- ಬೇಂದ್ರೆಸಂಗೀತ: ಒಂದು ವಿಶ್ಲೇಷಣೆ - ಮಾರ್ಚ್ 18, 2024
- ದೂರ ತೀರದಿಂದ ಮುತ್ತುಗಳ ತಂದ ನಾವಿಕ - ಫೆಬ್ರುವರಿ 26, 2024
- ಐವತ್ತನೇ ಪುಸ್ತಕದ ಸಂಭ್ರಮದಲ್ಲಿ ಎನ್.ಎಸ್.ಎಸ್. - ಆಗಸ್ಟ್ 9, 2022
ಇವತ್ತು ತಮ್ಮ ಸುದೀರ್ಘ ಅರ್ಥಪೂರ್ಣ ಬದುಕಿಗೆ ದೊರೆಸ್ವಾಮಿ ವಿದಾಯ ಹೇಳಿದ್ದಾರೆ.
ಕಳೆದ ಸರಿ ಸುಮಾರು ಎಪ್ಪತ್ತು ವರ್ಷಗಳ ಅವಧಿಯಲ್ಲಿ ಎಚ್.ಎಸ್.ದೊರೆಸ್ವಾಮಿಯವರ ಉಪಸ್ಥಿತಿ ಇಲ್ಲದೆ ಕರ್ನಾಟಕದ ಯಾವುದೇ ಮುಖ್ಯ ಹೋರಾಟ ನಡೆದಿದ್ದೇ ಇಲ್ಲ. ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಿಂದ ಬಂದ ಎಷ್ಟೋ ಜನ ರಾಜಕೀಯಕ್ಕೆ ಬಂದರು. ಮಂತ್ರಿ, ಮುಖ್ಯಮಂತ್ರಿ ಹೀಗೆ ಅನೇಕ ಅಧಿಕಾರದ ಹುದ್ದೆಯನ್ನು ಕೂಡ ಅಲಂಕರಿಸಿದರು. ಆದರೆ ಅಧಿಕಾರ ಸಿಕ್ಕ ಕೂಡಲೇ ಹೋರಾಟದ ಹಾದಿಯನ್ನು ಮರೆತೇ ಬಿಟ್ಟರು. ಆದರೆ ದೊರೆಸ್ವಾಮಿಯವರು ಹಾಗಲ್ಲ ಅಧಿಕಾರಕ್ಕೆ ಆಸೆ ಪಡಲೇ ಇಲ್ಲ.
ಕೊನೆಯವರೆಗೂ ಇವರ ಮನೆಯ ಮುಂದೆ ಬೇರೆ ಬೇರೆ ಹೋರಾಟದವರು ಬರ್ತಾ ಇದ್ದರು. ಮೊದಲು ಯಾರು ಬರ್ತಾರೋ ಅವರ ಕಾರಿನಲ್ಲಿ ದೊರೆಸ್ವಾಮಿ ಹೋರಾಟಕ್ಕೆ ಹೊರಡ್ತಾ ಇದ್ದರು. ನೂರು ದಾಟಿದ್ದರೂ ಅವರು ಎಂದಿಗೂ ಮನೆಯಲ್ಲಿ ಕೂತವರಲ್ಲ. ಸದಾ ಹೋರಾಟಕ್ಕೆ ಮುಂದೆ ಎಂದು ನಿಂತವರು. ಸದಾ ಹೋರಾಟಕ್ಕೆ ಮುಂದಾದ ಅವರು ಇಂದಿಗೂ ಮುಗ್ದರೇ. ಎಷ್ಟೋ ಸಲ ಹೋರಾಟದ ಹಿನ್ನೆಲೆ ತಿಳಿಯದೆ ಅವರು ಹೋಗಿ ವಿವಾದಕ್ಕೆ ಸಿಲುಕಿದ್ದೂ ಇದೆ. ಸರಳತೆ ಇವರ ಇನ್ನೊಂದು ಪ್ರಮುಖ ಗುಣ. ನೂರು ತುಂಬುವ ವಯಸ್ಸಿನಲ್ಲಿಯೂ ಅವರು ಸಿಟಿ ಬಸ್ನಲ್ಲಿ ಪ್ರಯಾಣ ಮಾಡಿದ್ದನ್ನು ನಾನೇ ನೋಡಿದ್ದೇನೆ.
ಎಚ್.ಎಸ್.ದೊರೆಸ್ವಾಮಿಯವರು ಜನಿಸಿದ್ದು ೧೯೧೮ರ ಏಪ್ರಿಲ್ ೧೦ರಂದು ಹಾರೋಹಳ್ಳಿ ಶ್ರೀನಿವಾಸಯ್ಯ ದೊರೆಸ್ವಾಮಿ ಅನ್ನೋದು ಅವರ ಪೂರ್ತಿ ಹೆಸರು. ತಾಯಿ ಪಾರ್ವತಮ್ಮ ತಂದೆ ಶ್ರೀನಿವಾಸಯ್ಯ. ದೊರೆಸ್ವಾಮಿಯವರಿಗೆ ಐದು ವರ್ಷವಾಗಿದ್ದಾಗಲೇ ತಂದೆ ತೀರಿಕೊಂಡರು. ತಾತನ ಆಶ್ರಯದಲ್ಲಿ ಅವರ ಬಾಲ್ಯವೆಲ್ಲಾ ಕಳೆಯಿತು. ತಂದೆ ಇಲ್ಲದ ಮಗು ಅಂತ ಎಲ್ಲರೂ ತುಂಬಾ ಪ್ರೀತಿ ತೋರಿಸಿದ್ದರು. ಯಾರ ಅಂಕೆಯಲ್ಲಿಯೂ ಇಲ್ಲದೆ ಸ್ವಚ್ಚಂದವಾಗಿ ಬೆಳೆದಿದ್ದ ಅವರಿಗೆ ಒಂದು ಪುಸ್ತಕ ಜೀವನದಲ್ಲಿ ಟರ್ನಿಂಗ್ ಪಾಯಿಂಟ್ ಅನ್ನಿಸಿಕೊಳ್ತು. ಈ ಪುಸ್ತಕದ ಮೂಲಕವೇ ಅವರಿಂದು ಕರ್ನಾಟಕದ ಪ್ರಮುಖ ಹೋರಾಟಗಾರರಿಗೂ ಕೂಡ ಹೆಸರು ಮಾಡಿದರು. ಅದು ಮಹಾತ್ಮ ಗಾಂಧೀಜಿಯವರ ‘ಮೈ ಅರ್ಲಿ ಲೈಫ್’. ಈ ಪುಸ್ತಕ ಓದಿದ ನಂತರ ಇಂಡಿಪೆಂಡೆಂಟ್ ಮೂವ್ಮೆಂಟ್ ಕಡೆ ಅವರ ಮನಸ್ಸು ತಿರುಗಿತು. ನಿಮಗೆ ಆಶ್ಚರ್ಯವಾಗಬಹುದು ಆಗ ಅವರ ವಯಸ್ಸು ಕೇವಲ ಹತ್ತು ವರ್ಷ.
ಬೆಂಗಳೂರಿಗೆ ಓದುವ ಉದ್ದೇಶದಿಂದ ಬಂದಿದ್ದರೂ ಅವರ ಮನಸ್ಸಿನಲ್ಲಾಗಲೇ ಸ್ವಾತಂತ್ರ್ಯ ಹೋರಾಟದ ಕನಸು ತುಂಬಿ ಬಿಟ್ಟಿತ್ತು. ಈ ವೇಳೆಗಾಗಲೇ ಅವರ ಅಣ್ಣ ಎಚ್.ಎಸ್.ಸೀತಾರಾಮ್ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದರು. ಚಿಕ್ಕ ಹುಡುಗರಾಗಿದ್ದ ಅವರಿಗೆ ಸಿಕ್ಕ ಕೆಲಸ ಟೈಂಬಾಂಬ್ಗಳನ್ನು ಸಪ್ಲೈ ಮಾಡೋದು. ಅವೇನು ಬಹಳ ಪವರ್ಪುಲ್ ಟೈಂ ಬಾಂಬ್ಗಳಲ್ಲ. ದಾಖಲೆಗಳನ್ನು ನಾಶ ಮಾಡೋಕೆ ಅದನ್ನ ಯೂಸ್ ಮಾಡ್ತಾ ಇದ್ದರು. ಇಲಿಯ ಬಾಲಕ್ಕೆ ಈ ಟೈಂ ಬಾಂಬ್ಗಳನ್ನು ಕಟ್ಟಿ ಗವರ್ನಮೆಂಟ್ ಆಫೀಸ್ಗಳಲ್ಲಿ ಬಿಡ್ತಾ ಇದ್ದರು. ಅದರ ಮೂಲಕ ಅಲ್ಲಿಯ ರೆಕಾರ್ಡ್ಗಳು ನಾಶ ಆಗ್ತಾ ಇದ್ದವು.
ವಿ.ವಿ.ಪುರಂನಲ್ಲಿ ಆ ವೇಳೆಗೆ ದೊರೆಸ್ವಾಮಿ ಹೈಯರ್ ಪ್ರೈಮರಿ ಶಿಕ್ಷಣ ಮುಗಿಸಿದ್ದರು. ಅವರ ಅಣ್ಣ ಸೀತಾರಾಮ್ ಓದನ್ನು ಹಾಳು ಮಾಡ್ಕೊಬೇಡ ನಂತರ ಕೂಡ ಫ್ರೀಡಂ ಮೂವ್ಮೆಂಟ್ನಲ್ಲಿ ಪಾರ್ಟಿಸಿಪೇಟ್ ಮಾಡ್ಬಹುದು ಅಂತ ಉಪದೇಶ ಮಾಡಿದರು. ಅದರಂತೆ ದೊರೆಸ್ವಾಮಿಯವರು ಎಜುಕೇಷನ್ ಕಂಟಿನ್ಯೂ ಮಾಡಿ ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್ಸಿ ಪದವಿಯನ್ನು ಪಡೆದರು. ನಂತರ ಕೆಲ ಕಾಲ ಅಧ್ಯಾಪಕರಾಗಿ ಕೂಡ ಕೆಲಸ ಮಾಡಿದರು. ಫ್ರೀಡಂ ಮೂವೆಂಟ್ನಿಂದ ದೂರ ಇದ್ದರೂ ಅವರ ಮನಸ್ಸೆಲ್ಲಾ ಅದರ ಕಡೆಗೇ ಇತ್ತು.
೧೯೪೨ ಅಂದರೆ ದೇಶದೆಲ್ಲಡೆ ಕ್ವಿಟ್ ಇಂಡಿಯಾ ಚಳುವಳಿಯ ಕಾವು ಹಬ್ಬಿತ್ತು. ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಅನ್ನೋ ಕೂಗು ಎಲ್ಲ ಕಡೆ ಕೇಳಿ ಬಂದಿತ್ತು. ಬ್ರಿಟೀಷ್ ಸರ್ಕಾರ ಚಳುವಳಿಯನ್ನ ಹತ್ತಿಕ್ಕಬೇಕು ಅಂತ ಡಿಸೈಡ್ ಮಾಡಿ ಎಲ್ಲಾ ಟಾಪ್ ಲೀಡರ್ಸ್ ಆರೆಸ್ಟ್ ಮಾಡಿ ಬಿಡ್ತು. ಎಚ್.ಎಸ್.ದೊರೆಸ್ವಾಮಿಯವರ ಅಣ್ಣ ಎಚ್.ಎಸ್.ಸೀತಾರಾಂ ಕೂಡ ಆರೆಸ್ಟ್ ಆಗಿ ಬಿಟ್ಟರು. ಈಗ ಮೂವಮೆಂಟ್ ಲೀಡ್ ಮಾಡೋರೇ ಇಲ್ಲದ ಹಾಗಾಯ್ತು. ಕಂಟ್ರೋಲ್ ಇಲ್ಲದೆ ಚಳುವಳಿ ಎಲ್ಲೆಲ್ಲೋ ಹೋಗಬಹುದು ಅನ್ನೋ ಆತಂಕ ಲೀಡರ್ಸಿಗೆ ಕಾಡೋದಕ್ಕೆ ಶುರುವಾಯಿತು. ಒಂದು ಕಾಲದಲ್ಲಿ ಚಳುವಳಿಯಿಂದ ದೂರ ಇರು ಅಂತ ಹೇಳಿದ್ದ ಸೀತಾರಾಂ ಅವರೇ ತಮ್ಮನ್ನನ್ನ ಈಗ ಮತ್ತೆ ಚಳುವಳಿಗೆ ಬಾ ಅಂತ ಒತ್ತಾಯ ಮಾಡಿದರು.
ದೊರೆಸ್ವಾಮಿಯವರು ಎರಡನೇ ಸಲ ಸ್ವಾತಂತ್ರ್ಯ ಹೋರಾಟಕ್ಕೆ ಬಂದಾಗ ನಾಯಕತ್ವವನ್ನು ವಹಿಸಿ ಕೊಂಡಿದ್ದರು. ಎಲ್ಲಿ ಹೋರಾಟ ನಡೆಯ ಬೇಕು ಯಾವ ರೀತಿಯಲ್ಲಿ ಚಳುವಳಿ ಮುಂದುವರೆಯ ಬೇಕು ಎಲ್ಲದನ್ನೂ ಡಿಸೈಡ್ ಮಾಡೋದು ಅವರ ರೆಸ್ಪಾನ್ಸಿಬಿಲಿಟಿಯಾಗಿತ್ತು. ಇದರ ಜೊತೆಗೆ ಪೋಲೀಸರ ಕಣ್ಣ ತಪ್ಪಿಸ ಬೇಕಿತ್ತು. ಏಕಂದರೆ ಅಷ್ಟು ಹೊತ್ತಿಗೆ ಬಹಳ ನಾಯಕರು ಆರೆಸ್ಟ್ ಆಗಿದ್ದರಿಂದ ನಾಯಕರು ಮೂವ್ಮೆಂಟ್ಗೆ ಬೇಕಾಗಿತ್ತು. ಒಂದು ಸಲ ಅಂತೂ ಅವರ ಪೋಲೀಸರ ಲಾಠಿ ಚಾರ್ಜ್ನ ನೇರ ಗುರಿಯಾಗಿ ಬಿಟ್ಟಿದ್ದರು. ಅದರಿಂದ ತಪ್ಪಿಸಿ ಕೊಂಡು ಜೀವ ಉಳಿಸಿ ಕೊಂಡಿದ್ದೇ ಪುಣ್ಯ ಎನ್ನುವಂತಾಯಿತು. ಎಷ್ಟೇ ಪ್ರಯತ್ನ ಪಟ್ಟರೂ ಪೋಲೀಸರ ಕಣ್ಣು ತಪ್ಪಿಸಿ ಓಡಾಡುವುದು ಬಹಳ ದಿನಗಳ ಕಾಲ ಆಗಲಿಲ್ಲ. ಅವರಿಗೆ ಹದಿನಾಲ್ಕು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಲಾಯಿತು. ಸೆರೆಮನೆಯಲ್ಲಿದ್ದಷ್ಟು ದಿನ ತಾವು ದೊಡ್ಡ ನಾಯಕರ ಜೊತೆ ಇದ್ದಿದ್ದರಿಂದ ಸಾಕಷ್ಟನ್ನು ಕಲಿಯೋದಕ್ಕೆ ಸಾಧ್ಯವಾಯಿತು ಅಂತಾರೆ ದೊರೆಸ್ವಾಮಿಯವರು.
ಸೆರೆಮನೆಯಿಂದ ಹೊರ ಬಂದ ಮೇಲೆ ದೊರೆಸ್ವಾಮಿಯವರು ದೊಡ್ಡ ಲೀಡರ್ ಎನ್ನಿಸಿಕೊಂಡು ಬಿಟ್ಟರು. ಅವರಿಗೆ ನ್ಯಾಷನಲ್ ಲೆವಲ್ ಲೀಡರ್ಗಳಾದ ಮಹಾತ್ಮ ಗಾಂಧಿ, ನೆಹರೂ, ವಲ್ಲಭಭಾಯಿ ಪಟೇಲ್ ಮೊದಲಾದವರ ಕಾಂಟ್ಯಾಕ್ಟ್ ಬೆಳೆದಿತ್ತು. ಅದರಲ್ಲಿಯೂ ಅವರನ್ನು ಬಹಳವಾಗಿ ಪ್ರಭಾವಿಸಿದ್ದು ಮಹಾತ್ಮ ಗಾಂಧಿಯವರ ವ್ಯಕ್ತಿತ್ವ. ಅವರು ಮಹಾತ್ಮ ಗಾಂಧಿಯವರಿಂದ ಪ್ರಭಾವಿತರಾಗಿದ್ದು ಮಾತ್ರವಲ್ಲ ಜೀವನ ಪೂರ್ತಿ ಅವರ ಆದರ್ಶಗಳನ್ನೇ ಅನುಸರಿಸಿದರು.
೧೯೪೭ರ ಆಗಸ್ಟ್ ೧೫ರಂದು ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದಿತು. ಆದರೆ ದೇಶದಲ್ಲೆಡೆ ಐದುನೂರಕ್ಕೂ ಹೆಚ್ಚು ಚಿಕ್ಕ ದೊಡ್ಡ ಸಾಮ್ರಾಜ್ಯಗಳಿದ್ದವು. ಅವೆಲ್ಲವೂ ದೇಶದೊಳಗೆ ಬರಲು ತಕರಾರು ತಗೆದಿದ್ದರಿಂದ ಮತ್ತೆ ಚಳುವಳಿ ಆರಂಭವಾಯಿತು. ಮೈಸೂರು ಸಂಸ್ಥಾನದ ಪರಿಸ್ಥಿತಿ ಬೇರೆಯದಾಗಿತ್ತು. ಇಲ್ಲಿನ ಶೇ ೯೦ರಷ್ಟು ಜನರಿಗೆ ಜಯಚಾಮರಾಜ ಒಡೆಯರ್ ಅವರೇ ಮಹಾರಾಜರಾಗಿ ಮುಂದುವರೆಯುವುದು ಬೇಕಿತ್ತು. ಸ್ವಾತಂತ್ರ್ಯ ಹೋರಾಟ ಮಾಡಿದ್ದ ಕಾಂಗ್ರೇಸಿನ ಅನೇಕ ನಾಯಕರು ಮಹಾರಾಜರ ವಿರುದ್ದ ಪ್ರತಿಭಟನೆ ಮಾಡಲು ಹಿಂಜರಿದರು. ಈಗ ದೊರೆಸ್ವಾಮಿಯವರ ಪಾತ್ರ ಬಹಳ ಮುಖ್ಯವಾದದ್ದು. ಮೈಸೂರು ಸಂಸ್ಥಾನವನ್ನು ಭಾರತ ದೇಶದ ಭಾಗವಾಗುವಂತೆ ಮಾಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ಮೈಸೂರು ರಾಜ್ಯಕ್ಕೆ ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿಗಳಾದರು. ಅವರು ಏಕೀಕರಣದ ಪರವಾಗಿದ್ದರು. ಆದರೆ ಅವರಿಗೆ ಬೆಂಬಲವಾದ ಮೈಸೂರು ಕಡೆಯ ಅನೇಕ ಶಾಸಕರು, ಮೈಸೂರು ಸಂಪತ್ ಭರಿತವಾಗಿದೆ ಏಕೀಕರಣವಾದರೆ ನಮಗೆ ತೊಂದರೆ ಎಂದು ಅದನ್ನು ವಿರೋಧಿಸಿದರು. ದೊರೆಸ್ವಾಮಿಯವರು ಕೆಂಗಲ್ ಅವರಿಗೆ ಆತ್ಮೀಯ ಸ್ನೇಹಿತರು ಅನೇಕ ಹೋರಾಟಗಳಲ್ಲಿ ಜೊತೆಗೆ ಕೆಲಸ ಮಾಡಿದವರು. ಆದರೆ ಈಗ ಗೆಳೆಯನಿಗೆ ದೊರೆಸ್ವಾಮಿ ವಿರೋಧವಾಗಿ ನಿಂತರು. ಏಕೀಕರಣ ಅವರಿಗೆ ಗೆಳೆತನಕ್ಕಿಂತ ಮುಖ್ಯವಾಗಿತ್ತು.
ಮುಂದೆ ೧೯೭೮ನೇ ಇಸವಿ. ಆಗ ದೊರೆಸ್ವಾಮಿಯವರ ೬೦ನೇ ವರ್ಷದ ಹುಟ್ಟುಹಬ್ಬದ ಸನ್ಮಾನ ಕಾರ್ಯಕ್ರಮ. ಅದಕ್ಕೆ ಕೆಂಗಲ್ ಹನುಮಂತಯ್ಯನವರದೇ ಅಧ್ಯಕ್ಷತೆ ಅವರು ಹೇಳಿದರು. ‘ದೊರೆಸ್ವಾಮಿ ನನಗೆ ಆತ್ಮೀಯರು. ಆದರೆ ಸದಾ ವಿರೋಧದಲ್ಲೇ ನಿಂತು ಕೆಲಸ ಮಾಡಿದರು. ಜೊತೆಗೆ ಕೆಲಸ ಮಾಡಿದ್ದರೆ ನಾನು ಇನ್ನು ಸಾಕಷ್ಟು ಸಾಧನೆ ಮಾಡ್ತಾ ಇದ್ದೆ.’ ಈ ಮಾತಿನಲ್ಲಿ ವಿಷಾದವಿತ್ತು. ಅದಕ್ಕೆ ಕಾರಣವೂ ಇತ್ತು. ಏಕೆಂದರೆ ದೊರೆಸ್ವಾಮಿಯವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿಸಲು ಕೆಂಗಲ್ ಬಯಸಿದ್ದರು. ಆದರೆ ಸ್ವಾಭಿಮಾನಿ ದೊರೆಸ್ವಾಮಿ ಅದಕ್ಕೆ ಒಪ್ಪಲೇ ಇಲ್ಲ. ಕಾಂಗ್ರೇಸ್ನಲ್ಲಿ ಇದ್ದರೂ ಪಕ್ಷದ ವಿರುದ್ದ ಮಾತನಾಡುವ ಧೈರ್ಯ ಅವರಿಗೆ ಇತ್ತು.
ಹೋರಾಟಗಾರರಾದ ದೊರೆಸ್ವಾಮಿಗಳು ಪತ್ರಕರ್ತರಾಗಿ ಕೂಡ ಕೆಲಸ ಮಾಡಿದ್ದಿದೆ. ಕರ್ನಾಟಕದ ಏಕೀಕರಣದ ಪರವಾಗಿ ‘ಪೌರವಾಣಿ’ಅನ್ನೋ ಪತ್ರಿಕೆಯನ್ನು ಅವರು ಆರಂಭಿಸಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಬಂದು ಮೈಸೂರು ರಾಜ್ಯ ಇನ್ನೂ ದೇಶಕ್ಕೆ ಸೇರದೆ ಹೋದಾಗ ಅವರು ಸರ್ಕಾರದ ವಿರುದ್ದ ಸರಣಿ ಲೇಖನಗಳನ್ನು ಪ್ರಕಟಿಸಿದರು. ಇದರಿಂದ ಕೋಪಗೊಂಡ ಸರ್ಕಾರ ಆ ಪತ್ರಿಕೆಯನ್ನು ಮುಟ್ಟುಗೋಲು ಹಾಕಿಕೊಂಡಿತು. ಆದರೆ ದೊರೆಸ್ವಾಮಿ ತಮ್ಮ ಹೋರಾಟವನ್ನು ಬಿಡಲಿಲ್ಲ. ಹಿಂದೂಪುರದಿಂದ ಅದನ್ನು ಪ್ರಿಂಟ್ ಮಾಡಿ ತಂದು ಸರ್ಕಾರದ ಕಣ್ಣು ತಪ್ಪಿಸಿ ಅದನ್ನು ಹಂಚುತ್ತಾ ಇದ್ದರು. ಏಕೀಕರಣದ ಚಳುವಳಿಯ ಉದ್ದಕ್ಕೂ ಅವರು ಇದೇ ಮಾದರಿಯಲ್ಲಿ ಹೋರಾಟ ಮಾಡಿ ಕೊನೆಗೂ ಕರ್ನಾಟಕ ಏಕೀಕರಣವಾಗುವಂತೆ ಮಾಡಿದರು.
ಸಾಹಿತ್ಯದಲ್ಲಿ ದೊರೆಸ್ವಾಮಿಯವರಿಗೆ ಮೊದ್ಲಿಂದಲೂ ಆಸಕ್ತಿ ಇತ್ತು. ಆಚಾರ್ಯ ಬಿ.ಎಂ.ಶ್ರೀ, ವಿ.ಸೀತಾರಾಮಯ್ಯ, ಸಿ.ಕೆ.ವೆಂಕಟರಾಮಯ್ಯ, ಎ.ಆರ್.ಕೃಷ್ಣಶಾಸ್ತ್ರಿ, ಎಂ.ಆರ್.ಶ್ರೀನಿವಾಸ ಮೂರ್ತಿ ಮೊದಲಾದ ಹಿರಿಯರು ಅವರಿಗೆ ನಿಕಟರಾಗಿದ್ದರು. ಕರ್ನಾಟಕದ ಏಕೀಕರಣದ ಕುರಿತು ಅವರಿಗೆ ಒಲವು ಮೂಡಿದ್ದು ಕೂಡ ಇದೇ ಕಾರಣದಿಂದ. ಮೈಸೂರಿನಲ್ಲಿ ನೆಲೆಸಿದ್ದಾಗ ಸಾಹಿತ್ಯ ಮಂದಿರ ಅನ್ನೋ ಪುಸ್ತಕದ ಅಂಗಡಿಯನ್ನು ಸ್ಥಾಪಿಸಿದರು. ಆ ಮೂಲಕ ಪ್ರಕಾಶನ ಸಂಸ್ಥೆಯನ್ನು ಕೂಡ ಅವರು ನಡೆಸ್ತಾ ಇದ್ದರು. ದೇಶದ ಸ್ವಾತಂತ್ರ್ಯ ಹೋರಾಟ, ಸಾಮಾಜಿಕ ಸಮಸ್ಯೆಗಳು, ನಮ್ಮ ಆರ್ಥಿಕ ಸಮಸ್ಯೆಗಳು, ಕೋಮು ಸೌಹಾರ್ದತೆ ಮೊದಲಾದ ಪುಸ್ತಕಗಳನ್ನು ಪ್ರಕಟಿಸಿದರು. ಅವರ ಪುಸ್ತಕದ ಅಂಗಡಿಗೆ ಆರ್.ಕೆ.ನಾರಾಯಣ್,ಆರ್.ಕೆ.ಲಕ್ಷ್ಣಣ್, ಕೆ.ಎಸ್.ನರಸಿಂಹ ಸ್ವಾಮಿ, ಎಸ್.ವಿ.ಪರಮೇಶ್ವರ ಭಟ್ಟರು, ಗೋಪಾಲ ಕೃಷ್ಣ ಅಡಿಗರು, ತ.ರಾ.ಸು ಎಲ್ಲರೂ ರೆಗ್ಯೂಲರ್ ಆಗಿ ಬರ್ತಾ ಇದ್ದರು. ಆರ್.ಕೆ.ನಾರಾಯಣ್ ಅವರ ವಂಡರ್ಪುಲ್ ಮಾಲ್ಗುಡಿ ಡೇಸ್ ಕ್ರಿಯೇಟ್ ಆಗಿದ್ದು ದೊರೆಸ್ವಾಮಿಯವರ ಅಂಗಡಿ ಕಟ್ಟೆಯಲ್ಲೇ. ಇನ್ನೊಂದು ಇಂಟರೆಸ್ಟಿಂಗ್ ಆದ ಸಂಗತಿ ಎಂದರೆ ಮೈಸೂರು ಮಲ್ಲಿಗೆಯಿಂದ ಕೆ.ಎಸ್.ನರಸಿಂಹ ಸ್ವಾಮಿ ಬಹಳ ಜನಪ್ರಿಯರಾದರು. ನಾಡಿನ ಎಲ್ಲಾ ಕಡೆ ಅವರ ಗೀತೆಗಳು ಕೇಳಿ ಬಂದವು. ಆದರೆ ಅವರ ಎರಡನೇ ಕವನ ಸಂಕಲನ ಐರಾವತ ಪಬ್ಲಿಷ್ ಮಾಡೋಕೆ ಯಾರೂ ರೆಡಿ ಇರ್ಲೇ ಇಲ್ಲ. ಆಗ ದೊರೆಸ್ವಾಮಿಯವರೇ ತಮ್ಮ ಪ್ರಕಾಶನದ ಮೂಲಕ ನರಸಿಂಹ ಸ್ವಾಮಿಯವರ ಎರಡನೇ ಕವನ ಸಂಕಲನ ‘ಐರಾವತ’ವನ್ನು ಪಬ್ಲಿಷ್ ಮಾಡಿ ಅವರು ಕವಿತೆಯ ಹಾದಿಯಲ್ಲಿ ಮುಂದೆ ಹೋಗುವ ಹಾಗೆ ಮಾಡಿದರು. ಸಾಹಿತ್ಯದ ಈ ಆಸಕ್ತಿ ಅವರಿಗೆ ಒಂದು ರೀತಿಯಲ್ಲಿ ಹೋರಾಟಕ್ಕೆ ಕೂಡ ಸ್ಪೂರ್ತಿ ಕೊಟ್ಟಿತ್ತು.
ಮಹಾತ್ಮ ಗಾಂಧಿ, ಆಚಾರ್ಯ ವಿನೋಭಾ ಮತ್ತು ಜಯಪ್ರಕಾಶ್ ನಾರಾಯಣ್ ನನ್ನ ಜೀವನವನ್ನು ಬೆಳಗಿದ ತ್ರಿಮೂರ್ತಿಗಳು ಎಂದು ದೊರೆಸ್ವಾಮಿಯವರು ಹೇಳಿಕೊಂಡಿದ್ದಾರೆ. ಮೂವರೂ ಸಂಘಟಿಸಿದ ಹೋರಾಟದಲ್ಲಿ ಅವರು ಭಾಗಿಯಾಗಿದ್ದರು. ಕರ್ನಾಟಕದಲ್ಲಿ ವಿನೋಭಾ ಭಾವೆಯವರಿಗೆ ಜೊತೆ ನೀಡಿದವರು ದೊರೆಸ್ವಾಮಿಯವರು. ಸುಮಾರು ೧೫೦ ಎಕರೆ ಭೂಮಿಯನ್ನು ಇಲ್ಲಿ ಸಿರಿವಂತರಿಂದ ಪಡೆದು ಬಡವರಿಗೆ ಹಂಚುವಲ್ಲಿ ಅವರು ಮುಖ್ಯ ಪಾತ್ರ ವಹಿಸಿದರು. ಭೂದಾನ ಚಳುವಳಿಯಲ್ಲಿ ಕರ್ನಾಟಕ ಮಾತ್ರವಲ್ಲದೆ ನೆರೆಯ ಆಂಧ್ರಪ್ರದೇಶ, ತಮಿಳು ನಾಡುಗಳಿಗೂ ವಿನೋಭಾ ಭಾವೆಯವರಿಗೆ ದೊರೆಸ್ವಾಮಿ ಸಾಥ್ ನೀಡಿದ್ದರು. ಈ ಸಂದರ್ಭದಲ್ಲಿಯೇ ದೇಶದಲ್ಲಿ ಇನ್ನೊಂದು ಮುಖ್ಯವಾದ ಘಟನೆ ನಡೆಯಿತು.
ದೇಶದ ಎಲ್ಲೆಡೆ ತುರ್ತು ಪರಿಸ್ಥಿತಿಯ ವಿರುದ್ದ ಹೋರಾಟ ಆರಂಭವಾದಾಗ ದೊರೆಸ್ವಾಮಿಯವರ ಪರಿಸ್ಥಿತಿ ಸಂದಿಗ್ಧದಲ್ಲಿತ್ತು. ಏಕೆಂದರೆ ಚಳುವಳಿಯ ನಾಯಕತ್ವ ವಹಿಸಿರೋದು ತಮ್ಮ ಆತ್ಮೀಯರಾಗಿರುವ ಜಯಪ್ರಕಾಶ್ ನಾರಾಯಣ್, ಹೋರಾಟ ನಡೆಸ ಬೇಕಾಗಿರೋದು ತಮ್ಮ ಒಡನಾಡಿಯಾದ ದೇವರಾಜ ಅರಸ್ ಅವರ ವಿರುದ್ದವಾಗಿ ಇದರ ಜೊತೆಗೆ ದೊರೆಸ್ವಾಮಿ ಆಗ ಕಾಂಗ್ರೆಸ್ ಸದಸ್ಯರು ಕೂಡ ಆಗಿದ್ದರು. ಅವರ ಸ್ವಭಾವ ಹೀಗೆ ಸ್ನೇಹ ವಿಶ್ವಾಸವನ್ನು ನೋಡುತ್ತಾ ಕುಳಿತು ಕೊಳ್ಳುವಂತಹದಾಗಿರಲಿಲ್ಲ. ತುರ್ತು ಪರಿಸ್ಥಿತಿಯ ವಿರುದ್ದ ಉಗ್ರ ಹೋರಾಟ ನಡೆಸಿದರು. ಅವರಿಗೆ ನಾಲ್ಕು ತಿಂಗಳ ಜೈಲು ಶಿಕ್ಷೆ ಕೂಡ ಆಯಿತು. ತುರ್ತು ಪರಿಸ್ಥಿತಿ ಮುಗಿದು ಜನತಾ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ ದೊರೆಸ್ವಾಮಿಯವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡುವ ಪ್ರಸ್ತಾಪವನ್ನು ಜಾರ್ಜ್ ಫರ್ನಾಂಡೀಸ್ ಅವರೇ ಇಟ್ಟಿದ್ದರು. ಆದರೆ ಹೋರಾಟಕ್ಕೆ ಸದಾ ಮುಂದಾಗಿದ್ದ ದೊರೆಸ್ವಾಮಿ ಅಧಿಕಾರದಿಂದ ಸದಾ ದೂರವೇ ಉಳಿದರು.
ದೊರೆಸ್ವಾಮಿಯವರ ಹೋರಾಟ ಹಾದಿ ಮುಂದುವರೆಯುತ್ತಲೇ ಹೋಯಿತು. ಹೆಂಡದಂಗಡಿಗಳನ್ನು ಮುಚ್ಚಿಸಲು ಅವರು ಬೆಂಗಳೂರಿನಲ್ಲಿ ಚಳುವಳಿಯನ್ನು ನಡೆಸಿದರು. ದಲಿತರ ಮೇಲೆ ದೌರ್ಜನ್ಯಗಳಾದಾಗ ಸಾಮರಸ್ಯ ಸ್ಥಾಪಿಸಲು ಶಾಂತಿ ಸಭೆಗಳನ್ನು ನಡೆಸಿದರು. ಇಷ್ಟೇ ಅಲ್ಲ ಸಹಕಾರಿ ಚಳುವಳಿಯಲ್ಲಿ ಕೂಡ ಅವರದು ಮುಖ್ಯವಾದ ಪಾತ್ರ. ಹನುಮಂತ ನಗರ ಸಹಕಾರಿ ಬ್ಯಾಂಕ್ ಸ್ಥಾಪಿಸುವಲ್ಲಿ ಮುಖ್ಯವಾದ ಪಾತ್ರವನ್ನು ವಹಿಸಿದರು. ಬಡವರ ಮಕ್ಕಳ ಶಿಕ್ಷಣಕ್ಕಾಗಿ ಹನುಮಂತ ನಗರದಲ್ಲಿ ಭಾರತ ವಿದ್ಯಾಮಂದಿರವನ್ನು ಸ್ಥಾಪನೆ ಮಾಡಿದರು.
ಕೈಗಾ ಅಣುಸ್ಥಾವರ ಸ್ಥಾಪನೆಯಾದಾಗ ಎರಡು ವರ್ಷಗಳ ಕಾಲ ಆ ಭಾಗದ ಹಳ್ಳಿ ಹಳ್ಳಿಗೆ ತಿರುಗಿ ಕೈಗಾ ಅಪಾಯದ ಕುರಿತು ಎಚ್ಚರಿಕೆ ಮೂಡಿಸಿದರು. ಡಂಕಲ್ ಪ್ರಸ್ತಾವನೆ, ಗ್ಯಾಟ್ ಒಪ್ಪಂದಕ್ಕೆ ಸಹಿ ಹಾಕಿದ ವಿಷಯದಲ್ಲಿ ಕೂಡ ಹೋರಾಟ ನಡೆಸಿದರು. ಬಾಲಸುಬ್ರಹ್ಮಣ್ಯಂ ಅವರು ಕರ್ನಾಟಕದಲ್ಲಿ ೪ ಲಕ್ಷ ಎಕರೆ ಸರ್ಕಾರಿ ಜಮೀನು, ಗೋಮಾಳ, ಅರಣ್ಯ ಪ್ರದೇಶ ಕಬಳಿಕೆಯಾಗಿದೆ ಎಂದು ವರದಿ ಸಲ್ಲಿಸಿದಾಗ ಆ ಕುರಿತು ಹೋರಾಟ ಸಂಘಟಿಸಿದವರು ದೊರೆಸ್ವಾಮಿಯವರೇ. ೩೯ ದಿನಗಳ ಕಾಲ ಈ ಕುರಿತು ಟೌನ್ ಹಾಲ್ ಎದುರು ಅವರು ನಡೆಸಿದ ಪ್ರತಿಭಟನೆ ದೊಡ್ಡ ಚರಿತ್ರೆಯೇ ಆಗಿದೆ. ಈ ಹೋರಾಟದ ಫಲವಾಗಿ ಸರ್ಕಾರ ಈಗಾಗಲೇ ೫೦ ಸಾವಿರ ಎಕರೆ ಜಮೀನನ್ನು ಭೂಗಳ್ಳರಿಂದ ಹಿಂಪಡೆಯುವಲ್ಲಿ ಯಶಸ್ಸನ್ನು ಪಡೆದಿದೆ.
ಕಾಲೇಜ್ ದಿನಗಳಲ್ಲಿ ವಾಲಿಬಾಲ್ ದೊರೆಸ್ವಾಮಿಯವರಿಗೆ ಬಹಳ ಪ್ರಿಯವಾದ ಕ್ರೀಡೆಯಾಗಿತ್ತಂತೆ. ಅವರು ಕಾಲೇಜ್ ತಂಡದಲ್ಲಿ ಹಿಟ್ಟರ್ ಆಗಿದ್ದರಂತೆ. ಸಾರ್ವಜನಿಕ ಜೀವನದಲ್ಲೂ ಅವರು ಸದಾ ಹಿಟ್ಟರ್ ಆಗಿಯೇ ಮುಂದುವರೆದರು. ಟ್ರ್ಯಾಜಿಡಿ ಎಂದರೆ ಈ ಇಳಿ ವಯಸ್ಸಿನಲ್ಲೂ ಅವರಿಗೆ ಹಿಟ್ಟರ್ ಆಗುವ ಅವಕಾಶಗಳನ್ನು ಸಮಾಜ ಕೊಡುತ್ತಲೇ ಹೋಯಿತು.
ಹೋರಾಟಕ್ಕೆ ಕೊನೆಗೂ ಅಂತಿಮ ತೆರೆ ಬಿದ್ದಿದೆ. ಅವರ ನೆನಪು ಸದಾ ಸ್ಪೂರ್ತಿಯಾಗಿ ಉಳಿಯಲಿದೆ.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್