- ಚಾಚಾ ನೆಹರು ಮತ್ತು ನಮ್ಮ ಮಕ್ಕಳು - ನವೆಂಬರ್ 14, 2023
- ಮಾನವತಾವಾದಿಯ ಹೆಜ್ಜೆಗಳು……. - ಏಪ್ರಿಲ್ 14, 2021
- ಯುಗಾದಿ – ಎರಡು ಹಾದಿ… - ಏಪ್ರಿಲ್ 13, 2021
ಸ್ವಜನ ಪಕ್ಷಪಾತ – ಆತ್ಮಹತ್ಯೆಯಲ್ಲ ಕೊಲೆ, ಅದಕ್ಕೆ ಕಾರಣರಾದವರು ಇವರು, ಅದಕ್ಕೆ ಕಾರಣಗಳು ಇವು, ಇದು ಬಹುತೇಕ ಹೀಗೆಯೇ ನಡೆದಿದೆ, ಇವರೆಲ್ಲರು ಅದರ ಆರೋಪಿಗಳು ಮತ್ತು ಅಪರಾಧಿಗಳು…..
ಸುಶಾಂತ್ ಸಿಂಗ್ ರಜಪೂತ್ ಎಂಬ ನಟನ ಸಾವಿನ ಸುತ್ತ ರಾಷ್ಟ್ರೀಯ ಮಾಧ್ಯಮಗಳ ತನಿಖಾ ವರದಿಗಳು ಈಗಲೂ ಪ್ರತಿನಿತ್ಯ ಪ್ರಸಾರವಾಗುತ್ತಲೇ ಇದೆ. ಇವರ ಒತ್ತಡದಿಂದಾಗಿ ಪೋಲೀಸರು ಸಹ ತನಿಖೆಯನ್ನು ವಿಸ್ತರಿಸುತ್ತಲೇ ಇದ್ದಾರೆ……..
ಕೆಲವು ವರ್ಷಗಳ ಹಿಂದೆ ಒಂದು ಪತ್ರಿಕಾ ಅಂಕಣ ಓದಿದ ನೆನಪು. ಅಮೆರಿಕಾದಲ್ಲಿ ಒಬ್ಬ ಜನಪ್ರಿಯ ವ್ಯಕ್ತಿಯ ಅಸಹಜ ಸಾವು ಸಂಭವಿಸಿದರೆ, ಅಲ್ಲಿನ ಮಾಧ್ಯಮಗಳು ಆತನ ಹಲವಾರು ತಲೆಮಾರಿನ ವಂಶಾವಳಿಯಿಂದ ಪ್ರಾರಂಭವಾಗಿ, ಅದು ಘಟಿಸಿರುವ ಸುತ್ತಮುತ್ತಲಿನ ಪ್ರದೇಶದಿಂದ ಮತ್ತು ಅಲ್ಲಿರುವ ವಸ್ತುಗಳನ್ನು ಸೇರಿಸಿ ಕೊನೆಗೆ ಅಮೆರಿಕದ ಅಧ್ಯಕ್ಷರವರೆಗೂ ಅನುಮಾನ ವ್ಯಕ್ತಪಡಿಸುವ ವರದಿಗಳನ್ನು ಪ್ರಕಟಿಸುವ ವಿಚಿತ್ರ ತನಿಖಾ ಪತ್ರಿಕೋದ್ಯಮದ ಇದೆಯಂತೆ. ಅದರ ಪ್ರಭಾವದಿಂದಾಗಿ
ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲೂ ಈ ರೀತಿಯ ನಡವಳಿಕೆಯನ್ನು ಮಾಧ್ಯಮಗಳು ಅಳವಡಿಸಿಕೊಂಡಂತೆ ಕಾಣುತ್ತಿದೆ.
ಲಾಲ್ ಬಹಾದ್ದೂರ್ ಶಾಸ್ತ್ರಿ, ಸುಭಾಷ್ ಚಂದ್ರ ಬೋಸ್, ಮಹಾತ್ಮ ಗಾಂಧಿ ಸೇರಿ ಸುಶಾಂತ್ ಸಿಂಗ್ ಸಾವಿನವರೆಗೆ ಅವರು ಕೇಳುವ ಪ್ರಶ್ನೆಗಳು, ವ್ಯಕ್ತಪಡಿಸುವ ಅನುಮಾನಗಳಿಗೆ ಉತ್ತರಿಸಲು ಸರ್ವಶಕ್ತ ದೇವರೆಂಬ ಕಾಲ್ಪನಿಕ ವ್ಯಕ್ತಿಗೆ ಮಾತ್ರ ಸಾಧ್ಯ !!!
ಪ್ರಖ್ಯಾತ ವ್ಯಕ್ತಿಯ ಕೊಲೆ ಅಥವಾ ಆತ್ಮಹತ್ಯೆಯಿಂದ ಸೃಷ್ಟಿಯಾಗುವ ಭಾವನಾತ್ಮಕ ಸನ್ನಿವೇಶ, ಕುತೂಹಲ, ವಿರೋಧಿಗಳ ಆರೋಪ, ಸಮಯ ಸಾಧಕರ ನೀಚತನ ಮತ್ತು ಪೋಲೀಸ್ ವ್ಯವಸ್ಥೆ ಮೇಲಿನ ಅಪನಂಬಿಕೆ ಮಾಧ್ಯಮಗಳಿಂದಾಗಿ ಈ ವಿಷಯಗಳು ಮುನ್ನಲೆಗೆ ಬರಲು ಕಾರಣವಾಗಿದೆ.
ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ವ್ಯವಸ್ಥೆಯ ಲೋಪದೋಷಗಳು ಸೃಷ್ಟಿಸುವ ಮಾನಸಿಕ ಒತ್ತಡಗಳು ಅಪರಿಮಿತ ಮತ್ತು ಅದು ಈಗಿನ ಸಮಸ್ಯೆಗಳಲ್ಲ. ನಮ್ಮ ಜನಜೀವನದ ಅವಿಭಾಜ್ಯ ಅಂಗ. ಅದರಲ್ಲೂ ಸ್ಪರ್ಧಾತ್ಮಕ ಜಗತ್ತಿನ ಸಿನಿಮಾ, ರಾಜಕೀಯ, ಉದ್ಯಮ ಮುಂತಾದ ಕ್ಷೇತ್ರಗಳಲ್ಲಿ ಇದು ವ್ಯಾಪಕವಾಗಿ ಹರಡಿದೆ. ಅದು ಎಷ್ಟೋ ಜೀವಗಳನ್ನು ಬಲಿ ತೆಗೆದುಕೊಂಡಿದೆ ಮತ್ತು ಈಗಲೂ ತನ್ನ ಕಬಂಧ ಬಾಹುಗಳನ್ನು ಚಾಚುತ್ತಲೇ ಇದೆ. ಅದನ್ನು ಮೆಟ್ಟಿ ನಿಲ್ಲಲು ಸಾಧ್ಯವಾದವರು ಮಾತ್ರ ಯಶಸ್ವಿಯಾಗುತ್ತಾರೆ. ವಿವರಿಸಲಾಗದ ಅದೃಷ್ಟ – ದುರಾದೃಷ್ಟದ ಆಟ ಸಹ ಇಲ್ಲಿ ಕೆಲಸ ಮಾಡುತ್ತದೆ.
ಈ ರೀತಿಯ ಸಾವುಗಳು ಬದುಕಿರುವ ಅವರ ಹತ್ತಿರದ ಕೆಲವರಿಗೆ ವರವಾದರೆ ಮತ್ತೆ ಕೆಲವರಿಗೆ ಶಾಪವಾಗುತ್ತದೆ. ಅದರಲ್ಲೂ ಸತ್ತ ವ್ಯಕ್ತಿಯ ಕೊಲೆ ಯಾವುದೇ ಸುಳಿವು ನೀಡದೆ ಇದ್ದಾಗ ಅಥವಾ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಯಾವುದೇ ಡೆತ್ ನೋಟ್ ಬರೆಯದೇ ಇದ್ದಾಗ ಅಥವಾ ಆತನ ಆತ್ಮಹತ್ಯೆ ನಿರ್ದಿಷ್ಟ ಮಾನದಂಡಗಳಿಗೆ ನಿಲುಕದೇ ಇದ್ದಾಗ ಬದುಕುಳಿದಿರುವ ಜನರನ್ನು ಅವರ ಪ್ರತಿ ವ್ಯವಹಾರಗಳನ್ನು ಅನುಮಾನದಿಂದ ನೋಡಿ ಎಷ್ಟೋ ಜನ ಅಮಾಯಕರನ್ನು ಈ ಮಾಧ್ಯಮಗಳು ಹಿಂಸಿಸುತ್ತವೆ. ಸಹಜವಾಗಿ ನಡೆದಿರಬಹುದಾದ ಎಲ್ಲಾ ವ್ಯವಹಾರಗಳನ್ನು ಇದೇ ಹಿನ್ನೆಲೆಯಲ್ಲಿ ನೋಡಲಾಗುತ್ತದೆ. ನಟಿ ಶ್ರೀದೇವಿಯ ಸಾವು ಸಹ ಇಂತಹುದೇ ಅನುಮಾನಗಳಿಗೆ ಕಾರಣವಾಗಿತ್ತು.
ಹೇಗೆ ಇದನ್ನು ಅರ್ಥಮಾಡಿಕೊಳ್ಳುವುದು ?
ಅಂತಿಮ ಸತ್ಯ ಯಾವುದು ?
ಪೋಲೀಸರೆ ? ಮಾಧ್ಯಮಗಳೇ ? ನ್ಯಾಯಾಲಯಗಳೇ ?
ತುಂಬಾ ಕಷ್ಟದ ವ್ಯವಸ್ಥೆಯಲ್ಲಿ ನಾವಿದ್ದೇವೆ. ಪ್ರತಿ ವ್ಯವಸ್ಥೆಯೂ ತನ್ನದೇ ಮಿತಿಯನ್ನು ಹೊಂದಿದೆ. ಈ ಸಾವುಗಳು ನಮಗೇ ನೇರವಾಗಿ ಸಂಬಂಧಿಸಿಲ್ಲದಿದ್ದರೆ ಅದನ್ನು ನಿರ್ಲಕ್ಷಿಸಬಹುದು. ಕುತೂಹಲವಿದ್ದರೆ ಇರುವ ಮಾಹಿತಿಗಳ ಆಧಾರದ ಮೇಲೆ ಏನೋ ನಿರ್ಧಾರಕ್ಕೆ ಬರಬಹುದು. ಆದರೆ ವಾಸ್ತವ ಮಾತ್ರ ಗ್ರಹಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಹಾಗೂ ಇರಬಹುದು, ಹೀಗೂ ಇರಬಹುದು, ಇನ್ನೇನೋ ಆಗಿರಬಹುದು, ಸಾಕ್ಷಿ ಮತ್ತು ದಾಖಲೆಗಳ ತಿರುಚಿರಬಹುದು, ಪ್ರಭಾವಿಗಳು ತನಿಖೆಯ ದಿಕ್ಕು ತಪ್ಪಿಸಿರಬಹುದು ಅಥವಾ ಎಲ್ಲವನ್ನೂ ಮೀರಿ ಮೇಲ್ನೋಟಕ್ಕೆ ಕಾಣುವುದೇ ನಿಜವಿರಬಹುದು, ಎಷ್ಟೊಂದು ಸಾಧ್ಯತೆಗಳು ಇರುತ್ತವೆಯಲ್ಲವೇ ?
ಕೊಲೆ ಒಂದು ಅಪರಾಧ, ಆತ್ಮಹತ್ಯೆ ಸಹ ಇತ್ತೀಚಿನವರೆಗು ಅಪರಾಧವೇ ಆಗಿತ್ತು. ಈಗ ಸ್ವಲ್ಪ ಪುನರ್ ವಿಮರ್ಶಿಸಲಾಗಿರಬೇಕು ಅಥವಾ ಆ ರೀತಿಯ ಪ್ರಸ್ತಾವನೆ ಇದೆ.
ನಮ್ಮ ಬದುಕು, ನಮ್ಮ ಅರಿವು, ನಮ್ಮ ಅನುಭವ, ನಮ್ಮ ಕಾನೂನು, ನಮ್ಮ ಮಾಹಿತಿಯ ಮೂಲಗಳ ವಿಶ್ವಾಸಾರ್ಹತೆ, ನಮ್ಮ ನೈತಿಕತೆಯ ಆಧಾರದ ಮೇಲೆ, ನಮಗೆ ಸಮಯ ಮತ್ತು ಆಸಕ್ತಿ ಇದ್ದರೆ, ನಾವುಗಳು ಒಂದು ಅಭಿಪ್ರಾಯ ರೂಪಿಸಿಕೊಳ್ಳಬಹುದು.
ಆದರೆ ಸಂಪೂರ್ಣ ವಿಷಯಗಳು ತಿಳಿಯದೆ ಈ ರೀತಿಯ ಸಾವಿನ ಸುತ್ತ ಇರುವವರ ಅಥವಾ ಅದಕ್ಕೆ ಸಂಬಂಧಿಸಿದವರ ಮೇಲೆ ಕೆಟ್ಟ ಅಭಿಪ್ರಾಯ ಪಡಬಾರದು. ನಮ್ಮನ್ನು ನಾವು ಆ ಸ್ಥಾನದಲ್ಲಿ ಕಲ್ಪಿಸಿಕೊಂಡು ಅದರ ಯಾತನೆಯ ಅನುಭವ ಪಡೆಯಬೇಕು. ಸತ್ತವರೆಲ್ಲ ಒಳ್ಳೆಯವರು ಎಂಬುದು ಬಾಲಿಶ ತೀರ್ಮಾನವಾಗಬಹುದು.
ಸಮಗ್ರ ಚಿಂತನೆಯ ಅವಶ್ಯಕತೆ ತುಂಬಾ ಇದೆ. ವ್ಯಕ್ತಿಗಳ ಮಾನಸಿಕತೆ, ಪರಿಸ್ಥಿತಿಯನ್ನು ಎದುರಿಸುವ ರೀತಿ ನೀತಿಗಳು, ಮೇಲ್ನೋಟದ ವರ್ತನೆಗಳು, ಕೆಲವೊಮ್ಮೆ ದಾಖಲೆ – ಸಾಕ್ಷಿಗಳು ಸಹ ನಮ್ಮ ಯೋಚನಾ ಶಕ್ತಿಯನ್ನೇ ವಂಚಿಸಬಹುದು. ಮಾಧ್ಯಮಗಳ ವಿವೇಚನಾರಹಿತ ಬೇಜವಾಬ್ದಾರಿ ಮತ್ತಷ್ಟು ಜನರ ಜೀವಕ್ಕೆ ಅಪಾಯ ತಂದೊಡ್ಡಬಹುದು.
ಸತ್ತವರ ಮಾನಸಿಕ ದೌರ್ಬಲ್ಯ ಬದುಕಿರುವವರ ಬದುಕನ್ನೇ ಕಸಿಯಬಹುದು, ಇದರ ಮತ್ತೊಂದು ಮುಖವಾಗಿ ಅಮಾಯಕರ ಹತ್ಯೆಯೂ ಆಗಬಹುದು.
ಪೋಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಮತ್ತಷ್ಟು ದಕ್ಷತೆ ಹಾಗು ಪ್ರಾಮಾಣಿಕವಾಗಿ ರೂಪಿಸುವುದು, ನಮ್ಮ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯನ್ನು ಭ್ರಷ್ಟ ಮುಕ್ತಗೊಳಿಸುವುದು, ಬೆಳೆಯುವ ಮಕ್ಕಳ ಮನಸ್ಸನ್ನು ದೃಢ ಮತ್ತು ವಿಶಾಲಗೊಳಿಸುವುದು, ನಾವು ಬದುಕಿನ ಪಾಠಗಳನ್ನು ಕಲಿಯುವುದಷ್ಟೇ ಅಲ್ಲದೆ ಅದನ್ನು ಅಳವಡಿಸಿಕೊಳ್ಳುವುದು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಸುಖಕ್ಕಾಗಿ ಇನ್ನೊಬ್ಬರನ್ನು ಹಿಂಸಿಸುವ ಮನೋಭಾವ ಈ ಸಮಾಜದಿಂದ ತೊಲಗಿಸಬೇಕು. ಸೋತ ವ್ಯಕ್ತಿಯ ಮಾನಸಿಕತೆ ಕುಗ್ಗಿಸುವ ಮಾತುಗಳನ್ನು ಆಡಬಾರದು. ಯಶಸ್ಸು ಒಂದು ಅನುಭವವೇ ಹೊರತು ಅದು ಇತರರ ಮೇಲೆ ಸಾಧಿಸುವ ದಿಗ್ವಿಜಯ ಎಂಬ ಭ್ರಮೆಯನ್ನು ಸಮಾಜದಿಂದ ಕಿತ್ತೊಗೆಯಬೇಕು.
ಆಗ ಈ ರೀತಿಯ ನಿಗೂಢ ಸಾವುಗಳು ಕಡಿಮೆಯಾಗಿ ವ್ಯವಸ್ಥೆ ಒಂದು ಹದಕ್ಕೆ ಬರುತ್ತದೆ. ಇಲ್ಲದಿದ್ದರೆ ಸಾವುಗಳ ಸುತ್ತ ಅಸಹನೀಯ ವಾತಾವರಣ ತನ್ನ ಸುಡುವುದಲ್ಲದೇ ಪರರನ್ನೂ ಸುಡುತ್ತದೆ. ಮಾಧ್ಯಮಗಳು ಅದಕ್ಕೆ ತುಪ್ಪ ಸುರಿಯುತ್ತಲೇ ಇರುತ್ತವೆ.
ಆದಷ್ಟು ಬೇಗ ಎಚ್ಚೆತ್ತುಕೊಳ್ಳೋಣ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ವಿವೇಕಾನಂದ. ಹೆಚ್.ಕೆ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್