- ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ - ಸೆಪ್ಟೆಂಬರ್ 12, 2024
- ಹಾಲಾಡಿಯಲ್ಲಿ ಹಾರುವ ಓತಿ - ಜುಲೈ 20, 2024
- ನಾಡೋಜ ಕಮಲಾಮೇಡಂಗೆ ಅಂತಿಮ ನಮನಗಳು - ಜೂನ್ 22, 2024
ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರುವೇ ನಮಃ
(ಅಜ್ಞಾನವೆಂಬ ಕತ್ತಲೆಯಿಂದ ಕುರುಡಾದ ಈ ಜಗತ್ತನ್ನು ಜ್ಞಾನವೆಂಬ ದೀಪಜ್ವಾಲೆಯಿಂದ ತೆರೆಸಿದ ಗುರುವೆಂಬ ಮಹಾನ್ ಶಕ್ತಿಗೆ ನಮಸ್ಕಾರ) ಎಂದು ‘ಗುರು’ ಎಂಬ ಮಹಾನ್ ಚೇತನವನ್ನು ನಾವು ನಿತ್ಯ ಸ್ಮರಣೆ ಮಾಡಲೇಬೇಕು. ಗುರು ‘ಪ್ರಜ್ವಾಲಿತೇ ಜ್ಞಾನಮಯಿ ದಿಲೀಪಃ’ ಎಂಬ ಪದಪುಂಜದನ್ವಯ ಸ್ವಯಂಶಕ್ತಿಯಿಂದ ತಾವೂ ಬೆಳಗುವುದರೊಂದಿಗೆ ಇತರ ಹಣತೆಗಳಿಗೂ ಜ್ಞಾನ ಎಂಬ ಕಿರಣವನ್ನು ವರ್ಗಾಯಿಸುತ್ತಾರೆ. ಕಾಲ ಸರಿದಂತೆ ಗುರು-ಶಿಷ್ಯ ಪರಂಪರೆಯ ತಘವೂ ಸಡಿಲವಾಗಿದೆ. ನಮ್ಮ ಹಿರಿಯರು ಶಿಕ್ಷಕರನ್ನು ಗುರುವರ್ಯ, ಪೂಜ್ಯರೇ, ಗುರುಗಳೇ ಎಂದು ಕರೆಯುತ್ತಿದ್ದರು ನಾವು ಸರ್, ಮೇಡಂ, ಮಿಸ್ ಎಂದು ಕರೆದು ಆ ಸ್ಥಾನದ ಘನತೆಯನ್ನು ಹಾಳು ಮಾಡುತ್ತಿದ್ದೇವೆ ಎಂದೆನಿಸುತ್ತದೆ. ಮೇಷ್ಟ್ರೆ, ಟೀಚರ್ ಎಂದು ಅವರನ್ನು ಸಂಬೋಧನೆ ಸರಿ ಇರುತ್ತದೇನೋ?, ಸರ್, ಮೇಡಂ ಎಂಬ ಸಂಬೋಧನೆಗಳು ಇಂದಿಗೆ ತನ್ನ ಮೂಲವನ್ನು ಕಳೆದುಕೊಂಡು ಅರ್ಥವಿಲ್ಲದೆ ಸಾರ್ವತ್ರಿಕವಾಗಿ ಬಳಕೆಯಾಗುತ್ತದೆ ಎನ್ನಿಸುತ್ತದೆ.
‘ವರ್ಣ ಮಾತ್ರಂ ಕಲಿಸಿದಾತಂ ಗುರು’ ಎಂಬ ಮಾತಿನ ಜೊತೆಗೆ ಗುರು ಎಂದರೆ ಕೇವಲ ಅಕ್ಷರಾಭ್ಯಾಸ ಮಾಡಿಸಿದವರು ಎಂದು ಸೀಮಿತ ವ್ಯಾಪ್ತಿಯಲ್ಲಿ ಅರ್ಥೈಸಬೇಕಿಲ್ಲ. ವಿಶಾಲಾರ್ಥದಲ್ಲಿ ಗುರುವನ್ನು ಅರ್ಥೈಸಿಕೊಳ್ಳಬೇಕು. ಇದಕ್ಕೆ ಪೂರಕವೆಂಬಂತೆ ಪರಿಪಕ್ವನಾದ ಸಂಸ್ಕಾರವುಳ್ಳ ನರನಿಗೆ ಗುರು ಯಾವರೂಪದಿಂದಾದರೂ ಬರಬಹುದು ಎಂದ ಕುವೆಂಪುರವರ ಮಾತನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇದಕ್ಕೆ ಪುಷ್ಠಿ ಎಂಬಂತೆ ‘ಗುರುವಿನೊಡನೆ ದೇವರೆಡೆಗೆ’ ಎಂಬ ಕುವೆಂಪು ಅವರ ಕೃತಿಯೇ ಇದೆಯಲ್ಲ.
‘ಗುರು’ ಎಂದರೆ ಯಾರು ಅಕ್ಷರ ಕಲಿಸುವವನೇ? ಮಾರ್ಗದರ್ಶನ ನೀಡುವವನೇ? ಅಥವಾ ಗುರಿ ಮುಟ್ಟಿಸುವವನೇ ಎಂಬ ಪ್ರಶ್ನೆಗಳು ಬರುತ್ತವೆ. ಗುರುವಿನ ಕಾರ್ಯವನ್ನು ಇದಮಿತ್ಥಂ ಅಂದರೆ ಇದಿಷ್ಟೇ ಎಂದು ಪೂರ್ಣ ವಿರಾಮ ಇಡಲು ಸಾಧ್ಯವಿಲ್ಲ. ಗುರುವಿಗೆ ವಿಧೇಯನಾಗದೆ ಇರುವವನು ಶಿಷ್ಯನೇ ಅಲ್ಲ. ಎನಗಿಂತ ಕಿರಿಯರಿಲ್ಲ ತಮಗಿಂತ ಹಿರಿಯರಿಲ್ಲ ಎಂಬಂತೆ ಸದಾ ವಿದ್ಯಾರ್ಜಿಸುವವನೇ ಯೋಗ್ಯ ಶಿಷ್ಯ. ಮೊದಲೆಲ್ಲ ಗುರುವನ್ನು ಕಂಡರೆ ಮಾರುದ್ದ ಹೋಗುವವರು ಇದ್ದರು. ಕಾರಣ ‘ಭಯ’ ಹಾಗು ‘ಭಕ್ತಿ’. ಆದರೆ ಇಂದಿನ ವಿದ್ಯಾಭ್ಯಾಸದಲ್ಲಿ ಭಯವಿಲ್ಲ ಭಕ್ತಿ ಮೊದಲೇ ಇಲ್ಲ. ಗುರುಗಳು ವಿದ್ಯಾರ್ಥಿಗಳೊಂದಿಗೆ ಅತೀ ಸಲಿಗೆಯಿಂದ, ಸ್ನೇಹದಿಂದ ವರ್ತಿಸುವುದು ಇದಕ್ಕೆ ಕಾರಣವಿರಬಹುದು.
ತಂದೆಗೂ ಗುರುವಿಗೂ ಅಂತರವುಂಟು, ‘ತಂದೆ ತೋರುವನು ಶ್ರೀ ಗುರುವ, ಗುರು ಬಂಧನ ಕಳೆವ ಎಂದು ಸರ್ವಜ್ಞನು ಗುರುವಿನ ಮಹತ್ವವನ್ನು ತನ್ನ ತ್ರಿಪದಿಯಲ್ಲಿ ಉಲ್ಲೇಖ ಮಾಡಿದ್ದಾನೆ. ‘ಶ್ರೀ ಗುರು ಲಘುವರ್ತನದಲ್ಲಿ ವರ್ತಿಸಿದರೆ ಆಗದು ಅಚಾರ’ ಎಂಬ ಉರಿಲಿಂಗಪೆದ್ದಿಯ ವಚನದ ಸಾಲಿನಂತೆ ಗುರು ತನ್ನ ಹಿರಿತನಕ್ಕೆ ಕುಂದಾಗುವಂತೆ ಎಂದಿಗೂ ನಡೆದುಕೊಳ್ಳಬಾರದು. ಆಧುನೀಕತೆಯನ್ನೂ ಮೈಗೂಡಿಸಿಕೊಂಡು ವಿದ್ಯಾರ್ಥಿಗಳ ಜ್ಞಾನದಾಹವನ್ನು ತೀರಿಸಲು ಸಿದ್ದನಾಗಬೇಕಾಗುತ್ತದೆ. ಪಠ್ಯ ವಿಚಾರ ಮಾತ್ರವಲ್ಲದೆ, ಪಠ್ಯೇತರ, ಜೀವನ ಪಾಠ ಹೇಳುವ ಜವಾಬ್ದಾರಿಯೂ ಗುರುವಿನಲ್ಲಿರುತ್ತದೆ. ಆಮೂಲಕ ಗುರುವಿನ ಸಂಸ್ಕಾರಗಳು ವಿದ್ಯಾರ್ಥಿಗಳೆಡೆಗೂ ಪ್ರವಹಿಸುವಂತಿರಬೇಕಾಗುತ್ತದೆ.
ನೈತಿಕ ಮೌಲ್ಯಗಳು ವಿದ್ಯಾರ್ಥಿಗಳಿಗೆ ಶಿಕ್ಷರಿಂದಲೂ ಬರುತ್ತದೆ. ತರಗತಿಯಲ್ಲಿ ಪಾಠ ಮಾಡುವಾಗ ಆದರ್ಶ ಮಾತುಗಳನ್ನಾಡಿ ಶಾಲಾಕಾಲೇಜುಗಳ ಆವರಣದ ಹೊರಗೆ ಬೇಕಾಬಿಟ್ಟಿ ವರ್ತಿಸಿದರೆ ವಿದ್ಯಾರ್ಥಿಗಳಿಗೆ ಪಾಠ ಹೇಳುವ ಯಾವ ನೈತಿಕ ಹಕ್ಕೂ ಉಳಿಯುವುದಿಲ್ಲ ನುಡಿದ ಹಾಗೆ ನಡೆದುಕೊಳ್ಳಬೇಕಾದ ವ್ಯಕ್ತಿತ್ವ ಗುರುಗಳಲ್ಲಿ ಅಗತ್ಯವಾಗಿ ಇರಬೇಕಾಗುತ್ತದೆ. ಶಿಕ್ಷಕರು ಎಂದರೆ ಸಿನಿಮಾ ನಾಯ-ನಾಯಕಿಯರಲ್ಲ. ನನಗೆ ನನ್ನನ್ನು ಮೆಚ್ಚುವಂತಹ ವಿದ್ಯಾರ್ಥಿಗಳರಬೇಕು ಅವರದೇ ಒಂದು ಗುಂಪು ನನ್ನನ್ನು ಹಿಂಬಾಲಿಸಬೇಕು. ನಾನು ಮಾಡುವ ಫಾಠವೇ ಶ್ರೇಷ್ಠ ಬೇರೆಯವರೆಲ್ಲಾ ಕಳಪೆ ಎಂಬ ಭಾವನೆಯೂ ಕೆಲವರಲ್ಲಿ ಇರುತ್ತದೆ. ಹಾಗಾಗಿ ಮಕ್ಕಳಲ್ಲಿ ಗುಂಪುಗಾರಿಕೆಯನ್ನೂ ಶಿಕ್ಷಕರಲ್ಲಿ ವೈಮನಸ್ಸನ್ನು ಕಟ್ಟಿಕೊಂಡು ಕಲಿಕಾ ವಾತಾವರಣದಲ್ಲಿ ನೆಮ್ಮದಿ ಇಲ್ಲದ ವಾತಾವರಣ ಸೃಷ್ಠಿಸಿಬಿಡುತ್ತಾರೆ. ಆದರ್ಶ ಗುರುವಾದವನು ಎಂದಿಗೂ ಬೇಜವಾಬ್ದಾರಿಯಿಂದ ವರ್ತಿಸಬಾರದು.
ಸದಾ ಕಾಲ ವಿದ್ಯಾರ್ಥಿಗಳ ಏಳಿಗೆಯ ಬಗ್ಗೆ ಚಿಂತಿಸುವಂತವವರಾಗಬೇಕು.
ಸರಳತೆ ಆತನಲ್ಲಿ ಮೈಗೂಡಿರಬೇಕು.
ವಿದ್ಯಾರ್ಥಿಗಳನ್ನು ಸ್ನೇಹಿತರಂತೆ ಕಾಣಬೇಕು ನಿಜ ಆದರೆ ಸಲಿಗೆ ಅಲ್ಲಿ ಅನಗತ್ಯ. ವಿದ್ಯಾರ್ಥಿಗಳ ಬೆನ್ನುತಟ್ಟಿ ಬುದ್ಧಿವಾದ ಹೇಳಬೇಕು ಆದರೆ ಬೆನ್ನು ತಟ್ಟಿದ ಆ ಕೈ ಹೆಗಲವರೆಗೆ ಬಂದರೆ ಅದು ಜವಾಬ್ದಾರಿಯ ಲಕ್ಷಣವಲ್ಲ. ಗುರು ಮತ್ತು ಶಿಷ್ಯರ ಸಂಬಂಧದಲ್ಲಿ ವೈಯಕ್ತಿಕ ವಿಚಾರಗಳು ಚರ್ಚೆಗೆ ಬರುವಂತಿಲ್ಲ. ತರಗತಿಗಳಲ್ಲಿ ಪಾಠ ಮಾಡುವಾಗ ಸಹಶಿಕ್ಷಕರ ಕುರಿತು ಹೊಗಳಿಕೆ, ತೆಗಳಿಕೆ ವಿಚಾರ ವಿನಿಮಯ ಇವುಗಳು ಇರಬಾರದು.
ತಂದೆ-ತಾಯಿ-ಗುರು ಈ ಮೂರು ತ್ರಿಭುಜದಂತೆ ಆದರ್ಶದ ಪಾಠವನ್ನು ಮಕ್ಕಳಿಗೆ ಹೇಳಬೇಕು. ತಂದೆ-ತಾಯಿಗಳ ನಂತರ ಮಕ್ಕಳು ಶಿಕ್ಷಕರ ಬಳಿಗೆ ಹೋಗುತ್ತಾರೆ ಹಾಗಾಗಿ ನಿಜವಾದ ಪೋಷಕತ್ವದಗುಣವನ್ನು ವಿದ್ಯಾರ್ಥಿಗಳಿಗೆ ತೋರಿಸಬೇಕು. ಕಲಿಕೆಗೆ ಪ್ರೋತ್ಸಾಹ, ಆತ್ಮವಿಶ್ವಾಸ ತುಂಬುವ ಮಾತುಗಳನ್ನಾಡಬೇಕು. ತಂದೆ ಮಕ್ಕಳಿಗೂ, ತಾಯಿ ಮಕ್ಕಳಿಗೂ ಅಂತರವಿರುವಂತೆ ಗುರು-ಶಿಷ್ಯರಲ್ಲೂ ಗೌರವದ ಅಂತರವಿರಬೇಕು. ವಿದ್ಯಾರ್ಥಿಗಳನ್ನು ತನ್ನ ಹಿಡಿತದಲ್ಲಿರಿಸಿಕೊಳ್ಳುವವನು ಗುರು ಎಂದಾದರೆ ಹೇಗೆ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಅದಕ್ಕೆ ಗುರುವಾದವನು ನಾಯಕನಾಗಿ ಸಾಂಸ್ಕೃತಿಕ, ಶೈಕ್ಷಣಿಕ ರಾಯಭಾರಿಯಾಗಿ ಮಕ್ಕಳನ್ನು ಮುನ್ನಡೆಸಬೇಕಾಗುತ್ತದೆ. ತೀರ ಶಿಸ್ತಿನಿಂದ ಬುದ್ಧಿ ಕಲಿಸುತ್ತೇವೆ ಎಂಬ ಅಹಂಭಾವವೂ ಅಲ್ಲಿ ಪ್ರಯೋಜನಕ್ಕೆ ಬಾರದು. ತಾಯಿ ಮಗುವಿಗೆ ನಡೆಯುವುದನ್ನು ಕಲಿಸುವಾಗ ಕೈ ಹಿಡಿದರೂ ಹಿಡಿಯದಂತೆ ಆ ಮಗು ದಟ್ಟಡಿಡುತ್ತಾ ಮುಂದಕ್ಕೆ ಹೋಗಲು ಕೈ ಬಿಟ್ಟರೂ ಬಿಡದಂತೆ ಹೇಗೆ ಹಿಡಿದಿರುತ್ತಾಳೊ ಹಾಗೆ ವಿದ್ಯಾರ್ಥಿಗಳನ್ನು ಅಂಕೆಯಲ್ಲಿ ಇಟ್ಟುಕೊಳ್ಳುವುದು ಅವಶ್ಯವಾಗುತ್ತದೆ.
ಸರ್ವಜ್ಞನು ಗುರುವಿನ ಬಗ್ಗೆ ಹೇಳುವಾಗ “ಗುರುವಿಗೆ ಸಾಟಿಯಾದವರು ಯಾರು ಇಲ್ಲ ಗುರುರಾಯ ನರರೊಳಗೆಲ್ಲ” ಎಂಬ ಮಾತನ್ನು ಉಲ್ಲೇಖ ಮಾಡಿದ್ದಾನೆ. ಗುರುವಿನ ಉಪದೇಶದಿಂದ ಮುಕ್ತಿ ದೊರೆಯುತ್ತದೆ ಎಂಬುದು ಸರ್ವಜ್ಞನ ನಂಬಿಕೆ. ತರಗತಿಯೆಂದರೆ ಒಂದೇ ರೀತಿಯ ವಿದ್ಯಾರ್ಥಿಗಳು ಅಲ್ಲಿರುತ್ತಾರೆ ಎಂಬ ಬಯಕೆ ನಮ್ಮಲ್ಲಿರಬಾರದು. ಆಸಕ್ತಿ ಇರದವರು, ಸಮಯ ಕಳೆದುಕೊಂಡು ಹೋಗಲು, ಮನೆಯಲ್ಲಿ ಮೈಬಗ್ಗಿಸಿ ದುಡಿಯಬೇಕಲ್ಲ ಎಂಬ ಕಷ್ಟದಿಂದ ಬರುವ ವಿದ್ಯಾರ್ಥಿ ಸಮೂಹವೂ ಅಲ್ಲಿರುತ್ತದೆ. ಮೊದಲಿಗೆ ಎಲ್ಲರಲ್ಲಿಯೂ ಕಲಿಕೆಯ ಬಗ್ಗೆ ಆಸಕ್ತಿ ಮೂಡಿಸುವಂತಹ ಕೆಲಸ, ಬರವಣಿಗೆ ಅವರಿಂದ ಮಾಡಿಸಬೇಕಾಗುತ್ತದೆ. ತರಗತಿಗಳಲ್ಲಿ ಮಜಾ ತೆಗೆದುಕೊಳ್ಳಲು ಬರುವ ವಿದ್ಯಾರ್ಥಿವರ್ಗವೇ ಇರುತ್ತದೆ. ಅಂತಹವರಿಗೆ ನಿರ್ಲಕ್ಷ್ಯವೇ ಮನೆಮದ್ದು.
ವಿದ್ಯಾರ್ಥಿಗಳಲ್ಲಿ ಸ್ವಾರ್ಥ, ಅಸೂಯೆ, ಅತಿ ಬುದ್ಧಿವಂತಿಕೆಯ ಅಹಂ ಜೊತೆಗೆ ಕಲಿಕೆಯ ವಿಚಾರ, ಪ್ರತಿಭೇಯವಿಚಾರ, ಸೌಂದರ್ಯದ ವಿಚಾರ, ಪ್ರೀತಿಪ್ರೇಮಗಳ ವಿಚಾರಗಳವಾಗಿ ಉಂಟಾಗುವ ಗುಂಪುಗಾರಿಕೆಯನ್ನು ಕಡಿಮೆ ಮಾಡಬೇಕಾಗುತ್ತದೆ. ಓದು-ಬರಹ ಶಿಷ್ಟಾಚಾರ ಹೇಳುವ ಗುರುಗಳು ಅಷ್ಟಕ್ಕೆ ತನ್ನ ಮಾತನ್ನು ಮಿತಿಗೊಳಿಸದೆ. ಅನುಭವದ ಪಾಠ ಹೇಳುವವರೇ ನಿಜವಾದ ಗುರುಗಳು, ಮಕ್ಕಳಿಗೆ ಪಾಠ ಮಾಡುವಾಗ ತೀರಾ ನಿಷ್ಠುರತೆ ಅಥವಾ ತೀರ ಸಲುಗೆ ಅಪಾಯಕಾರಿ. ಆಟ, ಪಾಠ ಮುದ್ದು-ಗುದ್ದು ಮಿಶ್ರಿತ ಭೋಧನೆ ಮಾಡುವ ಭೋದಕ ಆದರ್ಶ ಪ್ರಾಯನಾಗುತ್ತಾನೆ. ಇದೆಲ್ಲಕ್ಕೂ ಮಿಗಿಲಾದದ್ದು ಆದರ್ಶ ಗುರುವಾದವನು ವಿದ್ಯಾರ್ಥಿಗಳಲ್ಲಿ ಭಿನ್ನ-ಭೇದ ಮಾಡದಿರುವುದು.
ಶಿಕ್ಷೆ ನೀಡುವುದು ಶಿಕ್ಷಕನ ಕೆಲಸ ಅಲ್ಲ ವಿದ್ಯಾರ್ಥಿಗಳಿಗೆ ಕುತೂಹಲ ಬರುವಂತೆ ಪಾಠ ಮಾಡಬೇಕು. ಪೂರ್ವ ತಯಾರಿಯಿರಬೇಕು ಇನ್ಸ್ಟಂಟ್ ಫುಡ್ ನಂತೆ ಸಿಗುವ ಗೈಡ್, ಡೈಜೆಸ್ಟ್ಗಳನ್ನು ನೋಡಿ ಪಾಠ ಮಾಡುವ ಬದಲು ಮೂಲ ಪಠ್ಯ ಹಾಗು ಅದಕ್ಕೆ ಸಂವಾದಿಯಾಗಿ ಪರಾಮನಿರ್ಶನ ಗ್ರಂಥಗಳನ್ನು, ಲೇಖನಗಳನ್ನು ಓದಿ ಪಾಠ ಹೇಳಿದರೆ ಒಳ್ಳೆಯ ಶಿಕ್ಷಕನ ವರ್ಚಸ್ಸು ಹೆಚ್ಚುತ್ತದೆ. ಕಂಪ್ಯೂಟರಿನಲ್ಲಿ ಸಾಫ್ಟ್ವೇರ್ಗಳು, ಮೊಬೈಲ್ನಲ್ಲಿ ಆ್ಯಪ್ಗಳು ಅಪ್ಡೇಟ್ ಆಗುವಂತೆ ಶಿಕ್ಷಕರು ಸದಾ ಅಧ್ಯಯನ ಶೀಲರಾಗಬೇಕು. ಇಲ್ಲವೆ ಬದಲಾದ ವಿದ್ಯಾಮಾನಗಳನ್ನು ಅರಿಯದೆ ವಿಷೇಧಿಸಿದ ಔಷಧಿಯನ್ನು ರೋಗಿಗೆ ಬರೆದುಕೊಡುವ ವೈದ್ಯರಿಗೆ ಸಮನಾಗಿ ನಗೆ ಪಾಟಲಿಗೀಡಬೇಕಾಗುತ್ತದೆ.
ತರಗತಿಗಳಲ್ಲಿ ಆದರ್ಶ ಶಿಕ್ಷಕವಾದವನು ತರಗತಿಗಳನ್ನು ತೆಗೆದುಕೊಳ್ಳುವಾಗ ಆತ್ಮಗಳ ಸಮ್ಮೋಹನವಾಗಬೇಕು. ಅಂದರೆ ಒಂದು ರೀತಿಯ ಸುಮಧುರ ಭಾಂದವ್ಯ ಗುರು ಹಾಗು ಶಿಷ್ಯರ ನಡುವೆ ಏರ್ಪಡಬೇಕು. ವಿದ್ಯೆಯನ್ನು ಕಲಿಯಬೇಕಾದವನಿಗೆ ಸಮರ್ಥ ಗುರುವಿನ ಆಯ್ಕೆ ಅನಿವಾರ್ಯವಾಗಿರುತ್ತದೆ. ಅಂತೆಯೇ ಗುರು ಸದಾ ಕಾಲ ಯೋಗ್ಯ ಶಿಷ್ಯನ ಶೋಧನೆಯಲ್ಲಿ ತೊಡಗಬೇಕು. ಅರ್ಥಾತ್ ಅಂತಹ ಯೋಗ್ಯತೆಯನ್ನು ತಂದುಕೊಡಬೇಕಾಗುತ್ತದೆ. “ಕಿರಾತರು, ಹುಟ್ಟಿ ಪುರಾತರು ಅಡಗಿದರು” ಎನ್ನುವಂತೆ ಕೆಲವು ಕೆಟ್ಟ ವಿದ್ಯಾರ್ಥಿಗಳಿಂದ ಹಲವು ಒಳ್ಳೆಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅಡ್ಡಿಯಾಗಬಾರದು. ಗೊಂದಲಮಯ ಹೇಳಿಕೆಗಳು ಅಭಿಪ್ರಾಯಗಳ ವಿದ್ಯಾರ್ಥಿಗಳನ್ನು ದಿಕ್ಕುತಪ್ಪಿಸುತ್ತವೆ ಅದರ ಕಡೆ ಗಮನವಿರಬೇಕು.
ಸರ್ವಜ್ಞ ತನ್ನೊಳಗೆ ‘ಹರ’ ಇದ್ದುದನ್ನು ಗುರು ತೋರುವುದು ಎಂದು ವಿಶೇಷವಾಗಿ ಕಂಡುಕೊಂಡಿದೆ ಹೇಳಿ ಗುರುವಿನ ಕರಣವೇ ಶಿವನ ದರ್ಶನಕ್ಕೆ ಕಾರಣವೆಂಬುದನ್ನು ಹೇಳಿದ್ದಾನೆ. ಅವನ ಪ್ರಕಾರ ಊರಿಗೆ ದಾರಿಯನ್ನು ಯಾರಾದರೂ ತೋರಬಹುದು ಆದರೆ ಸಾರಾಯಮಪ್ಪ ನಿಜವ ತೊರುವುದು ಗುರುಮಾತ್ರ. ಆದರ್ಶ ಶಿಕ್ಷಕನೆಂದರೆ ಆತ ವಿಷಯ ಕುತೊಹಲಿಯಾಗಿರಬೇಕು, ಕಷ್ಟಪಡಬೇಕು, ನಿರ್ವಂಚನೆಯಿಂದ ಪಾಠ ಮಾಡಬೇಕು.
ಬೋಧನಾವೃತ್ತಿಯಂತಹ ಪವಿತ್ರ ವೃತ್ತಿಯನ್ನು ಹಣದಿಂದ ಅಳೆಯುವುದು ಶತಮುರ್ಖತನ ವಿದ್ಯೆ ತಂದೆ ತಾಯಿ, ಬುದ್ಧಿ ಸೋದರಮಾವ ಎಂಬ ಮಾತು ನಮ್ಮಲ್ಲಿ ಬಳಕೆಯಲ್ಲಿದೆ ಅಂತೆಯೇ ಆದರ್ಶಗುರು ವಿದ್ಯೆ ಬುದ್ಧಿ ಎರಡೂ ಆಗಬೇಕಾಗುತ್ತದೆ. ಮಾತಿಗೆ ನಿಲುಕದ ಆತ್ಮಸಂತೋಷ ಮತ್ತು ಬೋಧನಾ ತೃಪ್ತಿಯನ್ನು ಅನುಭವಿಸಬೇಕು.
ಹೆಚ್ಚಿನ ಬರಹಗಳಿಗಾಗಿ
ಗಣೇಶನ ಕೈಯಲ್ಲಿಯ ಲಾಡು
ಹರಿಹರಪುರ ಗ್ರಾಮವೂ, ಲೊವೆಂಥಾಲ್ ಎಂಬ ಪಾದ್ರಿಯೂ..
ಬೇಂದ್ರೆ ಸಂಗೀತ: ಒಂದು ವಿಶ್ಲೇಷಣೆ