- ಸಾಧಕರು ಸಾಮ್ರಾಜ್ಯ ಕಟ್ಟಬಾರದು- ವೈಲ್ಡ್ ವೈಲ್ಡ್ ಕಂಟ್ರಿ - ನವೆಂಬರ್ 5, 2022
- ವ್ಹಾ ರಿಷಭ್ ವ್ಹಾ – ಕಾಂತಾರಕೆ ವ್ಹಾ ವ್ಹಾ - ಅಕ್ಟೋಬರ್ 8, 2022
- ಚೇರ್ಮನ್ ಅವರ ಕುರಿತ ಪುಸ್ತಕ ಮತ್ತು ನಾನು - ಆಗಸ್ಟ್ 22, 2022
ಇಂದು ನಮ್ಮೂರ ಹಿರಿಯರು,ಕುಟುಂಬದ ಹಿತೈಷಿಗಳ ಜೊತೆಗೆ ಮಾತನಾಡುತ್ತಿದ್ದೆ ಆಗ ಅವರು ಮಾತಿನ ಮಧ್ಯೆ ನನ್ನ ಕಷ್ಟದ ದಿನಗಳು ಮತ್ತು ಅದಕ್ಕೆ ಇರಬಹುದಾದ ಕಾರಣಗಳನ್ನು ಕೇಳಿದರು.
ಇಡೀ ಪ್ರಕರಣ ಮತ್ತು ನಾನು ಮೋಸ ಹೋದ ಬಗೆಯನ್ನು ಸಿನೆಮಾ ಕತೆ ತರಹ ನಿರ್ಲಿಪ್ತ ಮತ್ತು ನಿರ್ಭಾವುಕವಾಗಿ ವಿವರಿಸಿದೆ.
‘ಇಷ್ಟೆಲ್ಲಾ ಗೊತ್ತಿದ್ದೂ ಮೋಸ ಹೋಗುವುದು ತಪ್ಪಲ್ವ, ಅದರಲ್ಲೂ ನೀನು ತುಂಬಾ ಜಾಣ ಆದರೂ ಏಕೆ ಹೀಗಾಯ್ತು?’
‘ಶನಿ ಹೆಗಲಿಗೆ ಏರಿದಾಗ ಮನುಷ್ಯ ವಿವೇಚನೆ ಕಳೆದುಕೊಳ್ಳುತ್ತಾನೆ. ಸಾಲದ್ದಕ್ಕೆ ಇತರರ ಮೇಲೆ ವಿಪರೀತ ವಿಶ್ವಾಸ ಇಟ್ಟುಕೊಂಡು ಅನೇಕ ಭ್ರಮೆಗಳನ್ನು ಸೃಷ್ಟಿ ಮಾಡಿಕೊಳ್ಳುವುದೇ ಕಾರಣ’ ಎಂದಾಗ ಮೌನವಾದರು.
ನಾವು ಹೀಗೆ ನಂಬಿ ಕೆಟ್ಟಾಗ ಮರುಕ ಪಡಬೇಕಾ? ಖಂಡಿತವಾಗಿ ಬೇಡ. ಕಾರಣ ನಮ್ಮ ಮನದಲ್ಲಿ ಮೂಡಿದ ಸಣ್ಣ ಆಸೆಯೊಂದು ದುರಾಸೆಯಾಗಿ ಬೆಳೆದು ಹೆಮ್ಮರವಾಗಿ ಬಿಡುತ್ತದೆ. ಆದರೆ ಅದು ದುರಾಸೆ ಅನಿಸದೆ ಮಹತ್ವದ ಉದ್ದೇಶ ಮತ್ತು ಗುರಿ ಎಂದುಕೊಂಡು ಬಿಡುತ್ತೇವೆ.
ಆ ಉದ್ದೇಶ ಈಡೇರಿಸಿಕೊಳ್ಳಲು ಅನೇಕ ವಿಷಯಗಳಲ್ಲಿ ರಾಜಿ ಮಾಡಿಕೊಂಡು ನಮ್ಮತನ ಮತ್ತು ಅಸ್ತಿತ್ವ ಕಳೆದುಕೊಂಡು ಬಿಡುತ್ತೇವೆ.
ನನ್ನ ಮಾತುಗಳನ್ನು ಆಲಿಸಿದವರು ಸಾಮಾನ್ಯ ವ್ಯಕ್ತಿ ಅಲ್ಲ.
ತಮ್ಮ ಸಾಧನೆ, ಹೋರಾಟ ಮತ್ತು ವ್ಯಾಪಾರೋದ್ಯಮದ ಮೂಲಕ ನೂರಾರು ಕೋಟಿ ಗಳಿಸಿದವರು. ಅವರು ನನ್ನ ಮೂರ್ಖತನವನ್ನು ಹಿಗ್ಗಾ ಮುಗ್ಗಾ ಜಾಡಿಸಬಹುದು ಎಂದುಕೊಂಡಿದ್ದೆ. ಆದರೆ ಅವರು ನಿಧಾನವಾಗಿ ಹೇಳಿದರು.
‘ಅಯ್ಯೋ ದೇವರು ದೊಡ್ಡವನು, ನಿಮ್ಮ ಹಿರಿಯರ ಪುಣ್ಯ ಮತ್ತು ಒಳ್ಳೆಯತನ ನಿನ್ನನ್ನು ಕಾಪಾಡಿದೆ. ಇಂತಹ ಸಂದರ್ಭಗಳಲ್ಲಿ ಮನುಷ್ಯ ಸಂಯಮ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡು ಬಿಡುತ್ತಾನೆ.’
ನಾನು ಒಂದು ಕ್ಷಣ ಮೌನವಾಗಿ ಇಡೀ ಘಟನೆ ಮತ್ತು ಅದಕ್ಕೆ ಕಾರಣರಾದ ವ್ಯಕ್ತಿಗಳನ್ನು ನೆನಪಿಸಿಕೊಂಡೆ.
ಪಾಪ ಖಂಡಿತವಾಗಿ ಅವರು ಯಾರೂ ಕೆಟ್ಟವರಲ್ಲ, ಮೋಸ ಮಾಡುವುದೇ ಅವರ ಗುಣ ಆದರೆ ನಮ್ಮ ದುರಾಸೆ ಅವರ ಜಾಲಕ್ಕೆ ಎಳೆದೊಯ್ಯುತ್ತದೆ.
ಅಂತಹ ಕಠಿಣ ಸಂದರ್ಭವನ್ನು ಸಮರ್ಥವಾಗಿ ನಿರ್ವಹಿಸಲು ನಮ್ಮ ಸಮಾಜ ಮತ್ತು ಗೆಳೆಯರು ಸಾಥ್ ಕೊಡುವುದಿಲ್ಲ. ‘ತೋಳ ತಗ್ಗಿಗೆ ಬಿದ್ದರೆ ಆಳಿಗೊಂದು ಕಲ್ಲು’ ಎಂಬಂತೆ ಆಡಿಕೊಂಡು ಆತ್ಮವಿಶ್ವಾಸ ಕುಗ್ಗಿಸಿ ಬಿಡುತ್ತಾರೆ.
ಈ ಘಟನೆ ನಡೆಯುವ ಕೆಲ ದಿನಗಳ ಮೊದಲು ನಾನು ಆತ್ಮಹತ್ಯೆ ಬರೀ ಮಹಾ ಪಾಪವಲ್ಲ ಅದರಾಚೆಗಿಂತಲೂ ಭಯಾನಕ ಎಂದು ಭಾಷಣ ಮಾಡಿದ್ದೆ. ಆ ಕಷ್ಟ ಕಾಲದಲ್ಲಿ ಹಿತೈಷಿಗಳೊಬ್ಬರು, ‘ಅವನ ಜಾಗದಲ್ಲಿ ನಾನಿದ್ದರೆ ವಿಷ ತೊಗೊಂಡು ಸಾಯ್ತಿದ್ದೆ ನೋಡ್ರಿ’ ಎಂದು ಆಡಿಕೊಂಡಿದ್ದನ್ನು ಇನ್ನೋರ್ವ ಹಿತೈಷಿಗಳು ಹೇಳಿದಾಗ, ‘ನಾ ಖಂಡಿತವಾಗಿ ವಿಷ ತಗೊಳೋದಿಲ್ಲ. ಬದುಕಿ ಸಮಸ್ಯೆಯಿಂದ ಹೊರ ಬಂದು ಇತರರಿಗೆ ಬದುಕುವ ಕಲೆ ಹೇಳಿಕೊಡುತ್ತೇನೆ’ ಎಂದು ನಕ್ಕು ಸುಮ್ಮನಾದೆ.
ಒಮ್ಮೆ ಬಸ್ಸಿನಿಂದ ಇಳಿದ ಕೂಡಲೇ ಗೆಳೆಯರೊಬ್ಬರು ಎದುರಾದರು.
‘ಏನ್ ಸರ್? ನೀವು ತಿರುಗಾಡುತ್ತಿದ್ದ ಕಾರು ಎಲ್ಲಿ ಹೋಯಿತು?’ ತುಂಬಾ ನಾಜೂಕಾಗಿ ಕೇಳಿದರು.
‘ಇಲ್ಲ ಮಾರಿ ಬಿಟ್ಟೆ’ ಅಷ್ಟೇ ನಯವಾಗಿ ಉತ್ತರಿಸಿ ಮುಂದೆ ಸಾಗಿದೆ.
‘ಈಗ ಅವನು ಕಷ್ಟ ಕಾಲದಲ್ಲಿ ಇದ್ದಾನೆ ನಿಮ್ಮ ಕಡೆ ಸಹಾಯ ಕೇಳಲು ಬಂದರೂ ಬರಬಹುದು’
ಎಂಬ ಎಚ್ಚರಿಕೆಯ ಸಂದೇಶಗಳನ್ನು ಹಿತೈಷಿಗಳು ಇತರ ಹಿತೈಷಿಗಳಿಗೆ ಕಳಿಸಿ ತಣ್ಣಗಿದ್ದರು.
ನಿರಂತರ ಧ್ಯಾನ, ಓದು, ಬರಹ ಮತ್ತು ಜೀವನಶೈಲಿ ತರಬೇತಿ ನೀಡುತ್ತಾ ಕಾಲನ ಕರೆಗಾಗಿ ಕಾಯುತ್ತಾ ಸಾಗಿದೆ. ಅಂದರೆ ಸಾವಿಗಾಗಿ ಅಲ್ಲ; ಹೊಸ ಬದುಕಿಗಾಗಿ!
ಹಾಗೆ ಕಾದದ್ದು ಸಾರ್ಥಕ ಎಂದು ಈಗ ಅನಿಸತೊಡಗಿದೆ.
ಆಡಿಕೊಂಡವರು, ನಾನು ಸತ್ತೇ ಹೋಗುತ್ತೇನೆ ಎಂದು ಗೇಲಿ ಮಾಡಿದವರು, ಹಿತೈಷಿಗಳಿಗೆ ಎಚ್ಚರಿಕೆಯ ಸಂದೇಶ ಕಳಿಸಿದವರನ್ನು ಏನೂ ಆಗಿಯೇ ಇಲ್ಲ ಎಂಬಂತೆ ಪ್ರೀತಿ ವಿಶ್ವಾಸದಿಂದ ಮಾತನಾಡಿಸುತ್ತೇನೆ.
ಆದರೆ ಅವರನ್ನು ಕ್ಷಮಿಸುವಷ್ಟು ನಾನು ದೊಡ್ಡವನಲ್ಲ. ಮಾಡಿದ ಅವಮಾನವನ್ನು ಮರೆಯವಷ್ಟು ಮೂರ್ಖನೂ ಅಲ್ಲ. ಕ್ಷಮಿಸುವ ಮತ್ತು ಮರೆಯುವ ತೊಳಲಾಟದಲ್ಲಿ ಪ್ರತಿಯೊಂದನ್ನು, ಪ್ರತಿಯೊಬ್ಬರನ್ನೂ ಅಳೆದು ತೂಗಿ ಮುಂದೆ ಸಾಗುವಾಗ ‘ಆಸೆಯೇ ದುಃಖಕ್ಕೆ ಮೂಲ’ ಎಂಬ ಬುದ್ಧನ ಸಾಲುಗಳು ನೆನಪಾದಾಗ, ‘ಹೌದು ನಾನು ಬದುಕಬೇಕೆಂಬ ಆಸೆ ನನ್ನ ಸಂತೋಷದ ಮೂಲವಾಯಿತು’ ಎಂದು ವ್ಯಾಖ್ಯಾನ ಮಾಡಿಕೊಂಡು ಮುಂದೆ ಸಾಗುತ್ತಲೇ ಇದ್ದೇನೆ.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್