ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಗುರಿ, ದಾರಿ, ಬದುಕು ಮತ್ತು ತಿರುವು..!

ಪುನೀತ್ ಕುಮಾರ್ ವಿ

ಗಾಯಕಿ ಆಗಬೇಕೆಂದು ಆಸೆಹೊತ್ತು, ಚಿಕ್ಕಂದಿನಿಂದಲೂ ಬಹಳ ಆಸ್ಥೆಯಿಂದ, ಶ್ರದ್ಧೆಯಿಂದ ಸಂಗೀತ ಕಲಿಯುತ್ತಿದ್ದ, ಹುಡುಗಿಯೊಬ್ಬಳು ಮುಂದೆ ಭವಿಷ್ಯದಲ್ಲಿ ತನಗೆ ಸಂಗೀತದ ಗಂಧವೇ ಇಲ್ಲವೆಂಬಂತೆ, ಗಗನದೆತ್ತರದ ಕಟ್ಟಡದ ಮಹಡಿಯ ಮೂಲೆಯೊಂದರಲ್ಲಿ ಲ್ಯಾಪ್‌ಟಾಪ್‌ನೊಳಗೆ ಹುದುಗಿ ಹೋಗಿರುತ್ತಾಳೆ; ಕ್ರಿಕೆಟ್ ಎಂದರೆ ಪಂಚಪ್ರಾಣ, ಆಟದಲ್ಲೂ ಪ್ರವೀಣ. ಆದರೆ ಅವನು ಕೊರಿಯರ್ ಆಫೀಸಿನೊಳಗೆ ಪತ್ರಗಳ ರಾಶಿಯೊಳಗೆ ತಾನು ತಲುಪಿಸಬೇಕಾದ ಪತ್ರಗಳ ತಡಕಾಡುತ್ತ , ಪತ್ರಗಳ ಮೂಟೆಯನ್ನು ಬೆನ್ನಿಗೇರಿಸಿಕೊಂಡು ‘ಡೆಲಿವರಿ ಬಾಯ್’ ಆಗಿ ಅಲೆದಾಡುತ್ತಿರುತ್ತಾನೆ…

ಇದೇಕೆ ಹೀಗಾಯ್ತು? ಸಂಗೀತಯಾನದ ಜತೆಗೆ ತನ್ನ ಜೀವನ ಸಾಗಬೇಕೆಂದು ಅದಮ್ಯ ಆಸೆಯಿದ್ದ ಅವಳಿಗೆ ಸಾಫ್ಟ್‌ವೇರ್‌ನ ದಾರಿ ತೋರಿದವರಾರು? ಕ್ರಿಕೆಟರ್ ಆಗುವುದೇ ತನ್ನ ಗುರಿ, ಖುಷಿ ಎಂದು ನಂಬಿದ್ದ ಅವನು ಆ ಗುರಿಯೆಡೆಗೆ ಏಕೆ ಬೆನ್ನಟ್ಟಿ ಹೋಗಲಿಲ್ಲ? ತಮ್ಮ ಗುರಿ ಸ್ಪಷ್ಟ ಇದ್ದ ಇವರಿಗೆ ಗುರಿಯ ದಿಕ್ಕಿನೆಡೆಗೆ ನಡೆಯುವ ದಾರಿ ಗೊತ್ತಿದ್ದ ಇವರಿಗೆ, ಆ ಗುರಿಯನ್ನು ತಲುಪಲು ಏಕೆ ಸಾಧ್ಯವಾಗಲಿಲ್ಲ?

ಕನಸುಗಳನ್ನು ಕಾಣುವುದಕ್ಕೂ, ಅವುಗಳನ್ನು ನನಸು ಮಾಡಿಕೊಳ್ಳುವುದಕ್ಕೂ ವ್ಯತ್ಯಾಸ ಇದೆ. ಅದಕ್ಕಾಗಿ ಪರಿಶ್ರಮಪಡುವುದು ಹೇಳಿಕೊಳ್ಳುವಷ್ಟು ಸುಲಭ ಅಲ್ಲ. ಆ ಕನಸಿನ ಹಾದಿಯ ತುಂಬ ಬರಿ ಕಲ್ಲುಮುಳ್ಳುಗಳೇ, ಅಲ್ಲಿ ಸತತ ಪರೀಕ್ಷೆಗಳು ಎದುರಾಗುತ್ತವೆ, ಸಾಗುವಾಗ ಎಡವುವ ಸಂಭವವಿರುತ್ತದೆ, ಸುಲಭವಾಗಿ ಸಾಗುತ್ತಿದ್ದೇವೆ ಎನ್ನುವಷ್ಟರಲ್ಲಿ ಕತ್ತಲೆ ಕವಿದಂತಾಗುತ್ತದೆ, ಕಣ್ಣುಗಳು ಮಂಜಾಗುತ್ತವೆ, ಕೈಕಟ್ಟಿಹಾಕಿದ, ಕಣ್ಣಿಗೆ ಬಟ್ಟೆ ಕಟ್ಟಿದ ಅನುಭವಗಳಾಗುತ್ತವೆ. ಇವುಗಳನ್ನೆಲ್ಲ ಮೀರಿ ಆ ಗುರಿ ತಲುಪಬೇಕಾಗುತ್ತದೆ. ಒಂದು ಗುರಿಯನ್ನು ಇಟ್ಟುಕೊಂಡವರು ಏನೇ ಸಂಕಷ್ಟಗಳನ್ನು, ಸವಾಲುಗಳನ್ನು ಎದುರಿಸಲು ಸದಾ ಸಿದ್ಧರಿರಲೇಬೇಕು. ಆ ಕಸುವು ಇಲ್ಲದಿದ್ದರೆ ಕುಸಿಯುವುದು ಸಹಜ. ಹಾಗಾಗಿ ಗುರಿ ಸಾಧನೆಯ ಪಥದಲ್ಲಿ ಸೋಲುವವರೇ ಹೆಚ್ಚು..

ತಮ್ಮ ಭವಿಷ್ಯದೆಡೆಗೆ ನೂರಾರು ಕನಸುಗಳ ಹೊತ್ತ ಎಷ್ಟೋ ಜನರು ಕನಸು ಕಾಣುತ್ತಲೇ ಜೀವನ ಸವೆಸಿಬಿಡುತ್ತಾರೆ ಎಂಬುದು ಕಟುಸತ್ಯ. ಕೆಲವರಿಗೆ ತಾವು ನಡೆಯುತ್ತಿರುವ ದಾರಿ ತಲುಪಬೇಕಾದ ಗುರಿಯನ್ನು ತಲುಪಿಸಿದರೆ, ಕೆಲವರಿಗೆ ಗುರಿಯ ದಿಕ್ಕು ಹಾಗೂ ನಡೆವ ದಾರಿ ಎರಡೂ ವಿರುದ್ಧವಾಗಿರುತ್ತವೆ. ಕೆಲವರಿಗೆ ನಡೆವ ದಾರಿ ಹಾಗೂ ಗುರಿಯ ಬಗ್ಗೆ ಸ್ಪಷ್ಟತೆಯಿದ್ದರೆ, ಬಹುತೇಕರಿಗೆ ಗುರಿಯೂ, ದಾರಿಯೂ ಮಸುಕು ಮಸುಕಾಗಿರುತ್ತದೆ. ಮತ್ತೆ ಕೆಲವರಿಗೆ ಗುರಿ ಮುಟ್ಟಲು ದಾರಿಯೇ ಇರುವುದಿಲ್ಲ ಅವರೇ ಆ ದಾರಿ ಅರಸುತ್ತ ಹೊಸ ದಾರಿ ಸೃಷ್ಟಿಸುತ್ತ ಗುರಿ ಸೇರಬೇಕಾಗುತ್ತದೆ. ಇನ್ನೂ ವಿಚಿತ್ರವೆಂದರೆ ಎಷ್ಟೋ ಜೀವಗಳಿಗೆ ತಮ್ಮ ದಾರಿಯನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವೇ ಇರುವುದಿಲ್ಲ. ಇಷ್ಟವಿಲ್ಲದಿದ್ದರೂ ಅನ್ಯರು ತೋರಿದ ದಾರಿಯಲ್ಲೇ ನಡೆಯಬೇಕಾದ ಅನಿವಾರ್ಯವೋ, ಅಸಹಾಯಕತೆಯೋ ಎದುರಾಗುತ್ತದೆ. ಅವನ ಕ್ರಿಕೆಟ್ ಆಟದ ಕನಸನ್ನು, ಅವಳ ಸಂಗೀತದ ಕನಸನ್ನು ಕಮರಿಸುವುದು ಇದೇ ಅಸಹಾಯಕತೆ, ಅನಿವಾರ್ಯತೆಯಲ್ಲದೆ ಮತ್ತೇನು? ಮಧ್ಯಮ ವರ್ಗದ ಕುಟುಂಬ ಅವನದು. ಬಾಲ್ಯದಿಂದಲೂ ಬಡತನ ಮೈಗೂಡಿಸಿಕೊಂಡು ಬೆಳೆದಿರುತ್ತಾನೆ. ಶಾಲೆ ಮುಗಿಸಿ, ಪಿಯು ಮುಗಿಸಿ, ಯಾವುದೋ ಡಿಗ್ರಿ ಕಾಲೇಜಿನಲ್ಲಿ ಓದುವ ಜತೆಜತೆಗೆ ಪಾರ್ಟ್ ಟೈಂ ಕೆಲಸ ಮಾಡುತ್ತ ಬೆಳೆದ ಅವನಿಗೆ ಕ್ರಿಕೆಟ್ ಆಟ ಕೇವಲ ಗೆಳೆಯರೊಂದಿಗೆ ಸಮಯ ಸಿಕ್ಕಾಗ ಆಡಲಷ್ಟೇ ಮೀಸಲಾಗಿರುತ್ತದೆ. ಮನೆಯ ಬಡತನ ಹಾಗೂ ಅವಕಾಶಗಳ ಕೊರತೆ ಅವನನ್ನು ಗಲ್ಲಿಯಿಂದಾಚೆ ಮಿನುಗಲು ಬಿಡದು. ಸಿರಿತನದ ಮನೆ ಅವಳದು ಅಪ್ಪ ಅಮ್ಮ ಇಬ್ಬರೂ ಉತ್ಕೃಷ್ಟ ವೃತ್ತಿಯಲ್ಲಿರುವವರು.. ಮಗಳು ತಮ್ಮಂತಾಗದೇ ಸಂಗೀತ, ನಾಟ್ಯ ಎಂದು ಹೆಚ್ಚು ಹಣಗಳಿಕೆ ಇಲ್ಲದ ಕಲೆಯ ದಾರಿಗೆ ಸಾಗಿದರೆ ಸುಮ್ಮನಿರುತ್ತಾರೆಯೇ? ಒತ್ತಾಯಪೂರ್ವಕವಾಗಿಯಾದರೂ ಅವಳ ಖುಷಿಯನ್ನು ಕಸಿದುಕೊಂಡಿರುತ್ತಾರೆ. ತನ್ನ ಗುರಿಯೆಡೆಗೆ ಹೋದರೆ ಮನೆಯ ಪರಿಸ್ಥಿತಿ ಬಿಗಡಾಯಿಸುತ್ತದೆ ಹಾಗಾಗಿ ಇದ್ದದರಲ್ಲೇ ತೃಪ್ತಿಪಟ್ಟು, ಹಸಿವು ನೀಗಿಸಲು ಯಾವುದಾದರೂ ಕೆಲಸ ಮಾಡಬೇಕಾದ ಅನಿವಾರ್ಯತೆ ಅವನದು. ಗುರಿ ಸಾಧಿಸುವ ಎಲ್ಲ ಸಾಧ್ಯತೆಗಳಿದ್ದರೂ ಅದರೆಡೆಗೆ ಸಾಗಲು ಧೈರ್ಯವಿಲ್ಲದೆ ಮರುಗುವ ಅಸಹಾಯಕತೆ ಅವಳದು. ಇವು ಕೇವಲ ಎರಡು ಉದಾಹರಣೆಗಳಷ್ಟೇ. ಸಮಾಜದಲ್ಲಿ ಇಂಥ ನಿದರ್ಶನಗಳು ಸಾವಿರ. ಐಎಏಸ್‌ ಆಫೀಸರ್ ಆಗಬೇಕೆಂದವನು ಗುಮಾಸ್ತನಾಗಿರುತ್ತಾನೆ, ಡಾಕ್ಟರ್ ಎಂದವಳು ಟೀಚರ್ ಆಗಿರುತ್ತಾಳೆ, ಇಂಜೀನಿಯರ್- ಕ್ಲರ್ಕ್ ಆಗಿ, ನಾಯಕನಟ- ವಕೀಲನಾಗಿ, ಅಧಿಕಾರಿ- ಆಟೋ ಡ್ರೈವರ್ ಆಗಿ… ಹೀಗೆ ಕಂಡಿದ್ದೇನೋ, ಕನಸಿದ್ದೇನೋ ಆಗಿದ್ದೇನೋ ಆಗಿ ಬಾಳು ವಿಚಿತ್ರ ರೀತಿಯಲ್ಲಿ ನಮ್ಮನ್ನು ಕಂಗೆಡಿಸಿರುತ್ತದೆ. ಇದಕ್ಕೆಲ್ಲ ಉತ್ತರ ಹುಡುಕುವುದು ಕಷ್ಟಸಾಧ್ಯ. ಓದುವ ಸಮಯದಲ್ಲಿ ಕಟ್ಟಿಕೊಂಡ ಕನಸುಗಳನ್ನೆಲ್ಲ ಗಂಟುಮೂಟೆ ಕಟ್ಟಿ ಅಟ್ಟದ ಮೇಲಿಟ್ಟು, ಗಂಡನಮನೆಯ ಅಡುಗೆ ಕೋಣೆಯಲ್ಲಿ ದಿಗ್ಬಂಧನರಾದ ಎಷ್ಟೋ ಹೆಣ್ಣುಮಕ್ಕಳು ಇನ್ನೂ ನಮ್ಮ ನಡುವಿಲ್ಲವೇ? ದುರ್ದೈವ. ಅಸಹಾಯಕತೆಯಿಂದಲೋ, ಅನಿವಾರ್ಯತೆಯಿಂದಲೋ ಇಷ್ಟವಿಲ್ಲದಿರುವ ಪಾತ್ರ ಧರಿಸಿ ಕೆಲವೊಮ್ಮೆ ನಟಿಸಲೇಬೇಕಾಗುತ್ತದೆ ಈ ಬಾಳರಂಗದಲ್ಲಿ.

ಹಾಗಾದರೆ ಒಂದು ಗುರಿ, ಕನಸು ಅಂತ ಇಟ್ಟುಕೊಳ್ಳುವುದಕ್ಕೆ ಇಲ್ಲಿ ಅರ್ಥ ಏನಾದರೂ ಇದೆಯಾ? ಅಂತ ನೀವು ಕೇಳಿದ್ರೆ? ಖಂಡಿತಾ ಇದೆ. ಯಾರಿಗೆ ತಮ್ಮ ಮೇಲೆ ನಂಬಿಕೆ ಇರುತ್ತದೋ, ತಮ್ಮ ಕನಸಿನ ಬಗ್ಗೆ ಸ್ಪಷ್ಟತೆ ಇರುತ್ತದೋ, ಅದಕ್ಕಾಗಿ ನಿರಂತರ ಪ್ರಯತ್ನಿಸುವ ಅದಮ್ಯ ಛಲ ಇರುತ್ತದೋ ಅಂಥವರು ಖಂಡಿತ ಕನಸುಗಳನ್ನು ಕಟ್ಟಿಕೊಳ್ಳುವುದರಲ್ಲಿ ಹಿಂಜರಿಯಬೇಕಿಲ್ಲ. ಅಂಥ ಗಟ್ಟಿತನ ನಮ್ಮಲ್ಲಿದ್ದರೆ ಯಾವ ಅಸಾಹಯಕತೆಯೂ ಇನಿತೂ ನಮ್ಮನ್ನು ಅಲುಗಿಸದು. ಯಾವ ಅನಿವಾರ್ಯತೆಯೂ ನಮಗೆ ತಡೆಯೊಡ್ಡದು. ಎಂಥದ್ದೇ ಸಂದಿಗ್ಧ ಸನ್ನಿವೇಶವನ್ನು ಎದುರಿಸುತ್ತಲೇ ಗುರಿ ಮುಟ್ಟುವ ಕೌಶಲ ನಾವು ಕಂಡುಕೊಳ್ಳಬೇಕು. ಕಲಿತುಕೊಳ್ಳಬೇಕಷ್ಟೇ. ಗುರಿಯ ಸಾಧನೆಯಲ್ಲಿ ಮುಖ್ಯವಾಗುವುದು ನಮ್ಮ ಧೀಶಕ್ತಿ ಮತ್ತು ಅಂತಃಶಕ್ತಿ ಎಂಬುದು ನೆನಪಿರಲಿ. ಈ ಹಾದಿಯಲ್ಲಿ ಮುಖ್ಯವಾಗುವ, ಅಗತ್ಯ ಬೀಳುವ ಮತ್ತೊಂದು ಅಂಶ ಅಂದರೆ ಅದು- ತಾಳ್ಮೆ. ಅದಿಲ್ಲದಿದ್ದರೆ ಸಾಧನೆ ಅಶಕ್ಯ. ಬಿತ್ತಿರುವ ಬೀಜ ಇಂದೇ ಮರವಾಗಿ ಫಲ ಕೊಡಬೇಕೆಂದು ಬಯಸುವುದು ಯಾವ ನ್ಯಾಯ? ಛಲ, ಪ್ರಯತ್ನ, ತಜ್ಞತೆ, ಪರಿಶ್ರಮದಷ್ಟೇ ಮುಖ್ಯವಾಗುವುದು ಸಂಯಮ. ತಪಸ್ಸು ಮಾಡುವುದು ನಮ್ಮ ಕರ್ತವ್ಯ. ವರ ಕೊಡುವ ದೇವರು ಪ್ರತ್ಯಕ್ಷವಾಗಲು ಯುಗಗಳೇ ಆಗಬಹುದು. ಅನ್ಯಮಾರ್ಗವಿಲ್ಲ, ಸಹನೆಯಿಂದ ಕಾಯಲೇಬೇಕು. “ತಾಳುವಿಕೆಗಿಂತನ್ಯ ತಪವು ಇಲ್ಲ” ಎಂದಿಲ್ಲವೆ ಹರಿದಾಸರಾದ ವಾದಿರಾಜರು.

***

ಎಲ್ಲರೂ ದೊಡ್ಡ ಕನಸುಗಳನ್ನೇ ಕಾಣಬೇಕೆಂಬುದು ಸರಿಯಲ್ಲ, ಕಾಣುತ್ತಾರೆ ಎಂಬುದೂ ಸುಳ್ಳು. ತಮ್ಮ ತಮ್ಮ ಇತಿಮಿತಿಯೊಳಗೆ, ಪರಿಸರದೊಳಗೆ, ಪರಿಸ್ಥತಿಯೊಳಗೆ, ಚಿಕ್ಕ ಚಿಕ್ಕ ಕನಸಕಂಡು ಅವುಗಳನ್ನು ನನಸಾಗಿಸಿಕೊಂಡು ಖುಷಿಪಡುವವರಿದ್ದಾರೆ. ಮಿತಿಗಳನ್ನು ಮೀರಿ ದಾರಿ ಹುಡುಕಿಕೊಂಡವರಿದ್ದಾರೆ. ದಾರಿಯನ್ನೇ ತೊರೆದು ನಡೆಯುವವರಿದ್ದಾರೆ. ಯಾವುದೋ ದಾರಿಯೊಳಗೆ ಸಾಗಿ, ಆ ದಾರಿ ತಲುಪಿಸಿದ ಗುರಿಯ ಸೇರಿ ಅಂದುಕೊಂಡದ್ದಕ್ಕಿಂತ ಹೆಚ್ಚೇ ಸಿಕ್ಕಿತೆಂಬ ಆತ್ಮತೃಪ್ತಿ ಹೊಂದಿದವರಿದ್ದಾರೆ. ತಲುಪಿದ ಗುರಿ ತರುವಾಯ ಬೇಸರಿಕೆ ತರಿಸಿ ಮತ್ತೊಂದು ದಾರಿ ಹುಡುಕಿಕೊಂಡು ಹೋಗುವವರಿದ್ದಾರೆ. ಎಷ್ಟೇ ಪರಿಶ್ರಮ ಪಟ್ಟರೂ ಗುರಿ ತಲುಪದವರಿದ್ದಾರೆ, ದಾರಿ ಕೈಹಿಡಿಯದವರಿದ್ದಾರೆ.

ಗುರಿ ಏನೇ ಇರಲಿ, ಅದರೆಡೆಗೆ ನಮ್ಮ ಶ್ರದ್ಧೆ, ಪರಿಶ್ರಮ ಎಷ್ಟೇ ಇರಲಿ, ಕೊನೆಗೆ ಗುರಿ ತಲುಪಲು ಸಾಧ್ಯವಾಯಿತೋ ಇಲ್ಲವೋ ಎಂಬುದೆಲ್ಲ ಅನಂತರದ ಮಾತು.. ನಮ್ಮ ಕೆಲಸ ಚಲಿಸುತ್ತಿರುವುದು. ನೋವು ನಲಿವುಗಳೊಂದಿಗೆ, ಸೋಲು ಗೆಲುವುಗಳೊಂದಿಗೆ, ಬದುಕು, ಬವಣೆಗಳೊಂದಿಗೆ ದೃಢವಾಗಿ ಗುರಿಯೆಡೆಗೆ ಚಲಿಸುತ್ತಿರಬೇಕು.

ಮತ್ತು, ಚಲಿಸುವಾಗ ಆ ದಾರಿಯಲ್ಲಿ ಒಂದುಕ್ಷಣ ನಿಂತು ಈ ಗುರಿ ನಮ್ಮದೋ? ಈ ಗುರಿಯ ದಾರಿ ಸರಿಯಿದೆಯೋ? ಎಂಬುದನ್ನು ಆಗಾಗ ಮನಗಾಣುವುದು, ಅವಲೋಕಿಸಿಕೊಳ್ಳುವುದು ಅತಿ ಅಗತ್ಯ. ಏಕೆಂದರೆ ನಮ್ಮ ಗುರಿಯ ಬಗ್ಗೆ ಸ್ಪಷ್ಟವಾಗಬೇಕಾದವರು ನಾವು. ಹೊರಗಿನ ನೂರಾರು ಸದ್ದುಗದ್ದಲದೆಡೆಗೆ ಗಮನಹರಿಸಿದರೆ ನಮ್ಮ ಒಳದನಿ ನಮಗೆ ಕೇಳಿಸದು. ಆ ಗುರಿ ಸ್ಪಷ್ಟವಾಯಿತೋ ಅಷ್ಟೇ ಸಾಕು, ಯಾರು ಎಷ್ಟೇ ಜರೆಯಲಿ, ಅಪಹಾಸ್ಯ ಮಾಡಲಿ, ಅನುಮಾನ ಪಡಲಿ, ಅವಮಾನ ಮಾಡಲಿ, ತಲೆಕೆಡಿಸಿಕೊಳ್ಳದೇ ನಮ್ಮ ಗುರಿಸಾಧನೆಯಲ್ಲಿ ನಾವು ತೊಡಗಿಕೊಂಡರೆ ಗೆಲುವು ಸನ್ನಿಹಿತ, ಬಾಳು ಸಾರ್ಥಕ.