ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಆಫ್ರಿಕಾದ ಜಾನಪದ ಕಥೆ:ಸೂರ್ಯ ಮತ್ತು ನೀರು

ಹಲೋ ಮಕ್ಕಳೇ ಹೇಗಿದ್ದೀರಿ..
ನಾನು ಅಮೃತಾ ಶೆಟ್ಟಿ.. ನಸುಕು.ಕಾಮ್ ಮಕ್ಕಳ ಕಥಾ ಮಾಲಿಕೆಯಲ್ಲಿ…

ನೀವು ಆಕಾಶದಲ್ಲಿ ಸೂರ್ಯ ಮತ್ತು ಚಂದ್ರರನ್ನು ಕಂಡಿದ್ದೀರಷ್ಟೆ..ಈ ಸೂರ್ಯಚಂದ್ರರು ಆಕಾಶದ ಮೇಲೇ ಏಕೆ ಇರುವರು..ಕೆಳಗೆ ಭೂಮಿಯ ಮೇಲೆ ಏಕಿಲ್ಲ ಎಂಬುದರ ಹಿಂದಿನ ಒಂದು ಜಾನಪದ ಕಥೆಯನ್ನು ತಿಳಿದುಕೊಳ್ಳೋಣ.

ಓದು ಶ್ರೀಮತಿ ಅಮೃತಾ ಶೆಟ್ಟಿ;

ಅನುವಾದ ಬರಹ: ವಿಜಯ್ ದಾರಿಹೋಕ

ಅನೇಕ ವರ್ಷಗಳ ಹಿಂದೆ ಸೂರ್ಯ ಮತ್ತು ನೀರು ಒಳ್ಳೆಯ ಸ್ನೇಹಿತರಾಗಿದ್ದು ಭೂಮಿಯ ಮೇಲೆಯೆ ವಾಸವಾಗಿದ್ದರಂತೆ.
ಸೂರ್ಯ ಅನೇಕ ಬಾರಿ ನೀರಿನ ಮನೆಗೆ ಭೇಟಿ ಕೊಡುತ್ತಿದ್ದ. ಆದರೆ ನೀರು ಮಾತ್ರ ಯಾವತ್ತೂ ಸೂರ್ಯನಿದ್ದಲ್ಲಿಗೆ ಬರುತ್ತಿರಲಿಲ್ಲ.
ಒಂದು ದಿನ ಸೂರ್ಯ ನೀರನ್ನು ಕುರಿತು ಕೇಳಿಯೇ ಬಿಡುತ್ತಾನೆ. “ಗೆಳೆಯ ನೀನೇಕೆ ನನ್ನ ಮನೆಗೆ ಒಮ್ಮೆಯೂ ಬರುವುದಿಲ್ಲ”
ಆಗ ನೀರು ಹೇಳಿತಂತೆ, ” ಸೂರ್ಯನೇ.. ನಿನ್ನ ಮನೆ ತುಂಬಾ ಚಿಕ್ಕದು. ನಾನು ಮತ್ತು ನನ್ನ ಕಡೆಯವರು ಬಂದರೆ ನಿಮಗೇ ಜಾಗ ಇರುವುದಿಲ್ಲ. ಹಾಗಾಗಿ ನಾವು ಬರಬೇಕಾದರೆ ನಿನ್ನ ಮನೆ ತುಂಬಾ ದೊಡ್ಡದಿರಬೇಕು. ನಾನು ಮತ್ತು ನನ್ನವರಿಗೆ ಸಾಕಾಗುವಷ್ಟು ದೊಡ್ಡದಿರಬೇಕು..”
” ಓಹೋ ಅದಕ್ಕೇನಂತೆ” ಎಂದು ಸೂರ್ಯ ತನ್ನ ಮನೆಗೆ ಹಿಂತಿರುಗಿ ತನಗಾಗಿ ಕಾಯುತ್ತಿದ್ದ ಹೆಂಡತಿ ಚಂದ್ರನಿಗೆ ಎಲ್ಲಾ ವಿಷಯವನ್ನು ತಿಳಿಸುತ್ತಾನೆ.
ಕೆಲ ದಿನಗಳಲ್ಲೆ, ಸೂರ್ಯ ಮತ್ತು ಚಂದ್ರರು ಇಬ್ಬರು ಸೇರಿ ಒಂದು ದೊಡ್ಡ ಮನೆಯನ್ನು ಕಟ್ಟುತ್ತಾರೆ. ನೀರನ್ನು ತಮ್ಮ ಮನೆಗೆ ಬರುವಂತೆ ಆಹ್ವಾನಿಸುತ್ತಾರೆ.

ಒಂದು ದಿನ ನೀರು ತನ್ನ ಪರಿವಾರದೊಂದಿಗೆ ಸೂರ್ಯಚಂದ್ರರ ಮನೆಗೆ ಆಗಮಿಸಿತು. ಬಂದವರಲ್ಲಿ ಒಬ್ಬ ಕೇಳಿದ “ನಾವು ಒಳಕ್ಕೆ ಬಂದರೆ ತೊಂದರೆ ಇಲ್ಲ ತಾನೆ.?”
ಅದಕ್ಕೆ ಸೂರ್ಯ ” ಓಹೋ, ಧಾರಾಳವಾಗಿ ಬನ್ನಿ, ಸ್ವಾಗತ” ಎನ್ನುತ್ತಾನೆ.
ನೀರು ಮನೆಯ ಒಳಗೆ ಹರಿಯಿತು.
ನೀರಿನ ಜೊತೆಗೆ ಮೀನುಗಳು,ಜಲಚರಗಳು ಒಳಕ್ಕೆ ಬಂದವು.
ಮೊಣಕಾಲಿನ ವರೆಗೂ ನೀರು!
ನೀರಿನ ಪರಿವಾರದವ ಮತ್ತೆ ಕೇಳಿದ. ” ಇನ್ನೂ ನೀರು ಒಳಕ್ಕೆ ಬಂದರೆ ತೊಂದರೆ ಇಲ್ಲ ತಾನೇ?”
ಅದಕ್ಕೆ ಸೂರ್ಯಚಂದ್ರರು “ಪರವಾಗಿಲ್ಲ, ಬನ್ನಿ” ಎನ್ನುತ್ತಾರೆ.
ಈ ಬಾರಿ ನೀರು ತಲೆಯ ಮಟ್ಟಕ್ಕೆ ಏರಿತು.
ನೀರಿನ ಕಡೆಯವ ಮತ್ತೆ ಕೇಳಿದ,”ಇನ್ನೂ ಕೆಲವರು ಬರಬಹುದಾ?”
ಆಗಲಿ ಎಂದರು ಸೂರ್ಯ-ಚಂದ್ರರು.
ಈ ಬಾರಿ ಇನ್ನಷ್ಟು ನೀರು ಒಳಕ್ಕೆ ಬಂದಂತೆ ತುಂಬಿ ತುಳುಕಿ, ಸೂರ್ಯಚಂದ್ರರು ಜಾಗವಿಲ್ಲದೇ, ಮನೆಯ ಛಾವಣಿಯ ಮೇಲೆ ಹೋಗಿ ಕೂರಬೇಕಾಯ್ತು.
ಆಗ ನೀರಿನ ಕಡೆಯವ ಮತ್ತೆ ಕೇಳಿದ “ಇನ್ನೂ ಬಂದರೆ ಕಷ್ಟವಾಗಬಹುದೆನೋ..”
ಸೂರ್ಯಚಂದ್ರರು,” ಹಾಗೇನಿಲ್ಲ ಬರಲಿ, ನೀವು ಅತಿಥಿಗಳು” ಎನ್ನುತ್ತಾರೆ.
ಇದೀಗ ನೀರು ಮತ್ತೆ ಛಾವಣಿಯ ವರೆಗೂ ತಲುಪಿ ತುಂಬಿ ಹರಿಯತೊಡಗಿತು.
ಆಗ ಸೂರ್ಯ-ಚಂದ್ರರಿಗೆ ಬೇರೆ ವಿಧಿಯಿಲ್ಲದೆ ಆಕಾಶಕ್ಕೇ ಹೋಗಿ ಕೂರಬೇಕಾಗಿತ್ತು. ಅಂದಿನಿಂದ ಇಂದಿನವರೆಗೂ ಸೂರ್ಯಚಂದ್ರರು ಆಕಾಶದಲ್ಲಿ ವಾಸವಾಗಿದ್ದರೆ, ನೀರು ಭೂಮಿಯ ಮೇಲೆ ಉಳಿಯಿತಂತೆ..


ಇದು ಆಫ್ರಿಕಾದ ಒಂದು ಜಾನಪದ ಕಥೆ..
ಮಕ್ಕಳೇ, ಮುಂದಿನ ಮಾಲಿಕೆಯಲ್ಲಿ ಇನ್ನೊಂದು ಹೊಸ ಜಾನಪದ ಕಥೆಯೊಂದಿಗೆ ಬರುತ್ತೇನೆ.
ನಿಮ್ಮ ಅಮೃತ ಶೆಟ್ಟಿ..