- ಕವಿಗಳು ಕಂಡ ಸಂಭ್ರಮದ ಯುಗಾದಿ. - ಏಪ್ರಿಲ್ 9, 2024
- ವಿಜಯದಶಮಿ ರೈತರ “ಬನ್ನಿ ಹಬ್ಬ” - ಅಕ್ಟೋಬರ್ 24, 2023
- ಮುನ್ನಡೆಯುವ ಹಕ್ಕು ಮಹಿಳೆಯರಿಗೂ ಇದೆ - ಮಾರ್ಚ್ 8, 2023
ಕಣ್ಮರೆಯಾಗುತ್ತಿರುವ ಒಗಟುಗಳು.
ಎರಡು ವರ್ಷದಿಂದ ಕೊರೊನಾ ಎಂದುಕೊಂಡು ನಾನು ನಮ್ಮ ಸ್ನೇಹಿತರು ಯಾವ ಕಾರ್ಯಕ್ರಮಗಳನ್ನು ಹಾಕಿಕೊಂಡಿರಲಿಲ್ಲ. ಇತ್ತೀಚಿಗೆ ಗಣರಾಜ್ಯೋತ್ಸವ ಪ್ರಯುಕ್ತ ನನ್ನ ಸ್ನೇಹಿತೆ ಶಾಂತಿ ಎಲ್ಲರಿಗೂ ಆವ್ವಾನ ನೀಡಿದಳು. ಆಟ-ಊಟ ಎರಡನ್ನು ಇಟ್ಟಿದ್ದಳು.
ಮೊದಲ ನಮಗೆ ತಿಳಿದಿರುವ ಕರಕುಶಲದ ಬಗ್ಗೆ ಚರ್ಚೆ, ಆನಂತರ ಒಬ್ಬಟ್ಟಿನ ಊಟೋಪಚಾರ ಇವೆಲ್ಲ ನಡೆಯಿತು. ಅನಂತರ ಅಂತ್ಯಾಕ್ಷರಿ ಆಡಿದೆವು. ಅದಾದನಂತರ ಒಗಟು ಬಿಡಿಸುವ ಕಾರ್ಯಕ್ರಮವಿತ್ತು. ಇದಂತೂ ತುಂಬಾ ಚೆನ್ನಾಗಿತ್ತು. ಆ ಸಮಯದಲ್ಲಿ ಒಗಟಿನ ಉತ್ತರ ಹೇಳೋದಕ್ಕೆ ನೆನಪೆ ಆಗುತ್ತಿರಲಿಲ್ಲ. ಎಷ್ಟೊಂದು ಮರೆತೇ ಹೋಗಿದ್ದವು. ಉತ್ತರ ತಿಳಿದ ಮೇಲೆ ಇಷ್ಟು ಸುಲಭದ ಒಗಟು ಮರೆತುಬಿಟ್ಟಿದ್ದೇವೆ ಎಂದು ಪೇಚಾಡಿಕೊಂಡೆವು. ನಿಜಕ್ಕೂ ಆ ದಿನ ಕಾರ್ಯಕ್ರಮ ಚೆನ್ನಾಗಿತ್ತು. ಮನೆಗೆ ಬಂದಾಗ ನನಗೆ ಬಾಲ್ಯದ ನೆನಪಾಯಿತು. ನಮ್ಮ ಅಮ್ಮ, ಅಪ್ಪ ಒಗಟು ಕೇಳುವುದು, ನಾನು, ಅಕ್ಕ, ಅಣ್ಣ ಅದಕ್ಕೆ ಉತ್ತರಿಸಬೇಕು, ಯಾರು ಬೇಗ ಉತ್ತರ ಕೊಟ್ಟರೆ ಅವರಿಗೆ ಚಾಕ್ಲೇಟ್ ಬಿಸ್ಕೆಟ್ ಕೊಡುತ್ತಿದ್ದರು. ಆ ದಿನಗಳು ತುಂಬಾ ಚೆನ್ನಾಗಿತ್ತು. ಶಾಲಾ ಕಾಲೇಜು ದಿನಗಳಲ್ಲಿ ಸಹ ನಾವು ಒಗಟು ಬಿಡಿಸುವ ಆಟ ಆಡುತ್ತಿದ್ದೆವು. ಆನಂತರ ಅವೆಲ್ಲ ಬಿಟ್ಟು ಹೋಯಿತು.
ಇತ್ತೀಚಿನ ದಿನಗಳಲ್ಲಿ ಒಗಟು ಹೇಳುವುದು ಇವೆಲ್ಲ ಮರೆಯಾಗುತ್ತಿದೆ. ವಿಡಿಯೋ ಗೇಮ್, ಕಾರ್ಟೂನ್ ಗಳ ಹೆಚ್ಚಿನ ಆಸಕ್ತಿ ಇರುವ ಈಗಿನ ಆನೇಕ ಮಕ್ಕಳಿಗೆ ಒಗಟಿನ ಗಂಧವೇ ಗೊತ್ತಿರುವುದಿಲ್ಲ. ನಿಜಕ್ಕೂ ಬೇಸರದ ಸಂಗತಿ.
ಒಗಟಿಗೆ ಉತ್ತರ ಹೇಳುವುದು ಇದೊಂದು ಮಿದುಳಿಗೆ ಒಳ್ಳೆಯ ಕಸರತ್ತು.
ಒಗಟುಗಳ ಇತಿಹಾಸ.
ಒಗಟುಗಳ ಇತಿಹಾಸವೂ ರೋಮಾಂಚನಕಾರಿಯಾದುದೂ ಆಗಿದೆ.ಇದರ ಬಗ್ಗೆ ತಿಳಿದು ಕೊಂಡರೆ ಮತ್ತೆ ಮುಂದುವರಿಸಲು ಅನುಕೂಲವಾಗುತ್ತದೆ.
ಕನ್ನಡದಲ್ಲಿ ಒಗಟನ್ನು ಒಂಟು, ಒಡಪು, ಒಡಗತೆ,ಒಡಚು,ಒಗಟೆ, ಸಮಸ್ಯೆ ಎಂದು ನಾನಾ ರೂಪಗಳಲ್ಲಿ ಗುರುತಿಸುವುದಿದೆ. ಮಾನವ ನಾಗರಿಕತೆಯ ಹೊಸ್ತಿಲನ್ನು ತುಳಿದಿಂದನಿಂದಲೇ ಗಾದೆ, ಒಗಟುಗಳು ಉಗಮವೂ ಆದವು.ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿರುವಂತೆ ಒಗಟು ವೇದಕಾಲದಿಂದಲೇ ಗುರುತಿಸಲ್ಪಟ್ಟಿವೆ.ಜಾನಪದ ಸಾಹಿತ್ಯದ ಪ್ರಕಾರಗಳಲ್ಲಿ ಗಾದೆ, ಒಗಟುಗಳಿಗೆ ಹೆಚ್ಚಿನ ಮಹತ್ವವಿರುವುದು. ಈ ಒಗಟುಗಳು ಹೃದಯವನ್ನು ಮುಟ್ಟಿ ತಟ್ಟಿ ಮನಸ್ಸನ್ನು ಅರಳಿಸುವ ಗುಣ ಇದೆ ಎನ್ನಬಹುದು.
ಜನಪದ ಸಾಹಿತ್ಯದಲ್ಲಿ ಗಾದೆಗಳಿಗಿರುವಷ್ಟೆ ಮಹತ್ವದ ಸ್ಥಾನ ಒಗಟುಗಳಿಗೂ ಇದೆ. ಹಾಗೆ ನೋಡಿದರೆ, ಮಾನವ ತನ್ನ ಅನಿಸಿಕೆಗಳನ್ನು ಪ್ರಕಟಿಸಲು ತೊಡಗಿದುದೇ ಜನಪದ ಸಾಹಿತ್ಯದ ಮೂಲಕವಾಗಿಯೇ ಎನ್ನಬಹುದು. ಇಂಗ್ಲಿಷಿನಲ್ಲಿ ಇವಕ್ಕೆ ‘Riddle’ಎಂದು ಹೇಳುವರು. ಹೀಗೆಂದರೆ ಸಮಸ್ಯೆ ಬಿಡಿಸು, ಒಗಟು ಬಿಚ್ಚು ಎಂದೆಲ್ಲ ಅರ್ಥಗಳಿವೆ. ಆ ಭಾಷೆಯಲ್ಲಿ ‘ Riddle me ‘ ಎಂದು ಹೇಳುವುದುಂಟು; ಅಂದರೆ ನನ್ನ ಸಮಸ್ಯೆ ಬಿಡಿಸು ಎಂದು. ಸಂಸ್ಕೃತದಲ್ಲಿ ಒಗಟಿಗೆ ಸಂವಾದಿಯಾಗಿ ಪ್ರಶ್ನೆ,ವಿವಾದ, ಸಮಸ್ಯಾ, ಪ್ರಹೇಲಿಕಾ ಎಂಬ ಪದಗಳಿವೆ. ತೆಲುಗಿನಲ್ಲಿ ವಿಡಿಕಥಾ,ತಮಿಳಿನಲ್ಲಿ ವಿಡು ಕಥ್ಯೆ, ಎಂದು ಒಗಟಿಗೆ ಹೇಳುತ್ತಾರೆ. ಮಲಯಾಳದಲ್ಲಿ ವಿಡಿಕದ ಎಂದು ಕರೆಯುತ್ತಾರೆ. ಇನ್ನು ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ಮುಂಡಿಗೆ, ಮುಡಿಗೆ ಎಂಬ ಪದಗಳು ಸವಾಲು ಎಸೆಯುವುದು ಎಂಬ ಅರ್ಥದಲ್ಲಿ ಬಳಕೆಯಲ್ಲಿದ್ದವು.
ಮಕ್ಕಳಿಗೆ ಪ್ರಿಯವಾದದ್ದು.
ಒಗಟು ಎಂದಾಗ ಒಂದು ಸಮಸ್ಯೆಯನ್ನು ಬಿಡಿಸು ಎಂದು ಅರ್ಧ ಹೇಳಬಹುದು. ಇವು ಬುದ್ಧಿ ಪ್ರಧಾನ ಹಾಗೂ ಅರ್ಥಗರ್ಭಿತ. ಒಗಟು ಹೇಳಿದಾಗ ಹೇಗಪ್ಪಾ ಬಿಡಿಸುವುದು ಎಂದು ತಲೆ ಕೆರೆದುಕೊಳ್ಳುವವರೇ ಹೆಚ್ಚು. ಆದರೆ ಉತ್ತರ ತಿಳಿದಾಗ ಇದೇನು ಇಷ್ಟು ಸುಲಭವೇ ಎನಿಸುತ್ತದೆ. ಒಗಟುಗಳು ಬಹಳಷ್ಟು ಹಾಸ್ಯಮಯ ಆಗಿರುತ್ತದೆ. ಅಲ್ಲಿ ಒಂದು ಸುಂದರ ಪ್ರತಿಮೆಯ ಸೃಷ್ಟಿಯಾಗಿರುತ್ತದೆ. ಹೆಚ್ಚಿನಷ್ಟು ಮನೋರಂಜನೆಗೆಂದು ಸೃಷ್ಟಿಯಾದವುಗಳು. ಹಾಗೆಂದೇ ಮಕ್ಕಳಿಗೆ ಪ್ರಿಯವಾಗಿರುವುದು. ಶ್ರಮಜೀವಿಗಳಾದ ಗ್ರಾಮೀಣರ ಎಷ್ಟೋ ದೈಹಿಕ ಶ್ರಮವನ್ನು ದೂರ ಮಾಡುವಲ್ಲಿ ಒಗಟುಗಳು ಸಹಾಯಕವಾಗಿರುತ್ತಿದ್ದವು. ಗ್ರಾಮ್ಯ ಭಾಷೆಯೇ ಹೆಚ್ಚಾಗಿರುವ ಒಗಟುಗಳು ಜನಪದ ಸಾಹಿತ್ಯದ ಪ್ರಕಾರವಾಗಿ ಕಾಣಿಸಿಕೊಂಡವು. ಹೆಚ್ಚಾಗಿ ಒಗಟುಗಳು ಬಾಯಿಂದ ಬಾಯಿಗೆ ಹರಡಿ ಉಳಿದುಕೊಂಡಿವೆ. ಒಂದು ಒಳ್ಳೆಯ ಒಗಟು ಎಂಥವರನ್ನಾದರೂ ಆಕರ್ಷಿಸುತ್ತದೆ. ಇನ್ನೂ ತಿಳಿಯೋಣ ಎಂಬ ಕುತೂಹಲ ಮೂಡಿಸುತ್ತದೆ.
ಒಗಟುಗಳು ಜಾನಪದಕ್ಕೆ ಸಂಬಂಧಿಸಿದಂತೆ ಎಲ್ಲಾ ದೇಶಗಳಲ್ಲಿ ಕಾಣಸಿಗುತ್ತವೆ. ಆದಿವಾಸಿಗಳ ಭಾಷೆಯಲ್ಲೂ ಒಗಟುಗಳು ಹೇರಳವಾಗಿವೆ. ಪ್ರಾಚೀನ ಗ್ರೀಕ್,ಹೀಬ್ರೂ, ಸಂಸ್ಕೃತ ಕಾವ್ಯಗಳಲ್ಲಿ ಒಗಟುಗಳ ಭಂಡಾರವಿದೆ.ಒಗಟು ಸಾರ್ವತ್ರಿಕ ಗುಣವುಳ್ಳದ್ದಾಗಿದೆ. ಹೆಚ್ಚಾಗಿ ಜನಪದ ಒಗಟುಗಳು, ಸಾಹಿತ್ಯಿಕ ಒಗಟುಗಳು ಎಂದು ಎರಡು ವಿಭಾಗಗಳಲ್ಲಿ ಒಗಟುಗಳನ್ನು ಗುರುತಿಸಲಾಗುತ್ತದೆ. ಬಾಯಿಂದ ಬಾಯಿಗೆ ಹರಿದು ಬಂದಿರುವ ಒಗಟುಗಳು ಜನಪದ ಒಗಟುಗಳು.ಇವು ಹಿಂದಿನಿಂದಲೂ ಇರುವಂಥವು. ಆಧುನಿಕ ಕಾಲಕ್ಕೆ ಸೃಷ್ಟಿಯಾದ ಒಗಟುಗಳು ಸಾಹಿತ್ಯದಲ್ಲಿ ಸೇರಿ ಹೋಗಿವೆ. ಇವೇ ಸಾಹಿತ್ಯಕ ಒಗಟುಗಳು ಎನಿಸಿವೆ. ಇದಕ್ಕೆ ಆಧಾರವಾದರೂ ಜನಪದ ಒಗಟುಗಳೇ. ಅಲೆಗ್ಸಾಂಡರ್ ಕ್ರಾಪ್ಟೆ ಇವನ್ನು Oral Folklore ಎಂದು ಕರೆದರು.
ಒಗಟುಗಳು ಚಿಕ್ಕವು ಇರುತ್ತವೆ. ಐದಾರು ಸಾಲುಗಳಲ್ಲಿ ಒಗಟುಗಳನ್ನು ಹೇಳುವುದಿದೆ. ಪದ್ಯಗಳ ರೂಪದಲ್ಲಿ, ಪ್ರಶ್ನೋತ್ತರ ರೂಪದಲ್ಲಿ, ಗಣಿತಾತ್ಮಕವಾಗಿಯೂ ಒಗಟುಗಳನ್ನು ಹೇಳಿರುವುದಿದೆ. ಕಥನ ಒಗಟುಗಳು ಪದ್ಯ ರೂಪದಲ್ಲಿಯೂ ಇರುತ್ತವೆ.ಈ ಒಗಟುಗಳ ಆಕರಗಳಾಗಿ ‘ಭೇತಾಳ ಪಂಚವಿಶಂತಿ’, ‘ಯಕ್ಷಪ್ರಶ್ನೆ’, ‘ಬೌದ್ಧರ ಜಾತಕ ಕಥೆಗಳು’,’ಮಿಳಿಂದ ಪ್ರಶ್ನೆ’ಇವೆ. ಹಾಗೆ ಸೃಷ್ಟಿಯಾದ ಒಗಟುಗಳೂ ಸಹ ಇವೆ. ಪ್ರಾಚೀನ ಒಗಟುಗಳು ಸುಲಭವಾಗಿರದೆ ತುಸು ಅರ್ಥಗರ್ಭಿತವಾಗಿ ಗಂಭೀರವಾಗಿಯೂ ಇರುತ್ತವೆ.
ಒಗಟುಗಳ ಪರಿ
ಒಗಟುಗಳಲ್ಲಿ ನಾನಾ ರೀತಿ ಇರುತ್ತವೆ.
ಮನುಷ್ಯನ ಶರೀರದ ಅಂಗಗಳನ್ನು ಕುರಿತು ಹೇಳುವ ಒಗಟುಗಳು ಬೇಕಾದಷ್ಟಿವೆ. ಮನುಷ್ಯ ಶರೀರಾಣಂ ನಯನಂ ಪ್ರಧಾನಂ ಎಂದಿರುವಂತೆ ಕಣ್ಣು ಬಹು ಮುಖ್ಯವಾದ ಅಂಗವಾಗಿದ್ದು ಅದನ್ನು ಕುರಿತಂತೆ ಒಗಟುಗಳು ಗಮನ ಸೆಳೆಯುತ್ತವೆ. ಗೂಡ್ನಲ್ಲಿರೋ ಜೋಡಿ ಪಕ್ಷಿ ಊರೆಲ್ಲ ನೋಡುತ್ತೆ-(ಕಣ್ಣು). ಹಾಗೇ ಆಯಾ ಅಂಗಗಳ ಆಕಾರವನ್ನೋ, ಗುಣಧರ್ಮವನ್ನೋ ಹೇಳುವಲ್ಲಿ ಚಮತ್ಕಾರ ತೋರಿವೆ ಇವುಗಳಲ್ಲಿ ಶೈಕ್ಷಣಿಕ ಹಾಗೂ ಮನೋರಂಜಕ ಲಕ್ಷಣಗಳೆರಡನ್ನೂ ಗುರುತಿಸಬಹುದಾಗಿದೆ. ಒಟ್ಟಿನಲ್ಲಿ ಎಲ್ಲಾ ಅಂಗಗಳ ಬಗ್ಗೆ ಹೇಳುವ ಒಗಟುಗಳು ತುಂಬಾ ಚೆನ್ನಾಗಿದೆ.
ಹಳ್ಳಿಯ ಬಹು ಜನರ ಕಸುಬು ಬೇಸಾಯ. ಅದರೊಂದಿಗೆ ಅಂಟಿ ಬಂದಿದೆ. ಪಶುಪಾಲನೆ, ಹಾಲು, ಹೈನುಗಳಿಗಾಗಿ ಮಾಂಸ,ಉಣ್ಣೆಗಾಗಿ ಪಶು ಪಕ್ಷಿಗಳನ್ನು ಸಾಕುವುದಾಗಿದೆ. ಬಹು ಹತ್ತಿರದಿಂದ ಪ್ರಾಣಿ-ಪಕ್ಷಿಗಳ ಚಲನವಲನಗಳನ್ನು ಗಮನಿಸಿದ ಮನುಷ್ಯ ಅವುಗಳನ್ನು ಕುರಿತು ಗಾದೆ ಒಗಟುಗಳನ್ನು ಕಟ್ಟಿರಲು ಸಾಕು. ಹೆಚ್ಚಾಗಿ ಹಳ್ಳಿಯ ಜನರಿಂದಲೇ ಸೃಷ್ಟಿಯಾದ ಜನಪದ ಒಗಟುಗಳು ಹಳ್ಳಿಯ ಜನರ ವಿರಾಮ ಕಾಲದಲ್ಲಿ ಮನರಂಜನೆಗೂ ಒದಗಿದವು. ಆದರೂ ಬುದ್ಧಿಶಕ್ತಿಗೆ ಸಾಣೆ ಹಿಡಿಯುವಂಥ ಈ ಒಗಟುಗಳು ಒಬ್ಬರೊಬ್ಬರ ಸಾಮಾನ್ಯ ಜ್ಞಾನವನ್ನೂ ಹೆಚ್ಚಿಸುವುದಕ್ಕೆ ಸಹಾಯಕವಾಗಿದ್ದವು ಶಾಲಾ ಮಕ್ಕಳಿಗಂತೂ ಇವು ಕ್ರೀಡೆಯ ಸರಕುಗಳೇ ಆಗಿವೆ. ಗೂಢಾರ್ಥಗಳುಳ್ಳ ಒಗಟುಗಳು ಎಂಥವರಿಗೂ ಕಬ್ಬಿಣದ ಕಡಲೆಯೇ. ಪಶುಪಾಲನೆಯೇ ಅಲ್ಲದೆ ತನಗೆ ಕಾಟ ಕೊಡುವ ತಿಗಣೆ, ಸೊಳ್ಳೆ, ವನ್ಯಮೃಗಗಳೂ ಒಗಟುಗಳಲ್ಲಿ ಸೇರಿ ಹೋಗಿರೋದು ವೈಶಿಷ್ಟ್ಯ. ಉದಾಹರಣೆಗೆ, ಕಿವಿಯಲ್ಲಿ ಒಂದು ಸಂಗೀತ ಆಡುತ್ತೆ, ಇದಕ್ಕೆ ಉತ್ತರ ಸೊಳ್ಳೆ.ಹಾಗೇ ರಂಗನ ಮನೆ ಹುಂಜ ನಿಂಗನ ಮನೆಯಲ್ಲಿ ಮೊಟ್ಟೆ ಇಟ್ಟರೆ ಆ ಮೊಟ್ಟೆ ಯಾರಿಗೆ ಸೇರಬೇಕು?( ಹುಂಜ ಮೊಟ್ಟೆ ಇಡಲ್ಲ),ನೋಡಲು ಚಂದ ಮುಟ್ಟಿದರೆ ಕೊಂದ(ಹಾವು),ಇದೊಂದು ಜನಪದ ಒಗಟು. ಹೀಗೆ ಎಲ್ಲಾ ಪ್ರಾಣಿ-ಪಕ್ಷಿಗಳ ಬಗ್ಗೆ ಒಗಟುಗಳು ಬೇಕಾದಷ್ಟಿವೆ.
ಬಹುಶಃ ನಾವು ದಿನನಿತ್ಯ ತಪ್ಪದೇ ಕಾಣುವ ಆಹಾರ ಪದಾರ್ಥಗಳು ಹಣ್ಣು-ತರಕಾರಿಗಳು. ದಿನ ಎಂಬಂತೆ ಹಣ್ಣು ತರಕಾರಿಗಳನ್ನು ತಿನ್ನುತ್ತೇವೆ. ಹೀಗಾಗಿ ಹಣ್ಣು-ತರಕಾರಿಗಳ ನಮ್ಮ ದಿನನಿತ್ಯದ ಜೀವನದಲ್ಲಿ ಹಾಸುಹೊಕ್ಕಾಗಿದೆ. ಜನಪದ ಒಗಟುಗಳು ಇವನ್ನು ಬಹು ಸೂಕ್ಷ್ಮವಾಗಿ ನೋಡಿವೆ. ಹಣ್ಣು-ತರಕಾರಿಗಳ ಆಕಾರವೇ ಒಗಟುಗಳ ರಚನೆಗೆ ಒದಗಿರುವುದೂ ಉಂಟು. ಇಂತಹ ಒಗಟುಗಳು ದೇಹ ಮತ್ತು ಮನಸ್ಸಿನ ಮೇಲೆ ಉತ್ತಮ ಪರಿಣಾಮ ಬೀರುವುದು. ಇನ್ನು ಹಣ್ಣು, ಹೂವು,-ತರಕಾರಿಗಳನ್ನು ಬಿಡುವ ಗಿಡ ಮರಗಳು ಒಗಟಿಗೆ ವಸ್ತುಗಳಾಗಿವೆ. ಇದರ ಜೊತೆ ಸಾಂಬಾರ ಪದಾರ್ಥಗಳಾದ ಲವಂಗ,ಮೆಣಸು, ಮೆಣಸಿನಕಾಯಿ ಇತ್ಯಾದಿ ಸೇರಿಸಬಹುದು.
ಜಾಣ್ಮೆ ಬೇಕು.
ಇನ್ನು ಮುಖ್ಯವಾಗಿ ಪ್ರಕೃತಿ ದೇವರು ಧರ್ಮ ನಂಬಿಕೆ ಮೊದಲಾದ ವಿಷಯಗಳಲ್ಲೂ ಒಗಟುಗಳು ಸೇರಿಕೊಂಡಿವೆ. ಅನೇಕ ಕಥೆಗಳಲ್ಲಿ ಒಗಟುಗಳು ಪ್ರಶ್ನೋತ್ತರ ರೂಪದಲ್ಲಿ ಬಂದಿವೆ. ಹಾಗೆ ರಾಮಾಯಣ-ಮಹಾಭಾರತ ಮೊದಲಾದ ಕಥೆಗಳನ್ನು ಕುರಿತ ಒಗಟುಗಳು ಉಂಟು.
ಇಲ್ಲೊಂದು ಒಗಟು ನೋಡಿ, ಇದನ್ನು ಸಮಸ್ಯೆ ಎಂದೂ ಹೇಳಬಹುದು. ಇದನ್ನು ಬಿಡಿಸುವಲ್ಲಿ ತುಸು ಜಾಣ್ಮೆ ಬೇಕು. ಈ ಒಗಟು ಹೇಗಿದೆ,ಕೊಟ್ಟು ಕೆಟ್ಟ, ಕೊಡದೇ ಕೆಟ್ಟ, ಮುಟ್ಟಿ ಕೆಟ್ಟ, ಮುಟ್ಟದೆ ಕೆಟ್ಟ. ಇಲ್ಲಿ ನಾಲ್ವರು ಚಕ್ರವರ್ತಿಗಳ ಕಥೆಯಿದು. ಕೊಟ್ಟು ಕೆಟ್ಟವನೇ ಬಲಿಚಕ್ರವರ್ತಿ, ಕೊಡದೇ ಕೆಟ್ಟವನು ದುರ್ಯೋಧನ, ಮುಟ್ಟಿ ಕೆಟ್ಟವನು ಬಸ್ಮಾಸುರ, ಇನ್ನು ಮುಟ್ಟಿದೇ ಕೆಟ್ಟವನು ರಾವಣ. ಹಾಗೇ ‘ಕಂದ ಬಂದ ಕೊಂದ ತಂದ’ ಎಂಬುದು ಇಂಥದೇ ಇನ್ನೊಂದು ಒಗಟು. ಇದು ಶ್ರೀರಾಮನ ಕುರಿತದ್ದಾಗಿದೆ. ದಶರಥನ ಕಂದ ಶ್ರೀರಾಮಚಂದ್ರ ರಾವಣನನ್ನು ಕೊಂದು ಸೀತೆಯನ್ನು ತಂದ ಎಂಬುದು ಇಲ್ಲಿಯ ವಿಶದಾರ್ಥ. ಇಲ್ಲಿ ಈ ಒಗಟಿನಲ್ಲಿ ಬಹುಮಟ್ಟಿನ ಕಥೆಯೇ ಅಡಗಿದೆ. ಒಗಟುಗಳು ಭಾಗವತ, ಭಾರತ, ಶಿವ ಪುರಾಣಗಳ ಕಥೆಗಳನ್ನೇ ಸುಲಭ ವಾಕ್ಯಗಳಲ್ಲಿ ಹೇಳಿ ಬಿಡಬಲ್ಲವು.
ಅಂತೆಯೇ ಒಗಟುಗಳು ನಿಸರ್ಗದ ಬಗ್ಗೆ ಚಮತ್ಕಾರವಾಗಿ ಹೇಳಿದೆ. ದೇವರುಗಳ ಸ್ವಭಾವಾದಿಗಳನ್ನು ಅರ್ಥಗರ್ಭಿತವಾಗಿ ತಿಳಿಸಿವೆ. ಇಲ್ಲಿಒಗಟುಗಳನ್ನು ನೋಡೋಣ.ಒಂದು ಲಕ್ಷ ಕಡಲೆಕಾಳಿನ ಮಧ್ಯೆ ಒಂದೇ ಕಲ್ಲು. (ನಕ್ಷತ್ರಗಳು ಮತ್ತು ಚಂದ್ರ). ಹಾಗೇ ಗರಿಕೆ ಆಸೆ ದೇವರು ವರ್ಷಕ್ಕೊಮ್ಮೆ ಬರ್ತಾನೆ. ಉತ್ತರ (ಗಣಪತಿ).
ಹಬ್ಬಗಳ ಬಗ್ಗೆ ಮಾಡುವ ಅಡುಗೆಯ ಬಗ್ಗೆ ಹಲವಾರು ಒಗಟುಗಳಿಗವೆ.ಉದಾಹರಣೆಗೆ ಅಬ್ಬಾಬ್ಬ ಹಬ್ಬ ತಂತು, ಸಿಹಿ ಕಹಿ ಎರಡೂ ತಂತು. ಉತ್ತರ ಯುಗಾದಿ. ಸಾವಿರಾರು ಹಕ್ಕಿ ಗಳು ಒಂದೇ ಸಾರಿಗೆ ನೀರಿಗೆಳಿತವೆ. (ಅಕ್ಕಿ- ನೀರು). ಇದು ಅನ್ನ ಮಾಡುವ ಕ್ರಿಯೆಗೆ ಸಾದೃಶವಾಗಿರುವ ಒಗಟು ಅರ್ಥಪೂರ್ಣ. ಹಾಗೆಯೇ ಬಿಳಿ ಕಪ್ಪೆ ಹೊಟ್ಟೆಯೊಳಗೆ ಕರಿ ಮರಳು (ಕರ್ಜಿಕಾಯಿ). ನಿಜಕ್ಕೂ ಇಂಥ ಒಗಟುಗಳನ್ನು ಹೇಳುವುದಕ್ಕೆ ಖುಷಿಪಡುತ್ತೇವೆ.
ಅಲ್ಲದೆ ಒಗಟುಗಳು ನೇರ ಒಡ್ಡಲ್ಪಡುವಂತೆ ಪ್ರಶ್ನಾರ್ಥ ರೂಪದಲ್ಲಿ,ಸಂಭಾಷಣಾ ರೂಪದಲ್ಲಿ, ಗಣಿತಾತ್ಮಕವಾಗಿಯೂ,ಬೆಡಗಿನ ವಚನಗಳ ರೂಪದಲ್ಲಿಯೂ ಇರಬಲ್ಲವಾಗಿವೆ. ಉದಾರಣೆಗೆ ಒಂದು ಮಣ ಕಬ್ಬಿಣ ಭಾರವೋ ಒಂದು ಮಣ ಹತ್ತಿ ಭಾರವೋ? ಉತ್ತರ ಎರಡೂ ಒಂದೇ ಭಾರ. ಸಾಮಾನ್ಯವಾಗಿ ಕಬ್ಬಿಣ ಭಾರವಾದ ವಸ್ತು ಎಂದು ಉತ್ತರಿಸಬೇಕಾದವರು ಕಬ್ಬಿಣ ಎಂದು ಥಟ್ಟನೆ ಹೇಳಿಬಿಡುತ್ತಾರೆ. ಆದರೆ ನೋಡಬೇಕಾದದ್ದು ಎರಡು ವಸ್ತುಗಳ ತೂಕವನ್ನು. ಹಾಗೆ ಇನ್ನೊಂದು ಜಾಣತನದ ಒಗಟು ಒಂದು ಮರದಲ್ಲಿ ಕುಳಿತಿದ್ದ ಅರವತ್ತು ಹಕ್ಕಿಗಳಲ್ಲಿ ಒಂದಕ್ಕೆ ಒಬ್ಬ ಬೇಡ ಗುಂಡು ಹೊಡೆದು ಅದು ಸತ್ತು ಹೋದರೆ ಉಳಿದ ಹಕ್ಕಿಗಳೆಷ್ಟು.? ಉತ್ತರ ಉಳಿದ ಹಕ್ಕಿಗಳು ಎಲ್ಲ ಹಾರಿ ಹೋಗುತ್ತವೆ. ಸಾಮಾನ್ಯವಾಗಿ ಉತ್ತರಿಸುವವರು ಐವತ್ತೊಂಬತ್ತು ಎಂದು ಹೇಳಿ ಪೇಚಿಗೆ ಸಿಕ್ಕುತ್ತಾರೆ. ಈ ರೀತಿಯ ವಿಭಿನ್ನ ರೂಪದ ಒಗಟುಗಳು ಬೇಕಾದಷ್ಟಿವೆ.
ಒಗಟಿನ ಕಥೆಗಳು
ಕೆಲವೊಂದು ಒಗಟುಗಳು ತಮ್ಮ ಗರ್ಭದಲ್ಲಿ ಒಂದು ಕಥೆಯನ್ನೇ ಒತ್ತು ಇರುತ್ತವೆ. ಇಂಥ ಕಥೆಗಳೆಂದರೆ ಮಕ್ಕಳಿಂದ ವಯಸ್ಸಾದ ಮುದುಕರವರೆಗೂ ಪ್ರಿಯವಾಗುತ್ತವೆ. ಬೌದ್ಧ ಸಂಪ್ರದಾಯದ ಜಾತಕ ಕಥೆಗಳಲ್ಲಿ ಒಗಟನ್ನು ಗುರುತಿಸಬಹುದಾಗಿದೆ. ಬಹು ಹಿಂದೆ ಒಬ್ಬ ರಾಜ ತೀರಿಕೊಂಡನೆಂದರೆ ಮುಂದೆ ಆಡಳಿತ ಸೂತ್ರವಹಿಸಿಕೊಳ್ಳುವ ರಾಜನು ಒಗಟುಗಳ ಮೂಲಕವೇ ಪ್ರವೇಶಗೊಳಗಾಗುತ್ತಿದ್ದ.
ಭಾರತೀಯ ಒಗಟಿನ ಪರಂಪರೆಯಲ್ಲಿ ಮಹಾಭಾರತ ಉಲ್ಲೇಖನೀಯ. ಈ ಮಹಾ ಗ್ರಂಥದಲ್ಲಿ ಬರುವ ಒಗಟುಗಳು ಹಲವು ಹತ್ತು ಪ್ರಾಕೃತಿಕ ಸಂಗತಿಗಳನ್ನು ಹೊರಗೆಡತ್ತವೆ. ಧರ್ಮರಾಜನು ಯಕ್ಷನ ಪ್ರಶ್ನೆಗಳಿಗೆ ನೀಡುವ ಉತ್ತರಗಳು ಒಂದು ಒಳ್ಳೆ ಉದಾಹರಣೆ. ಮಹಾಕವಿ ಕಾಳಿದಾಸನ ಕೊನೆಯ ಕಟ್ಟುಕಥೆಯು ಸಹ ಒಗಟಿನ ರೂಪತಾಳಿದೆ. ಹಾಗೆಯೇ ಈಡಿಪಸ್ ನ ಒಗಟು ಕಥೆ ಸಹ ಸುಪ್ರಸಿದ್ಧವಾಗಿದೆ. ಒಗಟಿನ ಕಥೆಗಳು ಇವು ಮಾನವನ ಬುದ್ಧಿಶಕ್ತಿಗೆ ಒರೆಗಲ್ಲುಗಳಂತೆ ಕಥೆಯ ಹಿಂದೆ ಅಡಗಿರುವ ತಾತ್ವಿಕ ನೆಲೆ ಗಮನಾರ್ಹವಾಗಿದೆ.
ಹಾಸ್ಯದ ಫಲ.
ಹಳ್ಳಿಗರಿಗೆ ಒಗಟು ಬಿಡಿಸುವುದೆಂದರೆ ಬಲು ಪ್ರೀತಿಯ ವಿಷಯ. ಒಗಟು ಬಿಡಿಸಿ ಅದು ಸರಿ ಎಂದಾಯಿತೆಂದರೆ ಅದೊಂದು ಹೆಮ್ಮೆಯ ಸಂಗತಿ. ಹೀಗೆ ಸಾಗುವ ದಿನಬಳಕೆ ವಸ್ತುಗಳಾದ ಮಂಚ, ತಂಬೂರಿ, ಚಪ್ಪಲಿ, ಬೆಂಕಿಕಡ್ಡಿ, ಪೆನ್ನು, ಜರಡಿ,ದೀಪ ಹೀಗೆ ಒಂದೇ ಎರಡೇ! ನೂರಾರು ವಸ್ತುಗಳಿರುವಂತೆ ಒಗಟುಗಳು ಹುಟ್ಟಿಕೊಂಡವು. ಕ್ರೀಡೆಗೆ ಸಾಧನವೂ ಆಯಿತು. ಒಗಟು ಹೇಳಿದವನು ಗೆಳೆಯನೋ ಬಂಧುವೋ ಒಗಟು ಬಿಡಿಸಿ ಉತ್ತರ ಕೊಡದಿದ್ದರೆ ಏನಯ್ಯ ಇಷ್ಟು ಗೊತ್ತಾಗಲಿಲ್ಲವೆ? ಇದಕ್ಕೆ ಉತ್ತರ ಛತ್ರಿ ಅಲ್ಲವೆ? ಪೆನ್ ಅಲ್ಲವೆ? ಎಂದು ಹೇಳುವುದನ್ನು ನಾವು ಕೇಳಿದ್ದೇವೆ. ಒಗಟುಗಳು ಹೇಳುವುದು ಬಿಡಿಸುವುದು ಮಾಡುತ್ತಿದ್ದರೆ ಸಮಯ ಹೋಗುವುದೇ ಗೊತ್ತಾಗುವುದಿಲ್ಲ. ಒಗಟುಗಳು ಕಾಲ ಕಳೆಯುವ ಸಾಧನೆಗಳೆಂದು ಭಾವಿಸಬಾರದು. ಅವುಗಳಿಂದ ಆಗುವ ಪ್ರಯೋಜನ ಬಹು ವ್ಯಾಪ್ತಿ ಉಳ್ಳದ್ದಾಗಿದೆ ಎಂಬುದು ವಸ್ತುಗಳನೇಕ ಕುರಿತು ಒಗಟುಗಳಿಂದ ತಿಳಿಯಬಹುದಾಗಿದೆ. ಒಗಟಿನಲ್ಲಿ ಗೋಚರವಾಗುವ ರೂಪಕಗಳು ಗಮನ ಸೆಳೆಯುತ್ತವೆ. ಅವುಗಳಲ್ಲಿ ತಿಳಿಹಾಸ್ಯವನ್ನೂ ಗುರುತಿಸಬಹುದಾಗಿದೆ. ಎಷ್ಟೊಂದು ಒಗಟುಗಳು ಹಾಸ್ಯಮಯ ವಾಗಿವೆ. ಹಾಸ್ಯದ ಮೊದಲ ರೂಪವೇ ಒಗಟು ಎಂದು ಹೇಳಲಾಗಿದೆ. ಜೇಮ್ಸ್ ಎಕೆಲ್ಯೊ ಎಂಬಾತ ಒಗಟು ಹಾಸ್ಯದ ಫಲ ಎಂದೇ ಹೇಳಿಬಿಟ್ಟಿದ್ದಾನೆ. ಹಾಸ್ಯದಂತೆ ವಿಡಂಬನೆಯೂ ಹೊಸೆದು ಕೊಂಡು ಒಗಟುಗಳು ಬಹುಬೇಗ ರುಚಿಸುತ್ತವೆ. ಹೀಗಾಗಿಯೇ ಮಕ್ಕಳು ಹುಡುಗರು ಒಗಟುಗಳೆಂದರೆ ಮಾರು ಹೋಗುತ್ತಾರೆ. ಅವುಗಳನ್ನು ಗ್ರಹಿಸುವುದರಲ್ಲಿ ಆಸಕ್ತಿ ತೋರಿಸುತ್ತಾರೆ. ಉದಾಹರಣೆಗೆ ಮುದುಕಿಯ ಮೈಯೆಲ್ಲಾ ತೂತು (ದೋಸೆ), ವೀಣೆ ಸುಬ್ಬಯ್ಯ (ಸೊಳ್ಳೆ) ,ಅಕ್ಕನಿಗೆ ಆರು ಕಣ್ಣು ಮುಕ್ಕನಿಗೆ ಮೂರು ಕಣ್ಣು (ಕೊಳಲು, ತೆಂಗಿನಕಾಯಿ), ಚೋಟುದ್ದ ಹುಡುಗಿಗೆ ಮಾರುದ್ದ ಜಡೆ (ಸೂಜಿ,ದಾರ)ಇಂತಹ ಇನ್ನೂ ಅನೇಕ ಹಾಸ್ಯಮಯ ಒಗಟುಗಳು ಮನಸ್ಸಗೆ ಮುದನೀಡುತ್ತವೆ.
ಹಾಗೆ ಅತ್ತೆ ಅಳಿಯನ ಬಗ್ಗೆ ಒಗಟು ಸಹ ಅರ್ಥಗರ್ಭಿತವಾಗಿದೆ.ಉದಾಹರಣೆಗೆ ಮನೇಲಿದ್ದರೆ ಲಿಂಗಾಕಾರ, ಹಾದಿ ಹಿಡಿದರೆ ಚಕ್ರಾಕಾರ,ಇಲ್ಲಿಗೂ ಬಂದೆಯಾ ಜಡೆ ಶಂಕರ (ರಾಗಿಮುದ್ದೆ,ರಾಗಿರೊಟ್ಟಿ,ರಾಗಿ ಶಾವಿಗೆ). ಇದೊಂದು ಕನ್ನಡ ಜನಪ್ರಿಯ ಒಗಟು. ಇದರ ಹಿಂದೆ ಇರುವ ಕಥೆಯು ಸಹ ಸ್ವಾರಸ್ಯವಾಗಿದೆ.
ಕಾಲಕಳೆಯುವ ಸಾಧನ.
ಕೆಲವರಲ್ಲಿ ಒಗಟುಗಳೆಂದರೆ ಅದೊಂದು ಕಾಲಕಳೆಯುವ ಸಾಧನವೆಂದೇ ಭಾವನೆ.ಹೊತ್ತು ಹೋಗದವರಿಗೆ ಅದೊಂದು ಕ್ರೀಡೆ ಎಂಬ ಭಾವನೆ ಇದೆ. ಅಂದರೆ ಅವುಗಳನ್ನೊಡ್ಡಿ ಬಿಡಿಸುವುದರಿಂದ ಯಾವ ಪ್ರಯೋಜನವೂ ಇಲ್ಲ ಎಂದು ತಿಳಿಯುತ್ತಾರೆ. ಒಂದು ಕಾಲಕ್ಕೆ ರಾಜ್ಯಗಳನ್ನು ಗೆಲ್ಲಲು ರಾಜರು ಪರಸ್ಪರ ಒಗಟುಗಳನ್ನೊಡ್ಡಿ ಬಿಡಿಸುತ್ತಿದ್ದುದು ನಿರ್ದೇಶನವಿದೆ. ಅಲೆಕ್ಸಾಂಡರ್ ಭಾರತದ ಮೇಲೆ ದಂಡೆತ್ತಿ ಬಂದು ಭಾರತದಲ್ಲಿದ್ದಾಗ ಹಿಂದೂ ಋಷಿ ಮುನಿಗಳನ್ನು ಒಗಟು ಬಿಡಿಸಲು ಕರೆ ಕಳಿಸುತ್ತಿದ್ದನೆಂದು ತಿಳಿಯಲಾಗಿದೆ. ಮದುವೆಯಾಗಲು ಹೆಣ್ಣನ್ನು ಪಡೆಯಲು ವ್ಯಕ್ತಿ ಬಗಟು ಬಿಡಿಸಬೇಕಾಗಿತ್ತು. ಅದು ಅವನ ಬುದ್ಧಿಶಕ್ತಿಯನ್ನು ತಿಳಿಯಲೂ ಹೌದು. ಇಂದು ಸಂದರ್ಶಗಳನ್ನು ನಡೆಸುವಂತೆ.
ಒಗಟು ಒಂದು ವಿನೋದ ಕ್ರೀಡೆ.
ಹಿಂದೆ ಮದುವೆ ಮೊದಲಾದ ಸಮಾರಂಭಗಳಲ್ಲಿ ಜನ ಒಗಟು ಬಿಡಿಸುವುದು ವಿನೋದ ಕ್ರೀಡೆಯಾಗಿರುತತ್ತು. ಈಗ ಎಲ್ಲಾ ಮರೆಯಾಗಿದೆ. ಇಂದು ಈ ದಿಶೆಯಲ್ಲಿ ಆಸಕ್ತಿ ತುಂಬಾ ಕಡಿಮೆಯಾಗುತ್ತಿದೆ ಎನ್ನಬಹುದು. ಇದನ್ನೆಲ್ಲ ನೋಡಿದಾಗ ಇತ್ತೀಚಿಗೆ ಒಗಟುಗಳು ಹೇಳುವುದು ಮರೆಯಾಗುತ್ತಿದೆ. ಒಗಟುಗಳು ಇಂದು ಎಷ್ಟೋ ಬಳಕೆಯ ಕೊರತೆಯಿಂದಾಗಿ ಕಣ್ಮರೆಯಾಗುತ್ತಿವೆ. ಬಾಯಿಂದ ಬಾಯಿಗೆ ಹರಿಯುತಿರಲು ಬಳಸದಿರುವುದೂ ಒಂದು ಕಾರಣ.
ಒಗಟು ಒಂದು ಶಿಕ್ಷಣ.
ಒಗಟುಗಳು ಶೈಕ್ಷಣಿಕ ವೆನ್ನಬಹುದು. ಮಕ್ಕಳಿಗೆ ಒಗಟುಗಳನ್ನು ಬಿಡಿಸಿ ಹೇಳುವುದರಿಂದ ಅವರಿಗೆ ಒಂದು ಶಿಕ್ಷಣ ದೊರೆತಂತಾಗುತ್ತದೆ. ಸಾಮಾನ್ಯವಾಗಿ ದೊಡ್ಡವರಿಗೆ ಒಗಟುಗಳು ತಲೆನೋವು. ಆದರೆ ಮಕ್ಕಳು ಇಷ್ಟಪಡುತ್ತೇವೆ. ಒಗಟುಗಳನ್ನು ಬಿಡಿಸುವುದರಿಂದ ಅವರ ಬುದ್ಧಿ ಹರಿತವಾಗುತ್ತದೆ.
ಒಗಟುಗಳನ್ನು ಬಿಡಿಸುವುದು ನಮ್ಮ ಜ್ಞಾನಭಂಡಾರವನ್ನು ವಿಚಾರಗಳಿಂದ ತುಂಬಿಕೊಂಡಂತೆ. ವಿದ್ಯಾರ್ಥಿಗಳಿಗಾಗಿ ಏರ್ಪಾಟಾಗುವ ರಸಪ್ರಶ್ನೆ ಕಾರ್ಯಕ್ರಮ ಗಳಲ್ಲಿ ಒಗಟುಗಳನ್ನೊಡ್ಡುವ ಭಾಗವೂ ಇದ್ದರೆ ಬಹುಮಟ್ಟಿಗೆ ಒಗಟುಗಳನ್ನು ಬಳಸಲು ಅವಕಾಶವಾಗುತ್ತದೆ. ವಿದ್ಯಾರ್ಥಿಗಳು ನಿಸರ್ಗದ ವಸ್ತುಗಳೊಂದಿಗೆ ಒಗಟುಗಳು ಹೋಲಿಸಿ ನೋಡುವ ಪರಿಯನ್ನು ತಿಳಿಯಲು ಸಾಧ್ಯವಾಗುತ್ತದೆ. ದೇಹ ಅಥವಾ ಮನಸ್ಸಿನ ಮೇಲೆ ಉತ್ತಮ ಪರಿಣಾಮ ಬೀರುವುದು. ಹಾಗಾಗಿ ಜಾಣತನದ ಒಗಟು ಅವರಿಗೆ ತಿಳಿಸಿಕೊಡಬೇಕು.
ಹೆಚ್ಚಿನ ಬರಹಗಳಿಗಾಗಿ
ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ
ನೋ ಪಾರ್ಕಿಂಗ್
ಪುತಿನ ರ ವಸಂತ ಚಂದನ