಐಪಿಎಲ್ ನಲ್ಲಿಯ ಗಳಿಕೆಯಿಂದ ಮೆರುಗಾಗಿದೆ.
ಒಂದು ರೀತಿ ಬರಹಗಾರರು ಸಹ ಆಟಗಾರರೇ. ಪತ್ರಿಕೆಗಳಲ್ಲಿ ಇವರ ಬರಹಗಳು ಮುದ್ರಣ ಕಂಡು ಓದುಗರಿಗೆ ತಲುಪಿ, ಅವರು ಮೆಚ್ಚಿದಾಗ ಇವರು ಬೆಳಕಿಗೆ ಬರುತ್ತಾರೆ. ಮುದ್ರಿತವಾಗುತ್ತಿರುವ ಪತ್ರಿಕೆಗಳು ಇವರ ಪ್ರತಿಭೆಗೆ ಕಿಟಿಕಿಗಳು. ಆದರೆ ಮೇಲೆ ನಾವು ನೋಡಿದ ಹಾಗೆ ಹಲವಾರು ಬರಹಗಾರರು ತಮ್ಮ ಬರಹಗಳನ್ನು ಪತ್ರಿಕೆಗಳಿಗೆ ಕಳಿಸುತ್ತಾರೆ. ಅವುಗಳೆಲ್ಲವನ್ನೂ ಪತ್ರಿಕೆಗಳು ಪ್ರಕಟಿಸಲು ಆಗುವುದಿಲ್ಲ. ಹಾಗಾಗಿ ಅವರು ಸಹ ತಮ್ಮ ಮಿತಿಯನ್ನು ನಿರ್ಣಯಿಸಿಕೊಂಡು ತಮ್ಮ ಪತ್ರಿಕೆಯ ವರ್ಚಸ್ಸು ಹೆಚ್ಚಿಸುವ ಬರಹಗಾರರ ಬರಹಗಳನ್ನೇ ಹಾಕುತ್ತ ಹೋಗುತ್ತಾರೆ. ಇಲ್ಲಿ ಸಹ ಆಟಗಾರರ ಹಣೇಬರಹವೇ ಬರಹಗಾರರದ್ದೂ ಆಯಿತು. ಪ್ರತಿಭೆ ಬೆಳಕು ಕಾಣದೇ ಕಮರಿ ಹೋಗುವುದು.
ಪತ್ರಿಕಾ ರಂಗದ ಐಪಿಎಲ್ ಎಂದರೆ ಇತ್ತೀಚೆಗೆ ಪ್ರಚಲಿತವಾಗುತ್ತಿರುವ ವೆಬ್ ಪತ್ರಿಕೆಗಳು. ಇವು ಮುದ್ರಣಾ ಸಂಸ್ಥೆಗಳಿಂದ ಅಲ್ಲದೇ ಉತ್ಸಾಹೀ ಬರಹಗಾರರಿಂದಲೇ ಹೊರಡುತ್ತಿವೆ. ಈ ಪತ್ರಿಕೆಗಳು ಮುದ್ರಿತವಾಗುವುದಿಲ್ಲ. ಎಲೆಕ್ಟ್ರಾನಿಕ್ ಪ್ಲಾಟ್ ಫಾರಂ ಮೇಲೆಯೇ ಸದಸ್ಯರಿಗೆ ತಲುಪುತ್ತವೆ. ಇವುಗಳಲ್ಲಿ ಪ್ರಕಟವಾಗುವ ಬರಹಗಳನ್ನು ಸಹ ಮಿಂಚಂಚೆ, ವಾಟ್ಸಪ್ ವೇದಿಕೆಗಳ ಮೂಲಕವೇ ಕಳಿಸುತ್ತಾರೆ. ಈ ಪತ್ರಿಕೆಗಳು ನಿಶ್ಶುಲ್ಕವಾಗಿವೆ. ಮತ್ತೆ ಬರಹಗಳ ಬಗ್ಗೆ ಮುಂಚಿತವಾಗಿ ಸಮಾಚಾರ ಸಹ ಸಿಗುತ್ತದೆ. ಪ್ರಕಟವಾದ ಬರಹಗಳನ್ನು ಲೇಖಕರು ಎಲೆಕ್ಟ್ರಾನಿಕ್ ವೇದಿಕೆಗಳ ಮೂಲಕ ಅತ್ಯಂತ ವೇಗದಲ್ಲಿ ಮತ್ತು ಸುಲಭವಾಗಿ ತಮ್ಮ ಮಿತ್ರರೊಂದಿಗೆ ಹಂಚಿಕೊಳ್ಳಬಹುದಾಗಿದೆ.
ಕರೋನಾ ಸಮಯದಲ್ಲಿಯ ಅವಾಂತರದಿಂದ ಈ ಪತ್ರಿಕೆಗಳು ಝೂಮ್, ವೆಬ್ ನಾರ್, ಗೂಗಲ್ ಮುಂತಾದ ವೇದಿಕೆಗಳ ಸಹಾಯ ಪಡೆದು ವಿಡಿಯೋಗಳ ಮತ್ತು ಆನ್ ಲೈನ್ ಗಳ ಮೂಲಕ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಮುದ್ರಿತಗೊಳ್ಳುತ್ತಿರುವ ಪತ್ರಿಕೆಗಳಿಗೆ ಇವುಗಳು ಪ್ರತ್ಯಾಮ್ನಾಯಗಳಾಗಿವೆ. ಅನೇಕ ಉದಯೋನ್ಮುಖ ಕವಿಗಳು, ಲೇಖಕರು, ಕತೆಗಾರರು ತಮ್ಮ ಬರಹಗಳನ್ನು ಇವುಗಳಿಗೆ ಕಳಿಸಿ ಓದುಗರಿಗೆ ತಲುಪಿಸುತ್ತಿದ್ದಾರೆ. ಸದ್ಯಕ್ಕೆ ಇವುಗಳ ಓದುಗರ ಸಂಖ್ಯೆ ಕಮ್ಮಿಯೇ ಇದ್ದರೂ ಇವುಗಳು ಬರಹಗಾರರಿಗೆ ನೇರ ಸಂಪರ್ಕಕ್ಕೆ ಸಿಕ್ಕುವಂತಾಗಿದ್ದು ಓದುಗರ ಜೊತೆಗೆ ವಿಚಾರ ವಿನಿಮಯಕ್ಕೂ ಅವಕಾಶ ಒದಗಿಸಿಕೊಡುತ್ತಿವೆ. ತಮ್ಮ ಬರಹಗಳ ಬಗ್ಗೆ ಓದುಗರ ಅಭಿಪ್ರಾಯ ತಕ್ಷಣ ಪಡೆಯುವ ಸೌಲಭ್ಯವಿದ್ದು ಅವುಗಳಿಗೆ ತಾವು ಸಹ ಸ್ಪಂದಿಸುವ ಅನುಕೂಲ ಇವುಗಳಲ್ಲಿ ಸಿಗುತ್ತದೆ. ತನ್ನ ಯಾವ ಬರಹ ಓದುಗರಿಗೆ ಮೆಚ್ಚುಗೆಯಾಯಿತು ಎನ್ನುವ ಮಾಹಿತಿ ಲೇಖಕರಿಗೆ ಸಿಗುತ್ತದೆ.
ಈಗ ಐಪಿಎಲ್ ಗೂ ಈ ವೆಬ್ ಪತ್ರಿಕೆಗಳಿಗೂ ಸಾಪತ್ಯ ಇದೆ ಎನಿಸಲಿಲ್ಲವೇ ! ಹೌದು. ಎರಡರಲ್ಲೂ ಅನೇಕ ಪ್ರತಿಭೆಗಳಿಗೆ ಅವಕಾಶಗಳು ಸಿಗುತ್ತಿವೆ. ಒಂದರಲ್ಲಿ ಆಟಗಾರರಿಗೆ ಅರ್ಥಿಕ ನೆರವು ಸಿಗುತ್ತಿದೆಯಾದರೆ ಮತ್ತೊಂದರಲ್ಲಿ ಬರಹಗಾರರಿಗೆ ತಮ್ಮ ಬರಹಗಳು ಓದುಗರಿಗೆ ತಲುಪುತ್ತಿವೆ ಎನ್ನುವ ಅತ್ಮ ತೃಪ್ತಿ ಸಿಗುತ್ತಿದೆ. ಎರಡೂ ಸಹ ಪ್ರತ್ಯಾಮ್ನಾಯವಾಗಿದ್ದು ಪ್ರತಿಭಾವಂತರಿಗೆ ಆಶಾಜ್ಯೋತಿಯಾಗಿವೆ. ಐಪಿಎಲ್ ನಲ್ಲಿ ಪ್ರತಿಭೆ ತೋರಿದ ಆಟಗಾರರಿಗೆ ರಾಜ್ಯದ ತಂಡದಲ್ಲಿ ಜಾಗ ಸಿಗುವಂತೆ, ವೆಬ್ ಪತ್ರಿಕೆಯಲ್ಲಿಯ ಬರಹಗಾರರಿಗೆ ಸಹ ಅಗ್ರಶ್ರೇಣಿಯಾಗುವ ಅವಕಾಶ ಒದಗಿ ಬರಬಹುದಾಗಿದೆ. ಇದೊಂದೇ ಅಲ್ಲ. ಹೆಸರಾಂತ ಬರಹಗಾರರು ಸಹ ಈ ವೆಬ್ ಪತ್ರಿಕೆಗಳಲ್ಲಿ ಭಾಗವಹಿಸುತ್ತಿದ್ದು ಉದಯೋನ್ಮುಖರಿಗೆ ಮಾರ್ಗದರ್ಶನ ಸಿಗುವಂತಾಗಿದೆ. ಯಾರು ಬಲ್ಲರು ? ರಿಷಭ್ ಪಂತ್ ಮಿಂಚಿದ ಹಾಗೆ ಈ ವೆಬ್ ಪತ್ರಿಕೆಗಳಿಂದ ಹೊರಟ ಬರಹಗಳು ಹೆಸರು ಮಾಡಿ ಆ ಲೇಖಕರು ಯಾವ ಪ್ರಶಸ್ತಿಗೆ ಭಾಜನರಾಗುತ್ತಾರೋ ! ಅಲ್ಲವಾ ! ಕಾಲವೇ ನಿರ್ಣಯಿಸುತ್ತದೆ.
ಮುಂದೆ ಮುಂದೆ ತಂತ್ರಜ್ಞಾನವು ಏನೇನು ಅವಕಾಶಗಳನ್ನು ಕಲ್ಪಿಸುವುದೋ ನೋಡಬೇಕು. ಈಗಿನವರೆಗಂತೂ ಇದೊಂದು ಆರೊಗ್ಯಕರ ಬೆಳವಣಿಗೆಯಂತೂ ಹೌದು.
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ