ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮಹಾದೇವ ಕಾನತ್ತಿಲ
ಇತ್ತೀಚಿನ ಬರಹಗಳು: ಮಹಾದೇವ ಕಾನತ್ತಿಲ (ಎಲ್ಲವನ್ನು ಓದಿ)

ಇರುವೆ – ನಡಿಗೆ – ೫

“ಹಲೋ ಮಾದೇವ ಮಾಮ”

“ಹಾಂ! ಹಲೋ ಅನು ಪುಟ್ಟೂ!
ಹೇಂಗಿದ್ದೆ, ಬೇಸಿಗೆ ರಜಾ ಅಲ್ವಾ ..ಮಾವಿನ ಹಣ್ಣು ಹಲಸಿನ ಹಣ್ಣಿನ ಘಮಘಮ ಗಮ್ಮತ್ತು ಹೇಗಿದೆ?..”

” ಮಾಮಾ, ತುಂಬಾ ಬಿಸಿಲು ಇಲ್ಲಿ.
ಅಜ್ಜ ಹೇಳ್ತಿದ್ರು ಹವೆ ತುಂಬಾ ಬದಲಾಗ್ತಿದೆ ಅಂತ. ಅವರ ಬಾಲ್ಯದಲ್ಲಿ ಬರೇ ಬೀಸಣಿಗೆ ಬೀಸಿದರೇ ತಂಪು ಹಂಚುತ್ತಿದ್ದ ಗಾಳಿ ಈಗ ಅದೇನೋ ಹೇಳ್ತಾರಲ್ಲ ಏರ್ ಕಂಡಿಷನರ್ ಅಂತ..ಅದಿದ್ದರೂ ಉರಿ ಅಂದರೆ ಉರಿ ಅಂತ..
ಮಾಮಾ ನಂಗೊಂದು ಡೌಟ್..”

” ಕೇಳು ಅನ್ನು ಪುಟ್ಟೂ..ಅದೇನು ಈ ಮಾಮನ ಬೋಳುಮಂಡೆಗೆ ಹೊಳೆಯುತ್ತೋ ಹೇಳ್ತೀನಿ..”

” ಮಾಮಾ, ಮೊನ್ನೆ ಶಾಲೆಯಲ್ಲಿ ರಜೆಯಲ್ಲಿ ಓದಲು ಅಂತ, ‘ಸೌರ ಮಂಡಲ’ ಎಂಬ ಟಾಪಿಕ್ ಕೊಟ್ರು ಮೇಷ್ಟ್ರು.. ಗ್ರಹಗಳ ಬಗ್ಗೆ, ಸೂರ್ಯನ ಬಗ್ಗೆ ಸ್ವಲ್ಪಮಟ್ಟಿಗೆ ವಿವರಿಸಿದರು. ನಾನು ಒಂದು ಪ್ರಶ್ನೆ ಕೇಳಿದೆ ಮಾಮ..”

“ಹಾಂ, ಅನು, ನೀನು ನಿನ್ನ ಮಾಮನ ಹಾಗೇ ಒಂದು ಪ್ರಶ್ನಾರ್ಥಕ ಚಿಹ್ನೆ, ಬಿಡು!!
ಏನಂತ ಕೇಳ್ದೆ?”

“ಮಾಮಾ ನಂಗೆ ಬೇಜಾರು..ಮೇಷ್ಟ್ರು ನಂಗೆ ಅಣಕು ಮಾಡಿದ್ರು..”

” ಹೇ ಅದರಲ್ಲಿ ಏನಿದೆ! ಮೊದಲು ಪ್ರಶ್ನೆ ಏನು ಹೇಳು”

” ಏನಿಲ್ಲ ಮಾಮ, ಸೂರ್ಯನಿಂದ ಬೆಳಕು ಹೇಗೆ ಉತ್ಪತ್ತಿ ಆಗುತ್ತೆ, ನಮ್ ಹಾಗೇ ಸೂರ್ಯನಿಗೂ ಹುಟ್ಟು, ಸಾವು ಇದೆಯೇ ಅಂತ ಕೇಳಿದೆ.
ಮೇಷ್ಟ್ರು ಅಂದರು, “ಮೊದಲು ಸೌರಮಂಡಲ, ಗ್ರಹಗಳು ಇತ್ಯಾದಿಗಳ ಹೆಸರು ಮತ್ತು ವಿವರಗಳನ್ನು ಕಂಠಪಾಠ ಮಾಡಿ, ಮುಂದಿನ ವರ್ಷ ಪಾಸ್ ಮಾರ್ಕು ಉತ್ಪತ್ತಿ ಮಾಡುವುದು ಹೇಗೆ ಅಂತ ಯೋಚಿಸು, ಸೂರ್ಯನಲ್ಲಿ ಬೆಳಕು ಹೇಗೆ ಉತ್ಪತ್ತಿ ಆಗುತ್ತೆ ಅಂತ ನಿನ್ನ ಮೆದುಳು ಸ್ವಲ್ಪ ಬೆಳೆದಾಗ ವಿವರಿಸುವೆ” ಪೂರ್ತಿ ಕ್ಲಾಸು ಘೊಳ್ ಅಂತ ನಕ್ಕಿತು ಮಾಮ..☹️☹️😔😢
ನಾನು ಪ್ರಶ್ನೆ ಕೇಳಿದ್ದು ತಪ್ಪಾ? ಮಾಮಾ..”

“ಇಲ್ಲ, ಪ್ರಶ್ನೆ ಮತ್ತು ಉತ್ತರ, ಮನಸ್ಸಿನ ಒಳಗೇ ಚಿಂತನ ಮಂಥನ, ಕಲಿಕೆಗೆ ಬಹಳ ಮುಖ್ಯ ಪುಟ್ಟೂ..

ನಿಂಗೊಂದು ವಿಷಯ ಗೊತ್ತಾ?.. ಜಗತ್ತಿನ ಶ್ರೇಷ್ಠ ವಿಜ್ಞಾನಿ, ಆಲ್ಬರ್ಟ್ ಐನ್ಸ್ಟೈನ್ ಹೆಸರು ಕೇಳಿದ್ದೀಯಾ?”

ವಿಜ್ಞಾನಿ, ಆಲ್ಬರ್ಟ್ ಐನ್ಸ್ಟೈನ್

” ಹಾ ಮಾಮ, ಶಕ್ತಿಯನ್ನು ದ್ರವ್ಯವನ್ನಾಗಿಯೂ, ದ್ರವ್ಯ ವನ್ನು ಶಕ್ತಿಯನ್ನಾಗಿಯೂ ಪರಿವರ್ತಿಸಬಹುದು ಅಂತ ಅವರು ಹೇಳಿದ ಸಿದ್ಧಾಂತ ಅಲ್ವಾ ಮಾಮ, ಅದು ನಮ್ಮ ಫಿಸಿಕ್ಸ್ ಪಾಠದಲ್ಲಿತ್ತು. ಅದರದ್ದೊಂದು ಸಮೀಕರಣವೂ ಇತ್ತು “

” ಮ್.. ಅವರೇ, ಆ ಸಮೀಕರಣ E ಈಸ್ ಇಕ್ವಲ್ ಟು ಎಮ್ ಸಿ ಸ್ಕ್ವೇರ್. ಅಂತ.
ಅವರು ಶಾಲೆಯಲ್ಲಿ ಒಂದನೆಯ ತರಗತಿಯಲ್ಲಿ ಇದ್ದಾಗ ಟೀಚರ್ ಕೇಳಿದ ಪ್ರಶ್ನೆಗಳಿಗೆ ಉತ್ತರ ಹೇಳುತ್ತಲೇ ಇರಲಿಲ್ಲವಂತೆ. ಮಗು ಐನ್ಸ್ಟೈನ್, ತುಂಬಾ ನಿಧಾನವಾಗಿ ಯೋಚಿಸುತ್ತಿದ್ದ ಮಗು. ಆದರೆ ಅಷ್ಟೇ ನಿಖರವಾಗಿ, ಸೃಜನಶೀಲ ವಾಗಿತ್ತು ಅವರ ಚಿಂತನೆ. ಆದರೆ ಮೇಷ್ಟ್ರು, ಈ ಬಾಲಕ ಐನ್ಸ್ಟೈನ್ ತುಂಬಾ ದಡ್ಡ ಅಂತ ಕ್ಲಾಸ್ ನಿಂದ ಹೊರಗೆ ಹಾಕಿದರಂತೆ”

” ಓಹ್ ಮಾಮಾ, ಪಾಪ ಅಲ್ವಾ, ಹಾಗಿದ್ದರೆ ಮತ್ತೆ ಅಷ್ಟು ದೊಡ್ಡ ವಿಜ್ಞಾನಿ ಹೇಗಾದ್ರು?”

” ಅವರ ಚಿಕ್ಕಪ್ಪ ಪುಟ್ಟ ಐನ್ಸ್ಟೈನ್ ಗೆ ಮನೆಯಲ್ಲಿಯೇ ಪಾಠ ಮಾಡಿದರಂತೆ. ಐನ್ಸ್ಟೈನ್ ಗೆ ಚಿಕ್ಕಪ್ಪ ಮೊದಲು ಕಲಿಸಿದ್ದೇ ಬೀಜಗಣಿತವಂತೆ”

” ಮಾಮಾ, ಬೀಜಗಣಿತ ಕಷ್ಟ ಅಲ್ವಾ, ಕಬ್ಬಿಣದ ಕಡಲೆಯಾದರೂ ತಿನ್ಬಹುದು, ಈ ಬೀಜಗಣಿತ ಮಾತ್ರ ಬೇಡ ಅಂತ ಅನಿಸ್ತಿತ್ತು.. ಅದೂ ನಮ್ಮ ಗಣಿತ ಟೀಚರ್, ಸಣ್ಣ ತಪ್ಪಾದರೂ ಸೊನ್ನೆ ಮಾರ್ಕು ಕೊಡೋರು.
ಅಂದ್ರೆ ಐನ್ಸ್ಟೈನ್ ತುಂಬಾ ಬುದ್ಧಿವಂತ ಅಲ್ವಾ ಮಾಮಾ”

” ಹೌದು, ಆತ ತುಂಬಾ ಬುದ್ಧಿವಂತ, ಆದರೆ ಕಲಿಕೆಯಲ್ಲಿ, ಚಿಂತನೆಯಲ್ಲಿ ನಿಧಾನ. ನೀನೂ ತುಂಬಾ ಬುದ್ಧಿವಂತೆ. ಪ್ರೀತಿಯಿಂದ ಕಲಿಸಿದರೆ ಎಲ್ಲಾ ವಿಷಯಗಳೂ ಸುಲಭವಾಗಿ ಅರ್ಥವಾಗುತ್ತೆ.

ನೀನು ಸೂರ್ಯನ ಶಕ್ತಿಯ ಉತ್ಪತ್ತಿ ಬಗ್ಗೆ ಕೇಳಿದೆಯಲ್ವಾ, ಅದರ ಬಗ್ಗೆ ಹೇಳುವೆ. ಜತೆಗೇ ನಿನ್ನ ಮೇಷ್ಟ್ರು ಗೇಲಿ ಮಾಡಿ ನಕ್ಕರು ಅಂದ್ಯಲ್ಲಾ, ಅಂತಹಾ ಒಂದು ಕಥೆಯನ್ನು ಹೇಳುವೆ. ಅದಕ್ಕೆ ಮೊದಲು ನಿನಗೆ ನಾನೊಂದು ಪ್ರಶ್ನೆ ಕೇಳಲೇ ಪುಟ್ಟೂ? “

” ಕೇಳು ಮಾಮಾ, ನೀವಂದ್ರೆ ನಂಗೆ ಇಷ್ಟ. ನೀವು ಕಳೆದ ಸಾರಿ ಹೈದರಾಬಾದ್ ನಿಂದ ತಂದು ಕೊಟ್ಟ ಪ್ರಾಕು ಜೋಪಾನವಾಗಿ ಪೆಟ್ಟಿಗೆಯಲ್ಲಿ ಇಟ್ಟಿರುವೆ. ರಜೆಯ ನಂತರ ಶಾಲೆಯ ಮೊದಲ ದಿನ‌ ಹಾಕಲು”

” ಹ್ಹ ಹ್ಹಾ.. ಗುಡ್ ಗರ್ಲ್, ನನ್ ಸೊಸೆ!, ನನ್ನ ಪ್ರಶ್ನೆ ಏನಂದರೆ, ನೀನು ವಿಜ್ಞಾನ ಕಲೀತೀಯಲ್ವಾ, ಅದನ್ನು ಹೇಗೆ ಕಲಿತರೆ ಚಂದ? ಅಂತ “

” 😊😊 ಮಾಮಾ, ವಿಜ್ಞಾನ ಕಲಿಯುವುದು ಅಂದರೆ, ನಮ್ಮ ಸುತ್ತುಮುತ್ತಲೂ ನಡೆಯುವ ವಿಷಯಗಳ ಬಗ್ಗೆ ವಿಜ್ಞಾನಿಗಳು ಕಂಡುಹುಡುಕಿದ ವಿಷಯಗಳನ್ನು ಓದಿ ತಿಳಿಯುವುದು ಅಲ್ವಾ “

” ಸರಿಯಾಗಿ ಹೇಳಿದಿ ನೋಡು. ಓದಿ ತಿಳಿಯುವುದು ಒಂದು ವಿಧಾನ. ಆದರೆ ಎಲ್ಲವೂ ಓದಿ ತಿಳಿಯಲು ಅದರ ಬಗ್ಗೆ ಪುಸ್ತಕ ಬೇಕಲ್ಲವಾ. ಗೊಸ ವಿಷಯ ತಿಳಿಯಲು ಏನು ಮಾಡುವುದು?

ಪುಟ್ಟು, ನೀನು ಈಗ ನಿನ್ನ ಸ್ಟಡೀ ರೂಮ್ ನಲ್ಲಿ ಕುಳಿತಿರುವೆಯಾ? ನಿನ್ನ ಎದುರುಗಡೆ ಏನಿದೆ”

” ಹೌದು ಮಾಮ, ನನ್ನ ಎದುರುಗಡೆ ಗೋಡೆಯಿದೆ”

” ಗೋಡೆಯಾಚೆಗೆ ಏನು ಕಾಣಿಸ್ತಿದೆ?”

” ಗೋಡೆಯಾಚೆಗೆ ಏನೂ ಕಾಣಿಸ್ತಿಲ್ಲ ಮಾಮಾ. ಅದು ಪಾರದರ್ಶಕ ಅಲ್ವಲ್ಲಾ”

” ಹ್ಞು..ಪುಟ್ಟು. ಗೋಡೆಯಾಚೆಗೆ ಏನೂ ಕಾಣಿಸ್ತಿಲ್ಲ. ಹಾಗಾದರೆ ಗೋಡೆಯಾಚೆಗೆ ಏನೂ ಇಲ್ಲವೇ?. ಖಂಡಿತವಾಗಿ ಇದೆ. ಅದು ನಮ್ಮ ದರ್ಶನಕ್ಕೆ ಒದಗುತ್ತಿಲ್ಲ. ಸರಿ, ಈಗ ಗೋಡೆಯಾಚೆಗೆ ಕಾಣ ಬೇಕಾದರೆ ಏನು ಮಾಡೋಣ?”

” ಮಾಮಾ, ನಮ್ಮ ಮನೆಗೆ ಬಂದ ಒಬ್ಬ ಇಲೆಕ್ಟ್ರಿಶಿಯನ್, ವೈರ್ ದಾಟಿಸಲು ಒಂದು ತೂತು ಕೊರೆಯುವ ಮೆಷಿನ್ ತಂದಿದ್ದ ನೋಡು!.. ಚುರ್ರ್ ಅಂತ ಅದರ ಮೂತಿ ಒತ್ತಿ ಹಿಡಿದರೆ, ಹೆಗ್ಗಣ ಮಾಟೆ ಮಾಡಿದ ಹಾಗೆ ಈ ಕಡೆಯಿಂದ ಆಕಡೆಗೆ ತೂತು ಆಯಿತು!. ಹಾಗೆ ಒಂದು ತೂತು ಕೊರೆದರೆ? ಗೋಡೆಯಾಚೆಗೆ ನೋಡಬಹುದು ಅಲ್ವಾ!”

” ಪುಟ್ಟೂ, ಎಷ್ಟು ಒಳ್ಳೆಯ ಐಡಿಯಾ! ನೀನು ಜಾಣೆ ಬಿಡು. ನೀನು ಗೋಡೆಗೆ ತೂತು ಕೊರೆಯುವುದಕ್ಕೆ ವಿಜ್ಞಾನದಲ್ಲಿ ಎಕ್ಸ್ಪರಿಮೆಂಟ್ ( ಪ್ರಯೋಗ) ಅಂತೀವಿ. ತೂತು ಕೊರೆಯುವ ಯಂತ್ರ, ಗೋಡೆ, ನಿನ್ನ ಕಣ್ಣು ಇತ್ಯಾದಿಗಳು ಸಲಕರಣೆಗಳು ( ಅಪರೆಟಸ್). ತೂತಿನ ಮೂಲಕ ಗೋಡೆಯ ಆಕಡೆ ನೋಡಿದಾಗ ನಿನಗೆ ಏನೆಲ್ಲಾ ಕಾಣಿಸುತ್ತಾ, ಅವುಗಳು ನಿನ್ನ ಎಕ್ಸ್ಪರಿಮೆಂಟಲ್ ಅಬ್ಸರ್ವೇಷನ್ ಗಳು. ಗೋಡೆಯಾಚೆಗೆ ಕಂಡ ಎಲ್ಲಾ ವಸ್ತುಗಳನ್ನು, ವಿದ್ಯಮಾನಗಳನ್ನು, ನೀನು ಚಿಂತನೆಗೊಳಪಡಿಸಿ ( ಸೈಂಟಿಫಿಕ್ ಅನಾಲೈಸಿಸ್) ಪ್ರಬಂಧ ಬರೆದು ಪ್ರಕಟಿಸಿದರೆ ಅದು ವೈಜ್ಞಾನಿಕ ಪ್ರಬಂಧ( ಸೈಂಟಿಫಿಕ್‌ ಪೇಪರ್).”

“ಮಾಮಾ, ಹಾಗಿದ್ದರೆ ಗೋಡೆಯಾಚೆಗೆ ಏನಿದೆ ಅಂತ ನೋಡಲು ಎಕ್ಸ್ ಪರಿಮೆಂಟ್ ಅಗತ್ಯವಾ?, ಬೇರೆ ಯಾವುದೇ ವಿಧಾನ ಇಲ್ವಾ?”.

” ಹ್ಞಾ, ಇದೆ ಅನು, ಗೋಡೆಯಾಚೆಯಿಂದ, ದನ ಅಂಬಾ ಅಂತ ಕೂಗುವ ಸದ್ದು ಕೇಳಿಸಿತು ಅಂತಿಟ್ಟುಕೋ. ದನದ ಕರು ಉಂಬೇ ಎನ್ನುವ ಸದ್ದು, ಹಾಲು ಕರೆಯುವಾಗ ಪಾತ್ರೆಯೊಳಕ್ಕೆ ಹಾಲು ಬೀಳುವ ಚುರ್..ಚುರ್ರ್ ಸದ್ದು ಕೇಳಿದರೆ?.
ಆಗ ನೀನು ಏನು ನಿರ್ಧಾರಕ್ಕೆ ಬರುವೆ?”

“ಮಾಮಾ,
ಗೋಡೆಯಾಚೆಗೆ, .. ಯಾರೋ ದನದ ಹಾಲು ಕರೆಯುತ್ತಿದ್ದಾರೆ, ದನದ ಹಟ್ಟಿ ಇರಬಹುದು”

“ಸರಿಯಾಗಿ ಹೇಳಿದೆ. ಪ್ರಾಯೋಗಿಕವಾಗಿ ಸಿಗದ ವಿಷಯಗಳನ್ನು, ಇದುವರೆಗಿನ ಅನುಭವದ ಬೆಳಕಿನಲ್ಲಿ, ಊಹಿಸಿ, ಪ್ರತಿಪಾದಿಸುವುದನ್ನು ಥಿಯರೆಟಿಕಲ್ ಸಂಶೋಧನೆ ಅನ್ನುತ್ತೇವೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋದರೆ, ನಮ್ಮ ಕಾಣ್ಕೆಯನ್ನು ಗಣಿತದ ಮೂಲಕ, ಗಣಿತದ ಸಮೀಕರಣಗಳ ಮೂಲಕ ಒಂದು ಹಂದರಕ್ಕೆ ಹೊಂದಿಸಬಹುದು.”

“ಮಾಮಾ, ಹಾಗಿದ್ದರೆ ನಮ್ಮ ಅಜ್ಜಿ, ಲಡ್ಡುವಿನ ಬೀಜ ಮೊಳಕೆಯೊಡೆದು ಲಡ್ಡುವಿನ ಮರವಾಗಿ ಅದರ ಕೊಂಬೆ ಕೊಂಬೆಗಳಲ್ಲಿ ತುಂಬಾ ಲಡ್ಡುಗಳು ನೇತಾಡುವ ಕಲ್ಪನೆಯ ಕತೆ ಹೇಳುತ್ತಿದ್ದರು. ಅದು ಮತ್ತೆ ವಿಜ್ಞಾನದ ಥಿಯರೆಟಿಕಲ್ ಕಲ್ಪನೆ ಒಂದೇ?.”

” ಅಲ್ಲ ಪುಟ್ಟು. ಅದು ಬರೇ ಕಲ್ಪನೆ. ವಿಜ್ಞಾನದಲ್ಲಿ ಕಲ್ಪನೆ ಮತ್ತು ನಮ್ಮ ಅನುಭವ, ಅಬ್ಸರ್ವೇಷನ್, ವಾಸ್ತವ ತಾಳೆಯಾಗಬೇಕು. ಪುರಾವೆಯಿಲ್ಲದ ಕಲ್ಪನೆಗೆ ವಿಜ್ಞಾನದಲ್ಲಿ ಜಾಗವಿಲ್ಲ. ಆದರೆ ಕಲ್ಪನಾಶಕ್ತಿ ವೈಜ್ಞಾನಿಕ ಚಿಂತನೆಗೆ ಅತ್ಯಗತ್ಯ.
ಗೋಡೆಯಾಚೆಗೆ ಏನೂ ಕಾಣಿಸುತ್ತಿಲ್ಲ ಅಂದ ಮಾತ್ರಕ್ಕೆ ಗೋಡೆಯಾಚೆಗೆ ಏನೂ ಇಲ್ಲ ಎಂಬುದಾಗಿಯೂ ವಿಜ್ಞಾನ ಹೇಳಲಾರದು. ಗೋಡೆಯಾಚೆಗೆ ಏನಿದೆ, ಏನಿಲ್ಲ ಎಂದು ತನಗೆ ತಿಳಿದಿಲ್ಲ, ಅಂತ ಹೇಳುವುದೇ ವೈಜ್ಞಾನಿಕ ಮನೋಭಾವ. ತದನಂತರ, ಗೋಡೆಗೆ ತೂತು ಕೊರೆದು, ಗೋಡೆಗೆ ಏಣಿಯಿಟ್ಟು ಹತ್ತಿ ಅತ್ತಕಡೆ ನೋಡಿ, ಕಂಡದ್ದನ್ನು ಕಂಡ ಹಾಗೆ ವಸ್ತುನಿಷ್ಠವಾಗಿ ಅರ್ಥೈಸುವುದು ವೈಜ್ಞಾನಿಕ ಮನೋಭಾವ.”

“ಮಾಮ! ಸೂರ್ಯನ ಶಕ್ತಿಯ ಉತ್ಪತ್ತಿ?!, ಅದರ ಬಗ್ಗೆ ಹೇಳಿ, ಪ್ಲೀಸ್!”

” ಅನು!. ಖಂಡಿತವಾಗಿ ಹೇಳುವೆ. ಮೊದಲು ನಮ್ಮ ಭಾರತೀಯ ವಿಜ್ಞಾನಿಯ ಸಂಶೋಧನೆಯನ್ನು ಒಬ್ಬ ಪ್ರಕಾಂಡ ವಿಜ್ಞಾನಿ ಗೇಲಿ ಮಾಡಿದ ಕತೆ, ಅದು ನಡೆದು ಸುಮಾರು ೫೦ ವರ್ಷಗಳ ನಂತರ ಆ ಭಾರತೀಯ ವಿಜ್ಞಾನಿಗೆ ಅದೇ ಸಂಶೋಧನೆಗೆ ನಾಬೆಲ್ ಪಾರಿತೋಷಕ ಸಿಕ್ಕ ಕತೆಯನ್ನು ಹೇಳುವೆ. ಅಂದ ಹಾಗೆ ಆ ವಿಜ್ಞಾನಿಯ ಸಂಶೋಧನೆಯ ವಿಷಯವೇ ನಿನ್ನ ಪ್ರಶ್ನೆ. ಸೂರ್ಯನ ಕಾಂತಿಯ ರಹಸ್ಯ ಮತ್ತು ಸೂರ್ಯನ ಹುಟ್ಟು ಮತ್ತು ಸಾವು ಇವುಗಳ ಬಗೆ.”

( ಮುಂದಿನ ವಾರಕ್ಕೆ)