- ದಿ ಬ್ಯಾಂಕಿಂಗ್ ವಾರಿಯರ್ಸ್.. - ಆಗಸ್ಟ್ 24, 2020
- ಆತ್ಮವನ್ನು ಗುರುತಿಸುವ ಬಗೆ - ಆಗಸ್ಟ್ 11, 2020
- ಬೆಣ್ಣೆ ಕದ್ದನಮ್ಮ ಕೃಷ್ಣ ಬೆಣ್ಣೆ ಕದ್ದನಮ್ಮ - ಆಗಸ್ಟ್ 10, 2020
ಆತ್ಮವನ್ನು ಗುರುತಿಸುವ ಬಗೆ (ವಿನೋಬಾಜೀಯವರ ಪುಸ್ತಕದಿಂದ ಆಯ್ದದ್ದು)
ಆತ್ಮದ ಬಗೆಗಿನ ಚಿಂತನೆ –
ವಿನೋಬಾ ಭಾವೆ
ಪ್ರಶ್ನೆ…
ಆತ್ಮ ಇದೆಯೋ ಇಲ್ಲವೋ?
ಆತ್ಮ ಇದೆ. ಅದು ಶರೀರದಿಂದ ಭಿನ್ನವಾಗಿದೆ. ಶರೀರಕ್ಕೆ ಕಾಯಿಲೆಯಾದರೆ ನಾವು ವೈದ್ಯರ ಬಳಿಗೆ ಹೋಗುತ್ತೇವೆ. ಚರಖದಲ್ಲಿ ದೋಷ ಕಂಡುಬಂದರೆ ನಾವು ಅದನ್ನು ಬಡಗಿಯ ಬಳಿಗೆ ತೆಗೆದುಕೊಂಡು ಹೋಗುತ್ತೇವೆ. ಚರಖ ತಾನಾಗಿಯೇ ಬಡಗಿಯ ಬಳಿ ಹೋಗಲಾರದು. ಚರಖಾದಿಂದ ನಾವು ಭಿನ್ನವಾಗಿರುವಂತೆ ದೇಹದಿಂದಲೂ ಭಿನ್ನ. ಇಷ್ಟೇ ಅಲ್ಲ, ಇನ್ನೂ ಮುಂದೆ ಹೇಳಬೇಕಾದರೆ, ನಾವು ಮನಸ್ಸು, ಬುದ್ಧಿಯಿಂದಲೂ ಬೇರೆ.
ಜನಗಳು ಆಗಾಗ್ಗೆ ಹೇಳುವುದನ್ನು ಕೇಳುತ್ತಿರುತ್ತೇವೆ. “ಈಚೆಗೆ ನನ್ನ ಬುದ್ಧಿಯೇ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಬಹುವಾಗಿ ಆಯಾಸವಾಗುತ್ತಿದೆ. ಯೌವನದಲ್ಲಿ ಕೆಲಸ ಮಾಡುತ್ತಿದ್ದಂತೆ ಈಗ ಮಾಡಲು ಆಗದು”.
ಹೀಗೆ ಹೇಳುವವನಾದರೂ ಯಾರು? ಅದು ಯಾವುದೋ ಬುದ್ಧಿಯಿಂದ ಪ್ರತ್ಯೇಕವಾದುದು ಎಂಬುದು ಸ್ಪಷ್ಟ.
ಆತ್ಮ ಎಂದರೆ ದೇಹದಿಂದ ಭಿನ್ನವಾದ ಒಂದು ಚೈತನ್ಯ. ಆತ್ಮನ ಅಸ್ತಿತ್ವವೇ ಇಲ್ಲದಿದ್ದರೆ ಮನುಷ್ಯನಲ್ಲಿ ದ್ವಂದ್ವಗಳೇ ಇರುವುದಿಲ್ಲ. ಸಣ್ಣ ಹುಡುಗನಿಗೆ ತಾನು ಭಿನ್ನ ಎಂದು ತಿಳಿಯನು. ಆದರೆ ಕ್ರಮೇಣ ತಿಳಿದುಕೊಳ್ಳುತ್ತಾನೆ. ಅವನಿಂದ ಕೆಲವು ಒಳ್ಳೆಯ ಕೆಲಸಗಳಾದರೆ, ಕೆಲವು ಕೆಟ್ಟ ಕೆಲಸಗಳೂ ಆಗುವುವು. ತನ್ನ ದೋಷಗಳ ಅರಿವಾದರೆ ಅವುಗಳಿಂದ ದೂರವಾಗುತ್ತಾನೆ ಮತ್ತು ತಿದ್ದಿಕೊಳ್ಳುತ್ತಾನೆ. ಜನಗಳೂ ಸಹ, ‘ನಿನ್ನಲ್ಲಿ ಇಂತಹ ದೋಷ ಇದೆ, ಅದನ್ನು ತಿದ್ದಿಕೋ, ಅದಕ್ಕಾಗಿ ಈ ಉಪಾಯ ಮಾಡು, ದಾನ ಮಾಡು, ದಯೆ ತೋರು’ ಎಂದು ಮುಂತಾದ ಸಲಹೆಗಳನ್ನು ಅವನಿಗೆ ಕೊಡುವರು. ‘ಆದರೆ ಮೊದಲು ನಿನ್ನಲ್ಲಿ ಇಂತಹದ್ದೊಂದು ದೋಷ ಇದೆ ಎಂಬುದನ್ನು ತಿಳಿದುಕೋ, ಆಗ ಅದರಿಂದ ದೂರಾಗಲು ಸಾಧ್ಯವಾದೀತು’ ಎನ್ನುವರು. ಹೀಗೆ ತನ್ನನ್ನು ತಾನು ಅರಿಯುವ ದೃಷ್ಟಿಯೇ ಚೈತನ್ಯ. ಒಂದು ಯಂತ್ರ ತನ್ನ ವಿಷಯಕ್ಕೆ ಹೀಗೆ ಹೇಳಲಾರದು. ಮರಣಾನಂತರದ ದೇಹದ ವ್ಯವಸ್ಥೆಯನ್ನು ಮಾಡುತ್ತೇವೆ, ಬರೆದಿಡುತ್ತೇವೆ. ಹೀಗೆಂದ ಮೇಲೆ ನಾವು ಚೈತನ್ಯ ದೇಹದಿಂದ ಭಿನ್ನ ಎನ್ನುವುದು ಸ್ಪಷ್ಟವಾಯಿತು. ಇದೇ ಆತ್ಮದ ಅರಿವು.
ಆತ್ಮಗಳನ್ನು ಮೂರು ವಿಧವಾಗಿ ವಿಂಗಡಿಸಬಹುದು. ಒಂದು ಪಾಪಾತ್ಮ, ಎರಡನೆಯದು ಪೂತಾತ್ಮ ಮತ್ತು ಮೂರನೆಯದು ಪರಮಾತ್ಮ.
ವಾಸನೆಗಳಿಂದ ಬಂಧಿಸಲ್ಪಟ್ಟಿರುವುದು ಪಾಪಾತ್ಮ. ಪಾಪ ವಾಸನೆಗಳಿಂದ ಬಿಡುಗಡೆಯಾದ ಮೇಲೆ ಅದು ಶುದ್ಧ ಪೂತಾತ್ಮವಾಗುವುದು. ಪಾಪಾತ್ಮವನ್ನು ಸಂಕ್ಷೇಪವಾಗಿ ‘ಜೀವ’ ಎಂದರೆ, ಪಾಪಾತ್ಮವನ್ನು ‘ಆತ್ಮ’ ಎಂದು ಕರೆಯಬಹುದು. ಶುದ್ಧವಾಗಿ ಮೇಲೆ ವ್ಯಾಪಕವಾದ ಮೇಲೆ ಅದು ‘ಪರಮಾತ್ಮ’ ಎನಿಸಿಕೊಳ್ಳುತ್ತದೆ. ಈ ರೀತಿಯಲ್ಲಿ ಮೂರೂ ಒಂದೇ. ಆದರೆ ಪ್ರಕ್ರಿಯೆಗಳು ಮೂರು. ಎಲ್ಲಕ್ಕೂ ಕೆಳಗಿನ ಕ್ರಿಯೆಯಲ್ಲಿ ಬೇಕಾದಷ್ಟು ಜೀವಗಳಿವೆ. ಅವೆಲ್ಲವನ್ನೂ ಸಾಮಾನ್ಯವಾಗಿ ‘ಜೀವ’ ಎಂದು ಕರೆಯುತ್ತೇವೆ. ಅವೆಲ್ಲ ಪಾಪಿಗಳು. ಆದುದರಿಂದ ಅವುಗಳಿಗೆ ‘ಪಾಪಾತ್ಮ’ ಎಂದು ಕರೆಯುವರು. ಅದು ಆತ್ಮವೇ, ಏಕೆಂದರೆ ಆತ್ಮ ಸ್ವಯಂಪೂರಿತವಾಗಿರುತ್ತದೆ. ಅದು ವಾಸನೆಗಳಿಂದ ಬೇರೆಯಾದುದು ಮತ್ತು ಆತ್ಮ ಸ್ವರೂಪ. ಆದ್ದರಿಂದ ಅದನ್ನು ಕೇವಲ ಆತ್ಮ ಎಂದು ಕರೆಯುತ್ತಾರೆ. ಇನ್ನೂ ವ್ಯಾಪಕವಾಗಿರುವುದು ‘ಪರಮಾತ್ಮ’. ಅದು ಸ್ವಯಂ ಸಿದ್ಧ.
‘ಆತ್ಮನ್’ ಶಬ್ದದ ವ್ಯುತ್ಪತ್ತಿಯನ್ನು ನಾಲ್ಕು ರೀತಿಗಳಲ್ಲಿ ಮಾಡಲಾಗುತ್ತದೆ.
ಯದಾಪ್ನೋತಿ, ಯದಾದತ್ತೇ, ಯಚ್ಚಾತ್ತಿ ವಿಷಯಾನಿಹ|
ಯಚ್ಚಾಸ್ಯ ಸಂತತೋಭಾವಸ್ತಸ್ಮಾದಾತ್ಮೇತಿ ಕೀರ್ತ್ಯತೇ||
‘ಅಪ್’ ವ್ಯಾಪ್ನೌ, ‘ಆ+ದಾ’ಆದಾನೆ, ‘ಅದ್’ ಭಕ್ಷಣೆ ಮತ್ತು ಅತ್ದಾತತ್ಯ ಗಮನೇ – ಈ ನಾಲ್ಕು ಧಾತುಗಳಿಂದ ‘ಆತ್ಮನ್’ ಶಬ್ದದ ಸಿದ್ಧಿಯನ್ನು ತಿಳಿಸುತ್ತಾ, ಯಾವುದು ವ್ಯಾಪಿಸುತ್ತದೋ, ಯಾವುದು ಗ್ರಹಿಸುತ್ತದೋ, ಯಾವುದು ತಿನ್ನುತ್ತದೋ ಅಥವಾ ಯಾವುದು ಸತತವಾಗಿ ಚಲಿಸುತ್ತದೋ ಅದು ‘ಆತ್ಮ’. ಹೀಗೆ ನಾಲ್ಕು ವ್ಯುತ್ಪತ್ತಿಗಳಿವೆ. ಆದರೆ ಇವೆಲ್ಲವೂ ಕಾಲ್ಪನಿಕವೆಂದು ತೋರುತ್ತವೆ. ಕೊನೆಗೆ ವ್ಯುತ್ಪತ್ತಿ ವಾಸ್ತವಿಕತೆಗೆ ಹೆಚ್ಚು ಸಮೀಪವಾಗಿದೆ ಎಂದು ಹೇಳಬಹುದು.
ನನ್ನ ಅಭಿಪ್ರಾಯದಲ್ಲಿ ‘ಆತ್ಮ’ ನಿಜವಾತಿಯೂ ‘ಆತ್’ ಧಾತುವಿನ ರೂಪ. ‘ ಆತ್’ ಪೂರ್ವ ವೈದಿಕ ಧಾತು. ಸಂಸ್ಕೃತದಲ್ಲಿ ಈ ಶಬ್ದ ಲೋಪವಾಯಿತು. ಆದರೆ ‘ಜ್ಞಾನೇಶ್ವರಿ’ಯ ಮರಾಠಿಯಲ್ಲಿ ಮತ್ತು ತಮಿಳು ಮುಂತಾದ ದ್ರಾವಿಡ ಭಾಷೆಗಳಲ್ಲಿ ಅಪಭ್ರಂಶ ರೂಪದಲ್ಲಿ ಅದು ಉಳಿದಿದೆ. ‘ಜ್ಞಾನೇಶ್ವರಿ’ಯ ಭಾಷೆಯಲ್ಲಿ ‘ಅತಲಾ’ (ಒಳಗಿನ) ಎಂದಾಗುತ್ತದೆ. ಈ ‘ಅತ್’ ಮೂಲತ: ‘ಅಸ್’ ಮತ್ತು ‘ಭೂ’ಗಳ ಮಧ್ಯದ ಧಾತು. ಕ್ರಮೇಣ ಮುಂದೆ ಈ ಧಾತುಗಳಲ್ಲಿರುವ ಅರ್ಥ ಭೇದ ಲುಪ್ತಗೊಂಡರೂ ವಿಚಾರದ ದೃಷ್ಟಿಯಿಂದ ಅದು ಮಹತ್ವದ್ದು. ಉದಾಹರಣೆಗೆ ‘ಅಸ್’ ಎಂದರೆ, ‘ಕೇವಲ ಹೋದುವುದು = ನಿರ್ಗುಣ. ‘ಭೂ’ ಎಂದರೆ ವಿವಿಧ ಭಾವಗಳಿಂದ ಕೂಡುವುದು = ಸಗುಣ. ‘ಆತ್’ ಎಂದರೆ, ಆಗಬಹುದಾದುದು ಆಗುವುದು – ಮಧ್ಯದ ಸ್ಥಿತಿ = ಸಗುಣ – ನಿರ್ಗುಣ.
ಆತ್ಮ ಚಿಂತನದ ಮೂರು ಪ್ರಕಾರಗಳು
ವಿಕಾರಗಳಿಂದ ಮುಕ್ತವಾಗುವುದು ಮೊದಲ ಕ್ರಮ. ಮೊದಲು ಸಾಧನಾವಸ್ಥೆಯಲ್ಲಿ ವಿಕಾರಗಳಿಂದ ಮುಕ್ತಿ ಹೊಂದುವ ಸಾಧನೆ ನಡೆಯುತ್ತದೆ. ಅನಂತರ ಆತ್ಮಚಿಂತನೆ ಆರಂಭವಾಗುತ್ತದೆ. ಅದರ ನಂತರ ವಿಚಾರ ಮುಕ್ತಿ. ಅದಕ್ಕೆ ಆತ್ಮ ಚಿಂತನ ಎಂದು ಕರೆದರೂ ಸಹ ಅದರಲ್ಲಿ ಮನಸ್ಸು ವಿಚಾರಶೂನ್ಯವಾಗುವುದು ಒಂದು ಪ್ರಕ್ರಿಯೆಯಾಯಿತು.
ಎರಡನೆಯ ಪ್ರಕ್ರಿಯೆ ಮನ, ಪ್ರಾಣ, ಇಂದ್ರಿಯ ಮತ್ತು ಶರೀರದಿಂದ ಮೊದಲುಗೊಂಡು ಬುದ್ಧಿ ಏನೇನಿದೆಯೋ ಅವು ಮತ್ತು ಅವುಗಳ ಗುಣಗಳು. ಇವುಗಳಲ್ಲವುಗಳಿಂದಲೂ ನಾನು ಪ್ರತ್ಯೇಕ ಎಂಬ ಅನುಭವವನ್ನು ತಂದುಕೊಳ್ಳುವುದು. ನಾನು ನಮ್ಮಿಂದ ಬೇರೆ ಎನ್ನುವುದು, ವಿಧಾಯಕ ಪ್ರಕ್ರಿಯೆ. ಅದು ಆತ್ಮಚಿಂತನವಲ್ಲ. ಅನಾತ್ಮ ನಿರಸನ. ಅನಾತ್ಮನಿಂದ ಉಳಿದದ್ದೇ ನಮ್ಮ ಮೂಲ ಸ್ವರೂಪ ಎನ್ನುವುದನ್ನು ಅರಿಯುವುದು.
ಮೂರನೆಯ ಪ್ರಕ್ರಿಯೆ ಹೀಗಿದೆ. ಮನುಷ್ಯನಲ್ಲಿ ಗುಣ ದೋಷ ಎರಡೂ ಇರುತ್ತವೆ. ಉಪಾಧಿ, ಮೋಹ ಅಥವಾ ಬೇರೆ ಯಾವುದೋ ಕಾರಣದಿಂದ ಆತ್ಮ ಮತ್ತು ಶರೀರಗಳೆರಡೂ ಸೇರಿಕೊಂಡಿವೆ. ನಿರ್ವಿಕಾರ, ಧೈರ್ಯ, ಸತ್ಯ, ಪ್ರೇಮ ಇವೆಲ್ಲ ಆತ್ಮ ಗುಣಗಳು ದೋಷಗಳನ್ನು ಪ್ರತ್ಯೇಕಿಸಿ ಯಾವ ಗುಣ ನಮ್ಮಲ್ಲಿ ಹೆಚ್ಚಿದೆ ಎಂದು ನೋಡಬೇಕು. ಪರಮಾತ್ಮನು ತನ್ನ ಅನಂತ ಗುಣಗಳಲ್ಲಿ ಒಂದೊಂದನ್ನು ಒಬ್ಬೊಬ್ಬರಿಗೆ ಹಂಚಿರುತ್ತಾನೆ. ಒಬ್ಬರಲ್ಲಿ ಸಾಹಸವಿದ್ದರೆ, ಇನ್ನೊಬ್ಬರಲ್ಲಿ ಕರುಣೆ. ಒಬ್ಬರಲ್ಲಿ ಧೈರ್ಯವಿದ್ದರೆ ಇನ್ನೊಬ್ಬರಲ್ಲಿ ಸಮತ್ವ. ಹೀಗೆ ಪ್ರತಿಯೊಬ್ಬರಲ್ಲೂ ಯಾವುದಾದರೊಂದು ಗುಣ ವಿಶೇಷವಾಗಿ ಎದ್ದು ಕಾಣುತ್ತದೆ. ಆ ಗುಣವನ್ನು ವಿಕಸಿಸುತ್ತಾ ಅದರ ಪರಮ ಉತ್ಕರ್ಷವನ್ನು ಸಾಧಿಸಿ ಅದರ ಮೂಲಕ ಪರಮಾತ್ಮನನ್ನು ಸ್ಪರ್ಶಿಸಬೇಕು. ಗುಣವಿಕಾಸದ ಮೂಲಕ ನಾವು ಪರಮಾತ್ಮನವರೆಗೂ ಹೋಗಬಹುದು. ಪರಮಾತ್ಮನಿಗೂ ನಮಗೂ ನಡುವೆ ಸ್ವಲ್ಪ ಅಂತರ ಅವಶ್ಯವಾಗಿ ಇದ್ದೀತು. ಆದರೆ ಸರಿಸುಮಾರು ಆತನ ಬಳಿ ಸೇರಬಲ್ಲೆವು. ಆದುದರಿಂದ ನಮ್ಮಲ್ಲಿ ಸಣ್ಣ ಪುಟ್ಟದಲ್ಲದ ಪ್ರಧಾನ ಗುಣ ಯಾವುದು ಎಂಬುದನ್ನು ಮೊದಲು ಕಂಡುಕೊಳ್ಳಬೇಕು. ಅನಂತರ ಅದರ ಚಿಂತನೆ ಮಾಡಬೇಕು.
ಬೇರೆ ಬೇರೆ ಮನುಷ್ಯರಲ್ಲಿ ಬೇರೆ ಬೇರೆ ಗುಣಗಳು ವಿಕಸಿಸಿರುವುದನ್ನು ನೋಡಬಹುದು. ಆ ಗುಣಗಳ ಚಿಂತನ ಮಾಡಬೇಕು ಮತ್ತು ಅವನ್ನು ಅವರಿಂದ ತೆಗೆದುಕೊಳ್ಳಬೇಕು. ಭಗವಾನ್ ಕೃಷ್ಣನಲ್ಲಿ ಪ್ರೇಮದ ಗುಣ ಕಂಡರೆ ರಾಮಚಂದ್ರನಲ್ಲಿ ಸತ್ಯವನ್ನು ಕಾಣುತ್ತೇವೆ. ಮಹಾತ್ಮ ಗಾಂಧಿಯಲ್ಲೂ ಸತ್ಯವನ್ನು ಕಂಡೆವು. ಕೃಷ್ಣನ ಚಿಂತನೆಯೆಂದರೆ ಪ್ರೇಮಗುಣದ ಚಿಂತನ ಮಾಡಿದಂತೆ. ರಾಮನೆಂದರೆ ಸತ್ಯಗುಣದ ಚಿಂತನೆ. ಇದೇ ರೀತಿ ಸೃಷ್ಟಿಯಲ್ಲಿ ಅನೇಕ ಗುಣಗಳ ದರ್ಶನವಾಗುತ್ತದೆ. ಅಲ್ಲಿ ಪ್ರೇಮ ಕಂಡು ಬರುತ್ತದೆ. ನಿಯಮಪಾಲನೆಯ ಗುಣವೂ ಇದೆ. ಸೂರ್ಯ, ಚಂದ್ರ, ಗ್ರಹಗಳು ಎಲ್ಲ್ರೂ ನಿಯಮಕ್ಕನುಸಾರಾ ನಡೆಯುತ್ತಾರೆ. ಅದೇ ನಿಯಮಪಾಲನೆಯ ಗುಣ ನಮ್ಮಲ್ಲೂ ಬೆಳೆಯಬೇಕು. ಪ್ರಸಿದ್ಧ ದಾರ್ಶನಿಕ ‘ಕ್ಯಾಂಟ್’ನ್ನು ತನ್ನ ಮನೆಯಿಂದ ಹೊರ ಹೊರಡುತ್ತಿದ್ದುದನ್ನು ಕಂಡು ಜನಗಳು ತಮ್ಮ ತಮ್ಮ ಗಡಿಯಾರಗಳನ್ನು ಸರಿಪಡಿಸಿಕೊಳ್ಳುತ್ತಿದ್ದರು ಎಂಬ ಪ್ರತೀತಿ ಇತ್ತು.
ನಮ್ಮಲ್ಲಿಲ್ಲದ ಗುಣ ಬೇರೆಯವರಲ್ಲಿದ್ದರೆ ಅದನ್ನು ನಮ್ಮಲ್ಲಿ ತರುವ ಪ್ರಯತ್ನ ಮಾಡಬಾರದು. ಹಾಗೆ ಮಾಡಲು ಹೊರಟರೆ ನಾವು ಪರಮಾತ್ಮನ ಬಳಿ ಹೋಗುವ ಬದಲು ಆ ಮನುಷ್ಯನ ಬಳಿ ಸೇರುತ್ತೇವೆ. ಬೇರೆಯವರ ಗುಣಗಳನ್ನು ಯಾವಾಗಲೂ ಆದರಿಸಬೇಕು. ಇಲ್ಲದಿದ್ದರೆ ಬಹುಶ: ಮತ್ಸರಕ್ಕೆ ಅವಕಾಶವಾಗುತ್ತದೆ. ಇದು ಸೂಕ್ಷ್ಮ ದೇಹ. ನಿಜವಾಗಿಯೂ ನಮ್ಮಲ್ಲಿಲ್ಲದ ಗುಣ ಬೇರೆಯವರಲ್ಲಿ ಇದ್ದರೆ ಅದನು ಆದರಿಸಿ, ಅದನ್ನು ಹೆಚ್ಚಿಸಬೇಕು. ಅದರ ಮೂಲಕ ಪರಮೇಶ್ವರನ ಬಳಿ ಸೇರಬೇಕು. ಅದಕ್ಕಾಗಿ ಇತರರ ಗುಣಗಳನ್ನು ಗೌರವಿಸಬೇಕು ಮತ್ತು ತಮ್ಮ ಗುಣಗಳನ್ನು ಬೆಳೆಸಬೇಕು.
ಹೀಗೆ ಶೂನ್ಯ ಮನಸ್ಸು, ಆತ್ಮನನ್ನು ಅನಾತ್ಮನಿಂದ ಬೇರ್ಪಡಿಸುವುದು ಮತ್ತು ತನ್ನ ಗುಣಗಳ ಮೂಲಕ ಪರಮೇಶ್ವರನ ಬಳಿ ಸೇರುವುದು. ಇವು ಮೂರು ಮಾರ್ಗಗಳಾದುವು. ಈ ಮೂರರಲ್ಲಿ ಯಾವುದು ಯಾರ ಕೈಗೂಡುತ್ತದೋ ಅವರು ಅದನ್ನು ಅನುಸರಿಸಬೇಕು. ಮೂರೂ ಬೇರೆ ಬೇರೆ ಅವಸ್ಥೆಗಳಲ್ಲಿ (ಹಂತಗಳಲ್ಲಿ) ಪ್ರಾಪ್ತವಾಗುತ್ತವೆ
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ