- ಸಿದ್ಧಾಂತಗಳು ಬೆಳಕನ್ನು ಬಂಧಿಸಬಲ್ಲವೇ? - ಸೆಪ್ಟೆಂಬರ್ 4, 2022
- ಪಾತರಗಿತ್ತಿ ಪರಿಣಾಮ! - ಆಗಸ್ಟ್ 21, 2022
- ದೇಹ ಮತ್ತು ಮನಸ್ಸು ನಡುವೆ ಸಂಕ ಉಸಿರು - ಆಗಸ್ಟ್ 10, 2022
.
ಇರುವೆ ನಡಿಗೆ – 9
” ಚಂದ್ರಶೇಖರ್ ಅವರ ಕತೆ ಚೆನ್ನಾಗಿತ್ತು, ಮಾದೇವ ಮಾಮಾ, ಆದರೆ ಎಷ್ಟೊಂದು ಕಷ್ಟ ಪಟ್ಟರು ಅಲ್ವಾ..”
” ಹೌದು ಪುಟ್ಟು, ಸಾಧನೆ ಮಾಡಬೇಕಾದರೆ ಅಷ್ಟೇ ಪ್ರಯತ್ನ ಅಗತ್ಯ. ಅದರ ದಾರಿಯಲ್ಲಿ ಹಲವು ಬಾರಿ ಸಾಕಷ್ಟು ನೋವು, ನಷ್ಟ, ಅವಮಾನ ಅನುಭವಿಸಬೇಕಾದೀತು. ಎದೆಗುಂದದೆ ಪ್ರಯತ್ನ ಮಾಡುವುದು ಮುಖ್ಯ. ನಿನಗೂ ಶಾಲೆಯಲ್ಲಿ ಆಗಾಗ ಅವಮಾನ, ನೋವು ಆಗಬಹುದು. ಹಾಗಾದಾಗಲೆಲ್ಲ, ಚಂದ್ರಶೇಖರ್ ಅವರಂಥ ಸಾಧಕರ ಕತೆ ನೆನಪಿಸಿಕೊಂಡು ಮುನ್ನುಗ್ಗು, ಆಯ್ತಾ..
ಹಾಂ..ನಾನು ಈ ಕತೆ ಹೇಳಿದ್ದು ಚಂದ್ರ ಅವರ ಪ್ರಯತ್ನದ ಬಗ್ಗೆ ಹೇಳಲು ಮಾತ್ರ ಅಲ್ಲ. ನಕ್ಷತ್ರ ಎಂಬ ವ್ಯವಸ್ಥೆ, ಎರಡು ವಿರುದ್ಧ ಸಮಬಲಗಳ ಟಗ್ ಆಫ್ ವಾರ್ ನ ಪರಿಣಾಮವಾಗಿ ಒಂದು ಸಮತೋಲನ ಹೊಂದಿ, ಮಿಲಿಯಾಂತರ ವರ್ಷಗಳ ಕಾಲ ಸ್ಟೇಬಲ್ ಆಗಿದ್ದರೂ, ಪುನಃ ಯಾವುದೇ ಒಂದು ಬಲದ ಮೇಲುಗೈಯಿಂದ ಅಸಮತೋಲನ ಹೊಂದುತ್ತದೆ. ಇದೊಂದು ಟ್ರಾನ್ಸಿಷನ್ ಪಿರಿಯಡ್. ಒಳಗೊಳಗೇ ಬಲಾಬಲಗಳು ಅಡ್ಜಸ್ಟ್ ಆಗಿ ಪುನಃ ಹೊಸ ಸಮತೋಲನದತ್ತ ಹೊರಳಿ ಒಂದು ಹೊಸ ಅವಸ್ಥೆಯನ್ನು ಅನುಭವಿಸುತ್ತಾ ಬದುಕುತ್ತೆ. ಇಂತಹಾ ಹಲವಾರು ಹಂತಗಳು ಪುನರಾವರ್ತಿಸುವುದು ಪ್ರಪಂಚದ ವಿದ್ಯಮಾನಗಳಲ್ಲಿ ಸಾಮಾನ್ಯ ಅಂತ ನಕ್ಷತ್ರದ ಹುಟ್ಟು ಮತ್ತು ವಿಕಾಸದಿಂದ ತಿಳಿದೆವು ಅಲ್ವಾ.
ಅನು ಪುಟ್ಟು, ಈಗ ನಾವು ನಮ್ಮ ದೇಹದಲ್ಲಿ ಇರುವ ನೂರಾರು ಸಮತೋಲಿತ ವ್ಯವಸ್ಥೆಗಳ ಬಗ್ಗೆ ತಿಳಿಯೋಣವೇ?. ನಿಂಗೆ ಮಾಮನದ್ದೇ ಒಂದು ಕತೆ ಹೇಳುವೆ, ಕೇಳು”
” ಆಯ್ತು ಮಾಮಾ. ಮನುಷ್ಯ ದೇಹ ವ್ಯವಸ್ಥೆಯ ಬಗ್ಗೆ ನಂಗೆ ತುಂಬಾ ಕುತೂಹಲ. ಜೀವಶಾಸ್ತ್ರ ಎಷ್ಟೊಂದು ಸಂಕೀರ್ಣ ಅಲ್ವಾ. ಆಯ್ತು, ಈಗ ನಿನ್ನ ಕತೆ ಹೇಳು ಮಾಮಾ..”
” ಹ್ಞಾ ಅನುಪುಟ್ಟೂ,
ಸುಮಾರು ಇಪ್ಪತ್ತೈದು ವರ್ಷಗಳ ಹಿಂದಿನ ಕತೆಯಿದು.
ಹಿಮಾಲಯದ ತಪ್ಪಲಿನ ಹೃಷೀಕೇಶ ಎಂಬ ಜಾಗವದು.
ಗಂಗಾನದಿಯ ಮಂಜುಳ ನಿನಾದ, ಆ ರಾತ್ರೆಯ ಮೌನ ಹಿನ್ನೆಲೆಯಲ್ಲಿ ತೊಟ್ಟಿಲಲ್ಲಿ ಮಲಗಿದ ಮಗುವಿಗೆ ಹಾಡುವ ಲಲ್ಲಭಿಯಂತೆ ಮಮತಾಮಯವಾಗಿತ್ತು. ಕೋಣೆಯಲ್ಲಿ ಒಂದು ದೀಪ, ಹೊರಗೆ ಫೆಬ್ರವರಿ ತಿಂಗಳ ಮರಗಟ್ಟುವ ಛಳಿ, ಸದಾಧ್ಯಾನಸ್ಥರಾಗಿರುತ್ತಿದ್ದ ಅವರ ಕೋಣೆ ಯಾಕೋ ಬೆಚ್ಚಗಿತ್ತು.ನಾನು ಅವರ ಮುಂದೆ ಕುಳಿತಿದ್ದೆ..
” Son!, I don’t have any miracle to solve your problem “
“ಮಗೂ, ನಿನ್ನ ಸಮಸ್ಯೆಗೆ ಪವಾಡಸದೃಶ ಪರಿಹಾರ ನನ್ನಲ್ಲಿಲ್ಲ, ನಿನ್ನ ಸಮಸ್ಯೆಯ ಮೂಲದಲ್ಲಿ ಸೈಕೋಸೊಮ್ಯಾಟಿಕ್ ಅಂಶ ಇರುವಂತಿದೆ.
ಆದರೆ ನಿನಗೆ ನಾನು ಧ್ಯಾನ ದೀಕ್ಷೆ ಕೊಡಬಹುದು. ನೀನು ಸ್ಟೀರಾಯ್ಡ್ ಮದ್ದು ತಗೊಳ್ಳೋದರಿಂದ ನಿನ್ನ ದೇಹ ಮತ್ತು ಮನಸ್ಸಿಗೆ ಎನರ್ಜೈಸಿಂಗ್ ( ಶಕ್ತಿದಾಯಕ) ಪ್ರಾಣಾಯಾಮ ಅಗತ್ಯ. ಹಾಗಾಗಿ ಕಪಾಲಭಾತಿ ಪ್ರಾಣಾಯಾಮ ಮಾಡಬೇಕು. ನನ್ನ ಶಿಷ್ಯರು ನಿನಗೆ ಪ್ರಾಣಾಯಾಮ ಕಲಿಸುವರು. ಅದರ ಜತೆಗೇ ನಾಡಿಶೋಧನ ಪ್ರಾಣಾಯಾಮ ಮಾಡಬೇಕು. ಧ್ಯಾನವೂ ಅಷ್ಟೇ, ನಿನ್ನ ಮನಸ್ಸು ಸ್ಟಿರಾಯ್ಡ್ ಸೇವನೆಯಿಂದ ಸಾಕಷ್ಟು ಡಿಪ್ರೆಶನ್ ಅನುಭವಿಸೋದ್ರಿಂದ, ಸುದೀರ್ಘ ಧ್ಯಾನ, ನಿನಗೆ ಹಿತವಲ್ಲ. ನೀನು ದಿನದಲ್ಲಿ ಹಲವಾರು ಬಾರಿ ಐದೈದೇ ನಿಮಿಷ ಧ್ಯಾನ ಮಾಡು. ನಾಳೆ ಬೆಳಗ್ಗೆ ೩ ಗಂಟೆಗೆ ಧ್ಯಾನದೀಕ್ಷೆ ಕೊಡುವೆ, ನಿನಗೆ “
ಯುನಿವರ್ಸಿಟಿ ಆಫ್ ಮಿನಸೋಟದ ಪ್ರೊಫೆಸರ್ ಉಷಾರ್ಬುದ್ಧ ಆರ್ಯ ಅವರು ಸನ್ಯಾಸ ದೀಕ್ಷೆ ಪಡೆದು ಸ್ವಾಮಿ ವೇದಭಾರತಿ ಎಂಬ ಯೋಗಿಯಾಗಿದ್ದರು. ಅವರ ಆಶ್ರಮದಲ್ಲಿ ನಾನು ಹೋಗಲು ಕಾರಣ ನನ್ನ ಸುದೀರ್ಘ ಜೀವಹಿಂಡಿದ ಅನಾರೋಗ್ಯ.
ದೇಹದಲ್ಲಿ ಯಾವುದೇ ರೋಗದ ವೈರಸ್, ಬ್ಯಾಕ್ಟೀರಿಯಾ ಇತ್ಯಾದಿ ಸೋಂಕು ಆದರೆ ಅದನ್ನು ವಿರೋಧಿಸಲು, ದೇಹದೊಳಗೆ ಬಿಳಿರಕ್ತಕಣಗಳು ಇರುತ್ತವೆ. ಸಾಧಾರಣವಾಗಿ ಅವುಗಳ ಸಂಖ್ಯೆ ಒಂದು ಮೈಕ್ರೋಲೀಟರ್ ರಕ್ತದಲ್ಲಿ ಆರರಿಂದ ಹತ್ತು ಸಾವಿರದ ವರೆಗೆ ಇರುತ್ತವೆ. ಬಿಳಿರಕ್ತಕಣಗಳು ಎಂದರೆ ನಮ್ಮ ದೇಹದ ಆರ್ಮಿ ಇದ್ದಹಾಗೆ. ಬಿಳಿರಕ್ತಕಣಗಳಲ್ಲಿ ಹಲವು ವಿಧಗಳಿವೆ.
ಯಾವುದೇ ಇನ್ಫೆಕ್ಷನ್ ಆದಾಗ, ಈ ಬಿಳಿರಕ್ತಕಣಗಳ ಸಂಖ್ಯೆ ರಕ್ತದಲ್ಲಿ ಹೆಚ್ಚಾಗಿ, ಅವುಗಳು ಸೋಂಕು ಉಂಟುಮಾಡಿದ ವೈರಿ ಜೀವಕಣವನ್ನು ಯುದ್ಧ ಮಾಡಿ ಕೊಲ್ಲುತ್ತವೆ.
ಈ ಬಿಳಿರಕ್ತಕಣಗಳು ಹೊರಗಿನ ವೈರಿ ಜೀವಕಣಗಳನ್ನು ಕೊಲ್ಲುವ ಬದಲು, ನಮ್ಮದೇ ದೇಹದ ಜೀವಕೋಶಗಳನ್ನು ಕೊಲ್ಲತೊಡಗಿದರೆ?. ಅದೊಂದು ದೊಡ್ಡ ಅಸಮತೋಲನ. ಈ ರೋಗಕ್ಕೆ ಅಟೋ ಇಮ್ಯೂನ್ ಡಿಸಾರ್ಡರ್ ಅಂತ ಹೆಸರು.
ನನಗೂ ಇದ್ದ ಸಮಸ್ಯೆ ಅದೇ. ಅದಕ್ಕೆ ಸಾಧಾರಣವಾಗಿ ಇಮ್ಯೂನೋ ಸಪ್ರೆಸೆಂಟ್, ಅಂದರೆ ಬಿಳಿರಕ್ತಕಣಗಳ ಶಕ್ತಿ ಕಡಿಮೆ ಮಾಡುವ ಔಷಧಿಯನ್ನು ಕೊಡುತ್ತಾರೆ. ಆ ಔಷಧಿ ಸ್ಟಿರಾಯ್ಡ್. ೧೯೯೭ ರಿಂದ ೨೦೦೧ ರ ವರೆಗೆ ನಾಲ್ಕು ವರ್ಷ ಸಾಕಷ್ಟು ಈ ಔಷಧಿ ಸೇವಿಸಿದ್ದೆ. ಈ ಔಷಧಿಯನ್ನು ನಿಲ್ಲಿಸುವ ಹಾಗೇ ಇರಲಿಲ್ಲ. ಲೈಫ್ ಲಾಂಗ್ ಸೇವಿಸಬೇಕಾದ ಔಷಧಿ ಅದು. ಅಂದರೆ, ಈ ರೋಗಕ್ಕೆ ಅಲೋಪತಿ ಔಷಧೀಯ ಪದ್ಧತಿಯಲ್ಲಿ ಗುಣಪಡಿಸುವ ಮದ್ದೇ ಇಲ್ಲ. ರೋಗವನ್ನು ಮ್ಯಾನೇಜ್ ಮಾಡುವುದೇ ಶುಶ್ರೂಷೆಯ ವಿಧಾನ.
ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ( AIIMS) ನ ಡಾಕ್ಟರ್ ನನಗೆ ೨೦೦೦ ನೇ ಇಸವಿಯಲ್ಲಿ ಹೇಳಿದ್ದರು, ಈ ರೋಗದಿಂದ ನಾನು ಹೆಚ್ಚೆಂದರೆ ನಾಲ್ಕೈದು ವರ್ಷ ಜೀವಿಸಬಹುದು ಅಂತ!.
ಹಡಗು, ವಿಮಾನ, ರಾಕೆಟ್ಟು, ಉಪಗ್ರಹ ಇತ್ಯಾದಿಗಳನ್ನು ಸಂಶೋಧನೆ ಮಾಡಿ ಚಂದಿರನ ಅಂಗಳದಲ್ಲಿ ಇಳಿದ ಮಾನವನಿಗೆ, ತನ್ನ ದೇಹದೊಳಗೆ ನಡೆಯುವ ಕ್ರಿಯೆಗಳ ಸಂಪೂರ್ಣ ಅರಿವೇ ಇಲ್ಲ ಎಂಬುದು, ವಿಜ್ಞಾನಿಯಾದ ನನಗೆ ಅರ್ಥವಾಗಲು ನಮ್ನ ರೋಗ ಸಹಾಯ ಮಾಡಿತು.
ಬದುಕಿನ ಕೊನೇ ದಿನಗಳು ಹತ್ತಿರಬರುವ ಸಾಧ್ಯತೆ ಅರಿವಿಗೆ ಬಂದಾಗ, ಕಲಿತ ಭೌತಶಾಸ್ತ್ರ, ರಸಾಯನಶಾಸ್ತ್ರ, ಇತ್ಯಾದಿಗಳು ಎಷ್ಟು ಲಿಮಿಟೆಡ್ ಎಂಬುದೂ ತಿಳಿಯಹತ್ತುತ್ತೆ.
ಜಗತ್ತಿನ ಎಲ್ಲಾ ವಿದ್ಯಮಾನಗಳನ್ನು ಭೌತಶಾಸ್ತ್ರವೇ ನಿಯಂತ್ರಿಸುತ್ತದೆ ಎಂಬ ಹುಂಬ ವೈಜ್ಞಾನಿಕ ಮನೋಭಾವದಿಂದ ನಿಧಾನವಾಗಿ ಹೊರಬರಲು ಬದುಕು ಕಲಿಸ ತೊಡಗಿತ್ತು.
ಇವಿಷ್ಟು ನನ್ನನ್ನು ಗಂಗಾನದೀತಟದಲ್ಲಿದ್ದ ‘ಸಾಧನಾ ಮಂದಿರ್’ ಎಂಬ ಆಶ್ರಮಕ್ಕೆ ಕರೆದೊಯ್ದದ್ದು.
ಪ್ರಾಣಾಯಾಮ, ಧ್ಯಾನ ಎರಡೂ ಕಲಿತೆ. ಸುಮಾರು ಆರು ತಿಂಗಳುಗಳಲ್ಲಿ, ನಾನು ಸಂಪೂರ್ಣ ಗುಣಮುಖನಾಗಿ, ಸ್ಟಿರಾಯ್ಡ್ ಔಷಧಿಯ ಕಬಂಧಬಾಹುವಿನಿಂದ ಹೊರಬಂದಿದ್ದೆ. ಎಂದೋ ಸಾಯಬೇಕಾಗಿದ್ದ ನಾನು ೨೫ ವರ್ಷಗಳ ನಂತರ ಇಂದು ಈ ಕತೆ ನಿನಗೆ ಹೇಳುತ್ತಿರುವೆ, ಅನು !.
ನಮ್ಮ ದೇಹದೊಳಗೆ ನೂರಾರು ಕ್ರಿಯೆಗಳು ನಡೆಯುತ್ತಲೇ ಇರುತ್ತವೆ. ಪ್ರತೀ ಕ್ರಿಯೆಯೂ ಸಮತೋಲನದಲ್ಲಿರಬೇಕು. ಯಾವದೇ ಕ್ರಿಯೆ ಅಸಮತೋಲನವಾದರೆ ಅದನ್ನು ರೋಗವಾಗಿ ಪರಿಗಣಿಸಲ್ಪಡುತ್ತದೆ.
ಉದಾಹರಣೆಗೆ, ನಮ್ಮ ದೇಹದಲ್ಲಿ ರಕ್ತದೊತ್ತಡ ಅಸಮತೋಲನವಾದರೆ ಅದು ಬಿ.ಪಿ. ರೋಗವಾಗುತ್ತೆ.
ರಕ್ತದಲ್ಲಿ ಸಕ್ಕರೆಯ ಸಮತೋಲನ ತಪ್ಪಿದರೆ ಅದನ್ನು ಡಯಾಬಿಟಿಸ್ ಅನ್ತಾರೆ.
ಥೈರಾಕ್ಸಿನ್ ನ ಪ್ರಣಾಮ ಏರುಪೇರಾದರೆ ಅದು ಥೈರಾಯ್ಡ್ ಸಮಸ್ಯೆ.
ಮೇಲೆ ವಿವರಿಸಿದಂತೆ, ಅಟೋ ಇಮ್ಯೂನ್ ಡಿಸಾರ್ಡರ್ ನಲ್ಲಿ ನೂರಾರು ವಿಧಗಳಿವೆ.
ಈ ಎಲ್ಲಾ ಅಸಮತೋಲನ ಜನ್ಯ ರೋಗಗಳಿಗೆ ಪೂರ್ಣ ಪರಿಹಾರ ಇಲ್ಲ.
ಈ ಅಸಮತೋಲನಕ್ಕೆ ಮೂಲ ಕಾರಣ?
ಅದೂ ನಮಗೆ ಪೂರ್ತಿಯಾಗಿ ತಿಳಿದಿಲ್ಲ.
ಯಾವುದೇ ವ್ಯವಸ್ಥೆಯ ಕಂಟ್ರೋಲ್ ಸಿಸ್ಟಮ್ ನಲ್ಲಿ ‘ ಫೀಡ್ ಬ್ಯಾಕ್ ಲೂಪ್’ ಇರಲೇ ಬೇಕು.
ಉದಾಹರಣೆಗೆ ನೀನು ಒಂದು ಉತ್ತಮ ಹಾಡನ್ನು ಹಾಡುತ್ತೀ ಅಂದುಕೋ. ಅದು ಕೇಳುಗರಿಗೆ ಮೈಕ್ ಮೂಲಕ ಸರಿಯಾಗಿ ಕೇಳಿಸುತ್ತದೆಯೇ?. ಅವರ ಫೀಡ್ಬ್ಯಾಕ್ ಕೇಳಿ ನೀನು ಮೈಕ್ ಸೌಂಡ್ ಅಡ್ಜಸ್ಟ್ ಮಾಡಬಹುದು. ಹಾಡುವಾಗ, ನಿನ್ನ ಸಹಪಾಠಿಗಳು, ಸಂಗೀತ ಗುರುಗಳು, ಹಾಡು ಮುಗಿದ ನಂತರ ” ಇಲ್ಲಿ ಭಾವ ಸರಿಯಾಗಿ ಬರಲಿಲ್ಲ, ಇಲ್ಲಿ ತಪ್ಪು ಸ್ವರ ಬಂದಿದೆ, ಇಲ್ಲಿ ಬೆಟರ್ ಟಚ್ ಕೊಡಬಹುದಿತ್ತು. ” ಇತ್ಯಾದಿ ಫೀಡ್ಬ್ಯಾಕ್ ಕೊಡುತ್ತಾರೆ. ಆ ಫೀಡ್ಬ್ಯಾಕ್ ಅಳವಡಿಸಿ ನೀನು ಹಾಡುವ ವಿಧಾನವನ್ನು ಸರಿಪಡಿಸುತ್ತೀ, ಅಲ್ವಾ ಪುಟ್ಟೂ.
ಹಾಗೆಯೇ ವ್ಯವಸ್ಥೆಯಲ್ಲಿ ಸಮತೋಲನ ಪಡೆಯಲು ಫೀಡ್ಬ್ಯಾಕ್ ಲೂಪ್ ಅತ್ಯಂತ ಅಗತ್ಯ.
ಈಗ ದೇಹದ ವ್ಯವಸ್ಥೆಯೊಳಗೆ ಕಂಟ್ರೋಲ್ ಸಿಸ್ಟಮ್ ಎಲ್ಲಿದೆ?
ಫೀಡ್ಬ್ಯಾಕ್ ಲೂಪ್ ಹೇಗೆ ಕೆಲಸ ಮಾಡುತ್ತೆ?. ಇದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡೋಣ. ಈ ವಿಷಯದಲ್ಲಿ ಆಳವಾದ ಅಧ್ಯಯನ ನಡೆದದ್ದು ಯೋಗವಿಜ್ಞಾನದಲ್ಲಿ ಎಂಬುದು ಅತ್ಯಂತ ಮುಖ್ಯ.
ಈ ಬಗ್ಗೆ ಮುಂದಿನ ವಾರ ಸ್ವಲ್ಪ ಸ್ವಲ್ಪವೇ ಮಾತಾಡೋಣ ಆಯ್ತಾ ಅನೂ!..”
“ಆಯ್ತು ಮಾಮಾ. ಅಂತೂ ನಕ್ಷತ್ರದ ಹಾಗೆಯೇ ದೇಹದೊಳಗಿನ ವ್ಯವಸ್ಥೆಯಲ್ಲಿಯೂ ಬಲಾಬಲಗಳು ಕೆಲಸ ಮಾಡುವಾಗ ಅವುಗಳ ನಡುವೆ ಸಮತೋಲನ ಅಗತ್ಯ ಅಂತಾಯಿತು. ಆರೋಗ್ಯ ಚೆನ್ನಾಗಿದೆ ಅಂತ ನಾವು ಹೇಳುವಾಗ ವ್ಯವಸ್ಥೆ ಸಮತೋಲನದಲ್ಲಿದೆ ಅಂತ ಹೇಳಿದ ಹಾಗೆ ಆಯ್ತು ಅಲ್ವಾ ಮಾಮಾ. ಇರಲಿ! ಮಾತಾಡಿ ದಿಣಿದಿರೇ?.. ಈಗ ಈ ಬಾಳೆಹಣ್ಣು ತಿನ್ನು! ಇದರಲ್ಲಿ ಇರುವ ‘ಹಣ್ಣು ಸಕ್ಕರೆ’ ನಿಮ್ಮ ದಣಿವನ್ನು ಕಡಿಮೆ ಮಾಡೀತು. ಹಾಗೆಯೇ ನಮ್ಮ ಸ್ನಾಯುಗಳ ಸಂಕೋಚನ ಮತ್ತು ವ್ಯಾಕೋಚನಕ್ಕೆ ಅಗತ್ಯವಾದ ಪೊಟಾಸಿಯಂ ಕೂಡಾ ಇದರಲ್ಲಿದೆ ಮಾದೇವ ಮಾಮಾ.”
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್