ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಇದೇನು ನಾಟಕವಲ್ಲ

ಕು.ಸ.ಮಧುಸೂದನ ರಂಗೇನಹಳ್ಳಿ
ಇತ್ತೀಚಿನ ಬರಹಗಳು: ಕು.ಸ.ಮಧುಸೂದನ ರಂಗೇನಹಳ್ಳಿ (ಎಲ್ಲವನ್ನು ಓದಿ)

ನೀ ಬರುವ ಮುಂಚೆ
ಮುಖವಾಡಗಳ ರಾಶಿಯನ್ನೇ
ಹರಡಿಕೊಂಡಿದ್ದೆ
ಸುಳ್ಳುಗಳು ಸುಲಭವಾಗಿದ್ದವು
ಮೋಸಗಳು ಮಾಮೂಲಾಗಿದ್ದವು
ಕೊಟ್ಟ ಮಾತುಗಳು ಇಟ್ಟ ಆಣೆಗಳು ಅಳತೆ ಮೀರಿದ್ದವು
ಅವು ಕಷ್ಟದ ದಿನಗಳಾಗಿದ್ದವು
ಆತ್ಮದ ಮಾತಾಡುವುದೇ ಅಸಹ್ಯವೆನಿಸಿತ್ತು
ಎಲ್ಲ ಬಣ್ಣಗಳನ್ನೂ ಕಪ್ಪು ಬಣ್ಣದೊಳಗೆ ಬೆರೆಸಿ
ಬೇರೆ ಯಾವ ಬಣ್ಣವೂ ಇರದಂತೆ ಮಾಡಿದ್ದ ದಿನಗಳವು
ಮೂರೇ ದಿನಕ್ಕಾಗಲೀ
ನೀ ಬಂದ ಮೇಲೆ
ಅಷ್ಟೂ ಮುಖವಾಡಗಳ ಸುಟ್ಟು ಹಾಕಿದೆ
ಮೋಸದ ಮಾತುಗಳ ಮರೆತುಬಿಟ್ಟೆ
ಈಡೇರಿಸಲಾಗದ ಆಣೆಗಳ ಮಾಡುವುದ ನಿಲ್ಲಿಸಿ
ಕಡತಂದು ಕಾಮನ ಬಿಲ್ಲಿಂದ ಬಣ್ಣಗಳ ಓಕುಳಿಯಾಡಿದೆ
ಆತ್ಮಸಾಕ್ಷಿಯ ಎಚ್ಚರಿಸಿಕೊಂಡೆ
ನಿನ್ನ ಮುಂದೆ ಪರಿಪೂರ್ಣವಾಗಿ ತೆರೆದುಕೊಂಡು
ಹಳೆಯ ಪಾತಕಗಳಿಗೊಂದು ಕ್ಷಮೆ ಕೋರಿ
ಹೊಸ ಮನುಷ್ಯನಾಗಬೇಕೆಂದು ಬಯಸಿದೆ
ನನ್ನ ನಾನು ಕೊಂದುಕೊಂಡು
ನಿನ್ನ ಹೊಟ್ಟೆಯಲಿ ಹೊಸದಾಗಿ
ಹುಟ್ಟಿದ ಮಗುವಾಗ ಬೇಕೆಂದು ಹಂಬಲಿಸಿದೆ
ಕ್ರಿಸ್ತನ ಮುಂದೆ
ಪಾಪ ನಿವೇಧನೆ ಮಾಡಿಕೊಳ್ಳುವಂತೆ
ನಿನ್ನೆದುರು ಮಂಡಿಯೂರಿ ಕೂತಿದ್ದೆ
ಮುಚ್ಚಿದ ಕಣ್ಣು
ತೆರೆಯುವಷ್ಟರಲ್ಲಿ ಮತ್ತೆ
ಗಾಢಾಂಧಕಾರ
ನೀನೂ ಮಾಯವಾಗಿಬಿಟ್ಟೆ.
ಪಾಪಿಯೊಬ್ಬ ಬದಲಾಗುವಂತಿಲ್ಲ
ನಿನ್ನ ಪುಣ್ಯವಂತರ ಲೋಕದಲ್ಲಿ