- ಕೆಟ್ಟಿದ್ದು ಕಾಲವಲ್ಲ ಮತ್ತು ಒಡಲ ನುಡಿಗಳು - ಮಾರ್ಚ್ 25, 2023
- ಕಲಿಕೆಯ ಮಾಧ್ಯಮವಾಗಿ ಕನ್ನಡ - ನವೆಂಬರ್ 27, 2022
- ಮನೆಯೊಳಗೆ ಮನೆಯೊಡೆಯರಿಲ್ಲ - ಅಕ್ಟೋಬರ್ 23, 2022
ಕನ್ನಡ ಭಾಷೆಯ ವಿಷಯದಲ್ಲಿ ಈವರೆಗಿನ ಎಲ್ಲ ಸರಕಾರಗಳೂ ಪದೇ ಪದೇ ಎಡವುತ್ತಿರುವುದು ಅದನ್ನು ಕಲಿಕೆಯ ಭಾಷಾ ಮಾಧ್ಯಮವಾಗಿ ಅನುಷ್ಠಾನಕ್ಕೆ ತರುವಲ್ಲಿ. ಈಗಿರುವಂತೆ ಎಲ್ಲ ಬಗೆಯ ಪಠ್ಯಕ್ರಮದ ಶಾಲೆಗಳಲ್ಲಿ ರಾಜ್ಯ ಸರಕಾರಗಳಿಗೆ ನಿಯಂತ್ರಣವಿರಲಾರದು. ಆದರೆ ಇತ್ತೀಚಿನ ವರ್ಷಗಳಲ್ಲಿ ನಮ್ಮ ಸರಕಾರಗಳು ಕಲಿಕೆಯ ಭಾಷಾ ಮಾಧ್ಯಮವಾಗಿ ಕನ್ನಡವನ್ನು ತರುವ ಕುರಿತು ದೊಡ್ಡ ಇಚ್ಛಾಶಕ್ತಿಯ ಮಾತನ್ನು ಕೂಡ ಆಡುತ್ತಿಲ್ಲ ಎಂಬುದನ್ನು ಗಮನಿಸಿ. ಎಲ್ಲರೂ ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಪ್ರಸ್ತಾಪಿಸಿ ಯಾರೇನೂ ಮಾಡಲು ಸಾಧ್ಯವಿಲ್ಲ ಎಂದು ಸುಮ್ಮನಾಗುತ್ತಾರೆ. ಮೊದಲು ಭಾಷಾ ರಾಜಕಾರಣದ ಸನ್ನಿವೇಶವನ್ನು ಒಮ್ಮೆ ನೋಡೋಣ.
ಇಂಗ್ಲಿಷ್ ಮಾತೃಭಾಷೆಯಾಗಿ ಉಳ್ಳವರಿಗಿಂತಲೂ ಅದನ್ನು ಎರಡನೇ ಭಾಷೆಯಾಗಿ ಒಪ್ಪಿಕೊಂಡವರು, ಅಪ್ಪಿಕೊಂಡವರು ಎಷ್ಟೋ ಮಿಲಿಯನ್ ಹೆಚ್ಚು ಸಂಖ್ಯೆಯಲ್ಲಿದ್ದಾರೆ ( ಇಡೀ ವಿಶ್ವದ ಭಾಷಾ ಗಣತಿಯ ಮಾಹಿತಿ). ಇದರರ್ಥವೇನು? ಉತ್ತಮ ಶಿಕ್ಷಣ, ಉನ್ನತ ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಉದ್ಯೋಗಾವಕಾಶಗಳು, ಅಧಿಕಾರ, ಅಂತಸ್ತು, ಆಧುನಿಕತೆ ಎಲ್ಲದಕ್ಕೂ ನೇರ ಮತ್ತು ಸುಸ್ಪಷ್ಟ ದಾರಿ ಇಂಗ್ಲಿಷ್. ಅದಕ್ಕೆ ಉದ್ಯಮಗಳ, ಸರಕಾರಗಳ ನಿತ್ಯ ನಿರಂತರ ಬೆಂಬಲವಿದೆ. ” English for business is Business for English”. ವಿಶ್ವ ಭಾಷಾ ರಾಜಕಾರಣದಲ್ಲಿ ಇಂಗ್ಲಿಷ್ ಆಕಸ್ಮಿಕವಾಗಿ ಮುಂಚೂಣಿಗೆ ಬರಲಿಲ್ಲ. ಅದು ಆ ಸ್ಥಾನಕ್ಕೆ ವ್ಯವಸ್ಥಿತವಾಗಿ ಬೆಳೆದುಬಂದಿದೆ ಮತ್ತು ಮುಂದಿನ ನೂರಾರು ವರ್ಷಗಳು ಅದಕ್ಕೆ ಯಾವುದೇ ಭಯ ಕಾಣುತ್ತಿಲ್ಲ. ಇಡೀ ವಿಶ್ವವೇ ಅದರ ಪ್ರಾಬಲ್ಯವನ್ನು ಒಪ್ಪಿಕೊಂಡಾಗಿದೆ.
ಈಗ ನಮ್ಮ ಕನ್ನಡದ ವಿಷಯಕ್ಕೆ ಬರುತ್ತೇನೆ. ಎಲ್ಲ ಭಾರತೀಯ ಭಾಷೆಗಳಿಗೂ ಕನ್ನಡದ ಹಾಗೆಯೇ ಅಸ್ತಿತ್ವದ, ಪ್ರಸ್ತುತತೆಯ ಸವಾಲುಗಳಿವೆ ಎಂಬುದನ್ನು ಮೊಟ್ಟ ಮೊದಲನೆಯದಾಗಿ ಗುರುತಿಸಿಕೊಳ್ಳೋಣ. ಇದನ್ನು ಗುರುತಿಸಿಕೊಂಡಾದ ಮೇಲೆ, ನೀವು ಕೇಳಿರುವ ಪ್ರಶ್ನೆಗೆ ಬರುವೆ: (ಕಲಿಕೆಯ ಮಾಧ್ಯಮದ ಸಂದರ್ಭದಲ್ಲಿ) ಪರಿಣಾಮಕಾರಿ ಬದಲಾವಣೆಗೆ ನಿಮಗೆ ಅಧಿಕಾರವಿದ್ದಿದ್ದ ಪಕ್ಷದಲ್ಲಿ ನಿಮ್ಮ ಐದು ವರ್ಷದ ಕಾರ್ಯಸೂಚಿ ಹೇಗಿರುತ್ತದೆ?
ಕಾರ್ಯಸೂಚಿ
೧. ಪ್ರಾದೇಶಿಕ ಭಾಷೆಗಳ ಅಸ್ತಿತ್ವಕ್ಕೆ ಒದಗಿರುವ ಸವಾಲುಗಳನ್ನು ಎಲ್ಲ ರಾಜ್ಯಗಳ ಆಡಳಿತ ವ್ಯವಸ್ಥೆಗಳೂ ಸಂಘಟಿತವಾಗಿ ಎದುರಿಸಬೇಕು. ನಮ್ಮ ನಮ್ಮ ರಾಜ್ಯಗಳ ವಿದ್ಯಾರ್ಥಿಗಳು ಅವರದೇ ಹಿತದ ದೃಷ್ಟಿಯಿಂದ ಹತ್ತನೇ ತರಗತಿಯವರೆಗಿನ ಶಿಕ್ಷಣವನ್ನು ಮಾತೃ ಭಾಷೆಯಲ್ಲೇ ಪಡೆಯುವುದು ಅಗತ್ಯವಿದೆ ಎಂದು ಮನಗಾಣಿಸಬೇಕು. ಶಿಕ್ಷಣತಜ್ಞರು ಹೇಳುತ್ತಿರುವುದೂ ಅದನ್ನೇ.
೨. ದೇಶಾದ್ಯಂತ ಎಲ್ಲ ಮಕ್ಕಳೂ ಹತ್ತನೇ ತರಗತಿಯವರೆಗಿನ ಶಿಕ್ಷಣವನ್ನು ಏಕರೂಪಿಯಾಗಿ ಅಲ್ಲಲ್ಲಿಯ ಭಾಷೆಗಳಲ್ಲಿ (ಬಹುಮಟ್ಟಿಗೆ ಅದೇ ಆ ಮಕ್ಕಳ ಮಾತೃಭಾಷೆಯೂ ಹೌದು) ಕಲಿಯುವುದು ಖಚಿತವಾದ ಮೇಲೆ ಖಾಸಗಿ/ಸರಕಾರಿ ಅಥವಾ ಕನ್ನಡ ಮಾಧ್ಯಮ/ಇಂಗ್ಲಿಷ್ ಮಾಧ್ಯಮ ಅಥವಾ CBSE / ICSE ಇಂಥ ಎಲ್ಲ ವ್ಯತ್ಯಾಸಗಳು ಅಳಿಯುತ್ತವೆ. ನಮ್ಮಂಥ ದೇಶದ ಬಹುಭಾಷಾ ವಲಯದಲ್ಲಿ ಇಂಥ ಕ್ರಾಂತಿಕಾರಕ ಪರಿವರ್ತನೆಗಳು ಎಲ್ಲೆಡೆಗೂ ಒಟ್ಟಿಗೇ ಜಾರಿಗೆ ಬರುವುದು ಉತ್ತಮ. ಸಂಘಟನೆಯ ಬಲದಿಂದ ಅನುಷ್ಠಾನದಲ್ಲಿ ಉತ್ತಮ ಫಲಿತಾಂಶ ಸಾಧಿಸಬಹುದು. ದೇಶಾದ್ಯಂತ ಏಕರೂಪಿ ಶಿಕ್ಷಣವು “ಹೊಸ ಶಿಕ್ಷಣನೀತಿ”ಯ ಆಶಯವೂ ಹೌದಷ್ಟೆ?
೩. ಸರಕಾರಿ ಶಾಲೆಗಳಲ್ಲಿ ಐದನೇ ತರಗತಿಯಿಂದ ಮಕ್ಕಳು ಇಂಗ್ಲಿಷ್ ಕಲಿಯುವುದು ನಡೆದು ಬಂದಿದೆ. ನಮ್ಮ ಆಡಳಿತದಲ್ಲಿ ಇನ್ನು ಮುಂದೆ ಅದು ಎಲ್ಲ ಶಾಲೆಗಳಲ್ಲಿ ಜಾರಿಗೆ ಬರುತ್ತದೆ. ಈವರೆಗಿದ್ದ ಆರ್ಥಿಕ ಲಾಭ ಇನ್ನು ಮುಂದೆ ಇರುವುದಿಲ್ಲ ಎಂದಾದ ಬಳಿಕ ಇಂಥ ಸನ್ನಿವೇಶದಲ್ಲಿ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣ ವ್ಯಾಪಾರ ನಿಲ್ಲಿಸಬಹುದು. ನಮ್ಮ ಸರಕಾರವು ಇಂಥ ಸಂದರ್ಭವನ್ನು ಎದುರಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿರುತ್ತದೆ. ಹತ್ತನೇ ತರಗತಿಯವರೆಗಿನ ಶಿಕ್ಷಣವನ್ನು ಅತ್ಯುತ್ತಮವಾದ ಪರಿಸರದಲ್ಲಿ ಮತ್ತು ತಾಯ್ನುಡಿಯಲ್ಲಿ ನೀಡಲು ನಮ್ಮ ಸರಕಾರ ಸಿದ್ಧವಾಗಿರುತ್ತದೆ. ಯಾವುದೇ ತಟ್ಟೀರಾಯರೂ ನಮ್ಮನ್ನು ಹೆದರಿಸಲಾರರು.
೪. ಶಿಕ್ಷಣನೀತಿ, ಪಠ್ಯಕ್ರಮ, ಪಠ್ಯ ಇವೆಲ್ಲವುಗಳ ನಿರಂತರ ಪರಿಷ್ಕರಣೆ ನಡೆಯುವುದು. ಹೊಸ ಕಲಿಕಾ/ ಬೋಧನಾ ವಿಧಾನ ಅಳವಡಿಸಲಾಗುವುದು. ಮಕ್ಕಳಿಗೆ ಎಲ್ಲ ಶಾಲೆಗಳಲ್ಲಿ ಒಂದೇ ಗುಣಮಟ್ಟದ ಶಿಕ್ಷಣ ದೊರೆಯುವುದು.
೫. ಎಲ್ಲ ಜ್ಞಾನ ಕ್ಷೇತ್ರಗಳಲ್ಲಿ ನಡೆಯುವ ಹೊಸ ಬೆಳವಣಿಗೆಗಳು, ಪ್ರಕಟವಾಗುವ ಹೊಸ ಪುಸ್ತಕಗಳು ಆಯಾ ವರ್ಷಗಳಲ್ಲೇ ತಡವಿಲ್ಲದೆ ಕನ್ನಡಕ್ಕೆ ಅನುವಾದಗೊಳ್ಳಬೇಕು. ಇದಕ್ಕಾಗಿ ಅತ್ಯುತ್ತಮ ಪಂಡಿತರ ತಂಡವನ್ನೇ ನೇಮಕ ಮಾಡಿಕೊಳ್ಳಲಾಗುವುದು. ಇದು ಸದಾ ಕಾಲ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುವ ಸಂಸ್ಥೆ. ಪರಿಭಾಷೆಗಳಲ್ಲಿ ಏಕರೂಪತೆ ತರುವ ಹೊಣೆಯೂ ಇವರದೇ.
೬. ಹತ್ತನೇ ತರಗತಿಯ ಬಳಿಕ ಮಕ್ಕಳು ತಮ್ಮ ಸ್ವಂತ ನಿರ್ಧಾರದಂತೆ ಅಗತ್ಯಕ್ಕೆ ಅನುಗುಣವಾಗಿ ಕಲಿಕೆ ಭಾಷೆ ಆರಿಸಿಕೊಳ್ಳಲಿ. ಈ ಹೊತ್ತಿಗೆ ಅವರ ಮಾತೃಭಾಷಾ ಜ್ಞಾನ ಮತ್ತು ನೈಪುಣ್ಯ ಅತ್ಯುತ್ತಮ ನೆಲೆಯಲ್ಲಿರುತ್ತದೆ. ಇಲ್ಲಿಯೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಕುರಿತು ಮುಂದಿನ ಆಡಳಿತಾವಧಿಯಲ್ಲಿ ಯೋಚಿಸಲಾಗುವುದು.
೭. ‘ಸರಿ, ಇವೆಲ್ಲವೂ ಸಾಧ್ಯವೇ?’ ಎಂಬ ಪ್ರಶ್ನೆಗೆ ನನ್ನ ಉತ್ತರ : ” ಏಕೆ ಸಾಧ್ಯವಾಗಬಾರದು?”. ಕರ್ನಾಟಕವನ್ನು ನಿಜವಾದ ಅರ್ಥದಲ್ಲಿ ಕನ್ನಡ ಭಾಷಿಕರ ನೆಲೆಯಾಗಿ ಉಳಿಸಲು ಇನ್ನಾವ ಹಾದಿಯೂ ಇಲ್ಲ: ನಮ್ಮ ಮಕ್ಕಳು ಕನಿಷ್ಠ ಹತ್ತು ವರ್ಷ ಕನ್ನಡದಲ್ಲೇ ಕಲಿಯಬೇಕು. ನಮ್ಮ ಸದ್ಯದ ಸಂಕರ ಶಿಕ್ಷಣ ವ್ಯವಸ್ಥೆಯೇ ಮುಂದುವರಿಯುವುದು ಎಂದಾದರೆ ಕನ್ನಡ ಅಪ್ರಸ್ತುತಗೊಳ್ಳುವ ದಿನಗಳು ದೂರವಿಲ್ಲ. ಕನ್ನಡದ, ಕನ್ನಡಿಗರ ಹಿತದೃಷ್ಟಿಯಿಂದ ನೋಡಿದಾಗ ಎಲ್ಲೆಡೆ ಏಕರೂಪಿಯಾಗಿ ಕನ್ನಡದಲ್ಲಿ ಅತ್ಯುತ್ತಮ ಶಿಕ್ಷಣ ನೀಡುವುದೇ ಸದ್ಯ ಜಾರಿಯಲ್ಲಿರುವ ಶಿಕ್ಷಣದ ಅವ್ಯವಸ್ಥೆಗಳಿಗೆ ಸೃಜನಶೀಲ ಪ್ರತಿಕ್ರಿಯೆಯಾಗಿದೆ.
ಹೆಚ್ಚಿನ ಬರಹಗಳಿಗಾಗಿ
ಚಾಚಾ ನೆಹರು ಮತ್ತು ನಮ್ಮ ಮಕ್ಕಳು
ಭವಿಷ್ಯದ ಔದ್ಯೋಗಿಕ ಕ್ಷೇತ್ರದಲ್ಲಿ ಕನ್ನಡಿಗರು
೨೦೨೨ ನವೆಂಬರ್ ಕಾಲದಲ್ಲಿ ಕನ್ನಡ: ಚರ್ಚೆ