- ಸಾಧಕರು ಸಾಮ್ರಾಜ್ಯ ಕಟ್ಟಬಾರದು- ವೈಲ್ಡ್ ವೈಲ್ಡ್ ಕಂಟ್ರಿ - ನವೆಂಬರ್ 5, 2022
- ವ್ಹಾ ರಿಷಭ್ ವ್ಹಾ – ಕಾಂತಾರಕೆ ವ್ಹಾ ವ್ಹಾ - ಅಕ್ಟೋಬರ್ 8, 2022
- ಚೇರ್ಮನ್ ಅವರ ಕುರಿತ ಪುಸ್ತಕ ಮತ್ತು ನಾನು - ಆಗಸ್ಟ್ 22, 2022
ಅಂಕಣ-೧
ಆತ್ಮಹತ್ಯೆ ಕೇವಲ ಮಹಾ ಪಾಪವಷ್ಟೇ ಅಲ್ಲ…!
ಈಗಷ್ಟೆ ಪಿಯುಸಿ ಪರೀಕ್ಷಾ ಪರಿಣಾಮ ಬಂದಿದೆ. ಆತ್ಮಹತ್ಯೆ ಮಕ್ಕಳನ್ನು ಕಾಡಬಾರದು, ಅದಕ್ಕೆ ಅವಕಾಶ ಬೇಡ ಎಂಬ ಸದಾಶಯದಿಂದ ನನ್ನ ಭಾವನೆಗಳ ನಿವೇದಿಸುವೆ.
ಪ್ರೊ. ಸಿದ್ದು ಯಾಪಲಪರವಿ
ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಎಂಬ ಭೂತ ನಮ್ಮ ತಲೆಮಾರನ್ನು ಕಾಡುತ್ತಿದೆ. ಬದುಕಿನ ಏರಿಳಿತಗಳನ್ನು ಎದುರಿಸದೇ ಯಾವುದೇ ಒಂದು ರೀತಿಯ ಭಯದಿಂದ ಸಾವಿಗೆ ಶರಣಾಗುತ್ತಾರೆ.
ಆತ್ಮಹತ್ಯೆ ಮಹಾಪಾಪ ಎಂದು ಧರ್ಮವೇನೋ ಹೇಳುತ್ತದೆ. ಇಂದು ದೇವರು ಮತ್ತು ಧರ್ಮದ ಮೂಲಕ ಜನರನ್ನು ಸರಿದಾರಿಗೆ ತರುವುದು ಅಸಾಧ್ಯವಾಗಿದೆ.
ಯಾಕೆಂದರೆ ದೇವರು ಧರ್ಮದ ಹೆಸರಿನಲ್ಲಿ ಪ್ರವಚನ ಮಾಡುವವರು ತಮ್ಮ ವಿವಿಧ ಲೀಲೆಗಳಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಹಂತ ತಲುಪಿದ್ದಾರೆ.
ಇಂದಿನ ಯುವಕರಿಗೆ ನಮ್ಮ ಪ್ರೀತಿಯ ಮಾತುಗಳ ಮೂಲಕ ಆತ್ಮವಿಶ್ವಾಸ ತುಂಬ ಬೇಕಾಗಿದೆ. ಪರಿಸರ, ಪಾಲಕರು, ಶೈಕ್ಷಣಿಕ ಕೆಂದ್ರಗಳು ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರುವ ಅಂಶಗಳು.
ಬಾಲ್ಯದಲ್ಲಿ ಬೆಳೆದು ಬಂದ ಪರಿಸರ, ಪಾಲಕರ ಧೋರಣೆ ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರುತ್ತವೆ.
ಪ್ರತಿಯೊಬ್ಬ ಮನುಷ್ಯನ ಬದುಕಿನಲ್ಲಿ ಕನಿಷ್ಟ ಒಮ್ಮೆಯಾದರೂ, ಹತಾಶರಾದಾಗ ಆತ್ಮಹತ್ಯಾಭಾವ ಸುಳಿಯುತ್ತದೆಯೆಂತೆ. ಒಮ್ಮೊಮ್ಮೆ ತೀರಾ ಸಣ್ಣ ಕಾರಣಕ್ಕಾಗಿ ಕೂಡಾ.
ಬಹಳ ಪ್ರೀತಿಸುವ ಪಾಲಕರು ಬೈದರೆ ಸಾಯಬೇಕು ಅನಿಸುತ್ತದೆ. ಅತಿಯಾಗಿ ಪ್ರೀತಿಸುವಾಗಲೂ ಒಮ್ಮೊಮ್ಮೆ ಬೈಯ್ಯುವ ಪ್ರಸಂಗ ಬರುತ್ತದೆ ಎಂಬ ತಿಳುವಳಿಕೆಯನ್ನು ಪಾಲಕರು ನೀಡಬೇಕು.
ಉಡದಂತೆ, ಕರಡಿಯಂತೆ ತಬ್ಬಿ, ಮುದ್ದಾಡಿ ಪ್ರೀತಿಸುವ ನಾವು ಸಹನೆ ಕಳೆದುಕೊಂಡಾಗ ಹುಲಿಯಂತೆ ಅರಚುತ್ತೇವೆ.
ಪ್ರೀತಿಯ ವಿಷಯದಲ್ಲಿ ಈ ರೀತಿಯ ವೈರುಧ್ಯ ಒಳ್ಳೆಯದಲ್ಲ. ಎಲ್ಲದರಲ್ಲೂ ಸಮಪಾತಳಿ ಬೇಕು.
ಅನೇಕ ಯುವಕರನ್ನು ಮಾತನಾಡಿಸಿದಾಗ ಅವರಲ್ಲಿನ ಒತ್ತಡ ಗೊತ್ತಾಗುತ್ತದೆ. ತುಂಬಾ ಹಣ ಕೊಟ್ಟು ದೊಡ್ಡ ಕಾಲೇಜಿನಲ್ಲಿ ಪ್ರವೇಶ ಕೊಡಿಸುತ್ತಾರೆ. ಓಡಾಡಲು ಬೈಕ್, ಮಜ ಮಾಡಲು ಮೊಬೈಲ್ ಕೊಟ್ಟು ಚೆನ್ನಾಗಿ ಅಂಕಗಳಿಸಲು ಒತ್ತಡ ಹೇರುತ್ತಾರೆ.
ಈ ರೀತಿಯ ಒತ್ತಡ ಹೇರುವ ಪಾಲಕರು ಮಕ್ಕಳ ಶೈಕ್ಷಣಿಕ ಸಾಮರ್ಥ್ಯವನ್ನು ಅರ್ಥ ಮಾಡಿಕೊಂಡಿರುವುದಿಲ್ಲ. ಕೇವಲ ಅವರು ಗಳಿಸಿದ ಅಂಕಗಳ ಆಧಾರದ ಮೇಲೆ ಡಾಕ್ಟರ್, ಎಂಜಿನಿಯರ್ ಆಗಲಿ ಎಂದು ಬಯಸುತ್ತಾರೆಯೇ ಹೊರತು ಮಕ್ಕಳ ಆಸಕ್ತಿಯನ್ನು ಲೆಕ್ಕಿಸುವುದೇ ಇಲ್ಲ.
ಕಾಲೇಜಿನಲ್ಲಿ ಕಲಿಸುವಿಕೆ ತೃಪ್ತಿದಾಯಕವಾಗಿದ್ದರೂ, ಇನ್ನೂ ಹೆಚ್ಚು ಕಲಿಯಲಿ ಎಂಬ ದುರಾಸೆಯಿಂದ ಟ್ಯುಷನ್ ಗೆ ಅಲೆದಾಡಿಸುತ್ತಾರೆ. ಹೀಗೆ ಹತ್ತು ಹಲವು ಒತ್ತಡದ ಕಾರಣಗಳನ್ನು ಯುವಕರು ತೋಡಿಕೊಳ್ಳುತ್ತಾರೆ.
ಇನ್ನು ದಡ್ಡ ವಿದ್ಯಾರ್ಥಿಗಳ ಕಥೆಯೇ ಬೇರೆ ವಿಜ್ಞಾನ, ಗಣಿತ ಅರ್ಥವಾಗುತ್ತಿರುವುದಿಲ್ಲ ಆದರೂ ಸೈನ್ಸ್ ಕಲಿಯಲು ಒತ್ತಾಯಿಸಿ, ನಂತರ ವಿಫಲರಾದಾಗ ಆತಂಕಕ್ಕೆ ಒಳಗಾಗುತ್ತಾರೆ.
ಗ್ರಹಿಕೆಯ ವಿಫಲತೆ ಜಿಗುಪ್ಸೆಯನ್ನು ತರುತ್ತದೆ. ಈ ಪಾಸು,ಫೇಲು ಎಂಬುದು ಬಾಲ್ಯದಲ್ಲಿ ಮಹತ್ವದ ಸಂಗತಿ ಎನಿಸುವುದಿಲ್ಲ. ಕಾಲೇಜು ಪ್ರವೇಶ ಪಡೆದಾಗ ಗಂಭೀರ ಎನಿಸುತ್ತದೆ.
ನಾನು ಟ್ರೈನರ್, ಕೌನ್ಸೆಲ್ಲರ್ ಆಗಿ ಬೆಳೆಯಲು ನನ್ನ ವೈಯಕ್ತಿಕ ಜೀವನದ ಕಹಿ ಅನುಭವಗಳೇ ಕಾರಣ. ಹಾಗೆಯೇ ವರ್ತಮಾನದ ಯಶಸ್ಸು ಕೂಡಾ ಹುಮ್ಮಸ್ಸನ್ನು ಹೆಚ್ಚಿಸಿದೆ.
ಬದುಕಿನಲ್ಲಿ ಮೂರು ಬಾರಿ ಅಂತಹ ದುರಾಲೋಚನೆ ಮಾಡಿದ್ದೆ.
ಪರೀಕ್ಷೆಗಳಲ್ಲಿ ಫೇಲ್ ಆದಾಗ, ಒಂದು ಮಿಥ್ಯ ಆರೋಪ ಬಂದಾಗ, ಆರ್ಥಿಕ ನಿರ್ಬಹಣೆ ಭಯಾನಕ ಎನಿಸಿದಾಗ.
ಮೂರುಬಾರಿ ಮನಸ್ಸಿನಲ್ಲಿ ಸುಳಿದ ದುರ್ಬಲ ಆಲೋಚನೆಗಳನ್ನು ನೆನೆದರೆ ಅಯ್ಯೋ ಎನಿಸುತ್ತದೆ.
ಆಗ ನಮಗೆ ಧೈರ್ಯ ತುಂಬುವ ವಾತಾವರಣ ಇರದಿದ್ದರೂ ಬದುಕುವ ಛಲ ಮತ್ತು ಆಶಾವಾದ ಬದುಕಿಸಿತು.
ಪರೀಕ್ಷೆ ಎಂದರೆ ಹೆದರುತ್ತಿದ್ದ ನನಗೆ ಎಷ್ಟೇ ಓದಿದ್ದರೂ ಪರೀಕ್ಷೆಯಲ್ಲಿ ನೆನಪು ಹೆದರಿಕೆಯಿಂದಾಗಿ ಕೈಕೊಡುತ್ತಿತ್ತು.
ಪಿಯುಸಿ ಫೇಲ್ ಆದಾಗ ಹಾಗೇಯೇ ಆಯಿತು. ಕಷ್ಟ ಪಟ್ಟು ಓದಿದ್ದ,ತುಂಬಾ ಇಷ್ಟವಾದ ಸೈಕಾಲಜಿ ವಿಷಯದಲ್ಲಿ ಪರೀಕ್ಷಾ ಭೀತಿಯಿಂದ ಫೇಲ್ ಆದೆ. ಆಘಾತ ತಡೆದುಕೊಳ್ಳಲಾಗಲಿಲ್ಲ. ಸತ್ತೇ ಹೋಗಬೇಕು ಎನಿಸಿತು. ಗೆಳೆಯರು ಸಮಾಧಾನ ಮಾಡಿದರೂ ತಡೆದುಕೊಳ್ಳಲಾಗಲಿಲ್ಲ.
‘ಸೈಕಾಲಜಿ ಓದಿದರೂ ಹುಚ್ಚನಾಗುತ್ತಾನೆ’ ಎಂದು ಕೆಲವರು ತಮಾಷೆ ಮಾಡಲಾರಂಭಿಸಿದರು.
ಮುಂದೆ ಅದನ್ನೇ ಸವಾಲಾಗಿ ಸ್ವೀಕರಿಸಿ ಕಠಿಣವೆನಿಸಿದ್ದ ಇಂಗ್ಲಿಷ್ ಮತ್ತು ಸೈಕಾಲಜಿ ಓದಿ ಯಶಸ್ಸು ಸಾಧಿಸಿದೆ.
ಒಮ್ಮೆ ಸಾಯುವ ಭ್ರಮೆಯಿಂದ ನೀವು ಹೊರ ಬಂದರೆ ಅನೇಕ ಸಂತಸದ, ಸುಖದ ಕ್ಷಣಗಳು ನಿಮಗೆ ಸಿಗುತ್ತವೆ.
ಯಾವುದಾದರೂ ಒಂದು ಕ್ಷೇತ್ರದ ವೈಫಲ್ಯ ಇಡೀ ಬದುಕಿನ ವೈಫಲ್ಯವಲ್ಲ.
ಸತ್ತವರ ಬಾಯಲ್ಲಿ ಮಣ್ಣು ಎಂದು ಹಳ್ಳಿಯಲ್ಲಿ ಬೈಯ್ಯುತ್ತಾರೆ. ಸತ್ತವರು ಮಣ್ಣು ಸೇರಿದರೆ, ಇದ್ದವರು ಮಜಾ ಮಾಡುತ್ತಾರೆ. ಸತ್ತು ಬದುಕಿಗೆ ಫುಲ್ ಸ್ಟಾಪ್ ಇಡುವುದಕ್ಕಿಂತ, ಇದ್ದು ಬದುಕಿನ ಸುಂದರ ಕ್ಷಣಗಳನ್ನು ಅನುಭವಿಸಬೇಕು.
‘ಇರುವ ಆಯುಷ್ಯ ಅನುಭವಿಸಲು, ನೋಡಲು, ಆಲಿಸಲು, ಸಂಚರಿಸಲು ಇಡೀ ಬದುಕು ಸಾಲದು ಎನಿಸುವಾಗ ಸಾವು ಬರುವ ಮುಂಚೆಯೇ ಸತ್ತರೆ ಏನು ಲಾಭ?!’
ಎಂಬ ಪ್ರಶ್ನೆಯನ್ನು ಸಾಯಬೇಕು ಅನಿಸಿದಾಗ ನಾವೇ ಕೇಳಿಕೊಳ್ಳಬೇಕು.
ಪರೀಕ್ಷೆಗೆ ಮುನ್ನವೇ ಮಕ್ಕಳ ಪರಿಸ್ಥಿತಿ ಗ್ರಹಿಸಿ ಧೈರ್ಯ ಹೇಳಬೇಕು. ಫೇಲ್ ಆಗಬೇಡ ಎಂಬ ಒತ್ತಡ ಹೇರಬಾರದು. ಮಕ್ಕಳ ಮುಂದೆ ಅವರ ದೌರ್ಬಲಗಳ ವೈಭವಿಕರಿಸಿ, ಬೇರೆಯವರೊಂದಿಗೆ ಹೋಲಿಕೆ ಮಾಡಿ ಮಾತನಾಡಬಾರದು.
ರಿಸಲ್ಟ್ ಬಂದಾಗ ಜೊತೆಯಲ್ಲಿರಬೇಕು. ಒಂಟಿಯಾಗಿ ಬಿಡಬಾರದು. ನೋವಿನ ಗಳಿಗೆಗಳಲ್ಲಿ ಒಂಟಿತನ ಹೆಚ್ಚು ಅಪಾಯಕಾರಿ.
ಒಂಟಿಯಾಗಿ ನರಳುವುದಕ್ಕಿಂತ ಮುಕ್ತವಾಗಿ ಹೊರಬೀಳುವ ವಾತಾವರಣ ಒದಗಿಸಬೇಕು.
ಸೋಲಿಗೆ ಕಾರಣಗಳನ್ನು ಗೆಳೆಯರೊಂದಿಗೆ, ಸಮಾನ ಮನಸ್ಕರೊಂದಿಗೆ ಚರ್ಚಿಸಬೇಕು. ಸಿನೆಮಾ ನೋಡಿ, ಸಂಗೀತ ಕೇಳಿ, ಪ್ರವಾಸ ಹೋಗಿ, ಪ್ರೀತಿ ತೋರುವ ಬಂಧುಗಳ ಮನೆಗೆ ಹೋಗಿ ನೋವನ್ನು ಮರೆಯಬೇಕು.
ಮನೋವೈದ್ಯರು ಮತ್ತು ಮನೋವೈಜ್ಞಾನಿಕ ತಜ್ಞರ ಜೊತೆಗೆ ಆಪ್ತ ಸಮಾಲೋಚನೆ ಮೂಲಕ ಮನದ ನೋವನ್ನು ಹೇಳಿಕೊಳ್ಳಬೇಕು.
ಸಾಧಕರ ಜೀವನ ಚರಿತ್ರೆಗಳನ್ನು ಓದಬೇಕು.
‘ನಮ್ಮ ಬದುಕು ನಮಗಾಗಿ’ ಎನ್ನುವ ಭಾವನೆಗಳನ್ನು ಸುಪ್ತ ಮನಸಿಗೆ ಆಟೋ ಸಜೇಶನ್ ಮೂಲಕ ಪದೇ ಪದೇ ರವಾನಿಸಬೇಕು.
ನಾವು ನಮಗಾಗಿ ಬದುಕಲೇಬೇಕು.
ಇನ್ನೂ ವಿಚಿತ್ರವೆಂದರೆ ಕೇವಲ ಫೇಲ್ ಆದವರು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ.
ಕೀರ್ತಿ, ಹಣ,ಅಧಿಕಾರ ಮತ್ತು ಅವಕಾಶ ಇದ್ದವರು ಅನಗತ್ಯ ಡಿಪ್ರೆಶನ್ ಕಾರಣದಿಂದ ಎಲ್ಲಾ ಇದ್ದು ಸಾವಿಗೆ ಶರಣಾಗುತ್ತಾರೆ.
ಡಿಪ್ರೆಶನ್ ಅಥವಾ ಮನೋ ಹತಾಶೆಗೆ ಗಂಭೀರ ಕಾರಣಗಳು ಇರಲ್ಲ, ಇರುವ ಸಣ್ಣ ಸಮಸ್ಯೆಗಳೇ ಭಯಾನಕವಾಗಿ ಕಾಡಲಾರಂಭಿಸುತ್ತವೆ.
ಐಎಎಸ್ ಅಧಿಕಾರಿ ರವಿ, ಇತ್ತೀಚಿಗೆ ಸಾವಿಗೆ ಶರಣಾದ ಖ್ಯಾತ ನಟ ಸುಶಾಂತ ಸಿಂಗ್ ಈ ತರಹದ ಡಿಪ್ರೆಶನ್ ಗೆ ಬಲಿಯಾದ ದುರ್ದೈವಿಗಳು.
ಸೂಕ್ತ ಮನೋವೈಜ್ಞಾನಿಕ ಚಿಕಿತ್ಸೆ ಮತ್ತು ಕೌನ್ಸಿಲಿಂಗ್ ದೊರಕಿದ್ದರೆ ಸಾಯುತ್ತಿರಲಿಲ್ಲ.
ಮನೋವೈಜ್ಞಾನಿಕ ಚಿಕಿತ್ಸೆಗೆ ಒಳಗಾಗುವುದು ಅವಮಾನ ಎಂದು ಕೆಲವರು ಭಾವಿಸುತ್ತಾರೆ.
ಜ್ವರ, ಕೆಮ್ಮು, ಬಿಪಿ ಮತ್ತು ಡಯಾಬಿಟಿಸ್ ಕಾಯಿಲೆಗಳು ದೇಹಕ್ಕೆ ಅಪ್ಪಳಿಸಿದಾಗ ಭಯವಿಲ್ಲದೆ ಚಿಕಿತ್ಸೆ ಪಡೆಯುತ್ತೇವೆ.
ಆಲೋಚನಾ ಕ್ರಮ ಏರು ಪೇರಾದಾಗ ಮೆದುಳಿನಲ್ಲಿ ಪ್ರತಿಕೂಲ ಕೆಮಿಕಲ್ ರಿಯಾಕ್ಷನ್ ಆಗಿ ಮನಸು ಡಿಪ್ರೆಶನ್ ನಂತಹ ಕಾಯಿಲೆಗೆ ಒಳಗಾದಾಗ ಚಿಕಿತ್ಸೆ ಪಡೆಯಲು ಹಿಂದೇಟು ಹಾಕುವುದು ತುಂಬಾ ಅಪಾಯಕಾರಿ.
ಖ್ಯಾತ ನಟಿ ದೀಪಿಕಾ ಪಡುಕೋಣೆ ಡಿಪ್ರೆಶನ್ ಗೆ ಒಳಗಾದಾಗ ಸೂಕ್ತ ಚಿಕಿತ್ಸೆ ಪಡೆದದ್ದನ್ನು ಬಹಿರಂಗವಾಗಿ ತಿಳಿಸಿದ ಮೇಲೂ ಸೆಲೆಬ್ರಿಟಿಗಳು ಸಾವಿನ ಹಾದಿ ಹಿಡಿಯುವುದು ಆತಂಕಕಾರಿ.
ಸತ್ತು ನರಕ ಸೇರುವ ಬದಲು ಬದುಕಿ ಸ್ವರ್ಗ ಸೃಷ್ಟಿ ಮಾಡಿರಿ.
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ