- ಸಾಧಕರು ಸಾಮ್ರಾಜ್ಯ ಕಟ್ಟಬಾರದು- ವೈಲ್ಡ್ ವೈಲ್ಡ್ ಕಂಟ್ರಿ - ನವೆಂಬರ್ 5, 2022
- ವ್ಹಾ ರಿಷಭ್ ವ್ಹಾ – ಕಾಂತಾರಕೆ ವ್ಹಾ ವ್ಹಾ - ಅಕ್ಟೋಬರ್ 8, 2022
- ಚೇರ್ಮನ್ ಅವರ ಕುರಿತ ಪುಸ್ತಕ ಮತ್ತು ನಾನು - ಆಗಸ್ಟ್ 22, 2022
ವಯಸ್ಸಾದ ಮೇಲೆ ನಮ್ಮ ಸ್ಥಿತಿ ಏನಾಗಬಹುದು ಎಂದು ಅನುಭವಿಸಲು ಮುಪ್ಪು ಆವರಿಸುವವರೆಗೆ ಕಾಯುವ ಅಗತ್ಯವಿಲ್ಲ. ಎಂಬತ್ತರ ಗಡಿ ದಾಟಿದ ಹಿರಿಯ ಮನಸುಗಳೊಂದಿಗೆ ಮುಕ್ತವಾಗಿ ಮಾತನಾಡಬೇಕು ಇಲ್ಲ ಶೇಕ್ಷಪಿಯರ್ ಬರೆದ ‘ಕಿಂಗ್ ಲಿಯರ್’ ನಾಟಕ ನೋಡಿ ಕಲಿಯಬೇಕು.
ಆರೋಗ್ಯಪೂರ್ಣ ಹಿರಿಯ ಜೀವಗಳ ತಲ್ಲಣಗಳು ಹೇಳಲಸಾಧ್ಯ. ಅಪಾರ ಅನುಭವ, ಅಸಹಾಯಕತೆ, ಅನಾರೋಗ್ಯ,ಜನರೇಶನ್ ಗ್ಯಾಪ್, ಅಸಂಖ್ಯ ಬಯಕೆಗಳು, ಸುತ್ತಲೂ ಇರುವವರು ತಮ್ಮ ಮಾತಿಗೆ ಬೆಲೆ ಕೊಡಲಿ ಎಂಬ ಮೊಂಡುತನ.
‘ರುಚಿಯಾದದ್ದನ್ನು ತಿನ್ನಬೇಕು. ಕೂಳು ಕಟ್ಟಿ ಪತ್ತೆ ಮಾಡಿ ನಾವು ಬದುಕುವದಾದರೂ ಎಷ್ಟು ದಿನ?’ ಎಂಬ ಉದಾಸೀನ.
ಹರೆಯದ ತಪ್ಪುಗಳ ಮರುನೆನಪಿನ ದಾಳಿ, ಇನ್ನಿಲ್ಲದ ಪಶ್ಚಾತಾಪ, ತಾವು ಮಾಡಿದ ತಪ್ಪನ್ನು ಯುವಕರು ಮಾಡದಿರಲಿ ಎಂದು ಬುದ್ಧಿ ಮಾತು ಹೇಳಿ ಒಳ್ಳೆಯವರಾಗಿಸುವ ಹುಚ್ಚು.
ಕಾಮ, ದುಡಿಮೆ, ಗಳಿಕೆ ಹಾಗೂ ಬದುಕಿನ ಬಗ್ಗೆ ಮೇಲ್ನೋಟಕ್ಕೆ ನಿರುತ್ಸಾಹದ ಮಾತು ಆದರೆ ಒಳಗೊಳಗೆ ಹುಳಿ ಮಾವು.
ಅನುಭವವೇ ದಿವ್ಯಾಮೃತ ಎಂಬ ಹಟ ಆದರೆ ಹೇಳುವುದ ಪಾಲಿಸುವುದು ಹೋಗಲಿ, ಕನಿಷ್ಟ ಕೇಳಿಸಿಕೊಳ್ಳುವುದಿಲ್ಲ ಎಂಬ ಅಸಹನೆ.
‘ನಾನು ತುಂಬ ಆರಾಮಾಗಿ ಇದ್ದೇನೆ ಸಾವು ಯಾವಾಗ ಬಂದರೂ ಸಾಯುತ್ತೇನೆ’ ಎಂದು ಹೇಳುತ್ತಲೇ ಸಣ್ಣ ಕಾಯಿಲೆ ಬಂದರೂ ದೊಡ್ಡ ವೈದ್ಯರ ಬಳಿ ಓಡಿ ಹೋಗುವ ಚಡಪಡಿಕೆ.
ಹಸಿವು, ಕಾಮ ಬೇಕೆನಿಸಿದರೂ ಮಾತು ಮೀರುವ ಅಂಗಾಂಗಳ ಮೇಲೆ ಹುಸಿ ಮುನಿಸು. ಮನದ ಬಯಕೆಗಳ ನಿರ್ಲಜ್ಯತೆ.
ಇಡೀ ಬದುಕಿನುದ್ದಕ್ಕೂ ಅಹಂಕಾರದಿಂದ ಮೆರೆದಿದ್ದರೂ ಎಲ್ಲರೂ ತಮ್ಮನ್ನು ಗೌರವಿಸಿ, ಪ್ರೀತಿಸಲಿ ಎಂಬ ಆಸೆ.
ತಾವು ಹೇಳುವ ಸಂಗತಿಗಳಿಗೆ ಮಾತ್ರ ‘ಜಾಗತಿಕ ಮನ್ನಣೆ’ ಬೇಕು ಎಂಬ ಭ್ರಮೆ. ಊರೂರು ಸುತ್ತಬೇಕು, ಹೆಚ್ಚು ಜನರನ್ನು ಭೇಟಿ ಮಾಡಬೇಕು, ಅವರಿಂದ ಹೊಗಳಿಸಿಕೊಳ್ಳಬೇಕು ಎಂಬ ಅವಾಸ್ತವ ಬಯಕೆಗಳು.
ಮಕ್ಕಳು ಹಂಚಿಕೊಳ್ಳುವ ಪ್ರೀತಿಯ ರೀತಿ ಅಮೂರ್ತವಾಗಿರದೇ ಎಲ್ಲರಿಗೂ ಗೊತ್ತಾಗಲೀ ಎಂಬ ತೀವ್ರತೆ. ಬರೀ ಗತಕಾಲದ ರಮ್ಯತೆಯ ನೆನಪಿನ ಹೊಯ್ದಾಟದಲಿ ವರ್ತಮಾನದ ಅಭದ್ರತೆ.
ಮನಸು ಮಗುವಾಗಿರುವುದನ್ನು ಹೇಳಲಾಗದ ಹಿಂಸೆ.
ಬುದ್ಧ ಹೇಳಿದ ವೈರಾಗ್ಯದ ‘ಮುಪ್ಪು-ಅನಾರೋಗ್ಯ-ಸಾವು’ ಅರ್ಥ ಮಾಡಿಕೊಳ್ಳುವ ಅನಿವಾರ್ಯತೆ.
ವಯಸ್ಸಾದ ಮೇಲೆ ಬರುವ ಇಂತಹ ಅಭಾಸಗಳನ್ನು ಯುವಕರಿದ್ದಾಗಲೇ ಅರಿತು ನಮ್ಮ ಇಳಿ ಪ್ರಾಯದ ಅವಘಡಗಳನ್ನು ಅರಿಯಲು ಸಮಯ ಸಿಕ್ಕಾಗ ಹಿರಿಯರೊಂದಿಗೆ ಹೆಚ್ಚು ಆಪ್ತವಾಗಿ ಸಹನೆಯಿಂದ ಬೆರೆಯಬೇಕು. ಇದನ್ನು ಸರಿಯಾಗಿ ಅರಿತುಕೊಂಡವರ ಇಳಿಹೊತ್ತು ಅಪ್ಯಾಯಮಾನ.
ಇಲ್ಲದಿದ್ದರೆ ‘ಕಿಂಗ್ ಲಿಯರ್’ ತರಹ ಹುಚ್ಚರಾಗಿ ಅಲೆಯಬೇಕಾಗುತ್ತದೆ. ಲಿಯರ್ ಮಹಾರಾಜ ಎಂಬತ್ತರ ಪ್ರಾಯದಲ್ಲಿ ಆಸ್ತಿ ವಿಭಜನೆ ಮಾಡುವಾಗ, ತನ್ನ ಮೂವರು ಹೆಣ್ಣು ಮಕ್ಕಳು ತನ್ನನ್ನು ಎಷ್ಟೊಂದು ಪ್ರೀತಿಸುತ್ತಾರೆ ಎಂದು ತಿಳಿಯುವ ವಿಚಿತ್ರ ಕುತೂಹಲ.
ಮಕ್ಕಳ ಪ್ರೀತಿಯನ್ನು ಆಧರಿಸಿ ಆಸ್ತಿ ವಿಭಜನೆ ಮಾಡಲು ನಿರ್ಧಾರ ಮಾಡಿದಾಗ ಅಪ್ಪನ ಮೂರ್ಖತನ ಕಂಡು ಮಕ್ಕಳು ವಿಪರೀತವಾದ ಸುಳ್ಳುಗಳನ್ನು ಹೇಳಲು ಆರಂಭಿಸುತ್ತಾರೆ.
ಎಂತಹ ದುರಂತ ನೋಡಿ ಅವನ ಇಬ್ಬರು ಹಿರಿಯ ಮಕ್ಕಳು ಪೈಪೋಟಿಗೆ ಬಿದ್ದವರಂತೆ ಭೀಕರ ಸುಳ್ಳುಗಳನ್ನು ಹೇಳಿ ತಂದೆಯನ್ನು ನಂಬಿಸುತ್ತಾರೆ. ಆದರೆ ಕೊನೆಯ ಮಗಳು ‘ಒಬ್ಬ ಮಗಳು ತಂದೆಯನ್ನು ಎಷ್ಟು ಪ್ರೀತಿಸಬೇಕು ಅಷ್ಟು ಮಾತ್ರ ಪ್ರೀತಿಸುತ್ತೇನೆ’ ಎಂಬ ವಾಸ್ತವ ಸತ್ಯವನ್ನು ಹೇಳುತ್ತಾಳೆ.
ಕುಪಿತಗೊಂಡ ಲಿಯರ್ ಕೊನೆಯ ಮಗಳಿಗೆ ಆಸ್ತಿಯನ್ನು ನೀಡದೆ ಹೊರಹಾಕುತ್ತಾನೆ. ನಂತರ ಮೊದಲನೇ ಇಬ್ಬರು ಮಕ್ಕಳು ಆಸ್ತಿ ಕಸಿದುಕೊಂಡು ಲಿಯರ್ ದೊರೆಯನ್ನು ಹೊರ ದೂಡುತ್ತಾರೆ.
ನಿಜವಾದ ಪ್ರೀತಿ ಹೊಂದಿದ್ದ ಕೊನೆಯ ಮಗಳು ಕಾರ್ಡಿಲಿಯ ತಂದೆಯ ರಕ್ಷಣೆಗೆ ಮುಂದಾಗುತ್ತಾಳೆ.
ಅರೆ ಹುಚ್ಚನಾಗಿ ಅಲೆಯುತ್ತಿದ್ದ ಅಪ್ಪನಿಗೆ ಸೂಕ್ತ ಚಿಕಿತ್ಸೆ ನೀಡಿ ಅಪಾಯದಿಂದ ಪಾರು ಮಾಡಿ ನಿಜವಾದ ವಾತ್ಸಲ್ಯ ತೋರುತ್ತಾಳೆ.
ಹಿರಿಯ ಜೀವಿಗಳ ಈ ದೌರ್ಬಲ್ಯ ಅರ್ಥ ಮಾಡಿಕೊಂಡು ಅವರಿಗೆ ಖುಷಿ ನೀಡಬೇಕು. ಹಿರಿಯ ಜೀವಿಗಳು ವಯಸ್ಸಾದ ಮೇಲೆ ಇತರರ ಪ್ರೀತಿಯನ್ನು ಬಯಸುವುದಕ್ಕಿಂತ ವೈಯಕ್ತಿಕ ಜೀವನೋತ್ಸಾಹ ಹೆಚ್ಚಿಸಿಕೊಂಡು ಬದುಕನ್ನು ಬಂದಂತೆ ಸ್ವೀಕರಿಸಬೇಕು ಇಲ್ಲದೇ ಹೋದರೆ ಕಿಂಗ್ ಲಿಯರ್ ತರಹ ಹುಚ್ಚು ಹಿಡಿಸಿ ಕೊಳ್ಳಬೇಕಾಗುತ್ತದೆ.
ವಿಲಿಯಂ ಶೇಕ್ಸ್ ಪಿಯರ್ ಮುಪ್ಪಿನ ಇರುವಿಕೆಯನ್ನು ಅರ್ಥ ಮಾಡಿಸಲೆಂದು ಈ ದುರಂತ ನಾಟಕವನ್ನು ಹೃದಯ ವಿದ್ರಾವಕವಾಗಿ ರಚನೆ ಮಾಡಿದ್ದಾನೆ.
ಆದ್ದರಿಂದ ಬದುಕಿನ ವಿವಿಧ ಹಂತಗಳನ್ನು ಪ್ರಾಯದಲ್ಲಿ ಅರ್ಥಮಾಡಿಕೊಂಡು ನಮ್ಮ ವಿವೇಚನೆಯ ಭವಿಷ್ಯವನ್ನು ವರ್ತಮಾನದಲ್ಲಿ ಸಿದ್ಧಪಡಿಸಿಕೊಳ್ಳಬೇಕು.
ಹಿರಿಯರ ದಿನಾಚರಣೆ ಕೇವಲ ಆಚರಣೆಯಾಗಬಾರದು.
ಈ ನೆಪದಲ್ಲಿ ಹಿರಿಯರನ್ನು ಹಾಡಿ ಹೊಗಳುವುದಕ್ಕಿಂತ ಅವರ ವಯಸ್ಸನ್ನು ಮತ್ತು ವಯೋಮಾನದ ತಲ್ಲಣಗಳನ್ನು ಗ್ರಹಿಸಿಕೊಂಡು ಗೌರವಿಸಬೇಕು.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್