ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಇನ್ನು ಹೀಗಿರಲಾಗದು

ಅನಿತಾ ಪೂಜಾರಿ
ಇತ್ತೀಚಿನ ಬರಹಗಳು: ಅನಿತಾ ಪೂಜಾರಿ (ಎಲ್ಲವನ್ನು ಓದಿ)

ಹೀಗೆಯೇ ಇದ್ದೆನಲ್ಲಾ
ಅಂದಿನಿಂದ ಇಂದಿನವರೆಗೂ
ಬದಲಿ ಭಾವಗಳಿಗೆ ಎಡೆ ನೀಡದೆ
ಇರುವ ಬಂಧವನೇ ಮನಸಾ ಒಪ್ಪಿಕೊಂಡು
ಅದರೊಳಗೆ ತನ್ನ ತಾ ಜೀಕಿಸಿಕೊಂಡು

ಮುಂದೆ ಮುಂದೆ ನಡೆದಂತೆ…
ಮಾತುಗಳು ಪರವಾಗದೆ ವಿವಶವಾಗಿ
ಮೌನ ತೀರಕ್ಕೆ ಬಂದು ನಿಂತಿದ್ದು
ಸೋಲು ಸೋಲೆಂದೆನ್ನದೆ ಮತ್ತೆ
ಮರುಮಾತಿಗೆ ಮುನ್ನುಡಿ ಬರೆದಿದ್ದು

ಪ್ರೀತಿಗೆ ಒಲಿದ ಮಾತು
ವಿರಸದ ವೇಳೆಯಲಿ
ಗತಿ ಬದಲಿಸದೆ ಇರುತ್ತಿದ್ದರೆ
ಪೂರ್ಣ ಅಪೂರ್ಣತೆಯ ನಡುವೆ
ಇಬ್ಬಗೆಯ ದನಿಯೇಳದಿರುತ್ತಿದ್ದರೆ
ಹೀಗಾಗುತಿರಲಿಲ್ಲವೇನೋ…!

ಒಪ್ಪು ತಪ್ಪುಗಳ ಸವಾಲಿಗಿಂತ
ಸಣ್ಣ ಕಾರಣ ಸಾಕು ಒಂದು ಎರಡಾಗಲು
ಮೃದು ಮಂದಹಾಸವು ವಿದಾಯಗೀತೆ ಹಾಡಲು

ಬದುಕಿನ ಒಂದೊಂದು ಕ್ಷಣ
ಜೊತೆಯಾಗಿ ಕಳೆಯುವ
ಭಾಷೆ ಪರಿಭಾಷೆಗಳು
ಇನ್ನಷ್ಟು ಗಾಢವಾಗಬೇಕಾದರೆ
‘ಅಹಂನ ಕುಣಿಕೆ ಕಳಚಿ ಬಿಡಬೇಕು’
ಹಾಗಂದುಕೊಂಡ ದಿನಗಳೆಷ್ಟೋ

ಬೇಡವೆಂದಾಗ ದೂರ ಬೇಕೆಂದಾಗ ಸನಿಹ
ಬದುಕು ಯಂತ್ರವಾದರೆ ಹೇಗೆ…!

ಇನ್ನು ಹೀಗಿರಲಾಗದು
ಅಕಾಲಿಕ ನೆರೆಯಲಿ ಕಳೆದು ಹೋಗದೆ
ಸಕಾಲಿಕ ಮಳೆಯಲಿ ತಂಪಾಗಬೇಕು
ಮಾತು ಮೌನಗಳ ಸಂಜ್ಞೆಯಲಿ
ಗೇಯ ಭಾವದ ಪದಗಳಷ್ಟೇ ಕೂಡಿ
ಸೋಬಾನೆ ಹಾಡುಗಳೇ ಕೇಳಿ ಬರಬೇಕು