- ಮರುಭೂಮಿಯ ಮಾನಿನಿ - ಅಕ್ಟೋಬರ್ 31, 2021
- ಅಂತಿಮ ವಿದಾಯದ ಅಲಂಕಾರ - ಅಕ್ಟೋಬರ್ 17, 2021
- ವಯಸ್ಸು ಮತ್ತದರ ಸುಕ್ಕುಗಳು : ಆಮೋರ್ - ಅಕ್ಟೋಬರ್ 2, 2021
ಒಂದು ಊರಿನಲ್ಲಿ ಝಿಕ್ರಿಲ್ ಮಾತಾಡುವವರು ಕೇವಲ ಇಬ್ಬರೇ ಉಳಿದುಕೊಂಡಿದ್ದಾರೆಂದು ತಿಳಿದಾಗ ಅಲ್ಲಿಗೆ ಒಬ್ಬ ಯುವಕ ಈ ಭಾಷೆಯನ್ನು ದಾಖಲಿಸಲು ಬರುವುದರೊಂದಿಗೆ ಕತೆ ನಿಧಾನವಾಗಿ ತೆರೆದುಕೊಳ್ಳುತ್ತದೆ. ಆದರೆ, ಅಲ್ಲಿ ಬಂದಾಗ ತಿಳಿಯುವ ವಿಷಯ ಇಬ್ಬರಲ್ಲ ಮೂವರಿದ್ದಾರೆಂದು; ಆದರೆ, ಮೂರನೆಯವ ಮತ್ತು ಎರಡನೆಯವನ ಮಧ್ಯ ಮಾತುಕತೆಗಳಾಗದೇ ಐವತ್ತು ವರ್ಷಗಳಾಗಿವೆ..
ಪೂರ್ತಿ ಓದಿ…
ಬಹುತೇಕವಾಗಿ ನಾವೆಲ್ಲರೂ ನಂಬಿರುವುದು ಅಥವಾ ಹೇಳುತ್ತಾ ಬಂದಿರುವುದು ಭಾಷೆ ಇರುವುದು ಸಂವಹನಕ್ಕಾಗಿ ಅಂತಲೇ; ಆದರೂ, ಅಲ್ಲಲ್ಲಿ ಕೆಲವರು ಭಾಷೆಯ ಕುರಿತಾಗಿನ ಹಲವು ವಿಶಿಷ್ಟ ಸಂಗತಿಗಳನ್ನು ತೆರೆದಿಡುತ್ತಲೇ ಬಂದಿದ್ದಾರೆ. ಹಾಗಾಗಿ ಭಾಷೆ ಇರುವುದು ಬರೀ ಸಂವಹನಕ್ಕಾಗಿ ಅಷ್ಟೇ ಅಲ್ಲ ಅನ್ನುವುದು ಈ ಹೊಸ ದಿಕ್ಕಿನ ಯೋಚನೆಗಳ ಸಾರಾಂಶ ಅನ್ನಬಹುದು. ಭಾಷೆ ಅಂದಾಗ ನಮಗೆ ಮೊದಲಿಗೆ ನೆನಪಾಗೋದು ನಮ್ಮ ನಮ್ಮ ಮಾತೃ ಭಾಷೆ ಅಥವಾ ನಮ್ಮ ನಮ್ಮ ಆಪ್ತ ಭಾಷೆ. ಜಗತ್ತಿನಲ್ಲಿ ಯಾವ ಭಾಷೆ ಶ್ರೇಷ್ಠ, ಯಾವ ಭಾಷೆ ಪ್ರಾಚೀನ ಅಂತಲೂ ಆಗಾಗ ವಾದಗಳು ನಡೆಯುತ್ತಲೇ ಇರುತ್ತವೆ. ಇದು ತೀರಾ ಸೂಕ್ಷ್ಮ ವಿಷಯವಾಗಿದ್ದು, ಅಧ್ಯಯನದ ದೃಷ್ಟಿಯಿಂದ ಯಾವುದೇ ಭಾಷೆಯ ಆಯಸ್ಸು, ಅದರ ಮೂಲ ಇತ್ಯಾದಿಗಳನ್ನು ಹುಡುಕುವುದು, ಅದರ ಕುರಿತಾಗಿ ಸಂಶೋಧನೆಗಳನ್ನು ನಡೆಸುವುದು ನಾಗರಿಕತೆಯ ಹಾಗೂ ಬೇರೆ ಬೇರೆ ಸಂಸ್ಕೃತಿಯ ಬೇರುಗಳನ್ನು ಹುಡುಕಲಿಕ್ಕೆ ನೆರವಾಗುವುದರಲ್ಲಿ ಸಂದೇಹವಿಲ್ಲ. ಪ್ರತಿಯೊಬ್ಬರಿಗೂ ತಮ್ಮ ತಮ್ಮ ಭಾಷೆಯ ಕುರಿತಾಗಿ ಪ್ರತ್ಯೇಕ ಭಾವನೆಗಳಿರುತ್ತವೆ. ಸದ್ಯಕ್ಕೆ ಜಗತ್ತಿನಲ್ಲಿ ಸುಮಾರು ಏಳು ಸಾವಿರ ಭಾಷೆಗಳಿವೆ. ಪ್ರತಿ ಹದಿನಾಲ್ಕು ದಿನಕ್ಕೊಮ್ಮೆ ಒಂದು ಭಾಷೆ ಸಾಯುತ್ತದೆ ಅಂತ ಹೇಳಲಾಗುತ್ತದೆ. ಹಾಗೆ ಒಂದು ಭಾಷೆ ಅಳಿದಾಗ ಕೇವಲ ಒಂದು ಸಂವಹನ ಮಾಧ್ಯಮ ಅಳಿದುಹೋಗುವುದಿಲ್ಲ; ಅದರ ಹರವು ಚೂರು ಇನ್ನೂ ದೊಡ್ಡದು.
ಭಾಷೆ ಅನ್ನುವುದು ಒಂದು ಸಮೂಹದ ಭಾವನೆಗಳನ್ನು ವ್ಯಕ್ತಪಡಿಸುವುದಕ್ಕಾಗಿ ಇರುವಂತೆ ಮೇಲ್ನೋಟಕ್ಕೆ ಕಂಡರೂ, ಭಾಷೆಯೊಂದಿಗೆ ಆ ಸಮುದಾಯದ ಸಂಸ್ಕೃತಿ, ಆಚರಣೆ, ನಂಬಿಕೆ ಹಾಗೂ ಅದು ವಿಸ್ತಾರವಾಗುತ್ತಾ ಇಡೀ ಒಂದು ನಾಗರಿಕತೆಯವರೆಗೆ ತಲುಪಬಲ್ಲದು ಅನ್ನುವುದನ್ನು ನಾವು ಗಮನಿಸಬೇಕು.
ಭಾಷೆ ಅಭಿವೃದ್ಧಿಯಾಗುವಾಗ ಅದರ ಜೊತೆ ಜೊತೆಗೆ ನಂಬಿಕೆಗಳು ಅಭಿವೃದ್ಧಿಯಾಗುತ್ತವೆ, ಆ ನಂಬಿಕೆಗಳು ಹಲವು ಸಂಪ್ರದಾಯಗಳನ್ನು ಹುಟ್ಟುಹಾಕುತ್ತವೆ. ಆ ಸಂಪ್ರದಾಯಗಳು ಹಲವು ಆಚರಣೆಗಳಿಗೆ ಜಾಗ ಮಾಡಿಕೊಡುತ್ತವೆ, ಅದೇ ಆ ಪಂಗಡದ ಅಥವಾ ಜನಾಂಗದ ಸಂಸ್ಕೃತಿಯೂ ಆಗುತ್ತದೆ. ಚಂದ್ರನನ್ನು ನಮಗೆ ತಿಳಿದಿರುವ ಹಲವು ಭಾಷೆಗಳಲ್ಲಿ ಪುಲ್ಲಿಂಗದ ಪದವಾಗಿ ಗುರುತಿಸುತ್ತಾರೆ, ಅದರೆ ಇನ್ನು ಕೆಲವು ಭಾಷೆಗಳಲ್ಲಿ ಸ್ತ್ರೀಲಿಂಗದ ಪದವಾಗಿ ಗುರುತಿಸುತ್ತಾರೆ. ಪದಗಳ ಲಿಂಗ ಬದಲಾದರೆ, ಅದರಿಂದ ಹುಟ್ಟಬಹುದಾದ ಅಭಿವ್ಯಕ್ತಿ ಬದಲಾಗುತ್ತದೆ. ಅಲ್ಲಿನ ಕಾವ್ಯ ಬದಲಾಗುತ್ತದೆ, ಅವರ ವಾಸ್ತುಶಿಲ್ಪ ಹಾಗೂ ಇತರ ಕಲಾ ಪ್ರಕಾರಗಳು ಬದಲಾಗುತ್ತವೆ, ಅವರ ಧಾರ್ಮಿಕ ನಂಬಿಕೆಗಳು ಬೇರೆ ಸ್ವರೂಪವನ್ನು ಪಡೆದುಕೊಳ್ಳುತ್ತವೆ, ಆರಾಧನಾ ಕೇಂದ್ರಗಳು ಬದಲಾಗುತ್ತವೆ, ಆರಾಧನೆಯ ಮಾರ್ಗಗಳು ಬದಲಾಗುತ್ತವೆ, ಮನುಷ್ಯನ ನೋಟ ಬದಲಾಗುತ್ತದೆ. ಎರಡು ತತ್ವಗಳಾದ ಪುರುಷ ಮತ್ತು ಪ್ರಕೃತಿ ಪ್ರಕಟವಾಗುವ ರೀತಿ ಬದಲಾಗುತ್ತದೆ. ಒಟ್ಟಿನಲ್ಲಿ ಆ ಸಮುದಾಯ ಈ ಜಗತ್ತನ್ನು ಕಾಣುವ ರೀತಿ ಹಾಗೂ ಅವರ ಬದುಕಿನ ರೀತಿ ಬದಲಾಗುತ್ತದೆ.
ಅದೇ ಒಂದು ಭಾಷೆ ಅಳಿದರೆ ಈ ಎಲ್ಲವೂ ಅಳಿಯುತ್ತವೆ. ಒಂದು ಸಂಸ್ಕೃತಿ ಅಳಿಯುವುದೆಂದರೆ, ಕೆಲವೊಮ್ಮೆ ಅದು ಪ್ರಸ್ತುತ ಜಗತ್ತಿಗೆ ನೇರವಾಗಿ ಸಾಧ್ಯವಾಗದೇ ಹೋದರೂ ಪರೋಕ್ಷವಾಗಿ ಸಣ್ಣ ಪರಿಣಾಮವನ್ನಾದರೂ ಬೀರಿಯೇ ಬೀರುತ್ತದೆ. ಭಿನ್ನತೆಯಲ್ಲಿಯೇ ಏಕತೆಯ ಭಾರತ ಅಂದುಕೊಂಡಿರುವ ನಮ್ಮಲ್ಲಂತೂ ಈ ಥರ ಭಾಷೆಯ ಪತನ ಬೇಸರದ ಸಂಗತಿಯೇ. ಜಗತ್ತಿನ ಎಲ್ಲ ಸಂಸ್ಕೃತಿಗಳೂ ಒಂದಕ್ಕೊಂದು ಪೂರಕವಾಗಿ, ಎಲ್ಲರೂ ಎಲ್ಲವುಗಳ ಅಸ್ತಿತ್ವವನ್ನು ಒಪ್ಪಿಕೊಂಡು ಅಥವಾ ಗೌರವಿಸಿಕೊಂಡು ಅವುಗಳ ಇರುವಿಕೆಯನ್ನು ಸಂಭ್ರಮಿಸಿದರೆ ಜಗತ್ತು ಹೇಗಿರಬಹುದಲ್ವಾ! ಹೀಗೆ ಅಳಿವಿನ ಕೆಲವೇ ಕೆಲವು ದಿನಗಳನ್ನು ಎಣಿಸುತ್ತಿರುವ ಭಾಷೆಯನ್ನು ಮುಖ್ಯ ಭೂಮಿಕೆಯಲ್ಲಿಟ್ಟುಕೊಂಡು ‘ಬೇರೆಯದೇ’ ಒಂದು ಭಾಷೆಯ ಕತೆ ಹೇಳುವ ಚಲನಚಿತ್ರವೇ ‘ಐ ಡ್ರೀಮ್ ಇನ್ ಅನದರ್ ಲ್ಯಾಂಗ್ವೇಜ್’ ( I dream in another language )
ಝಿಕ್ರಿಲ್ ಅನ್ನುವ ಒಂದು ಕಾಲ್ಪನಿಕ ಭಾಷೆಯನ್ನು ಈ ಸಿನೆಮಾಕ್ಕಾಗಿಯೇ ಸಿದ್ಧಪಡಿಸಲಾಗಿತ್ತು. ಆ ಭಾಷೆಯಲ್ಲೇ ಒಂದಷ್ಟು ಪದಗಳನ್ನು, ಅದರ ವ್ಯಾಕರಣ ಇತ್ಯಾದಿಗಳನ್ನೂ ತಯಾರಿಸಲಾಗಿತ್ತು. ಈ ಕತೆಯ ಮುಖ್ಯ ವಸ್ತು ಅಳಿವಿನ ಅಂಚಿನಲ್ಲಿರುವ ಝಿಕ್ರಿಲ್ ಭಾಷೆಯ ಅಧ್ಯಯನಕ್ಕೋಸ್ಕರ ಅದರಲ್ಲಿನ ಸಂಭಾಷಣೆಗಳನ್ನು ಧ್ವನಿಮುದ್ರಿಕೆಯಲ್ಲಿ ಮುದ್ರಿಸಿಕೊಂಡು ಅದನ್ನು ಅಭ್ಯಸಿಸುವುದು.
ಒಂದು ಊರಿನಲ್ಲಿ ಝಿಕ್ರಿಲ್ ಮಾತಾಡುವವರು ಕೇವಲ ಇಬ್ಬರೇ ಉಳಿದುಕೊಂಡಿದ್ದಾರೆಂದು ತಿಳಿದಾಗ ಅಲ್ಲಿಗೆ ಒಬ್ಬ ಯುವಕ ಈ ಭಾಷೆಯನ್ನು ದಾಖಲಿಸಲು ಬರುವುದರೊಂದಿಗೆ ಕತೆ ನಿಧಾನವಾಗಿ ತೆರೆದುಕೊಳ್ಳುತ್ತದೆ. ಆದರೆ, ಅಲ್ಲಿ ಬಂದಾಗ ತಿಳಿಯುವ ವಿಷಯ ಇಬ್ಬರಲ್ಲ ಮೂವರಿದ್ದಾರೆಂದು; ಆದರೆ, ಮೂರನೆಯವ ಮತ್ತು ಎರಡನೆಯವನ ಮಧ್ಯ ಮಾತುಕತೆಗಳಾಗದೇ ಐವತ್ತು ವರ್ಷಗಳಾಗಿವೆ, ಅವರಿಬ್ಬರೂ ಪರಮ ದ್ವೇಷಿಗಳು ಅನ್ನುವುದರೊಂದಿಗೆ ಕತೆಗೆ ಇನ್ನೊಂದು ಆಯಾಮ ದೊರಕುತ್ತದೆ. ಅವರು ಯಾಕೆ ದ್ವೇಷಿಗಳಾಗಿದ್ದರು, ಭಾಷೆಯನ್ನು ದಾಖಲಿಸುವ ಕಾರ್ಯ ನಡೆಯಿತಾ ಇಲ್ಲವಾ ಎನ್ನುವುದನ್ನೆಲ್ಲಾ ಸಿನೆಮಾದಲ್ಲಿಯೇ ನೋಡುವುದು ಅತ್ಯವಶ್ಯ! ಇದರ ಜೊತೆ ಜೊತೆಗೆ ‘ಅನದರ್ ಲ್ಯಾಂಗ್ವೇಜ್’ ಅನ್ನುವುದರ ಅರ್ಥವೂ ಈ ಕಾರಣದಲ್ಲಿಯೇ ಇರುವುದು ಅರ್ಥವಾಗುತ್ತದೆ.
ಮೊದಲೇ ಹೇಳಿದಂತೆ, ಒಂದು ಭಾಷೆ, ಜನಾಂಗ ಅಂದ ಕೂಡಲೇ ಅವುಗಳಿಗೆ ಅವುಗಳದ್ದೇ ಆದ ನಂಬಿಕೆಗಳಿರುತ್ತವೆ. ಅಂತೆಯೇ, ಈ ಸಿನೆಮಾದಲ್ಲಿಯೂ ಸಾವಿನ ಕುರಿತಾಗಿ ಕೆಲವು ನಂಬಿಕೆಗಳಿವೆ. ಕೆಲವು ನಾಟಕೀಯ ಅನ್ನಬಹುದಾದ ಆಚರಣೆಗಳೂ ಇವೆ. ಆದರೆ, ಸಮಗ್ರವಾಗಿ ಒಂದು ಸಂಸ್ಕೃತಿಯ ಕುರಿತಾಗಿ ಹೇಳುವಾಗ ಇಂಥ ಆಚರಣೆಗಳ ಕುರಿತಾಗಿಯೂ ಹೇಳಲೇಬೇಕಾಗುತ್ತದೆ. ಕಾರಣ, ಈ ಎಲ್ಲಾ ದಾರಗಳಿಂದಲೇ ಆ ನಾಗರಿಕತೆಯ ವಸ್ತ್ರ ಆಗಿರುವುದು. ತರ್ಕಗಳು ಆಮೇಲೆ ಬರುವಂಥವುಗಳಾದ್ದರಿಂದ ಮೊದಲು ಸಿನೆಮಾದ ಭಾಷೆಯ ಮುಖೇನ ಸಿನೆಮಾವನ್ನು ನೋಡಬೇಕಾಗಿರುವುದು ಈ ಸಿನೆಮಾದ ವಿಷಯದಲ್ಲಿ ಅತ್ಯವಶ್ಯ. ಇಲ್ಲಿ ಝಿಕ್ರಿಲ್ ಭಾಷೆ ಮಾತನಾಡುವ ಸಂದರ್ಭದಲ್ಲಿ ಯಾವುದೇ ಉಪಶೀರ್ಷಿಕೆಗಳನ್ನು ( subtitles ) ತೋರಿಸುವುದಿಲ್ಲ (ಕೆಲವು ಮುಖ್ಯ ಕ್ಷಣಗಳನ್ನು ಹೊರತುಪಡಿಸಿ). ಭಾಷೆಗೆ ಕೇವಲ ಮಾತು ಬೇಕಿಲ್ಲ, ಅದು ಭಾವದಿಂದಲೂ ಇನ್ನೊಬ್ಬರನ್ನು ತಲುಪಬಲ್ಲದು ಅನ್ನುವುದನ್ನು ಹೀಗೆ ಹೇಳಲಾಗಿದೆ. ಝಿಕ್ರಿಲ್ ದಾಖಲಾತಿಯ ಕುರಿತಾಗಿ ಎಲ್ಲರ ಪ್ರಯತ್ನಗಳಿದ್ದರೂ, ಎಲ್ಲರ ಅಂತರಂಗದ ಭಾಷೆ ಬೇರೆಯದೇ ಆಗಿತ್ತು; ಈ ಕಾರಣದಿಂದಲೂ ಸಿನೆಮಾದ ಹೆಸರು ‘ಐ ಡ್ರೀಮ್ ಇನ್ ಅನದರ್ ಲ್ಯಾಂಗ್ವೇಜ್’. ಕೆಲವೊಂದು ಕತೆಗಳು ಹುಟ್ಟುವಾಗ ಒಂದು ಸ್ವರೂಪದಲ್ಲಿದ್ದು ಜನಾಂಗದಿಂದ ಜನಾಂಗಕ್ಕೆ ಕೆಲವೊಮ್ಮೆ ತೆಳುವಾಗುತ್ತಲೂ, ಇನ್ನು ಕೆಲವೊಮ್ಮೆ ತಿಳಿವಾಗುತ್ತಲೂ, ಮತ್ತೂ ಕೆಲವೊಮ್ಮೆ ಮೂಲ ಸ್ವರೂಪಕ್ಕಿಂತ ಅತ್ಯಂತ ಭಿನ್ನವಾಗುತ್ತಲೂ ಸಾಗಿ ನಮಗೆ ಹೊಸತೇ ರೂಪದಲ್ಲಿ ದೊರಕಬಹುದು. ಇನ್ನು ಕೆಲವಷ್ಟು ಜನಪದಗಳು; ಅವು ಆ ಜನಾಂಗದ ಅತ್ಯಂತ ಖಾಸಗಿ ವಸ್ತುಗಳ ಥರ. ಅದರ ಸೌಂದರ್ಯವನ್ನು ನಾವು ಕೆಲವು ಸಲ ತಾರ್ಕಿಕ ದೃಷ್ಟಿಯಿಂದ ನೋಡಿದಲ್ಲಿ ಅದು ನಮಗೆ ನಿಲುಕದೇ ಹೋಗುವ ಸಾಧ್ಯತೆಗಳೇ ಜಾಸ್ತಿ. ಯಾವುದನ್ನು ತಾರ್ಕಿಕವಾಗಿಯೂ, ಯಾವುದನ್ನು ಅತಾರ್ಕಿಕವಾಗಿಯೂ ನೋಡಬೇಕೆನ್ನುವ ಪ್ರಜ್ಞೆ ಹಲವು ಹಂತಗಳಲ್ಲಿ ನಮಗೆ ದೊರೆಯುತ್ತಾ ಹೋಗಬಹುದು.
ಸಾವಿನಿಂದ ಯಾರನ್ನಾದರೂ ಉಳಿಸಿಕೊಳ್ಳಬಹುದು ಕ್ಷಣಕಾಲವಾದರೂ, ಕ್ಷಣ ದಿನವಾದರೂ ಅನ್ನುವ ಭರವಸೆಯ ಪ್ರಯತ್ನವೇ ಅತ್ಯಂತ ಮನೋಹರವಾದದ್ದು. ಅದರಲ್ಲೂ ಒಂದು ಭಾಷೆಯನ್ನು ಉಳಿಸಿಕೊಳ್ಳುವುದೆಂದರೆ ಮನುಕುಲದ ಇತಿಹಾಸದ ಭಾಗವನ್ನು ಜೀವಂತವಾಗಿರಿಸಿದಂತೆ. ಈ ಇಡೀ ಸಿನೆಮಾದ ಕತೆಗೆ ಮೂಲ ಝೋಕ್ ( Zoque ) ಅನ್ನುವ ಭಾಷೆ. ಅದರ ಹೆಸರನ್ನು ಬಳಸಿದರೆ ಎಲ್ಲಿ ಆ ಭಾಷೆಗೆ ಅಗೌರವ ತೋರಿದಂತಾಗುತ್ತದೋ ಅಂತಲೇ ಝಿಕ್ರಿಲ್ ಅನ್ನೋ ಕಾಲ್ಪನಿಕ ಭಾಷೆಯನ್ನು ಈ ಸಿನೆಮಾದಲ್ಲಿ ಬಳಸಿಕೊಳ್ಳಲಾಗಿದೆ. ಭಾಷೆಯ ಕುರಿತಾಗಿ ಇಂಥ ಸಂವೇದನೆಗಳು ಬೇಕು. ನಮ್ಮ ಭಾಷೆಯನ್ನು ಸಂವೇದನಾಶೀಲವಾಗಿಯೂ ಅತ್ಯಂತ ಆಪ್ತವಾಗಿಯೂ ಬಳಸಬೇಕಾದುದು ನಾವು ಬದುಕಿದಷ್ಟೇ ಸಹಜವಾಗಬೇಕು. ಯಾಕೆಂದರೆ ನಾವು ಭಾಷೆಯನ್ನು ಬೆಳೆಸುತ್ತಿದ್ದೇವೆ ಅಂತನ್ನುವುದು ಅಹಂಕಾರದ ಮಾತೇ ಆದೀತು; ಅದಕ್ಕಿಂತಲೂ ಹೆಚ್ಚಾಗಿ ಭಾಷೆ ನಮ್ಮನ್ನು ರೂಪಿಸುತ್ತಿದೆ!
ನೆನಪಿರಲಿ, ಈ ಎಲ್ಲವುಗಳ ಆಚೆಗೂ ಮನುಷ್ಯನಿಗೊಂದು ಅಸ್ತಿತ್ವವಿದೆ; ಅಲ್ಲೊಂದು ಅಂತಃಕರಣವಿದೆ…
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್