ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವಿಕಾಸ ಹೊಸಮನಿ
ಇತ್ತೀಚಿನ ಬರಹಗಳು: ವಿಕಾಸ ಹೊಸಮನಿ (ಎಲ್ಲವನ್ನು ಓದಿ)

ಕನ್ನಡ ಕಥನ ಪರಂಪರೆಗೆ ಸಮೃದ್ಧ ಇತಿಹಾಸವಿದೆ. ನವೋದಯ, ಪ್ರಗತಿಶೀಲ, ನವ್ಯ ಮತ್ತು ದಲಿತ-ಬಂಡಾಯ ಕಾಲಘಟ್ಟಗಳಲ್ಲಿ ಕನ್ನಡ ಸಣ್ಣಕಥೆ ಬೆಳೆದು ಬಂದ ರೀತಿ ಅದ್ಭುತ. ಗಾತ್ರ ಮತ್ತು ಸತ್ವದ ದೃಷ್ಟಿಯಿಂದಲೂ ಕನ್ನಡ ಸಣ್ಣಕಥೆಗಳು ಗಮನಾರ್ಹ ಸಾಧನೆ ಮಾಡಿವೆ. ಇಂದು ಕನ್ನಡದ ಸಣ್ಣಕಥೆಗಳು ವಿಶ್ವದ ಯಾವುದೇ ಭಾಷೆಯ ಅತ್ಯುತ್ತಮ ಸಣ್ಣಕಥೆಗಳೊಂದಿಗೆ ಸರಿಮಿಗಿಲಾಗಿ ನಿಲ್ಲುವಂತಹ ಸತ್ವ ಹೊಂದಿರುವುದು ಕನ್ನಡಿಗರು ಹೆಮ್ಮೆ ಪಡಬೇಕಾದ ಸಂಗತಿ.

“ಮಾಸ್ತಿಯಿಂದ ದೇವನೂರ ತನಕ” ಎಂಬ ಹೇಳಿಕೆಯನ್ನು ಕನ್ನಡ ವಿಮರ್ಶಾ ವಲಯದಲ್ಲಿ ಮತ್ತೆ ಮತ್ತೆ ಬಳಸಲಾಗಿದೆ. ಕನ್ನಡದ ಕಥನ ಪರಂಪರೆಯ ಬೆಳವಣಿಗೆಯನ್ನು ಸೂಚಿಸುವ ದೃಷ್ಟಿಯಿಂದ ಇದಕ್ಕೆ ಖಂಡಿತ ಮಹತ್ವವಿದೆ ಆದರೆ ಇಂತಹ ಹೇಳಿಕೆಗಳು ನಮ್ಮ ವಿಮರ್ಶೆಯ ಮಿತಿಯನ್ನೂ ತಿಳಿಸುತ್ತವೆಂಬುದು ಗಮನಾರ್ಹ.

ನಮ್ಮ ಕಥನ ಸಾಹಿತ್ಯದ ವಿಮರ್ಶೆ ದೇವನೂರ ಮಹದೇವರವರೆಗೆ ಬಂದು ನಿಂತು ಬಿಡುತ್ತದೆ. ದೇವನೂರ ಮಹದೇವರ ನಂತರವೂ ಕನ್ನಡದಲ್ಲಿ ಶ್ರೀನಿವಾಸ ವೈದ್ಯ, ನಾ.ಡಿಸೋಜಾ, ವೈದೇಹಿ, ಮಾವಿನಕೆರೆ ರಂಗನಾಥನ್, ಮಲ್ಲಿಕಾರ್ಜುನ ಹಿರೇಮಠ, ರಾಮಚಂದ್ರ ದೇವ, ರಾಘವೇಂದ್ರ ಪಾಟೀಲ, ಕುಂ.ವೀರಭದ್ರಪ್ಪ, ಎಸ್.ದಿವಾಕರ್, ಬಿ.ಎಲ್.ವೇಣು, ಗೋಪಾಲಕೃಷ್ಣ ಪೈ, ಜಯಂತ ಕಾಯ್ಕಿಣಿ, ನಾಗತಿಹಳ್ಳಿ ಚಂದ್ರಶೇಖರ್, ವಿವೇಕ ಶಾನಭಾಗ, ಬೋಳುವಾರ ಮಹ್ಮದ್ ಕುಂಞ, ಕೆ.ಸತ್ಯನಾರಾಯಣ, ಪ್ರಹ್ಲಾದ ಅಗಸನಕಟ್ಟೆ, ಫಕೀರ್ ಮಹ್ಮದ್ ಕಟ್ಪಾಡಿ, ಮೊಗಳ್ಳಿ ಗಣೇಶ್, ಕೇಶವರೆಡ್ಡಿ ಹಂದ್ರಾಳ, ಮಿತ್ರಾ ವೆಂಕಟರಾಜ್, ಎಚ್. ನಾಗವೇಣಿ, ಅಮರೇಶ ನುಗಡೋಣಿ, ರವಿ ಬೆಳಗೆರೆ, ಶ್ರೀಧರ ಬಳಗಾರ, ಅಬ್ದುಲ್ ರಶೀದ್, ಬಿ.ಟಿ.ಜಾಹ್ನವಿ, ನೇಮಿಚಂದ್ರ, ಅಶೋಕ ಹೆಗಡೆ, ವಸುಧೇಂದ್ರ ಮತ್ತು ಗುರುಪ್ರಸಾದ್ ಕಾಗಿನೆಲೆ ಸೇರಿದಂತೆ ಅನೇಕ ಒಳ್ಳೆಯ ಕಥೆಗಾರರು ವೈವಿಧ್ಯಮಯ ಮತ್ತು ಗಮನಾರ್ಹ ಕಥೆಗಳನ್ನು ಬರೆದಿದ್ದಾರೆ.

ನಮ್ಮ ಸಾಹಿತ್ಯ ವಿಮರ್ಶಕರಲ್ಲಿ ಬಹುತೇಕ ಪ್ರಾಧ್ಯಾಪಕ ವರ್ಗವೇ ತುಂಬಿಕೊಂಡಿದೆ. ಅದರಲ್ಲೂ ಇಂಗ್ಲಿಷ್ ಪ್ರಾಧ್ಯಾಪಕರಾದ ವಿಮರ್ಶಕರ ದೃಷ್ಟಿಕೋನ ತೀರ ವಿಚಿತ್ರವಾಗಿರುತ್ತದೆ. ಜಾಗತಿಕ ಸಾಹಿತ್ಯವನ್ನು ಓದಿಕೊಂಡು ವಿಶಾಲ ಭಿತ್ತಿಯಲ್ಲಿ ಚರ್ಚಿಸುವುದು ಒಳ್ಳೆಯದೇ ಆದರೆ ಇಂತಹ ವಿಮರ್ಶಕರು ಅನೇಕ ಸಂದರ್ಭಗಳಲ್ಲಿ ಬರೀ ಪಾಶ್ಚಾತ್ಯ ಮಾನದಂಡದಿಂದ ಕನ್ನಡದ ಕೃತಿಗಳನ್ನು ಅಳೆಯಲು ಹೋದಾಗ ಲಾಭಕ್ಕಿಂತ ನಷ್ಟವೇ ಜಾಸ್ತಿಯಾಗಿದೆ.

ಕೆಲವು ಇಂಗ್ಲಿಷ್ ಲೇಖಕರ ವಿಷಯದಲ್ಲಂತೂ ಮೆಚ್ಚುಗೆ ಅನೇಕ ವೇಳೆ ಆರಾಧನೆಯಾಗಿ ಬದಲಾಗುವುದನ್ನು ಕಾಣಬಹುದು. ಲ್ಯಾಟಿನ್ ಅಮೆರಿಕಾ ಅಥವಾ ಯುರೋಪಿನ ಲೇಖಕನೊಬ್ಬ ಆತನ ದೇಶಕಾಲದ ಹಿನ್ನೆಲೆಯಲ್ಲಿ ಸಮಕಾಲೀನ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಗೆ ಸ್ಪಂದಿಸುವುದಕ್ಕೂ ಕನ್ನಡದ ಲೇಖಕನೊಬ್ಬ ಭಾರತೀಯತೆಯ ಹಿನ್ನಲೆಯಲ್ಲಿ ಸಮಕಾಲೀನ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಗೆ ಸ್ಪಂದಿಸುವುದಕ್ಕೂ ಅಪಾರ ವ್ಯತ್ಯಾಸವಿದೆ. ಆದರೆ ನಮ್ಮ ವಿಮರ್ಶಕರದು “ಶಂಖದಿಂದ ಬಂದದ್ದೆಲ್ಲ ತೀರ್ಥ” ಎಂಬ ಮನಸ್ಥಿತಿ.

ಪಾಶ್ಚಾತ್ಯ ಭಾಷೆಯ ದ್ವಿತೀಯ ದರ್ಜೆಯ ಲೇಖಕರು ಸಹ ನಮ್ಮ ವಿಮರ್ಶಕರ ಕೈಯಲ್ಲಿ ಮಹಾನ್ ಲೇಖಕರಾಗಿ ಬದಲಾಗುತ್ತಾರೆ. ನಮ್ಮ ಲೇಖಕರನ್ನು ಪಾಶ್ಚಾತ್ಯ ಲೇಖಕರೊಂದಿಗೆ ಹೋಲಿಸಿ ಹೊಗಳುವುದು, ತೆಗಳುವುದು ಮಾಡುತ್ತಾರೆ. ಇಂತಹ ಸಾಹಿತ್ಯಿಕ ಮೌಢ್ಯದಿಂದ ನಮ್ಮ ಸಾಹಿತ್ಯಕ್ಕೆ ನಷ್ಟ ಕಟ್ಟಿಟ್ಟ ಬುತ್ತಿ. ಇದರರ್ಥ ಪಾಶ್ಚಾತ್ಯ ಸಾಹಿತ್ಯ ಅಥವಾ ಸಾಹಿತಿಗಳನ್ನು ನಿರಾಕರಿಸುವುದಲ್ಲ ಬದಲಾಗಿ ಪಾಶ್ಚಾತ್ಯ ಸಾಹಿತ್ಯದ ಮೇಲೆ ಅತಿಯಾದ ಅವಲಂಬನೆ ತಪ್ಪಬೇಕೆಂಬುದು ಮಾತ್ರ. ಇನ್ನಾದರೂ ನಮ್ಮ ವಿಮರ್ಶಕರ ಮನಸ್ಥಿತಿ ಬದಲಾಗಬೇಕಿದೆ.

ಪ್ರಸ್ತುತ ಲೇಖನದಲ್ಲಿ ನವ್ಯೋತ್ತರ ಕಾಲಘಟ್ಟದಲ್ಲಿ ಪ್ರಕಟವಾದ, ನನಗೆ ತುಂಬ ಇಷ್ಟವಾದ ರಾಘವೇಂದ್ರ ಪಾಟೀಲರ “ಕಥಿಯ ಹುಚ್ಚಿನ ಕರಿಟೋಪಿಗಿಯ ರಾಯ”* ಮತ್ತು ಜಯಂತ ಕಾಯ್ಕಿಣಿಯವರ “ಸೇವಂತಿ ಹೂವಿನ ಟ್ರಕ್ಕು”** ಕಥೆಗಳ ಕುರಿತು ಚರ್ಚಿಸಿದ್ದೇನೆ.

–0-0-0–

ಕಥಿಯ ಹುಚ್ಚಿನ ಕರಿಟೋಪಿಗಿಯ ರಾಯ

ರಾಘವೇಂದ್ರ ಪಾಟೀಲ
ಚಿತ್ರ ಕೃಪೆ : http://raghavendrapatil.in/

ಗೋಕಾಂವಿಯ ಬಸ್ಟ್ಯಾಂಡಿನಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ನಿರೂಪಕನಿಗೆ ಕರಿಟೋಪಿಗಿರಾಯ ಅಲಿಯಾಸ್ ಕುಲಕರ್ಣೇರ ಶಾಮರಾಯ ಅಟಕಾಯಿಸಿಕೊಳ್ಳುವುದರೊಂದಿಗೆ ಕಥೆ ಶುರುವಾಗುತ್ತದೆ. ಪರಸ್ಪರ ಉಭಯ ಕುಶಲೋಪರಿಯಾದ ನಂತರ ತನ್ನ ಕಥೆ ಹೇಳಲಾರಂಭಿಸುವ ಕರಿಟೋಪಿಗಿರಾಯನಿಂದ ನಿರೂಪಕ ತಪ್ಪಿಸಿಕೊಳ್ಳಲು ಹವಣಿಸಿದರೂ ಸಾಧ್ಯವಾಗುವುದಿಲ್ಲ. ಅನಿವಾರ್ಯವಾಗಿ ಕರಿಟೋಪಿಗಿರಾಯನ ಕಥೆಗೆ ಶ್ರೋತೃವಾಗಬೇಕಾಗುತ್ತದೆ.

ಮೇಲ್ನೋಟಕ್ಕೆ ಹನ್ನೆರಡಾಣೆ ಸಭ್ಯ ಗೃಹಸ್ಥನಂತೆ ಕಾಣುವ ಕರಿಟೋಪಿಗಿರಾಯ ಕಾಣುವಷ್ಟು ಸರಳ ವ್ಯಕ್ತಿಯಲ್ಲ. ಜಮೀನ್ದಾರಿ ಮನೆತನದ ಈತನಿಗೆ ನಮ್ಮ ಸರ್ಕಾರವೇ ತಂದ ಟೇನನ್ಸಿ ಕಾಯ್ದೆಯಿಂದ ಭೂಮಿ ಕಳೆದುಕೊಂಡದ್ದಕ್ಕಾಗಿ ಅಪಾರ ಸಿಟ್ಟಿದೆ. ಟೇನನ್ಸಿ ಕಾಯ್ದೆಯಿಂದಾಗಿ ಬಡರೈತರು ತನ್ನ ಜಮೀನು ಕಸಿದುಕೊಳ್ಳುತ್ತಿದ್ದಾರೆಂದು ಹೇಳುವ ಕರಿಟೋಪಿಗಿರಾಯ ನಿರೂಪಕನಿಗೆ ರೈತರಿಂದ ತನ್ನ ಜಮೀನನ್ನು ಉಳಿಸಿಕೊಳ್ಳಲು ತಾನು ಪಟ್ಟ ಶ್ರಮದ ಬಗ್ಗೆ  ವಿವರಿಸುತ್ತಾನೆ. ಕರಿಟೋಪಿಗಿರಾಯ ತುಂಬ ನಿರ್ಭಿಡೆಯಿಂದ ತಾನು ತಲಾಠಿಯಿಂದ ಹಿಡಿದು ಮಾಮಲೇದಾರರ ತನಕ ಹೇಗೆ ಬಿಗಿ ಮಾಡಿ ಕೂತಿದ್ದೇನೆ ಎಂದು ನಿರೂಪಕನಿಗೆ ಹೇಳಿಕೊಳ್ಳುವುದು ಸ್ವಾರಸ್ಯಕರವಾಗಿದೆ.

“..ನಾನೂ ಏನ ಹಂಗ ಬಿಟ್ಟಿಲ್ಲ ಬಿಡ್ರಿ.. ಒಂದ ಇಪ್ಪತ್ತ ಮೂವತ್ತ ಮಂದಿನ್ನ ಚಕಡ್ಯಾಗ ಕರಕೊಂಡ ಹೋಗಿ ಧಮಕೀ ಗಿಮಕೀ ಹಾಕಿ… ಅಂವಗ ಬೇಕಾದವರ ಕಡಿಂದ ರಾವಸಾಹೇಬರ ವರ್ಮಾ ಕಟಿಗೊಂಡು ಬಾಳೇ ಮಾಡಾಣ ಆದೀತೂ ಮಳ್ಳ… ಅಂತ ಕೈಯಾಗ ನಾಕ ದುಡ್ಡು ಕೊಟ್ಟು ರಾಜೀನಾಮೆ ಪತ್ರಾ ಬರಿಸಿಕೊಂಡು ಬಂದಿನ್ನಿ. ರೈತ ಎಂಟ್ರೀ ಸೈತ ಹೋಗೇತಿ.. ಆದರೂ ಮಗಾ ಮತ್ತ ಟ್ರಿಬ್ಯೂನಲ್ಗ ಹಾಕ್ಯಾನ…”

(ಪುಟ ೨೩೫)

ಪ್ರಚಂಡ ಬುದ್ಧಿಯ ಕರಿಟೋಪಿಗಿರಾಯ ಮತ್ತೊಮ್ಮೆ ನಿರೂಪಕನನ್ನು ತೀರ್ಪು ಬರುವ ದಿನ ಕೋರ್ಟಿಗೇ ಎಳೆದೊಯ್ಯುತ್ತಾನೆ. ಅಲ್ಲಿ ವಿರೋಧೀ ವಕೀಲನನ್ನು ಬಿಗಿ ಮಾಡಿಕೊಂಡಿದ್ದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ. ಕೋರ್ಟಿನಲ್ಲಿ ತೀರ್ಪು ತನ್ನ ಪರ ಬಂದಾಗ ಖುಷಿಯಿಂದ ತನ್ನ ತಲೀ ಮ್ಯಾಲಿನ ಕರಿಟೋಪಿಗಿಯನ್ನು ತೂರಿ ‘ಸತ್ಯಮೇವ ಜಯತೇ’ ಅಂತ ಘೋಷಣೆ ಕೂಗುತ್ತಾನೆ. ಬಡವನಿಂದ ಜಮೀನು ಕಸಿದುಕೊಂಡು ‘ಸತ್ಯಮೇವ ಜಯತೇ’ ಎಂದು ಕೂಗುವ ಕರಿಟೋಪಿಗಿರಾಯ ನಮ್ಮ ದೇಶದ ಭ್ರಷ್ಟ ವ್ಯವಸ್ಥೆಯ ಪ್ರತಿನಿಧಿಯಂತೆ ಕಾಣುತ್ತಾನೆ.

ಒಂದು ದಿನ ಇದ್ದಕ್ಕಿದ್ದಂತೆ ನಿರೂಪಕನ ಊರಿನಲ್ಲಿ ಪ್ರತ್ಯಕ್ಷವಾಗುವ ಕರಿಟೋಪಿಗಿರಾಯ ನಿರೂಪಕನನ್ನು ತುಂಬ ಒತ್ತಾಯ ಮಾಡಿ ತನ್ನ ಊರಿಗೆ ಕರೆದೊಯ್ಯುತ್ತಾನೆ. ಇಲ್ಲಿಂದ ಕರಿಟೋಪಿಗಿರಾಯ ವಾಮನನಿಂದ ತ್ರಿವಿಕ್ರಮನಾಗಿ ಬೆಳೆಯುತ್ತಾ ಹೋಗುತ್ತಾನೆ. ಕೇವಲ ಕರಿಟೋಪಿಗಿರಾಯನಾಗಿದ್ದ ಆತ ಈಗ ತುಂಡು ಪಾಳೇಗಾರನಂತೆ ವರ್ತಿಸತೊಡಗುತ್ತಾನೆ.

ಆತನ ದರ್ಪ, ಕ್ರೌರ್ಯ ಮತ್ತು ಸ್ವಪ್ರಶಂಸೆಯ ಚಾಳಿ ಸ್ಪಷ್ಟವಾಗಿ ಕಾಣತೊಡಗುತ್ತವೆ. ತನ್ನ ಶೋಷಣೆ ಮತ್ತು ದಬ್ಬಾಳಿಕೆಯ ಕುರಿತು ಅದೊಂದು ದೊಡ್ಡಸ್ತಿಕೆಯೆಂಬಂತೆ ಹೇಳಿಕೊಳ್ಳುತ್ತಾನೆ. ಹೊಲದಲ್ಲಿ ಚೆನ್ನಾಗಿ ಬೆಳೆದು ನಿಂತ ಬೆಳೆಯ ಬಗ್ಗೆ ಬರೀ ಕುತೂಹಲಕ್ಕೆ ಇಷ್ಟೆಲ್ಲ ಸಾಗುವಳಿ ಹೇಗೆ ಮಾಡುತ್ತಿರೆಂದು ಕೇಳಿದ ನಿರೂಪಕನಿಗೆ ಸಿಗುವ ಉತ್ತರ ಆತನನ್ನು ಗಾಬರಿಯಾಗುವಂತೆ ಮಾಡುತ್ತದೆ.

“ನಾ ಯಾಕ ಬೇಕು?… ನನತನಕಾ ಬರಬೇಕಂದರ ಜೀವಾ ಕಳಕೋಲಿಕ್ಕೆಂತ ಬರಬೇಕು. ಮೈಗಳ್ಳತನ ಮಾಡೂ ಮಗಾ ಇರಬೇಕೋ ಬ್ಯಾಡೋ ಅಂತ ಕಡೀ ಮಾತು ನಾನು ಹೇಳತನು”

“ನೋಡರೀ ಕೃಷ್ಣ ಪರಮಾತ್ಮನ ಹೇಳ್ಯಾನ… ಉದ್ಯೋಗಂ ಪುರುಷ ಲಕ್ಷಣಂ ಅಂತ. ಅದರಿಂದನ ಮುಕ್ತಿ ಅಂತ. ಮತ್ತ ಅಂದ ಮ್ಯಾಲ ಇವರು ಹೆಂತಾ ಪಾಷಂಡಿಗೋಳು ಅಂತ ನೀವ ಹೇಳ್ರೆಲಾ… ಎಚ್ಚರಕೀ ಕೊಟ್ಟ ನೋಡೂದು. ಬರೋಬ್ಬರಿ ಆದಾ ಛಲೋನ ಆತು. ಇಲ್ಲಾತಂದರ – ನಿನ್ನ ಮಾತ ಮೀರ್ಯಾನ ನೀನ ನೋಡಿಕೋ – ಅಂತ ದೇವರ ಹಂತೇಕ ಕಳಿಸಿಬಿಡೂದು… ಹಾಂ… ಏನಂತೀರಿ?”

“ಅಲ್ಲರಿ ಕೃಷ್ಣ ಏನ ಹೇಳಿದಾ? (ಯಾವಾಗ?) ಪರೋಪಕಾರಾರ್ಥಮಿದಂ ಶರೀರದ… ಅಂದಾ. ನಾವರ ಎಷ್ಟ ಕಾಲ ಬದಕತೀವು? ಇರುವಷ್ಟು ದಿವಸ ಪರೋಪಕಾರ ಮಾಡೂದು. ಸಾವ ಅಂತೂ ಬೆನ್ನಿಗೆ ಹತಿಗೊಂಡ ಬಂದಿರತೈತಿ… ದೇವರ ಮಾತು ಮೀರಿ ನಡಿಬ್ಯಾಡ್ರೋ ಮಕ್ಕಳ್ರ್ಯಾ… ಅಂತ ತಿಳಿಸಿ ಹೇಳಿ ಪರೋಪಕಾರ ಕಾರ್ಯಾ ನಡಸೋದು… ವಿವೇಕಾನಂದ ಹಂತವ್ರೆಲ್ಲಾ ಮಾಡಿದ್ದು ಇದ ಹೌದಲ್ಲೋ ಹೇಳ್ರಲಾ. ಇನ್ನೇನು ಅವರು ದೊಡ್ಡ ಪ್ರಮಾಣದಾಗ ಮಾಡಿದರು. ಅವರು ಸನ್ಯಾಸಿಗೋಳು ನಾವು ಸಂಸಾರಿಗೋಳೇನ್ರೆಪಾ… ಎಲ್ಲಾರೂ ಸನ್ಯಾಸಿಗೋಳ ಆಗಲಿಕ್ಕೆ ಆಗತದ ಏನ ಹೇಳ್ರಿ. ಜಗತ್ತೂ ನಡೀಬೇಕ ನೋಡ್ರೀ… ಹಿರೇರು ಮಾರ್ಗಾ ಹಾಕಿಕೊಟ್ಟಾರ. ನಾವು ಅದನ್ನ ಅನುಸರಿಸಿಕೊಂಡು ಹೋದರ ಆತು.”

(ಪುಟ ೨೪೧)

ನಿರೂಪಕ ಬೆಚ್ಚಿ ಬೀಳುವಂತೆ ಮಾತನಾಡುವ ಕರಿಟೋಪಿಗಿರಾಯ ತನ್ನನ್ನು ತಾನು ಸ್ವಾಮಿ ವಿವೇಕಾನಂದರ ಜೊತೆ ಹೋಲಿಸಿಕೊಳ್ಳುವುದಷ್ಟೇ ಅಲ್ಲದೆ ತನ್ನ ದಬ್ಬಾಳಿಕೆ, ಶೋಷಣೆಗೆ ಪರೋಪಕಾರವೆಂದು ಹೇಳಿಕೊಳ್ಳುವುದು ಮೋಜೆನಿಸುತ್ತದೆ. ಊರ ಹೊರಗೆ ಕಾಣುವ ಚಿತ್ತಾರದ ಕಂಬದ ಅಮೂಲ್ಯತೆಯ ಬಗ್ಗೆ ಚಿಂತಿಸುವ ನಿರೂಪಕನಿಗೆ ಅದರ ನವೀನ ಉಪಯೋಗ ತಿಳಿದು ವಿಷಾದವಾಗುತ್ತದೆ. ಚಿತ್ತಾರದ ಕಂಬಕ್ಕೀಗ ಅಮಾವಾಸ್ಯೆಗೊಮ್ಮೆ ಪೂಜೆಗೊಳ್ಳುವ, ತಪ್ಪು ಮಾಡಿದವರನ್ನು ಕಂಬಕ್ಕೆ ಕಟ್ಟಿ ಕೋರಡಾದಿಂದ ಹೊಡಿಸುವ ವಧಾಸ್ಥಾನ ಲಭಿಸಿದೆ.

ಊರಿನ ಬಡ ಮುದುಕಿಯೊಬ್ಬಳು ತನ್ನ ಮೊಮ್ಮಗ ಉಪವಾಸವಿರುವುದನ್ನು ನೋಡಲಾಗದೆ ಕರಿಟೋಪಿಗಿರಾಯನ ಹೊಲದಿಂದ ಎರಡು ಜೋಳದ ತೆನೆ ಕಿತ್ತಿದ್ದಕ್ಕೆ ಸಿಟ್ಟಾಗುವ ಕರಿಟೋಪಿಗಿರಾಯ ಆ ಪಾಪದ ಮುದುಕಿ ಎಷ್ಟು ಅಂಗಲಾಚಿ ಬೇಡಿಕೊಂಡರೂ ಕ್ಷಮಿಸುವುದಿಲ್ಲ.  ಬ್ರಿಟಿಷರ ಆಡಳಿತವನ್ನು ಹೊಗಳುತ್ತಾ ನಮ್ಮದೇ ಪ್ರಜಾಪ್ರಭುತ್ವ ಸರಕಾರವನ್ನು ಟೀಕಿಸುವ ಕರಿಟೋಪಿಗಿರಾಯನಿಗೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಗ್ಗೆ ಅಪಾರ ಅಸಹನೆಯಿದೆ.

“ಶಿಸ್ತು ಅಂದರ ಶಿಸ್ತು… ಕಾಯ್ದೇ ಮುರ್ಯೋದು ತಪ್ಪು… ನೋಡ್ರೀ ಆ ಕಂಪನಿ ಸರಕಾರದವರು, ಇಲ್ಲಿ ಸ್ವರಾಜ್ಯ ಗಿರಾಜ್ಯ ಅಂತ ಚಳವಳೀ ಮಾಡತನು ಅದನ ಮಾಡತನು – ಇದನ ಮಾಡತನು – ಅಂತ ದಿಗರ ಮಾಡಿ ಯಾವನು ಮದಲ್ನೇ ಸರತೇ ಕಾಯ್ದೇ ಮುರದ ನೋಡ್ರೀ… ಅವನ್ನ ಹಿಡಿದು ಗಲ್ಲಿಗೆ ಏರಿಸಿದ್ದರ ಮುಂದ ಮಂದೆಲ್ಲಾ ನಾಯಿ ಆಗತಿತ್ತು… ಹಂಗ ಮಾಡಲಿಲ್ಲಂತ ಹಿಂತಾ ಪಾಪಿಷ್ಟ ಮಂದಿಗೆ ರಾಜ್ಯಾ ಒಪ್ಪಿಸಿ ಹೋದರು. ತಾವೂ ಹಾಳಾದರು ನಮ್ಮಂಥಾವರನೂ ಹಾಳು ಮಾಡಿದರು…”

(ಪುಟ ೨೪೪)

ಊರಿಗೆ ಶಾಲೆ ಬರದಂತೆ ತಡೆದ, ಕೇವಲ ನಾಲ್ಕು ಗೋವಿನ ಜೋಳದ ತೆನೆ ಮುರಿದ ನಿಷ್ಪಾಪಿ ಮುದುಕಿಗೆ ಶಿಕ್ಷೆ ಕೊಡುವ ಮತ್ತು ಬ್ರಿಟಿಷರ ಆಡಳಿತವೇ ಚೆನ್ನಾಗಿತ್ತೆಂದು ಹೊಗಳುತ್ತಾ, ನಮಗೆ ಸ್ವಾತಂತ್ರ್ಯ ಸಿಕ್ಕಿದ್ದೇ ತಪ್ಪೆಂದು ವಾದಿಸುವ ಕರಿಟೋಪಿಗಿರಾಯ ಕೊನೆಗೂ ತನ್ನ ಮತ್ತು ತನ್ನ ಮನೆತನದ ಕಥೆ ಬರೆಯಬೇಕೆಂಬ ಆಸೆಯನ್ನು ನಿರೂಪಕನಿಗೆ ತಿಳಿಸುತ್ತಾನೆ. ಇದು ನಿರೂಪಕನನ್ನು ಸಂದಿಗ್ಧ ಸ್ಥಿತಿಗೆ ನೂಕುತ್ತದೆ.

ಕರಿಟೋಪಿಗಿರಾಯ ತನ್ನ ಜೀತದಾಳು ಚೆನ್ನನಿಗೆ ನಿರೂಪಕನನ್ನು ದೊಡ್ಡ ಮನುಷ್ಯ ಎಂದು ಪರಿಚಯಿಸುತ್ತ ತನ್ನ ಮನೆತನದ ಕಥೆ ಬರೆಯಲು ಬಂದಿದ್ದಾರೆಂದು ತಿಳಿಸುವಲ್ಲಿಗೆ ನಿರೂಪಕನಿಗೆ ಕರಿಟೋಪಿಗಿರಾಯನ ಬೇಡಿಕೆ ಬರುಬರುತ್ತ ಆಗ್ರಹವಾಗಿ ನಂತರ ಆದೇಶವಾಗಿ ಬದಲಾದಂತೆ ಕಾಣತೊಡಗುತ್ತದೆ.

ಮುಗ್ದನಾದ ಆಳು ಚೆನ್ನಪ್ಪಜ್ಜ ಹಿಂದೆ ಕರಿಟೋಪಿಗಿರಾಯನಿಗೆ ಎದುರು ನಿಂತ ಕುಬೇರನೆಂಬ ಹುಡುಗನನ್ನು ಧಣಿಯಾದ ಕರಿಟೋಪಿಗಿರಾಯನ ಅಣತಿಯಂತೆ ಅವನ ಕಡೆಯ ಜನರೆಲ್ಲ ಸೇರಿ ಕೊಂದದ್ದನ್ನು ತುಂಬ ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ. ಚನ್ನಪ್ಪಜ್ಜ ತಾನೂ ಸಹ ಆ ಕೊಲೆಯಲ್ಲಿ ಪಾಲ್ಗೊಂಡದ್ದರಿಂದ ಅಂಗಡಿ ಕುಬೇರನ ಕೊಲೆಯ ಕುರಿತು ಬರೆಯುವಾಗ ತನ್ನ ಹೆಸರನ್ನೂ ಸಹ ಸೇರಿಸಬೇಕೆಂದು ಬೇಡಿಕೊಳ್ಳುತ್ತಾನೆ.

“ಎಪ್ಪಾ… ನಮ್ಮ ಧಣ್ಯಾರ ಮನಿತನದ್ದು ಅಗದೀ ಬರೀಬೇಕ ನೋಡ್ರಿ…”

“ಎಪ್ಪಾ… ಅಂಗಡೀ ಕುಬೇರನ್ನ ಖೂನೀ ಮಾಡಿಸಿದ್ದೂ ಅದೂ ಎಲ್ಲಾ ಹೇಳೀರಿ ಇಲ್ಲೋ… ಹೂವಿನ ಜೋಡೀ ನಾರ ಸೇರಿಕೊಂಡಂಗ ನಂದೂ ಅದರಾಗ ಹೆಸರ ಬರತೈತಿ… ಅದನ್ನೂ ಹೇಳರಿ ಎಪ್ಪಾ…”

(ಪುಟ ೨೪೭)

ನಿರೂಪಕನಿಗೆ ಕಥೆ ಬರೆಯಲೇಬೇಕೆಂದು ಆಗ್ರಹಿಸುತ್ತಿದ್ದ ಕರಿಟೋಪಿಗಿರಾಯ ಕಥೆಯ ಕೊನೆಯಲ್ಲಿ ಊರಿಗೆ ಹೋದ ಕೂಡಲೇ ಕಥೆ ಬರೆಯಲು ಆರಂಭಿಸಬೇಕೆಂದು ಆದೇಶಿಸುವಂತೆ ಹೇಳುತ್ತಾನೆ. ತನ್ನ ಮನೆಯಲ್ಲಿ ನಿರೂಪಕನಿಗೆ ರಾಜೋಪಚಾರ ನೀಡುವ ಕರಿಟೋಪಿಗಿರಾಯ ಶಯನಸೇವೆ ಮಾಡಲು ಒಕ್ಕಲಗಿತ್ತಿಯನ್ನು ಸಹ ಒದಗಿಸುತ್ತಾನೆ. ಇದರಿಂದ ನಿರೂಪಕ ಹೇಗೋ ಪಾರಾದರೂ ಕರಿಟೋಪಿಗಿರಾಯನ ಕಥೆ ಬರೆಯುವುದರಿಂದ ಪಾರಾಗಲಾಗದೆ ಚಡಪಡಿಸುವುದರೊಂದಿಗೆ ಕಥೆ ಅಂತ್ಯವಾಗುತ್ತದೆ. ಬೆಚ್ಚಿ ಬೀಳುವಂತ ಕನಸಿನ ಮೂಲಕ ನಿರೂಪಕನ ಮನಸ್ಸಿನ ತಳಮಳವನ್ನು ಚಿತ್ರಿಸಿರುವುದು ಪರಿಣಾಮಕಾರಿಯಾಗಿದೆ.

ಮೊದಮೊದಲು ಸಭ್ಯ ಗೃಹಸ್ಥನಂತೆ ಕಾಣುವ ಕರಿಟೋಪಿಗಿರಾಯ ಬರುಬರುತ್ತ ತನ್ನ ವ್ಯಕ್ತಿತ್ವದ ಹಲವು ಮಗ್ಗಲುಗಳನ್ನು ತೋರಿಸುವ ರೀತಿ ಅದ್ಭುತವಾಗಿ ಮೂಡಿಬಂದಿದೆ. ತನ್ನ ಉದ್ದೇಶ ಸಾಧನೆಗಾಗಿ ಯಾವ ಮಟ್ಟಕ್ಕೂ ಹೋಗಲು ಹಿಂಜರಿಯದ ಕರಿಟೋಪಿಗಿರಾಯ ಊರಿಗೆ ಹೋದ ಮೇಲಂತೂ ಸಂಪೂರ್ಣ ಭಿನ್ನ ವ್ಯಕ್ತಿಯಾಗಿ ಬದಲಾಗುತ್ತಾನೆ. ತಾನು ಮಾಡುವ ಪ್ರತಿಯೊಂದು ಕೆಟ್ಟ ಕೆಲಸಕ್ಕೂ, ತನ್ನೆಲ್ಲಾ ಶೋಷಣೆ ಮತ್ತು ದಬ್ಬಾಳಿಕೆಗೂ ನಮ್ಮ ಆಧುನಿಕ ರಾಜಕಾರಣಿಯಂತೆ ಸಮರ್ಪಕ ಕಾರಣ ನೀಡುತ್ತಾ ತನ್ನನ್ನು ತಾನು ಸಮರ್ಥಿಸಿಕೊಳ್ಳುವುದು ಬಹಳ ಚೆನ್ನಾಗಿ ನಿರೂಪಿತವಾಗಿದೆ. ಕಥೆಯಲ್ಲಿ ಬರುವ ಚಿತ್ತಾರದ ಕಂಬ, ಚನ್ನಜ್ಜನ ಖೂನಿಯ ಕಥೆ, ಒಕ್ಕಲಗಿತ್ತಿಯ ಶಯನಸೇವೆ ಮತ್ತು ಕೋರ್ಟಿನಲ್ಲಿ ಟೊಪ್ಪಿಗೆ ತೂರಿ ‘ಸತ್ಯಮೇವ ಜಯತೇ’ ಎಂದು ಕೂಗುವ ದೃಶ್ಯ ಕಥೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ.

ತಣ್ಣನೆಯ ಕ್ರೌರ್ಯದ ಪ್ರತೀಕದಂತಿರುವ ಕುಲಕರ್ಣೇರ ಶಾಮರಾಯ ಅಲಿಯಾಸ್ ಕರಿಟೋಪಿಗಿರಾಯನ ಪಾತ್ರವಂತೂ ಕನ್ನಡ ಕಥನ ಸಾಹಿತ್ಯದಲ್ಲೊಂದು ವಿಶಿಷ್ಟ ಮತ್ತು ಸ್ಮರಣೀಯ ಪಾತ್ರ. ನಯವಾದ ಮಾತುಗಳನ್ನಾಡುತ್ತಾ, ಪೊಳ್ಳು ಭರವಸೆ ಕೊಟ್ಟು ಸಾಮಾನ್ಯ ಜನರನ್ನು ವಂಚಿಸುವ ಭ್ರಷ್ಟ ರಾಜಕಾರಣಿಗಳ ಪ್ರತಿರೂಪದಂತೆ ಭಾಸವಾಗುವ ವಿಕ್ಷಿಪ್ತ ವ್ಯಕ್ತಿತ್ವದ ಕರಿಟೋಪಿಗಿರಾಯನ ಪಾತ್ರ ಅದ್ಭುತವಾಗಿ ಮೂಡಿಬಂದಿದ್ದು ಓದುಗರ ಮನಸ್ಸಿನಲ್ಲಿ ಬಹುಕಾಲ ನಿಲ್ಲುವಂತಿದೆ.

ಫ್ಯೂಡಲಿಸ್ಂ ವ್ಯವಸ್ಥೆಯ ಕುರಿತು ಕನ್ನಡದಲ್ಲಿ ಹಲವು ಕಥೆ-ಕಾದಂಬರಿಗಳು ಬಂದಿವೆಯಾದರೂ ರಾಘವೇಂದ್ರ ಪಾಟೀಲರ “ಕಥಿಯ ಹುಚ್ಚಿನ ಕರಿಟೋಪಿಗಿಯ ರಾಯ” ಕಥೆ ಅವೆಲ್ಲವುಗಳಿಗಿಂತ ತೀರ ಭಿನ್ನವಾಗಿ ನಿಲ್ಲುತ್ತದೆ. ಪಾಟೀಲರು ಕಥಾವಸ್ತುವನ್ನು ನಿರ್ವಹಿಸಿರುವ ರೀತಿ, ತಿಳಿಹಾಸ್ಯ ಮಿಶ್ರಿತ ನಿರೂಪಣೆ, ಸಮೃದ್ಧ ವಿವರಗಳು ಮತ್ತು ಬೆಳಗಾವಿ ಭಾಗದ ದೇಸಿ ಭಾಷೆಯ ತಾಜಾತನದಿಂದಾಗಿ ಗಮನ ಸೆಳೆಯುತ್ತದೆ. ಫ್ಯೂಡಲಿಸ್ಂ ವ್ಯವಸ್ಥೆಯನ್ನು ವ್ಯಂಗ್ಯವಾಗಿ ಚಿತ್ರಿಸಿರುವ “ಕಥಿಯ ಹುಚ್ಚಿನ ಕರಿಟೋಪಿಗಿಯ ರಾಯ” ಕನ್ನಡದ ಶ್ರೇಷ್ಠ ಕಥೆಗಳಲ್ಲೊಂದು.***

–0-0-0–

ಸೇವಂತಿ ಹೂವಿನ ಟ್ರಕ್ಕು

ಜಯಂತ ಕಾಯ್ಕಿಣಿ
ಚಿತ್ರ ಕೃಪೆ : https://www.prajavani.net/stories/stateregional/jayant-kaikinis-no-presents-609961.html

ಮುಂಬೈ ಎಂಬ ಜನಾರಣ್ಯದ ಮುನ್ಸಿಪಲ್ ಚಾಳಿನ ವಾಸಿಯಾದ ಸುಧೀರ ಮಹಾಜನ ಕೆಳ ಮಧ್ಯಮವರ್ಗದ ವ್ಯಕ್ತಿ. ಕಾರ್ಖಾನೆಯೊಂದರಲ್ಲಿ ಸಾಧಾರಣ ಉದ್ಯೋಗಿಯಾದ ಸುಧೀರ ಮಹಾಜನ ಹೆಂಡತಿ ಜ್ಯೋತಿ ಮತ್ತು ಮಕ್ಕಳಾದ ರಷ್ಮಿ ಹಾಗೂ ವರ್ಷಾರೊಂದಿಗೆ ಹಲವು ವರ್ಷಗಳಿಂದ ಆ ಸಾಧಾರಣ ಚಾಳಿನಲ್ಲಿ ವಾಸಿಸುತ್ತಿದ್ದಾನೆ. ಇವನ ಮಕ್ಕಳನ್ನು ನೋಡಿಕೊಳ್ಳಲು ಮತ್ತು ಮನೆಗೆಲಸ ಮಾಡಲು ಬಂದು ತನ್ನ ಜೀವವನ್ನೇ ಈ ಕುಟುಂಬಕ್ಕಾಗಿ ತೇಯ್ದ ಅರವತ್ತರ ಹರೆಯದ ದುರ್ಗಿ ಈಗ ತೀವ್ರ ಅನಾರೋಗ್ಯದಿಂದಾಗಿ ಅನ್ನ, ನೀರು ಬಿಟ್ಟು ಸಾವಿಗಾಗಿ ಕಾಯುತ್ತಾ ಮಲಗಿದ್ದಾಳೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ದುರ್ಗಿಯ ದಯನೀಯ ಸ್ಥಿತಿಯನ್ನು ಜಯಂತರು ತುಂಬ ಚೆನ್ನಾಗಿ ಅಕ್ಷರಗಳಲ್ಲಿ ಹಿಡಿದಿಟ್ಟಿದ್ದಾರೆ.

“ಅಂಥ ನಿತ್ರಾಣದಲ್ಲೂ ಹೊಟ್ಟೆ ಹೊಸೆದುಕೊಂಡು ದುರ್ಗಿ ಈ ಕಿಟಕಿಗೆ ಬರುತ್ತಾಳೆ. ಹೊಸ ದಿನವೊಂದು ಬೀದಿಯಲ್ಲಿ ಹರಿದಾಡುವುದನ್ನು ಕಂಡಿದ್ದೇ ಋಣದ ಹೂವೊಂದು ಅರಳಿದಂತೆ ಕಣ್ಣರಳಿಸುತ್ತಾಳೆ”.

(ಪುಟ ೪೫)

ಒಂದು ಕಾಲದಲ್ಲಿ ಮಹಾಜನ ಕುಟುಂಬದ ಆಧಾರವಾಗಿದ್ದ ದುರ್ಗಿ ಈಗ ಆ ಕುಟುಂಬಕ್ಕೆ ಭಾರವಾಗಿದ್ದಾಳೆ. ಅವಳಿಗೆ ಚಿಕಿತ್ಸೆ ಕೊಡಿಸುವ ಶಕ್ತಿಯಿಲ್ಲದೆ ಅವಳನ್ನು ನಿವಾರಿಸಿಕೊಳ್ಳಲು ಮಹಾಜನ ಕುಟುಂಬ ಪಡುವ ಪಾಡು ಮತ್ತು ದುರ್ಗಿಯ ಕುರಿತ ಅವರ ಬದಲಾದ ಮನೋಭಾವ ಮನ ಕಲಕುವಂತೆ ಮಾಡುತ್ತದೆ. ದುರ್ಗಿಯ ದಯನೀಯ ಸ್ಥಿತಿ ನೋಡಿದಾಗ ಸಾವು ಸಹ ದುರ್ಗಿಯ ವಿಷಯದಲ್ಲಿ ನಿಷ್ಕರುಣಿಯಾದಂತೆ ತೋರುತ್ತದೆ. ಅರೆಜೀವವಾದ ದುರ್ಗಿಗೀಗ ತೆರೆದ ಕಿಟಕಿಯಿಂದ ಕಾಣುವ ಸೇವಂತಿ ಹೂವಿನ ಟ್ರಕ್ಕು ಹಳೆಯ ದಿನಗಳ ನೆನಪು ಮಾಡಿಕೊಡುತ್ತದೆ.

“ಆದರೆ ಮೂಲೆಯಲ್ಲಿದ್ದ ಸೇವಂತಿ ಹೂಗಳ ಟ್ರಕ್ಕು ಹಾಗೇ ನಿಂತುಕೊಂಡಿದೆ. ಕಣ್ಣು ಬಾಡುವ ತನಕ ನೋಡಿ ಮತ್ತೆ ತನ್ನ ಹಾಸಿಗೆಗೆ ಹೊಟ್ಟೆ ಹೊಸೆದುಕೊಂಡು ವಾಪಸಾದಳು. ಒರಗಿದ ಅವಳ ಕಣ್ಣಲ್ಲಿ ಸೇವಂತಿ ಹೂವು ತುಂಬಿದ ಟ್ರಕ್ಕು ಖಾಲಿಯಾಗದೆ ಹಾಗೇ ನಿಂತುಕೊಂಡಿತ್ತು”.

(ಪುಟ ೪೯)

ಮಹಾಜನ ಕುಟುಂಬಕ್ಕೆ ದುರ್ಗಿಗೆ ಚಿಕಿತ್ಸೆ ಕೊಡಿಸುವಷ್ಟು ಶಕ್ತಿಯಿಲ್ಲ. ಉಳಿಸಿದ ಅಲ್ಪಸ್ವಲ್ಪ ಹಣದಲ್ಲಿ ಅಷ್ಟೇನೂ ಹೇಳಿಕೊಳ್ಳುವ ಹಾಗಿರದ ಬೆಳೆದು ನಿಂತ ಹೆಣ್ಣು ಮಕ್ಕಳ ಮದುವೆ ಮಾಡಬೇಕಿದೆ. ಆ ಪುಟ್ಟ ಕುಟುಂಬಕ್ಕೆ ಬೇರೆ ಆಯ್ಕೆಗಳೇ ಇಲ್ಲದಂತಾದಾಗ ಕೊನೆಯ ಆಯ್ಕೆಯೆಂಬಂತೆ ದುರ್ಗಿಯನ್ನು ನಿವಾರಿಸಿಕೊಳ್ಳಲು ಅವಳಿಗೆ ನಿದ್ರೆ ಮಾತ್ರೆ ನೀಡಲು ನಿರ್ಧರಿಸುತ್ತಾರೆ. ಇದೆಲ್ಲದರ ಅರಿವಿರುವ ದುರ್ಗಿಯೂ ಸಹ ಇದಕ್ಕೊಪ್ಪುತ್ತಾಳೆ. ಮಹಾಜನ ದಂಪತಿ ನೀಡುವ ಗುಳಿಗೆಗಳನ್ನು ನಾಳೆ ತಗೋತನೆ ಎಂದು ಹೇಳಿ ದುರ್ಗಿ ತನ್ನ ಸಾವನ್ನು ಒಂದು ದಿನದ ಮಟ್ಟಿಗೆ ಮುಂದೂಡವುದರೊಂದಿಗೆ ಕಥೆ ಮುಕ್ತಾಯವಾಗುತ್ತದೆ. ಇಂತಹ ಹೃದಯವಿದ್ರಾವಕ ಸನ್ನಿವೇಶವನ್ನು ಜಯಂತರು ತುಂಬ ಸಂಯಮದಿಂದ ನಿರೂಪಿಸುತ್ತಾರೆ. ಕಥೆಯ ಅಂತ್ಯ ಹೃದಯ ಕಲಕುವಂತಿದ್ದು ಓದುಗರ ಮೇಲೆ ತೀವ್ರ ಪರಿಣಾಮ ಬೀರುತ್ತದೆ.

“ಇನ್ನೇನು ಯಾರೋ ಬಂದು ಈ ಟ್ರಕ್ಕಿನ ಬಾಗಿಲು ತೆಗೆದು ಹಳದಿ ಹೂವಿನ ರಾಶಿಯಲ್ಲಿ ನಿಂತು ಸಲಿಕೆಯಿಂದ ಗೋರಿ ಗೋರಿ ರಸ್ತೆಗೆ ಹೂವು ಸುರಿಯಲಿರುವವರು. ಈ ಯುಗದಲ್ಲಿಯೇ ಅತ್ಯಂತ ಉದ್ದವಾದ ಈ ರಾತ್ರಿ ತನ್ನೆಲ್ಲ ಶಕ್ತಿಯಿಂದ ನಾಳೆಯನ್ನು ನೂಕಿ ನಿಂತಿರುವುದು”.

(ಪುಟ ೫೦)

ಮಹಾಜನ ಕುಟುಂಬದ ಕಾರ್ಯ ತೀರ ಅಮಾನವೀಯವೆನ್ನಿಸಿದರೂ ಅವರಿಗೆ ಬೇರೆ ಆಯ್ಕೆಗಳಿಲ್ಲ. ಕೆಲವು ಸಂದರ್ಭಗಳಲ್ಲಿ ಮನುಷ್ಯ ತೀರ ಕ್ರೂರವಾಗಿ ವರ್ತಿಸುವ ಅನಿವಾರ್ಯತೆ ಉಂಟಾಗುತ್ತದೆ. ಸಮಯ, ಸಂದರ್ಭ ಮನುಷ್ಯ ಕೆಲವೊಮ್ಮೆ ಪಾಶವೀ ಕೃತ್ಯ ಎಸಗುವಂತೆ ಮಾಡುತ್ತವೆ. ಕಥೆಗಾರ ಇಲ್ಲಿ ಯಾರನ್ನೂ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದಿಲ್ಲ. ಜಯಂತರು ಸಂಪೂರ್ಣ ಹೊರಗಿದ್ದುಕೊಂಡು ತುಂಬ ಸಂಯಮದಿಂದ ಕಥೆಯನ್ನು ನಿರುದ್ವಿಗ್ನವಾಗಿ ನಿರೂಪಿಸುತ್ತಾ ಹೋಗುತ್ತಾರೆ.

ಸಾಧಾರಣ ಲೇಖಕರ ಕೈಯಲ್ಲಿ ಗೋಳಿನ ಕಥೆಯಾಗಬಹುದಾಗಿದ್ದ ಇಂತಹ ಕಥಾವಸ್ತು ಜಯಂತರ ಕೈಯಲ್ಲಿ ಒಂದು ಅತ್ಯುತ್ತಮ ಕಥೆಯಾಗಿ ರೂಪುಗೊಂಡಿದೆ. ಕಥೆಯ ಶೀರ್ಷಿಕೆಯಾದ “ಸೇವಂತಿ ಹೂವಿನ ಟ್ರಕ್ಕು” ದುರ್ಗಿಯ ಹಳೆಯ ನೆನಪುಗಳೊಂದಿಗೆ ಬೆಸೆದುಕೊಂಡಿದ್ದು ಸಾರ್ಥಕವಾಗಿ ಬಳಕೆಯಾಗಿದೆ.

ಜಯಂತರು ತೀರ ಕ್ಷುಲ್ಲಕ ಎನ್ನಿಸುವಂತಹ, ದೈನಂದಿನ ಘಟನೆಗಳನ್ನು ಒಳ್ಳೆಯ ಕಥೆಗಳನ್ನಾಗಿ ಪರಿವರ್ತಿಸಬಲ್ಲ ಪ್ರತಿಭಾವಂತ ಲೇಖಕರು. ಜಯಂತರು ಮೊದಲಿನಿಂದಲೂ ತಮ್ಮ ಅನೇಕ ಕಥೆಗಳಲ್ಲಿ ಸಾಮಾನ್ಯ ಜನರ ಒಳ್ಳೆಯತನವನ್ನು ತುಂಬ ಸಡಗರದಿಂದ ಚಿತ್ರಿಸಿದ್ದಾರೆ. ಮುಂಬೈ ಮಹಾನಗರದ ಬಡ ಮತ್ತು ಕೆಳಮಧ್ಯಮ ವರ್ಗದ ಇಂತಹ ಸಾಮಾನ್ಯರ ಬಗೆಗೆ ಕಥೆಗಳನ್ನು ಬರೆದಾಗಲೆಲ್ಲ ಜಯಂತರು ಯಶಸ್ಸು ಗಳಿಸಿದ್ದಾರೆ.

ಮೂಲತಃ ಕವಿಯಾದ ಜಯಂತ ಕಾಯ್ಕಿಣಿಯವರು ಕಾವ್ಯ, ಕಥನ ಅಥವಾ ಪ್ರಬಂಧ ಏನೇ ಬರೆಯಲಿ ಅದರಲ್ಲಿ ಕಾವ್ಯಮಯತೆ ಕಂಡು ಬರುವುದು ಸಹಜ. “ಸೇವಂತಿ ಹೂವಿನ ಟ್ರಕ್ಕು” ಸೇರಿದಂತೆ ಅವರ ಕೆಲವು ಒಳ್ಳೆಯ ಕಥೆಗಳಲ್ಲಿ ಬಳಸಿರುವ ಭಾಷೆ ಅವರ ಕವಿತೆಗಳಿಗಿಂತ ಹೆಚ್ಚು ಕಾವ್ಯಮಯವಾಗಿದೆ. ಸುಂದರ ದುಃಖಗೀತೆಯಂತಿರುವ “ಸೇವಂತಿ ಹೂವಿನ ಟ್ರಕ್ಕು” ಕನ್ನಡದ ಶ್ರೇಷ್ಠ ಕಥೆಗಳಲ್ಲೊಂದು.

ಕನ್ನಡ ಸಾಹಿತ್ಯಲೋಕದಲ್ಲಿ ನವ್ಯೋತ್ತರ ಸಾಹಿತ್ಯದೊಂದಿಗೆ ಗುರುತಿಸಲ್ಪಡುವ ರಾಘವೇಂದ್ರ ಪಾಟೀಲ ಮತ್ತು ಜಯಂತ ಕಾಯ್ಕಿಣಿ ಕನ್ನಡದ ಮಹತ್ವದ ಕಥೆಗಾರರು. ಕಳೆದ ನಾಲ್ಕೈದು ದಶಕಗಳಿಂದ ಕನ್ನಡದಲ್ಲಿ ಸಾಕಷ್ಟು ಉತ್ತಮ ಕಥೆಗಳನ್ನು ಬರೆಯುತ್ತ ಬಂದಿರುವ ರಾಘವೇಂದ್ರ ಪಾಟೀಲ ಮತ್ತು ಜಯಂತ ಕಾಯ್ಕಿಣಿ ಕನ್ನಡದ ಸಮೃದ್ಧ ಕಥನ ಪರಂಪರೆಯನ್ನು ಸಮರ್ಥವಾಗಿ ಮುಂದುವರೆಸಿಕೊಂಡು ಬಂದಿದ್ದಾರೆ. ಈ ಪುಟ್ಟ ಬರಹ ಓದುಗರಿಗೆ ರಾಘವೇಂದ್ರ ಪಾಟೀಲ ಮತ್ತು ಜಯಂತ ಕಾಯ್ಕಿಣಿಯವರ ಸಮಗ್ರ ಸಾಹಿತ್ಯವನ್ನು ಪ್ರೀತಿಯಿಂದ ಓದಲು ಪ್ರೆರಣೆಯಾಗಲೆಂದು ಆಶಿಸುತ್ತೇನೆ.

–0-0-0–

ಅಡಿ ಟಿಪ್ಪಣಿಗಳು

* “ಕಥಿಯ ಹುಚ್ಚಿನ ಕರಿ ಟೋಪಿಗಿಯ ರಾಯ” (ಪುಟ ೨೩೧-೨೫೨, ‘ತುದಿಯೆಂಬೋ ತುದಿಯಿಲ್ಲ… – ರಾಘವೇಂದ್ರ ಪಾಟೀಲರ ಇದುವರೆಗಿನ ಕಥೆಗಳು’)

** “ಸೇವಂತಿ ಹೂವಿನ ಟ್ರಕ್ಕು” (ಪುಟ ೪೫-೫೦, ‘ಜಯಂತ ಕಾಯ್ಕಿಣಿ ಅವರ ಆಯ್ದ ಕಥೆಗಳು’)

*** ರಾಘವೇಂದ್ರ ಪಾಟೀಲರು ಫ್ಯೂಡಲಿಸ್ಂ ಹಿನ್ನಲೆಯಲ್ಲಿ ಬರೆದ “ದೇಸಗತಿ”, “ಕಥಿಯ ಹುಚ್ಚಿನ ಕರಿಯ ಟೋಪಿಗಿಯ ರಾಯ” ಮತ್ತು “ತುದಿಯೆಂಬೋ ತುದಿಯಿಲ್ಲ…” ಕಥೆಗಳು ಜಮೀನ್ದಾರಿ ಪದ್ಧತಿಯ ವಿವಿಧ ಮುಖಗಳನ್ನು ತುಂಬ ಪರಿಣಾಮಕಾರಿಯಾಗಿ ಅನಾವರಣ ಮಾಡುತ್ತವೆ.