ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಚಿತ್ರ ಕೃಪೆ : ದಿ ಹಿಂದು

ಒಲವೆ ನಮ್ಮ ಬದುಕು-೧೪

ಪ್ರಹ್ಲಾದ್ ಜೋಷಿ
ಇತ್ತೀಚಿನ ಬರಹಗಳು: ಪ್ರಹ್ಲಾದ್ ಜೋಷಿ (ಎಲ್ಲವನ್ನು ಓದಿ)

“ಏ ಕೂಚೆ ಎ ನೀಲಾಮ್ಘರ್ ದಿಲ್ಕಷಿ ಕೆ
ಎ ಲುಟ್ ತೆ ಹುವೆ ಕಾರವಾಂ ಜಿಂದಗಿ ಕೆ
ಕಹಾಂ ಕಹಾಂ ಹೈ ಮುವಾಫಿಜ್ ಖುದಿ ಕೆ
ಜಿನ್ಹೆ ನಾಜ್ ಹೈ ಹಿಂದ್ ಪರ್ ವೊ ಕಹಾಂ ಹೈ
ಏ ಪುರ್ ಪೇಚ್ ಗಲಿಯಾಂ ಎ ಬದನಾಮ್ ಬಾಜಾರ್
ಎ ಗುಮನಾಮ್ ರಾಹಿ ಎ ಸಿಕ್ಕೋಂ ಕಿ ಝಂಕಾರ್
ಎ ಇಸ್ಮತ್ ಕೆ ಸೌದೆ ಎ ಸೌದೋಂಪೆ ತಕರಾರ್
ಜಿನ್ಹೆ ನಾಜ್ ಹೈ …
ಎ ಸದಿಯೋಂ ಸೆ ಬೇಖಾಬ್ ಸೆಹಮಿಸಿ ಗಲಿಯಾಂ
ಎ ಮಸಲಿ ಹುಯಿ ಅಧ್ಖಿಲಿ ರ‍್ದ್ ಕಲಿಯಾಂ
ಎ ಬಿಕತಿ ಹುಯಿ ಖೋಖಿಲಿ ರಂಗ ರಲಿ ಯಾಂ
ಜಿನ್ಹೆ ನಾಜ್ ಹೈ ಹಿಂದ್
ಎ ಉಜಲೆ ದರೀಚೋಮೆಂ ಪಾಯಲ್ ಕಿ ಛನ್ ಛನ್
ಥಕೀ ಹಾರಿ ಸಾಂಸೋಂ ಪೆ ತಬಲೆ ಕಿ ಧನ್ ಧನ್
ಏ ಬೇರೂಹ ಕಮರೆ ಮೆ ಖಾಂಸಿ ಕಿ ಠನ್ ಠನ್
ಜಿನ್ಹೆ ನಾಜ್ ಹೈ ಹಿಂದ್ ಪರ್…
ಯಹಾಂ ಪೀರ್ ಭಿ ಆಚುಕೆ ಹೈ ಜವಾಂ ಭಿ ತನೋಮಂದ್ ಬೇಟೆ ಭಿ ಅಬ್ಬಾ ಮಿಯಾ ಭಿ
ಎ ಬೀವಿ ಭಿ ಹೈ ಬೆಹನ್ ಭಿ ಹೈ ಮಾ ಭಿ
ಜಿನ್ಹೆ ನಾಜ್ ಹೈ ಹಿಂದ್ ಪರ್..
ಮದದ್ ಚಾಹತೀ ಹೈ ಎ ಹವ್ವಾ ಕಿ ಬೇಟಿ
ಯಶೋದಾ ಕಿ ಹಮದಿನ್ ಸೆ ರಾಧಾ ಕಿ ಬೇಟಿ ಪೈಗಂಬರ್ ಕಿ ಉಮ್ಮತ್ ಜುಲೈಖಾ ಕಿ ಬೇಟಿ
ಜಿನ್ಹೆ ನಾಜ್ ಹೈ ಹಿಂದ್ ಪರ್..”

ಖ್ಯಾತ ಉರ್ದು ಕವಿ ಸಾಹಿರ್ ಲುಧಿಯಾನ್ವಿ ಅವರು ೧೯೫೭ ರಲ್ಲಿ ಬಿಡುಗಡೆಯಾದ ಗುರು ದತ್ತ್ ಅವರ ‘ ಪ್ಯಾಸಾ’ಚಿತ್ರಕ್ಕಾಗಿ ಬರೆದಿದ್ದು ಈ ಹಾಡು. ಮುಂಬೈ ಶಹರಿನ ಕೆಂಪು ಬೀದಿಗಳಲ್ಲಿ ಚಿತ್ರೀಕರಣ ಗೊಂಡ ಈ ಹಾಡು ಅಲ್ಲಿಯ ವೇಶ್ಯಾವಾಟಿಕೆಗಳ ಕರಾಳ ಸ್ವರೂಪವನ್ನು ಬಿಂಬಿಸುತ್ತಾ, ಪಾತಕಿಗಳು ನಿರ್ಮಾಣ ಮಾಡಿದ ಕತ್ತಲೆ ಕೂಪಗಳಲ್ಲಿ ನರಳುತ್ತಿರುವ ಹೆಂಗಳೆಯರ ದೀನವಾದ ಸ್ಥಿತಿಯನ್ನು ತೋರಿದ ರೀತಿ ನಮ್ಮ ಕರುಳನ್ನು ಹಿಂಡುತ್ತದೆ.

ಅಲ್ಲಿ ತಮ್ಮ ತನುವನ್ನು ಮಾರಿಕೊಳ್ಳುವ ನತದೃಷ್ಟರು, ಈ ನರಕವನ್ನು ಕೋರಿ ಬಂದದ್ದಲ್ಲ. ಅವರನ್ನು ಆ ವೃತ್ತಿಗೆ ತಳ್ಳಲು ಭೂಗತ ಕ್ರೂರ ಶಕ್ತಿಗಳೇ ಕಾರಣ. ಈ ವಿಷಯವನ್ನು ಸಾಹಿರ್ ಲುಧಿಯಾನ್ವಿ ಅವರು ಮನ ಕಲಕುವಂತೆ ಹಾಡಿನಲ್ಲಿ ತಂದಿದ್ದಾರೆ. ಖ್ಯಾತ ನಟ-ನಿರ್ದೇಶಕ ಗುರು ದತ್ತ್ ಅವರ ಮೇಲೆ ಈ ಹಾಡಿನ ಚಿತ್ರೀಕರಣ ಅಷ್ಟೇ ಹೃದಯ ವಿದ್ರಾವಕವಾಗಿದೆ. ಈ ಚಿತ್ರವನ್ನು ನಾನು ನೋಡಿದ ಕೆಲವು ದಿನಗಳವರೆಗೆ ನನಗೆ ನಿದ್ರೆ ಬರದೆ, ಈ ಹಾಡು ನನ್ನನ್ನು ಬಹಳ ಕಾಡಿತು, ಹಾಂಟ್ ಮಾಡಿತು.

ಇಂತಹ ಸೂಕ್ಷ್ಮ ಸಂವೇದನಾಶೀಲ ಸನ್ನಿವೇಶವನ್ನು ಮನಸಿಗೆ ತಾಕುವಂತೆ ಚಿತ್ರೀಕರಿಸಿದ ಖ್ಯಾತ ನಿರ್ದೇಶಕ ಗುರು ದತ್ ಅವರು ನಮ್ಮ ಕನ್ನಡಿಗರು ಎಂಬುದನ್ನು ಇಲ್ಲಿ ಸಾಂದರ್ಭಿಕವಾಗಿ ಹೇಳಬಯಸುತ್ತೇನೆ. ಕವಿ ಸಾಹಿರ್ ಅವರು ಬರೆದ ಉರ್ದು ಸಾಲುಗಳ ಕನ್ನಡದ ಸ್ಥೂಲ ಅನುವಾದವನ್ನು ನಿಮ್ಮ ಮುಂದೆ ಇಡುತ್ತಿರುವೆ.

“ಆಕರ್ಷಣೆಗಳನ್ನು ಹರಾಜು ಮಾಡುವ ಮನೆಗಳು,
ಈ ತಾಣಗಳು
ದೋಚಲ್ಪಡುತ್ತಿರುವ ದೈನಂದಿನ ವಿದ್ಯಮಾನಗಳು
ಎಲ್ಲಿಹರು ಎಲ್ಲಿಹರು ತಿದ್ದಿ ಸರಿಪಡಿಸುವ ರಕ್ಷಕರು
ದೇಶದ ಬಗ್ಗೆ ಪ್ರೀತಿ ಕಳಕಳಿ ಇರುವವರು ಎಲ್ಲಿಹರು
ತಿರುವುಗಳ ಈ ಸಂದಿಗೊಂದಿಗಳು ಈ ಕುಖ್ಯಾತ ಬಾಜಾರು
ಹೆಸರಿರದ ಈ ಹಾದಿಹೋಕರು ಈ ನಾಣ್ಯಗಳ ಝಂಕಾರ
ಈ ಅಸ್ಮಿತೆಗಳ ಮಾರಾಟ, ವ್ಯಾಪಾರದಲಿ ಚೌಕಸಿ-ತಕರಾರು
ಯುಗಗಳಿಂದ ಕನಸು ವಂಚಿತ ಮುದುಡಿದ ಈ ಓಣಿ ಗಳು
ಹೊಸಕಿ ಹಾಕಲಾದ ಅರ್ಧವಿಕಸಿತ ಈ ಮೊಗ್ಗೆಗಳು
ಮಾರಾಟಗೊಳ್ಳುತ್ತಿರುವ ಈ ಪೊಳ್ಳು ಸರಸ ಸಲ್ಲಾಪಗಳು
ಎಲ್ಲಿಹರು ಎಲ್ಲಿಹರು..
ಎಲ್ಲಿಹರು ಎಲ್ಲಿಹರು..

ಹೊಳೆಯುವ ಕಿಟಕಿಗಳಲಿ ಗೆಜ್ಜೆಗಳ ಛನ್ ಛನ್
ದಣಿದು ಸೋತ ಉಸಿರುಗಳ ಲಯಕೆ ತಬಲಾದ ಧನ್ ಧನ್
ಆತ್ಮರಹಿತ ಕೋಣೆಗಳಿಂದ ಹೊಮ್ಮುವ ಕೆಮ್ಮಿನ ಠನ್ ಠನ್
ಎಲ್ಲಿಹರು ಎಲ್ಲಿಹರು..

ಬಂದಿಹರು ಇಲ್ಲಿ ಸಭ್ಯರು ಮತ್ತು ಯುವಕರು
ಮಗನ ಸಮಾನರು, ತಂದೆಯ ವಯೋಮಾನದವರೂ ಬಂದಿಹರು
ಮಡದಿಯೂ, ಅಕ್ಕ ತಂಗಿಯೂ ಮತ್ತು ತಾಯಿಯೂ ಇವಳು
ಎಲ್ಲಿಹರು ಎಲ್ಲಿಹರು..

ಕೋರುತಿರುವಳು ಸಹಾಯ ಈವ್ ನ ಮಗಳು ಯಶೋದೆಯ ವಂಶಜಳು, ರಾಧೆಯ ಪುತ್ರಿ
ಪೈಗಂಬರ್ ರ ಅನುಯಾಯಿ ಜುಲೈಖಾಳ ಪುತ್ರಿ
ಎಲ್ಲಿಹರು ಎಲ್ಲಿಹರು…

ನೆರವಿಗಾಗಿ ಕೂಗುತ್ತಿರುವ ಇಂತಹ ನತದೃಷ್ಟ ಹೆಂಗಳೆಯರನ್ನು ನರಕದ ಕೂಪದಿಂದ ಹೊರತರಲು, ತನ್ನ ಪ್ರಾಣವನ್ನೇ ಪಣವಾಗಿಟ್ಟು , ಸೆಡ್ಡು ಹೊಡೆದು ಸಮಾಜದಲ್ಲಿಯ ಕ್ರೂರ ಶಕ್ತಿಗಳ ಜೊತೆ ಸೆಣೆಸುತ್ತಿರುವ ದಿಟ್ಟ ಮಹಿಳೆ ಸುನಿತಾ ಕೃಷ್ಣನ್ ಅವರ ಕುರಿತಾಗಿ ಇಂದಿನ “ ಅಂಕಣ”.

ತಮ್ಮ ಹದಿನೈದನೆಯ ಹರೆಯದಲ್ಲಿಯೇ ಸಾಮೂಹಿಕ ಅತ್ಯಾಚಾರಕ್ಕೆ ಗುರಿಯಾದ ಸುನಿತಾ ಕೃಷ್ಣನ್ ಅವರು ಅದರಿಂದ ಧೃತಿಗೆಡದೆ, ಸಮಾಜದಲ್ಲಿ ಲೈಂಗಿಕ ದಾಸ್ಯಕ್ಕೆ ಬಲಿಯಾಗಿರುವ ಮಹಿಳೆಯರಿಗಾಗಿ ಹೋರಾಟ ಮಾಡಿದ ರೀತಿ ಅಸಾಮಾನ್ಯವಾದುದು. ‘ ಪ್ರಜ್ವಲಾ’ ಸ್ವಯಂ ಸೇವಾ ಸಂಸ್ಥೆಯ ಸಹ ಸಂಸ್ಥಾಪಕರಾಗಿ, ೧೯೯೬ ರಿಂದ ವೇಶ್ಯಾ ವೃತ್ತಿಗೆ ಬಲಿಯಾದ ಮಹಿಳೆಯರನ್ನು ಹಾಗೂ ಕಳ್ಳ ಸಾಗಣೆ ಮಾಡಿ ಲೈಂಗಿಕ ದಾಸ್ಯಕ್ಕೆ ತಳ್ಳಲ್ಬಟ್ಟ ಚಿಕ್ಕ ಬಾಲೆಯರನ್ನು ಕ್ರೂರ ಶಕ್ತಿಗಳಿಂದ ಬಿಡಿಸಿ ವಿಮೋಚನೆ ಮಾಡಿ ಅವರಿಗೆ ಪುನರ್ವಸತಿ ನೀಡಿ ಮುಖ್ಯ ಧಾರೆಗೆ ತರುವ ಉದ್ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ವೇಶ್ಯಾ ವೃತ್ತಿಗೆ ತಡೆ ಹಾಕುವದು, ಮಹಿಳೆಯರಿಗೆ ರಕ್ಷಣೆ ಒದಗಿಸುವದು, ಬಲವಂತವಾಗಿ ವೇಶ್ಯಾ ವೃತ್ತಿಯಲ್ಲಿ ನೂಕಲ್ಪಟ್ಟವರನ್ನು ಅದರಿಂದ ಪಾರು ಮಾಡಿ ಉಳಿಸುವದು ಮತ್ತು ಅಂಥವರಿಗೆ ಪುನರ್ವಸತಿ ನೀಡಿ ಸಮಾಜದಲ್ಲಿ ಅವರನ್ನು ಬೆರೆಯುವಂತೆ ಮಾಡುವದೇ ‘ ಪ್ರಜ್ವಲಾ’ ಸಂಸ್ಥೆಯ ಮಹೋದ್ದೇಶಗಳು.

ಇಲ್ಲಿಯ ತನಕ ಈ ಸಂಸ್ಥೆ ಸುನಿತಾ ಕೃಷ್ಣನ್ ಅವರ ನೇತೃತ್ವದಲ್ಲಿ ಸುಮಾರು ೧೮೦೦೦ ಮಹಿಳೆಯರನ್ನು ಮತ್ತು ಎಷ್ಟೋ ಜನ ಬಾಲಕಿಯರನ್ನು ಈ ಹೇಯವಾದ ವೃತ್ತಿಯ ದವಡೆಯಿಂದ ಹೊರತಂದು ಅವರಿಗೆ ನೆಮ್ಮದಿಯ ಹಾಗೂ ಗೌರವಯುತವಾದ ಜೀವನವನ್ನು ಪ್ರದಾನ ಮಾಡುವದರಲ್ಲಿ ಸಫಲವಾಗಿದೆ. ಆದರೆ, ಸುನಿತಾ ಅವರು ಆಯ್ಕೆ ಮಾಡಿದ್ದ ದಾರಿ ಸುಗಮವಾಗಿರಲಿಲ್ಲ, ಅಡ್ಡಿ ಆತಂಕಗಳಿಂದ ಕೂಡಿದ ಮುಳ್ಳಿನ ಪಥವಾಗಿತ್ತು. ವಿಮೋಚನಾ ಕಾರ್ಯಾಚರಣೆಯಲ್ಲಿ ತೊಡಗಿದಾಗ ಅನೇಕ ಸಲ ಇವರ ಮೇಲೆ ನಡೆದ ಗೂಂಡಾಗಳ ದಾಳಿಯನ್ನು ಎದುರಿಸಬೇಕಾಯಿತು. ಈ ದಾಳಿಗಳಿಂದಾಗಿ ಅವರ ಶ್ರವಣೇಂದ್ರಿಯಕ್ಕೆ ಪೆಟ್ಟು ಬಿದ್ದು ಅವರ ಶ್ರವಣ ಶಕ್ತಿ ಕುಂಠಿತವಾಗಿದೆ. ಆದರೂ ಧೃತಿಗೆಡದೆ ತಮ್ಮ ಗುರಿಸಾಧನೆಯ ಪಥದಲ್ಲಿ ಅವಿಶ್ರಾಂತವಾಗಿ ಶ್ರಮಿಸುತ್ತಲೇ ಇದ್ದಾರೆ. ಇದಕ್ಕೆ ಅವರ ಪತಿ ರಾಜೇಶ್ ಅವರ ಪೂರ್ಣ ಬೆಂಬಲ ಹಾಗೂ ಬ್ರದರ್ ಜೋಸ್ ವೆಟ್ಟಿಕ್ಯಾಟಿಲ್ ಅವರ ಸಹಯೋಗವಿದೆ.

‘ಕೆಬಿಸಿ ಕರ್ಮವೀರ’ ವಿಶೇಷದಲ್ಲಿ ಪಾಲ್ಗೊಂಡಾಗ, ಅಮಿತಾಭ್ ಬಚ್ಚನ್ ಅವರ ಸಮ್ಮುಖದಲ್ಲಿ ಸುನಿತಾ ಅವರು ಹಂಚಿಕೊಂಡ ಅನುಭವವೊಂದು ಕೇಳಿದಾಗ ಮೈಮೇಲೆ ಮುಳ್ಳು ನಿಂತು, ಕೇಳುತ್ತಾ ಇದ್ದಂತೆ ಕಂಗಳಲ್ಲಿ ನೀರು ತುಂಬಿತು.
ಪ್ರಜ್ವಲಾ ಸಂಸ್ಥೆಯ ಸ್ವಯಂ ಸೇವಕರು ಹಾಗೂ ಪೋಲೀಸು ಪಡೆಯ ಜೊತೆ ವಿಮೋಚನಾ ಕಾರ್ಯಾಚರಣೆಯಲ್ಲಿ ತೊಡಗಿದಾಗ, ಇದಕ್ಕೆ ಪ್ರತಿಕೂಲವಾಗಿ ಕೆಲಸ ಮಾಡುವ ಶಕ್ತಿಗಳು ಅದನ್ನು ವಿಫಲಗೊಳಿಸಲು ಏನೆಲ್ಲಾ ಹೇಯ ಕೃತ್ಯಗಳನ್ನು ಮಾಡುತ್ತಾರೆ ಎಂಬ ಸಂದರ್ಭದಲ್ಲಿ ಈ ಘಟನೆಯನ್ನು ವಿವರಿಸಿದರು. ನರಕ ತುಲ್ಯವಾದ ಇಂತಹ ಸ್ಥಳಗಳಲ್ಲಿ, ಇವರು ಕೋಣೆಗಳನ್ನು ಹೊಕ್ಕು, ಮಹಿಳೆಯರನ್ನು ಹೊರತರುತ್ತಿರುವಾಗ, ಕರೆಂಟ್ ತೆಗೆದು ಕತ್ತಲು ಮಾಡಿ ದಾಳಿ ಮಾಡುವದು ಸರ್ವೇ ಸಾಮಾನ್ಯ. ಅಂತಹ ಪರಿಸ್ಥಿತಿಯನ್ನೂ ಲೆಕ್ಕಿಸದೆ ಮುಂದೆ ಸಾಗಿ ಕ್ರೌರ್ಯಕ್ಕೆ ತುತ್ತಾದವರನ್ನು ಬಿಡಿಸುಕೊಳ್ಳುವಾಗ , ನರಕದ ಕತ್ತಲು ಕೂಪದಿಂದ ಬೇಗನೆ ಹೊರ ಬರಲು ಎಲ್ಲರೂ ಸಹಕರಿಸುವದರ ಬಗ್ಗೆ ಹೇಳುತ್ತಾ, ನಡೆದ ಒಂದು ಕಾರ್ಯಾಚರಣೆಯಲ್ಲಿ ಒಬ್ಬ ಮಹಿಳೆ ಹೊರಬರಲು ನಿರಾಕರಿಸಿದಾಗ ಅವರಿಗೆ ಆಶ್ಚರ್ಯವಾಗಿ, ಅದಕ್ಕೆ ಕಾರಣವನ್ನು ಆಕೆಯಿಂದಲೇ ವಿಚಾರಿಸಿದಾಗ, ತಿಳಿದು ಬಂದದ್ದು ಏನೆಂದರೆ, ದುಷ್ಕರ್ಮಿಗಳು ಆ ಹೆಂಗಸಿನ ಹಸುಗೂಸನ್ನು ಮಾಳಿಗೆಯ ಮೇಲಿನ ನೀರಿನ ಟ್ಯಾಂಕನಲ್ಲಿ ಹಾಕಿದ್ದರು ಎಂದು. ಈ ಘಟನೆ ಕೇಳುತ್ತಿದ್ದ ಎಲ್ಲ ಪ್ರೇಕ್ಷಕರ ಕಣ್ಣುಗಳು ತುಂಬಿ ಬಂದವು ಅಷ್ಟೇ ಅಲ್ಲ ಕಾರ್ಯಕ್ರಮ ನಿರ್ವಹಿಸುತ್ತಿರುವ ಅಮಿತಾಭ್ ಬಚ್ಚನ್ ಅವರ ಕಣ್ಣುಗಳೂ ತೇವಗೊಂಡವು. ಆಮೇಲೆ, ಆ ಹಸುಳೆಯನ್ನು ಟ್ಯಾಂಕನಿಂದ ತೆಗೆದು ರಕ್ಷಿಸಿ, ಕೂಸಿನ ತಾಯಿಯನ್ನು ಹೊರತಂದ ಪ್ರಸಂಗವನ್ನು ಸುನಿತಾ ಅವರು ವಿವರಿಸಿದಾಗ ಎಲ್ಲರಿಗೂ ನಿರಾಳವಾಯಿತು.

ಇವೆಲ್ಲಕ್ಕೂ ಕಂಗೆಡದೆ, ತಮ್ಮ ಗುರಿ ಸಾಧನೆಯ ಪಥದಲ್ಲಿ ವಿಚಲಿತಗೊಳ್ಳದೆ ಮುನ್ನಡೆದಿದ್ದಾರೆ ಸುನಿತಾ ಅವರು. ಹೈದರಾಬಾದಿನಿಂದ ೬೫ ಕಿ ಮಿ ದೂರದಲ್ಲಿ ವಿಮೋಚನೆಗೊಂಡ ಮಹಿಳೆಯರಿಗಾಗಿ ಒಂದು ಆಶ್ರಮವನ್ನು ಸ್ಥಾಪಿಸಿದ್ದಾರೆ. ಅದರಲ್ಲಿ ಸುಮಾರು ೬೦೦ ಜನರಿಗೆ ವಸತಿ, ಎಚ್‌ಐವಿ ಸೋಂಕಿತರಿಗೆ ಚಿಕಿತ್ಸಾಲಯ ಮತ್ತು ಮಕ್ಕಳಿಗೆ ಶಾಲೆಯ ಅನುಕೂಲತೆಗಳೂ ಇವೆ. ಇಷ್ಟೇ ಅಲ್ಲದೆ, ಜನಾಸಕ್ತಿಯ ವ್ಯಾಜ್ಯವೊಂದನ್ನು ಹಾಕಿದ ಫಲ ಸ್ವರೂಪವಾಗಿ ಇಂತಹ ನೊಂದ ಮಹಿಳೆಯರ ರಕ್ಷಣೆಗಾಗಿ ಕಾನೂನಿನ ರೂಪು ರೇಷೆಗಳು ತಯಾರುಗೊಳ್ಳುತ್ತಿವೆ. ನಮ್ಮ ಸುತ್ತಲೂ ದುಷ್ಕರ್ಮಿಗಳು ಕ್ರೌರ್ಯದ ದ್ವೀಪಗಳನ್ನು ಸೃಷ್ಟಿಸುತ್ತಿರುವಾಗ, ಒಮ್ಮೊಮ್ಮೆ ‘ ಒಲವು’ ನಮ್ಮ ನಡುವಿನಿಂದ ಮರೆಯಾಗಿ ಹೋಗುತ್ತಿದ್ದಂತೆ ಕಂಡರೆ ಆಶ್ಚರ್ಯವಿಲ್ಲ. ಆದರೆ, ಸಮಾಜದ ಕುರಿತು ಅತೀವವಾದ ಒಲವನ್ನು ಹೊಂದಿ ಸಮಾಜದ ಏಳಿಗೆಗಾಗಿ ಶ್ರಮಿಸುವ ಸುನಿತಾ ಕೃಷ್ಣನ್ ಅಂಥ ವ್ಯಕ್ತಿಗಳು ನಮ್ಮ ನಡುವೆ ಇರುವ ತನಕ ಗೆಲವು ಒಲವಿನದೇ. ಇಂತಹ ವೀರ ವನಿತೆಯರು ಸಾವಿರವಾಗಲಿ! ಅವರ ಆಶಯಗಳು ಸಾವಿರದಾಗಲಿ ಎಂದು ಹಾರೈಸುತ್ತ,..

ವಂದನೆಗಳು