ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮೇಘನಾ ದುಶ್ಯಲಾ
ಇತ್ತೀಚಿನ ಬರಹಗಳು: ಮೇಘನಾ ದುಶ್ಯಲಾ (ಎಲ್ಲವನ್ನು ಓದಿ)

ಹೆಸರು: ಒಂದು ಕಪ್ ಕಾಫೀsss
ಲೇಖಕರು: ನಳಿನಿ ಟಿ. ಭೀಮಪ್ಪ
ಪ್ರಕಾಶನ: ಭಾವ ಸಿಂಚನಾ ಪ್ರಕಾಶನ
ಮೊದಲ ಮುದ್ರಣ: ೨೦೨೧
ದರ: ₹೧೭೫/-


ಸೋನೆ ಸುರಿವ ಮುಂಗಾರಿನಲೊ, ಮೈ ಕೊರೆವ ಚಳಿಯಲೊ ಒಂದು ಕಪ್ ಸ್ಟ್ರಾಂಗ್ ಕಾಫಿ ಹೀರಿದರೆ ಹೇಗಿರಬಹುದು? ಆಹಾ ನೆನೆಸಿಕೊಳ್ಳುತ್ತಲೇ ಮೈಮನವೆಲ್ಲಾ ಪುಳಕಗೊಳ್ಳುತ್ತಿರಬೇಕಲ್ಲವೇ? ಇನ್ನೇಕೆ ತಡ ಒಂದು ಕಪ್ ಕಾಫೀ ಓದಿ ಬಿಡೊಣ ಬನ್ನಿ… ಅರೆರೆ ಇದೇನು ಕುಡಿಯುವ ಕಾಫಿಯನ್ನು ಓದುವುದೇ??

ಹೌದು, ನಮ್ಮ ಬಿಡುವಿಲ್ಲದ ಒತ್ತಡದ ದಿನಚರಿಯಲ್ಲಿ ವ್ಯಸ್ತರಾಗಿ, ಯಾವುದೋ ಚಿಂತೆ(ಚಿಂತನೆ) ಯಲ್ಲಿ ತೊಡಗಿಕೊಂಡು, ನಿತ್ಯ ಕಾಫೀ/ಟೀ ಸಮಯದಲ್ಲಿ ನಮ್ಮವರೊಡನೆ ಹರಟುತ್ತಾ ತುಸು ಹೊತ್ತು ಕಳೆಯದೆ, ಚಿಕ್ಕಪುಟ್ಟ ವಿಷಯಗಳಿಗೆ ವೃಥಾ ತಲೆಬಿಸಿ ಮಾಡಿಕೊಂಡು ಮನಸ್ಸು ಬಿಚ್ಚಿ ನಗುವುದನ್ನು ಮರೆತುಬಿಟ್ಟಿರುತ್ತೇವೆ. ಅಥವಾ ಜಂಜಡಗಳ್ನು ಬದಿಗೊತ್ತಲು ಕೆಲಕಾಲ ಏಕಾಂತಕ್ಕಾಗಿ ಹಂಬಲಿಸುತ್ತಿರುತ್ತೇವೆ.ಅಂತಹ ಸಂದರ್ಭದಲ್ಲಿ ಸಹಜವಾಗಿ ನಮ್ಮ ಮೂಡ್ ರೀಫ್ರೆಶ್ ಆಗಲು ನಾವು ಬಯಸುವುದು ಒಂದು ಉತ್ತಮ ಪುಸ್ತಕ ಜೊತೆಗೆ ಒಂದು ಕಪ್ ಘಮಘಮ ನೊರೆಭರಿತ ಸ್ಟ್ರಾಂಗ್ ಕಾಫಿ.

ಕಳೆದೈದು ವರ್ಷಗಳಿಂದ ನಿರಂತರವಾಗಿ ಕನ್ನಡದ ಎಲ್ಲ ದಿನಪತ್ರಿಕೆಗಳು, ಪುರವಣಿ ಹಾಗೂ ನಿಯತಕಾಲಿಕೆಗಳಲ್ಲಿ ತಮ್ಮ ಸಹಜ ಶೈಲಿಯ ಬರವಣಿಗೆಯ ಮೂಲಕ ನಿತ್ಯ ಘಟನೆಗಳನ್ನು ಮನ ಮುಟ್ಟುವಂತೆ ಬರೆಯುತ್ತಾ ಓದುಗರನ್ನು ರಂಜಿಸುತ್ತಿರುವ ಲೇಖಕಿ ನಳಿನಿ ಟಿ. ಭೀಮಪ ಅವರ ಚೊಚ್ಚಲ ಕೃತಿ ಹರಟೆಗಳ ಗುಟುಕು ಎನ್ನುವ ಅಡಿ ಬರಹದೊಂದಿಗೆ “ಒಂದು ಕಪ್ ಕಾಫೀ” ಶೀರ್ಷಿಕೆಯ ಪ್ರಬಂಧ ಸಂಕಲನದ ಕುರಿತು ಅವಲೋಕನ…

ಒಂದು ಕಪ್ ಕಾಫೀsss ಪುಸ್ತಕ ಲೇಖಕಿ ನಳಿನಿ ಭೀಮಪ್ಪ

“ಒಂದು ಕಪ್ ಕಾಫೀ“ ಪ್ರಬಂಧ ಸಂಕಲನದಲ್ಲಿ ಪ್ರಕಟವಾದ ಬಹುತೇಕ ಬರಹಗಳನ್ನು ದಿನಪತ್ರಿಕೆ ಹಾಗೂ ನಿಯತಕಾಲಿಕೆಗಳಲ್ಲಿ ಓದಿದ್ದರೂ ಅಂದಿನ ಗಡಿಬಿಡಿಯಲ್ಲಿ ಓದನ್ನು ಪೂರ್ತಿಯಾಗಿ ಸವಿಯಲು ಅಸಾಧ್ಯವಾಗಿತ್ತು. ಆದರೆ ಈಗ ಪುಸ್ತಕ ರೂಪದಲ್ಲಿ ಎಲ್ಲ ಬರಹಗಳನ್ನು ಒಂದೆಡೆ ಸೇರಿ ಓದುವಾಗ ಮನಸ್ಸಿಗಾದ ಆನಂದ ವರ್ಣನಾತೀತ.

ಜನಪ್ರಿಯ ಲೇಖಕಿ ಶೈಲಜಾ ಹಾಸನ ರವರು ಪ್ರತಿಯೊಂದು ಲೇಖನವನ್ನು ಸೂಕ್ಷ್ಮವಾಗಿ ಅವಲೋಕಿಸಿ ವಿಮರ್ಶಿಸಿ ಅರ್ಥಪೂರ್ಣವಾದ ಮುನ್ನುಡಿ ಬರೆದಿದ್ದಾರೆ.
ಚೊಚ್ಚಲ ಕೃತಿಯನ್ನು ಲೇಖಕಿ ನಳಿನಿ ಭೀಮಪ್ಪ ರವರು ತಮ್ಮ ಜೀವನದ ಎರಡು ಅನರ್ಘ್ಯ ರತ್ನಗಳಿಗೆ ಅರ್ಪಿಸಿದ್ದು ಮನಸ್ಸಿಗೆ ಬಹಳ ಖುಶಿ ತಂದಿತು.

ಇಲ್ಲಿ ಕಾಫಿ ಪರಿಮಳದೊಂದಿಗೆ ಕಾರ್ ಕೊಳ್ಳುವ ಸಡಗರ, ಸೊಳ್ಳೆಯ ಕಾಟ, ನಾಯಿಯ ಭಯ, ನಿದ್ರೆಯ ಸುಖ, ಆಕಾಶವಾಣಿಯ ನಂಟು, ಸೀರೆಯ ಮೋಹ, ಸೌಂದರ್ಯ ಪ್ರಜ್ಞೆ, ಕಲ್ಯಾಣ ಮಂಟಪದ ಸ್ವಗತ, ಹೋಳಿಗೆಯ ಸವಿ, ಧಾರವಾಡ ಪೇಢೆಯ ರುಚಿ, ಫೇಸ್‌ಬುಕ್‌, ಶಾಪಿಂಗ್, ಸಿನಿಮಾ… ಒಂದಾ ಎರಡಾ ಎಷ್ಟೊಂದು ವಿಚಾರಗಳನ್ನು ಮನಕ್ಕೆ ಮುದ ನೀಡುವಂತೆ ಸೊಗಸಾಗಿ ಬರೆದಿದ್ದಾರೆ.

ಅದರಲ್ಲೂ ಇಲ್ಲಿನ ಪ್ರಬಂಧ ಲೇಖನಗಳಲ್ಲಿ ಅತ್ಯಂತ ಸರಳವಾದ ಬರವಣಿಗೆ ಶೈಲಿಯಲ್ಲಿ ಖುದ್ದು ಲೇಖಕಿಯೊಂದಿಗೆ ನಾವು ಆಮ್ನೆ ಸಾಮ್ನೆ ಕುಳಿತು ಹರಟುತ್ತಿರುವಂತೆ ಭಾಸವಾಗುತ್ತದೆ ಎಂದರೆ ಇವರ ಬರವಣಿಗೆಯಲ್ಲಿ ಅಷ್ಟರಮಟ್ಟಿಗೆ ನೈಜತೆ ಇದೆ ಎಂದು ಹೇಳಬಹುದು.

ಸಾಮಾಜಿಕ‌ ಲೇಖನಗಳನ್ನು ಹಾಗೂ ಹಾಸ್ಯ ಪ್ರಬಂಧಗಳನ್ನು ಬರೆಯುವ ಮೂಲಕ ತಮ್ಮದೇ ಆದ ಅಭಿಮಾನಿ ಓದುಗ ಬಳಗವನ್ನು ಹೊಂದಿರುವ ಲೇಖಕಿ ನಳಿನಿ ಭೀಮಪ್ಪ ತಮ್ಮ ನವಿರಾದ ಬರಹಗಳಲ್ಲೆ ನೆನಪಿನಂಗಳದಲ್ಲಿ ಕಚಗುಳಿ ಇಡುತ್ತಾ ನಮ್ಮನ್ನು ನಕ್ಕು ನಲಿಸುವುದರ ಜೊತೆಗೆ ಕೆಲವೊಮ್ಮೆ ಸೊಂಭೇರಿ ಹಾಗೂ ಹಠಮಾರಿ ಮನಸ್ಸಿಗೆ ಚುರುಕು ಮುಟ್ಟಿಸಿದ್ದಾರೆ ಕೂಡ.

ಓದಿದಾಕ್ಷಣ ಒಂದೇ ಬಾರಿಗೆ ಓದುಗರನ್ನು ಸೆಳೆಯುವಂತಹ ಬರಹ ಶೈಲಿ ಇವರದ್ದು. ದೈನಂದಿನ ಬದುಕಿನಲ್ಲಿ ನಡೆಯುವ ಘಟನೆಗಳು, ಎದುರಾಗುವ ಸಮಸ್ಯೆಗಳು, ಪ್ರತಿನಿತ್ಯ ತರತರಹದ ಅನುಭವಕ್ಕೀಡು ಮಾಡುವ ಹಲವು ಸನ್ನಿವೇಶಗಳನ್ನು ವಿಭಿನ್ನವಾಗಿ, ವೈವಿಧ್ಯಮಯವಾಗಿ, ಸಂಕ್ಷಿಪ್ತವಾಗಿ ಮತ್ತು ಅಷ್ಟೇ ಸರಳವಾಗಿ ಕಟ್ಟಿ ಕೊಡುವ ಮೂಲಕ ಇತ್ತೀಚಿನ ಓದುಗರ ಹೃನ್ಮನದಲ್ಲಿ ಸ್ಥಾನ ಪಡೆದಿದ್ದಾರೆ.

ಇತ್ತೀಚೆಗೆ ಸುಂದರವಾದ ಕಥೆಗಳನ್ನೂ ಹೆಣೆಯುವ ಮೂಲಕ ತಮ್ಮ ಅಭಿಮಾನಿ ಓದುಗರಿಗೆ ಮತ್ತಷ್ಟು ಹತ್ತಿರವಾಗಿ ಕಥಾಲೋಕಕ್ಕೆ ಬಡ್ತಿ ಹೊಂದಿರುವುದು ನಿಜಕ್ಕೂ ಆಶಾದಾಯಕ ಬೆಳವಣಿಗೆ. ಹೀಗೆ ಮುಂಬರುವ ದಿನಗಳಲ್ಲಿ ಲೇಖನಗಳೊಂದಿಗೆ ಕಥೆ, ಕವನ, ಕಾದಂಬರಿಯಲ್ಲೂ ಬೆಳೆದು ಮಿಂಚುವಂತಾಗಲಿ ಎಂದು ಮನಸಾರೆ ಹಾರೈಸುವ…
ನಿಮ್ಮ ಪ್ರೀತಿಯ
ಮೇಘನಾ ದುಶ್ಯಲಾ