ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಆಮಿನಾದ ಮತ್ತು ಮಿಸ್ರಿ ಮಾಲೆ

ಆಮಿನಾದಳಿಗೆ ಮಿಸ್ರಿ ಮಾಲೆಯ ಕನಸು... ಅದಕ್ಕಾಗೇ ಸಾವಿರಾರು ರೂಪಾಯಿ ಕಲೆ ಹಾಕುತ್ತಿದ್ದಾಳೆ... ಇನ್ನೇನು ಕೂಡಿ ಬಂತು ಅನ್ನುವಷ್ಟರಲ್ಲೇ ಏನಾಯ್ತು.. ಲೇಖಕ ಅನ್ಸಾರಿಯವರ ಹೃದಯ ಸ್ಪರ್ಶಿ ಕಥನ ವಿಥ್ ಪಾಸಿಟಿವ್ ವೈಬ್ಸ್...
ಕೆ. ಎ. ಎಂ ಅನ್ಸಾರಿ
ಇತ್ತೀಚಿನ ಬರಹಗಳು: ಕೆ. ಎ. ಎಂ ಅನ್ಸಾರಿ (ಎಲ್ಲವನ್ನು ಓದಿ)

ಮುಸ್ಸಂಜೆಯಾಗುತ್ತಲೇ ಮನೆಯತ್ತ ಅಲ್ಹಮ್ದುಲಿಲ್ಲಾ ಎಂದು ಒಳನುಗ್ಗುವ ಕಾದ್ರಿ ಕಾಕ.
ಆತನ ಬರುವಿಕೆಯನ್ನು ಕಾಯುತ್ತಿರುವ ಆಮಿನಾದ.
ಆ ಕಾಯುವಿಕೆಯ ಹಿಂದೆ ಒಂದು ಕನಸಿದೆ.
ಆಕೆಗೆ ಒಂದು ಮಿಸ್ರಿ ಮಾಲೆ ಖರೀದಿಸಬೇಕು.

ತರಕಾರಿ ಗಾಡಿ ತಳ್ಳುತ್ತಾ ಬಂದವನು ಕೊನೆಗೆ ಹಿತ್ತಿಲ ಮೂಲೆಯಲ್ಲಿ ಗಾಡಿಯ ಗಾಲಿಗಳಿಗೆ ವಿಶ್ರಾಂತಿ ಕೊಡುವ ಹೊತ್ತಲ್ಲಿ ಆಡುಗಳು ಮೇ ಮೇ ಎನ್ನುವುದನ್ನು ಮರೆಯುತ್ತಿರಲಿಲ್ಲ.
ಅವುಗಳಿಗೂ ಗೊತ್ತು .. ಬಾಡಿದ ತರಕಾರಿಯೋ, ಸೊಪ್ಪೋ ಏನಾದರೂ ಕಾದ್ರಿ ಕಾಕ ನಮಗೆ ತಂದು ಕೊಡುತ್ತಾನೆ ಎಂಬ ಸತ್ಯ.

ಗಾಡಿನಿಲ್ಲಿಸಿ ಮನೆಗೆ ನುಗ್ಗುವ ಮೊದಲು ಒಂದು ದೊಡ್ಡ ಕೂಗು ದೇವಕಿಯಕ್ಕಾ …

ಈ ದೇವಕಿ ಪಕ್ಕದ ಮನೆಯವಳು. ಇದ್ದ ಒಬ್ಬಳೇ ಮಗಳನ್ನು ಮದುವೆ ಮಾಡಿಸಿ ಕೊಟ್ಟಮೇಲೆ ತನ್ನ ಮುರುಕು ಗುಡಿಸಲಲ್ಲಿಯೇ ದಿನ ನೂಕುವವಳು.
ದಿನವೂ ತರಕಾರಿ ಹೇಗೂ ಕಾದ್ರಿ ಕಾಕ ಕೊಡುತ್ತಾನೆ. ಜೀವನದ ಮುಸ್ಸಂಜೆಯಲ್ಲಿ ಇದ್ದರೂ ಕೂಗಳತೆ ದೂರದ ಆಮಿನಾದ ಜತೆಯಿದ್ದಾಳೆ ಎನ್ನುವ ಧೈರ್ಯ ಬೇರೆ.

ನಂತರ ಕುರುಚಲು ಗಡ್ಡವನ್ನು ಸವರುತ್ತಾ ಒಂದು ಕೂಗಿದೆ …
ಆಮಿನಾ … ಒಂದು ಕಟ್ಟನ್ ಚಾಯ ಹಾಕು …

ಏನು ಗಾಢ ಕೆಲಸದಲ್ಲಿದ್ದರೂ ಆ ಗಾಡಿಯ ಸದ್ದು ಆಕೆಯನ್ನು ಎಬ್ಬಿಸಿಯೇ ಬಿಡುತ್ತದೆ. ಆಮಿನಾ ಎಂಬ ಕೂಗು ಕೇಳುವ ಮೊದಲೇ ಆಕೆ ಒಲೆಯಲ್ಲಿ ನೀರಿಟ್ಟಿರುತ್ತಾಳೆ. ಅದು ಆಕೆಗೆ ಅಭ್ಯಾಸವಾಗಿದೆ ಕೂಡಾ.

ತಲೆಯಿಂದ ಟೊಪ್ಪಿ ತೆಗೆದು ಗೋಡೆಯ ಆಣಿಗೆ ನೇತಾಡಿಸಿ ಯಾ ಅಲ್ಲಾಹ್ ಎಂದು ತನ್ನ ಅಂಗಿ ಬಿಚ್ಚಿಲು ನೋಡುವಾಗ ಇಲ್ಲಿ ಕೊಡಿ ಅಂತ ಅದನ್ನು ತೆಗೆದುಕೊಳ್ಳಲು ಆಮಿನಾ ಯಾವಾಗಲೂ ಕಾದೇ ಇರುತ್ತಾಳೆ.

ಮೂಲೆಯ ಮುರುಕಲು ಖುರ್ಚಿಯಲ್ಲಿ ಕುಳಿತು ತನ್ನ ಪಚ್ಛೆ ಬೆಲ್ಟಿನ ಒಂದೊಂದು ಕೋಣೆಯಿಂದ ಐದೋ ಹತ್ತೋ ನೋಟು ಪೀಕಿಸುವಾಗ ಆಮಿನಾ ಕುತೂಹಲದಿಂದ ನೋಡುತ್ತಾ ಇರುತ್ತಿದ್ದಳು ..

ಕೊನೆಗೆ ಇವತ್ತಿನದ್ದು ಇಷ್ಟೇ ಎಂದು ಬೆಲ್ಟ್ ನ್ನು ಸೊಂಟದಿಂದ ಬಿಚ್ಚಿ ಆಕೆಯಲ್ಲಿ ಕೊಡುವಾಗ ಕೆಲವೊಮ್ಮೆ ನಿರಾಸೆಯೂ ಆಗುವುದುಂಟು.
ಆಕೆ ನೋಟನ್ನು ಒಂದೊಂದಾಗಿ ಎಣಿಸತೊಡಗುತ್ತಿದ್ದಳು ..
ಹತ್ತು .. ಇಪ್ಪತ್ತು ಮೂವತ್ತು. ಎಲ್ಲಿಯಾದರೂ ನೂರು ರೂಪಾಯಿಯ ಉಳಿತಾಯವಾದರೆ ಸಾಕು ಅಂದು ಆಕೆಯ ಹಬ್ಬದ ದಿನ.

ತಿಂಗಳ ಮೊದಲ ವಾರ ದೇವಕಿಯ ಕೈ ಗೆ ಹತ್ತು ಇಪ್ಪತ್ತರ ನೋಟು ಕೊಟ್ಟು ಕಳುಹಿಸಿ ಇದನ್ನು ಐನೂರರ ಒಂದು ನೋಟು ಮಾಡಿ ತಗೊಂಬಾ ಎನ್ನುವುದನ್ನು ಮರೆಯುತ್ತಿರಲಿಲ್ಲ.
ದೇವಕಿಗೂ ಗೊತ್ತು .. ಆಕೆ ಕೂಡಿಡುವ ಕಾಸಿನ ಹಿಂದೆ ದೊಡ್ಡದೊಂದು ಕನಸಿದೆ …

ಅಲ್ಲ ಆಮಿನಾದಾ ಈ ಚಿಲ್ಲರೆಯನ್ನು ಯಾಕೆ ನೋಟು ಮಾಡಿ ಮನೆಯಲ್ಲಿ ಇಡುತ್ತೀಯಾ .. ನಿನಗೆ ಬೇಂಕು ಎಕೌಂಟು ಮಾಡಬಾರದೇ ..

ನಾನು ಹೇಗೂ ವಿಧವಾ ಪಿಂಚಣಿಗೆ ತಿಂಗಳು ತಿಂಗಳು ಬೇಂಕಿಗೆ ಹೋಗುತ್ತೇನೆ .. ನೀನೂ ನನ್ನೊಂದಿಗೆ ಬರಬಹುದಲ್ಲವೇ ..

ಆಗ ಆಮಿನಾ ಹೇಳುತ್ತಿದ್ದ ಮಾತು ಕೇಳಿ ಕೇಳಿ ದೇವಕಿಗೂ ಸಾಕಾಗಿ ಹೋಗಿತ್ತು ..

ಯಾ ಪಡ್ಚೊನೇ … ನಮಗೆ ಬೇಂಕು ಹರಾಮು ಅಂತ ಎಷ್ಟು ಸಲ ನಿನ್ನಲ್ಲಿ ಹೇಳೂದು ..

ಸೊಂಟದಲ್ಲಿ ನೇತಾಡುವ ಚಿಕ್ಕಕೈ ಚೀಲದಲ್ಲಿ ಆಮಿನಾದ ಕೊಟ್ಟ ಚಿಲ್ಲರೆ ಮತ್ತು ಐದು ಹತ್ತರ ನೋಟುಗಳನ್ನು ತುರುಕಿಸಿ ದೇವಕಿ ಸೀದಾ ಪೇಟೆಗೆ ಹೆಜ್ಜೆ ಹಾಕಿದಳು.

ಗೋಡೆಗಡಿಯಾರ ಟೈಮ್ ಟೈಮ್ ಟೈಮ್ ಎಂದು ಮೂರು ಸಲ ಬಡಿಯಿತು…
ಆಡಿನ ಕೆಚ್ಚಲಿಗೆ ನೀರು ಹಾಕಿ ತೊಳೆದು ಸ್ವಲ್ಪ ಹಾಲು ಕರೆಯಬೇಕು… ಅದಕ್ಕಿನ್ನೂ ಸಮಯವಿದೆ..
ಎಲೆಅಡಿಕೆ ಜಗಿಯುತ್ತಾ ಆಮಿನಾದ ಜಗಲಿಯಲ್ಲಿ ಕೂತು ದೇವಕಿಗಾಗಿ ಕಾಯುತ್ತಿದ್ದಳು.

ಬಿಡಿಸಿಟ್ಟ ಛತ್ರಿಯನ್ನು ಮಡಚುತ್ತಾ ದೇವಕಿ ಆಮಿನಾದಳ ಅಂಗಳಕ್ಕೆ ಕಾಲಿಟ್ಟಳು.

ಜಗಲಿಯಲ್ಲಿ ಕೂತು ತನ್ನ ಮುಟ್ಟಳೆಯ ಒಳಗಿದ್ದ ಚಿಕ್ಕ ಕಿಸೆ ಯಿಂದ 500 ರ ನಾಲ್ಕು ನೋಟು ಆಮಿನಾದಳ ಕೈಗಿ ಡುತ್ತಾ…
“ಆಮಿನಾದಾ… ಮಿಸಿರಿ ಮಾಲೆಗೆ ಇನ್ನೆಷ್ಟು 500 ರ ನೋಟು ಬೇಕು”
ಎಂದು ಕೇಳುವಾಗ ಆಮಿನಾದಳ ಮುಖದಲ್ಲಿ ಒಂದು ನೆಮ್ಮದಿಯ ನಗೆ…

ಆಮಿನಾದ ಇವತ್ತಿನ ನೋಟನ್ನು ತನ್ನ ಹಳೆಯ ನೋಟು ಸಂಗ್ರಹ ಪೆಟ್ಟಿಗೆಯೊಳಗೆ ಇಟ್ಟು ಮತ್ತೊಮ್ಮೆ ಎಣಿಸುತ್ತಾ ಯಾ ಅಲ್ಲಾಹ್… ನನ್ನ ಮಿಸಿರಿಮಾಲೆಯ ಕನಸು ನನಸಾಗಲು ಇನ್ನೂ ಐದಾರು ನೋಟು ಸಾಕು ಎನ್ನುತ್ತಾ ಅಲ್ ಹಂದುಲಿಲ್ಲಾ ಎಂದು ದೇವನಿಗೆ ಕೃತಜ್ಞತೆ ಸಲ್ಲಿಸಿದಳು.

ದೇವಕಿಯಕ್ಕ ತನ್ನ ಗುಡಿಸಲಿಗೆ ಹೋಗದೇ ಜಗಲಿಯಲ್ಲಿ ಆಮಿನಾದಳ ಹೊರಬರುವುದಕ್ಕಾಗಿ ಕಾಯುತ್ತಿದ್ದಳು.

ಆಮಿನಾದ ಹೊರಬಂದ ತಕ್ಷಣ… “ಆಮಿನಾದ
ಗೋಪಿ ಪೇಟೆಯಲ್ಲಿ ಸಿಕ್ಕಿದ್ದ.
ಇಂದೂ ಕುಡಿದಿದ್ದ. ದುಡಿಮೆಯೂ ಇಲ್ಲವಂತೆ.
ಆದರೂ ಒಂದು ಒಳ್ಳೆಯ ಸುದ್ದಿ ಕೊಟ್ಟ. ಮಗಳು ಸುಗುಣಳಿಗೆ ಅದು ನಿಂತು ತಿಂಗಳು ಎರಡಾಯಿತಂತೆ. ಚೋಮವಿನ ನಾಟಿ ಮದ್ದು ಫಲಿಸಿತು ಅಂತ ಕಾಣುತ್ತೆ…
ಪಾಪ ಅಲ್ಲಿ ಅವಳಿಗೆ ಕಷ್ಟ ಆಗುತ್ತೋ ಏನೋ..
ಅವಳನ್ನು ಇಲ್ಲಿಗೆ ಕರೆದುಕೊಂಡು ಬರೋಣವೆಂದಿದ್ದೇನೆ.. ಗೋಪಿ ಯ ಮಾತಿನಲ್ಲಿ ಅವನಿಗೂ ವಿರೋಧ ಇದ್ದಂತೆ ಕಾಣುವುದಿಲ್ಲ ಎಂದಳು..
ಅದು ಒಳ್ಳೆಯ ಕೆಲಸ ಎಂದು ಆಮಿನಾದ ಕೂಡಾ ಖುಷಿಯಿಂದ ಉತ್ತರಿಸಿದಳು.

ಎಂದಿನಂತೆ ಕಾದ್ರಿಯಾಕ ಮುಸ್ಸಂಜೆ ಮನೆಗೆ ಬಂದು ಆಡುಗಳಿಗೆ ಬಾಡಿದ ಸೊಪ್ಪು ತರಕಾರಿ ತಿನ್ನಲು ಕೊಡುತ್ತಿದ್ದ…
ಆಮಿನಾದ ಕೂಡಲೇ ಒಲೆ ಹಚ್ಚಿ ಕಟ್ಟಂಚಾಯ ಮಾಡಿಟ್ಟು ಗಂಡನಿಗಾಗಿ ಕಾದಳು.
ಆತ ಬಟ್ಟೆ ಬದಲಾಯಿಸುವ ಹೊತ್ತಿಗೆ ಕಟ್ಟಂಚಾಯ ರೆಡಿ ಯಾಗಿತ್ತು.
ಆಮಿನಾ ತನ್ನ ಬಳಿಯಿಂದ ಕದಲದೇ ಇದ್ದಾಗ ಕಾದ್ರಿಯಾಕನಿಗೆ ಆಶ್ಚರ್ಯ…
ಇದೇನೇ.. ಪಕ್ಕದಲ್ಲೇ ನಿಂತಿದ್ಯಾ..
ಆಮಿನಾದ ಉಗುರು ಕಚ್ಚುತ್ತಾ ನಾಚಿ… ನಮ್ಮ ಸುಗುಣ ಇದ್ದಾಳಲ್ಲಾ ಅವಳಿಗೆ ಎರಡು ತಿಂಗಳಂತೆ..
ಮದುವೆಯಾಗಿ 8 ವರ್ಷ ಆಯಿತಲ್ಲಾ. ಪಕ್ಕದೂರಿನ ಚೋಮವಿನ ನಾಟಿ ಮದ್ದು ಫಲ ಕೊಟ್ಟಿದ್ದು.
ನನಗೇನೂ ವಯಸ್ಸಾಗಿಲ್ಲ. ನಾವೂ ಒಮ್ಮೆ ಆ ಕಡೆಗೆ ಯಾಕೆ ಹೋಗಬಾರದು…

ಕಾದ್ರಿಯಾಕ ನಗುತ್ತಾ…
ಆಮಿನಾ ನಿನಗೆ ವಯಸ್ಸು ಆಗಿಲ್ಲ ನಿಜ. .. ಆದರೆ ನಲುವತ್ತು ದಾಟಿದೆ ಅಲ್ವಾ.. ಇನ್ನು ಅದರ ಬಗ್ಗೆ ಚಿಂತಿಸಿ ಮಂಡೆ ಬಿಸಿ ಮಾಡುವುದು ಬೇಡ..
ನಾವಿಬ್ಬರೂ ಹೀಗೆ ಖುಷಿಯಲ್ಲಿ ಇರೋಣ ..
ನೀನು ನನ್ನ ಅಪ್ಸರೆ.. ನಾಳೆ ನಿನಗಿಂತ ಸುಂದರಿ ಆ ಸ್ವರ್ಗದಲ್ಲಿ ಸಿಕ್ಕರೂ ನೀನೇ ಸಾಕು ಅಂತ ಪಡಚ್ಚೊ ನಲ್ಲಿ ಹೇಳುತ್ತೇನೆ. ಅಲ್ಲಿ ನಮಗೆ ಹತ್ತೋ ಹದಿನೈದೋ ಮಕ್ಕಳು ಬೇಕೆಂದ್ರೂ ಖುದಾ ಕೊಡ್ತಾನೆ.
ಸದ್ಯ ನೀ ಈ ಪಚ್ಛೆ ಬೆಲ್ಟು ನೋಡು ಎನ್ನುತ್ತಾ ಸೊಂಟ ಪಟ್ಟಿ ಬಿಚ್ಚಿ ಆಕೆಯ ಕೈಗಿತ್ತ.

ಕೇವಲ ನಾಲ್ಕೈದು ಚಿಕ್ಕ ನೋಟುಗಳು ಮಾತ್ರ ಸಿಕ್ಕಿದ ನಂತರ ಪಚ್ಛೆ ಬೆಲ್ಟ್ ನ್ನು ಮತ್ತೂ ಮತ್ತೂ ಕೊಡವಿ ನೋಡಿದಳು…
ಹೂಂ…
ಬರಿಯ ಎರಡೇ ಎರಡು ಚಿಕ್ಕ ನೋಟುಗಳು…
ಆಮಿನಾದಳಿಗೆ ನಿರಾಸೆಯಾಯಿತು..
ಕಾದ್ರಿಯಾಕ ಗಲ್ಲಕ್ಕೆ ಕೈಕೊಟ್ಟು ಕುಳಿತಿದ್ದ…
ಏನೋ ಗೊತ್ತಿಲ್ಲ ವ್ಯಾಪಾರ ಈಗೀಗ ಕಡಿಮೆಯಾಗುತ್ತಿದೆ..
ಹೀಗೇ ಮುಂದುವರಿದರೆ ನಿನ್ನ ಮಿಸಿರಿ ಮಾಲೆಯ ಕನಸು ಕನಸಾಗಿಯೇ ಉಳಿಯುವುದೋ ಏನೋ…

ಯಾ ರಬ್ಬೇ ಎಂದು ತಬ್ಬಿಬ್ಬಾಗಿ ಅಲ್ಲೇ ಕುಳಿತುಬಿಟ್ಟಳು ಆಮಿನಾದ.

ಸೆಲ್ಲಾನತ್ತ್… ಇಷ್ಟಕ್ಕೆ ಇಷ್ಟು ಗಾಬರಿಯಾ ಆಮಿನಾ ಎನ್ನುತ್ತಾ ಕಾದ್ರಿಯಾಕ ಆಮಿನಾಳ ತಲೆ ಸವರತೊಡಗಿದ…
ಆಕೆಗೆ ಒಂದು ಹೊಸ ಅನುಭವವೂ ಹೌದು…
ಸರಿ..
ನೀ ಹೋಗಿ ಊಟ ಬಡಿಸು.. ನಾನು ಸ್ನಾನ ಮಾಡಿ ಬರುತ್ತೇನೆ ಎನ್ನುತ್ತಾ ಬೈರಾಸು ತಲೆಗೆ ಕಟ್ಟಿ ನೀರು ಸೇದಲು ಕಾದ್ರಿಯಾಕ ಬಾವಿಕಟ್ಟೆಗೆ ತೆರಳಿದ.

ರಾತ್ರಿ ಊಟ ಮಾಡುತ್ತಾ ಇರಲು ಕಾದ್ರಿಯಾಕ ಮೆತ್ತಗೆ ಕಿರು ನಗೆ ಬೀರುತ್ತಾ … ಇದೇನು ನುಗ್ಗೆಕಾಯಿ ಎಂದ..
ಥಟ್ಟನೆ ಆತನಿಗೂ ನಾಟಿ ಮದ್ದಿನ ಚೋಮು ನೆನಪಾಗಿ ಒಳಗೊಳಗೇ ನಕ್ಕ.
ಊಟಮಾಡಿ ಕೈ ಒರಸುತ್ತಾ… ಆಮಿನಾ .. ನೀನೂ ಸ್ನಾನ ಮಾಡಿ ಬಾ ಎಂದಾಗ ಅವಳಿಗೂ ಪರಿಸ್ಥಿತಿಯ ಅರ್ಥವಾಗದೇ ಇರಲಿಲ್ಲ.
ರಾತ್ರಿ ಬಿಸಿ ಹಾಲಿನೊಂದಿಗೆ ಆಮಿನಾ ಆತನ ಹತ್ತಿರ ನಡೆವಾಗ ಇಂದೇಕೋ ಸ್ವಲ್ಪ ನಾಚಿಕೆಯಿತ್ತು.
ಎಂದಿನಂತೆ ಪಕ್ಕದ ಟೇಬಲ್ ನಲ್ಲಿ ಇಡದೆ ಆತನ ಬಳಿ ಬಂದು ಕೂತಳು.
ವಯಸ್ಸು 50 ದಾಟಿದರೂ ಕಾದ್ರಿಯಾಕನ ತುಂಟಾಟಕ್ಕೇನೂ ಕೊರತೆ ಇರಲಿಲ್ಲ.

ಕಾದ್ರಿಯಾಕ ಮರುದಿನ ಬೆಳಿಗ್ಗೆ ಸುಬಹಿ ನಮಾಜ್ ಗೆ ಹೋಗಿರಲಿಲ್ಲ.
ಗಂಟೆ ಏಳು ಕಳೆಯಿತು ಇನ್ನೂ ಯಾಕೆ ಕಾದ್ರಿಯಾಕನ ತರಕಾರಿ ಗಾಡಿ ಅಲ್ಲೇ ಇದೆ ಎಂದು ದೇವಕಿಯಕ್ಕ ಅಲ್ಲಿಂದ ಕೂಗಿದಳು…
ಆಮಿನಾದಾ… ಆಮಿನಾದಾ…
ಸ್ನಾನ ಮಾಡುತ್ತಿದ್ದ ಆಮಿನಾ ಬೇಗನೇ ಮುಗಿಸಿ ಹೊರ ಬಂದಳು…
ಏನು ದೇವಕಿಯಕ್ಕಾ…
ಏನಿಲ್ಲ ಗಾಡಿ ಇಲ್ಲೇ ಇದೆ. ಕಾದ್ರಿಯಾಕ ಇನ್ನೂ ಹೋಗಿಲ್ವಾ.
ಹೂಂ…
ಇವತ್ತು ಶುಕ್ರವಾರ ..
ಪಳ್ಳಿಗೆ ಹೋಗಿ ಬಂದ ನಂತರ ಹೋಗುತ್ತಾರಂತೆ ಎಂದಳು..
ಅಲೀಮಾದಳ ಬೋಳು ಕಿವಿ ನೋಡುತ್ತಾ ದೇವಕಿ ಕಿರು ನಗೆ ಬೀರಿದಳು…
ಹೋ.. ದೊಡ್ಡ ಸ್ನಾನ ಮಾಡುತ್ತಿದ್ಯಾ…
ಹೋಗು ಹೋಗು.. ಅಲೀಕತ್ತು ಕಿವಿಗೆ ಹಾಕಿ ಬಾ..
ಆಮಿನಾಳಿಗೂ ನಾಚಿಕೆಯಾಯಿತು… ಅಕ್ಕಾ ಎನ್ನುತ್ತಾ ಆಕೆ ಒಳ ನಡೆದಳು.

ದಿನಗಳುರುಳಿದ್ದು ಗೊತ್ತೇ ಆಗಲಿಲ್ಲ.
ದೇವಕಿಯ ಪಿಂಚಣಿ ದಿನವೂ ಬಂತು.
ಆಮಿನಾದ ಮೊದಲೇ ನಿಶ್ಚಯಿಸಿದಂತೆ ಆಕೆಯೊಂದಿಗೆ ಪೇಟೆಗೆ ಹೊರಟಳು.
ಆಕೆಗೆ ಚಿನ್ನದ ಅಂಗಡಿಗೆ ಹೋಗಬೇಕಿತ್ತು..
ಅಂಗಡಿಗೆ ಹೋಗಿ ಬೆಲೆ ಕೇಳಿದಳು..
ದೊಡ್ಡ ಮಿಸಿರಿ ಮಾಲೆ ಶೋ ಕೇಸ್ ನಲ್ಲಿ ತೂಗುವುದು ಕಂಡಾಗ ಆಕೆಯ ಮೈಯೆಲ್ಲಾ ಬೆವರ ತೊಡಗಿತು.
ಸೇಲ್ಸ್ ಮ್ಯಾನು ತೂಕ ಮಾಡಿ ಕ್ಯಾಲಿಕುಲೇಟರ್ ಒತ್ತುತ್ತಾ ಇಪ್ಪತ್ತೈದು ಸಾವಿರ ಆಗುತ್ತದೆ ಎಂದು ಹೇಳಿಬಿಟ್ಟ.
ಸ್ವಲ್ಪ ಚಿಕ್ಕದು ಇದೆ.. ಬರುವ ವಾರ ಸ್ಟಾಕ್ ಬರುತ್ತದೆ ಎಂದಾಗ ಆಮಿನಾಳಿಗೂ ಸಮಾಧಾನವಾಯಿತು.
ಸ್ವಲ್ಪ ಚಿಕ್ಕದಾದರೂ ಸಾಕು .. ಇಪ್ಪತ್ತು ಸಾವಿರದ ಒಳಗೆ ಆಗಬೇಕು ಎಂದಾಗ ಬರುವ ವಾರ ಬನ್ನಿ ಎಂದು ಆತ ಹೇಳಿದ್ದ.

ಪೇಟೆಯಿಂದ ವಾಪಸ್ ಬರುವಾಗ ಸುಗುಣ ಆಮಿನಾದಳ ಚಾವಡಿಯಲ್ಲಿ ಕೂತಿದ್ದಳು.
ಆಮಿನಾದಾ… ಎಲ್ಲಿ ಮಿಸ್ರಿ ಮಾಲೆ ಎಂದಾಗ ಆಮಿನಾಳು ಸಪ್ಪೆ ಮೊರೆ ಹಾಕಿ..
ಇಲ್ಲ ಸುಗುಣ.. ದೊಡ್ಡ ಮಾಲೆ ಇದೆ.
ಅದಕ್ಕೆ 25000 ಅಂತೆ. ಹಣ ಸಾಕಾಗಿಲ್ಲ.
ಬರುವ ವಾರ ಸ್ವಲ್ಪ ಚಿಕ್ಕದು ಬರುತ್ತೆ..
ಆವಾಗ ತೆಗೆದರಾಯ್ತು.
ಸುಗುಣ ಕೂಡಲೇ …
ನಿಮ್ಮಲ್ಲಿ ಎಷ್ಟು ರೂಪಾಯಿ ಕಮ್ಮಿ ಇರೋದು ಅಂದಾಗ ಐದು ಸಾವಿರ ಅಂದಳು.
ಥಟ್ಟನೆ ಸುಗುಣ… ಆಮಿನಾದಾ.. ಚಿಕ್ಕದು ಬೇಡ. ಆ ಇರುವ ದೊಡ್ಡದೇ ತಗೊಳ್ಳಿ. 5000 ನಾನು ಕೊಡುತ್ತೇನೆ. ನನ್ನ ಹೆರಿಗೆಯ ಖರ್ಚಿಗೆ ಇರಲಿ ಅಂತ ಬೀಡಿ ಕಟ್ಟಿ ಸಂಪಾದಿಸಿದ ದುಡ್ಡು ಇಟ್ಟಿದ್ದೇನೆ.
ಹೆರಿಗೆಗೆ ಇನ್ನೂ ಎರಡು ತಿಂಗಳು ಬಾಕಿ ಉಂಟಾಲ್ಲಾ.. ಅದರ ಒಳಗೆ ಹಿಂತಿರುಗಿಸಿದರಾಯ್ತು ಎಂದು ಕೂಲ್ ಆಗಿ ಹೇಳಿದಾಗ ಆಮಿನಾದಳಿಗೆ ಹೃದಯ ತುಂಬಿ ಬಂತು.
ಆಮಿನಾದ ಆಕೆಯನ್ನು ಎದೆಗಪ್ಪಿ…
ಬೇಡ ಸುಗುಣಾ.. ಎಷ್ಟೋ ವರ್ಷದಿಂದ ಹಣ ಕೂಡಿಸಿ ಇಡ್ತಾ ಬಂದಿದ್ದೇನೆ ಇನ್ನೊಂದು ವಾರ ಕಾಯುವುದು ಕಷ್ಟವಾಗದು …
ವಾರದೊಳಗೆ ಆಸೆ ಈಡೇರುತ್ತೆ ಎಂದಾಗ ಆಕೆಯೂ ಮರು ಮಾತನಾಡಲಿಲ್ಲ.

ಸಂಜೆ ಕಾದ್ರಿಯಾಕ ಬಂದ.
ಆತನಿಗೂ ಮಿಸ್ರಿ ಮಾಲೆ ನೋಡುವ ತವಕ. ಆತನು ಕೂಡಾ ಹೇಳಿದ್ದು ಅದೇ ಮಾತು. ದೊಡ್ಡದೇ ತಗೊ..
ಹೇಗೂ 7 ಆಡುಗಳಿವೆ. ಎರಡೋ ಮೂರೋ ಮಾರಿದರಾಯ್ತು.
ಆಕೆಗೂ ಖುಷಿಯಾಯ್ತು. ಎಷ್ಟೋ ವರ್ಷದಿಂದ ಕಾಯುತ್ತಿದ್ದೇನೆ. ಒಂದು ಮಿಸ್ರಿ ಮಾಲೆ.
ದೊಡ್ಡದೇ ತೆಗೆದರಾಯ್ತು ಎಂದು ಆಕೆಯೂ ತೀರ್ಮಾನಿಸಿಯೇ ಬಿಟ್ಟಳು.
ನಾಳೆಯೇ ಮೂರು ಆಡುಗಳನ್ನು ಮಾರುವುದು. ಮಿಕ್ಕಿದ ಹಣದಲ್ಲಿ ಸುಗುಣಳ ಮೊದಲ ಮಗುವಿಗಾಗಿ ಒಂದು ಚಿಕ್ಕ ಕೈ ಬಳೆಯೋ ಮಾಲೆಯೋ ತೆಗೆದುಕೊಳ್ಳಬೇಕು ಎಂದು ರಾತ್ರಿಯೇ ತೀರ್ಮಾನಿಸಿದಳು.
ಗಂಡನ ಸಮ್ಮತಿಯೂ ಈ ಮೊದಲೇ ಸಿಕ್ಕಿಯಾಗಿತ್ತು.

ಆಡುಗಳನ್ನು ಮಾರಿಯಾಯಿತು.
ಆಮಿನಾದಳ ಉಳಿತಾಯದ ಪೆಟ್ಟಿಗೆ ತುಂಬಿತು.
ಇನ್ನು ಚಿಂತೆಯಿಲ್ಲ. ನಾಳೆ ನಾಳೆದ್ದು ಪೇಟೆಗೆ ಹೋಗುವುದು ಎಂಬ ತೀರ್ಮಾನವೂ ಆಯಿತು.
ರಾತ್ರಿಯಿಡೀ ಆಮಿನಾದಾ ಳಿಗೆ ಮಿಸ್ರಿ ಮಾಲೆಯದ್ದೇ ಕನಸು…

ಬೆಳಿಗ್ಗೆ ಎದ್ದು ದೋಸೆ ಹೊಯ್ಯುತ್ತಲಿದ್ದಳು ಆಮಿನಾದ.
ದೇವಕಿಯಕ್ಕ ಒಂದೇ ಸವನೆ ಕರೆಯುತ್ತಿದ್ದಳು…
ಆಮಿನಾದಾ…
ಆಮಿನಾದಾ….
ಆಕೆಗೆ ಭಯವಾಯಿತು. ಇದುವರೆಗೂ ಹೀಗೆ ಕರೆದವಳಲ್ಲ ದೇವಕಿಯಕ್ಕ.
ಸಟ್ಟುಗವನ್ನು ಕೈ ಯಲ್ಲಿ ಹಿಡಿದುಕೊಂಡೇ ಆಮಿನಾದ ಓಡಿ ಹೋದಳು.
ಒಳ ಕೋಣೆಯಲ್ಲಿ ಸುಗುಣ ಅಂಗಾತ ಮಲಗಿದ್ದಳು.
ಕಾಲ ಬುಡದಲ್ಲಿ ರಕ್ತದ ಹನಿಗಳು… !.
ಏನಾಯ್ತು ದೇವಕಿಯಕ್ಕಾ ಎಂದಾಗ …
ಬೆಳಿಗ್ಗೆ ಶ್ಯಾವಿಗೆ ಬೇಕು ಅಂತ ಹೇಳಿದ್ದಳು. ಆಕೆ ಶಾವಿಗೆ ಮಣೆ ತೆಗೆಯಲು ಅಟ್ಟಕ್ಕೆ ಹತ್ತಿದ್ದು. ಕಾಲು ಜಾರಿ ಬಿದ್ದಳು.. ಈಗ ರಕ್ತಸ್ರಾವ ಆಗ್ತಿದೆ.. ಏನು ಮಾಡೋದು ಎಂದಾಗ ಆಮಿನಾದ ಚಿಂತೆ ಮಾಡಬೇಡ ಈಗ್ಲೇ ಆ ಮಿಡ್ ವೈಫ್ ನ್ನು ಕರಕೊಂಡು ಬರ್ತೇನೆ ಎಂದು ಹೊರ ಓಡಿದಳು.

ಹತ್ತು ನಿಮಿಷದ ಒಳಗೆ ಬಿಳಿ ಸಾರಿಯುಟ್ಟ ಮಿಡ್ ವೈಪು ಹಾಜರಾದಳು. ಜೊತೆಯಲ್ಲಿ ಒಬ್ಬಳು ಸಹಾಯಕಿ.
ನರ ನಾಡಿ ಮತ್ತಿನ್ನೇನೋ ಪರೀಕ್ಷಿಸಿ… ಅಕ್ಕಾ.. ತಿಂಗಳು ಎಂಟು ಕೂಡಾ ಆಗಿಲ್ಲ. ಸ್ವಲ್ಪ ಡೇಂಜರ್ ಕೇಸು.
ರಕ್ತ ಸ್ರಾವ ಕೂಡಾ ಉಂಟು. ಬೇಗನೇ ಪೇಟೆಯ ಆಸ್ಪತ್ರೆಗೆ ಕರಕೊಂಡು ಹೋಗಬೇಕು…

ದೇವಕಿಗೆ ಆಕಾಶವೇ ಕಳಚಿ ಬಿದ್ದ ಅನುಭವ.
ಅಷ್ಟೊತ್ತಿಗೆ ಕಾದ್ರಿಯಾಕ ಕೂಡಾ ಪಳ್ಳಿಯಿಂದ ವಾಪಸ್ಸಾಗಿದ್ದ.
ಆತ ಬೇಗ ಹೋಗಿ ಅಂಬಾಸಿಡರ್ ಕಾರು ತರಿಸಿದ.
ನಾಲ್ವರೂ ಕೂತು ಪೇಟೆ ಆಸ್ಪತ್ರೆಗೆ ಹೊರಟರು.

ಅದಾಗಲೇ ಆಕೆಯ ಸೀರೆ ರಕ್ತಸಿಕ್ತವಾಗಿತ್ತು.
ಕೂಡಲೇ ಆಪರೇಷನ್ ಥಿಯೇಟರ್ ಗೆ ಸಾಗಿಸಲಾಯಿತು. ಡಾಕ್ಟರ್ ಬಂದವರೇ.. ಆಪರೇಷನ್ ಮಾಡಿ ಮಗುವನ್ನು ತೆಗೆಯಬೇಕು. ಒಂದೆರಡು ಗಂಟೆಯ ಒಳಗೆ ಎಲ್ಲಾ ಕೆಲಸ ಮಾಡಿ ಮುಗಿಸಬೇಕು. ಇಲ್ಲಾಂದ್ರೆ ಮಗು ಮತ್ತು ಅಮ್ಮ ಇಬ್ಬರೂ ಉಳಿಯೋದಿಲ್ಲ ಅಂದರು.
ವೈದ್ಯರ ಹಿಂದಿನಿಂದ ಬಂದ ದಾದಿಯರು… ನಾವು ಆಪರೇಷನ್ ಗೆ ಎಲ್ಲಾ ರೆಡಿ ಮಾಡ್ತಾ ಇದ್ದೇವೆ.
ಖರ್ಚು ಇಪ್ಪತ್ತು ಮೂವತ್ತು ಸಾವಿರ ಆಗ್ಬೋದು. ಸದ್ಯ ಹತ್ತೋ ಇಪ್ಪತ್ತೋ ಸಾವಿರ ಕೌಂಟರ್ ನಲ್ಲಿ ಕಟ್ಟಿಬನ್ನಿ ಎಂದಾಗ ದೇವಕಿಯಕ್ಕ ಓ ರಾಮ ದೇವರೇ ಎಂದು ತಲೆಗೆ ಕೈ ಇಟ್ಟಳು

ಈಗ ಬೇಕಾಗಿರುವುದು ಅಮ್ಮ ಮಗಳ ಜೀವ ಎಂದು ಆಮಿನಾದ ಸಮಾಧಾನಪಡಿಸಿದಳು.
ಆಕೆ ದಾದಿಯವರಲ್ಲಿ ನೀವು ಆಪರೇಷನ್ ವ್ಯವಸ್ಥೆ ಮಾಡಿ. ನಾವು ಒಂದು ಘಂಟೆಯೊಳಗೆ ಹಣದೊಂದಿಗೆ ವಾಪಸ್ ಬರುತ್ತೇವೆ ಎಂದು ಕಾದ್ರಿಯಾಕನನ್ನು ಕರಕೊಂಡು ಆಸ್ಪತ್ರೆಯಿಂದ ಹೊರ ನಡೆದಳು.

ಕಾದ್ರಿಯಾಕ ಮೌನವಾಗಿದ್ದ.
ಆಕೆ ನೇರ ಹೋಗಿ ಉಳಿತಾಯ ಪೆಟ್ಟಿಗೆ ತೆರೆದಳು.
ಒಂದು ಕಟ್ಟು ನೋಟು ಕಾದ್ರಿಯಾಕನ ಕೈಗಿತ್ತು… ನೋಡಿ ಮಿಸ್ರಿ ಮಾಲೆ ಎಲ್ಲಾ ಆಮೇಲೆ.. ಈಗ ಅಮ್ಮ ಮತ್ತು ಮಗು..
ಹೋಗಿ ಈಗಲೇ ಹಣಕಟ್ಟಿ ಬಿಡೋಣ…

ಇಬ್ಬರೂ ವೇಗವಾಗಿ ಆಸ್ಪತ್ರೆ ಸೇರಿದರು.
ಸುಗುಣಾ ಳನ್ನು ಆಪರೇಷನ್ ಥಿಯೇಟರ್ ಗೆ ಸಾಗಿಸಿಯಾಗಿತ್ತು.

ದೇವಕಿಯಕ್ಕ ಈಕೆಗಾಗಿ ಕಾಯುತ್ತಿದ್ದಳು.
ಕಾದ್ರಿಯಾಕ ಕೌಂಟರ್ ನಲ್ಲಿ ಹಣ ಜಮಾ ಮಾಡಿ ಬಂದ.

ಆಪರೇಷನ್ ಕೊಠಡಿಯ ಹೊರಗಡೆ
ಆಮಿನಾದಳ ಮಡಿಲಲ್ಲಿ ದೇವಕಿಯು ಮಗುವಂತೆ ಮಲಗಿದ್ದಳು..
ಆಕೆಯ ಕಣ್ಣಲ್ಲಿ ನೀರು ಹರಿಯುತ್ತಿತ್ತು.

ಆಮಿನಾದಾ …
ನಾ ಹೇಗೆ ನಿನಗೆ ಕೃತಜ್ಞತೆ ಹೇಳಬೇಕೆಂದು ಗೊತ್ತಾಗುತ್ತಿಲ್ಲ ಎಂದು ಅಳುತ್ತಾ ಹೇಳುವಾಗ ಆಮಿನಾದ ಅವಳ ಬಾಯಿಗೆ ಕೈ ಹಿಡಿದಳು.

ಒಂದೆರಡು ನಿಮಿಷ ಕಳೆದಿತ್ತು.
ಕೊಠಡಿಯ ಬಾಗಿಲು ತೆರೆದು ದಾದಿ ಶುಭ ಸುದ್ದಿ ತಿಳಿಸಿದಳು.
ಆಪರೇಷನ್ ಆಯ್ತು. ಮಗು ಅಮ್ಮ ಕ್ಷೇಮ…
ಆಗಲೇ ಮತ್ತೊಬ್ಬಳು ದಾದಿ ಮಗುವನ್ನೆತ್ತಿ ಬಂದಿದ್ದಳು.
ಗಂಡು ಮಗು.

ಇಬ್ಬರ ಕಣ್ಣಲ್ಲೂ ಆನಂದ ಭಾಷ್ಪ.
ದೂರದಲ್ಲಿ ನಿಂತಿದ್ದ ಕಾದ್ರಿಯಾಕನಿಗೂ ಖುಷಿಯೋ ಖುಷಿ…

ಮುಸ್ಸಂಜೆಯಾಗುವ ಮುನ್ನ ಮನೆಗೆ ಹೋಗಿ ಬರುತ್ತೇನೆ ಎಂದು ಆಮಿನಾದ ಮತ್ತು ಕಾದ್ರಿಯಾಕ ಹೊರಟು ನಿಂತರು.

ಮನೆ ತಲುಪಿದವಳಿಗೆ ಬೆಳಿಗ್ಗೆಯ ದೋಸೆ ನೆನಪಾಯಿತು.
ಒಲೆಯತ್ತ ಓಡಿ ಹೋದಳು.

ಬೆಂಕಿ ಆರಿ ಹೋಗಿತ್ತು…
ದೋಸೆ ಕರಟಿ ಹೋಗಿತ್ತು..
ಕರಟಿದ ದೋಸೆಯನ್ನು ಬಿಸಾಕಿ ಒಲೆ ಉರಿಸಿ ಕಾವಲಿಗೆ ಹಿಟ್ಟನ್ನು ಸುರಿದು ಸಟ್ಟುಗವನ್ನು ಹುಡುಕತೊಡಗಿದಳು..