ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕಾಡುವ ಕಥೆಗಳ ಶೆಟ್ಟರ ಕಥನ ಕುತೂಹಲ..

ಮೃತ್ಯುಂಜಯ ಸಾಲಿಮಠ
ಇತ್ತೀಚಿನ ಬರಹಗಳು: ಮೃತ್ಯುಂಜಯ ಸಾಲಿಮಠ (ಎಲ್ಲವನ್ನು ಓದಿ)

ರಾಜೇಂದ್ರ ಬಿ. ಶೆಟ್ಟಿಯವರ ಕಥನ ಕುತೂಹಲ ಕಥಾ ಸಂಕಲನವನ್ನು ಈಗ ಓದಿ ಮುಗಿಸಿದೆ. ಫೇಸ್ ಬುಕ್ನಲ್ಲಿನ ಒಂದು ಸಾಹಿತ್ಯದ ಗುಂಪಿನ ಮುಖೇನ ಶೆಟ್ಟರು ನನಗೆ ಪರಿಚಯ. ಶೆಟ್ಟರ ಜಿಲೇಬಿ ಮಾಮ ನನ್ನ ಬಹಳವಾಗಿ ಕಾಡಿದ, ಮನಸನ್ನು ಆರ್ದ್ರಗೊಳಿಸಿದ.. ಮತ್ತು ಆಗಾಗ ನನ್ನ ನೆನಪಿನ ಅಂಗಳದಲ್ಲಿ ಇಣುಕಿ ಕಾಡುವ ಕಥೆ. ಜಿಲೇಬಿ ಮಾಮ ಕಥೆಯನ್ನ ಅದೆಷ್ಟು ಬಾರಿ ಓದಿರುವೆ ನಾನರಿಯೆ. ಪ್ರತಿ ಸಾರಿ ಓದಿದಾಗಲೂ ಮೊದಲ ಸಾರಿ ಆ ಕಥೆ ಓದಿದಾಗ ಆದ ಅನುಭವವೇ ನನಗೆ ಆಗಿದೆ… ಕಣ್ಣೀರು ಕೆನ್ನೆ ಮೇಲೆ ಜಾರಿದೆ. ಶೆಟ್ಟರ ಜೀಲಿಬಿ ಮಾಮನ ಕಥೆಯ ನನ್ನ ಮನೆಯ ಎಲ್ಲರಿಗೂ ಓದಿ ಹೇಳಿ ಅವರನ್ನೂ ನಾನು ಅಳಿಸಿರುವೆ.

ಕಥನ ಕುತೂಹಲ ಲೇಖಕರು ಶ್ರೀ ರಾಜೇಂದ್ರ ಬಿ. ಶೆಟ್ಟಿ

ಇಂತಿಪ್ಪ ಶೆಟ್ಟರ ಎರಡನೇ ಕಥಾ ಸಂಕಲನವೇ ಕಥನ ಕುತೂಹಲ. ಕಥಾ ಸಂಕಲನ ನನ್ನ ಕೈಸೇರಿದ ಮೊದಲು ನಾನು ಹುಡುಕಿದ್ದು ಜಿಲೇಬಿ ಮಾಮನ ಕಥೆಯನ್ನೇ!. ಆದರೆ ಆ ಕಥೆ ಕಾಣದೇ.. ಅರೇ ಶೆಟ್ಟರು ಅಂತ ಒಳ್ಳೆಯ ಕಥೆಯನ್ನ ತಮ್ಮ ಕಥಾಸಂಕಲನದಲ್ಲಿ ಸೇರಿಸಿಲ್ಲವಲ್ಲ ಅನ್ನಿಸಿ, ಶೆಟ್ಟರಿಗೆ ಮೆಸೇಜ್ ಮಾಡಿ ವಿಚಾರಿಸಿದೆ. ಆ ಕಥೆ ನನ್ನ ಮೊದಲ ಸಂಕಲನದಲ್ಲಿ ಇದೆ. ಇದು ನನ್ನ ಎರಡನೇ ಕಥಾ ಸಂಕಲನ. ಆ ಮೊದಲ ಸಂಕಲನವನ್ನೂ ನಿಮಗೆ ಕಳಿಸುವೆ ಅಂದರು. ಎರಡೂ ಸಂಕಲನವೂ ನನ್ನ ಕೈಸೇರಿದ ಮೇಲೆ, ಜಿಲೇಬಿ ಮಾಮ ಕಥೆ ಕಂಡು ಖುಷಿಯಾದೆ.. ಮತ್ತೊಮ್ಮೆ ಓದಿದೆ. ಮೊದಲ ಸಂಕಲನದ ಇತರ ಕಥೆಗಳ ನಾನಿನ್ನೂ ಓದಿಲ್ಲ. ಓದುವೆ. ಶೆಟ್ಟರ ಮೊದಲ ಕಥಾ ಸಂಕಲನದ ಬಗ್ಗೆ ಮತ್ತೊಮ್ಮೆ ಬರೆಯುವೆ.

ಕಥನ ಕುತೂಹಲದಲ್ಲಿ ಇಪ್ಪತ್ತಾರು ಕಥೆಗಳಿವೆ. ಒಂದೂ ವಿರಾಮ ತೆಗೆದುಕೊಳ್ಳದೆ ಈ ಕಥಾಸಂಕಲನದ ಎಲ್ಲಾ ಕಥೆಗಳ ಒಂದೇ ಉಸಿರಿನಲ್ಲಿ ಓದಿ ಮುಗಿಸಿದೆ. ಓದಿ ಮುಗಿಸಿದೆ ಅಂದರೆ ತಪ್ಪಾಗುತ್ತೆ. ಓದಿದೆ ಅನ್ನುವುದು ಸರಿಯೇನೋ. ಯಾಕಂದ್ರೆ ಈ ಕಥೆಗಳು ಓದಿ ಮುಗಿಸಿ ಮರೆತು ಹೋಗುವ ಕಥೆಗಳಲ್ಲ. ಕಾಡುವ ಕಥೆಗಳು. ನಮ್ಮೊಳಗೆ ಕಥೆಗಳ ಹುಟ್ಟಿಸುವ ಕಥೆಗಳು. ಓದಿಯಾದ ಮೇಲೆ ನಮ್ಮೊಳಗೆ ಅರಳಿಕೊಂಡು ಬೆಳೆವ ಕಥೆಗಳು…. ನಮ್ಮೊಳಗೆ ಹೊಕ್ಕು ಬೀಡು ಬಿಡುವ ಕಥೆಗಳು…ಓದಿದ ಮೇಲೆ ನಮ್ಮೊಳಗೆ ಏನನ್ನೋ ಶುರು ಮಾಡುವ ಕಥೆಗಳು.

ಸರಳ ಭಾಷೆ. ಅಡೆ ತಡೆಯಿಲ್ಲದೆ, ಬುದ್ಧಿಗೆ ಕೆಲಸ ಕೊಡದೆ ಓದಿಸಿಕೊಂಡು ಹೋಗುವ ಕಥೆಗಳು. ಹೃದಯ ಮುಟ್ಟುವ ಕಥೆಗಳು. ಇಲ್ಲಿನ ಕಥೆಗಳ ವಸ್ತುಗಳ ಶೆಟ್ಟರು ಯೋಚಿಸಿ, ಈ ವಸ್ತು ಇಟ್ಟುಕೊಂಡು ಕಥೆ ಮಾಡಿದರೆ ಚೆನ್ನ ಅಂತ ಹುಡುಕಿ ತೆಗೆದ.. ಏನೋ ಹೊಸತನ್ನು, ಯಾರೂ ಹೇಳದ್ದನ್ನು ನಾನು ಹೇಳಬೇಕು ಅನ್ನುವ ಹಠಕ್ಕೆ ಬಿದ್ದು ಆರಿಸಿಕೊಂಡ ಕಥಾವಸ್ತುಗಳಲ್ಲ. ಶೆಟ್ಟರ ಕೈಗೆ ಹಾಗೆ ಸಹಜವಾಗಿ ಸಿಕ್ಕು ತಾವೇ ಕಥೆಯಾದ ಸಂಗತಿಗಳು. ಬಹುಶಃ ಶೆಟ್ಟರು ಕಥೆ ಶುರು ಮಾಡುವಾಗ ಈ ವಿಷಯದ ಮೇಲೆ ಕಥೆ ಬರೆಯುವೆ ಅಂತ ಮನಸಲ್ಲಿ ಚಿತ್ರ ಮೂಡಿಸಿಕೊಂಡು, ಕತೆಗಳ ಮುಕ್ತಾಯವನ್ನೂ ಯೋಚಿಸಿಕೊಂಡು ಈ ಕಥೆಗಳ ಬರೆದಂತೆ ನಾ ಕಾಣೆ. ಒಂದು ಎಳೆ, ಒಂದು ಹೊಳವನ್ನು ಇಟ್ಟುಕೊಂಡು ಸುಮ್ಮನೆ ಬರೆದುಕೊಂಡು ಹೋದ, ಶೆಟ್ಟರಿಂದ ಹಾಗೆ ಬರೆಸಿಕೊಂಡ ಕಥೆಗಳು, ಈ ಕಥೆಗಳು ಅನ್ನಿಸುತ್ತೆ
ವಯಸ್ಸಾಗಿ, ಬದುಕ ದಿನಗಳು ಮುಗಿಯುವ ಹೊತ್ತಾದ ಹೊತ್ತಲ್ಲಿ, ಅರ್ಧಾಂಗಿ ಕಳೆದುಕೊಂಡು, ಒಬ್ಬಂಟಿಯಾಗಿ, ಇರುವ ಒಬ್ಬನೇ ಕುಪುತ್ರ ಹೆಚ್ಚು ಓದಿಕೊಂಡ ಹುಚ್ಚಿನಲ್ಲಿ ವಿದೇಶದಲ್ಲಿ ಕೂತುಕೊಂಡು, ಮನುಷ್ಯತ್ವ ಕಳೆದುಕೊಂಡು, ಹೃದಯಹೀನನಾಗಿ ಹೆತ್ತ ತಂದೆಯ ನೋಡಿಕೊಳ್ಳುವ ಕರ್ತವ್ಯ ಮರೆತು ಕೂತಿರುವಾಗ, ಜೀವನೋತ್ಸಾಹವನ್ನ ಕಳೆದುಕೊಳ್ಳದೆ ತನ್ನದೇ ವಯದವರ ಗುಂಪಲ್ಲಿ ಎಲ್ಲಾ ಮರೆತೋ, ಕರಗಿಸಿಕೊಂಡೋ ಬದುಕ ಬದುಕುತ್ತಿರುವ ರಾವ್ ಒಂದು ಕಥೆಯ ವಸ್ತು. ಒಂದು ಕತೆಯ ಪಾತ್ರ. ಒಂದು ಕತೆಯ ಜೀವ. ಇರುವೊಬ್ಬನೇ ‘ ಈಡಿಯಟ್’ ಮಗ ಬರುತ್ತಾನೆ ಅನ್ನುವ ಸಣ್ಣ ಆಸೆ ಕೂಡ ಬಹುಶಃ ರಾವ್ ಅವರು ಇಟ್ಟುಕೊಂಡಿರಲಿಲ್ಲ ಅನ್ನಿಸುತ್ತೆ. ನಿಮ್ಮ ತಂದೆ ಸತ್ತು ಹೋಗಿದ್ದಾರೆ ಅಂತ ಫೋನ್ ಮಾಡಿದರೆ.. ಓಹ್ ಹೌದ.. ನನಗೆ ಬರಲಾಗುವುದಿಲ್ಲ ಅಂತ ಹೇಳುವ ಈಡಿಯಟ್ ಮಗ ಈ ಕತೆಯೊಳಗೆ ನಿಜವಾಗಿ ಸತ್ತು ಹೋದ ಪಾತ್ರ. ಕಥೆ ಓದಿ ಮುಗಿಸಿದಾಗ, ಸಣ್ಣಗೆ ಎದೆಯೊಳಗೆ ಏನೋ ಚುಚ್ಚಿದ ಅನುಭವ. ಇದು ನಿಜದಿ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲ್ಸಾ ಮಾಡುತ್ತಾ ವಿದೇಶದಲ್ಲಿ ನೆಲೆಸಿರುವ ಮಕ್ಕಳ ಹೆತ್ತಿರುವ ಅನೇಕ ಪೋಷಕರ ಕಥೆ.. ವ್ಯಥೆ. ರಾವ್ ಅವರ ಈಡಿಯಟ್ ಮಗನಷ್ಟು ಈಡಿಯಟ್ ಮಕ್ಕಳು ಎಲ್ಲರೂ ಆಗದೇ ಇದ್ದರೂ, ತೊಂಬತ್ತರ ದಶಕದಿಂದ ಈಚೆಗೆ, ಅನೇಕ ಮನೆಗಳಲ್ಲಿ ಒಂದು ರೀತಿ ಸಂಕಟವನ್ನು, ನೋವನ್ನು ಸೃಷ್ಟಿಸಿರುವ ವಾಸ್ತವದ ಚಿತ್ರಣ ಈ ಕಥೆ.

ಶೆಟ್ಟರು ಕಥೆ ಬರೆಯಲೇ ಬೇಕು.. ಒಳ್ಳೆ ಕಥೆ ಬರೆಯಲೇ ಬೇಕು.. ಅನ್ನುವ ಹುಕಿಗೆ, ಹಠಕ್ಕೆ ಬಿದ್ದು, ಕಥೆ ಹೆಣೆಯುವ ತಂತ್ರಗಳ ಅಳವಡಿಸಿಕೊಂಡು, ಓದುಗರ ಮನಸಲ್ಲಿ ಇಟ್ಟುಕೊಂಡು, ಇಂತ ಕಥೆ ಬರೆದರೆ ಜನ ಮೆಚ್ಚುತ್ತಾರೆ, ಇಂತ ಕಥೆ ಬರೆದರೆ ಮೆಚ್ಚುವುದಿಲ್ಲ ಇತ್ಯಾದಿ ಲೆಕ್ಕಾಚಾರ ಹಾಕಿಕೊಂಡು ಈ ಕಥೆಗಳ ಬರೆಯದೆ, ತಾವು ತೆರೆದ ಕಣ್ಣು, ಕಿವಿಗಳಿಂದ ಕಂಡುಂಡ ಬದುಕ ಅನುಭವಗಳ ಮನಸ ಬಿಚ್ಚಿ ಈ ಕಥೆಗಳ ಬರೆದಿದ್ದಾರೆ ಅನ್ನಿಸುತ್ತೆ. ಅಂದ ಹಾಗೆ ನಾನು ಈಗ ಬರೆಯ ಹೊರಟಿರುವುದು ಕಥೆಯೇ ಅನ್ನುವ ಭಾವವನ್ನೂ ಇಟ್ಟುಕೊಳ್ಳದೆ ಬರೆದ ಸೃಷ್ಟಿಗಳೆ ಈ ಕಥೆಗಳಾಗಿದ್ದಾವೆ ಅನ್ನುವುದು ನನ್ನ ಭಾವನೆ. ಅಸಲಿಗೆ ಸೃಜನಶೀಲತೆ ಅಂದರೆ ಇದೇ ಅಲ್ಲವೇ?!

ಸಮಾಜದಲ್ಲಿ ಯುಗ ಯುಗಗಳಿಂದ ಒಂದಲ್ಲ ಒಂದು ರೀತಿಯಲ್ಲಿ ನಡೆಯುತ್ತಾ ಬಂದಿರುವ ಬಡವರ ಮೇಲಿನ, ಮೇಲ್ವರ್ಗದವರ/ಉಳ್ಳವರ ಶೋಷಣೆ, ತಾರತಮ್ಯತೆ ಕೂಡ ಶೆಟ್ಟರ ಕಾಡಿದೆ..ಶೆಟ್ಟರ ಗ್ರಹಿಕೆಗೆ ಸಿಕ್ಕು ಕಥೆಗಳಾಗಿವೆ.


ಕಿತ್ತು ತಿನ್ನುವ ಬಡತನ ಹೇಗೆ ಮನುಷ್ಯನನ್ನ ಏನಾದ್ರೂ ಸಹಿಸಿಕೊಳ್ಳುವಂತೆ ಮಾಡುತ್ತೆ ಅನ್ನುವುದಕ್ಕೆ ಇಲ್ಲಿನ ಒಂದು ಕಥೆಯಲ್ಲಿ ಕಥೆಯ ಮುಖ್ಯ ಪಾತ್ರಧಾರಿ, ಹೇಗೆ ಐದು ಲಕ್ಷದ ಆಸೆಗೆ ತನ್ನದಲ್ಲದ ತಪ್ಪನ್ನ ತಾನು ಒಪ್ಪಿಕೊಂಡು ಜೈಲು ಶಿಕ್ಷೆ ಅನುಭವಿಸುತ್ತಾನೆ ಅನ್ನುವುದು ಒಂದು ಉದಾಹರಣೆಯಾಗಿ ಕಾಣುತ್ತೆ. ಅದೇ ರೀತಿ ಬಡತನದ ಕ್ಯಾನ್ವಾಸಿನ ಹಿನ್ನೆಲೆಯ ಇನ್ನೊಂದು ಕಥೆಯಲ್ಲಿ, ಅರೆ ಮಿರ್ಲೆ(ಅರೆ ಹುಚ್ಚ!), ಕುಡುಕ ತಂದೆ ದುಡ್ಡಿನ ಆಸೆಗೆ ಬಿದ್ದು ತನ್ನ ಮಗಳು, ಮಗನ ಕಂಡ ಕಂಡವರ ಮನೆಯ ಬಾಗಿಲಲ್ಲಿ ಕುಣಿಸುತ್ತಾ ದುಡ್ಡು ಗಳಿಸುವ, ಹಾಗೆ ಮಾಡುವಾಗ ಹೆಚ್ಚಿನ ದುಡ್ಡಿನ ಆಸೆಗೆ ಮರುಳಾಗಿ, ಶ್ರೀಮಂತರ ಮನೆಯ ಬಾಗಿಲಿಗೆ ಮಕ್ಕಳ ಕರೆದುಕೊಂಡು ಹೋಗಿ ಕುಣಿಸುವ, ಆಗ ಶ್ರೀಮಂತರ ಕೆಟ್ಟ ದೃಷ್ಟಿಗೆ ಸಿಕ್ಕು ಶೋಷಣೆಗೆ ಒಳಗಾಗುವ ಆ ಹೆಣ್ಣು ಮಗಳಿನ ಚಿತ್ರಣ ಮತ್ತೊಂದು ಕಥೆಯ ವಸ್ತು. ಮನಸನ್ನ ಖಿನ್ನ ಗೊಳಿಸುವ ಕಥೆ.

ಒಳ್ಳೆಯ ಮನಸಿನ ಈ ಶೆಟ್ಟರಿಗೆ, ಒಳಿತು ಹುಡುಕುವ ಮನೋಭಾವ, ಮನುಷ್ಯರಲ್ಲಿನ ಒಳಿತನ್ನ ಕಾಣಿಸುತ್ತಾ.. ಅನಂಗ ದೆವ್ವಗಳ ಒಳಗೂ ಒಳಿತು ಹುಡುಕಿಸುವ ಕೆಲಸ ಮಾಡಿದೆ.. ಒಳಿತನ್ನೇ ಕಾಣಿಸಿದೆ. ಒಳಗಿರುವ ಒಳ್ಳೆಯದು, ಕೆಟ್ಟದ್ದು ಅವೇ ಅಲ್ಲವೇ ನಮ್ಮ ಒಳಗಿನ ಮನುಷ್ಯನನ್ನ, ದೆವ್ವವನ್ನ, ದೇವರನ್ನ ಕಾಣಿಸುವುದು.. ಹೊರಗೆ ತರುವುದು.

ಶೆಟ್ಟರ ಕಥೆಗಳ ಬಗೆಗಿನ ವಿಮರ್ಶೆ ಈ ಲೇಖನವಲ್ಲ. ನಾನೂ ವಿಮರ್ಶಕನೂ ಅಲ್ಲ. ಒಬ್ಬ ಓದುಗನಾಗಿ ನಾ ಗ್ರಹಿಸಿದ್ದನ್ನಷ್ಟೆ ಹೇಳಿರುವೆ. ಶೆಟ್ಟರ ಬಗೆಗಿನ ಅಪರಿಮಿತ ಅಭಿಮಾನಕ್ಕೊ ಏನೋ ಕಾಣೆ, ಕಥನ ಕುತೂಹಲ ಸಂಕಲನದ ಕಥೆಗಳಲ್ಲಿ ನನಗೆ ತಪ್ಪುಗಳು ಕಾಣಲಿಲ್ಲ. ಆದರೆ.. ಒಂದೆರಡು ಕಥೆಗಳು ಮಾತ್ರ ಶೆಟ್ಟರ ಕಥೆಗಳು ಓದಿಸಿಕೊಂಡು ಹೋಗುವ ವೇಗವನ್ನ ನನ್ನ ಓದಿಗೆ ತಂದುಕೊಡಲಿಲ್ಲ.

ಉಡುಪಿ ಜಿಲ್ಲೆಯ ಹೆಜಮಾಡಿಯ ರಾಜೇಂದ್ರ ಬಿ. ಶೆಟ್ಟರು, ನನ್ನ ಹಾಗೆ ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿದ್ದರೂ ಬದುಕನ್ನ, ಮನಸನ್ನ, ಯಾಂತ್ರೀಕೃತ ಗೊಳಿಸಿಕೊಳ್ಳದೆ, ಕಥೆಗಳ ಸೃಷ್ಟಿಸುತ್ತಾ ಸೃಜನಶೀಲತೆಯನ್ನ ನಳನಳಿಸುವಂತೆ ಜೀವಂತವಾಗಿ ಇಟ್ಟುಕೊಂಡಿರುವುದು ಅತ್ಯಂತ ಖುಷಿಯ, ಸ್ಪೂರ್ತಿದಾಯಕ ವಿಷಯ. ಶೆಟ್ಟರು ಕಾಡುವ ಕಥೆಗಳ ಬರೆಯುವುದರ ಜೊತೆಗೆ ಒಳ್ಳೆಯ ಫೋಟೋಗ್ರಾಫರ್ ಕೂಡ. ನಲವತ್ತು ವರ್ಷಗಳು ವಿವಿಧ ಕಂಪನಿಗಳಲ್ಲಿ ವಿವಿಧ ಹುದ್ದೆಗಳಲ್ಲಿ ವೃತ್ತಿ ಜೀವನ ನಡೆಸಿರುವ ಶೆಟ್ಟರು ಈಗ ಬೆಂಗಳೂರಿನ ಜೆ. ಪಿ ನಗರದಲ್ಲಿ ವಾಸಿಸುತ್ತಿದ್ದಾರೆ.

ಶೆಟ್ಟರೆ ಹೀಗೆ ಕಾಡುವ ಕಥೆಗಳ ನಮಗೆ ಮತ್ತಷ್ಟು ಮಗದಷ್ಟು ಕೊಡುತ್ತಾ, ನೂರಾರು ಕಾಲ, ಆರೋಗ್ಯದಿಂದ, ನಿಮ್ಮ ಯಾವತ್ತಿನ ಲವಲವಿಕೆಯಿಂದ, young at heart ಆಗಿಯೇ ಇರಿ. ನಿಮ್ಮ ವ್ಯಕ್ತಿತ್ವ ನನಗೆ ಸದಾ ಸ್ಪೂರ್ತಿದಾಯಕ.


ಆಸಕ್ತರು ಶೆಟ್ಟರ ಕಥನ ಕುತೂಹಲ ಪುಸ್ತಕವನ್ನ ಆನ್ಲೈನ್ ಅಲ್ಲಿ ಕೆಳಗಿನ ಲಿಂಕ್ ಬಳಸಿ ತರಿಸಿಕೊಳ್ಳಬಹುದು.

https://tejupublicationsonline.myinstamojo.com/product/273375/kathana-kutoohala/