- ಇದೊಂದು ಪ್ರೇಮ ಕಥೆ – ಇದರಲ್ಲೇನೂ ಹೊಸತನವಿಲ್ಲ - ಜುಲೈ 23, 2021
- ತಿರುವು - ಮೇ 1, 2021
- ಈಶ ಇಂಡಸ್ಟ್ರೀಸ್ - ಏಪ್ರಿಲ್ 13, 2021
ಮುಂಬಯಿ…..
ಸುಮಾರು ನಲ್ವತ್ತೈದು ವರ್ಷಗಳ ಹಿಂದೆ ಇಂಜನಿಯರಿಯರುಗಳಿಗೆ ಬೇಡಿಕೆ ಕಡಿಮೆ ಇತ್ತು. ಕೆಲಸ ಸಿಗುವುದು ಬಹಳ ಕಷ್ಟದಾಯಕ ಆಗಿತ್ತು. ಅಂತಹ ಸಮಯದಲ್ಲೇ ಒಂದು ಪ್ರತಿಷ್ಠಿತ ಇಂಜನಿಯರಿಂಗ್ ಕಾಲೇಜಿನಿಂದ ಯಶಸ್ವಿಯಾಗಿ ಹೊರ ಬಂದಿದ್ದೆ. ಅತೀ ಬುದ್ದಿವಂತನಲ್ಲದ ನನಗೆ ಕೆಲಸ ಸಿಗುವುದು, ಒಂದು ಬರೇ ಅಲೆತವಾಗಿತ್ತು. ಕಷ್ಟದ ದಿನಗಳು. ಕೊನೆ ಕೊನೆಗೆ ನಾನೂ ಆತ್ಮ ವಿಶ್ವಾಸ ಕಳಕೊಂಡೆ.
ಯಾರೋ ಒಬ್ಬ ಪರಿಚಿತರು ‘ಈಶ ಇಂಡಸ್ಟ್ರೀಸ್’ಗೆ ಒಂದು ಅರ್ಜಿ ಹಾಕು ಅಂದರು. ಅವರ ಯಾವುದೇ ಜಾಹಿರಾತು ಕಂಡಿಲ್ಲ ಅಂದೆ. ಅರ್ಜಿ ಹಾಕು. ನಿನಗೆ ಏನೂ ನಷ್ಟವಿಲ್ಲ. ಕಲ್ಲು ಬಿಸಾಡು, ಸಿಕ್ಕರೆ ಮಾವಿನ ಹಣ್ಣು, ಹೋದರೆ ಒಂದು ಕಲ್ಲು.
ಅರ್ಜಿ ಹಾಕಿದೆ. ಮೊದ ಮೊದಲು ಅವರಿಂದ ಉತ್ತರ ಬರಬಹುದೇ ಎಂದು ಕಾದೆ. ಬರಲಿಲ್ಲ. ಮರೆತೆ.
ನನ್ನ ಅಲೆತ ಸಾಗಿಯೇ ಇತ್ತು. ನನ್ನ ಅಲೆತಕ್ಕೆ, ಅರ್ಜಿ ಹಾಕಲು ಆಗಾಗ ಅಪ್ಪನಿಂದ ಹಣ ಕೇಳುವುದು. ಒಂದು ದಿನ ‘ಈಶ ಇಂಡಸ್ತ್ರೀಸ್’ ನಿಂದ ಉತ್ತರ ಬಂತು. ಮುಂದಿನ ವಾರ ಶುಕ್ರವಾರ ಸಂದರ್ಶನಕ್ಕೆ ಬಾ ಎಂದು. ನನಗೇಕೋ ಇನ್ನೊಂದು ಸಂದರ್ಶನ ಮಾತ್ರ ಅನಿಸಿತು.
ಸಂದರ್ಶನದ ದಿನ ಸ್ವಲ್ಪ ಬೇಗನೇ ಹೋದೆ. ಬೃಹತ್ ಕಟ್ಟಡ. ಎದೆ ಧಸಕ್ ಅಂದಿತು. ಇಲ್ಲಿ ನನಗೆ ಕೆಲಸ ಸಿಕ್ಕೀತೆ? ಸ್ವಲ್ಪ ಅಳುಕುತ್ತಾ ಒಳ ಹೋದೆ. ರಿಸೆಪ್ಷನ್ನಲ್ಲಿ ಕುಳಿತ ಹುಡುಗಿಗೆ ನನಗೆ ಬಂದ ಪತ್ರ ತೋರಿಸಿದೆ. ಆಕೆ ನಸು ನಗುತ್ತಾ, “ಕುಳಿತುಕೊಳ್ಳಿ. ತುಂಬಾ ಬೇಗನೆ ಬಂದಿದ್ದೀರಿ” ಅಂದಳು. ಯಾರಿಗೋ ಫೋನ್ ಮಾಡಿ, “ಶೆಟ್ಟಿಯವರು ಸಂದರ್ಶನಕ್ಕೆ ಬಂದಿದ್ದಾರೆ.”
ನನ್ನೊಡನೆ ಆಕೆ, “ಒಂದೈದು ನಿಮಿಷ” ಅಂದಳು.
ಅಲ್ಲಿದ್ದ ಏ ಸಿ ಯ ತಂಪಿಗೋ, ಹೆದರಿಕೆಗೋ ನಾನು ಸ್ವಲ್ಪ ಕಂಪಿಸುತ್ತಿದ್ದೆ.
“ಒಳಗೆ ಹೋಗಿ. ಬಲ ಬದಿಯ ಮೊದಲ ಕೋಣೆಯ ಒಳಗೆ ಹೋಗಿ.”
ಆಕೆಗೆ ಧನ್ಯವಾದ ತಿಳಿಸಿ ಒಳ ಹೊಕ್ಕೆ.
ಬಾಗಿಲು ತಟ್ಟಿ ಕ್ಯಾಬಿನಿನ ಒಳ ಹೊಕ್ಕೆ. ಮಧ್ಯವಯಸ್ಸಿನ, ಹಸನ್ಮುಖದ ವ್ಯಕ್ತಿ ಕುಳಿತಿದ್ದರು.
“ಬನ್ನಿ” ಅನ್ನುತ್ತಾ ಎದ್ದು ನಿಂತು ನನ್ನ ಕೈ ಕುಲುಕಿದರು. ತಮ್ಮ ಪರಿಚಯ, ತಾನು ಸುವರ್ಣ ಅನ್ನುತ್ತಾ ಮಾಡಿಕೊಂಡರು. ನನ್ನ ಬಗ್ಗೆ ಆತ್ಮೀಯವಾಗಿ ವಿಚಾರಿಸಿದರು.
ಅಷ್ಟರಲ್ಲಿ ಚಹಾ ಹಿಡಿದುಕೊಂಡು ಒಬ್ಬ ಹುಡುಗ ಬಂದ. “ಇವರಿಗೂ ಚಹಾ ಕೊಡು.” ಅಂದಾಗ ನಾನು ನಿರಾಕರಿಸಿದೆ. “ಈಗ ತಾನೆ ಕುಡಿದೆ, ಸರ್” ಅಂದೆ.
“ನನ್ನ ಜೊತೆ ಕುಡಿದಿಲ್ಲ ತಾನೆ,,,” ಅನ್ನುತ್ತಾ ನನಗೂ ಚಹಾ ಕುಡಿಸಿದರು. ಚಹಾ ಕುಡಿಯುವಾಗ ನನ್ನ ಕೈ ಸ್ವಲ್ಪ ನಡುಗುತ್ತಿತ್ತು. ಚಹಾ ಕುಡಿದ ನಂತರ ಯಾರಿಗೋ ಫೋನ್ ಮಾಡಿ. ತುಳುವಿನಲ್ಲಿ, “ಶೆಟ್ಟರು ಇಂಟರ್ ವ್ಯೂಗೆ ಬಂದಿದ್ದಾರೆ. ನಾವು ಅವರನ್ನು ಇವತ್ತು ಕರೆದಿದ್ದೇವೆ” ಅಂದರು.
ಸುವರ್ಣರು ನನ್ನನ್ನು ಗಮನಿಸಿ, ಏ ಸಿಯ ತೀವ್ರತೆ ಕಡಿಮೆ ಮಾಡಿದರು.
“ಸಂದರ್ಶನ ಸ್ವಲ್ಪ ತಡವಾಗಬಹುದು. ಜನರಲ್ ಮ್ಯಾನೇಜರಿಗೆ ಯಾವುದೋ ಮೀಟಿಂಗ್ ಇದೆ ಅಂದರು.
“ಶೆಟ್ಟರೆ, ನಮ್ಮ ದೇಶದಲ್ಲಿ ಎಷ್ಟು ಜನರಿಗೆ ವಿದ್ಯಾಭ್ಯಾಸ ಸಿಕ್ಕಿದೆ? ಲಕ್ಷಾಂತರ ಜನ ಅವಿದ್ಯಾವಂತರಾಗಿದ್ದಾರೆ. ಅವರಿಗೆ ಓದುವ ಅವಕಾಶ ಸಿಕ್ಕಿಲ್ಲ. ಅವರಿಗೆ ಹೋಲಿಸಿದರೆ ನೀವು ಬಹಳ ಅದೃಷ್ಟವಂತರು. ಅದೂ ನೀವು ಇಂಜನಿಯರ್. ಒಳ್ಳೆಯ ಅಂಕ ಗಳಿಸಿ ಪಾಸಾಗಿದ್ದೀರಿ. ಮತ್ತೇಕೆ ಈ ಹೆದರಿಕೆ ನಿಮಗೆ.
“ಒಂದು ವೇಳೆ ನಿಮಗೆ ಇಲ್ಲಿ ಕೆಲಸ ಸಿಕ್ಕಿಲ್ಲ ಅಂದುಕೊಳ್ಳಿ. ಏನಾಯಿತು? ಈ ಜಗತ್ತು ತುಂಬಾ ವಿಶಾಲವಾಗಿದೆ. ಒಂದಲ್ಲ ಒಂದು ಕಡೆ ನಿಮ್ಮ ಅರ್ಹತೆಗೆ ತಕ್ಕ ಕೆಲಸ ಸಿಗುತ್ತದೆ. ಧನಾತ್ಮಕವಾಗಿ ಯೋಚನೆ ಮಾಡಿ. ‘ಈಶ’ದಲ್ಲಿ ನಿಮಗೆ ಕೆಲಸ ಸಿಕ್ಕಿಲ್ಲವಾದರೆ, ನೀವು ನಿಶ್ಪ್ರಯೋಜಕರು ಅಂದಲ್ಲ. ನಮ್ಮ ಕಂಪೆನಿಗೆ ಬೇಕಾದ ಅರ್ಹತೆ ನಿಮ್ಮಲ್ಲಿ ಇಲ್ಲ. ನಿಮ್ಮ ಪ್ರತಿಭೆಯನ್ನು ನಮಗೆ ಉಪಯೋಗಿಸಲು ಆಗುವುದಿಲ್ಲ ಎಂದು ಮಾತ್ರ ಅದರ ಅರ್ಥ.
“ನಾನು ಉದ್ದೇಶ ಪೂರ್ವಕವಾಗಿ ಜಿ ಎಂ ಜೊತೆ ತುಳುವಿನಲ್ಲಿ ಮಾತನಾಡಿದ್ದು, ನಿಮ್ಮ ಭಯ ಕಡಿಮೆ ಆಗಲಿ ಎಂದು. ಹೆದರುವವರಿಗೆ, ಆತ್ಮ ವಿಶ್ವಾಸ ಇಲ್ಲದಿರುವವರಿಗೆ ಕೆಲಸ ಸಿಗುವುದು ಕಷ್ಟ. ಧೈರ್ಯವಾಗಿ ಇರಿ. ವಿಶ್ವಾಸದಿಂದ ಸಂದರ್ಶನ ಎದುರಿಸಿ, ಗುಡ್ ಲಕ್” ಎಂದರು.
ಅಷ್ಟರಲ್ಲಿ ಸುವರ್ಣರಿಗೆ ಇಂಟರ್ ಕಾಮ್ನಲ್ಲಿ ಫೋನ್ ಬಂತು. “ಒಂದು ನಿಮಿಷ” ಅನ್ನುತ್ತಾ ಅವರು ಹೊರ ಹೋದರು. ಅವರ ಮಾತು ನೆನಪಿಸಿಕೊಳ್ಲುತ್ತಾ, ನನಗೆ ನಾನು ಧೈರ್ಯ ಹೇಳುತ್ತಾ ಕುಳಿತಿದ್ದೆ. ಯಾರೋ ಬಾಗಿಲು ತಟ್ತಿದ ಸದ್ದು. ಒಬ್ಬ ಎಳೆಯ ಸುಂದರಿ ಒಳ ಬಂದಳು.
“ನನ್ನ ಜೊತೆ ಬನ್ನಿ” ಎಂದು ನನ್ನನ್ನು ಒಂದು ಕೋಣೆಗೆ ಕರೆದುಕೊಂಡು ಹೋದಳು.
ಅಲ್ಲಿ ಸುಮಾರು ಸುವರ್ಣರ ವಯಸ್ಸಿನ ವ್ಯಕ್ತಿ ಮಧ್ಯದಲ್ಲಿ ಕುಳಿತಿದ್ದರು. ಸುವರ್ಣರ ಜೊತೆ ಇನ್ನೊಬ್ಬ ವ್ಯಕ್ತಿ ಕುಳಿತಿದ್ದರು. ನನ್ನನ್ನು ಕುಳಿತುಕೊಳ್ಳಲು ಹೇಳಿ, ನನ್ನ ಬಗ್ಗೆ ಕೇಳಿ ತಿಳಿದುಕೊಂಡರು. ಸಂದರ್ಶನ ಬಹಳ ಆತ್ಮೀಯ ವಾತವರಣದಲ್ಲಿ ನಡೆಯಿತು. ಅಲ್ಲಿ ಕುಳಿತವರು ತಮ್ಮ ಜ್ಞಾನ ಪ್ರದರ್ಶನ ಮಾಡಲಿಲ್ಲ, ನನಗೆ ಏನೇನು ಗೊತ್ತಿದೆ ಎಂದು ತಿಳಿದುಕೊಂಡರು. ನಾನು ತಪ್ಪು ಉತ್ತರ ಕೊಟ್ಟಾಗಲೂ ಅವರು ಅವನ್ನು ಬಹಳ ಸ್ಪೋರ್ಟಿವ್ ಆಗಿ ತೆಗೆದುಕೊಂಡರು.
ಸಂದರ್ಶನ ಮುಗಿಸಿ ಪುನಹ ಸುವರ್ಣರ ಕ್ಯಾಬಿನ್ ನಲ್ಲಿ ಕುಳಿತೆ. ಸ್ವಲ್ಪ ಹೊತ್ತಿನಲ್ಲಿ ಸುವರ್ಣರು ಬಂದು ಸ್ವಲ್ಪ ಕುಳಿತುಕೊಳ್ಳಿ ಅನ್ನುತ್ತಾ ಯಾವುದೋ ಫೈಲ್ ನೋಡ ತೊಡಗಿದರು. ಪ್ರಾಯಶಃ ನನ್ನ ಸಂದರ್ಶನ ಅವರಿಗೆ ನಿರಾಶೆ ಉಂಟು ಮಾಡಿರ ಬೇಕು. ಹಾಗಾಗಿ ಅವರು ಬೇರೆ ಫೈಲ್ ನೋಡುವ ನಾಟಕ ಮಾಡುತ್ತಿದ್ದಾರೆ.
ಬಾಗಿಲು ತಟ್ಟಿ ಅದೇ ಸುಂದರಿ ಒಳ ಬಂದಳು. ಸುವರ್ಣರ ಕೈಯಲ್ಲಿ ಒಂದು ಪತ್ರ ಕೊಟ್ಟು, ನನ್ನತ್ತ ಮುಗುಳು ನಗೆ ಬೀರಿ ಹೋದಳು. ಸುವರ್ಣರು ಆ ಪತ್ರ ಓದಿ, ರುಜು ಮಾಡಿ, ಪುನಹ ಅದೇ ಲಕೋಟೆಯಲ್ಲಿ ಇಟ್ಟು ನನ್ನ ಕೈಗೆ ಇತ್ತರು. ನಾನು ಎದ್ದು ನಿಂತೆ.
“ಆ ಪತ್ರ ನೋಡಿ, ಶೆಟ್ಟರೆ.”
ಲಕೋಟೆ ಬಿಚ್ಚಿ ಓದಿದೆ. ಪುನಹ ಓದಿದೆ. ನಂಬಲಾಗಲಿಲ್ಲ. ನನ್ನ ಕಣ್ಣ ಅಂಚಿನಲ್ಲಿ ಸಣ್ಣಗಿನ
ನೀರ ಹನಿ.
“ಅಭಿನಂದನೆಗಳು ಶೆಟ್ಟರೆ,” ಅನ್ನುತ್ತಾ ಸುವರ್ಣರು ನನ್ನ ಕೈ ಕುಲುಕಿದರು. “ಈ ಖುಶಿಯಲ್ಲಿ ಇನ್ನೊಂದು ಚಹಾ ಕುಡಿಯೋಣ.”
ಹೆಚ್ಚಿನ ಬರಹಗಳಿಗಾಗಿ
ಮಗುಚಿತೊಂದು ಮೀನು ಬುಟ್ಟಿ
ಶೂಟಿಂಗ್ ಅನ್ಯಾಯ
ಕಾಸಿಲ್ ಆಫ್ ಆಲ್ಬಕರ್ಕೀ