- ಮರುಭೂಮಿಯ ಮಾನಿನಿ - ಅಕ್ಟೋಬರ್ 31, 2021
- ಅಂತಿಮ ವಿದಾಯದ ಅಲಂಕಾರ - ಅಕ್ಟೋಬರ್ 17, 2021
- ವಯಸ್ಸು ಮತ್ತದರ ಸುಕ್ಕುಗಳು : ಆಮೋರ್ - ಅಕ್ಟೋಬರ್ 2, 2021
ಕೆಲವೊಮ್ಮೆ ಇಡೀ ಸಿನೆಮಾ ಹೇಳುವ ಸಂದೇಶ ಒಂದು ಕಡೆಯಾದರೆ, ಇನ್ನೊಂದು ಕಡೆ, ಅದರ ಜೊತೆಗೆ ಕೇವಲ ಒಂದೇ ಒಂದು ದೃಶ್ಯ ಅತ್ಯಂತ ತೀವ್ರವಾಗಿ ಕಾಡಿದರೂ ಕೂಡಾ ಆ ಸಿನೆಮಾ ಬದುಕಿನ ಪೂರಾ ನೆನಪಿರುವ ಸಿನೆಮಾವಾಗಿ ಉಳಿದುಹೋಗುತ್ತದೆ. ಅಂಥ ಸಿನೆಮಾದ ಸಾಲಿಗೆ ಸೇರ್ಪಡೆಯಾಗುವ ಚಿತ್ರ ಕನ್ನಡದ ‘ಅರಿಷಡ್ವರ್ಗ’.
ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ ಅನ್ನುವ ೬ ಸಂಗತಿಗಳನ್ನೇ ಅರಿಷಡ್ವರ್ಗ ಅಂತ ಕರೆಯುತ್ತೇವೆ ಅನ್ನುವುದು ಬಹುತೇಕರಿಗೆ ಗೊತ್ತಿರುವಂಥದ್ದೇ. ಮನುಷ್ಯ, ಜನನ ಮರಣಗಳ ಚಕ್ರದಿಂದ ಮುಕ್ತವಾಗಬೇಕಾದರೆ ಮೊದಲು ಈ ಆರು ಅಂತರಂಗದ ಶತ್ರುಗಳನ್ನು ಜಯಿಸಬೇಕು ಅನ್ನುವುದು ಕೂಡಾ ಬಹುತೇಕವಾಗಿ ತಿಳಿದಿರುವಂಥದ್ದೇ. ಒಂದು ವೇಳೆ ಇವುಗಳನ್ನು ಜಯಿಸದೇ ಹೋದಲ್ಲಿ, ಮತ್ತೆ ಈ ಬದುಕಿನ ಚಕ್ರ ಪುನರಾವರ್ತನೆಯಾಗುತ್ತದೆ ಅನ್ನುವುದು ಈ ಸಿನೆಮಾದಲ್ಲಿಯೂ ಸತ್ಯ!
‘ಒಂದು ಸಾವು ಮತ್ತದರ ಕೊಲೆಗಾರ’ನ ಹುಡುಕುವಿಕೆ ಇಷ್ಟರಲ್ಲೇ ಮುಗಿಯಬಹುದಾಗಿದ್ದ ಸಿನೆಮಾಕ್ಕೆ ಮನುಷ್ಯನ ಕರ್ಮ ಫಲಗಳ ಆಯಾಮವನ್ನು ಕೊಟ್ಟಿದ್ದು ಚಿತ್ರದ ಜೀವಾಳ ಹಾಗೂ ಅದೇ ಈ ಚಿತ್ರವನ್ನು ಈ ಥರದ ಉಳಿದ ಚಿತ್ರಗಳಿಂದ ಭಿನ್ನವಾಗಿಸುತ್ತದೆ. ಕತೆಯ ಮೂಲ ಉದ್ದೇಶ ಕೇವಲ ಕೊಲೆಗಾರನನ್ನು ಹುಡುಕುವಿಕೆಯಷ್ಟೇ ಅಲ್ಲ, ಇತರ ಪಾತ್ರಗಳ ಒಳಗೆ ಹೊಕ್ಕುವಿಕೆಯೂ ಆಗಿರುವುದರಿಂದ, ಅದು ಮನುಷ್ಯ ಲೋಕದ ತಲ್ಲಣಗಳನ್ನು ಹಾಗೂ ಮನೋಲೋಕದ ವ್ಯಾಪಾರಗಳನ್ನು ತೆರೆದಿಡುತ್ತಾ ಹೋಗುತ್ತದೆ. ಒಂದು ಕತೆಯಲ್ಲಿ ಸರಿ ತಪ್ಪುಗಳನ್ನು ಮೊದಲೇ ಗುರುತಿಸಿ ಘೋಷಿಸಿಬಿಟ್ಟರೆ ಅದು ಚಾಚಿಕೊಳ್ಳಬಹುದಾದ ವಿಸ್ತಾರ ಕಡಿಮೆ. ಆದರೆ, ಯಾವಾಗ ಸರಿ ತಪ್ಪುಗಳು ಒಟ್ಟೊಟ್ಟಿಗೆ, ಸಂದರ್ಭಕ್ಕೆ ತಕ್ಕಂತೆ ಸಾಗುತ್ತವೆಯೋ ಆಗ ತರ್ಕದ ಬಾಗಿಲು ತೆರೆದುಕೊಳ್ಳುತ್ತದೆ ಹಾಗೂ ಹೊಸ ಭೂಮಿಕೆ ಸಿಗುತ್ತದೆ.
ಬಹುಶಃ ಹೆಣ್ಣಿನ ದೈಹಿಕ ಕಾಮನೆಗಳನ್ನು ಅಷ್ಟಾಗಿ ಸಮಾಜ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ, ಗಂಡಿಗೆ ತೃಪ್ತಿಯಾದರೆ ಸಾಕಷ್ಟೇ ಅನ್ನುವ ಮನಸ್ಥಿತಿಯೋ ಅಥವಾ ಅದೊಂಥರ ಅಲಿಖಿತ ನಿಯಮವೇ ಆಗಿಹೋಗಿದೆಯೋ ಗೊತ್ತಿಲ್ಲ. ಅದೆಷ್ಟೇ ಆಧುನಿಕತೆ ನಮ್ಮಲ್ಲಿ ಬಂದಿದ್ದರೂ ಸಂಸಾರದಲ್ಲಿ ಗಂಡು ತನ್ನ ಪ್ರಾಬಲ್ಯವನ್ನು ಮೆರೆಯುವುದಕ್ಕೆ ಹಪಹಪಿಸುತ್ತಾನೆ ಹಾಗೂ ಹೆಣ್ಣು ಅದನ್ನು ಸಹಜವಾಗಿ ಸ್ವೀಕರಿಸಿ ಸಂಸಾರವನ್ನು ಸರಿದೂಗಿಸುವುದಕ್ಕೆ ಹೆಣಗುತ್ತಾಳೆ. ಅಲ್ಲಲ್ಲಿ ಈ ವಾದಕ್ಕೆ ಅಪವಾದಗಳಿದ್ದರೂ, ಬಹುತೇಕರು ಒಪ್ಪಿಕೊಂಡ ಸಾಂಸಾರಿಕ ಪದ್ಧತಿ ಇದು. ಅದರಲ್ಲೂ ಗಂಡಿನ ವಯಸ್ಸು ಹೆಣ್ಣಿನ ವಯಸ್ಸಿಗಿಂತ ತೀರಾ ಜಾಸ್ತಿಯಾಗಿದ್ದಲ್ಲಿ ಮಧ್ಯ ಇರಬಹುದಾದ ಆ ಅಂತರ ಇಬ್ಬರಲ್ಲೂ ಇರಬಹುದಾದ ದೈಹಿಕ ಬೇಡಿಕೆಗಳನ್ನು ಬಾಧಿಸಬಹುದು ಕೆಲವೊಮ್ಮೆ. ಮಾನಸಿಕವಾಗಿ ಹೇಗೆ ಜೊತೆ ಬೇಕೋ ಹಾಗೇ ದೇಹಕ್ಕೂ ಅದರದ್ದೇ ಆದ ಸಂಗತಿಗಳಿರುತ್ತವೆ. ಅದು ಸಹಜ ಕೂಡಾ. ಇಲ್ಲಿಯೇ ನಮಗೆ ಸಾಮಾಜಿಕ ಕಟ್ಟುಪಾಡುಗಳು ಹಾಗೂ ವೈಯಕ್ತಿಕ ನೆಮ್ಮದಿಗಳ ನಡುವಿನ ಸಂಘರ್ಷ ಅರಿವಿಗೆ ಬರುತ್ತದೆ. ಇಂಥ ಸಮಸ್ಯೆಗಳು ಜಟಿಲವಾಗುವುದೇ ಇಲ್ಲಿ ಮತ್ತು ಅವು ಆಳಕ್ಕಿಳಿಯಬೇಕಾಗಿರುವುದೂ ಇಲ್ಲಿಯೇ!
ಗಡಿಯಾರದಲ್ಲಿ ೬ ಗಂಟೆಯಾಯಿತೆಂದರೆ, ವೃತ್ತದ ಅರ್ಧ ಭಾಗ ಮುಗಿಯುತ್ತದೆ. ಇನ್ನರ್ಧದ ಪ್ರಯಾಣ ಮುಂದೆ ಆರಂಭವಾಗಬೇಕಷ್ಟೇ. ನಿವೃತ್ತಿಯೂ ಹಾಗೇ ಅಲ್ಲವಾ! ಕಾಲ ನಿಲ್ಲುವುದಿಲ್ಲ, ಆದರೆ ಅದರ ಘಟ್ಟಗಳನ್ನು ಗುರುತಿಸಿಕೊಳ್ಳುವಷ್ಟು ಅವಕಾಶವನ್ನಂತೂ ಕೊಡುತ್ತದೆ. ಕಾಲಕ್ಕೆ ಎಲ್ಲದರ ಪರಿವೆಯಿದ್ದೂ ಅದು ಮೂಕ, ಅದು ನಿರ್ಭಾವುಕ, ಅದು ಸ್ಥಿತಪ್ರಜ್ಞ. ಎಲ್ಲವನ್ನೂ ನೋಡುತ್ತಲೇ ದಾಖಲಿಸಿಕೊಳ್ಳುತ್ತದೆ. ಅದರ ಸಂಜ್ಞೆಗಳನ್ನು ಮನುಷ್ಯ ಗಮನಿಸುವುದು ಬಹಳ ಕಡಿಮೆಯೇ ಅಲ್ಲವಾ? ಕಾಲಕ್ಕೆ ಅಪರಾಧಿಗಳು ಗೊತ್ತು, ನಿರಪರಾಧಿಗಳು ಗೊತ್ತು, ಮುಂದೆ ಮಾಡಬಹುದಾದ ಅಪರಾಧಗಳೂ ಗೊತ್ತು ! ಆದರೆ, ಅದೊಂದು ವ್ಯವಸ್ಥೆ ಹಾಗೂ ಕಾಲ ಅಲ್ಲಿನ ಒಂದು ಮಾಪನ. ಕಾಲ ಪರಿಶುದ್ಧವೇ ಆದರೂ, ಅದರ ನೋಟದ ನಿಲುಕುವಿಕೆಯ ಪರಿಧಿಯಲ್ಲಿನ ವಿಷಯಗಳು ಶುದ್ಧವೇ ಆಗಬೇಕೆಂದೇನಿಲ್ಲ ಅಲ್ಲವಾ? ಇಂಥದ್ದೇ ಒಂದು ಪಾತ್ರ ಇಲ್ಲಿನ ಕಾನ್ಸ್ಟೇಬಲ್ ರಾಜಣ್ಣ.
ಇಡೀ ಸಿನೆಮಾದಲ್ಲಿ ಅತ್ಯಂತ ಆಳವಾಗಿ ಕಾಡುವುದು ಒಂಟಿತನದ ಭೀಕರತೆ. ಅದೆಷ್ಟೋ ಘಟನೆಗಳು, ಜನರು, ಮಾತುಕತೆ, ಓಡಾಟ ಇವುಗಳೆಲ್ಲದರಾಚೆ ಮನೆಗೆ ಬಂದಾಗ ಅದೊಂದು ತೆರನಾದ ಖಾಲಿತನ. ಮನೆ ದೊಡ್ಡದಾಗಿದ್ದು ಖಾಲಿ ಇದ್ದಷ್ಟೂ ,ಅದು ಕಾಡುವ ತೀವ್ರತೆ ಜಾಸ್ತಿ. ಮನಸ್ಸು ತುಂಬಿಕೊಂಡಿದ್ದು ಹೊಸತೇನನ್ನೂ ಸ್ವೀಕರಿಸದ ಹಂತದಲ್ಲಿದ್ದರೆ, ಏಕತಾನತೆ ಹುಟ್ಟಿಕೊಳ್ಳುವುದಕ್ಕೆ ಇದಕ್ಕಿಂತ ಬೇರೆ ಬದುಕು ಬೇಕಾ! ಪೋಲೀಸ್ ಸಮವಸ್ತ್ರ ಕಳಚಿದ ಕೂಡಲೇ ಆ ಪಾತ್ರದಿಂದಲೇ ಹೊರಬಂದು ಅಗಾಧ ಒಂಟಿತನದಲ್ಲಿ ಬದುಕುವ ಪೋಲಿಸ್ ಆಫೀಸರ್, ರಸ್ತೆಯಲ್ಲಿ ಇಬ್ಬರು ಜಗಳವಾಡುತ್ತಿದ್ದರೂ ಅದು ಸಂಬಂಧವೇ ಇಲ್ಲವೆಂಬಂತೆ ಚೂರೂ ವಿಚಲಿತನಾಗದೇ ಅವರಿಗೆ ಮೈ ತಾಕಿಸಿಕೊಂಡೇ ಹೋಗುವ ಆ ಒಂದು ದೃಶ್ಯ ಅದೆಷ್ಟು ಕಲಕುತ್ತದೆ. “ಬದುಕು ಎಂಬ ರಂಗದಲ್ಲಿ ಈ ಏಕ ಪಾತ್ರವು ಸಾಕಾಗಿದೆ” ಎನ್ನುವ ಆ ಸಾಲೇ ಒಂದು ಮಟ್ಟಿಗೆ ಇಡೀ ಚಿತ್ರದ ಜೀವಾಳ. ಎಲ್ಲರಿಗೂ ನಿತ್ಯದ ಪಾತ್ರಗಳಿಗಿಂತ ಭಿನ್ನವಾದ ಪಾತ್ರವೇ ಬೇಕು. “ಸರಳವೆನಿಸೋ ಭಾವಗಳಲಿ ನೂರಾರು ಅರ್ಥ ಅಡಗಿದೆ” ಅನ್ನುವ ಸಾಲು ಆ ಹಾಡಿನಲ್ಲಿ ಬರುವಾಗ ಸಮವಸ್ತ್ರ ಇರದ ಪೋಲೀಸ್ ಪಾತ್ರ ಒಂದು ಬಣ್ಣದ ವಸ್ತ್ರವನ್ನು ಮುಟ್ಟುವುದು ಹಾಗೂ ಆ ವಸ್ತ್ರ ಒಂದಷ್ಟು ಸಂಭ್ರಮದಲ್ಲಿ ಮಾತ್ರವೇ ತೊಡುವಂಥದ್ದಾಗಿರುವುದರಿಂದ ಅದನ್ನು ಹಾಗೇ ಅಲ್ಲಿಯೇ ಬಿಟ್ಟು ಹೋಗುವುದು, ಇವೆಲ್ಲವೂ ಈ ಏಕತಾನತೆಯನ್ನು ಹಾಗೂ ಏಕಾಂಗಿತನವನ್ನು ಗಟ್ಟಿಯಾಗಿ ಪ್ರಸ್ತುತಪಡಿಸುತ್ತವೆ.
ಒಂದು ಸಂದರ್ಶನದಲ್ಲಿ ಮಾತಾಡ್ತಾ ಪೋಲಿಸ್ ಪಾತ್ರ ನಿರ್ವಹಿಸಿದ ನಂದ ಗೋಪಾಲ ಅವರು ಒಂದು ಮಾತನ್ನು ಹೇಳ್ತಾರೆ, ಸತ್ಯ ಗೊತ್ತಾದ ಮೇಲೆ ಆ ಸತ್ಯದೊಂದಿಗೆ ಏನು ಮಾಡಬಹುದು ಮತ್ತು ಅದರ ಮುಂದಿನ ಪರಿಣಾಮಗಳೇನು ಅನ್ನುವುದು ತುಂಬಾ ಮುಖ್ಯ ಅನ್ನುವ ಅರ್ಥದಲ್ಲಿ. ಇದೊಂದು ಹೊಸ ಹೊಳಹು. ನಮ್ಮಲ್ಲಿ ಸತ್ಯಾನ್ವೇಷಣೆಯೇ ಒಂದು ಮುಖ್ಯ ಗುರಿ, ಆದರೆ ಇಲ್ಲಿ ಅದರಾಚೆಗೆ ಒಂದು ಕತೆಯಿದೆಯಲ್ಲಾ , ಅದು ವಾಸ್ತವ. ಆದರ್ಶ ವಾದ ಅಥವಾ ವಿದಿತ ವಾದಗಳಾಚೆಗೂ ಬದುಕಿಗೆ ಇನ್ನೊಂದು ಮಗ್ಗುಲಿದೆ ಅನ್ನುವುದನ್ನು ಹೇಳುವುದೇ ಈ ಕತೆಗೆ ಸಿಗಬಹುದಾದ ಹರವು ಮತ್ತು ಆಳ. ಸರಿ ತಪ್ಪುಗಳು ನಂತರದ ವಿಮರ್ಶೆಗಳು, ಇತರೆ ಅಥವಾ ಇತರರ ದೃಷ್ಟಿಕೋನಗಳು. ಮೂಲದಲ್ಲಿ ಬದುಕು ಎಲ್ಲರಿಗೂ ಖಾಸಗಿ.
ಈ ಚಿತ್ರದ ಹಾಡುಗಳ ಕುರಿತಾಗಿ ಹೇಳಲೇಬೇಕು. ಸುಮ್ಮನೆ ಹಾಡುಗಳಿರಲಿ ಅಂತ ಹಾಡುಗಳಿಲ್ಲ, ಅವು ಕತೆಗೆ ಪುಷ್ಟಿ ಕೊಡುವುದಕ್ಕೆ ಹಾಗೂ ವಾಚ್ಯವಾಗದಂತೆ ಕೆಲವು ಸಂಗತಿಗಳನ್ನು ದಾಟಿಸುವುದಕ್ಕೆ ಸೇತುವೆಗಳಾಗಿ ಬಳಕೆಯಾಗಿವೆ. ಸಂಗೀತ ಸಾಹಿತ್ಯ ಧ್ವನಿ ಎಲ್ಲವೂ ಭಿನ್ನವಾಗಿ ಹೊಸ ನೆಲೆಯನ್ನು ಕೊಟ್ಟಿವೆ, ಕನ್ನಡದ ಮಟ್ಟಿಗೆ ಇಂಥ ಪ್ರಯೋಗಗಳು ತೀರಾ ವಿರಳ. ಲಂಡನ್ ಸಿನೆಮಾ ಉತ್ಸವದಲ್ಲಿ ಒಳ್ಳೆಯ ಪ್ರತಿಕ್ರಿಯೆಯನ್ನು ಈ ಸಿನೆಮಾ ಪಡೆದುಕೊಂಡಿದೆ.
ಅರಿಷಡ್ವರ್ಗ ಅನ್ನುವ ಹೆಸರಿದ್ದರೂ ದಟ್ಟವಾಗಿ ಸಿನೆಮಾದಲ್ಲಿ ಕಾಣಿಸಿಕೊಂಡಿರೋದು ಕಾಮ, ಲೋಭ, ಮೋಹ ಈ ಮೂರು ಭಾವಗಳು. ಕ್ರೋಧ, ಮದ, ಮಾತ್ಸರ್ಯಗಳು ಅಷ್ಟಾಗಿ ಪ್ರತಿಧ್ವನಿಸಿಲ್ಲವೇನೋ ಅನ್ನುವ ಒಂದು ಸಣ್ಣ ಸಂಶಯ ಇದೆ. ಅದೇನೇ ಇದ್ದರೂ ಇಂಥ ಸಿನೆಮಾಗಳು ನಮ್ಮ ಮಟ್ಟಿಗೆ ಹೊಸ ಅಲೆಗೆ ಆಮ್ಲಜನಕ !
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್