ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮುಂಬೈ ನಗರದ ಬದುಕು ಮತ್ತು ಮುಂಗಾರು ಮಳೆ

ಅನಿತಾ ಪೂಜಾರಿ
ಇತ್ತೀಚಿನ ಬರಹಗಳು: ಅನಿತಾ ಪೂಜಾರಿ (ಎಲ್ಲವನ್ನು ಓದಿ)

ಒಂದು ವರ್ಷದ ಹಿಂದಿನವರೆಗೆ ಮುಂಬೈಯಿಂದ ಊರಿನ ಕಡೆಗೆ ಸಾಗುವ ರೈಲು ಎಪ್ರಿಲ್ ಮೇ ತಿಂಗಳಲ್ಲಿ ಲೋಕಲ್ ರೈಲಿನ ಅನುಭವವನ್ನೇ ಕೊಡುತ್ತಿತ್ತು. ಮಕ್ಕಳ ವಾರ್ಷಿಕ ಪರೀಕ್ಷೆ ಮುಗಿದು ರಜೆ ಸಿಕ್ಕಿತೆಂದರೆ ಸಾಕು, ಮುಂಬೈಯಲ್ಲಿ ನೆಲೆಸಿರುವವರಿಗೆ ತಮ್ಮ ತಮ್ಮ ಊರಿಗೆ ಹೋಗುವ ತರಾತುರಿ. ಆ ಸಮಯದಲ್ಲಿ ರೈಲು ಟಿಕೇಟು ಸಿಗುವುದೆಂದರೆ ಲಕ್ಕಿಡಿಪ್ ಬಂಪರ್ ಡ್ರಾ ಹೊಡೆದ ಹಾಗೆ. ನಾಲ್ಕು ತಿಂಗಳಿನ ಮೊದಲೇ ಟಿಕೇಟು ಕಾಯ್ದಿರಿಸಿಕೊಳ್ಳಬೇಕು. ಈಗ ಆನ್ಲೈನ್ ವ್ಯವಸ್ಥೆಯಿಂದ ಎಲ್ಲವೂ ಸುಲಲಿತವಾಗಿದೆಯಾದರೂ ಮೊದಲು ಹಾಗಿರಲಿಲ್ಲ.

ಎಪ್ರಿಲ್ ಹದಿನೈದರ ನಂತರ ಊರಿಗೆ ಹೋಗುವ ಟಿಕೇಟು ಸಿಗಬೇಕಾದರೆ ರಾತ್ರಿಯೇ ರೈಲು ನಿಲ್ದಾಣದಲ್ಲಿ ಕ್ಯೂ ನಿಲ್ಲಬೇಕಾಗುತ್ತಿತ್ತು. ಅಲ್ಲಿ ಪಹರೆಗೆ ನಿಂತಿರುವ ಪೋಲೀಸ್ ಸಿಬ್ಬಂದಿಗಳು ಯಾವುದೇ ನೂಕು ನುಗ್ಗಲು, ಜಗಳ ಆಗದಂತೆ ನಿಗಾ ವಹಿಸುತ್ತಿದ್ದರು. ನಿಯಮಾನುಸಾರವಾಗಿ ಪ್ರತಿದಿನ ಬೆಳಗ್ಗೆ ಎಂಟು ಗಂಟೆಗೆ ರೈಲ್ವೆ ನಿಲ್ದಾಣದ ಪ್ರತ್ಯೇಕ ಕೌಂಟರಿನಲ್ಲಿ ಟಿಕೇಟು ಕೊಡಲು ಆರಂಭಿಸುತ್ತಿದ್ದರು. ಆದರೆ ಐದೇ ನಿಮಿಷದಲ್ಲಿ ಆದಿನ ಸಿಗಬೇಕಾದ ಎಲ್ಲ ಟಿಕೇಟುಗಳು ಮುಗಿದು, ವೈಟಿಂಗ್ ಲೀಸ್ಟ್‍ನ ಸಂಖ್ಯೆ ಮುನ್ನೂರನ್ನು ದಾಟುತ್ತಿತ್ತು. ಕೆಲವು ಬಾರಿ ನಾನೂ ಗೆಳತಿಯರೊಂದಿಗೆ ಬೆಳಗ್ಗಿನ ಜಾವ ಮೂರುಗಂಟೆಗೆ ಹೋಗಿ ಕ್ಯೂನಲ್ಲಿ ನಿಂತು ಟಿಕೇಟು ಸಿಗದೆ ವಾಪಸ್ಸು ಬಂದಿದ್ದುಂಟು. ಆದರೆ ಮರು ಪ್ರಯತ್ನಿಸಿ ಆರ್.ಎ.ಸಿ ಟಿಕೇಟನ್ನಾದರೂ ಗಿಟ್ಟಿಸಿಕೊಳ್ಳುತ್ತಿದ್ದೆ. ಯಾಕೆಂದರೆ ಬೇಸಿಗೆ ರಜೆಯಲ್ಲಿ ಮುಂಬೈಯಿಂದ ಊರಿನವರೆಗೆ ನಿಶ್ಚಿಂತೆಯಿಂದ ಪ್ರಯಾಣಿಸಬಹುದಲ್ಲವೇ…!

ಹಾಗಿದ್ದರೂ ಪ್ರಯಾಣ ಸುಗಮವಾಗಬಹುದೆಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ‘ಊರಿಗೆ ಹೋಗುವ ಟಿಕೇಟು ಆಯ್ತಾ?’ ಎಂದು ಪರಿಚಿತರ ಕರೆ ಬಂದಾಗ ನಾವು, ‘ಹೌದು’ ಎಂದು ನಮ್ಮ ಖುಷಿಯನ್ನು ಅವರಲ್ಲಿ ಹಂಚಿಕೊಳ್ಳುತ್ತೇವೆ. ಆದರೆ ಕೆಲವೊಮ್ಮೆ ಅದುವೇ ಮುಳುವಾಗಿಬಿಡುತ್ತದೆ. ‘ನೀವು ತುಂಬ ಅದೃಷ್ಟವಂತರು ಮಾರಾಯ್ರೇ. ಆದ್ರೆ ನಮ್ಮ ಗ್ರಹಚಾರ ನೋಡಿ, ಮೂರ್ನಾಲ್ಕು ಸಲ ಹೋಗಿ ಕ್ಯೂನಲ್ಲಿ ನಿಂತರೂ ಟಿಕೇಟು ಸಿಗಲಿಲ್ಲ. ಕೊನೆಗೆ ವೈಟಿಂಗ್ ಲೀಸ್ಟ್‍ನ ಟಿಕೇಟು ತೆಗೆದುಕೊಂಡು ಬಂದಿದ್ದೇವೆ. ಊರಿಗೆ ಹೋಗಲು ಒಂದು ವಾರ ಮಾತ್ರ ಉಳಿದಿದೆ. ಇನ್ನು ಕನ್ಫರ್ಮ್ ಆಗುವ ಚಾನ್ಸೇ ಇಲ್ಲ ಬಿಡಿ. ಹೆಂಡತಿ ಮಗಳಿಗೆ ಬಸ್ಸೆಂದರೆ ಆಗುವುದಿಲ್ಲ. ಪ್ರಯಾಣದ ವೇಳೆ ಯಾವ ಗುಳಿಗೆ ತೆಗೆದುಕೊಂಡರೂ ಅವರ ವಾಂತಿ ನಿಲ್ಲುವುದಿಲ್ಲ. ಆದರೆ ರೈಲಿನಲ್ಲಿ ಆ ತೊಂದರೆ ಇಲ್ಲವಲ್ಲಾ…! ಏಜೆಂಟರುಗಳ ಮುಖಾಂತರ ರೈಲಿನ ಟಿಕೇಟು ಮಾಡೋಣವೆಂದರೆ ಒಂದು ಟಿಕೇಟಿಗೆ ಸಾವಿರ ರೂಪಾಯಿ ಹೆಚ್ಚಿಗೆ ಕೇಳುತ್ತಾರೆ. ಇನ್ನೊಂದು ಕಡೆ ಹಣದ ತಾಪತ್ರಯ ಬೇರೆ. ಹೇಗಾದರೂ ಕರುಣೆ ತೋರಿಸಿ ನಿಮ್ಮ ಜೊತೆಗೆ ನಮ್ಮನ್ನೂ ಕರೆದುಕೊಂಡು ಹೋಗುತ್ತೀರಾ? ನೀವೇನೂ ಚಿಂತೆ ಮಾಡಬೇಕಾಗಿಲ್ಲ. ಟಿ.ಸಿ ಟಿಕೇಟು ಚೆಕ್ಕಿಂಗ್‍ಗೆ ಬರುವಾಗ ನಾವು ಎದ್ದು ಟಾಯ್ಲೇಟಿಗೋ, ಬೇರೆ ಬೋಗಿಗೋ ಓಡಾಡಿಕೊಂಡು ತಪ್ಪಿಸಿಕೊಳ್ತೇವೆ’ ಅಂದಾಗ ಅಲ್ಲಿ ‘ಆಗುವುದಿಲ್ಲ’ ಅನ್ನುವುದಕ್ಕೆ ನಮ್ಮಲ್ಲಿ ಯಾವ ಕಾರಣವೂ ಉಳಿದಿರುವುದಿಲ್ಲ. ಅವರನ್ನೂ ಸೇರಿಸಿಕೊಂಡು ಮೂರು ಜನರ ಸೀಟಿನಲ್ಲಿ ಆರು ಜನರು ಹೋಗುವ ಪರಿಸ್ಥಿತಿ ಬಂದು ಬಿಡುತ್ತದೆ.

ಆದರೆ ಈಗ ಊರಿಗೆ ಹೋಗುವಂಥ ಕೆಲವು ರೈಲುಗಳ ಅನುಕೂಲತೆ ಇರುವುದರಿಂದ ಹಿಂದಿನ ಹಾಗೆ ಟಿಕೇಟಿಗಾಗಿ ಪರದಾಡುವ ಪರಿಸ್ಥಿತಿ ಇಲ್ಲ. ಕೊರೋನಾ ಕಾಲಿಟ್ಟ ಮೇಲಂತೂ ಬಹಳಷ್ಟು ಬದಲಾವಣೆಗಳು ಆಗಿವೆ. ಮಕ್ಕಳಿಗೂ ಆನ್ಲೈನ್ ಕ್ಲಾಸ್ ಇರುವುದರಿಂದ ಯಾವಾಗ ಬೇಕಾದರೂ ಊರಿಗೆ ಹೋಗಿ ಬರಬಹುದು. ಊರಿನಲ್ಲಿ ಇರಲಿಚ್ಚಿಸುವವರು ಅಲ್ಲಿಯೇ ಉಳಿಯಬಹುದು. ಮಕ್ಕಳ ಪಾಠ ಪರೀಕ್ಷೆ ಎಲ್ಲವೂ ಆನ್ಲೈನನ್ನೇ ಅವಲಂಬಿಸಿರುವುದರಿಂದ ಯಾವುದೇ ವ್ಯತ್ಯಾಸ ಆಗುವುದಿಲ್ಲ.

ಬೇಸಿಗೆ ರಜೆಯಲ್ಲಿ ಊರಿಡೀ ಮುಂಬೈಗರದ್ದೇ ಅಬ್ಬರ
ನಗರದಲ್ಲಿರುವ ಗ್ರಹಿಣಿಯರು ಮಕ್ಕಳಿಗೆ ರಜೆ ಸಿಕ್ಕಿದ ಕೂಡಲೇ ಊರಿಗೆ ಧಾವಿಸುತ್ತಾರೆ. ಅದಕ್ಕೂ ಹಲವು ಕಾರಣಗಳಿವೆ. ಮಾರ್ಚ್ ತಿಂಗಳು ಕಳೆಯಿತೆಂದರೆ ಸಾಕು, ಸೂರ್ಯನ ಶಾಖ ಕಾಂಕ್ರೀಟ್ ಕಾಡಿನಲ್ಲಿರುವ ಮನೆ ಮನೆಗಳೊಳಗೂ, ಹೊರಗೂ ನಿಗಿ ನಿಗಿ ಕೆಂಡದಂತೆ ಸುಡಲಾರಂಭಿಸುತ್ತದೆ. ಇದೇ ಸಂದರ್ಭದಲ್ಲಿ ನಗರದಿಂದ ತುಸು ಹೊರಭಾಗದಲ್ಲಿರುವ ಪ್ರದೇಶಗಳಲ್ಲಿ ಆಗಾಗ್ಗೆ ವಿದ್ಯುತ್ ಕಡಿತವನ್ನೂ ಮಾಡಲಾರಂಭಿಸುತ್ತಾರೆ. ವಿಪರೀತ ಸೆಕೆಗೆ ದಿನಕ್ಕೆ ಎರಡು ಮೂರು ಬಾರಿಯಾದರೂ ಸ್ನಾನ ಮಾಡಿ ಮೈಮನಸ್ಸುಗಳನ್ನು ತಂಪಾಗಿರಿಸಿಕೊಳ್ಳೋಣವೆಂದರೆ ಈ ಮೂರು ನಾಲ್ಕು ತಿಂಗಳಿನಲ್ಲಿ ಅಗತ್ಯಕ್ಕೆ ಬೇಕಾದಷ್ಟೇ ನೀರನ್ನು ಸರಬರಾಜು ಮಾಡುತ್ತಾರೆ. ಇಂಥ ಸಮಯದಲ್ಲಿ ನೀರನ್ನು ಶೇಖರಿಸಿಡುವುದು ಎಷ್ಟು ಮುಖ್ಯ ಎಂಬುದು ನಗರವಾಸಿ ಮಧ್ಯಮವರ್ಗದ ಕುಟುಂಬಗಳಿಗೆ ಚೆನ್ನಾಗಿ ಅನುಭವ ಇರುತ್ತದೆ. ವಾರದ ಯಾವ ದಿನಗಳಲ್ಲಿ ನೀರು ಬರುವುದಿಲ್ಲ? ಎಂಬುದನ್ನು ಗಮನದಲ್ಲಿಟ್ಟುಕೊಂಡು ಎರಡು ದಿನದ ಮೊದಲೇ ಒಂದೊಂದು ತಟ್ಟೆ ನೀರಿಗೂ ಲೆಕ್ಕಾಚಾರನ್ನಿಟ್ಟುಕೊಂಡೇ ಉಪಯೋಗಿಸಬೇಕಾಗುತ್ತದೆ. ಕೆಲವೊಮ್ಮೆ ದುರಸ್ತಿ ಕಾರ್ಯಗಳಿದ್ದಲ್ಲಿ ‘ಇನ್ನು ಎರಡು ದಿನಗಳ ಕಾಲ ಇಂಥ ಪ್ರದೇಶಗಳಲ್ಲಿ ನೀರನ್ನು ಸರಬರಾಜು ಮಾಡಲಾಗುವುದಿಲ್ಲ!’ ಎಂದು ಮರಾಠಿ ಭಾಷೆಯಲ್ಲಿ ಘೋಷಿಸುತ್ತಾ, ಬಿ.ಎಂ.ಸಿ. ವಾಹನಗಳು ಗಲ್ಲಿ ಗಲ್ಲಿ ಸುತ್ತುತ್ತವೆ. ಆದರೆ ಅದು ನಾವಿರುವ ಮೂರನೆಯ ಮಹಡಿಯವರೆಗೆ ಸ್ಪಷ್ಟವಾಗಿ ಕೇಳಿಸುವುದಿಲ್ಲ. ವಿಷಯ ಸರಿಯಾಗಿ ಅರ್ಥವಾಗದೆ ಕೆಲವು ಬಾರಿ ಸಂಕಷ್ಟಕ್ಕೆ ಸಿಲುಕಿದ್ದಿದೆ. ಈಗೆಲ್ಲ ಮೈಕ್‍ನ ಸದ್ದು ಕೇಳಿದೊಡನೆ ಕಟ್ಟಡದಿಂದ ಕೆಳಗಡೆ ಇಳಿದು ಬಂದು ರಸ್ತೆ ಬದಿಯ ಅಂಗಡಿಗಳಲ್ಲಿ ವಿಚಾರಿಸಿ ಬರುತ್ತೇನೆ. ನಗರವಾಸಿಗಳಾದ ಮೇಲೆ ಇಲ್ಲಿನ ಪರಿಸ್ಥಿತಿಗೆ ಹೊಂದಿಕೊಂಡು ಬದುಕುವ ಕಲೆಯನ್ನು ಕರಗತ ಮಾಡಿಕೊಳ್ಳಲೇಬೇಕಾಗುತ್ತದೆ.

ಮುಂಬೈಯಲ್ಲಿ ಮಳೆ ಶುರುವಾದರೆ ಮತ್ತೆ ನೀರಿನ ಸಮಸ್ಯೆ ಇರುವುದಿಲ್ಲ. ಆದರೆ ಇಲ್ಲಿ ಮುಂಗಾರು ಮಳೆ ಕಾಲಿಡುವುದು ಜೂನ್ ಹದಿನೈದರ ನಂತರವೇ! ಕಳೆದ ವರ್ಷ ಮಳೆಗಾಲ ಆರಂಭವಾದದ್ದು ಜುಲೈ ಮೊದಲ ವಾರದಲ್ಲಿ. ಲಾಕ್‍ಡೌನ್‍ನಿಂದಾಗಿ ಬಹಳಷ್ಟು ಮಂದಿ ಊರಿಗೆ ಹೋಗುವ ಅವಕಾಶವನ್ನು ಕಳೆದುಕೊಂಡಿದ್ದರು. ಮುಂಬೈಯಲ್ಲಿ ಮಳೆ ಬರುವವರೆಗಿನ ಕಾಯುವಿಕೆ ಅದೊಂದು ರೀತಿಯ ತಪಸ್ಸು. ಆದರೆ ಊರಿನ ಸ್ಥಿತಿ ಹಾಗಲ್ಲ. ಎಪ್ರಿಲ್ ತಿಂಗಳು ಬಂತೆಂದರೆ ಸಾಕು ಗುಡುಗು, ಮಳೆ, ಮಿಂಚು, ಮೋಡಗಳ ತಕದಿಮಿತ ಶುರು. ನಮ್ಮೂರಿನಲ್ಲಂತೂ ದಟ್ಟ ಕಾಡುಗಳಿರುವುದರಿಂದ ತುಸು ಹೆಚ್ಚೇ ಮಳೆಯಾಗುತ್ತದೆ. ಹೊರಗಡೆ ಎಷ್ಟೇ ಸೆಕೆಯಿದ್ದರೂ ಆಗಾಗ ಬರುವ ಮಳೆ ಬಿಸಿಲಿನ ತೀಕ್ಷ್ಣತೆಯನ್ನು ಕಡಿಮೆ ಮಾಡುತ್ತದೆ. ನಗರವಾಸಿಗಳಿಗೆ ಊರಿನ ಇಂಥ ವಾತಾವರಣವು ಬಹಳ ಹಿತವೆನಿಸುತ್ತದೆ. ಮದುವೆ ಸಮಾರಂಭಗಳು ಕೂಡ ಇದೇ ಸಮಯದಲ್ಲಿ ನಡೆಯುವುದರಿಂದ ಎಪ್ರಿಲ್‍ನಿಂದ ಜೂನಿನವರೆಗೆ ಊರಿಡೀ ಮುಂಬೈಗರದ್ದೇ ಸಡಗರ. ಹಾಗೆಯೇ ಮೇ ತಿಂಗಳ ಅಂತ್ಯದಿಂದ ಜೂನ್ ಕೊನೆಯವರೆಗೆ ಮಂಗಳೂರಿನಿಂದ ಮುಂಬೈಗೆ ಹೋಗುವ ರೈಲು ಹಲಸಿನ ಹಣ್ಣು, ಮಾವಿನಹಣ್ಣು, ಬಸಳೆ ಕಟ್ಟು, ಉಪ್ಪಿನಸೋಳೆ, ಉಪ್ಪಿನಕಾಯಿ, ತೆಂಗಿನಕಾಯಿಯ ಗೋಣಿ ಮತ್ತು ಅಕ್ಕಿ ಮೂಟೆಗಳನ್ನು ತುಂಬಿಕೊಂಡು ಸಾಗುತ್ತಿರುತ್ತದೆ. ಮುಂಬೈಯಲ್ಲಿ ನೆಲೆಸಿರುವವರು ಊರಿನಿಂದ ಇಷ್ಟಪಟ್ಟು ಕೊಂಡು ಹೋಗುವ ಬಹು ಮುಖ್ಯವಾದ ಆಸ್ತಿ ಇದೆಂದರೆ ಅತಿಶಯೋಕ್ತಿಯಲ್ಲ.

ಮುಂಬೈಯಲ್ಲಿ ನೆರೆ ಬಂದರೆ…!
ಮಳೆಗಾಲದಲ್ಲಿ ಊರಿನಲ್ಲಿ ಜೋರಾಗಿ ಮಳೆ ಬಂದು ನದಿಗಳು ತುಂಬಿ ನೆರೆ ನೀರು ಗದ್ದೆಗೆ ಇಳಿಯಿತೆಂದರೆ ನದಿ ತೀರದ ನಿವಾಸಿಗಳಿಗೆ ಹಬ್ಬ. ‘ಬಾರೀ ಬೊಲ್ಲ ಬೂರ್ದುಂಡುಗೆ ಇನಿ. ನಮ ಬೊಲ್ಲ ತೂವರೆ ಪೋಯಾ? (ನದಿಯಲ್ಲಿ ನೆರೆ ಬಂದಿದೆ. ಇವತ್ತು ನೆರೆ ನೋಡಲು ಹೋಗೋಣವಾ?) ಎತ್ತರದ ಪ್ರದೇಶದಲ್ಲಿ ನಿಂತು ಬೊಲ್ಲದ ನೀರು ಉಕ್ಕಿ ಹರಿಯುವುದನ್ನು ನೋಡುವುದೆಂದರೆ ಅಪರಿಮಿತ ಸಂಭ್ರಮ. ನದಿ ನೀರು ಹರಿದು ಹೋಗುವ ಕೋಂಟು(ಮೂಲೆ) ಪ್ರದೇಶಗಳಲ್ಲಿ ತೆಂಗಿನಕಾಯಿ ಸೇರಿಕೊಳ್ಳುವುದರಿಂದ ಅದನ್ನು ಹಿಡಿಯಲು ಕೆಲವರು ಕಾಯುತ್ತಾ ಕೂತಿರುತ್ತಾರೆ. ದಟ್ಟ ಮೋಡ ಕವಿದು ಮಳೆ ಬೀಳಲಾರಂಭಿಸಿದರೆ ಸಾಕು, ಒಂದು ಕೊಡೆ ಮತ್ತು ಕತ್ತಿಯನ್ನು ಹಿಡಿದು ಇದೇ ಕಾಯಕವನ್ನು ಮಾಡುವವರು ಊರಲ್ಲಿ ಬಹಳಷ್ಟು ಮಂದಿ ಇದ್ದಾರೆ. ನಮ್ಮೂರಿನ ನದಿ ತೀರಗಳೆಲ್ಲ ತೋಟಗಳು, ಗದ್ದೆಗಳು, ದಟ್ಟ ಪೊದೆ ಮತ್ತು ಮರಗಳಿಂದ ಆವೃತವಾಗಿ ನದಿಯ ಇಕ್ಕೆಲಗಳಿಗೆ ಹಚ್ಚ ಹಸಿರಿನ ಕೋಟೆ ಕಟ್ಟಿದ ಹಾಗೆ ನಿತ್ಯ ಹರಿದ್ವರ್ಣವಾಗಿ ಕಂಗೊಳಿಸುತ್ತವೆ. ಮಳೆಗಾಲದಲ್ಲಿ ಉಕ್ಕಿ ಬರುವ ಪ್ರವಾಹದ ನೀರು ಮೆಕ್ಕಲು ಮಣ್ಣನ್ನು ತಂದು ಹಾಕುವುದರಿಂದ ಆ ಪ್ರದೇಶಗಳಲ್ಲಿ ಬೆಳೆ ಸಮೃದ್ಧವಾಗಿ ಬೆಳೆಯುತ್ತದೆ. ನೆರೆನೀರಿನಿಂದ ಅಲ್ಲಿನ ನಿವಾಸಿಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ. ಇನ್ನೊಂದು ವಿಶೇಷವೆಂದರೆ ವರ್ಷಕ್ಕೆ ಒಂದು ಹೆಣ ನೆರೆಯಲ್ಲಿ ತೇಲಿ ಬಂದರೆ ಊರಲ್ಲಿ ದೊಡ್ಡ ಸುದ್ದಿಯಾಗಿ ತಿಂಗಳಿಡೀ ಹರಿದಾಡುತ್ತಿರುತ್ತದೆ.
ಆದರೆ ನಗರದಲ್ಲಿ ಬರುವ ನೆರೆ ಇಡೀ ಮುಂಬೈಯನ್ನು ಬೆಚ್ಚಿ ಬೀಳಿಸುವಂಥದ್ದು. ಒಂದೆರಡು ದಿನ ಬಿಡದೆ ಮಳೆ ಸುರಿದರೂ ಸಾಕು, ತಗ್ಗು ಪ್ರದೇಶಗಳೆಲ್ಲ ಮುಳುಗಿಬಿಡುತ್ತವೆ. ಚರಂಡಿಗಳ ನೀರಿನ ರಭಸಕ್ಕೆ ರಸ್ತೆಯ ನಡುವೆ ಮುಚ್ಚಲಾಗಿರುವ ಚರಂಡಿಗಳ ಮುಚ್ಚಳಗಳು ತೆರೆದು ಅದರೊಳಗೆ ಜನರು ಎಡವಿ ಬಿದ್ದು ಜೀವ ಕಳೆದುಕೊಂಡ ಅದೆಷ್ಟೊ ಘಟನೆಗಳು ಪ್ರತಿವರ್ಷವೂ ನಡೆಯುತ್ತಿರುತ್ತವೆ. ಮಳೆ ಕಡಿಮೆ ಬಂದರೆ ಬೇಸಿಗೆಕಾಲದಲ್ಲಿ ಕುಡಿಯುವ ನೀರಿಗೆ ತತ್ವರ ಎನ್ನುವ ಆತಂಕ ಒಂದೆಡೆಯಾದರೆ, ಬಿಡದೆ ಮಳೆ ಸುರಿದರೆ ಈ ನಗರವು ಮುಳುಗಿ ಏನೆಲ್ಲ ಸಮಸ್ಯೆಗಳು ಬಂದೆರಗುತ್ತವೋ ಎಂಬ ಆತಂಕ ಇನ್ನೊಂದೆಡೆ ಕಾಡಲಾರಂಭಿಸುತ್ತದೆ.

ನಗರದ ಇಂದಿನ ಸ್ಥಿತಿಗೆ ಯಾರು ಹೊಣೆ…?
ಆದರೆ ಮುಂಬೈ ನಗರದ ಜನತೆ ಯಾವುದಕ್ಕೂ ಅಂಜುವವರಲ್ಲ. ಎಲ್ಲವನ್ನೂ ಎದುರಿಸುತ್ತ ಬದುಕುವ ಆತ್ಮಸ್ಥೈರ್ಯವು ಅವರಲ್ಲಿದೆ. ಆದರೆ ಈ ಬಾರಿ ಅದೇಕೆ ಹೀಗಾಯಿತು? ಒಂದು ವರ್ಷದಿಂದ ಕೊರೋನಾ ಕಾರಣದಿಂದ ಸ್ಥಬ್ದವಾಗಿದ್ದ ನಗರ ಮತ್ತೆ ಚೇತರಿಸಿಕೊಂಡಿತು ಅನ್ನುವಾಗಲೇ ಮರಳಿ ಅದೇ ಸ್ಥಿತಿಗೆ ಬರಲು ಕಾರಣವೇನು? ಪರಿಸ್ಥಿತಿ ಸಮಸ್ಥಿತಿಗೆ ಬಂದಿದೆ, ಇನ್ನು ಹೇಗಾದರೂ ಇರಬಹುದೆನ್ನುವ ಸ್ವೇಚ್ಛಾಚಾರವೇ…? ಅಥವಾ ತಪ್ಪು ಮಾಹಿತಿಗಳ ದುಷ್ಪರಿಣಾಮವೇ…! ತಜ್ಞರಲ್ಲದವರೂ ಕೂಡ ಕಾಯಿಲೆಗಳ ಕುರಿತು ತಮಗೆ ತೋಚಿದ್ದನ್ನು ವೀಡಿಯೋ ಆಡಿಯೋಗಳ ಮೂಲಕ ಅಂತರ್ಜಾಲ ಮಾಧ್ಯಮಗಳಲ್ಲಿ ರವಾನಿಸುತ್ತಿರುತ್ತಾರೆ. ಕೆಲವರು ಇದನ್ನೇ ನಂಬಿಕೊಂಡು ಲಕ್ಷಾಂತರ ಜನರಿಗೆ ವರ್ಗಾಯಿಸುತ್ತಿರುತ್ತಾರೆ. ಹೀಗೆ ತಪ್ಪು ಮಾಹಿತಿಗಳು ಮಿಂಚಿನ ವೇಗದಲ್ಲಿ ಎಲ್ಲೆಡೆ ವ್ಯಾಪಿಸಿಬಿಡುತ್ತವೆ. ಇದರ ಎದುರು ಸರಕಾರ ಮತ್ತು ವೈದ್ಯರು ಮುಂಜಾಗ್ರತಾ ಕ್ರಮಗಳನ್ನು ಸೂಚಿಸುವ ಸಂದೇಶಗಳು ಗೌಣವಾಗುತ್ತವೆ. ಜನರು ತಮ್ಮ ಸುರಕ್ಷತಾ ಕ್ರಮವನ್ನು ಸರಿಯಾಗಿ ಪಾಲಿಸುತ್ತಿದ್ದರೆ ಬಹುಶಃ ಮುಂಬೈ ನಗರಿಗೆ ಮತ್ತೆ ಹಿಂದಿನ ಸ್ಥಿತಿಯನ್ನು ಎದುರಿಸಬೇಕಾದ ಸಂದರ್ಭ ಬರುತ್ತಿರಲಿಲ್ಲವೇನೋ…!
ಪ್ರತಿಯೊಬ್ಬರೂ ತಮ್ಮ ಕಾಳಜಿಯನ್ನು ವಹಿಸಿಕೊಂಡು ಸದ್ಯದ ಪರಿಸ್ಥಿತಿಯಿಂದ ಪಾರಾಗಬೇಕಿದೆ. ಆಗ ಮಾತ್ರ ಮುಂಬೈ ನಗರ ಮತ್ತೆ ಮೊದಲಿನಂತಾಗಬಹುದು. ವ್ಯಾಪಾರ ವಹಿವಾಟುಗಳು ಸಮಸ್ಥಿತಿಗೆ ತಲುಪಿ ಶ್ರಮಜೀವಿಗಳಿಗೆ ಭದ್ರವಾದ ನೆಲೆಗಟ್ಟು ಸಿಕ್ಕಂತಾಗುವುದು. ಅಂತೆಯೇ ಯಾವುದೇ ಅಡೆ ತಡೆಗಳಿಲ್ಲದೆ ನಮ್ಮ ನಮ್ಮ ಊರಿಗೆ ಹೋಗಿ ಬರುತ್ತಿರಬಹುದು. ಹಬ್ಬ ಸಮಾರಂಭಗಳಲ್ಲಿ ಮುಕ್ತವಾಗಿ ಪಾಲ್ಗೊಳ್ಳಬಹುದು. ಊರಿನ ಸೋನೆ ಮಳೆಯ ಅಹ್ಲಾದಕರ ಕ್ಷಣಗಳ ಜೊತೆಗೆ ಮುಂಬೈಗೆ ತಡವಾಗಿ ಬರುವ ಮುಂಗಾರು ಮಳೆಯನ್ನೂ ಮನಸಾರೆ ಆಸ್ವಾದಿಸಬಹುದು.

ಅಡುಗೆ ಮನೆಯೂ ಬದಲಾಗಿದೆ
ಯಾರೊಪ್ಪುವರೋ ಬಿಡುವರೋ
ಮೌನ ಭಾವಗಳಿಗೆ
ಸಮ್ಮತಿಯಿಲ್ಲ ಅಡುಗೆ ಮನೆಯೊಳಗೆ

ಅವರವರ ಇಷ್ಟ ಅನಿಷ್ಟಗಳ ವ್ಯಾಖ್ಯೆಯನು
ಜಪಿಸಿಕೊಳ್ಳುತ್ತಲೇ
ಹಸಿಬಿಸಿ ಹೊಗೆಯೇಳಬೇಕು
ಮೂರ್ಹೊತ್ತು ಅಡುಗೆಮನೆ ಘಮ್ಮೆನಿಸಬೇಕು

ಮೌನದಾಲಯದೊಳು ಸರಿದೆನೆಂದರೆ ಸಾಕು
ಎಣ್ಣೆಗೆ ಇಳಿಬಿಟ್ಟ ಸಾಸಿವೆಯೂ ಸಿಡಿದೇಳುವುದುಂಟು
ಬೇವಿನೆಲೆ ಬೇಸತ್ತು ಮೈಮೇಲೆ ಹಾರುವುದುಂಟು
ಬೆಳ್ಳುಳ್ಳಿ ಚಟಪಟಿಸಿ ಗದರಿಸುವುದುಂಟು.

ಇಷ್ಟಾದರೂ…
ತಹಬಂದಿಯ ಗಂಟು ಬಿಡಿಸದಿದ್ದರೆ
ಆಚೀಚೆ ನೋಡುವಷ್ಟರಲ್ಲಿಯೇ
ಒಗ್ಗರಣೆ ಸೀದು ಕಪ್ಪು ನಗು ಬೀರುವುದುಂಟು

ಕೆಲವೊಮ್ಮೆ ಒಲೆ ಮೇಲಿಟ್ಟ ಅನ್ನ ತಳ ಹಿಡಿದಾಗ
ಹಾಲುಕ್ಕಿ ಹರಿದು ಪಾತ್ರೆ ಬರಿದಾದಾಗ
ಬಿಸಿ ಗೀರು ಮೈಗೊತ್ತಿಕೊಂಡಾಗ
ಎಲ್ಲೋ ಕಳೆದು ಹೋಗಿರುವ
ಅರಿವನ್ನು ಎಳೆತಂದು ಜಗ್ಗುವುದುಂಟು
ಆಗ…
ಮೌನ ಹೇಳದೆಯೇ ಎದ್ದು ಹೋಗುವುದುಂಟು

ಹೀಗೆ ಅದೆಷ್ಟೋ ಬಾರಿ ಹಿಗ್ಗಾ ಮುಗ್ಗ
ಥಳಿಸಿಕೊಂಡ ಮೌನ
ಈಗೀಗ ಅಡುಗೆಮನೆಯೊಳಗೆ ನುಸುಳುವುದಿಲ್ಲ

ಅಡುಗೆಮನೆಯೂ ಬದಲಾಗಿದೆ
ನನ್ನರಮನೆಯಾಗಿ
ಮಾತಿಲ್ಲದೆಯೇ ಬೆರೆತು ರುಚಿಗೊಲಿಯುವ
ಬಗೆಬಗೆಯ ಬಿಂಕ ಬಿನ್ನಾಣದಿ
ವಾಸ್ತವದ ಅರಿವು ಮೂಡಿಸುವ
ಇವೆಲ್ಲವುಗಳ ಜೊತೆಯಲಿ ಮಾತಾಗುತ್ತೇನೆ
ಯಾವುದೋ ರಾಗದ ಗುನುಗಿನಲಿ ಹಾಡಾಗುತ್ತೇನೆ
ಹೊಸಹುರುಪಿನಲಿ ರಸಕಾವ್ಯ ಚಿತ್ರಿಸಲು
ಅಣಿಯಾಗುತ್ತೇನೆ ಅನುದಿನವೂ
ಹೊಂಬೆಳಕಿನ ನಸುನಗುವಿನೊಂದಿಗೆ