ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಇದು ಅದಲ್ಲ

ಪೂರ್ಣಿಮಾ ಸುರೇಶ್
ಇತ್ತೀಚಿನ ಬರಹಗಳು: ಪೂರ್ಣಿಮಾ ಸುರೇಶ್ (ಎಲ್ಲವನ್ನು ಓದಿ)

ಇದು ಅದಲ್ಲ
ಅಂಗುಷ್ಠ ತುಂಡಾದ ಚಪ್ಪಲಿಯ
ಕಥೆಯಲ್ಲ
ಹಾಗೆ ಗಮನಿಸಿದರೆ
ಪ್ರತಿಯೊಬ್ಬರಲ್ಲೂ
ಒಂದೊಂದು ಕಥೆಯಂತೆ
ಪ್ರತೀ ಮೆಟ್ಟಿಗೂ
ಅಂಟಿದೊಂದು ಕಥೆ
ಇಲ್ಲವೇ ಕವಿತೆ ಇದ್ದೇ ಇದೆ

ಅವಳ ಚಪ್ಪಲಿಗೂ ನನ್ನ ಚಪ್ಪಲಿಗೂ
ಇಲ್ಲ ಸಾಮ್ಯತೆ
ಚಪ್ಪಲಿ ಎಂಬುದರ ಹೊರತು

ಮತ್ತೆಮತ್ತೆ ಪದ ಮೂಡಿ ಹರಿದು ಬಂದ ಪ್ರಶ್ನೆ
ನನಗೇ ರವಾನಿಸುತ್ತಾಳೆ:
ನಿನ್ನ ಮೆಟ್ಟಿಗೆ ಅಂಗುಷ್ಠವಿದೆ
ಆದರೆ ಏಕಾಂಗಿ
ಅಂಗಡಿಯಲಿ ಪ್ರದರ್ಶನಕ್ಕಿಟ್ಟ
ಈ ಪಾದರಕ್ಷೆಗೆ ಜೋಡಣೆಯ ಸೇತುವೇ ಇಲ್ಲ.
ನಿನ್ನ ರಕ್ಷಣೆ ಹೇಗೆ ಮಾರಾಯತಿ
ಭೀತಿ ಹೊಡೆಚಾಚಿ ಕಾಡುವುದಿಲ್ಲವೇ..?

ನಗುತ್ತೇನೆ
ಅಭ್ಯಾಸವಾದ ನಗೆ
ಅಭ್ಯಾಸವಾದ ನಡಾವಳಿ
ನಾನೂ ಎಕ್ಕಡವೆ
ಹಲವು ಬಾರಿ ಅಸ್ಪೃಶ್ಯ,
ಕೆಲವು ಬಗೆ ಒಳಕೋಣೆ
ತಳಪಾಯ ಭದ್ರವಿದ್ದರಾಯಿತು
ಕುಸಿಯದ ಹಾಗೆ
ಸುರಕ್ಷೆಗೆ ನಿರ್ಧಿಷ್ಟ ಮಾಪನಗಳಿಲ್ಲ

ಹೀಗೆ ಜೊತೆ ಜೊತೆಗೇ ಸವೆಯುತ್ತೇವೆ
ಕಲ್ಲು, ಮುಳ್ಳು, ಮಣ್ಣು, ಹುಲ್ಲು, ಕಸಕಡ್ಡಿ.. ಸವರಿ
ಕಾಲುಹಾದಿ ದಾಟಿ..
ಮನೆ,ಆಫೀಸು,ತೋಟ,ನದಿ,
ಕಾಡು, ದೇವಾಲಯ..

ಈ ಉತ್ಸವಕ್ಕವೇ ಅಸ್ಪೃಶ್ಯ ತೇರು
ಅವನ ಗಲ್ಲಿಗೆ ಗಮನ
ಇಚ್ಛೆಯ ಗಮ್ಯಕ್ಕೆ ಗಮ್ಯವೇ
ಪಾಕಗೊಂಡಂತೆ