ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಒಲವೆ ನಮ್ಮ ಬದುಕು-೧೧

ಪ್ರಹ್ಲಾದ್ ಜೋಷಿ
ಇತ್ತೀಚಿನ ಬರಹಗಳು: ಪ್ರಹ್ಲಾದ್ ಜೋಷಿ (ಎಲ್ಲವನ್ನು ಓದಿ)

ಅರಳಿತು ಹೇಗೆ
ಒಲವಿನ ಕುಸುಮ?
ಪಸರಿಸಿತು ಎಂತು
ಎಲ್ಲೆಡೆ ಅದರ ಘಮ ಘಮ?

ನಮ್ಮಳವೆ ತಿಳಿಯುವದು!
ಆಳುವೆನು ಎಲ್ಲವ ತೊತ್ತುಗಳು ಎಲ್ಲರೂ ಎಂದೆನಬೇಡ!
ಸ್ವಾರ್ಥದ ಅಳತೆಗೋಲಿನಿಂದ
ಎಲ್ಲವನು ಅಳೆಯ ಬೇಡ
ಅದು ಸಲ್ಲ ನಿನಗೆ!

ಮಲ್ಲಾಧಿ ಮಲ್ಲರು ಹುಲ್ಲಾಗಿ ಹೋಗಿಹರು
ನಿನ್ನ ಸೊಲ್ಲೆಷ್ಟು?
ಗೆಲ್ಲುವೆನು ಎಲ್ಲವ ಎಂಬ ಜಂಭ ಕೊಚ್ಚಲು ಬೇಡ
ಮನಗಳ ಗೆಲ್ಲಲು ಒಂದು ನಲ್ನುಡಿ ಸಾಕು!

ಈ ನೆಲ, ಈ ನೀರು, ಸುತ್ತಲಿನ ಜೀವ ಜಂತುಗಳಿಗೆಲ್ಲಾ ನಾನೇ ಒಡೆಯ!
ನನಗಾಗಿ ಎಲ್ಲ, ನನಗಾಗಿ ಎಲ್ಲಾ ಎಂಬ ಭ್ರಮೆ ತೊರೆದು ನೋಡು
ಮಿಥ್ಯೆಯದು ತಿಳಿ ನಿನ್ನ ತಲೆಗೆ ಮೂಡಿದ ಕೋಡು!
ಅಹಮಿಕೆಯ ಅಮಲು ಕಳೆದು
ಒಲವಿನ ಘಮಲು ಪಸರಿಸಿ ನೋಡೊಮ್ಮೆ
ಅಂತರಾಳದ ಸೆಲೆಯಿಂದ ಚಿಮ್ಮಿಸು ಒಮ್ಮೆ
ಅಂತಃಕರಣದ ಜಲವ
ಹೊನಲಾಗಿ ಹರಿದು ಭುಗಿಲೆದ್ದ ದ್ವೇಷದ ಅನಲವಾರುವದು

ಮತ್ತೆ ಅರಳುವವು ಕುಸುಮಗಳು
ಉದಯಿಸುವವು ನಂದನಗಳು
ಉದಯಿಸುವವು ನಂದನಗಳು!!

ಹೀಗೆ ಯೋಚನಾ ಲಹರಿ ಸಾಗಿತ್ತು. ಬರೆಯುತ್ತಾ ಹೋದಂತೆ ಇನ್ನೂ ಮುಂದುವರೆಯುತ್ತಿತ್ತೇನೋ? ನಾನೇ ಬ್ರೇಕ್ ಹಾಕಿ ನಿಲ್ಲಿಸಬೇಕಾಯಿತು. ಕವನ ಬರೆಯಲು ಹೊರಟದ್ದಲ್ಲಾ ನಾನು. ನನ್ನ ಮನಸಿನ ಜೊತೆಯ ಸಂವಾದದಿಂದ ಈ ಸಾಲುಗಳು ನನ್ನ ಬೆರಳಿನ ತುದಿಗಳಿಗೆ ಪಯಣಿಸಿ ನನ್ನ ಗಣಕ ಯಂತ್ರ (ಲ್ಯಾಪ್ ಟಾಪ್) ದ ತೆರೆಯ ಮೇಲೆ ಪ್ರಕಟಗೊಂಡವು.

‘ಅಂಕಣ ಬರಯಲು ಹೊರಟು ಇದೇನು ಬರೆಯುತ್ತಿರುವೆ?’ ಎಂದು ಸ್ವಲ್ಪ ಸಮಯದ ಮಟ್ಟಿಗೆ ಅನಿಸಿತಾದರೂ, ಅಂಕಣದ ಆಶಯಕ್ಕೆ ಪೂರಕವಾಗಿರುವದರ ಬಗ್ಗೆ ಮನವರಿಕೆಯಾಯಿತು.
ಜಗತ್ತಿನಲ್ಲಿ ಇರುವ ಎಲ್ಲ ವಸ್ತುಗಳು ತನ್ನ ಉಪಭೋಗಕ್ಕಾಗಿ ಎಂದು ಭಾವಿಸಿ, ಮಾನವ ತನ್ನ ದುರಹಂಕಾರದಿಂದ, ಹಿಂದೆ ಮುಂದೆ ನೋಡದೆ ಎಲ್ಲವನ್ನೂ ತನ್ನ ಐಷಾರಾಮಿಗಾಗಿ ದುರ್ಬಳಕೆ ಮಾಡಿ ನಿಸರ್ಗವನ್ನು ವಿಕೃತಗೊಳಿಸುತ್ತಿರುವದನ್ನು ನಾವು ನಿತ್ಯವೂ ನೋಡುತ್ತಿದ್ದೇವೆ.

ಪರಿಸರದ ಜೊತೆ ಹೊಂದಾಣಿಕೆಯಾಗಲೀ ಅಥವಾ ತನ್ನ ಸಂಗಡ ಸಹಬಾಳ್ವೆ ಮಾಡುತ್ತಿರುವ ಇತರ ಪಶು ಪ್ರಾಣಿಗಳ ಕುರಿತು ದಯಾಭಾವದ ಅಭಾವದಿಂದಾಗಿ, ಇಂದು ಪರಿಸರದದಲ್ಲಿರಬೇಕಾದ ಸಂತುಲನ ಬಿಗಡಾಯಿಸಿದೆ. ಅದರ ಪುನರ್ ನಿರ್ಮಾಣಕ್ಕೆ ಬೇಕಾದ ಮೌಲ್ಯಗಳನ್ನು ಮತ್ತೆ ನಮ್ಮ ಜೀವನಗಳಲ್ಲಿ ಅಳವಡಿಸಬೇಕಾದ ಅವಶ್ಯಕತೆ ಇದೆ. ಇಂತಹ ಸಾಮರಸ್ಯದ ಜೀವನ ನಡೆಸುವ ಬಿಶ್ನೋಯಿ ಜನಾಂಗದವರ ಕುರಿತಾಗಿ, ನಾನು ಈ ಮೋದಲೇ ಪ್ರಸ್ತಾಪಿಸಿದ್ದೇನೆ. ಅವರ ಪ್ರಮುಖ ತತ್ವಗಳಲ್ಲೊಂದಾದ ‘ ಅಮರ್ ರಖಾವೆ ಥತ್’ ಬಗ್ಗೆ ಹೇಳುತ್ತಾ, ಈ ತತ್ವದ ಸಾರವಾದ ಪ್ರಾಣಿ ದಯೆ ವಿಚಾರವನ್ನು ನಿಮ್ಮ ಮುಂದೆ ಇಟ್ಟಿದ್ದೆ. ಈ ಸಂದರ್ಭದಲ್ಲಿ, ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥರು ನಡೆಸುತ್ತಿರುವ ನೀಲಾವರ ಗೋಶಾಲೆಯ ವಿಷಯವನ್ನು ಹಾಗೂ ಶ್ರೀಗಳ ಮತ್ತು ಗೋಶಾಲೆಯ ಆಕಳು- ಕರುಗಳ ನಡುವೆ ಇರುವ ಅನ್ಯೋನ್ಯ ಮಮತೆಯ ಬಂಧದ ವಿಷಯವನ್ನು ನಿಮ್ಮಲ್ಲಿ ಅರಿಕೆ ಮಾಡಿಕೊಂಡಿದ್ದೆ.

ಅದೇ ಎಳೆಯನ್ನು ಹಿಡಿದು ಸಾಗುತ್ತಾ, ಎಲ್ಲರೂ ಕೈ ಬಿಟ್ಟ, ನಿರ್ಲಕ್ಷ್ಯಕ್ಕೆ ಗುರಿಯಾದ ಪಶು- ಪ್ರಾಣಿಗಳಿಗೆ ಆಶ್ರಯ ಒದಗಿಸಿ ಅವುಗಳನ್ನು ಶ್ರದ್ಧೆಯಿಂದ, ಮಮತೆಯಿಂದ ಕಾಣುತ್ತಿರುವ ಮತ್ತೊಬ್ಬ ಮಹಾನ್ ವ್ಯಕ್ತಿಯ ಕುರಿತಾಗಿ ಕೆಲವು ಮಾಹಿತಿಗಳನ್ನು ನಿಮ್ಮ ಜೊತೆಯಲ್ಲಿ ಹಂಚಿಕೊಳ್ಳ ಬಯಸುವೆ. ಅವರೇ ‘ ಆಲ್ ಕ್ರೀಚರ್ಸ ಗ್ರೇಟ್ ಅಂಡ್ ಸ್ಮಾಲ್’ ಸಂಸ್ಥೆಯ ಅಂಜಲಿ ಗೋಪಾಲನ್.

ಆಲ್ ಕ್ರೀಚರ್ಸ ಗ್ರೇಟ್ ಅಂಡ್ ಸ್ಮಾಲ್’ ಸಂಸ್ಥೆಯ ಅಂಜಲಿ ಗೋಪಾಲನ್.

‘ ಎಲ್ಲರಿಗೂ ಕನಸುಗಳಿವೆ. ಅದಕ್ಕೆ ಸಮಯ ನೀಡಿ, ಬೆನ್ನೆಲುಬು ಮುರಿಯುವಂಥ ಕಠಿಣ ಪರಿಶ್ರಮ- ಯತ್ನಗಳಿಂದ ಅವುಗಳನ್ನು ಸಾಧಿಸಲು ಸಾಧ್ಯ, ಆದರೆ ಪಟ್ಟು ಹಿಡಿದು ಮುಂದುವರೆದರೆ, ಅವು ಸಾಕಾರಗೊಳ್ಳುವವು.’- ಮಾನವ ಹಕ್ಕುಗಳು ಹಾಗೂ ಪ್ರಾಣಿ ಹಕ್ಕುಗಳ ಹೋರಾಟದಲ್ಲಿ ಅಗ್ರಗಣ್ಯರಾದ ಅಂಜಲಿ ಗೋಪಾಲನ್ ಅವರು ಈ ಧೃಡ ನಂಬಿಕೆಯನ್ನು ಹೊತ್ತು ತಮ್ಮ ಕನಸಿನ ಸಂಸ್ಥೆಯಾದ
‘ಆಲ್ ಕ್ರೀಚರ್ಸ್ ಗ್ರೇಟ್ ಅಂಡ್ ಸ್ಮಾಲ್’ ಸಂಸ್ಥೆಯನ್ನು ಸ್ಥಾಪಿಸಿ, ತಮ್ಮ ಅಭಿಲಾಷೆಯ ಕಾಣ್ಕೆಗೆ ರೂಪುರೇಷೆಗಳನ್ನು ಒದಗಿಸಿದರು.

ಎಚ್ ಐ ವಿ/ ಏಡ್ಸ್ ಪೀಡಿತರ ಹಾಗೂ ಎಲ್ ಜಿ ಬಿ ಟಿ – ಸಲಿಂಗಕಾಮಿಗಳ ಹಕ್ಕುಗಳ ಹೋರಾಟದ ಮುಂಚೂಣಿಯಲ್ಲಿದ್ದು ಪ್ರವರ್ತಕರಾಗಿ ಶ್ರಮಿಸಿದ ಅವರ ಯೋಗದಾನವನ್ನು ಗುರ್ತಿಸಿ, ‘ ಟೈಮ್ ‘ ಪತ್ರಿಕೆ ೨೦೧೨ ರಲ್ಲಿ ಇವರನ್ನು ಜಗತ್ತಿನ ೧೦೦ ಅತಿ ಪ್ರಭಾವಿ ವ್ಯಕ್ತಿಗಳಲ್ಲೊಬ್ಬರು ಎಂದು ಹೆಸರಿಸಿ ಗೌರವಿಸಿತು. ರಾಜಧಾನಿ ದಿಲ್ಲಿಯಲ್ಲಿ ೧೯೯೪ ರಲ್ಲಿ ಪ್ರಥಮ ಎಚ್ ಐ ವಿ ಆಸ್ಪತ್ರೆ ಸ್ಥಾಪಿಸಿದ ಹೆಗ್ಗಳಿಕೆ ಇವರದು. ನಾಜ್ ಫೌಂಡೇಶನ್( ಇಂಡಿಯಾ) ಟ್ರಸ್ಟ್ ನ ಅಡಿಯಲ್ಲಿ ಇವರು ಎಚ್ ಐ ವಿ ಪೀಡಿತರಿಗೆ ಸೇವೆ ಸಲ್ಲಿಸುತ್ತಿದ್ದು, ರೋಗದ ತಡೆಗೆ ಹಾಗೂ ಮುಂಜಾಗ್ರತೆಗೆ ಕೈಕೊಳ್ಳಬೇಕಾದ ಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಮಹತ್ತರವಾದ ಕಾರ್ಯವನ್ನು ಮಾಡುತ್ತಿದ್ದಾರೆ. ಸಮಾಜಕ್ಕೆ ಅವರು ನೀಡಿದ ಅಪೂರ್ವ ಕೊಡುಗೆಗಾಗಿ ಅವರಿಗೆ ಅನೇಕ ಸನ್ಮಾನಗಳು ಸಂದಿವೆ. ೨೦೦೭ ರಲ್ಲಿ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಮಂತ್ರಾಲಯ, ಭಾರತ ಸರ್ಕಾರ ‘ ಶ್ರೇಷ್ಠ ಮಹಿಳಾ ಸಾಧಕಿ’ ಎಂದು ಸನ್ಮಾನಿಸಿತು. ಅಕ್ಟೋಬರ್ ೨೫ ೨೦೧೩ ರಂದು ಫ್ರಾನ್ಸ್ ಸರ್ಕಾರ ಅಂಜಲಿ ಗೋಪಾಲನ್ ಅವರಿಗೆ ರಾಷ್ಟ್ರದ ಅತಿ ದೊಡ್ಡ ಪುರಸ್ಕಾರವಾದ
‘ Chevalier de la Legion d’ Honneur’ ಇತ್ತು ಗೌರವಿಸಿತು.

ಮತ್ತೊಬ್ಬರ ನೋವಿಗೆ ಸ್ಪಂದಿಸಿ ಅವರ ದುಃಖ ದುಮ್ಮಾನಗಳಿಗೆ ಪರಿಹಾರ ಹುಡುಕಿ ಸಾಂತ್ವನ ನೀಡುವ ಹೃದಯವಂತಿಕೆಯುಳ್ಳ ಸಂವೇದನಾಶೀಲ ವ್ಯಕ್ತಿ ಆಂಜಲಿ ಗೋಪಾಲನ್. ಅವರು ಕೈಕೊಂಡ ಅನೇಕ ಯೋಜನೆಗಳು ಪುರಸ್ಕಾರ- ಸನ್ಮಾನಕ್ಕಾಗಿ ಅಲ್ಲ; ಪರರಿಗೆ ಮಿಡಿಯುವ, ತುಡಿಯುವ ಚೇತನ ಅವರದು. ಬಾಲ್ಯದಿಂದಲೂ ಅವರಿಗೆ ಪ್ರಾಣಿಗಳೆಂದರೆ ಪ್ರೇಮ. ಪಶು – ಪ್ರಾಣಿಗಳ ಮೇಲಿನ ಈ ಒಲವೇ ಅವರಿಗೆ ಪ್ರೇರಕ ಶಕ್ತಿಯಾಯಿತು.

೨೦೧೦ ರಲ್ಲಿ ದಿಲ್ಲಿಯ ಪಶು-ಪ್ರಾಣಿಗಳ ಆಶ್ರಯವೊಂದಕ್ಕೆ ಸ್ವಯಂ-ಸೇವಕರಾಗಿ ತಮ್ಮ ಸೇವೆಯನ್ನು ಸಲ್ಲಿಸಲು ಹೋದಾಗ, ಅವರು ಅಲ್ಲಿರುವ ಪಶು- ಪ್ರಾಣಿಗಳ ದಾರುಣ ಸ್ಥಿತಿಯನ್ನು ಕಂಡು ಬಹಳ ಮರುಗಿದರು. ಎಚ್ ಐ ವಿ ಸೋಂಕಿತ ಮಕ್ಕಳ ಆರೈಕೆಗಾಗಿ ಶ್ರಮಿಸಿದ ಅವರಿಗೆ, ಈ ರೀತಿಯ ನಿರ್ಲಕ್ಷ್ಯ ಸುತರಾಂ ಹಿಡಿಸಲಿಲ್ಲ. ಮಕ್ಕಳಾಗಲಿ, ಪಶು- ಪ್ರಾಣಿಗಳಾಗಲಿ ಪ್ರೀತಿ-ಆರೈಕೆ ಇಲ್ಲದ ವಾತಾವರಣದಲ್ಲಿ ಸಂತೋಷದಿಂದ ಇರಲಾರರು, ಅವರ ಗಾಯಗಳು ಮಾಯಲು ತಕ್ಕ ವಾತಾವರಣ ಬೇಕು ಎಂದು ಮನಗಂಡ ಅವರು, ವಿಕಲಾಂಗ ಹಾಗೂ ರೋಗಗಳಿಂದ ಬಳಲುತ್ತಿರುವ ಪಶು- ಪ್ರಾಣಿಗಳಿಗಾಗಿ ‘ ಏಸಿಜಿಎಸ್- ಆಲ್ ಕ್ರೀಚರ್ಸ್ ಗ್ರೇಟ್ ಅಂಡ್ ಸ್ಮಾಲ್’ ಸಂಸ್ಥೆಯನ್ನು ಹುಟ್ಟು ಹಾಕಿದರು. ಈ ಅಭಯ ಧಾಮದಲ್ಲಿ, ಆಶ್ರಯವಿದ್ದ ಪ್ರಾಣಿಗಳ ಪುನರ್ವಸತಿ ಅಥವಾ ಯಾರಾದರೂ ಮುಂದೆ ಬಂದು ಅವುಗಳ ರಕ್ಷಣೆಯ ಹೊಣೆಯನ್ನು ಹೊತ್ತು ದತ್ತು ಸ್ವೀಕಾರ ಮಾಡುವ ತನಕ, ಅವಗಳಿಗೆ ಆರೈಕೆ ನೀಡುವ ಜವಾಬ್ದಾರಿಯನ್ನು ಈ ಸಂಸ್ಥೆ ವಹಿಸಿತು. ಡಾ. ಜೇಮ್ಸ್ ಹೀರಿಯಟ್, ಪ್ರಖ್ಯಾತ ಬ್ರಿಟಿಷ್ ಪಶು ವೈದ್ಯರು ಬರೆದ ‘ ಆಲ್ ಕ್ರೀಚರ್ಸ ಗ್ರೇಟ್ ಅಂಡ ಸ್ಮಾಲ್’ ಪುಸ್ತಕವೇ ಇವರ ಸಂಸ್ಥೆಗೆ ಪ್ರೇರಣೆ. ಅದಕ್ಕೇ, ಅವರು ತಮ್ಮ ಸಂಸ್ಥೆಗೆ ನಾಮಕರಣ ಮಾಡುವಾಗ ಪುಸ್ತಕದ ಶೀರ್ಷಿಕೆಯನ್ನು ಆಯ್ದುಕೊಂಡದ್ದು.’ ಪಶು-ಪ್ರಾಣಿಗಳನ್ನು ಗುಣ ಪಡಿಸಿ ಅವುಗಳನ್ನು ಪ್ರೀತಿಯಿಂದ ನೋಡಿಕೊಳ್ಳುವದನ್ನು ನಾನು ಇವರ ಪುಸ್ತಕದಿಂದಲೇ ಅರಿತದ್ದು’ ಎಂದು ಅಂಜಲಿ ಗೋಪಾಲನ್ ಅವರು ಹೇಳಿಕೊಳ್ಳುತ್ತಾರೆ.

ಆಶ್ರಯವನ್ನು ಸ್ಥಾಪಿಸಿದ ಮೊದಲಿನ ದಿನಗಳಲ್ಲಿ ಬರೀ ನಾಯಿಗಳೇ ಹೆಚ್ಚಾಗಿ ಇದ್ದವು. ಅದರಲ್ಲೂ ಬೀದಿಗಳಲ್ಲಿ ಅಲೆಯುವ ಬೀದಿ ನಾಯಿಗಳ ಸಂಖ್ಯೆಯೇ ಬಹಳವಾಗಿತ್ತು. ಪಾಶ್ಚಾತ್ಯ ತಳಿಗಳ ನಾಯಿಗಳ ವ್ಯಾಮೋಹವಿರುವ ನಮ್ಮ ದೇಶದಲ್ಲಿ, ಸ್ಥಳೀಯ ತಳಿಯ ನಾಯಿಗಳನ್ನು ಸಾಕುವ ಜನರ ಸಂಖ್ಯೆ ಕಮ್ಮಿ ಇದ್ದು, ಅದನ್ನು ಕಡೆಗಣಿಸುವ ದುಃಸ್ಥಿತಿ ಇದ್ದ ಪರಿಸ್ಥಿತಿಯಲ್ಲಿ, ಅವುಗಳಿಗೆ ಆಶ್ರಯ ಒದಗಿಸುವದು ಬಹಳ ಮುಖ್ಯವಾಗಿತ್ತು. ಅಲ್ಲದೆ, ಇತರ ಪೆಟ್ ಗಳನ್ನು ಸಾಕುವದರಿಂದ ಬೇಸತ್ತು ಅವುಗಳನ್ನು ಬೀದಿ ಪಾಲು ಮಾಡಿದಾಗ, ಅವುಗಳಿಗೂ ತಂಗಲು ಒಂದು ಆಶ್ರಯದ ಅವಶ್ಯಕತೆಯ ಮಹತ್ವವನ್ನು ಅರಿತ ಅವರು, ಈ ಆಶ್ರಯವನ್ನು ನಾಯಿಗಳಿಗಾಗಿಯೇ ಎಂದು ಭಾವಿಸಿ, ಅದರ ಸ್ಥಾಪನೆಯನ್ನು ಕೈಕೊಂಡಿದ್ದರು.

ಈ ಸಂಸ್ಥೆಯ ಬಗ್ಗೆ ಅರಿತ ಜನರು, ಸರ್ಕಸಿನಿಂದ ಪಾರು ಮಾಡಿದ ನಾಯಿಗಳನ್ನು, ಅಂಗ- ವಿಹೀನ ಶುನಕಗಳನ್ನು, ಕ್ಯಾನ್ಸರ್‌ನಿಂದ ಬಳಲುವ ನಾಯಿಗಳನ್ನು ತಂದು ಈ ಆಶ್ರಯಕ್ಕೆ ಒಪ್ಪಿಸುತ್ತಾ ಹೋದರು. ಕ್ರಮೇಣವಾಗಿ ಈ ಆಶ್ರಯಕ್ಕೆ , ಟಗರುಗಳು, ಸರ್ಕಸ್ಸಿನ ಕುದುರೆಗಳು, ರೋಗಗ್ರಸ್ತ ಆಕಳುಗಳು, ಎಮ್ಮೆಗಳು ಒಂಟೆಗಳು, ಕತ್ತೆಗಳು ಎಲ್ಲ ಸೇರ್ಪಡೆ ಆಗುತ್ತ ಹೋದವು. ಅಷ್ಟೇ ಅಲ್ಲ, ಕೋಳಿಗಳು, ಬಾತು ಕೋಳಿಗಳು, ಗಾಯಗೊಂಡ ನವಿಲುಗಳು, ಮೊಲಗಳು, ಗಿಳಿಗಳು, ಅನೇಕ ಪಕ್ಷಿಗಳಿಗೆ ಆಶ್ರಯ ಧಾಮವಾಯಿತು ‘ ಏ ಸಿ ಜಿ ಎಸ್’.

ಶಹರಿನ ಬೀದಿಗಳಲ್ಲಿ ನಾಯಿಗಳ ಮೇಲೆ, ಮಂಗಗಳ ಮೇಲೆ ಕಲ್ಲುಗಳನ್ನು ಎಸೆದು ವಿಕಟ ಹಾಗೂ ವಿಕೃತವಾದ ಖುಷಿಯನ್ನು ಪಡೆಯುವ ಕ್ರೌರ್ಯವನ್ನು ನಾವು ಎಷ್ಟು ಸಲ ನೋಡಿಲ್ಲ! ಅದನ್ನು ನೋಡಿಯೂ ಪ್ರತಿಭಟಿಸದೆ ನಾವು ತೆಪ್ಪಗಿರುವದೂ ಒಂದು ರೀತಿಯ ಹಿಂಸೆಯೇ. ಅದರ ಪಾಪ ಪ್ರಜ್ಞೆಯಿಂದ ನಾವು ಮುಕ್ತರಾಗಲು ಸಾಧ್ಯವಿಲ್ಲ.

ಸರ್ವಭೂತಗಳಲ್ಲಿ ದಯೆ ತೋರಬೇಕು ಎನ್ನುವ ನಮ್ಮ ಹಿರಿಯರ ಉಪದೇಶ, ಉದಾತ್ತವಾದ ಸಂದೇಶ ಬರೀ ವಾಚ್ಯವಾಗಬಾರದು. ಅದು ನಮ್ಮ ಮನಸಿಗೆ ವೇದ್ಯವಾಗಿ ಅಂತರಾಳಕ್ಕೆ ಇಳಿದು ಬೇರೂರಿ ನಮ್ಮೊಳಗೆ ಹಾಸುಹೊಕ್ಕಾಗಿ ಹೋಗಬೇಕು. ಪ್ರಾಣಿಗಳ ಮೇಲಿನ ದಯೆಯನ್ನು ರೂಢಿಸಿಕೊಂಡು ನಾವು ಅದನ್ನು ಅನುಷ್ಠಾನಕ್ಕೆ ತಂದಾಗ ಮಾತ್ರ, ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆಯಿಂದ ಬೀಗಿಕೊಳ್ಳಬಹುದು; ಇಲ್ಲದಿದ್ದರೆ, ಅದು ಬರೀ ಟೊಳ್ಳು ಮಾತಾಗಿ ಉಳಿಯುವದು.

ತಮ್ಮ ಸುತ್ತಲಿನ ಪರಿಸರದಲ್ಲಿರುವ, ಎಲ್ಲರೂ, ಎಲ್ಲ ಪಶು- ಪ್ರಾಣಿಗಳೂ ನೆಮ್ಮದಿಯಿಂದ ಬಾಳಬೇಕು ಎಂದು ಶ್ರಮಿಸುತ್ತಿರುವ, ಹೃದಯವಂತಿಕೆ ಹಾಗೂ ಹೃದಯವೈಶಾಲ್ಯತೆಯನ್ನು ಹೊಂದಿದ ಸಂವೇದನಾಶೀಲ ಚೇತನರಾದ ಅಂಜಲಿ ಗೋಪಾಲನ್ ಅವರು ನಮಗೆಲ್ಲರಿಗೂ ಮಾದರಿಯಾಗಿದ್ದು ದಾರಿ ತೋರುತ್ತಿರುವಾಗ, ಅವರು ತೋರಿದ ಹಾದಿಯಲ್ಲಿ ಕೆಲವು ಹೆಜ್ಜೆಗಳನ್ನು ಹಾಕುವ ಧೃಡ ಸಂಕಲ್ಪವನ್ನು ಎಲ್ಲರೂ ತೆಗೆದುಕೊಳ್ಳೋಣ. ಒಲವೆಂಬ ಶಬ್ದದಲ್ಲಿ ಜೀವ ತುಂಬೋಣ; ಅದು ನಮ್ಮ ಮಂತ್ರವಾಗಲಿ!

ಈ ಆಶಯದೊಂದಿಗೆ ಎಲ್ಲರಿಗೂ ವಂದನೆಗಳು.