- ಸಿದ್ಧಾಂತಗಳು ಬೆಳಕನ್ನು ಬಂಧಿಸಬಲ್ಲವೇ? - ಸೆಪ್ಟೆಂಬರ್ 4, 2022
- ಪಾತರಗಿತ್ತಿ ಪರಿಣಾಮ! - ಆಗಸ್ಟ್ 21, 2022
- ದೇಹ ಮತ್ತು ಮನಸ್ಸು ನಡುವೆ ಸಂಕ ಉಸಿರು - ಆಗಸ್ಟ್ 10, 2022
ಅವರು ನಡೆಯುತ್ತಲೇ ಇದ್ದರು. ಎದ್ದು, ಬಿದ್ದು ನಡೆಯಲು ಕಲಿತ ಮಗುವಾಗಿ ನಡೆದರು. ಶಾಲೆಗೆ ನಡೆದರು. ಬೀದಿ, ಪಟ್ಟಣ, ಕಾಡು, ಮಲೆನಾಡು, ಕಾಟುಮೂಲೆ, ಹೀಗೇ ನಡೆದರು. ಭಾರತದ ಉದ್ದಗಲಕ್ಕೂ ನಡೆದರು. ಅರಿವನ್ನು ಅರಸುತ್ತಾ ನಡೆದಾಗ, ಸಿಕ್ಕಿದ್ದು ಉತ್ತರಕ್ಕಿಂತ ಪ್ರಶ್ನೆಗಳೇ ಹೆಚ್ಚು. ಭೂಮಿ ಸುತ್ತಿದರು. ಚಂದಿರನ ನೆಲಕ್ಕೆ ಏಣಿ ಕಟ್ಟುವ ಹಾಗಿದ್ದರೆ, ಅದನ್ನೂ ಕಟ್ಟಿ ಏರುತ್ತಿದ್ದರು. ಹಾಗೇ ನಡೆದೇ ನಡೆದೇ ಅಜ್ಜ ಆದರು, ಅವರು ನಡೆದ ದಾರಿ ಉಳಿದವರಿಗೆ ‘ನಡೆ’ ಯಾಯಿತು.
ಯಾರು? ಕಾರಂತಜ್ಜ ಅಂದಿರಾ!. ಹೌದು..ಅವರೇ, ಅವರಂತೆಯೇ ನಡೆದ ಸಾವಿರ, ಸಾವಿರದ ಪಾದಗಳು. ನಡೆದ ದಾರಿಗೆ ವಯಸ್ಸಾದರೂ ಈ ಅಜ್ಜ ಮಾತ್ರ ಮಗುವಾಗಿಯೇ ಇದ್ದರು.
ನಡಿಗೆ ಎಂಬ ಪದ ಓದಿದಾಗೆಲ್ಲಾ ನನಗೆ ನೆನಪಾಗುವುದು ಶಿವರಾಮ ಕಾರಂತರು.
ನಡಿಗೆ ಆರಂಭವಾಗುವುದೇ ತಿಳಿವು ತಿಳಿಯಾಗಿಸುವ ಹಂಬಲದಿಂದ. ನಮ್ಮ ಶಾಲೆಯಲ್ಲಿ, ಒಂದು ಪ್ರಯೋಗ ಶಾಲೆಯಿತ್ತು. ಹಲವು ಬಗೆಯ ಬೀಕರ್, ಟೆಸ್ಟ್ ಟ್ಯೂಬ್ ಗಳು, ಆಸಿಡ್ ಗಳು, ಬಣ್ಣದ ಪೊಟಾಸಿಯಂ ಪರ್ಮಾಂಗನೇಟ್ ನ ದ್ರಾವಣ, ಹಾಗೆಯೇ ದೇಹದ ರಚನೆಯನ್ನು ವಿವರಿಸುವ ಹೃದಯ, ಶ್ವಾಸಕೋಶ ಇತ್ಯಾದಿ ಇರುವ ಮಾಡೆಲ್, ದೊಡ್ಡ ಜಾಡಿಯಲ್ಲಿ ಗ್ಲಿಸರಿನ್ ದ್ರಾವಣದಲ್ಲಿ ಅದ್ದಿಟ್ಟ ಸತ್ತ ಹಾವು, ಕಪ್ಪೆ, ಹಲ್ಲಿ ಇತ್ಯಾದಿಗಳು.
ಕಾಲೇಜಿನಲ್ಲಿ, ಅದು ಹಲವಾರು ವಿಭಾಗಗಳಾದವು. ಫಿಸಿಕ್ಸ್, ಕೆಮಿಸ್ಟ್ರಿ, ಬಯಾಲಜಿ, ಸಾಫ್ಟ್ವೇರ್, ಹಾರ್ಡ್ವೇರ್, ಮೆಕ್ಯಾನಿಕಲ್ ಹೀಗೇ ಹತ್ತು ಹಲವು!.
ಅರ್ರೇ! ಪ್ರಯೋಗ ಶಾಲೆ ಎಂದರೆ ಇಷ್ಟೇಯಾ?. ಕಾರಂತರಂತಹ ಕುತೂಹಲೀದೈತ್ಯರಿಗೆ ಎಲ್ಲಿ ನೋಡಿದರಲ್ಲಿ ಪ್ರಯೋಗ ಶಾಲೆ.
ಜಗತ್ತು ಎಷ್ಟು ಅಗಾಧವೋ ಅಷ್ಟೇ ಅನಂತ, ಜಗತ್ತಿನಲ್ಲಿ ನಡೆಯುತ್ತಿರುವ, ಜಗತ್ತನ್ನು ನಡೆಸುತ್ತಿರುವ ವಿದ್ಯಮಾನಗಳು. ಪ್ರತೀ ವಿದ್ಯಮಾನದ ಮೂಲದಲ್ಲಿ ಅದರದ್ದೇ ಆದ ಸಿದ್ಧಾಂತವಿದೆ. ನಮ್ಮ ಮನಸ್ಸು ವಿದ್ಯಮಾನಗಳನ್ನು ಗ್ರಹಿಸಿ, ಅವಲೋಕಿಸಿ, ಚಿಂತಿಸಿ ಅದಕ್ಕೆ ತಾತ್ವಿಕ ತಳಹದಿಯನ್ನು ಒದಗಿಸಿ ಶಾಸ್ತ್ರೀಕರಿಸುತ್ತದೆ.
ಅಂಕಣದಲ್ಲಿ ‘ಇರುವೆ’ ಇದೆಯಲ್ಲಾ, ಈ ಇರುವೆ ಎಂಬುದು ಒಂದು ಸ್ಥಿತಿ. ಇಲ್ಲಿ, ಅಲ್ಲಿ ಇರುವ ಸ್ಥಿತಿ. ನಡಿಗೆ ಒಂದು ಚಲನೆ. ಸ್ಥಿತಿ ಮತ್ತು ಚಲನೆ ಜಗತ್ತಿನ ಆಡಮ್ ಮತ್ತು ಈವ್ ಗಳು! ಸ್ಥಿತಿ ಮತ್ತು ಗತಿಗೆ ಆಮೇಲೆ ಬರುವೆ.
ನಮ್ಮ ಈ ಪರ್ಪಂಚ!ವನ್ನು ಮೈಕ್ರೋ ಮತ್ತು ಮ್ಯಾಕ್ರೋ ಆಗಿ ನೋಡುವುದು ನೋಟದ ಎರಡು ಮಗ್ಗುಲುಗಳು. ಒಂದು ಮಿಲಿ ಲೀಟರ್ ಕಫದಲ್ಲಿ, ೧೦೦ ಕೋಟಿ ಕೊರೊನಾ ವೈರಸ್ ಇರುತ್ತೆ ಅಂತ ಒಂದು ಲೆಕ್ಕಾಚಾರ. ಒಂದು ಕ್ಯೂಬಿಕ್ ಸೆಂಮೀ ವಸ್ತುವಿನಲ್ಲಿ ಹತ್ತರ ಮುಂದೆ ೨೨ ಸೊನ್ನೆ ಬರೆದರೆ ಎಷ್ಟು ಆಗುತ್ತೋ ಅಷ್ಟು ಅಣುಗಳಿವೆ. ಅದು ಮೈಕ್ರಾಸ್ಕಾಪಿಕ್ ದೃಷ್ಟಿ. ಹಾಗೆಯೇ ನಮ್ಮ ಪ್ರಪಂಚದಲ್ಲಿ, ಕೋಟಿ ಕೋಟಿ ನಕ್ಷತ್ರಗಳು. ಇವೆಲ್ಲವೂ ಎಷ್ಟು ದೂರದಲ್ಲಿ ಎಂದರೆ ಹಲವಾರು ಬೆಳಕು ವರ್ಷಗಳಷ್ಟು. ಬೆಳಕು ಒಂದು ವರ್ಷ ಕ್ರಮಿಸಿದರೆ ಎಷ್ಟು ದೂರವೋ ಅದು ಒಂದು ಲೈಟ್ ಇಯರ್ ಅಥವಾ ಬೆಳಕಿನ ವರ್ಷ. ಒಂದು ಲೈಟ್ ಇಯರ್ ದೂರದಲ್ಲಿ ಇರುವ ನಕ್ಷತ್ರ ನಿಮಗೆ ಇಂದು ಕಾಣಿಸಲು ಕಾರಣ, ಒಂದು ವರ್ಷ ಹಿಂದೆ ಆ ನಕ್ಷತ್ರ ದಿಂದ ಹೊರಟು ಎಲ್ಲೂ ನಿಲ್ಲದೆ ನಡೆದ, ಬೆಳಕಿನ ಕಿರಣ, ನಿಮ್ಮ ಅಕ್ಷಿಪಟಲದ ಮೇಲೆ ಛಾಪು ಒತ್ತಿದ್ದೇ.
ಒಂದು ಸೆಂಟಿಮೀಟರ್ ಕ್ಯೂಬ್ ವಸ್ತುವಿನೊಳಗೆ ಅಸಂಖ್ಯಾತ ಅಣುಗಳು! ಹಾಗೆಯೇ ಹಲವು ಬೆಳಕಿನ ವರ್ಷ ವ್ಯಾಸದ ಪ್ರಪಂಚದಲ್ಲಿ ಅಸಂಖ್ಯಾತ ನಕ್ಷತ್ರ ಲೋಕಗಳು!ಹಾಗಾಗಿ ಮೈಕ್ರೋ ಮತ್ತು ಮ್ಯಾಕ್ರೋ ವನ್ನು ಭಾರತೀಯ ಮನಸ್ಸು ಬೇರೆ ಬೇರೆಯಾಗಿ ಕಂಡರೂ ಒಂದಾಗಿಯೇ ಗ್ರಹಿಸುತ್ತದೆ.
ಈಗ ಪುನಃ ಈ ‘ಇರುವೆ- ನಡಿಗೆ’ ಗೆ ಬರೋಣ. ಸಾಧಾರಣವಾಗಿ ಸಸ್ಯ ಮತ್ತು ಪ್ರಾಣಿಗಳನ್ನು ಜೀವಿಗಳೆಂದೂ, ಉಳಿದ ವಸ್ತು ಗಳನ್ನು ನಿರ್ಜೀವಿಗಳೆಂದೂ ಕರೆಯುವ ಆಧುನಿಕ ವಿಜ್ಞಾನದ ಘಮಂಡ್ ನ ಮೇಲೆ ನನಗೆ ತಾತ್ಸಾರವಿದೆ!.
ಹಿರಣ್ಯಕಶಿಪು: “ನೀನು ಪೂಜಿಸುವ ಆ ‘ಹರಿ’ಯು ಎಲ್ಲೆಲ್ಲಿಯೂ ಇರುವನು ಎನ್ನುವೆಯಲ್ಲಾ, ಅವನು ಈ ಕಂಭದಲ್ಲಿಯೂ ಇರುವನೇ?”
ಪ್ರಹ್ಲಾದ : “ಹೌದು ತಂದೇ. ಅವನು ಸಕಲ ವಸ್ತು ಗಳಲ್ಲಿಯೂ ಇರುವನು”
ಹಿರಣ್ಯಕಶಿಪು ( ಕೋಪದಿಂದ)
ನಿನ್ನ ಆ ಹರಿ ಈ ಕಂಭದಲ್ಲಿ ಇರುವುದೇ ಹೌದಾದರೆ, ನಿನ್ನ ರಕ್ಷಣೆಗೆ ಅವನೆಲ್ಲಿ ಬರುವನೋ ನೋಡುವೆ”
ಹೀಗೆಂದು ಕಂಭವನ್ನು ಜೋರಾಗಿ ತನ್ನ ವಜ್ರಕಠಿಣ ಕಾಲಿನಿಂದ ಒದೆಯುತ್ತಾನೆ, ಹಿರಣ್ಯಕಶಿಪು!..
ಮುಂದಿನ ಕಥೆ ನಿಮಗೆ ಗೊತ್ತೇ ಇದೆ!.
ಅಣು ರೇಣು ತೃಣ ಕಾಷ್ಢದಲ್ಲಿ ದೈವತ್ವದ ‘ಇರುವೆ’! ಯನ್ನು ಕಾಣುವ ನಮಗೆ ಸ್ಥಿರ ಎನ್ನುವುದು ಯಾವುದೂ ಇಲ್ಲ ಎಂಬ ಒಳನೋಟವಿದೆ. ನಿಮ್ಮ ಮನೆಯ ಹಿಂದಿನಗುಡ್ಡದಲ್ಲಿ ಒಂದು ದೊಡ್ಡ ಬಂಡೆಯಿದೆ ಅನ್ಕೊಳ್ಳಿ. ಆ ಬಂಡೆ ಸ್ಥಿತವಾಗಿದೆ ಅಂತ ಹೊರನೋಟಕ್ಕೆ ಅನಿಸಿದರೂ, ಅದರೊಳಗೆ ಇರುವ ಅಸಂಖ್ಯಾತ ಅಣುಗಳು ಸೆಕೆಂಡ್ ಗೆ ಸಾವಿರಾರು ಬಾರಿ ವೈಬ್ರೇಟ್ ಆಗುತ್ತಲೇ ಇರುತ್ತವೆ. ಒಂದು ಪರಮಾಣುವನ್ನು ಗಮನಿಸಿದರೂ, ಅದರೊಳಗೆ ಇಲೆಕ್ಟ್ರಾನ್ ಗಳು ಪ್ರೋಟಾನ್ ಗಳ ಸುತ್ತ ತಮ್ಮದೇ ರೀತಿಯಲ್ಲಿ ಸುತ್ತುತ್ತಲೇ ಇರುತ್ತವೆ ಎಂಬುದು ಭೌತಶಾಸ್ತ್ರದ ಸಿದ್ಧಾಂತ. ಹಾಗಿದ್ದರೆ ಈ ಅಹಲ್ಯೆ ಎಂಬ ಶಿಲೆಯೊಳಗಿನ ಅಣುಗಳು, ಪರಮಾಣುಗಳು, ಇಲೆಕ್ಟ್ರಾನ್ ಗಳು ಸದಾ ರಾಮಚೈತನ್ಯದ ಜಪ ಮಾಡುತ್ತಾ ಸ್ಪಂದಿಸುತ್ತಲೇ ಇರುತ್ತವೆ.
ಜಗತ್ತು ಸದಾ ಚಲನಶೀಲ, ಪ್ರತಿಯೊಂದು ವಸ್ತು, ವ್ಯವಸ್ಥೆ, ವಿಷಯ, ವಿಚಾರ, ಸಿದ್ಧಾಂತ, ಬದಲಾಗುತ್ತಲೇ ಹೋಗುತ್ತದೆ. ಸ್ಥಬ್ಧವಾಗಿ ನಿಂತ ಯಾವ ವಸ್ತುವೂ ನಮಗೆ ಸಿಗಲಾರದು. ಇಲೆಕ್ಟ್ರಾನ್ ವಿನಿಂದ ಭೂಮಿ, ಚಂದ್ರ, ಸೂರ್ಯ, ಇತರ ನಕ್ಷತ್ರ ಪುಂಜ ಗಳು ಎಲ್ಲವೂ ಚಲಿಸುತ್ತಲೇ ಇವೆ.
ಭೌತಶಾಸ್ತ್ರ, ಅಣು,ಪರಮಾಣುಗಳು ಕಂಪಿಸುವುದಕ್ಕೆ ಉಷ್ಣತೆ ಕಾರಣ ಎನ್ನುತ್ತದೆ. ಅಂದರೆ ವಸ್ತುವನ್ನು ತಣಿಸುತ್ತಾ ಹೋಗಿ ಸೊನ್ನೆ ಡಿಗ್ರಿ ಕೆಲ್ವಿನ್ ಟೆಂಪರೇಚರ್ ಗೆ ತಲಪಿದರೆ?. ಪರಮಾಣು ಕಂಪನ ನಿಲ್ಲುತ್ತಾ?. ಇಲ್ಲ!! ಆಗಲೂ ಅದು ಜೀರೋಪಾಯಿಂಟ್ ಎನರ್ಜಿ ಎಂಬ ಚೇತನದೊಂದಿಗೆ ಕಂಪಿಸುತ್ತಲೇ ಇರುತ್ತದೆ ಅಂತಲೂ ಭೌತಶಾಸ್ತ್ರ ಪ್ರತಿಪಾದಿಸುತ್ತದೆ. ಅಂದರೆ, ಚಲನೆ ಮತ್ತು ಚಲನಶೀಲತೆ ಜಗತ್ತಿನ ಅತ್ಯಂತ ಮೂಲ ಸ್ವಭಾವಗಳಲ್ಲಿ ಒಂದು ಅಂದಾಯಿತಲ್ಲವೇ.
ದ ರಾ ಬೇಂದ್ರೆಯವರ ಚೈತನ್ಯದ ಪೂಜೆ ಎಂಬ ಕವನ ಇಂತಹ ಒಂದು ಫಿಲಾಸಫಿಗೆ ಮಸೂರ ಹಿಡಿಯುತ್ತೆ.
ಚೈತನ್ಯದ ಪೂಜೆ ನಡೆದSದ
ನೋಡS ತಂಗಿ।। ಅಭಂಗದ ಭಂಗೀS ।।
‘ಉದ್ಭವ’ ‘ಉದ್ಭವ’ ಹೇ ಮಂಗಳ ಮೂರ್ತಿ
ಅಲಲಾ! ಆಹಹಾ! ಅಮಮಾ!
ಆತ್ಮಾ ಪರಮಾತ್ಮಾ ಅಂತSರಾತ್ಮಾ
ಘನವೋ ಘನ! ನಿಮ್ಮಾ ಮಹಿಮಾ!
ಘನದೊಳಗೆ ಕಂಪಿಸುವ ಅಣುಗಳಲ್ಲೂ ಚೇತನ ಕಾಣಿಸುತ್ತೆ ಅಲ್ಲವೇ. ಮತ್ತು ದಿನ ನಿತ್ಯದ ಪ್ರತೀ ವಿದ್ಯಮಾನದ ಮೂಲಕ ನಡೆಯುವುದು ಚೈತನ್ಯದ ಪೂಜೆಯೇ.
ನಾನು ಚೈತನ್ಯದ ಬಗ್ಗೆ ಹೇಳಲು ಕಾರಣವಿದೆ. ಚೈತನ್ಯದಲ್ಲಿ ಎರಡು ಮುಖ್ಯ ಪ್ರಕಾರಗಳು. ಒಂದು ಸ್ಥಿತಿ ಚೈತನ್ಯ ( ಪೊಟೆನ್ಷಿಯಲ್ ಎನರ್ಜಿ) ಮತ್ತು ಇನ್ನೊಂದು ಗತಿ ಚೈತನ್ಯ ( ಕೈನೆಟಿಕ್ ಎನರ್ಜಿ) ಮೊದಲನೆಯದ್ದು ‘ಇರುವೆ’ ಗೆ ಸಂಬಂಧಿಸಿದ್ದು, ಎರಡನೆಯದು ನಡಿಗೆಗೆ ಸಂಬಂಧಿಸಿದ್ದು. ಹಾಗೆ ನೋಡಿದರೆ, ಜಗತ್ತು ತುಂಬಾ ಚೇತನವೇ ಚೇತನ. ಅದು ದ್ರವ್ಯ ( ಮಾಸ್) ಇರಲಿ, ಅಥವಾ ಬೆಳಕು ಉಷ್ಣ, ಇಲೆಕ್ಟ್ರಿಕಲ್ ಇತ್ಯಾದಿ ಚೈತನ್ಯಮರದದ ವಿವಿಧ ಗೆಲ್ಲುಗಳಿರಲಿ, ಎಲ್ಲವೂ ಚೈತನ್ಯ ಸ್ವರೂಪಿಯೇ. ಇದನ್ನು ಆಲ್ಬರ್ಟ್ ಐನ್ಸ್ಟೈನ್, ದ್ರವ್ಯವನ್ನು ಚೈತನ್ಯವಾಗಿಯೂ ಚೈತನ್ಯ ವನ್ನು ದ್ರವ್ಯವಾಗಿಯೂ ಪರಿವರ್ತನೆ ಮಾಡಬಹುದು ಎಂಬ ಸಿದ್ಧಾಂತದಲ್ಲಿ ಹೇಳಿದ್ದು.
ಇನ್ನು ಕೊನೆಯದಾಗಿ, ಭಾರತೀಯ ಅಧ್ಯಾತ್ಮದಲ್ಲಿ ಚಲನೆಗಿಂತ ಸ್ಥಿರತೆಗೆ ಹೆಚ್ಚು ಮಹತ್ವ.
ಸತ್ಸಂಗತ್ವೆ ನಿಸ್ಸಂಗತ್ವಂ
ನಿಸ್ಸಂಗತ್ವೆ ನಿರ್ಮೋಹತ್ವಂ
ನಿರ್ಮೋಹತ್ವೆ ನಿಶ್ಚಲ ತತ್ವಂ
ನಿಶ್ಚಲತತ್ವೆ ಜೀವನ್ಮುಕ್ತಿ:
ಕೊನೆಯ ಸಾಲು, ಗಮನಿಸಿ! ನಿಶ್ಚಲತತ್ವೆ ಜೀವನ್ಮುಕ್ತಿ:
ನಮ್ಮ ಮನಸ್ಸು, ಯೋಚನೆ, ದೇಹ, ಎಲ್ಲವೂ ಸದಾ ಚಲನಶೀಲ. ಹಳೆಯ ಜೀವಕೋಶಗಳು ಅಳಿದು ಹೊಸ ಜೀವಕೋಶಗಳುತ್ಪತ್ತಿಯಾಗಿ ದೇಹ ನಳನಳಿಸುವುದರ ಹಿಂದೆ, ದೇಹದೊಳಗೆ ನಡೆಯುವ ಬಯೋಕೆಮಿಸ್ಟ್ರಿಯ ‘ನಡಿಗೆ’ ಯಿದೆ. ಅಂತಹಾ ಕ್ರಿಯೆಯನ್ನು ಯೋಗಸಾಧನೆಯ ಮೂಲಕ ನಿಧಾನವಾಗಿಸುತ್ತಾ,ದೇಹ ಮತ್ತು ಮನಸ್ಸನ್ನು, ನಿಶ್ಚಲವಾಗಿಸಿ, ಪಡೆಯುವ ಸಮಾಧಿ ಸ್ಥಿತಿಯಲ್ಲಿ, ಸಂಪೂರ್ಣ ಪ್ರಪಂಚವೇ ಸ್ವಂತದೊಳಗೊಂದಾಗುತ್ತದೆ ಅಂತ ಯೋಗ ಶಾಸ್ತ್ರ ಹೇಳುತ್ತದೆ.
ವಿಶ್ವದ ವಿದ್ಯಮಾನಗಳನ್ನು ಮಗುವಿನ ನೋಟದಲ್ಲಿ ನೋಡಿ ( ಯಾವುದೇ ಸೈದ್ಧಾಂತಿಕ ಪೂರ್ವಾಗ್ರಹಗಳಿಲ್ಲದೆಯೇ) ಆ ವಿದ್ಯಮಾನಗಳನ್ನು ಮತ್ತು ಜಗತ್ತಿನ ಒಟ್ಟೂ ಸ್ವಭಾವದ ಬಗ್ಗೆ ಒಂದು ಚಿಂತನೆಯನ್ನು ಹುಟ್ಟುಹಾಕುವ ಪ್ರಯತ್ನ ನನ್ನದು. ಆರಂಭದಲ್ಲಿ ಶಿವರಾಮ ಕಾರಂತರ ಬಗ್ಗೆ ಹೇಳಲು ಕಾರಣವೂ ಇದೇ. ವಿಜ್ಞಾನ ಎಂದರೆ ಸಮೀಕರಣದ ಎಡ ಮತ್ತು ಬಲದ ಸಮನ್ವಯ ಮಾತ್ರ ಎಂಬ ಚೌಕಟ್ಟನ್ನು ಮೀರಿ, ಅನುಭವಕ್ಕೆ ಬರುವ ಪ್ರತೀ ಎಳೆಗಳನ್ನು ಕೆಲವೊಮ್ಮೆ ಕೂಡಿಸಿ, ಹಲವೊಮ್ಮೆ ಬಿಡಿಸಿ, ಮನಸ್ಸಿಗೆ ಏನು ಎಟಕುತ್ತೆ ಅಂತ ಪ್ರಯತ್ನ ಮಾಡೋಣ.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್