- ಗುರಿ, ದಾರಿ, ಬದುಕು ಮತ್ತು ತಿರುವು..! - ಜುಲೈ 22, 2023
- ಪದಪದುಮಗಳು ಅರಳಿ ನಲಿವ ಪರಿ..! - ಅಕ್ಟೋಬರ್ 23, 2022
- ಕಿಟ್ಟೆಲ್ ಕೋಶ : ಕನ್ನಡದ ಅಪೂರ್ವ ನಿಘಂಟು! - ಮೇ 28, 2022
ಫರ್ಡಿನ್ಯಾಂಡ್ ಕಿಟ್ಟೆಲ್! ಕನ್ನಡಿಗರು, ಕನ್ನಡ ಸಾರಸ್ವತ ಲೋಕವು ಸದಾ ಸ್ಮರಿಸಬೇಕಾದ ಹೆಸರು ರೆವರೆಂಡ್ ಫರ್ಡಿನ್ಯಾಂಡ್ ಕಿಟ್ಟೆಲ್. ಕಿಟ್ಟೆಲ್ ಅವರ ಬಗ್ಗೆ, ಕನ್ನಡಕ್ಕೆ ಅವರು ಸಲ್ಲಿಸಿರುವ ಮಹತ್ತ್ವದ ಸೇವೆಯ ಬಗ್ಗೆ ತಿಳಿದಿರುವವರು ಅಪರೂಪ. ಕಿಟ್ಟೆಲ್ ಯಾರು? ಅವರ ಸಾಧನೆ ಏನು? ವಿದೇಶದಿಂದ ಭಾರತಕ್ಕೆ ಬಂದು ಕರ್ನಾಟಕದಲ್ಲಿ ನೆಲೆಸಿ, ಕನ್ನಡಕ್ಕೆ ಸೇವೆ ಸಲ್ಲಿಸಿದ್ದು ಹೇಗೆ? ಈ ಎಲ್ಲ ಮಾಹಿತಿಗಳು ಬಹುತೇಕರಿಗೆ ತಿಳಿದಿಲ್ಲ. ಆ ನಿಟ್ಟಿನಲ್ಲಿ ಕಿಟ್ಟೆಲ್ ಹಾಗೂ ಕಿಟ್ಟೆಲ್ ಕೋಶದ ಬಗ್ಗೆ ಕೆಲವು ಅಪೂರ್ವ ಮಾಹಿತಿಗಳನ್ನು ತಿಳಿಸುವ ಒಂದು ಪ್ರಯತ್ನವೇ ಈ ಬರಹ.
ಕಿಟ್ಟೆಲ್ ಅವರು ಹುಟ್ಟಿದ್ದು- ಎಪ್ರಿಲ್ ೮, ೧೮೩೨ರಲ್ಲಿ ಜರ್ಮನಿಯ ರೋಸ್ಟರ್ಹಾಫೆಯಲ್ಲಿ. ಮನೆಗೆ ಹಿರಿಮಗರಾದ ಕಿಟ್ಟೆಲ್, ಮಾಧ್ಯಮಿಕ ಶಿಕ್ಷಣವನ್ನು ತಮ್ಮ ಊರಿನಲ್ಲೇ ಮುಗಿಸಿದರು. ಅನಂತರ ಅವರ ತಂದೆಯ ಆಸೆಯಂತೆ ಬಾಸೆಲ್ ಮಿಶನ್ ಸಂಸ್ಥೆಯ ಮಿಷನರಿ ಶಿಕ್ಷಣಕ್ಕೆ ಸೇರಿಕೊಂಡು ಕಾಲೇಜು ಅಭ್ಯಾಸ ಮಾಡಿದರು. ಆ ಸಂದರ್ಭದಲ್ಲಿ ಅಲ್ಲಿನ ಸಂಸ್ಥೆ ಇವರನ್ನು ಕ್ರೈಸ್ತ ಮತದ ಪ್ರಚಾರಕ್ಕೆಂದು ಭಾರತಕ್ಕೆ ಕಳಿಸುವ ತೀರ್ಮಾನ ಕೈಗೊಳ್ಳುತ್ತದೆ.. ಅದಾಗಲೇ ಹೀಬ್ರೂ, ಗ್ರೀಕ್, ಲ್ಯಾಟಿನ್, ಫ್ರೆಂಚ್ ಮತ್ತು ಇಂಗ್ಲಿಷ್ ಭಾಷೆಯನ್ನು ಕಲಿತುಕೊಂಡಿದ್ದ ಕಿಟ್ಟೆಲ್, ಜರ್ಮನಿ ಇಂದ ೧೮೫೩ರಲ್ಲಿ, ತಮ್ಮ ೨೧ನೆಯ ವಯಸ್ಸಿಗೆ ಭಾರತಕ್ಕೆ ಬಂದರು. ೧೮೫೪ರಲ್ಲಿ ಮಂಗಳೂರಿಗೆ ಬಂದು ಅನಂತರ ಧಾರವಾಡ ಭಾಗಗಳಲ್ಲಿ ಮತಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡರು. ಆ ದಿನಗಳಲ್ಲಿ ಮತ ಪ್ರಚಾರಕ್ಕಾಗಿ ಸ್ಥಳೀಯ ಜನರೊಂದಿಗೆ ಬೆರೆತು ತಮ್ಮ ವಿಚಾರಗಳನ್ನು ಸ್ಥಳೀಯರ ಭಾಷೆಯಲ್ಲೇ ಸಂವಹಿಸಲು ಸ್ಥಳೀಯ ಭಾಷೆಗಳನ್ನು ಕಲಿಯುವುದು ಅನಿವಾರ್ಯವಾಗಿತ್ತು. ಅಂತೆಯೇ ಕನ್ನಡ ಕಲಿಯಲು ಆಸಕ್ತಿ ತೋರುವ ಕಿಟ್ಟೆಲ್ ತುಸು ಹೆಚ್ಚೇ ಶ್ರದ್ಧೆ, ಪ್ರೀತಿಗಳಿಂದ ಕನ್ನಡ ಭಾಷೆಯೆಡೆಗೆ ಆಕರ್ಷಿತರಾದರು. ಧಾರವಾಡದ ಸುತ್ತಮುತ್ತಲಿನ, ದೇಸಿ ಭಾಷೆಗಳನ್ನು ಅರಿಯಲು ಕಾಲುನಡಿಗೆಯಲ್ಲೇ ಹಳ್ಳಿಗಾಡುಗಳಲ್ಲಿ, ಗುಡ್ಡಗಾಡುಗಳಲ್ಲಿ, ನಿರ್ಗಮ ಕಾಡು-ಮೇಡುಗಳಲ್ಲಿ ಊರೂರು ಅಲೆದು, ಆ ಪ್ರದೇಶಗಳ ಆಡುಭಾಷೆಯ ಪರಿಚಯ ಮಾಡಿಕೊಂಡು, ತರುವಾಯ ಮಂಗಳೂರಿಗೆ ಬಂದು ಕನ್ನಡ ಅಧ್ಯಯನದಲ್ಲಿ ಅತ್ಯಾಸಕ್ತಿ ಮತ್ತು ಅತ್ಯುತ್ಸಾಹದಿಂದ ತಲ್ಲೀನರಾದರು. ಜತೆಜತೆಗೆ ಸಂಸ್ಕೃತ, ತುಳು, ಮಲಯಾಳಂ ಭಾಷೆಗಳನ್ನೂ ಪರಿಚಯ ಮಾಡಿಕೊಳ್ಳತೊಡಗಿದರು.
ಹೀಗಿರುವಾಗ, ೧೮೭೧ರಲ್ಲಿ ಮಂಗಳೂರಿನ ಬಾಸೆಲ್ ಮಿಶನ್ ಸಂಸ್ಥೆ ಕಿಟ್ಟೆಲರ ಕನ್ನಡ ಭಾಷಾ ಪ್ರಭುತ್ವ ಹಾಗೂ ವಿದ್ವತ್ತನ್ನು ಗಮನಿಸಿ ಕನ್ನಡ-ಇಂಗ್ಲಿಷ್ ಶಬ್ದಕೋಶವನ್ನು ರಚಿಸಲು ಅವರನ್ನು ಕೇಳಿಕೊಳ್ಳುತ್ತದೆ. ಅದಕ್ಕೆ ಸಮ್ಮತಿಸಿದ ಕಿಟ್ಟೆಲರು ೧೮೭೨ರಲ್ಲಿ ಸೂಕ್ಷವಾಗಿ ಅದರ ರೂಪರೇಖೆಯನ್ನು ತಯಾರಿಸಿಕೊಂಡು, ನಿಘಂಟು ತಯಾರಿಸುವ ಜವಾಬ್ದಾರಿಯನ್ನು ಹೊತ್ತುಕೊಂಡರು. ತಮ್ಮ ಬಿಡುವಿನ ಬಹುತೇಕ ವೇಳೆಯನ್ನು ನಿಘಂಟಿನ ಕೆಲಸದಲ್ಲಿಯೇ ಕಳೆಯಲು ಆರಂಭಿಸಿದರು. ಅದಕ್ಕಾಗಿ ಕನ್ನಡ ಬಲ್ಲ ವಿದ್ವಾಂಸರ ನೆರವು ಪಡೆದುಕೊಂಡರು. ಧಾರವಾಡದ ರಸ್ತೆಗಳಲ್ಲಿ ನಿಂತು ಕಿಸೆಯಲ್ಲಿಟ್ಟುಕೊಂಡು ಬಂದ ಸಣ್ಣ ಪುಟ್ಟ ವಸ್ತುಗಳನ್ನು ಓಡಾಡುವವರಿಗೆ ತೋರಿಸಿ ಕನ್ನಡದಲ್ಲಿ ಏನೆಂದು ಕರೆಯುತ್ತಾರೆ ಎಂದು ಕೇಳಿ ಉಚ್ಚಾರಗಳನ್ನು ದಾಖಲಿಸಿಕೊಳ್ಳುತ್ತಿದ್ದರು ಕಿಟ್ಟೆಲ್. ಒಂದೊಂದೇ ಹನಿ ಸೇರಿ ಸಾಗರುವಾಗುವಂತೆ ಪದಗಳ ಸಂಖ್ಯೆ ವಿಪುಲವಾಗಿ ಬೆಳೆಯುತ್ತ ಹೋಯಿತು. ಶಾಸ್ತ್ರೀಯ ಗ್ರಂಥಗಳು ಮತ್ತು ಗಾದೆ ಮಾತುಗಳಲ್ಲಿ ಬಳಕೆಯಾಗುತ್ತಿದ್ದ ಕನ್ನಡ ಪದಗಳೂ ಕಿಟ್ಟೆಲ್ರ ಕೋಶಕ್ಕೆ ಸೇರುತ್ತ ಹೋದವು. ಜನರು ಮಾತನಾಡುವ ಪದಗಳನ್ನು ತಮ್ಮ ಸಂಗ್ರಹಕ್ಕೆ ಸೇರಿಸಿಕೊಂಡರು. ನಿಘಂಟಿನ ಕಾರ್ಯ ಭರದಿಂದ ಸಾಗಿತ್ತು.
ಹೀಗೆ ಅಪಾರ ಆಸ್ಥೆಯಿಂದ ನಿಘಂಟಿನ ಕಾರ್ಯ ಸಾಗುತ್ತಿದ್ದಾಗ ೧೮೭೭ರಲ್ಲಿ ದುರದೃಷ್ಟವಶಾತ್ ಕಿಟೆಲ್ರ ಆರೋಗ್ಯ ಕೈಕೊಡುತ್ತದೆ. ಆಗ ತಮ್ಮ ನಿಘಂಟಿನ ಹಸ್ತಪ್ರತಿಯೊಂದಿಗೆ ಜರ್ಮನಿಗೆ ತೆರಳಿದ ಕಿಟೆಲ್ರಿಗೆ ಅನಾರೋಗ್ಯದ ಮಧ್ಯೆದಲ್ಲಿಯೂ ಅಲ್ಲಿ ಸುಮ್ಮನೆ ಕೂರಲು ಆಗಲಿಲ್ಲ. ನಿಘಂಟಿನ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ಮುಂದುವರೆಸಿದರು. ೧೮೮೩ರಲ್ಲಿ ಮತ್ತೆ ಭಾರತಕ್ಕೆ ಮರಳಿದರು. ಮತ್ತಷ್ಟು ಕ್ರಿಯಾಶೀಲರಾಗಿ ನಿಘಂಟಿಗಾಗಿ ದುಡಿಯತೊಡಗಿದರು. ಕುಳಿತು ನಿಂತಲ್ಲೆಲ್ಲ ಅದೇ ಗುಂಗು. ಸಿಕ್ಕಸಿಕ್ಕವರ ಜೊತೆಗೆಲ್ಲ ಶಬ್ದಗಳ ಬಗೆಗೇ ಮಾತು ಚರ್ಚೆ. ಹೀಗೆ ತಮ್ಮ ಅನವರತ ಅಭ್ಯಾಸ, ಪರಿಶ್ರಮಗಳಿಂದ ೧೮೯೨ರಲ್ಲಿ ಕನ್ನಡದ ಮಹಾನ್ ನಿಘಂಟನ್ನು ಪೂರ್ಣಗೊಳಿಸಿದರು ಕಿಟ್ಟೆಲ್. ಮಂಗಳೂರಿನ ಬಾಸೆಲ್ ಮಿಷನ್ ೧೮೯೪ರಲ್ಲಿ ಇದನ್ನು ಪ್ರಕಟಿಸುತ್ತದೆ..ಕಿಟೆಲ್ ಸಂಗ್ರಹಿಸಿರುವ ಈ ಶಬ್ದಕೋಶ ಕನ್ನಡದ ಮಟ್ಟಿಗೆ ಬಹಳ ಅರ್ಥಪೂರ್ಣ ಹಾಗೂ ಮಹತ್ತ್ವದ್ದು.
ಹೌದಾ? ಕಿಟ್ಟೆಲರ ಕೋಶ ಅಷ್ಟು ಮಹತ್ವದ್ದಾ? ಏಕೆ? ತಿಳಿಯೋಣ..
ಕಿಟ್ಟೆಲ್ ಈ ‘ಕನ್ನಡ-ಇಂಗ್ಲಿಷ್ ನಿಘಂಟು’ ಅಥವಾ ‘ಕಿಟ್ಟೆಲ್ ಕೋಶ’ ಸುಮಾರು ೧೮೦೦ ಪುಟಗಳ, ಸುಮಾರು ೭೦೦೦೦ ಪದಗಳನ್ನೊಳಗೊಂಡ ಬೃಹತ್ ನಿಘಂಟು! ಕನ್ನಡದ ಮಟ್ಟಿಗೆ ಇದೊಂದು ಬಹಳ ವಿಶೇಷ ಹಾಗೂ ಅನನ್ಯ ಸಂಗ್ರಹ. ಏಕೆಂದರೆ ಕಿಟ್ಟೆಲ್ ಅವರು ಬರಿ ಕನ್ನಡದ ಪದಗಳಿಗೆ ಇಂಗ್ಲಿಷ್ ಅರ್ಥಗಳನ್ನು , ಕನ್ನಡದ ಇತರ ಅರ್ಥ, ನಾನಾರ್ಥಗಳನ್ನು ನೀಡಿರುವುದು ಅಷ್ಟೇ ಅಲ್ಲ. ಹಲವಾರು ಪದಗಳಿಗೆ ತೆಲುಗು, ತಮಿಳು, ತುಳು, ಸಂಸ್ಕೃತ, ಮರಾಠಿ ಭಾಷೆಗಳಲ್ಲಿ ಏನನ್ನುತ್ತಾರೆ ಎಂಬುದನ್ನೂ ಈ ಕೋಶದಲ್ಲಿ ಉಲ್ಲೇಖಿಸಿದ್ದಾರೆ. ಸರ್ವಜ್ಞಪದ, ಬಸವ ಪುರಾಣ, ದಾಸಪದ, ಜೈಮಿನಿ ಭಾರತ, ಶಬ್ದಮಣಿದರ್ಪಣ ಮುಂತಾದ ಹಲವು ಮುಖ್ಯ ಕೃತಿಗಳಲ್ಲಿ ಆಯಾ ಪದಗಳನ್ನು ಬಳಸಿರುವದನ್ನು ಇಲ್ಲಿ ನಮೂದಿಸಿದ್ದಾರೆ. ಆಯಾ ಪದಗಳಿಗೆ ಹೊಂದುವ ಗಾದೆಗಳನ್ನು, ನಾಣ್ಣುಡಿಗಳನ್ನು ಸಂಗ್ರಹಿಸಿ ಬರೆದಿದ್ದಾರೆ. ಏನಿಲ್ಲವೆಂದರೂ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಗಾದೆಗಳು ಈ ನಿಘಂಟಿನಲ್ಲಿವೆ ಎಂದರೆ ನೀವೇ ಊಹಿಸಿಕೊಳ್ಳಿ. ಆ ಮೂಲಕ ಕನ್ನಡ ಜನಪದ ಸಾಹಿತ್ಯಕ್ಕೂ ಇವರ ಕೊಡುಗೆ ಸಲ್ಲುತ್ತದೆ. ಜನಪದ ಭಾಷೆಯನ್ನು ಬಳಸಿಕೊಂಡು ನಿಘಂಟು ರಚಿಸುವ ಮಾದರಿಗೆ ಕಿಟ್ಟೆಲ್ ಅವರ ಪ್ರಯತ್ನ ಬಹಳ ಮುಖ್ಯವಾದುದೆನಿಸುತ್ತದೆ..
ಕಿಟೆಲರ ಪರಿಶ್ರಮ, ಕರ್ತವ್ಯನಿಷ್ಠೆ, ಅಚ್ಚುಕಟ್ಟುತನ, ವೈಜ್ಞಾನಿಕತೆ, ವಿದ್ವತ್ತುಗಳನ್ನು ನಾವು ಅರಿಯಬೇಕಾದರೆ ಒಮ್ಮೆ ಆ ಶಬ್ದಜಗತ್ತಿಗೆ ಭೇಟಿ ನೀಡಲೇಬೇಕು. ಹಾಗಾಗಿ ಈ ರೀತಿ ಮೇಲುನೋಟಕ್ಕೆ ಅದರ ಮಹತ್ವ ಹೇಳುವುದಕ್ಕಿಂತ ಆ ಶಬ್ದ ಜಗತ್ತಿನ ಒಂದು ಸಣ್ಣ ಝಲಕ್ ನಿಮ್ಮ ಮುಂದಿಡುತ್ತೇನೆ. ನೋಡಿ.
—@-@-@—
ಊರು ಎಂದರೆ ನಮಗೆಲ್ಲ ಪ್ರೀತಿ. ಆ ಹಸಿರು, ಆ ಗಾಳಿ, ದಾರಿ, ಕೆರೆ ಅಥವಾ ಕಾಲುವೆಗಳು, ದನಕರುಕುರಿಗಳು, ಮಣ್ಣಿನ ಘಮ, ಮನೆಗಳು, ನಿಶ್ಶಬ್ಧತೆ, ಪ್ರಶಾಂತ ವಾತಾವರಣ, ಊರಿನ ಜನರು-ಹೀಗೆ ಅದೊಂದು ಬೆರಗು. ಹಾಗಾಗಿ ಊರು ಎಂಬ ಪದದ ಜಾಡು ಹಿಡಿದು ಹೋಗುವ.
—@-@-@—
ಊರು ಎಂಬ ಪದಕ್ಕೆ ನಮಗೆಲ್ಲ ಗೊತ್ತಿರುವ ಹಾಗೆ ಹಳ್ಳಿ, ಗ್ರಾಮ, ಪುರ ಮುಂತಾದ ಅರ್ಥಗಳಿವೆ.
ಇಂಗ್ಲಿಷ್ನಲ್ಲಿ Village; ಇವಿಷ್ಟೂ ನಮಗೆ ಪರಿಚಿತ. ಇನ್ನು, ಕಿಟ್ಟೆಲ್ ತಮ್ಮ ನಿಘಂಟಿನಲ್ಲಿ ‘ಊರು’ ಪದಕ್ಕೆ ಏನೇನು ವ್ಯಾಖ್ಯಾನಿಸಿದ್ದಾರೆ ನೋಡಿ.
ಊರಿನ ಬಗ್ಗೆ ವಿವರಿಸುತ್ತ ಕಿಟ್ಟೆಲ್ ಅತ್ಯದ್ಭುತವಾದ ಸರ್ವಜ್ಞನ ತ್ರಿಪದಿಗಳ ಎರಡು ಸಾಲುಗಳನ್ನು ಹಾಗೂ ಒಂದು ತ್ರಿಪದಿಯನ್ನೂ ಉದ್ಧರಿಸಿದ್ದಾರೆ:
೧. “ಜ್ಞಾನವಿಲ್ಲದನ ಕಾಯವು ಹಾಳೂರ ಸ್ಥಾನದಿಂ ಕಡೆಯೆ!”- ಜ್ಞಾನದ ಮಹತ್ವ ತಿಳಿಸುವ ಸಾಲು; ಜ್ಞಾನವಿಲ್ಲದ ಈ ಶರೀರ ಹಾಳೂರಲ್ಲಿ ಸಿಕ್ಕ ಸ್ಥಾನದಂತೆ ಎಂದೆಂದಿಗೂ ಅದು ಶ್ರೇಷ್ಠವಾಗಲಾರದು ಎಂಬುದು ಇದರ ತಾತ್ಪರ್ಯ.
೨. ಒಕ್ಕಲಿಲ್ಲದ ಊರು| ಮಕ್ಕಳಿಲ್ಲದ ಮನೆಯು|ಅಕ್ಕಳಿಲ್ಲದ ತವುರು ಇದ್ದು ಫಲವೇನು?
೩. ಒಳ್ಳೆಯನ್ ಇರದ ಊರು| ಕಳ್ಳನ ಒಡನಾಟವೂ|
ಸುಳ್ಳನ ಮಾತು ಇವು ಮೂರು ಕೆಸರೊಳಗೆ|
ಮುಳ್ಳು ತುಳಿದಂತೆ – ಸರ್ವಜ್ಞ||
ಮತ್ತು ದಾಸಪದದ ಒಂದು ಸಾಲನ್ನೂ ನೀಡಿದ್ದಾರೆ ಓದಿ:
ಒಕ್ಕಲಿಲ್ಲದ ಊರು ಕೊಳೆತು ನಾರುವ ನೀರು.
—@-@-@—
ಇನ್ನು, ಕಿಟ್ಟೆಲರು ಹಲವಾರು ಗಾದೆಗಳನ್ನು ನಮ್ಮ ಮುಂದಿಡುತ್ತಾರೆ. ಇವು ಬಹಳ ವಿರಳ ಹಾಗೂ ಅತ್ಯದ್ಭುತ ಗಾದೆಗಳು. ಅವುಗಳಲ್ಲಿ ಕೆಲವನ್ನು ಹೆಕ್ಕಿ ನಿಮ್ಮ ಓದಿಗೆ ನೀಡುತ್ತಿದ್ದೇನೆ.
=> ಊರ ಮುಂದೆ ನೇಗಿಲ ಹೂಡಿದರೆ ಕಂಡಕಂಡವರಿಗೆ ಒಂದೊಂದು ಮಾತು.
=> ಊರ ಸೇರಿದ ಮೇಲೆ ದಾರಿ ತೀರಿತು.
=> ಊರಿಗೆ ಹೋಗದವರಿಗೆ ದಾರೀ ಗೊಡವೆ ಯಾಕೆ?
=> ಊರಿಗೆ ಅರಸನಾದರೂ ತಾಯಿಗೆ ಮಗ.
=> ಊರು ಮೂರು ಸುತ್ತು ಸುತ್ತಿದರೂ ಊರ ಬಾಗಿಲಲ್ಲಿಯೇ ಹೊರಡಬೇಕು.
=> ಊರಿಗೆ ಬರುವನಕಾ ಒಬ್ಬ ನೆಂಟ, ಊರಿಗೆ ಬಂದ ಮೇಲೆ ಎಲ್ಲರೂ ನೆಂಟರು.
=> ಊರು ಸುಟ್ಟರೂ ಹನುಮಂತರಾಯ ಹೊರಗೆ.
=> ಊರೆಲ್ಲಾ ಸೂರೆ ಆದ ಮೇಲೆ ಬಾಗಿಲು ಹಾಕಿದರು.
[ಸೂರೆ ಎಂದರೆ ಲೂಟಿ, ಕೊಳ್ಳೆ ಎಂದರ್ಥ]
—@-@-@—
ಕೆಲವು ನುಡಿಗಟ್ಟುಗಳ ಅರ್ಥ:
ಊರ ಪಾರಿವಾಳ- A village or house pigeon;
ಊರುಕಟ್ಟೆ- A raised seat around a tree in front of a village;
ಊರುಕತ್ತೆ- A village or domestic donkey;
ಊರುಕೇರಿ- A village or town street;
ಊರುದೇವಮ್ಮ- A village goddess;
ಊರಪ್ಪ- ಗೌಡ, ಮಾರಪ್ಪ;
ಊರುಬಾಗಿಲು- A town gate, ಗೋಪುರ, ಪುರದ್ವಾರ;
—@-@-@—
‘ಊರು’ ಪದಕ್ಕೆ ಕಿಟ್ಟೆಲ್ ಕೊಟ್ಟಿರುವ ಮತ್ತೊಂದು ಅರ್ಥ- ತೊಡೆ(The thigh) ಎಂದು.
ಇದಕ್ಕೆ ಸಂಬಂಧಿಸಿದಂತೆ ‘ಊರುಭಂಗ’ಎಂಬ ಒಂದು ಪದ ಪ್ರಯೋಗ ಇದೆ. ಇದರ ಅರ್ಥ ತೊಡೆಯನ್ನು ಮುರಿಯುವದು ಎಂದು. ಪಂಪಭಾರತ, ರನ್ನನ ಗದಾಯುದ್ಧದಲ್ಲೂ ಈ ಪದವಿದೆ.
ಸಂಸ್ಕೃತದಲ್ಲೂ ‘ಊರು’ ಎಂದರೆ ತೊಡೆ ಅಂತಲೇ ಅರ್ಥ ಇದೆ. ಸಂಸ್ಕೃತದ ಪ್ರಸಿದ್ಧ ನಾಟಕಕಾರ ಭಾಸ ‘ಊರುಭಂಗ’ ಎಂಬ ನಾಟಕ ಬರೆದಿದ್ದಾನೆ. ಈ ನಾಟಕವನ್ನು ಕನ್ನಡದ ಮಹತ್ವ ಸಂಶೋಧಕರು, ವಿದ್ವಾಂಸರಾದ ಡಾ. ಎಲ್. ಬಸವರಾಜು ಅವರು ಕನ್ನಡಕ್ಕೆ ಭಾಷಾಂತರಿಸಿದ್ದಾರೆ.
—@-@-@—
ಅಬ್ಬಾ! ನೋಡಿದಿರ ಕೇವಲ ಒಂದೇ ಒಂದು ಪದದ ಜಾಡು ಹಿಡಿದು ನಮಗೆ ಎಷ್ಟೆಲ್ಲ ಮಾಹಿತಿ ದೊರಕಿಸಿಕೊಟ್ಟಿದ್ದಾರೆ ಕಿಟ್ಟೆಲ್. ಅಸಂಖ್ಯ ಪದಗಳ ಬಗ್ಗೆ ಸಂಶೋಧಿಸಿ, ಅವುಗಳ ಅರ್ಥಸಾರ ತಿಳಿದು, ಅಪಾರ ಶ್ರಮವಹಿಸಿ ಹೀಗೆ ಬೃಹತ್ ಪದಕೋಶವಾಗಿ ಸಂಗ್ರಹಿಸಿರುವ ಆ ಮಹನೀಯನಿಗೆ ಒಂದು ಸಲಾಂ ಹೇಳಲೇಬೇಕಲ್ಲವೆ?
ಕಿಟ್ಟೆಲರ ನಿಘಂಟಿನ ಕಾರ್ಯವನ್ನು ಮೆಚ್ಚಿ ಜರ್ಮನಿಯ ಟ್ಯುಬಿಂಗನ್ ವಿಶ್ವವಿದ್ಯಾಲಯ ೧೮೯೪ ರಲ್ಲಿ ಗೌರವ ಡಾಕ್ಟರೇಟ್ ನೀಡಿದೆ. ಕನ್ನಡದ ಕಾರ್ಯಕ್ಕಾಗಿ ದೊರಕಿದ ಮೊದಲ ಡಾಕ್ಟರೇಟ್ ಇದು. ಇದಲ್ಲದೇ ಶಾಸನ ಸಂಗ್ರಹ, ಸಂಶೋಧನೆ, ಜಾನಪದಗೀತೆಗಳ ಸಂಗ್ರಹ, ಹಳಗನ್ನಡ ಗ್ರಂಥಗಳ ಸಂಪಾದನೆ ಮತ್ತು ಪ್ರಕಟಣೆಯಂತಹ ಸಾಂಸ್ಕೃತಿಕ- ಸಾಹಿತ್ಯಕ ಕ್ಷೇತ್ರದಲ್ಲಿಯೂ ಕಿಟೆಲ್ ಶ್ರಮವಹಿಸಿದ್ದಾರೆ. ಹಾಗಾಗಿ ಕನ್ನಡ ನಾಡು ನುಡಿ ಇರುವವರೆಗೂ ಕಿಟ್ಟೆಲ್ ಹೆಸರು ಅಜರಾಮರ. ಮತಪ್ರಚಾರದಂಥ ಸಂಕುಚಿತ ಉದ್ದೇಶಕ್ಕಾಗಿ ಬಂದರೂ ಅದನ್ನು ಮೀರಿಸುವ ಸಾರ್ಥಕ ಕಾರ್ಯವನ್ನು ಸಾಧಿಸಿದ್ದು ಕಿಟ್ಟೆಲರ ಹೆಗ್ಗಳಿಕೆ.
ಕಿಟೆಲ್ ಕೋಶ ಆನ್ಲೈನಲ್ಲಿ ಪಿಡಿಎಫ್ ರೂಪದಲ್ಲಿ ನಮಗೆ ಲಭ್ಯವಿರುವುದು ನಮ್ಮ ಸೌಭಾಗ್ಯವೇ ಸರಿ.
ಸಾಧ್ಯವಾದಾಗ ಆ ಬೆರಗಿನ ಊರಿಗೆ ನೀವು ಭೇಟಿಕೊಡಿ (ಲಿಂಕ್ : https://archive.org/details/KittelKannadaEnglishDictionary/page/n61/mode/1up).
ಎಲ್ಲಿಯ ಜರ್ಮನಿ? ಎಲ್ಲಿಯ ಕರ್ನಾಟಕ? ಎಲ್ಲಿಯ ಕಿಟ್ಟೆಲ್? ಹಾಗೂ ಎಲ್ಲಿಯ ಕನ್ನಡ? ಈ ಎಲ್ಲ ಬಿಂದುಗಳು ಬೆಸೆದುಕೊಂಡ ಅಚ್ಚಳಿಯದ ಒಂದು ಮಹತ್ಕಾರ್ಯಕ್ಕೆ ಸಾಕ್ಷಿಯಾದ ರೀತಿ ನಿಜಕ್ಕೂ ಸೋಜಿಗ ಅಲ್ಲವೆ?
ಪಾಶ್ಚಾತ್ಯ ದೇಶದಿಂದ ಬಂದು ತೀರ ಅಪರಿಚಿತವಾದ ಕನ್ನಡ ನೆಲ, ಸಂಸ್ಕೃತಿ, ಭಾಷೆಯನ್ನು ಅವಗಾಹಿಸಿಕೊಂಡು ಕನ್ನಡಕ್ಕಾಗಿ ಅವಿರತ ಶ್ರಮ ಪಟ್ಟು ಒಂದು ಅರ್ಥಪೂರ್ಣ ಕಾರ್ಯಸಾಧಿಸಿ ತೋರಿಸುವ ಮೂಲಕ ಸತತ ಪರಿಶ್ರಮ, ಪ್ರಯತ್ನ, ನಿಷ್ಠೆ, ಪ್ರೀತಿ, ಶ್ರದ್ಧೆಗಳಿಂದ ಯಾವ ಕಾರ್ಯವನ್ನಾದರೂ ಸಾಧಿಸಬಹುದು, ಅದಕ್ಕೆ ದೇಶ-ಕಾಲ ಎಂಬ ಗಡಿಗಳಿಲ್ಲ ಎಂಬುದನ್ನು ಸಾಬೀತುಪಡಿಸಿದಕ್ಕೆ ಕಿಟ್ಟೆಲ್ ನಮಗೆಲ್ಲ ಮಾದರಿ ಅಲ್ಲವೆ?
ಜೈ ಕನ್ನಡ, ಜೈ ಕಿಟ್ಟೆಲ್….
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್