ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಬೆಣ್ಣೆ ಕದ್ದನಮ್ಮ ಕೃಷ್ಣ ಬೆಣ್ಣೆ ಕದ್ದನಮ್ಮ

ಬೆಣ್ಣೆ ಕದ್ದನಮ್ಮ ಕೃಷ್ಣ ಬೆಣ್ಣೆ ಕದ್ದನಮ್ಮ...ಲೇಖನ...!
ತಳುಕು ಶ್ರೀನಿವಾಸ
ಇತ್ತೀಚಿನ ಬರಹಗಳು: ತಳುಕು ಶ್ರೀನಿವಾಸ (ಎಲ್ಲವನ್ನು ಓದಿ)

ಬೆಣ್ಣೆ ಕದ್ದ ನಮ್ಮ ಕೃಷ್ಣಾ ಬೆಣ್ಣೆ ಕದ್ದನಮ್ಮ
ಬೆಣ್ಣೆಯ ಕದ್ದು ಜಾರುತ ಬಿದ್ದು ಮೊಣಕಾಲೂದಿಸಿಕೊಂಡನಮ್ಮ
ಬಿಂದಿಗೆ ಬಿದ್ದು ಸಿಡಿಯಲು ಸದ್ದು
ಬೆಚ್ಚಿದ ರಾಧೆಯ ಗಂಡನಮ್ಮ
ತಾಯಿ ಬಂದಳೋಡಿ ಕಳ್ಳನ ಕಣ್ಣಿನಲ್ಲಿ ಕೋಡಿ
ಕಣ್ಣಲಿ ಆಕೆ ಸಿಟ್ಟನು ತಾಳಿ ಸೊಂಟಕೆ ಕೈಯಿಟ್ಟು
ಆದಳು ಅರೆಚಣ ಭೀಕರ ತಾಳಿ ದುರುದುರು ಕಣ್ಬಿಟ್ಟು
ಹಣೆ ತುಂಬ ಕೆನ್ನೆಗೆ ಬೆಣ್ಣೆ ಮೆತ್ತಿ ಅ ಒರಟನ ನೋಟಕ್ಕೆ
ಇಳಿಯುತ ಕೋಪ ಅರಳಿತು ಕೆಂದುಟಿ ತುಂಟನ ಆಟಕ್ಕೆ
ತಪ್ಪಿದ ದಂಟಕೆ ನಿಟ್ಟುಸಿರೆಳೆದು ಬೆಣ್ಣೆಗಳಾ ನೀಲಾ
ತಟ್ಟನೆ ಅಳುವುದ ನಿಲ್ಲಿಸಿ ನಕ್ಕು ಬಾಯಗಲಿಸಿ ಬಾಲ
ಹರಡಿದ ಬೆಳದಿಂಗಳ ಜಾಲ ಅರಳಿದ ಬೆಳದಿಂಗಳ ಲಾಲ
ಅವನ ಅಕುಟಿಲ ಬೆಣ್ಣೆಯಂಥ ನಗು ಕಾಯಲಿ ಜಗದವರಾ
ಸಂತತ ನಗಿಸಲಿ ನಗದವರ

ಕವಿ ನಿಸಾರ್ ಅಹಮದ್

ಕವಿ ನಿಸಾರ್ ಅಹಮದ್ ರವರು ಈ ಕವನದಲ್ಲಿ ಆ ತುಂಟ ಬಾಲಕನನ್ನು ಎಷ್ಟು ಚೆನ್ನಾಗಿ ನಿರೂಪಿಸಿದ್ದಾರೆ.

ಇಂದು, ಶ್ರಾವಣ ಮಾಸ ಕೃಷ್ಣ ಪಕ್ಷ ಅಷ್ಟಮಿ – ಶ್ರೀ ಕೃಷ್ಣನ ಜನುಮ ದಿನ. ಆ ದೇವನು ತುಂಟ ಬಾಲಕನಾಗಿದ್ದಾಗ ಪುಟ್ಟ ಪುಟ್ಟ ಸ್ನೇಹಿತರುಗಳೊಂದಿಗೆ ಅಕ್ಕ ಪಕ್ಕದ ಮನೆಗಳಲ್ಲಿ ಬೆಣ್ಣ ಹಾಲು ಮೊಸರು ಎಲ್ಲವನ್ನೂ ಕದಿಯುತ್ತಿದ್ದ. ಇವನ ಕಾಟ ತಡೆಯಲಾರದ ಅಕ್ಕ ಪಕ್ಕದ ಮನೆಯವರುಗಳೆಲ್ಲರೂ ಯಶೋದೆಯ ಮುಂದೆ ಅಲವತ್ತು ಕೊಳ್ಳುತ್ತಿದ್ದರು. ಎಷ್ಟೇ ಆಗಲಿ ಆತ ದೇವನು. ಅವನ ತುಂಟಾಟವನ್ನು ನೆನೆಸಿಕೊಳ್ಳುತ್ತಾ ಅದೇ ಆಟವನ್ನು ಸಾರ್ವಜನಿಕವಾಗಿ ಆಡಿ ತೋರಿಸುವುದು ಮುಂಬಯಿನಲ್ಲಿ ಒಂದು ಸಂಪ್ರದಾಯ. ಇದನ್ನು ಸ್ಪರ್ಧೆಯಾಗಿ ಮಾಡಿ ಲಕ್ಷಾಂತರ ರೂಪಾಯಿಗಳ ಬಹುಮಾನವನ್ನು ಗೆಲ್ಲುವ ಭೂಪತಿಗಳೂ ಇದ್ದಾರೆ.

‘ಗೋವಿಂದ ಆಲಾ ರೇ ಆಲಾ ಝರಾ ಮಟಕೀ ಸಂಭಾಲ್ ಬ್ರಿಜ್ ಬಾಲಾ’ – ಈ ಹಾಡನ್ನು ಶಮ್ಮೀ ಕಪೂರ್ ಅವರ ಬ್ಲಫ್ ಮಾಸ್ಟರ್ ಚಿತ್ರದಲ್ಲಿ ಚಿತ್ರೀಕರಿಸಿದ್ದಾರೆ. ಅದನ್ನು ನೋಡುತ್ತಿದ್ದರೆ ನಮಗೂ ಕುಣಿಯಬೇಕು ಅನ್ನಿಸುತ್ತದೆ. ಮುಂಬೈನಲ್ಲಿ ಆಚರಿಸುವ ಜನ್ಮಾಷ್ಟಮಿಯ ನಿಮಿತ್ತದ ಈ ದಹಿ ಹಂಡಿ ಒಡೆಯುವ ದೃಶ್ಯವನ್ನೂ ಅದರಲ್ಲಿ ನೋಡಬಹುದು. ಈ ಹಾಡಿನ ಅರ್ಥ ಹೀಗಿದೆ – ಗೋವಿಂದ ಅಂದ್ರೆ ಕೃಷ್ಣ ಬರುತ್ತಿದ್ದಾನೆ, ಬ್ರಿಜ ದೇಶದ (ಈಗಿನ ಮಥುರಾ, ಬೃಂದಾವನ) ಬಾಲೆಯರೇ (ಗೋಪಿಕೆಯರು) ನಿಮ್ಮ ನಿಮ್ಮ ಮಡಕೆಗಳನ್ನು ನೋಡಿಕೊಳ್ಳಿ. ಸ್ವಲ್ಪ ಎಚ್ಚರ ತಪ್ಪಿದರೂ ಈ ತುಂಟ ಮತ್ತು ಅವನ ಗೆಳೆಯರು ಮಡಕೆ ಒಡೆದು ಅದರೊಳಗಿರುವ ಹಾಲು ಬೆಣ್ಣೆ ಕದಿಯುವರು.

ಮಳೆಗಾಲದಲ್ಲಿ ಇಂತಹ ಮೋಜಿನಿಂದ ಜನರು ತಾವೂ ನಲಿಯುವರು ಮತ್ತು ಇತರರನ್ನೂ ನಲಿಸುವರು. ಇಂದಿನ ದಿನಗಳಲ್ಲಿ ಹಳೆಯ ಮುಂಬೈನ ಬಡಾವಣೆಗಳಾದ ಗಿರ್ ಗಾಂವ್, ತಾಡ್ ದೇವ್, ಮಝಗಾಂವ್, ವೊರ್ಲಿ, ಲಾಲ್ ಬಾಗ್, ದಾದರ್, ಘಾಟ್ ಕೋಪರ್, ಥಾಣೆ ಮತ್ತಿತರೇ ಪ್ರದೇಶದ ಗಲ್ಲಿ ಗಲ್ಲಿಗಳಲ್ಲೂ ಬಹು ಮಹಡಿ ಕಟ್ಟಡಗಲ ಒಂದು ಕಡೆಯಿಂದ ಇನ್ನೊಂದು ಕಡೆಯ ಕಟ್ಟಡಗಳಿಗೆ ಹಗ್ಗವನ್ನು ಕಟ್ಟಿ ಮಧ್ಯೆ ಒಂದು ಮಡಕೆಯನ್ನು ಕಟ್ಟಿರುವ ದೃಶ್ಯ ಸರ್ವೇ ಸಾಮಾನ್ಯ. ಅಲ್ಲೇ ಕೆಳಗೆ ಒಂದು ಜಾಹೀರಾತಿನ ಫಲಕವನ್ನೂ ನೋಡಬಹುದು. ಈ ಹಂಡಿಯನ್ನು ಒಡೆದವರಿಗೆ ಇಂತಿಷ್ಟು ರೂಪಾಯಿಗಳ ಬಹುಮಾನ ಕೊಡಲಾಗುವುದು, ಎಂದು. ಪಕ್ಕದಲ್ಲಿರುವ ಥಾಣೆ ಪ್ರದೇಶದಲ್ಲಿ ಅತಿ ಹೆಚ್ಚಿನ ಮೊತ್ತವನ್ನು (ಲಕ್ಷಕ್ಕೂ ಮಿಗಿಲಾಗಿ) ಬಹುಮಾನವಾಗಿ ನೀಡುವರು.

ದಹಿ ಹಂಡಿ

ಇದಕ್ಕಾಗಿ ಸುಮಾರು ದಿನಗಳಿಂದ ತಾಲೀಮು ನಡೆಸುವರು. ಮೇಲೆ ೪೦ ಅಡಿಗಳಿಗಿಂತ ಎತ್ತರದಲ್ಲಿ ಮಡಕೆಯನ್ನು ಜೋತು ಬಿಡುವರು. ಅದರೊಳಗೆ ಹಾಲು, ಮೊಸರು, ತುಪ್ಪ ಇತ್ಯಾದಿ ಗಳನ್ನು ಹಾಕಿರುವರು. ಆ ಮಡಕೆಯಲ್ಲಿ ಹೆಚ್ಚಿನದಾಗಿ ಹಾಲು ಮೊಸರನ್ನೇ ಹಾಕಿರುವರು. ಈ ಮಡಕೆಯನ್ನು ಒಡೆಯಲು ಮಾನವ ನಿರ್ಮಿತ ಪಿರಮಿಡ್ ರಚಿಸಿ ಮಡಕೆಯನ್ನು ಒಡೆಯಬೇಕು. ಇದಕ್ಕಾಗಿ ಜನಗಳು ಗುಂಪು ಗುಂಪಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಮಡಕೆ ಒಡೆಯಲು ಪ್ರಯತ್ನಿಸುತ್ತಾ ಹೋಗುವರು. ೫೦ – ೬೦ ಜನಗಳ ಗುಂಪೇ ಇದ್ದು ಅದರಲ್ಲಿ ಧಡೂತಿ ಕಾಯದವರು, ಕೃಶಕಾಯರು, ಎತ್ತರದವರು, ದೊಡ್ಡವರು, ಚಿಕ್ಕ ಚಿಕ್ಕ ಮಕ್ಕಳು ಎಲ್ಲ ಇರುವರು. ಇವರೆಲ್ಲರೂ ಕೇಸರಿ ಬಣ್ಣದ ಹಣೆ ಪಟ್ಟಿ, ಅದೇ ಬಣ್ಣದ ಬನಿಯನ್ ಧರಿಸಿರುವುದು ಒಂದು ಸಂಕೇತ. ಮೊದಲು ಕೆಳಗಡೆ ಧಡೂತಿ ಕಾಯರು ಮಾನವ ಸರಪಳಿಯಂತೆ ಸುತ್ತುವರಿದು ನಿಲ್ಲುವರು. ಅವರ ಮೇಲೆ ಎರಡನೆ ಪದರದಲ್ಲಿ ಸ್ವಲ್ಪ ಕೃಶಕಾಯದವರು ನಿಲ್ಲುವರು. ಹಾಗೇ ಮೇಲೆ ಮೇಲಕ್ಕೆ ೬-೭ ಪದರಗಳಂತೆ ಮೇಲಕ್ಕೆ ಹೋಗುವರು. ಕಡೆಗೆ ತುತ್ತ ತುದಿಯಲ್ಲಿ ಒಬ್ಬ ಚಿಕ್ಕ ಬಾಲಕನು ಮೇಲೇರಿ ಆ ಮಡಕೆಯನ್ನು ಒಡೆಯುವನು. ಇದು ಅಷ್ಟು ಸುಲಭವಲ್ಲ. ಇವರು ಮೇಲೇರಲು ಪ್ರಯತ್ನಿಸುತ್ತಿದ್ದಂತೆ, ಸುತ್ತ ಮುತ್ತ ನೆರೆದಿರುವ ಜನರು (ಹೆಚ್ಚಿನದಾಗಿ ಹೆಂಗೆಳೆಯರು), ಅವರ ಮೇಲೆ ನೀರನ್ನು ಎರಚುವರು. ಸಾಮಾನ್ಯವಾಗಿ ಇದೇ ಸಮಯದಲ್ಲಿ ಮಳೆಯೂ ಬರುವುದು. ಇದೆಲ್ಲ ಕೋಟಲೆಗಳ ಮಧ್ಯೆ ಸರಪಳಿ ಕಡಿದು ಜನರು ಬೀಳುವ ಸಾಧ್ಯತೆಗಳೇ ಹೆಚ್ಚು. ಹಾಗೆ ಬಿದ್ದು ಪೆಟ್ಟು ಮಾಡಿಕೊಂಡ ಸಂದರ್ಭಗಳೂ ಇವೆ. ಇದಕ್ಕಾಗೇ ವಿಶೇಷ ಎಚ್ಚರಿಕೆಯನ್ನೂ ಕೊಡುವರು ಮತ್ತು ಇದನ್ನೆಲ್ಲಾ ನೋಡಿಕೊಳ್ಳಲು ಸಮರ್ಥ ಹಿರಿಯರೊಬ್ಬರು ನಿರ್ದೇಶನ ಕೊಡುತ್ತಾ ಇರುವರು. ಈ ಆಟವನ್ನು ಉತ್ತೇಜಿಸಲು ಸ್ಥಳೀಯ ರಾಜಕೀಯ ಧುರೀಣರೂ ಅವರೊಂದಿಗೆ ಸೇರುವರು. ಇವರುಗಳು ಒಂದೆಡೆಯಿಂದ ಇನ್ನೊಂದೆಡೆಗೆ ಹೋಗುವಾಗ ‘ಗೋವಿಂದ ಆಲಾ ರೇ ಆಲಾ’ ಎಂದು ಹಾಡಿಕೊಂಡು ಹೋಗುವರು. ಈ ಸಮಯದಲ್ಲಿ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಆಗುವುದೆಂದು ಕೆಲವು ಕಛೇರಿಗಳಿಗೆ ರಜೆ ಫೋಷಿಸುವರು, ಮತ್ತೆ ಕೆಲವು ಕದೆ ಅರ್ಧ ದಿನದ ಕೆಲಸ ಮಾಡುವರು. ಇದನ್ನೇ ಕಾರಣ ಮಾಡಿಕೊಂಡು ಬೇಗನೆ ಮನೆಗೆ ಹೋಗುವವರೂ ಇದ್ದಾರೆ.

ಸುಮಾರು ಹತ್ತು ವರುಷಗಳಿಂದ ಹೆಂಗಸರೂ ಇದೇ ತರಹದ ಗುಂಪನ್ನು ಮಾಡಿಕೊಂಡು ದಹಿ ಹಂಡಿ ಒಡೆಯಲು ಹೋಗುವರು.

ದಹಿ ಹಂಡಿಗೆ ನೆರವಾಗುವ ಕರಗಳು

ಇಂತಹ ಮೋಜು ಆಟಗಳಿಂದ ಜನಗಳಲ್ಲಿ ಒಮ್ಮತ ಮೂಡಿಬರುವುದಲ್ಲವೇ? ಇಂತಹ ಕಾರ್ಯಗಳಿಂದಲೇ ನಮ್ಮ ದೇಶ ಮಿಕ್ಕೆಲ್ಲ ದೇಶಗಳಿಗಿಂತ ಭಿನ್ನ ಹಾಗೂ ವಿದೇಶೀಯರಿಗೆ ಇಲ್ಲಿಗೆ ಬರಲು ಹೆಚ್ಚಿನ ಆಸಕ್ತಿಯಲ್ಲವೇ? ಹಿಂದೆ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಜನಗಳಲ್ಲಿ ಒಮ್ಮತ, ಐಕ್ಯತೆ ಮೂಡಿಸಲು ಗೋಕುಲಾಷ್ಟಮಿಯ ಈ ಆಟ, ಸಾರ್ವಜನಿಕ ಗಣಪತಿ ಇವುಗಳನ್ನು ಆಚರಿಸುತ್ತಿದ್ದು ಅದು ಈಗಲೂ ಆಚರಣೆಯಲ್ಲಿದೆ. ಇಂತಹ ಆಚರಣೆಯಿಲ್ಲದಿದ್ದರೆ ಜೀವನದಲ್ಲಿ ಏನು ಸ್ವಾರಸ್ಯವಿರುತ್ತದೆ ಅಲ್ಲವೇ?