ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪ್ರೊ.ಸಿದ್ದು ಯಾಪಲಪರವಿ

ಯೋಗ-ಧ್ಯಾನ-ಪ್ರಾಣಾಯಾಮ ಹೀಗೆ ಹಲವು ಬಗೆಯಲ್ಲಿ ಗೌರವಿಸಲ್ಪಡುವ ಸೂತ್ರಗಳನ್ನು ದಯಪಾಲಿಸಿದವನು‌ ಮಹರ್ಷಿ ಪತಂಜಲಿ‌ ಎಂಬುದು ಗತಕಾಲದ ನಂಬಿಗೆ.

ಪತಂಜಲಿ ಯೋಗ ಸೂತ್ರಗಳ ಜಾಡ ಹಿಡಿದ ಋಷಿ,ಮುನಿಗಳು ನಾಥ ಪರಂಪರೆಯ ಸಾಧಕರು ತಮ್ಮ ಸಾಧನೆಯ ಅನುಭವದ ಆಧಾರದ ಮೇಲೆ ಹೊಸ ಹೊಸ ಸೂತ್ರಗಳನ್ನು, ತಂತ್ರಗಳನ್ನು ಬೋಧನೆ ಮಾಡಿ ಹೊಸ ಪರಂಪರೆಗಳನ್ನು ಹುಟ್ಟು ಹಾಕಿದ್ದಾರೆ.
ಅದೇ ಒಂದು ಪರಂಪರೆ ಅಥವಾ ಕಲ್ಟ್ ಆಗಿ ಬೆಳೆದು ಅದನ್ನು ಪಾಲಿಸುವ ಅನುಯಾಯಿಗಳು ಹುಟ್ಟಿಕೊಳ್ಳುವುದು ಅಷ್ಟೇ ಸಹಜ.

ಬುದ್ಧನ ವಿಪಸನ, ಮಹಾ ಅವತಾರ ಬಾಬಾ ಅವರ‌ ಕ್ರಿಯಾ ಯೋಗ, ಸುದರ್ಶನ ಕ್ರಿಯಾ, ಕುಂಡಲಿನಿ, ಕಪಾಲಬಾತಿ‌ ಹೀಗೆ ಅನೇಕರು ತಮ್ಮ ಪರಂಪರೆಗೆ ಅನುಗುಣವಾಗಿ ಮನುಷ್ಯನ ಜೀವ ಚೈತನ್ಯವಾಗಿರುವ ಉಸಿರಾಟದ ಲಯಗಾರಿಕೆಯ ತಂತ್ರಗಳನ್ನೇ ಹೇಳಿಕೊಡುತ್ತಾರೆ.

ಮನುಷ್ಯನ ಜೀವಚೈತನ್ಯ, ಪ್ರಾಣವೂ ಆಗಿರುವ ಉಸಿರಿನ ವಿವಿಧ ಬಗೆ ಆಟವೇ ಪ್ರಾಣಾಯಾಮ.

ವೈಯಕ್ತಿಕವಾಗಿ ನಾನು ಯಾವುದೇ ರೀತಿಯ ಯೋಗ ಶಿಕ್ಷಣ ಪಡೆಯದೇ ಮೊದಲ ಬಾರಿ ಕಪಾಲಭಾತಿಯನ್ನಷ್ಟೇ ಮಾಡಿ ಹೊಟ್ಟೆ ಕರಗಿಸಿಕೊಳ್ಳುವಲ್ಲಿ ಯಶಸ್ವಿಯಾದದ್ದು ಇತಿಹಾಸ.

ನಂತರ ಅನಿರೀಕ್ಷಿತವಾಗಿ ದಾಳಿ ಮಾಡಿದ ಸಿಂಕೋಪಾದಿಂದ ಸತ್ತು ಬದುಕಿದೆ.
ಆ ಸಾವಿನಾನುಭವಕ್ಕೆ ಕಪಾಲಭಾತಿ ಕ್ರಮ ತಪ್ಪಾಗಿರಬಹುದು ಎಂದು ಕೆಲವರು ಹೆದರಿಸಿದ್ದರಿಂದ ಅದನ್ನು ಬಿಟ್ಟು ಮತ್ತೆ ಊದಿಕೊಂಡು ಬಿಟ್ಟೆ.

ನನಗೆ ಸರಿಕಂಡ ರೀತಿಯಲ್ಲಿ ಓಶೋ ಧ್ಯಾನ ಸೂತ್ರ ಓದಿ ಧ್ಯಾನ ಮಾಡುತ್ತ ಬಂದೆ.

2013 ರಲ್ಲಿ ಪೂಜ್ಯ ಶ್ರೀ.ಎಂ. ಅವರ ದರ್ಶನದ ಪ್ರತಿಫಲವಾಗಿ ಕೆಲವು ಕಟ್ಟುಪಾಡುಗಳನ್ನು ಹೇರಿಕೊಂಡೆ.
ಮಾಂಸ ಮತ್ತು ಮದ್ಯ ಸೇವನೆಯನ್ನು ಸಂಪೂರ್ಣ ನಿಲ್ಲಿಸಲು ಶ್ರೀ.ಎಂ. ಅವರ ಕ್ರಿಯಾ ದೀಕ್ಷೆಯೇ ಪ್ರಬಲ ಕಾರಣ.

ಗೆಳೆಯರನೇಕರಿಗೆ ಒಮ್ಮೆಲೇ ನಾನು ಬದಲಾದ ಕಾರಣ ಹೊಳೆಯಲೇ ಇಲ್ಲ.
ಅನಾರೋಗ್ಯ ಮತ್ತು ಸಾವಿಗೆ ಹೆದರಿ ನಿಲ್ಲಿಸಿರಬಹುದು ಅಂದುಕೊಂಡರೇನೋ?
ಯಾವುದಕ್ಕೂ ಉತ್ತರಿಸುವ ಗೋಜಿಗೆ ಹೋಗಲಿಲ್ಲ; ಅದರ ಅಗತ್ಯ ಕಂಡು ಬರಲಿಲ್ಲ.

ಗುರುವಿಗೆ ಕೊಟ್ಟ ಮಾತು ಉಳಿಸಿಕೊಂಡ ಬದ್ಧತೆಯಿತ್ತಾದರೂ, ರೆಗ್ಯೂಲರ್ ಆಗಿ ಕ್ರಿಯಾದಲ್ಲಿ ತೊಡಗಲು ವಿಫಲನಾದೆ.
ಧ್ಯಾನಸ್ಥ ಸ್ಥಿತಿಯಲ್ಲಿ ಕಣ್ಣು ಮುಚ್ಚಿಕೊಂಡು ಕ್ಷಮೆ ಕೇಳುತ್ತಿದ್ದೆ.
ನಂತರ ಬಂಗಾರಮಕ್ಕಿ ಪೂಜ್ಯ ಶ್ರೀ ಮಾರುತಿ ಗುರೂಜಿ ಸಾಧನೆಯ ಅನುಸಂಧಾನದ ಅನುಭೂತಿ ಪಡೆದೆ.

ಇತರರನ್ನು ಓಲೈಸಲು, ಅನಾವಶ್ಯಕ ಸಮಯ ಹಾಳಾದರೂ, ನಾನು ನನಗಾಗಿ ಒಂದು ತಾಸು ಸಮಯ ಮೀಸಲಿಡಲು ವಿಫಲನಾದೆ. ಇದೇ ತಪ್ಪನ್ನು ನನ್ನ ಹಾಗೆ ಬಹುಪಾಲು ಜನ ಮಾಡುತ್ತಾರೆ.

‘ಒಂದು ತಾಸು ಅದು ಹೇಗೆ ಧ್ಯಾನ ? ಅಬ್ಬಾ ತುಂಬಾ ಹೊತ್ತು!’ ಎಂಬ ಕಳವಳಕೆ ತೆರೆ ಎಳೆಯುವ ಸಂಕಲ್ಪ ಮಾಡಿ ಮೈಸೂರಿನ ಓಶೊ ಸನ್ನಿಧಿಗೆ ಹೋಗುವ ಗಟ್ಟಿ ನಿರ್ಧಾರ ಮಾಡಿದೆ.

ಇದೊಂದು ಅಪರೂಪದ ದಿವ್ಯಾನುಭವ. ಸುದೈವದ ಮಧುರ ಕ್ಷಣಗಳ ಸಮ್ಮೋಹನ.
ನಾಲ್ಕು ದಿನ ಸಾಧಕ ಸಹೋದರ,ಗುರು‌ ವಿದ್ಯಾಧರ ವೇಣುಗೋಪಾಲ ಅವರ ನಿರರ್ಗಳ ಜ್ಞಾನ ಪ್ರವಾಹದಲಿ‌ ತೇಲಿ ಹೋದೆ.

ಸುಪರ್ ಫಿಶಿಯಲ್ ವಿಚಾರಧಾರೆಗೆ ತಡೆ ಬಿದ್ದ ಅಮರ ಕ್ಷಣಗಳಿಗೆ ಸಾಕ್ಷಿಯಾದೆ.
ಎಲ್ಲ ಪ್ರಕಾರಗಳ ಟೆಕ್ನಿಕ್ ಅನುಭವಿಸಿ ಖುಷಿ ಪಟ್ಟೆ. ಕೊನೆಗೆ ನಿರಂತರ ಅನುಸಂಧಾನಕೆ ಸರ್ವಸಾರ ಅದ್ಭುತ ಪ್ಯಾಕೇಜ್ ಅನಿಸಿತು.

ವಿದ್ಯಾಧರ ಅವರ ಜೊತೆಗೆ ಒಂದೆರಡು ಸುತ್ತಿನ ಚರ್ಚೆಯ ನಂತರ ಸಾಧನೆ ಗಂಭೀರವಾಗಿ ಆರಂಭಿಸಿದೆ.
ನನ್ನ ಸುದೈವ,ಯೋಗಾ ಯೋಗ ಲಾಕ್ ಡೌನ್ ವರವಾಗಿ ಬಹಳಷ್ಟು ಸಮಯ ದೊರಕಿತು.

ಹೊರಗೆ ಹೇಗೆ ಇರಬೇಕೆಂಬ ಕಲೆ ಕರಗತವಾಗಿ ಲೈಫ್ ಗುರು ಅನಿಸಿಕೊಂಡಿದ್ದೆ. ಆದರೆ ನನ್ನ ಒಳಗೆ, ಮನಸಿನ ಆತ್ಮದ ಒಳಗೆ ಹೇಗೆ ಸಂಚಾರ ಮಾಡಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳುವ ಮಹದವಕಾಶ ದೊರಕಿದ್ದು ನನ್ನ ಪುಣ್ಯ.

ನಮ್ಮ ಜೊತೆಗೆ ನಾವು ಹೇಗೆ ಏಕಾಂತವಾಗಿ ಬದುಕಬೇಕು ಎಂದು ಗೊತ್ತಿರದವರಿಗೆ ಲಾಕ್ ಡೌನ್ ನರಕವಾಗಿ ಹೋಯಿತು.
ಇಡೀ ಜಗತ್ತಿಗೆ ಹೊಸ ಸತ್ಯ ಹೊಳೆಯಿತು, ಏಕಾಂತವಾಗಿ ಬದುಕುವ ಕಲೆಯನ್ನು ಹೇಳಿ ಕೊಡಬೇಕಿತ್ತು ಎಂಬ ಸತ್ಯ ಗೊತ್ತಾಗಿ ಧ್ಯಾನ,ಯೋಗ,ಸಂಗೀತ ಮತ್ತು ಸಾಹಿತ್ಯ-ಸಂಸ್ಕೃತಿಗೆ ಮಹತ್ವ ದೊರಕಿತು.

ಬದುಕಿನ ಅರ್ಧ ಹಾದಿ ಕ್ರಮಿಸಿದ ನನಗೆ ಸರ್ವಸಾರ ಲಭ್ಯವಾಗಿ ಬಿಟ್ಟಿತ್ತು.
ಸಂಪೂರ್ಣವಾಗಿ ಒಳ ಲೋಕ ಪ್ರವೇಶಿಸುವ ಹಾದಿ ಸಫಲವಾಯಿತು. ಸಾಲದ್ದಕ್ಕೆ ಮರೆತು ಹೋಗಿದ್ದ ಕ್ರಿಯಾ ಯೋಗ ನೆನಪಾಗಲು ಸರ್ವಸಾರ ಕಾರಣವಾಯಿತು.

ಸರ್ವಸಾರ ಏನಿದೆ ಇಲ್ಲಿ: ‘ಎಲ್ಲವೂ ಇದೆ’.

ಪತಂಜಲಿ ಬೋಧಿಸಿರುವ ಕೆಲವು ಸೂತ್ರಗಳಿಗೆ ಹೊಸ ಸ್ವರೂಪ ನೀಡಿ ಸಂಗೀತ ಸಂಯೋಜನೆ ಮಾಡಲಾಗಿದೆ.

ಅಯ್ಯೋ ಒಂದು ತಾಸು ಧ್ಯಾನ ಮಾಡಬೇಕಾ? ಎಂಬ ಆತಂಕ ದೂರಾಗುತ್ತದೆ. ಸರ್ವಸಾರ ನಿರಾಯಾಸವಾಗಿ ಮುಗಿದಾಗ ಒಂದು ತಾಸು ಇಪ್ಪತ್ತು ನಿಮಿಷ ಮುಗಿದಿರುತ್ತದೆ.

ಹಿಂದೆ ನನಗೆ ಅರ್ಧ ತಾಸು ಕುಳಿತುಕೊಳ್ಳುವುದು ಭಾರ ಎನಿಸುತ್ತಿತ್ತು. ಆದರೆ ಈಗ ಎರಡು ತಾಸು ಪಟ್ಟು ಹಿಡಿದು ಒಳ ಲೋಕ ಹೊಕ್ಕಾಗ ಹೊರ ಬರುವುದೇ ಬೇಡ ಎನಿಸುತ್ತದೆ.

ದೇಹ ಮತ್ತು ಮನಸಿನ ಮೇಲೆ ಪ್ರಾಣ ವಾಯು ನಿಧಾನವಾಗಿ ಪಸರಿಸಿ ಬಿಡುತ್ತದೆ. ಈಗ ಉಸಿರಾಟದ ಲಯ ಸಂಪೂರ್ಣ ಬದಲಾಗಿ ಹೋಗಿದೆ.

ಸಹನೆ,ಸಂಯಮ,ಧೈರ್ಯ,ಆತ್ಮವಿಶ್ವಾಸ ಹೆಚ್ಚಾಗುತ್ತ ಸಾಗಿದೆ. ಪ್ರೇಮ,ಓದು,ಬರಹ ಮತ್ತು ಸಂಬಂಧಗಳ ಗ್ರಹಿಕೆಯಲ್ಲಿ ಸ್ಪಷ್ಟತೆ ಲಭಿಸಿದೆ.

ಮುಖ್ಯವಾಗಿ ನನ್ನ ಆಳ,ಅಗಲ,ತಾಕತ್ತು,ದೌರ್ಬಲ್ಯ,ಮನದ ಕೊಳೆ ಸ್ಪಷ್ಟವಾಗಿ ಕಾಣಿಸಲಾರಂಭಿಸಿದೆ.
ನಾನು ಜಾಣ,ಗಂಡು ಇತ್ಯಾದಿ ಭ್ರಮೆಗಳು ಕಳಚಿ ಅಲ್ಲಮ ಹೇಳಿದ ಬಯಲು,ಶೂನ್ಯ ಕಂಗೊಳಿಸಲಾರಂಭಿಸಿದೆ.
ಓಶೋ ಮಾತುಗಳ ಆಳ ಅರ್ಥವಾಗುತ್ತಿದೆ.

ಕೃಷ್ಣ ತೋರಿದ ಬೆಳಕು,ಬುದ್ಧನ ಒಳ ಜಗತ್ತು, ಅಲ್ಲಮನ ತಂತ್ರ ಶಕ್ತಿ, ಅಕ್ಕನ ವೈರಾಗ್ಯ,ಬಸವಣ್ಣನ ಸಾತ್ವಿಕ ಅಲೌಕಿಕತೆಯ ಲೌಕಿಕ, ಓಶೋ ಬೋಧಿಸಿದ ಆದ್ಯಾತ್ಮಿಕ ಸಮಗ್ರತೆ ಹೀಗೆ ಎಲ್ಲ ದಾರ್ಶನಿಕರ ಮಾತುಗಳ ಮರ್ಮ ಅರ್ಥವಾಗಲು ಸರ್ವಸಾರ ನೆರವಾಗಿದೆ.
ಹೊರಗು,ಒಳಗೂ ಅರಿಯುವ ಮೂಲ ಧ್ಯಾನದ ಹಂತಗಳ ಸಂಗಮವೇ ಸರ್ವಸಾರ.‌

ಬಸ್ತ್ರಿಕಾ,ಕಪಾಲಭಾತಿ,ಮೂಲಬಂಧ, ಉಜಾಯಾ,ಅನುಲೋಮ ವಿಲೋಮ ಒಟ್ಟು ಮೊದಲ ಐದು ಹಂತಗಳು ಮುಗಿಯುವುದರೊಳಗೆ ದೇಹದ ಕೊಳೆ ಹೊರ ಹೋಗಿ ಮನಸು,ದೇಹ ಹಗುರಾಗಿ ಒಳಗಣ್ಣು ತೆರೆದು ಕೊಂಡಿರುತ್ತದೆ.
ಮುಂದಿನ ಹಂತದ ಬ್ರಹ್ಮಿಣಿ,ಓಂಕಾರ,ಶಿವಾಸನ ಮುಗಿಸಿ ಸಮಾಧಿ ಸ್ಥಿತಿ ತಲುಪಿದಾಗ ಹೊಸ ಜಗತ್ತಿನಲ್ಲಿ ಪ್ರವೇಶ ಪಡೆದಿರುತ್ತೇವೆ.

ಇಡೀ ದಿನ ಉಸಿರಿನ ಲಯಗಾರಿಕೆ ಪ್ರಭುತ್ವ ಪಡೆದಿರುತ್ತದೆ. ‌
ಸಮಯದ ಪರಿವು ಇಲ್ಲದಂತೆ ಮೈ ಮರೆಯಲು ಸಂಗೀತ ಸಂಯೋಜನೆ ಪ್ರಮುಖ ಕಾರಣ.

ಗಾನ-ಧ್ಯಾನ-ಪ್ರೇಮ ಹೇಗೆ ಪರಸ್ಪರ ಪೂರಕ ಎಂಬ ಸತ್ಯ ಓಶೋ ಸರ್ವಸಾರದ ಮೂಲಕ ಹೆಚ್ಚು ಸ್ಪಷ್ಟವಾಗಿದೆ.

ಸಮರ್ಥವಾಗಿ ಪ್ರೇಮಿಸುವೆ,ಧೈರ್ಯದಿಂದ ಬದುಕುವೆ,ಆಳವಾಗಿ ಓದುವೆ,ಆಲಿಸುವೆ, ಅಷ್ಟೇ ಸ್ಪಷ್ಟವಾಗಿ ಬರೆಯುವೆ ಎಂಬ ಸದ್ಭಾವ ಹೆಚ್ಚಾಗುತ್ತ ಸಾಗಿದೆ.

ವರ್ತಮಾನದ ಅಪಾಯಕಾರಿ ವೈರಸ್ ಕೊರೋನಾ ಹೋಗಬಹುದು, ಮುಂದೆ ಇಂತಹ ಸಾವಿರ ಭಯಾನಕ ವೈರಸ್ಸುಗಳು ಹುಟ್ಟಿಕೊಳ್ಳಬಹುದು, ಅವುಗಳನ್ನು ಸಮರ್ಥವಾಗಿ ಎದುರಿಸಲು ನಮ್ಮ ಆತ್ಮಬಲ ಗಟ್ಟಿಯಾಗಬೇಕು. ದೇಹದ ಇಮ್ಯುನಿಟಿ ಹೆಚ್ಚಾಗಲೇಬೇಕು.

ಯೋಗ,ಧ್ಯಾನ ನಮ್ಮ ಬದುಕಿನ ಅವಿಭಾಜ್ಯ ಅಂಗ ಎನ್ನುವುದನ್ನು ಸಮಾಜ,ಸರಕಾರ ಕಲಿಸುವ ಅನಿವಾರ್ಯತೆ ಮುಂದೆ ಬರುತ್ತದೆ.

ಸಮಾಜದೊಂದಿಗೆ ಬದುಕುವುದನ್ನು ನಮ್ಮ ಶಿಕ್ಷಣ ಕಲಿಸಿದೆ, ನಮ್ಮ ಜೊತೆಗೆ ಹೇಗೆ ಬದುಕಬೇಕು ಎಂಬುದನ್ನು ಧ್ಯಾನ ಕಲಿಸುತ್ತದೆ.

ಅಧ್ಯಾತ್ಮ ಎಂದರೆ ಮಂಕು ಬೂದಿ ಎರಚುವ ಢೋಂಗಿ ಬಾಬಾಗಳ ಸಮೂಹ ಸನ್ನಿಯ ವ್ಯಾಪಾರ ಅಲ್ಲ. ನಿಸ್ವಾರ್ಥ ಗುರು-ಶಿಷ್ಯ ಪರಂಪರೆಯ ಕಾಣಿಕೆ.

ಅದರ ಮರ್ಮವನ್ನು ಓಶೋ ಸ್ಪಷ್ಟವಾಗಿ ಬೋಧಿಸುವುದಲ್ಲದೆ ಹತ್ತಾರು ಧ್ಯಾನ ಸೂತ್ರಗಳ ಹೇಳಿ ಕೊಟ್ಟಿದ್ದಾನೆ.
ಅವುಗಳಲ್ಲಿ ಸರ್ವಸಾರ ಎಲ್ಲಾ ತಂತ್ರಗಳಿಗೆ ಮೂಲಾಧಾರ.ತಳಹದಿ.ಅಡಿಪಾಯ.

ಜಗತ್ತಿನ ಎಲ್ಲ ಸಾಧಕರು ಇದೇ ಉಸಿರಿನ ಲಯಗಾರಿಕೆ ಇಟ್ಟುಕೊಂಡು, ವಿವಿಧ ಸೂತ್ರಗಳನ್ನು ತಮ್ಮ ಅನುಭವದ ಆಧಾರದ ಮೇಲೆ ರೂಪಿಸಿರುತ್ತಾರೆ.
ಅಧ್ಯಾತ್ಮ‌‌ ಚಿಂತಕರ ನೆರವಿನಿಂದ ನಮ್ಮ ಶಿಕ್ಷಣ ಪಠ್ಯಕ್ರಮದಲ್ಲಿ ಧ್ಯಾನ ಸೂತ್ರ ಅಳವಡಿಸುವ ಪಾಠವನ್ನು ಕೊರೋನಾ ಕಲಿಸಿದೆ.ಜಗತ್ತಿನ ಎಲ್ಲ ಸಾಧಕರು ಇದೇ ಉಸಿರಿನ ಲಯಗಾರಿಕೆ ಇಟ್ಟುಕೊಂಡು, ವಿವಿಧ ಸೂತ್ರಗಳನ್ನು ತಮ್ಮ ಅನುಭವದ ಆಧಾರದ ಮೇಲೆ ರೂಪಿಸಿರುತ್ತಾರೆ.

ಅಧ್ಯಾತ್ಮ‌‌ ಚಿಂತಕರ ನೆರವಿನಿಂದ ನಮ್ಮ ಶಿಕ್ಷಣ ಪಠ್ಯಕ್ರಮದಲ್ಲಿ ಧ್ಯಾನ ಸೂತ್ರ ಅಳವಡಿಸುವ ಪಾಠವನ್ನು ಕೊರೋನಾ ಕಲಿಸಿದೆ.

ಲೇಖಕರು: ಪ್ರೊ. ಸಿದ್ದು ಯಾಪಲಪರವಿ