- ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ - ಸೆಪ್ಟೆಂಬರ್ 12, 2024
- ಹಾಲಾಡಿಯಲ್ಲಿ ಹಾರುವ ಓತಿ - ಜುಲೈ 20, 2024
- ನಾಡೋಜ ಕಮಲಾಮೇಡಂಗೆ ಅಂತಿಮ ನಮನಗಳು - ಜೂನ್ 22, 2024
ಹಿಡಿಸಿದಷ್ಟೆ ಸಾಕು ಹಿತವಾದ ಉಪ್ಪಿಟ್ಟು ಭೋಜನ ಸುಖತರ ಈ ಹಾಡು| ಎನ್ನದು ಈ ಕನ್ನಡ ನಾಡು|
ಮಂಗಳೂರಿನ ಮತ್ಸ್ಯಾಹಾರ|ಕೊಡಗಿನ ಕಟು ಕಾಫಿನೀರಾ|
ಮೈಸೂರಿನ ಇಡ್ಡಲಿ, ದ್ವಾಶಿ, ಬಳ್ಳಾರಿಯ ಅನ್ನದ ರಾಶಿ|
ಕಲುಬುರಗಿಯಲಿ ಕಂದೂರಿ ಬೆಳಗಾವಿಯಲಿ ಬುರಬುರಿ|
ಧಾರವಾಡದ ಅವಲಕ್ಕಿ, ಕಾರವಾರದ ತಾಳೆಚಕ್ಕಿ|
ವಿಜಾಪುರದ ಬಣಬಣರೊಟ್ಟಿ| ನೆನಪಾದರ ಉರೀತದ ಹೊಟ್ಟೀ| ಆಂಬೊಡೆ ಉಪ್ಪಿಟ್ಟಿನ ದೇಶ| ನಾನಾವಿಧ ತಿಂಡಿಯ ಕೋಶ ಹೆರೆತುಪ್ಪ ಕಡುಬಿನ ಬೀಡು| ಎನ್ನದು ಕನ್ನಡ ನಾಡು.
ಇದು ಶ್ರೀಮತಿ ಜೋತ್ಸ್ನಾ ಕಾಮತ್ ಬರೆದಿರುವ ಕನ್ನಡ ನಾಡಿನ ಉಪಹಾರಗಳ ವೈವಿಧ್ಯತೆಯನ್ನು ಹೇಳುವ ವಿನೋದದ ಹಾಡು. ಇಲ್ಲಿ “ಉಪ್ಪಿಟ್ಟಿನ ದೇಶ” ಎಂದಿರುವುದು ಉಪ್ಪಿಟ್ಟು ಭಾರತ ಉಪಖಂಡದ ಪ್ರಮುಖ ತಿಂಡಿ ಎನ್ನುವ ಅರ್ಥದಲ್ಲೇ.. ಕೇರಳ, ಆಂಧ್ರ,ತಮಿಳುನಾಡು , ಕರ್ನಾಟಕ, ಮಹಾರಾಷ್ಟ್ರ,ಒರಿಸಾ ಮತ್ತು ಶ್ರೀಲಂಕದ ತಮಿಳಿಗರ ಬೆಳಗಿನ ತಿಂಡಿಯ ಪಟ್ಟಿಯಲ್ಲಿ ಹಾಗೂ ಎಲ್ಲಾ ದಕ್ಷಿಣ ಭಾರತದ ಉಪಾಹಾರ ಮಂದಿರಗಳ, ದರ್ಶಿನಿಗಳ ಪಟ್ಟಿಯಲ್ಲಿ “ಉಪ್ಪಿಟ್ಟು” ಸರ್ವೇ ಸಾಮಾನ್ಯವಾಗಿರುತ್ತದೆ. ಹುರಿದ ರವೆ, ಅಕ್ಕಿ ತರಿ, ಗೋಧಿ(ಧಲಿಯಾ) ನುಚ್ಚಿನಿಂದ ಮಾಡುವ ತಿಂಡಿ. ಸೂಜಿ, ಸಿಮೊಲಿನ ಎಂಬ ಹೆಸರುಗಳೂ ರವೆಗೆ ಇವೆ. ಸಾಮಾನ್ಯವಾಗಿ ರವೆ ಎಂದು ಕರೆದರೂ ಬನ್ಸಿ ರವೆ, ಮೀಡಿಯಮ್ ರವೆ, ಬಾಂಬೆರವೆ ಅಥವಾ ಉಪ್ಪಿಟ್ ರವೆ, ಫೇಣಿರವೆ, ಅಥವಾ ಚಿರೋಟಿ ರವೆಗಳು ಇದರ ಬಗೆಗಳು. ಸಿರಿ ಧಾನ್ಯಗಳಿಂದಲೂ ಉಪ್ಪಿಟ್ಟು ಮಾಡುವುದಿದೆ. ಮರಾಠಿಯಲ್ಲಿ ಉಪೀಟ್, ಕೊಂಕಣಿಯಲ್ಲಿ ರುಲ್ನವ್, ಹಿಂದಿ,ಒಡಿಯ, ಬೆಂಗಾಲಿ,ಗುಜರಾತಿ ಭಾಷೆಗಳಲ್ಲಿ ಉಪ್ಮಾ ಮುಂತಾದ ಹೆಸರುಗಳಿಂದ ಕರೆಸಿಕೊಳ್ಳುತ್ತಿದೆ. ಉಪ್ಮಾ ಈ ಪದದ ಮೂಲವನ್ನು ತಮಿಳಿನ ಹಿನ್ನೆಲೆಯಲ್ಲಿ ಹೇಳುವುದಾದರೆ ‘ಮಾವು’ ಎಂದರೆ ‘ಹಿಟ್ಟು’ ಅದರ ಜೊತೆಗೆ ಉಪ್ಪು ಸೇರಿ ಉಪ್ಮಾವು,ಉಪ್ಮಾ ಆಯಿತು ಎನ್ನುತ್ತಾರೆ. ತೆಲುಗಿನಲ್ಲಿ ‘ಉಪ್ಪಿಂಡಿ’ ಎನ್ನುತ್ತಾರೆ.
’ಉಪ್ಪಿಂಡಿ’ ಎಂದರೆ ತೆಲುಗಿನಲ್ಲಿ ಮೂಲತಃ ವಿಧವೆಯರ ಊಟ ಎಂದರ್ಥವಾಗುತ್ತದೆ. ಅವರು ಆ ಕಾಲದಲ್ಲಿ ಮಸಾಲೆ, ಪದಾರ್ಥಗಳನ್ನು ಸೇವಿಸುವಂತಿರಲಿಲ್ಲ. ಹೊಟ್ಟೆ ತುಂಬಾ ಊಟವನ್ನೂ ಮಾಡುವಂತಿರಲಿಲ್ಲ. ಅವರು ಅಕ್ಕಿಯನ್ನು ನೀರಿನಲ್ಲಿ ತೊಳೆದು ಅದನ್ನು ಒಣಗಿಸಿ ಅದರ ಪುಡಿಯನ್ನು, ಅಂದರೆ ರವೆಯನ್ನು ಉಪ್ಪು ಸೇರಿಸಿ ಕೇವಲ ನೀರಿನಲ್ಲಿ ಬೇಯಿಸಿ ತಿನ್ನುತ್ತಿದ್ದರು. ಹಿಂದಿನ ಕಾಲದಲ್ಲಿ ವಿಧವೆಯರನ್ನು ಸಮಾಜದ ಮುಖ್ಯ ವಾಹಿನಿಗೆ ಬರಲು ಬಿಡುತ್ತಿರಲಿಲ್ಲ. ಅವರಿಗೆ ಹೇರುತ್ತಿದ್ದ ನಿರ್ಬಂಧಗಳಲ್ಲಿ ಆಹಾರದ್ದೂ ಒಂದು. ಪ್ರಾಪಂಚಿಕ ಆಸಕ್ತಿಗೆ ಅವರು ಒಳಗಾಗದಂತೆ ತಡೆಯುವ ಪ್ರಯತ್ನ ಇದಾಗಿತ್ತು ಎಂಬುದಾಗಿ ಸಮಾಜಶಾಸ್ತ್ರದ ಹಿನ್ನೆಲೆಯಲ್ಲಿ ಇದನ್ನು ವಿಶ್ಲೇಷಣೆ ಮಾಡಬಹುದು. ಕನ್ನಡದಲ್ಲೂ ‘ಉಪ್ಪು’ ಮತ್ತು ‘ಹಿಟ್ಟು’ ಸೇರಿ ಉಪ್ಪಿಟ್ಟಾಗಿದೆ. ಉಪ್ಪಿಟ್ಟನ್ನು ‘ಖಾರಾಭಾತ್’ ಎಂದೂ ಕರ್ನಾಟಕದಲ್ಲಿ ಕರೆಯುತ್ತಾರೆ. ಸಿಹಿಯಾಗಿ ಮಾಡಿದರೆ ‘ಕೇಸರಿಭಾತ್’ ಅದೇ ತುಮಕೂರಿನ ‘ಶಿರಾ’. ಸಿಹಿ, ಖಾರ ಎರಡೂ ಸೇರಿದರೆ ಚೌ ಚೌ ಭಾತ್ ಆಗುತ್ತದೆ ಅಲ್ವೆ!
ಯಾರಾದರೂ ಒಕ್ಕೊರಲಿನಿಂದ “ಬೇಡ!” ಎನ್ನುವ ಒಂದು ತಿಂಡಿಯಿದ್ದರೆ ಅದು ಉಪ್ಪಿಟ್ಟೇ! ಯಾರೇ ಆಗಲಿ ರುಚಿಕಟ್ಟಾದ ಉಪ್ಪಿಟ್ಟು ಮಾಡಿ ಎಲ್ಲರನ್ನೂ ಒಮ್ಮೆಗೆ ಒಪ್ಪಿಸಿಬಿಟ್ಟರೆ ಅವರಿಗೆ ಮಿಕ್ಕೆಲ್ಲಾ ಅಡುಗೆ ಮಾಡಲು ಬಂದಂತೆ ಸರಿ ! ಅಕ್ಕಿ ಉಪ್ಪಿಟ್ಟು,ಪುದಿನಾ ಉಪ್ಪಿಟ್ಟು, ಬಟಾಣಿ ಉಪ್ಪಿಟ್ಟು, ಕ್ಯಾಪ್ಸಿಕಂ ಉಪ್ಪಿಟ್ಟು, ರಾಗಿ ಉಪ್ಪಿಟ್ಟು,ಅವರೆಕಾಳು ಉಪ್ಪಿಟ್ಟು,ನೆನೆಸಿದ ಕಡ್ಲೆಕಾಳು ಉಪ್ಪಿಟ್ಟು, ಜೋಳದ ಉಪ್ಪಿಟ್ಟು,ಬ್ರೆಡ್ ಉಪ್ಪಿಟ್ಟು, ಪುರಿ ಉಪ್ಪಿಟ್ಟು, ಇಡ್ಲಿ ಉಪ್ಪಿಟ್ಟು, ಮೊಳಕೆ ಕಾಳಿನ ಉಪ್ಪಿಟ್ಟು,ಶ್ಯಾವಿಗೆ ಉಪ್ಪಿಟ್ಟು, ಸ್ವೀಟ್ ಕಾರ್ನ್ ಉಪ್ಪಿಟ್ಟು, ಬಾಣಂತಿಯರಿಗೆ ವಿಶೇಷವಾಗಿ ಕೊಡುವ ಸಬ್ಬಸ್ಸಿಗೆಸೊಪ್ಪಿನ ಉಪ್ಪಿಟ್ಟು, ತಕರಾರಿಲ್ಲದ ತರಕಾರಿಉಪ್ಪಿಟ್ಟು, ಅನ್ಲಕ್ಕಿಯಲ್ಲದ ಅವಲಕ್ಕಿ ಉಪ್ಪಿಟ್ಟು ಇತ್ಯಾದಿಗಳು ಉಪ್ಪಿಟ್ಟಿನ ವಿಧಗಳು. ತಾಜಾ ತರಕಾರಿಗಳಾದ ಕ್ಯಾರೆಟ್, ಬೀನ್ಸ್, ಬಟಾಣಿಗಳ ಕಲರ್ ಉಪ್ಪಿಟ್ಟನ್ನು ಕಲರ್ ಫುಲ್ ಆಗಿ ಕಾಣುವಂತೆ ಮಾಡುತ್ತದೆ. ಅತಿಥಿಗಳ, ಮನೆಯವರ, ಮಕ್ಕಳ ನಾಲಗೆ ರುಚಿಯನ್ನು ಹಿಗ್ಗಿಸುವ, ಕುಗ್ಗಿಸುವ ಎರಡೂ ಆಯ್ಕೆ ಉಪ್ಪಿಟ್ಟಲ್ಲೇ ಇದೆ ಎಂದು ನನ್ನನಿಸಿಕೆ.
ದಕ್ಷಿಣ ಭಾರತೀಯ ಪ್ರಮುಖ ಉಪಹಾರ ಉಪ್ಪಿಟ್ಟಿನ ಇತಿಹಾಸಕ್ಕೆ ಬಂದರೆ ಹಲವು ವರ್ಷಗಳ ಹಿಂದೆ ತಮಿಳಿನ ನಾಟಕ ‘ತನಿಕುಡಿತ್ತನಮ್’ ನಲ್ಲಿ ಪ್ರಮುಖ ಪಾತ್ರಧಾರಿ ಉಪ್ಪಿಟ್ಟಿನ ಉಲ್ಲೇಖ ಮಾಡಿದ್ದಿದೆ. ಈ ಉಪ್ಪಿಟ್ಟಿನ ಪಾಲಿಗೆ ಸುವರ್ಣ ವರ್ಷವೆಂದರೆ 2011. .2011 ಜೂನ್ 17ರಂದು ಲಾಸ್ ಏಂಜಲೀಸ್ನಲ್ಲಿ ನಡೆದ ಶೆಫ್ ಮಾಸ್ಟರ್ ಸ್ಪರ್ಧೆಯಲ್ಲಿ ಫ್ಲಾಯಿಡ್ ಕಾರ್ಡೋಸ್ ಎಂಬ ಮುಂಬೈ ಮೂಲದ ವ್ಯಕ್ತಿ ಉಪ್ಪಿಟ್ಟಿನೊಂದಿಗೆ ಅಣಬೆಯನ್ನು ಸೇರಿಸಿ ಮಾಡಿದ ಖಾದ್ಯದಿಂದಲೆ ಪ್ರಶಸ್ತಿ ಪಡೆದದ್ದು, ಒಂದು ಲಕ್ಷ ಡಾಲರ್ ಹಣವನ್ನು ಗೆದ್ದದ್ದು. ಆ ದಿನಗಳಲ್ಲಿ “ಫಸ್ಟ್ ಪ್ರೈಸ್ ತಗೊಂಡಿರೋ ತಿಂಡಿ ಉಪ್ಪಿಟ್ ಧಾರಾಳವಾಗಿ ತಗೊಳಿ ಎಂದು ಹೇಳುತ್ತಿದ್ದವರಲ್ಲಿ ನಾನೂ ಒಬ್ಬಳು”. 2011 ಆಗಸ್ಟ್ 19. ‘ಕೌನ್ ಬನೇಗಾ ಕರೋಡ್ ಪತಿ’ ಕಾರ್ಯಕ್ರಮದಲ್ಲಿ ಕರ್ನಾಟಕ ಮೂಲದ ಗುಜರಾತಿ ನಿವಾಸಿ ರಾಜಲಕ್ಷ್ಮಿಯವರಿಗೆ ಅಮಿತಾಭಚ್ಚನ್ ಅವರು ಕೇಳಿದ ಮೂರನೆ ಪ್ರಶ್ನೆ ಉಪ್ಪಿಟ್ಟಿನ ಕುರಿತಾಗಿಯೇ ಇತ್ತು. ಎಂಥ ಪ್ರಯೋಗಕ್ಕೂ ಈ ಉಪ್ಪಿಟ್ಟು ಒಗ್ಗಿಕೊಳ್ಳುತ್ತದೆ.
ದಿಢೀರ್ ಮಾಡಬಹುದಾದ ಅತ್ಯಂತ ಪೌಷ್ಟಿಕಾಂಶವುಳ್ಳ ಜೊತೆಗೆ ಬೇಗ ಜೀರ್ಣವಾಗುವ ಬೆಳಗಿನ ಉಪಾಹಾರ ಉಪ್ಪಿಟ್ಟು ಲಘು ಅಹಾರ. ಇದರಲ್ಲಿ ಪ್ರೋಟೀನ್ 4 g, ಕಾರ್ಬೋಹೈಡ್ರೇಟ್ಸ್ 30.7g, ಫೈಬರ್ 0.3g, ಫ್ಯಾಟ್ 5.8 g ಇರುತ್ತದೆ. ಬಹುಶಃ ಈ ಕಾರಣಕ್ಕೆ ಗೋಧಿ ಉಪ್ಪಿಟ್ಟನ್ನು ಅಂಗನವಾಡಿಗಳಲ್ಲಿ ಮಕ್ಕಳಿಗೆ ಕೊಡುತ್ತಾರೆ. ವಿಶ್ವ ಸಂಸ್ಥೆಯ ಮಾನದಂಡಗಳಲ್ಲಿ ಮಕ್ಕಳಿಗೆ ಪೌಷ್ಠಿಕಾಂಶ ಭರಿತ ಆಹಾರ ಒದಗಿಸುವುದೂ ಆಗಿದೆ. ಅಂಗನವಾಡಿಗಳಲ್ಲಿ, ಕೆಲವೊಮ್ಮೆ ಶಾಲೆಗಳಲ್ಲಿ ಕೊಡುವ ಉಪ್ಪಿಟ್ಟಿನ ಕುರಿತೇ…
ಅಮ್ಮ ನೋಡೇ ಕಣ್ಣಿಟ್ಟು
ನಮ್ಮಯ ಶಾಲೆಯ ಉಪ್ಪಿಟ್ಟು
ನಮ್ಗೆ ಮಾತ್ರ ಇಷ್ಟೇ ಇಷ್ಟು
ಮಿಸ್ಗಳಿಗ್ಮಾತ್ರ ಅಷ್ಟಷ್ಟು
ಮೆಣಸು ಹಿಪ್ಪಲಿ ಶುಂಠಿ ಜೀರಿಗೆಗಳೆಲ್ಲ ಸರಿ|ಅನುವೊಪ್ಪುವುದೊಂದೊಂದು ರೋಗಕೊಂದೊಂದು||ನಿನಗಮಂತೆಯೆ ನೂರು ನೀತಿ ಸೂತ್ರಗಳಿರಲು |ಅನುವನರಿವುದೆ ಜಾಣು- ಮಂಕುತಿಮ್ಮ ||
ಖ್ಯಾತ ಶಿಕ್ಷಣ ತಜ್ಞ ಹೆಚ್. ನರಸಿಂಹಯ್ಯನವರಿಗೆ ಉಪ್ಪಿಟ್ಟೆಂದರೆ ಬಹಳ ಇಷ್ಟವಿತ್ತಂತೆ. ಅವರು ಉನ್ನತ ಶಿಕ್ಷಣಕ್ಕಾಗಿ ಅಮೆರಿಕಾಗೆ ಹೋದಾಗ ಅಲ್ಲಿ ಮೂರು ಹೊತ್ತು ಸ್ವಯಂಪಾಕದ ಉಪ್ಪಿಟ್ಟು ತಿಂದು ದಿನ ದೂಡುತ್ತಿದ್ದರಂತೆ.
ಇಷ್ಟೆಲ್ಲಾ ಮಹನೀಯರು ಮೆಚ್ಚಿಕೊಂಡ ಉಪ್ಪಿಟ್ಟಿನ ಬಗ್ಗೆ ಅಸಹಿಷ್ಣುತೆ ಏಕೋ ? ಗೊತ್ತಿಲ್ಲ? ಈ ಉಪಹಾರವನ್ನು “ರಾಷ್ಟ್ರೀಯ ತಿಂಡಿ”ಯನ್ನಾಗಿ ಮಾಡಬೇಕು ಎಂಬ ಕೂಗು ಕೂಡ ಕೇಳಿ ಬಂದಿತ್ತು. ಅತ್ಯಂತ ನಯವಾಗಿ ಮೂರೇ ಬೆರಳಲ್ಲಿ ತೆರೆದ ಬಾಯಿಗೆ ಹದವಾದ ಬಿಸಿಯ ಉಪ್ಪಿಟ್ಟನ್ನು ಮೆಲ್ಲಗೆ ಇಳಿಸಿದರೆ ಅದು ಅಲ್ಲೇ ಕರಗಿ ಮತ್ತೊಮ್ಮೆ ಬೇಕೆನಿಸಿ ಬಾಯಿ ತೆರೆಯುವಂತಾಗಬೇಕು. ಅಂದರೆ ಮಂಕಾಗಿದ್ದ ಟೇಸ್ಟ್ ಬಡ್ಗಳು ಆ್ಯಕ್ಟಿವೇಟ್ ಆಗಬೇಕು. ಇದು ಉಪ್ಪಿಟ್ಟಿನ ನಿಜವಾದ ಹದ. ರವೆಯನ್ನು ಹುರಿಯುವಾಗ ತುಪ್ಪದಲ್ಲ್ಲಿ ಪರಿಮಳ ಬರುವವರೆಗೆ ಹುರಿದರೆ, ಒಗ್ಗರಣೆಗೆ ಇತರ ಸಾಮಾಗ್ರಿಗಳ ಜೊತೆಗೆ ಜೀರಿಗೆ , ಎರಡು ಕಾಳು ಮೆಂತ್ಯ ಸೇರಿಸಿದರೆ ಪರಿಮಳ ಚೆನ್ನಾಗಿ ಬರುತ್ತದೆ. ವಾಂಗಿಭಾತ್ ಪುಡಿ,ಬಿಸಿಬೇಳೆಭಾತ್ ಪುಡಿ, ಇತರೆ ಮಸಾಲಾ ಪುಡಿಗಳನ್ನೂ ಬಳಸಿ ಟ್ರಯಲ್ ನೋಡಬಹುದು. ಆದರೆ ವಿಶಿಷ್ಟ ಉಪಹಾರ ಮಾಡಹೋಗಿ ಪಾಪದವರನ್ನು ಹಾರ(ಬಲಿ) ಕೊಡುವುದು ಬೇಡವೇನೋ!!
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್