ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವಿದುಷಿ ಸರೋಜಾ ಶ್ರೀನಾಥ್‍
ಇತ್ತೀಚಿನ ಬರಹಗಳು: ವಿದುಷಿ ಸರೋಜಾ ಶ್ರೀನಾಥ್‍ (ಎಲ್ಲವನ್ನು ಓದಿ)

ಹನ್ನೊಂದನೇ ಶತಮಾನದಲ್ಲಿ ಆಳಿದ ದೊರೆ ಅನವ್ರತನ ಕಾಲದಲ್ಲೇ ರಾಮನ ಕಥೆಯು ಜನಜನಿತವಾಗಿತ್ತು. ಬರಹದಲ್ಲಿರಲಿಲ್ಲವಾದರೂ ಬಾಯಿ ಮಾತುಗಳಲ್ಲೇ ರಾಮನ ಕಥೆಯ ಪ್ರಸಾರವಾಗಿತ್ತು. ಕ್ರಿ.ಶ. 1775ರಲ್ಲಿ ಯು ಔಂಗ್ ಫ್ಯೋ ಬರೆದ ರಾಮಕಥೆಯೇ ಮೊದಲು ದೊರೆತದ್ದು. ಇದರ ಹೆಸರು ರಾಮ ತಾಗಿಯಿನ್’. ಕವಿ ಔಂಗ್ ಫ್ಯೋ ಪ್ರಕಾರ ಇದಕ್ಕೆ ಮುಂಚೆಯೇ ಹದಿನೇಳನೇ ಶತಮಾನದಲ್ಲಿ ಬರೆದರಾಮವತ್ತು’ ರಾಮಾಯಣವನ್ನನುಸರಿಸಿ ಬರೆದುದು.

ಬರ್ಮಿಯ ರಾಮಕಥೆಯು ಪದ್ಯ, ಗದ್ಯ, ನಾಟಕ ಸಾಹಿತ್ಯದಲ್ಲಿರುವುದು. ರಾಮವತ್ತು’ ಮೊಟ್ಟ ಮೊದಲ ಕಾವ್ಯವಾದ್ದರಿಂದ ಅದಕ್ಕೆ ಪ್ರಾಮುಖ್ಯತೆ ದೊರೆತಿದೆ. ಮೋನ್ ಭಾಷೆಯ ಶಿಲಾ ಶಾಸನದಲ್ಲಿ ಕ್ಯಾನ್‍ಸಿತ್ತ ಕ್ರಿ. ಶ. 1084ರಿಂದ ಕ್ರಿ. ಶ. 1113ರವರೆಗೆ ಆಳಿದ ದೊರೆಯು ತಾನು ಅಯೋಧ್ಯೆ ರಾಮನ ಹತ್ತಿರದ ನೆಂಟನೆಂದು ತಿಳಿಸಿದ್ದಾನೆ. ಹದಿನೇಳನೇ ಶತಮಾನದಿಂದ ಇಪ್ಪತ್ತನೇ ಶತಮಾನದವರೆಗೆ ದೊರೆತಿರುವ ರಾಮಾಯಣಗಳ್ಯಾವುವೆಂದರೆ ರಾಮವತ್ತು, ಮಹಾರಾಮ ರಾಮ, ತೊನ್ ವ್ಯೊ ಎಂಬ ಗದ್ಯಕೃತಿಗಳು. ರಾಮ ತಾಗಿಯಿನ್, ರಾಮಯಗನ್, ಅಲೌಂಗ್ ರಾಮ ತಾಗಿಯಿನ್ ಪದ್ಯ ಕೃತಿಗಳು. ತಿರಿರಾಮ, ಪೆನ್ ಟಾವ್ ರಾಮ ಮತ್ತು ಲಕ್ಕನ ಎಂಬ ನಾಟಕಗಳು ಪ್ರಚಲಿತವಾಗಿವೆ. ಯು ಮೌಂಗ್ ಗೈ ನಾಟಕದ ಸೀತೆಯ ಜನ್ಮವೃತ್ತಾಂತ ಸನ್ನಿವೇಶವು ಬೇರೆಲ್ಲೂ ಕಾಣಬರುವುದಿಲ್ಲ. ಪೂರ್ವಜನ್ಮದಲ್ಲಿ ಸೀತೆಯು ಸೀತಾಯಕ್ಕ ರಕ್ಕಸಿಯಾಗಿದ್ದಳು. ರಾಮಲಕ್ಕನರು ತಂಗಿದ್ದ ವಸಿಷ್ಠ ಆಶ್ರಮಕ್ಕೆ ಬಂದು ಅಲ್ಲಿ ಅಶಾಂತಿ ತುಂಬಿ ಕೋಲಾಹಲವೆಬ್ಬಿಸಿದಳು. ರಾಮನಲ್ಲಿ ಆಸಕ್ತಳಾದಳು. ಆದರೆ ರಾಮನ ಬಾಣಕ್ಕೆ ತುತ್ತಾಗಿ ಚಿಕುಮಹರಿತ್ ಸ್ವರ್ಗದಲ್ಲಿ ಸೀತಾ ಚಂಣ್‍ಡಿ ದೇವತೆಯಾಗಿ ಆವಿರ್ಭವಿಸಿದಳು. ಅಲ್ಲಿಗೆ ದಶಗಿರಿ (ರಾವಣ) ಭೇಟಿ ನೀಡಿದಾಗ ಸೀತಾ ಚಂಣ್‍ಡಿಯಲ್ಲಿ ಅನುರಕ್ತನಾಗುತ್ತಾನೆ. ಇದರಿಂದ ಸೀತಾ ಉದ್ರಿಕ್ತಳಾಗಿ ದಶಗಿರಿಯನ್ನು ಶಪಿಸುತ್ತಾ ಅವನ ಕೋರೆ ಹಲ್ಲಿನಿಂದ ಜನಿಸಿ ಸಾವಿರ ರಕ್ಕಸರನ್ನು ಕೊಲ್ಲುವುದಾಗಿ ಹೇಳಿ, ಮಗುವಾಗಿ ಒಂದೊಂದು ಬಾರಿ ಅತ್ತಾಗ ರಕ್ಕಸರು ಮಡಿಯುವರೆಂದು ಹೇಳಿದಳು. ಅಂತೆಯೇ ಸೀತೆ ಚಂಣ್‍ಡಿಯಾಗಿ ಹುಟ್ಟಿದಳು.

ರಾಮವತ್ತು ಕಾವ್ಯವು ಬಹಳ ಸುಂದರ ಸಂಕ್ಷಿಪ್ತ ಬರ್ಮಿಯಾ ಕವಿಯ ಕೊಡುಗೆ. ಅಲ್ಲಲ್ಲಿ ಹೊಸ ತಿರುವುಗಳು ಕಾಣಬರುವುವು. ಬರ್ಮಿಯರ ಸಂಪ್ರದಾಯವನ್ನು ಅನುಸರಿಸಲಾಗಿದೆ. ವಾಲ್ಮೀಕಿ ರಾಮನು ಹಿಂದೂ ಧಾರ್ಮಿಕ ಪ್ರತಿರೂಪ. ಆದರೆ ರಾಮವತ್ತುವಿನಲ್ಲಿ ಬೌದ್ಧಧರ್ಮ ಪ್ರತಿಪಾದಿಸುವ ಬೋಧಿಸತ್ ದೊರೆ ರಾಮನು. ಒಮ್ಮೆ ಇಂದನು (ಇಂದ್ರ) ಬೋಧಿಸತ್ ದೇವನನ್ನು ಮತ್ತು ತುಷಿಕ ಸ್ವರ್ಗದಲ್ಲಿನ ಮೂವರನ್ನು ಅಯೋಧ್ಯೆಯಲ್ಲಿ ಅವತರಿಸುವಂತೆಯೂ, ಕೋಟಿಗಟ್ಟಲೆ ದೇವತೆಗಳನ್ನು ಕಿತಕಿಂದ (ಕಿಷ್ಕಿಂದಾ) ದಲ್ಲಿ ವಾನರರಾಗಿ ಹುಟ್ಟುವಂತೆ ಹೇಳಿದನು. ಗೊಂತಿ ಮಹಿಳೆಯು ಬ್ರಹ್ಮನನ್ನು ಕುರಿತು ತೀವ್ರ ವ್ರತಾಚರಣೆಯನ್ನು ಮಾಡಿ ಹತ್ತು ಬಾಳೆಹಣ್ಣುಗಳ ಚಿಪ್ಪನ್ನು ನೈವೇದ್ಯವಾಗಿ ನೀಡಿದಳು. ಸಂತುಷ್ಟನಾದ ಬ್ರಹ್ಮನು ವರವನ್ನು ಕೊಡಲು ದಶಗಿರಿ (ರಾವಣ) ದಶಕಂಠನಾಗಿಯೂ ಅವನ ತಮ್ಮಂದಿರಾಗಿ ಕುಂಭಕನ್ನ (ಕುಂಭಕರ್ಣ) ಬಿಭೀಜನ (ವಿಭೀಷಣ) ನೂ ಗೊಂತಿ ಗರ್ಭದಿಂದ ಜನಿಸಿದರು. ದಶಗಿರಿಯು ಅಹಂಕಾರಿಯಾಗಿ ದುರ್ನಡತೆಗೆ ಬಲಿಯಾದನು. ದೇವತೆಗಳಿಂದ ಉಪಕೃತನಾದರೂ ಅವರನ್ನೇ ಹೀಯಾಳಿಸುತ್ತ ಅವಮಾನಗೊಳಿಸುತ್ತಿದ್ದನು. ಕೆಲತ (ಕೈಲಾಸ) ಪರ್ವತದ ಮೇಲೆ ಗಂಧಬ ದೇವತೆಯನ್ನು ಅವಮಾನವಾಗುವಂತೆ ಮಾತನಾಡಿದನು. ಕೋಪಿಸಿಕೊಂಡ ದೇವತೆಯು ಶಾಪವನ್ನಿತ್ತು ಪವಿತ್ರ ಅಗ್ನಿಯಲ್ಲಿ ಐಕ್ಯಳಾದಳು. ಬಾಲಿಯು (ವಾಲಿ) ಕಿತಕಿಂದದ ದೊರೆಯಾಗಿದ್ದನು. ಅವನು ಮಹಾ ಬಲಶಾಲಿ. ದಶಗಿರಿಯು ಅವನನ್ನು ಎದುರಿಸಿ ಗೆಲ್ಲಲಾರದೆ ಶರಣಾಗತನಾದನು. ಸ್ನೇಹವನ್ನು ಕೋರಿದನು.

ಅಯೋಧ್ಯೆಯ ದಶರಥನಿಗೆ ವರವಾಗಿ ಎರಡು ಶ್ರೇಷ್ಠವಾದ ಬಾಳೆಹಣ್ಣು ಋಷಿಯಿಂದ ದೊರೆತು ಅದನ್ನು ಅವನ ಮೂವರು ರಾಣಿಯರು ಭುಜಿಸಲು ರಾಮ ಮತ್ತು ಮೂವರು ಸಹೋದರರು ಜನಿಸಿದರು. ಪ್ರಪಂಚವನ್ನು ದಶಗಿರಿಯ ಹಾವಳಿಯಿಂದ ಕಾಪಾಡಲು ಬೋಧಿಸತ್ ದೇವನು ರಾಮನಾಗಿಯೂ, ತುಷಿಕ ಸ್ವರ್ಗದಲ್ಲಿನ ಮೂವರೂ ಸಹೋದರರಾಗಿ ಜನಿಸಿದವರು. ಲೆಕ್ಕವಿಲ್ಲದಷ್ಟು ದೇವತೆಗಳು ಶಕ್ತಿವಂತ ವಾನರರಾದರು ಕಿತಕಿಂದದಲ್ಲಿ. ಗಂಧಬ ದೇವತೆಯು ಭೂಮಿಯಲ್ಲಿ ಜನಿಸಿ ದಶಗಿರಿಯ ಸ್ವಾಧೀನಕ್ಕೆ ಬಂದಳು. ಆದರೆ ಈ ಹೆಣ್ಣು ಮಗುವಿನಿಂದ ದಶಗಿರಿಗೆ ಆಪತ್ತೆಂದು ತಿಳಿದು ಒಂದು ಪೆಟ್ಟಿಗೆಯಲ್ಲಿಟ್ಟು ಸಾಗರಕ್ಕೆಸೆಯಲಾಯಿತು. ತೇಲುತ್ತಾ ಆ ಪೆಟ್ಟಿಗೆ ಮಿಥಿಲಾ ಪಟ್ಟಣ ಸೇರಿತು. ರಾಜ ಜನಕನು ತನ್ನ ಮಗಳಂತೆ ಸಾಕಿದನು. ಸೀದಾ (ಸೀತಾ) ನಾಮದ ಮಗುವು ಬೆಳೆದು ಕಲ್ಯಾಣ ವಯಸ್ಸನ್ನು ತಲುಪಿದಳು. ಇವಳನ್ನು ಮದುವೆಯಾಗಲು ನೂರಾರು ರಾಜರು ಮುಂದಾದರು. ಈ ಸಮಸ್ಯೆಯನ್ನು ನಿವಾರಿಸಲು ಒಂದು ಪೈಪೋಟಿಯನ್ನಿಡಲಾಯಿತು. ಜನಕನ ಬಳಿಯಿದ್ದ ಧನುಸ್ಸಿಗೆ ಹೆದೆ ಏರಿಸಿದವನಿಗೆ ಸೀದಾಳನ್ನು ಮದುವೆ ಮಾಡಿಕೊಡುವುದಾಗಿ ತಿಳಿಸಿ ಜನಕನು ದಶಗಿರಿ ಪರಶುರಾಮ ಮುಂತಾದ ರಾಜರಿಗೆ ಆಹ್ವಾನವನ್ನು ಕಳುಹಿಸಿದನು. ದಶಗಿರಿಯು ಧನುಸ್ಸನ್ನೆತ್ತಿದನಾದರೂ ಹೆದೆ ಏರಿಸಲಾರದೆ ಹೋದನು. ಕಾಕಾವುನ್ ರಾಕ್ಷಸ ಕಾಗೆಯನ್ನು ಶಿಕ್ಷಿಸಿ ರಾಮ ಮತ್ತು ಲಕ್ಕನರು ಮಿಥಿಲೆ ಸೇರಿದರು ಗುರುಗಳೊಂದಿಗೆ. ರಾಮನು ಧನುವೇರಿಸಿ ಸೀದಾಳನ್ನು ಮದುವೆ ಆಗಿ ಅಯೋಧ್ಯೆಗೆ ಹಿಂತಿರುಗುವಾಗ ಪರಶುರಾಮನೊಡನೆಯೂ ಕಾದಾಡಬೇಕಾಯಿತು. ಎಲ್ಲರೂ ಅಯೋಧ್ಯೆಯನ್ನು ಸುಖವಾಗಿ ಸೇರಿದರು. ಮತ್ಸರ ಸ್ವಭಾವದಕುಪ್ಪಚಿ’ ಸೇವಕಿಯು ರಾಣಿ ಕೊಕೆಯಿಗೆ (ಕೈಕೇಯಿ) ದುರ್ಬೋಧನೆ ಮಾಡಿದಳು. ಇದರಿಂದಾಗಿ ರಾಮನು ದೇಶಬಿಟ್ಟು ಹೋಗಬೇಕಾಯ್ತು ಮತ್ತು ಕೊಕೆಯಿಯ ಮಗನಿಗೆ ಸಿಂಹಾಸನ ನೀಡಬೇಕಾಗಿತ್ತು. ತಂದೆಯ ಮಾತಿಗೆ ಗೌರವವಿತ್ತು ಸೀದಾ (ಸೀತಾ) ಲಕ್ಕನನೊಂದಿಗೆ ರಾಮನು ದೇಶತ್ಯಾಗ ಮಾಡಿದನು. ಕೊಸಲ್ಲ (ಕೌಸಲ್ಯೆ), ತಮಿತ್ತ (ಸುಮಿತ್ರೆ), ಜನರು ದುಃಖಿತರಾದರು.

ಬರ್ಮಾ ರಾಮಾಯಣದ ರಾಮ, ಸೀತೆ ಮತ್ತು ಲಕ್ಶ್ಮಣ


ಅಯೋಧ್ಯೆ ಬಿಟ್ಟು ವಾಲಮಿಗಿ ಆಶ್ರಮವನ್ನು ಸೇರಿದರು. ಲಕ್ಕನ, ಸೀದಾ, ರಾಮನನ್ನು ಭರತನು ಕರೆದೊಯ್ಯಲು ಬಂದು ನಿರಾಸೆಯಿಂದ ರಾಮನ ಪಾದುಕೆಯನ್ನು ತೆಗೆದುಕೊಂಡು ಹೋದನು.

ಕಿತಕಿಂದದಲ್ಲಿ ಹಾಲ ಹನುಮಾನನು ರಕ್ತವರ್ಣ ಸೂರ್ಯನನ್ನು ಕಿನ್‍ಬೋನ್’ ಹಣ್ಣು ಎಂದು ತಿಳಿದು ಅದನ್ನು ಕಿತ್ತು ತಿನ್ನಲು ನೋಡಿದನು. ಕೋಪಗೊಂಡ ಇಂದ (ಇಂದ್ರ) ತನ್ನ ವಜ್ರಾಯುಧದಿಂದ ಹೊಡೆದನು. ನಂತರ ಬಾಲಕನ ತಪ್ಪೇನಿಲ್ಲವೆಂದು ಅರಿತು ಇಂದನು ಹನುಮಾನನಿಗೆ ಚಿರಂಜೀವಿಯಾಗುವ ವರವಿತ್ತನು. ಆಕಸ್ಮಾತ್ತಾಗಿ ನಡೆದ ಘಟನೆಯಿಂದ ಋಷಿಗಳು ಹನುಮಾನನನ್ನು ಸಾಮಾನ್ಯ ವಾನರನಾಗುವಂತೆ ಶಪಿಸಿದರು. ಅಂತೆಯೇ ರಾಮನನ್ನು ಸಂಧಿಸಿದಾಗ ಅವನಿಗೆ ಅಪಾರ ದೈವೀ ಶಕ್ತಿ ಪ್ರಾಪ್ತವಾಗುವುದೆಂದು ಶಾಪವಿಮೋಚನೆ ತಿಳಿಸಿದರು. ಹನ್ನೊಂದು ವರ್ಷಗಳ ನಂತರ ರಾಮ, ಲಕ್ಕನ, ಸೀದಾ ಸಮುದ್ರ ತೀರದ ಅರಣ್ಯಕ್ಕೆ ಬಂದರು. ಆ ಅರಣ್ಯವನ್ನು ಹಾಳು ಮಾಡಲು ಗಂಬೀ ರಕ್ಕಸಿ ತನ್ನ ಇಬ್ಬರು ಮಕ್ಕಳಾದ ಖರು (ಖರ) ಮತ್ತು ತುಷಿನ (ದೂಷಣ) ರೊಡನೆ ಬಂದಳು. ದುಷ್ಟ ನಡವಳಿಕೆಯಿಂದಾಗಿ ಖರು ಮತ್ತು ತುಷಿನರು ನಾಶವಾದರು. ಸೇಡು ತೀರಿಸಿಕೊಳ್ಳಲು ಗಂಬೀ ಸುಂದರ ಜಿಂಕೆಯಾಗಿ ಬಂದು ರಾಮ ಲಕ್ಕನರನ್ನು ದೂರ ಕೊಂಡೊಯ್ದು ದಶಗಿರಿಗೆ ಸೀದಾಪಹರಣಕ್ಕೆ ಸಹಾಯ ಮಾಡಿದಳು. ರಾಮ ಲಕ್ಕನರು ಸೀದಾಳನ್ನು ಹುಡುಕುತ್ತಾ ಬಂದಾಗಗ್ಯೋ’ ಮರದಡಿಯಲ್ಲಿದ್ದ ತುಗ್‍ಯಿಕ್ (ಸುಗ್ರೀವ)ನ ಭೇಟಿ ಮಾಡಿದರು. ಅವನ ಅಣ್ಣ ಬಾಲಿಯ ವಧೆಯನ್ನು ರಾಮನು ಮಾಡಿದನು. ರಾಮನ ಹಸ್ತಸ್ಪರ್ಶದಿಂದ ಕಳೆದುಕೊಂಡಿದ್ದ ದೈವೀಶಕ್ತಿ ಪಡೆದು ಶಾಪ ವಿಮೋಚನೆ ಪಡೆದ ಹನುಮಾನನು ಸಮುದ್ರ ಲಂಘನ ಮಾಡಿ ದಶಗಿರಿ ಅರಮನೆಯ ತವ್‍ಕ (ಅಶೋಕ) ಉದ್ಯಾನದಲ್ಲಿದ್ದ ಸೀದಾಳಿಗೆ ರಾಮನ ಮುದ್ರೆಯುಂಗುರ ನೀಡಿ ಇಂದ್ರಜಿತ (ಇಂದ್ರಜಿತ್) ನೆದುರು ಕಾಳಗ ಮಾಡಿ ಲಂಕಾದಹನದ ನಂತರ ಸೀದಾಳಿಂದ ಅವಳ ತಲೆಯ ಏಳು ಕೂದಲನ್ನು ತೆಗೆದುಕೊಂಡು ರಾಮನಲ್ಲಿಗೆ ಬಂದನು.

ಸಮುದ್ರಕ್ಕೆ ಸೇತು ಬಂಧನಗೈದು ವಾನರ ಸೇನೆಯೊಡನೆ ಮುನ್ನಡೆಯುತ್ತಿದ್ದ ಹನುಮಾನನು ತನಗೆ ಅಡ್ಡ ಬಂದ ದೈತ್ಯಾಕಾರದ ಏಡಿಯನ್ನು ಸದೆಬಡಿದು ಲಂಕ ತಲುಪಿದನು. ಔನ್‍ಗುತ್ (ಅಂಗದ)ನ ರಾಯಭಾರವು ನಿಷ್ಪಲವಾಯಿತು. ಹೊರದೂಡಲ್ಪಟ್ಟ ಬಿಭಿಜನ (ವಿಭೀಷಣ) ರಾಮನ ಮಿತ್ರನಾದನು.
ಯುದ್ಧದಲ್ಲಿ ಇಂದ್ರಜಿತ್‍ನ ಸರ್ಪಬಾಣದಿಂದ ರಾಮನು ಮೂರ್ಛೆಗೊಳ್ಳಲು ಹನುಮಾನನು ಗಂಧಮಾದನ ಪರ್ವತದಿಂದ ತಂದ ಸುವನ್ನಪತ್ತ’ ಶುಶ್ರೂಷೆಯಿಂದ ಚೇತರಿಸಿಕೊಂಡನು. ಕೊನೆಗೆ ಲಕ್ಕನನ ಬಾಣಕ್ಕೆ ಇಂದ್ರಜಿತನು ತುತ್ತಾದನು. ಕುಂಭಕರ್ಣ ವಧೆಯೂ ಆಯಿತು. ರಾಮ ಮತ್ತು ದಶಗಿರಿಯವರ ಘೋರ ಕಾಳಗದಲ್ಲಿ ದಶಗಿರಿಯ ಹತ್ತು ಕಿರೀಟಗಳೂ ನಾಶವಾದವು. ದಶಗಿರಿಯತಮೋಹಿನಿ’ ಅಸ್ತ್ರವು ರಾಮನ ಜ್ಞಾನ ತಪ್ಪಿಸಿತಾದರೂ ಹನುಮಾನನು ರಾಮನನ್ನು ಸುಧಾರಿಸಿದನು. ರಾಮನ ಮಹೋನ್ನತ ಶಕ್ತಿಯುತವಾದ ಬಾಣದಿಂದ ದಶಗಿರಿಯು ಸಾವನ್ನಪ್ಪಿದನು. ಸೀದಾಳ ಅಗ್ನಿಪರೀಕ್ಷೆಯಾದ ಮೇಲೆ ಅಯೋಧ್ಯೆಗೆ ಹಿಂತಿರುಗಿದರು. ರಾಮನ ಪಟ್ಟಾಭಿಷೇಕ ವಿಜೃಂಭಣೆಯಿಂದ ನಡೆಯಿತು.

Hand drawn daisy patterned background vector

ದಶಗಿರಿಯ ಚಿತ್ರ ಬರೆದುದರಿಂದ ಮತ್ತೆ ಅಗಸನು ಸೀದಾಳ ಶೀಲದ ಬಗ್ಗೆ ಆಡಿದ ಮಾತುಗಳು ಸೀದಾಳನ್ನು ಅರಣ್ಯ ಪಾಲು ಮಾಡಿತು. ಗರ್ಭಿಣಿ ಸೀದಾಳಿಗೆ ವಾಲ್ಮೀಕಿ ಆಶ್ರಮದ ತಿಂಡಿ ತಿನಿಸುಗಳ ಮೇಲಿನ ಆಸೆಯೂ ಇದ್ದಿತು. ಲೋನ (ಲವ) ಮತ್ತು ಕುಶರ ಜನನವಾಯಿತು. ರಾಮನು ಅಶ್ವಮೇಧ ಯಾಗ ಮಾಡಲು ನಿರ್ಧರಿಸಿದನು. ಯಾಗಾಶ್ವದೊಂದಿಗೆ ಲಕ್ಕನನು ಸರ್ವಸಮ್ಮತ ಪಡೆಯಲು ಹೊರಟಾಗ ಅಶ್ವವನ್ನು ಲೋನ ಕುಶರು ಹಿಡಿದಿಟ್ಟುಕೊಂಡರು. ಇದರಿಂದಾಗಿ ಲಕ್ಕನನಿಗೂ ಲೋನ ಕುಶರಿಗೂ ಯುದ್ಧವಾಗಿ ಲಕ್ಕನನು ಹಿಂಜರಿಯಬೇಕಾಯಿತು. ರಾಮನಿಗೂ ಅವನ ಮಕ್ಕಳಿಗೂ ಯುದ್ಧವಾದಾಗ ಸೀದಾಳು ಅತಿ ದುಃಖಿತಳಾದಳು. ವಾಲಮಿಗಿಯು ಒಂದು ಯಥಾರ್ಥವನ್ನು ತಿಳಿಸಿ ಪವಿತ್ರ ಜಲವನ್ನು ಯುದ್ಧದಲ್ಲಿ ಮಡಿದವರ ಮೇಲೆ ಚಿಮುಕಿಸಲು ಎಲ್ಲರೂ ಜೀವಂತವಾದರು. ರಾಮ ಲಕ್ಕನ ಸೀದಾ ಲೋನ ಮತ್ತು ಕುಶರು ಅಯೋಧ್ಯೆಗೆ ಹಿಂತಿರುಗಿದರು.
ಬರ್ಮ ನೃತ್ಯ ನಾಟಕಗಳಲ್ಲಿ ಪದ್ಯಗದ್ಯ ಮಿಶ್ರಣವಿದೆ. ಮುಖ್ಯವಾಗಿ ನಿಗದಿಯಾದ ಸಂಗೀತವು ಪ್ರತಿ ಸನ್ನಿವೇಶದಲ್ಲೂ ರಸಾನುಭವಕ್ಕನುಗುಣವಾಗಿ ಲಯಬದ್ಧ ರಾಗ ಸಂಯೋಜನೆಯಿಂದ ರಚಿತವಾಗಿರುವುದು.