- ಚಾಚಾ ನೆಹರು ಮತ್ತು ನಮ್ಮ ಮಕ್ಕಳು - ನವೆಂಬರ್ 14, 2023
- ಮಾನವತಾವಾದಿಯ ಹೆಜ್ಜೆಗಳು……. - ಏಪ್ರಿಲ್ 14, 2021
- ಯುಗಾದಿ – ಎರಡು ಹಾದಿ… - ಏಪ್ರಿಲ್ 13, 2021
ಬದಲಾವಣೆ ಬಯಸುವ, ಪರ್ಯಾಯ ರಾಜಕೀಯ ಶಕ್ತಿಗಾಗಿ ಹಾತೊರೆಯುತ್ತಿರುವ ಕೆಲವು ಯುವಕರು ಆಸಕ್ತಿಯಿಂದ – ಆಶಾಭಾವನೆಯಿಂದ – ಕುತೂಹಲದಿಂದ ಕಣ್ಣರಳಿಸಿ ನೋಡುತ್ತಿರುವ ಒಬ್ಬ ವ್ಯಕ್ತಿ ಮತ್ತು ಒಂದು ಪಕ್ಷ.
ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯವಾಗಿರುವ ಹಲವರು ಉಪೇಂದ್ರ ಅವರನ್ನು ಬಹಳಷ್ಟು ಇಷ್ಟ ಪಡುತ್ತಿದ್ದಾರೆ ಮತ್ತು ಸ್ವಯಂ ಪ್ರೇರಿತರಾಗಿ ಅದರ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ರಾಜಕೀಯ ಚಿಂತಕರು, ಪ್ರಮುಖ ರಾಜಕೀಯ ಪಕ್ಷಗಳು, ಮುಖ್ಯವಾಹಿನಿಯ ಇತರ ತಜ್ಞರು ಇನ್ನೂ ಉಪೇಂದ್ರ ಅವರನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದು ಸಹ ಅಷ್ಟೇ ವಾಸ್ತವ.
ಇವತ್ತಿನ ಸನ್ನಿವೇಶದಲ್ಲಿ ಉಪೇಂದ್ರ ಅವರ ಪ್ರಾಮುಖ್ಯತೆ, ಅವರ ವಿಚಾರಗಳು, ಅದರ ಗಟ್ಟಿತನ, ವಾಸ್ತವಕ್ಕೆ ಎಷ್ಟು ಹತ್ತಿರವಿದ್ದಾರೆ ಎಂಬ ಬಗ್ಗೆ ಒಂದು ಪಕ್ಷಿ ನೋಟ.
ಎಲ್ಲರಿಗೂ ತಿಳಿದಿರುವಂತೆ ಉಪೇಂದ್ರ ಸಿನಿಮಾ ಸಾಹಿತಿ, ನಿರ್ದೇಶಕ ಮತ್ತು ನಟ. ತನ್ನ ವಿಚಿತ್ರ ವೇಷಭೂಷಣ, ಮ್ಯಾನರಿಸಂ, ಸಂಭಾಷಣೆ, ನಿರೂಪಣೆ ಮತ್ತು ವಿಭಿನ್ನ ವಿಷಯಗಳ ಆಯ್ಕೆಯ ಮೂಲಕ ಸಿನಿಮಾ ರಂಗದಲ್ಲಿ ಜನಪ್ರಿಯತೆ ಗಳಿಸಿದವರು. ಅಲ್ಲಿಯೂ ಸಹ ಸಮಾಜದ ಓರೆಕೋರೆಗಳನ್ನು ವ್ಯಂಗ್ಯವಾಗಿ ಚಿತ್ರಿಸಿ ಚಪ್ಪಾಳೆ ಗಿಟ್ಟಿಸಿಕೊಂಡವರು. ಸಿನಿಮಾ ಒಂದು ಮನರಂಜನಾ ಉದ್ಯಮವಾದ್ದರಿಂದ ಹೇಳುವುದನ್ನು ಹಸಿಹಸಿಯಾಗಿಯೇ ಹೇಳಿ ಜನರನ್ನು ಆಕರ್ಷಿಸಿದರು.
ಆದರೂ ಎಲ್ಲೋ ಒಂದು ಮೂಲೆಯಲ್ಲಿ ಸಮಾಜದ ಬಗೆಗಿನ ಕಾಳಜಿ ಮತ್ತು ರಾಜಕೀಯ ಬದಲಾವಣೆಯ ಬಗ್ಗೆ ಆಗಾಗ ಮಾತನಾಡುತ್ತಲೇ ಇದ್ದರು. ಇತ್ತೀಚಿನ ವರ್ಷಗಳಲ್ಲಿ ಒಂದು ಮೊದಲೇ ನೊಂದಾಯಿತ ಪಕ್ಷದ ಜೊತೆ ಸೇರಿ ರಾಜಕೀಯ ಪ್ರವೇಶಿಸಿ ನಂತರ ಕೆಲವು ಭಿನ್ನಾಭಿಪ್ರಾಯಗಳ ಕಾರಣದಿಂದ ಅಲ್ಲಿಂದ ಹೊರಬಂದು ” ಪ್ರಜಾಕೀಯ ” ಎಂಬ ಪಕ್ಷ ಸ್ಥಾಪಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕೆಲವು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ನಿರೀಕ್ಷೆಗಿಂತ ಕಡಿಮೆ ಮತಗಳನ್ನು ಪಡೆದರು. ಅದು ಸಾಂಕೇತಿಕ ಸ್ಪರ್ಧೆಯಾಗಿ ಸಹ ದಾಖಲಾಗಲಿಲ್ಲ.
ಇದು ಅವರ ರಾಜಕೀಯದ ಹಿನ್ನೆಲೆ. ಹೆಚ್ಚಾಗಿ ಸುದ್ದಿ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳ ಮುಖಾಂತರವೇ ತಮ್ಮ ಅಭಿಮಾನಿಗಳು ಮತ್ತು ಕಾರ್ಯಕರ್ತರ ಮೂಲಕ ಪ್ರಚಾರ ಮಾಡುವ ವಿಧಾನ ಅನುಸರಿಸುತ್ತಿದ್ದಾರೆ.
ಉಪೇಂದ್ರ ಅವರ ರಾಜಕೀಯ ಗುರಿ, ಅದಕ್ಕಾಗಿ ಅನುಸರಿಸುತ್ತಿರುವ ಮಾರ್ಗ, ಅವರ ನಿಲುವುಗಳು, ಅವರ ಪ್ರಾಮಾಣಿಕತೆ ಮತ್ತು ದಕ್ಷತೆ, ಸಮರ್ಪಣಾ ಮನೋಭಾವ, ಈ ವ್ಯವಸ್ಥೆಯ ಬಗ್ಗೆ ಅವರಿಗಿರುವ ಜ್ಞಾನ ಎಲ್ಲವೂ ಅವರ ಮಾತುಗಳಿಂದ ಗ್ರಹಿಸಿದಂತೆ…..
ಉಪೇಂದ್ರ ಅವರು ಎಂದಿನಂತೆ ಸಿನಿಮೀಯ ಶೈಲಿಯಲ್ಲಿ ಈ ಆಡಳಿತ ವ್ಯವಸ್ಥೆಯನ್ನು ಬದಲಾಯಿಸುವ ಆದರ್ಶ ಸಮಾಜದ ಕನಸು ಕಾಣುತ್ತಿದ್ದಾರೆ. ಯಾವುದೇ ಭ್ರಷ್ಟಾಚಾರಕ್ಕೆ ಆಸ್ಪದ ಇಲ್ಲದಂತೆ ಅತ್ಯಂತ ಪಾರದರ್ಶಕ ನೀತಿ ನಿಯಮಗಳನ್ನು ಅತ್ಯಂತ ಕಠಿಣವಾಗಿ ಜಾರಿಗೊಳಿಸುವ ಮಾತುಗಳನ್ನು ಆಡುತ್ತಿದ್ದಾರೆ. ಎಲ್ಲಾ ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ತಮ್ಮ ಕೆಲಸದ ದಕ್ಷತೆ ಮತ್ತು ಪ್ರಾಮಾಣಿಕತೆಯ ಉತ್ತರದಾಯಿತ್ವದ ಜವಾಬ್ದಾರಿ ನಿಗದಿಪಡಿಸುವ ಆಸಕ್ತಿ ಹೊಂದಿದ್ದಾರೆ. ಸ್ಥಳೀಯ ಸಮಸ್ಯೆಗಳನ್ನು ಅಲ್ಲಿನ ಜನರ ಬೇಡಿಕೆಗೆ ಆ ಕ್ಷಣದಲ್ಲೇ ಪರಿಹಾರ ಸೂಚಿಸುವ ಶಿಸ್ತು ಬದ್ಧ ಆಡಳಿತದ ಬಗ್ಗೆ ಆಸೆಪಟ್ಟಿದ್ದಾರೆ. ಜನ ಪ್ರತಿನಿಧಿಗಳ ಅರ್ಹತೆಯ ಬಗ್ಗೆ ವಿದ್ಯಾರ್ಹತೆಯೂ ಸೇರಿ ಕೆಲವು ಮಾನದಂಡಗಳು ನಿಗದಿಪಡಿಸುವ ವಿಧಾನಗಳನ್ನು ಮನವರಿಕೆ ಮಾಡಿಕೊಡುತ್ತಿದ್ದಾರೆ. ಚುನಾವಣಾ ಸುಧಾರಣೆಗಳ ಬಗ್ಗೆ ಕ್ರಾಂತಿಕಾರಕ ಬದಲಾವಣೆಗಳನ್ನು ನಿರೀಕ್ಷಿಸುತ್ತಿದ್ದಾರೆ. ರೈತರ ಬೆಳೆಯ ಬೆಲೆಯ ಬಗ್ಗೆ ಒಂದಷ್ಟು ಮಾತನಾಡುತ್ತಾರೆ.
ಒಟ್ಟಿನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಎಂಬುದು ಒಂದು ಭ್ರಷ್ಟ ವ್ಯವಸ್ಥೆ ಅದಕ್ಕೆ ಬದಲಾಗಿ ಪ್ರಜೆಗಳೇ ತಮ್ಮ ಬೇಡಿಕೆಗಳನ್ನು ಪೂರೈಸಿಕೊಳ್ಳುವ
” ಪ್ರಜಾಕೀಯ ” ವ್ಯವಸ್ಥೆ ಎಂಬ ರಂಗುರಂಗಿನ ವರ್ಣನೆಯನ್ನು ಜನರ ಮುಂದಿಡುತ್ತಿದ್ದಾರೆ. ಅಲ್ಲದೆ ಆಗಾಗ ತಮ್ಮ ವೃತ್ತಿ ಬದುಕಿನ ಬಿಡುವಿನ ಸಮಯದಲ್ಲಿ ಮಾಧ್ಯಮಗಳಲ್ಲಿ ಕುಳಿತು ವ್ಯವಸ್ಥೆಯ ಬಗ್ಗೆ ಸಾಕಷ್ಟು ಟೀಕೆಗಳನ್ನು ಮಾಡುತ್ತಾ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಒಬ್ಬ ಜನಪ್ರಿಯ ಸಿನಿಮಾ ನಟ ನಿರ್ದೇಶಕನ ರಾಜಕೀಯ ಕನಸುಗಳು ಇದಕ್ಕಿಂತ ಭಿನ್ನವಾಗಿರಲು ಸಾಧ್ಯವಿಲ್ಲ. ಏಕೆಂದರೆ ಸಿನಿಮಾ ಒಂದು ಕಾಲ್ಪನಿಕ ಜಗತ್ತಿನ ಕ್ರಿಯಾತ್ಮಕ ಕಲಾ ಲೋಕ, ಜೊತೆಗೆ ಮುಕ್ತ ಮಾರುಕಟ್ಟೆಯಲ್ಲಿ ಜನರನ್ನು ಮನರಂಜಿಸುತ್ತಾ, ಹಣವನ್ನೂ ಗಳಿಸುತ್ತಾ, ಅಪಾರ ಸ್ಪರ್ಧೆಯನ್ನು, ವಿರೋಧಗಳನ್ನು ಎದುರಿಸುತ್ತಾ, ಅಭಿಮಾನಿಗಳನ್ನು ಮೆಚ್ಚಿಸುತ್ತಾ, ಮುಖದ ಬಣ್ಣದ ಜೊತೆಗೆ ಮನಸ್ಸಿನ ಬಣ್ಣವನ್ನು ಕಾಪಾಡಿಕೊಳ್ಳುತ್ತಾ ಜೀವಿಸಬೇಕಾದ ಅನಿವಾರ್ಯತೆ ಇದೆ. ಇಲ್ಲದಿದ್ದರೆ ಮರೆಯಾಗಿ ಹೋಗಿ ಬಿಡುವ ಸಾಧ್ಯತೆ ಇದೆ.
ಉಪೇಂದ್ರ ಅವರದು ಎಷ್ಟರಮಟ್ಟಿಗೆ ಪ್ರಾಯೋಗಿಕ ಚಿಂತನೆಗಳು ಎಂಬುದೇ ನಮ್ಮನ್ನು ಕಾಡುವ ಪ್ರಶ್ನೆಗಳು….
ಉಪೇಂದ್ರ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದು ಬಂದವರು. ಒಂದಷ್ಟು ಶ್ರಮ, ಪ್ರತಿಭೆ, ಜನರ ಮನೋಭಾವವನ್ನು ಗ್ರಹಿಸಿದ ಕಾರಣದಿಂದ ಚಿಕ್ಕ ವಯಸ್ಸಿನಲ್ಲೇ ಚಿತ್ರ ರಂಗದಲ್ಲಿ ಬಹುಬೇಗ ಎತ್ತರದ ಸ್ಥಾನಕ್ಕೆ ಏರಿದವರು. ಆ ಜನಪ್ರಿಯತೆಯನ್ನು ಅತ್ಯಂತ ಬುದ್ಧಿವಂತಿಕೆಯಿಂದ ಉಪಯೋಗಿಸಿಕೊಂಡು, ವೈಯಕ್ತಿಕ ಜೀವನದ ಆರ್ಥಿಕ ವಿಷಯದಲ್ಲಿ ಮತ್ತು ಕೌಟುಂಬಿಕ ವಿಷಯದಲ್ಲಿ ಮತ್ತು ಒಟ್ಟು ಬದುಕಿನಲ್ಲಿ ತೃಪ್ತಿದಾಯಕ ಲಕ್ಸುರಿ ಜೋನ್ ನಲ್ಲಿ ( ಶ್ರೀಮಂತಿಕೆಯಲ್ಲಿ ) ಇರುವವರು ಎಂದು ಕಂಡುಬರುತ್ತದೆ.
ಭಾರತೀಯ ಸಮಾಜ ಮೇಲ್ನೋಟಕ್ಕೆ ಕಾಣುವುದಕ್ಕಿಂತ ಹೆಚ್ಚು ಸಂಕೀರ್ಣವಾಗಿದೆ. ಅದು ಆರಾಧಿಸುವ ಮೆಚ್ಚುವ ಗೌರವಿಸುವ ಆದರ್ಶಗಳಿಗಿಂತ ವಾಸ್ತವದಲ್ಲಿ ತೀರಾ ಭಿನ್ನವಾಗಿದೆ. ಜನರ ಮಾತು ಮತ್ತು ಕೃತಿಗಳಲ್ಲಿ ಅಜಗಜಾಂತರ ವ್ಯತ್ಯಾಸ ಕಂಡುಬರುತ್ತದೆ.
ಕೆಲವೇ ಉದಾಹರಣೆಗಳೆಂದರೆ,
ಮಹಿಳೆಯರನ್ನು ಭಾರತದ ಸಂಸ್ಕೃತಿಯಲ್ಲಿ ದೇವತೆ ಎನ್ನುವಷ್ಟು ಪೂಜನೀಯ ಭಾವನೆಯಲ್ಲಿ ನೋಡಲಾಗುತ್ತದೆ. ಆದರೆ ವಾಸ್ತವದಲ್ಲಿ ದಿನದ 24 ಗಂಟೆಗಳಲ್ಲಿ ಯಾವುದೇ ಸಮಯದಲ್ಲಿ ಒಂಟಿಯಾಗಿ ಓಡಾಡುವುದು ಅಪಾಯಕಾರಿ ಅಥವಾ ಸುರಕ್ಷಿತವಲ್ಲ ಎಂಬುದು ಹೆಣ್ಣು ಹೆತ್ತವರಿಗೆ ಚೆನ್ನಾಗಿ ತಿಳಿದಿದೆ. ಅಸಹಾಯಕ ಹೆಣ್ಣು ಮಕ್ಕಳ ಬಗ್ಗೆ ಖಾಸಗಿಯಾಗಿ ಹೇಗೆ ಮಾತನಾಡಿಕೊಳ್ಳುತ್ತಾರೆ ಮತ್ತು ಹೇಗೆ ಉಪಯೋಗಿಸಿಕೊಳ್ಳುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ಬಹಿರಂಗ ಸತ್ಯ.
ಇನ್ನೊಬ್ಬರ ಆಸ್ತಿ ಹಣ ಅಸಹ್ಯಕ್ಕೆ ಸಮಾನ ಎಂದು ವೇದಗಳು ಉಪನಿಷತ್ತುಗಳು ಹೇಳುತ್ತವೆ, ಸಂವಿಧಾನ ಅದು ಅಪರಾಧ ಎಂದು ಹೇಳುತ್ತದೆ. ಆದರೆ ಭ್ರಷ್ಟಾಚಾರದ ವಿಷಯದಲ್ಲಿ ಭಾರತ ತುಂಬಾ ಮುಂದಿದೆ. ಡೆತ್ ಸರ್ಟಿಫಿಕೇಟ್ ಪಡೆಯಲು ಸಹ ಲಂಚ ಕೊಡಬೇಕಾದ ಪರಿಸ್ಥಿತಿ ಇದೆ.
” ವಸು ದೈವ ಕುಟುಂಬಕಂ “
” ಹಿಂದು ನಾವೆಲ್ಲರೂ ಒಂದು ” ಎಂದು ಹೇಳುತ್ತಲೇ ನೂರಾರು ಮೇಲು ಕೀಳುಗಳ ಜಾತಿ ವ್ಯವಸ್ಥೆಯಲ್ಲಿ ನಾವು ಬಂಧಿಯಾಗಿದ್ದೇವೆ.
ಹೇಳಲು ಇನ್ನೂ ಸಾಕಷ್ಟು ಇದೆ.
ಇದನ್ನು ಉಪೇಂದ್ರ ಅವರು ಸಂಪೂರ್ಣವಾಗಿ ಗ್ರಹಿಸಿಲ್ಲ.
ನಮ್ಮ ಕನಸಿನ ಯೋಜನೆಗಳನ್ನು ರೂಪಿಸುವುದು ಸುಲಭ. ಅದರ ಅನುಷ್ಠಾನವೇ ಬಹುಮುಖ್ಯ.
( ಉಪೇಂದ್ರ ಅವರ ಕನಸುಗಳ ಕಾರ್ಯ ಸಾಧ್ಯತೆಗಳ ಬಗ್ಗೆ ಮತ್ತಷ್ಟು ವಿವರಣೆ ಮುಂದುವರೆಯಲಿದೆ…… )
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್