ನಸುಕು.ಕಾಮ್ - ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕೆ.ವಿ.ತಿರುಮಲೇಶರ ಎರಡು ಮುಖಾಮುಖಿಗಳು

ಶ್ರೀಯುತ ಕೆ.ವಿ.ತಿರುಮಲೇಶರ “ಮುಖಾಮುಖಿ” ಕವನಗಳೆರಡನ್ನೂ ಮೊದಲಬಾರಿ ಓದಿದಾಗಲೇ ಒಂದು ಕೌತುಕ ಮತ್ತು ವಿಸ್ಮಯ ನನ್ನಲ್ಲುಂಟಾಗಿತ್ತು. ಒಂದು ಬೆಕ್ಕನ್ನು ಎದುರಲ್ಲಿರಿಸಿಕೊಂಡು ಕವಿ ಸಹೃದಯನಿಗೆ ಹೇಳುವ ಮಾತು ವಿಶಿಷ್ಟ ಅನಿಸಿದ್ದು ಮನೋವೈಜ್ಞಾನಿಕ ಕಾರಣಗಳಿಗಾಗಿ. ಎರಡೂ ‘ಮುಖಾಮುಖಿ’ ಸಂದರ್ಭಗಳ ಬೆಕ್ಕು ಒಂದೇ ಅನ್ನುವುದನ್ನವರು ಎರಡನೇ ಕವನದಲ್ಲಿ ಸ್ಪಷ್ಟಪಡಿಸುತ್ತಾರೆ. ಆದರೆ, ಎರಡು ಕವನಗಳ ಬಂಧ, ಓಟ ಬೇರೆಬೇರೆಯೇ ಆಗಿವೆ.

ಮೊದಲ ಮುಖಾಮುಖಿಯಲ್ಲಿ ಬೆಕ್ಕೊಂದು ಕವಿಯ ಮನೆಯೊಳಗೇ ಏಕಾ‌ಏಕಿ ಬಂದಿರುತ್ತದೆ ಮತ್ತು ಕವಿಗೆ ಅದು ಏನೇನೂ ಒಪ್ಪಿತವಲ್ಲ. ಅದೂ ತಿಂದುಂಡು ದಷ್ಟಪುಷ್ಟವಾಗಿರುವ ಬೆಕ್ಕು, ತನ್ನದೇ ಮನೆಯೆಂಬಂತೆ ರಾಜಮರ್ಜಿಯಿಂದ ಈ ಮನೆಹೊಕ್ಕ ಬೆಕ್ಕು. ಕವಿಗೆ ಅಸಹನೆ. ಇಬ್ಬರೂ ತಂತನ್ನ ನೆಲಕ್ಕಂಟಿಕೊಂಡು ನಿಂತಲ್ಲಿಂದ ತೆರೆದುಕೊಳ್ಳುವ ಕವನ ಬೆಕ್ಕಿನ ಕಣ್ಣುಗಳಲ್ಲಿನ ನಿಶ್ಚಲತೆ, ಅನಾಥಭಾವ ಮತ್ತು ಕೊನೆಗೆ ಕಣ್ಣುಗಳಲ್ಲಿನ ವಿಷಾದದೊಳಗೆ ಅಂತ್ಯವಾಗುತ್ತದೆ.

ಮೂರು ಭಾಗಗಳಲ್ಲಿರುವ ಈ ಕವನ ಒಂದು ಬೆಕ್ಕನ್ನು ಎದುರಾಳಿಯಾಗಿಸಿಕೊಂಡ ಕವಿ, ಈ ವ್ಯಕ್ತಿಯನ್ನೆದುರಿಸುತ್ತಿರುವ ಬೆಕ್ಕು ಮತ್ತು ಅವರ ಮುಖಾಮುಖಿಯ ಪರಿಣಾಮವಾಗಿ ಬೆಕ್ಕು ಸೆಟೆದ ಮೈಯನ್ನು ನುಸುಲಾಗಿಸಿ ಹೊರಟುಹೋದಾಗ ಕವಿಯಲ್ಲುಂಟಾದ ಖಾಲಿತನ ಮತ್ತು ತನ್ನದೇ ಛಲದ ಪರಿಚಯ (ಗೆದ್ದರೆ ಗೆಲ್ಲಬೇಕು ಬಾಹುಬಲಿಯಂತೆ- ಬಿಟ್ಟುಕೊಡುವುದರಿಂದ), ತತ್ಪರಿಣಾಮ ಉಂಟಾಗುವ ವಿಷಾದ ಬೆಕ್ಕಿನ ಕಣ್ಣುಗಳ ವಿಷಾದದಂತೆ ಅನಿಸುವುದರೊಂದಿಗೆ ಅಲ್ಲೇನೋ ಪರಿವರ್ತನೆ ಕಂಡೂ ಕಾಣದಂತೆ ಇಣುಕುತ್ತದೆ.

ಎರಡನೆಯ ಕವನದುದ್ದಕೂ ಆ ಬೆಕ್ಕಿನಲ್ಲಿ ಒಂದು ರೀತಿಯ ದೈನ್ಯವೇ ಸಾಕಾರವಾದಂತೆ. ಇಲ್ಲಿ ಕವಿ ಮತ್ತು ಬೆಕ್ಕಿನ ಭೇಟಿ ಮನೆಯ ಹೊರಗೆ, ಹಿಂದಿನ ಗಲ್ಲಿಯಲ್ಲಿ; ಬಹುಶಃ ಬೆಕ್ಕಿನ ತನ್ನದೇ ಅಖಾಡ ಇದ್ದರೂ ಇರಬಹುದು. ಆದರೂ ಬೆಕ್ಕಿನಲ್ಲಿ ದೈನ್ಯ. ತಾನು ಅಂದಿನ ಅದೇ ಬೆಕ್ಕೆಂದು ಗುರುತು ಹೇಳಿ ಎಂಟಾಣೆ ಕೇಳುವ ಚಾಲಾಕು. ತನ್ನನ್ನು ಸಾಕಿಕೊಳ್ಳಿರೆನ್ನುವ ವ್ಯವಹಾರದ ಮಾತು. ತನ್ನ ಮುಖಾಂತರ ಕವಿತೆ-ವಾಸ್ತವತೆಯ ಅಂತರ ದಾಟಿಬಿಡಿರೆನುವ ಬೌದ್ಧಿಕ ದಾಳ. ಗಾಳಕ್ಕೆ ಸಿಲುಕದ ಕವಿ ಒಂದು ರುಪಾಯಿ ಕೊಟ್ಟು ಸಾಗಹಾಕಿದ ಬೆಕ್ಕು ಮುಂದಿನ ಕ್ಷಣವೇ ಯಾವುದೋ ದಾಳಿಗೆ ಸಿಲುಕಿ ಕೂಗಿಕೊಂಡಲ್ಲಿಗೆ ಕವನ ಮುಗಿಯುತ್ತದೆ.

ಮೊದಲ ಮುಖಾಮುಖಿಗಿಂತಲೂ ಇಲ್ಲಿನ ಪ್ರಾಸ ಮತ್ತು ಲಯ ಗಮನೀಯ. ಕವಿ ತನ್ನ ಸುರಕ್ಷಿತ ತಾಣದಿಂದ ಹೊರಗೆ ಗಲ್ಲಿಯಲ್ಲಿ ಬೆಕ್ಕನ್ನು ಭೇಟಿಯಾಗಿದ್ದಾನೆ. ಅಂತಹ ಮುಕ್ತ ಪರಿಸರದಲ್ಲಿ, ಏನಾದರೂ ಸಂಭವಿಸಬಹುದಾದ ಅನಿಶ್ಚಿತತೆ ಇರುವಲ್ಲಿನ ಆಗುಹೋಗುಗಳನ್ನು ನಿರೂಪಿಸಲು ನಿಶ್ಚಿತ ಲಯ ಮತ್ತು ಪ್ರಾಸವನ್ನು ಬಳಸಿದ ಕ್ರಮ ವಿಶೇಷವಾಗಿದೆ.

ಎರಡು ಕವನಗಳಲ್ಲಿಯೂ ಕವಿ ಮತ್ತು ಬೆಕ್ಕು – ಮಾನವನ ಅಂತರ್ಗತ ಅಹಂಕಾರ ಮತ್ತು ಅವನನ್ನೆದುರಿಸುವ ಯಾವುದೇ ಇನ್ನೊಬ್ಬ ವ್ಯಕ್ತಿಯನ್ನು ಸೂಚಿಸುತ್ತವೆ ಎಂದೆನಿಸುತ್ತದೆ. ನಮಗೆಲ್ಲರಿಗೂ ನಮ್ಮದೇ ಆದ ಒಂದು ಅಹಮಿಕೆಯ ಕೋಟೆಯಿರುತ್ತದೆ; ತನ್ನತನದ ಒಂದು ವೈಯಕ್ತಿಕ ಪರಿಧಿ. ಯಾರಾದರೂ ಇನ್ನೊಬ್ಬ ವ್ಯಕ್ತಿ ಆ ಕೋಟೆಯನ್ನು ಆಕ್ರಮಿಸಿದರೆ, ಪರಿಧಿಯೊಳಗೆ ಪದವಿರಿಸಿದರೆ ನಮಗೆ ಅರಿವಿಲ್ಲದೆಯೇ ಒಂದು ಕಿರಿಕಿರಿ ಅಸಹನೆ ನಮ್ಮಲ್ಲುಂಟಾಗುವುದು ಸ್ವಾಭಾವಿಕ. ಅತಿಕ್ರಮಿಸುವ ಈ ವ್ಯಕ್ತಿ ನಮ್ಮವರಾಗಿದ್ದರೆ ನಮ್ಮಲ್ಲುಂಟಾಗುವ ಅಸಹನೆಯ ಮಟ್ಟ ಬೇರೆಯೇ. ಅಪರಿಚಿತರಾಗಿದ್ದರೆ ಆಗ ನಮ್ಮ ಅಸಹನೆಯ ಮಟ್ಟ ಬೇರೆಯೇ. ಈ ವ್ಯತ್ಯಾಸವನ್ನು ಈ ಎರಡು ಕವಿತೆಗಳು ಸಮರ್ಥವಾಗಿ ಹಿಡಿಯುತ್ತವೆನಿಸಿತು.

ಮೊದಲ ಕವನದಲ್ಲಿ ಬರುವ ಬೆಕ್ಕು ಸಂಪೂರ್ಣ ಅಪರಿಚಿತ. ದಷ್ಟಪುಷ್ಟವಾಗಿರುವ ಬೆಕ್ಕು- ಅಂದರೆ ಎದುರಾಳಿ ತಿಳಿವಳಿಕೆಯುಳ್ಳವ. ಸಂಪೂರ್ಣ ಅರಿವಿದ್ದು ಕವಿಯ ಮನೆಯೊಳಗೆ (ವೈಯಕ್ತಿಕ ಪರಿಧಿಯೊಳಗೆ) ಸೇರಿಕೊಂಡಿದ್ದಾನೆ. ತಕ್ಷಣಕ್ಕೆ ಹೊರಹೋಗುವ ಇರಾದೆಯಿಲ್ಲ. ಹಾಗೆಂದೇ ಅಘೋಷಿತ ದೃಷ್ಟಿಯುದ್ಧ ನಡೆಯುತ್ತದೆ. ಬೆಕ್ಕು ನಿಶ್ಚಲನೋಟದಿಂದ ನಿಲ್ಲುತ್ತದೆ. ಆಗಂತುಕ ತನ್ನ ಹಕ್ಕು ಸ್ಥಾಪನೆಯ ಪ್ರಯತ್ನದಲ್ಲಿ ಆಕ್ರಮಣಕಾರಿಯಾಗಿ ಬೆನ್ನು-ಬಾಲ ಸೆಟೆಸಿ, ಕಾಲುಗುರು ನಿಮಿರಿಸಿ ಹೂಡಿದ ಬಿಲ್ಲಿನಂತೆ ಯುದ್ಧಸನ್ನದ್ಧವಾಗುತ್ತದೆ. ಇಬ್ಬರ ದೃಷ್ಟಿಯುದ್ಧದಲ್ಲಿ ಕವಿಗೆ ಯಾಕೋ ಬೆಕ್ಕಿನ ಕಣ್ಣುಗಳಲ್ಲಿ ಅನಾಥಭಾವ ಕಂಡುಬಿಡುತ್ತದೆ. ಅಂದರೆ, ಆಕ್ರಮಣಕ್ಕೆಂದು ಬಂದ ಆಗಂತುಕನಿಗೆ ಇದರಲ್ಲಿ ಆಸಕ್ತಿ ಕಳೆದುಹೋಗುತ್ತದೆ. ತಾನೇಕೆ ಇಲ್ಲಿ ಬಂದೆನೆನ್ನುವ ಭಾವ. ಹಾಗಾಗಿಯೇ ಬೆಕ್ಕು ತನ್ನದೇ ನಿಧಾನಗತಿಯಲ್ಲಿ ಹೊರಟುಹೋಗುತ್ತದೆ. ನೆಟ್ಟನೋಟದಲ್ಲಿದ್ದ ಕವಿಗೆ ಈಗ ದೃಷ್ಟಿ ಪರಿಧಿ ಖಾಲಿಯಾದಾಗ ತಾನೇ ಬಿಟ್ಟುಕೊಡಬಹುದಿತ್ತೆನ್ನುವ ವಿಷಾದ ಆವರಿಸಿ, ಬೆಕ್ಕಿನ ಕಣ್ಣುಗಳಲ್ಲೇ ವಿಷಾದವಿತ್ತೆಂದು ಅನಿಸುತ್ತದೆ. ಆಕ್ರಮಣಕ್ಕೆ ತಯಾರಾದ ಎದುರಾಳಿ ತಾನೇ ಠುಸ್ಸೆಂದು ಹಿಂದೆನಿಂತಾಗ ಮನಸಿಗಾಗುವ ಪೆಚ್ಚುಭಾವದಿಂದ ಕವಿ ‘ಒಪ್ಪಿಕೊಳ್ಳಬಹುದಿತ್ತು’ ಅಂದುಕೊಳ್ಳುತ್ತಾರೆ. ಬಾಹುಬಲಿಯಂತೆಯೇ ಬಿಟ್ಟುಕೊಟ್ಟು ಗೆಲ್ಲಬಹುದಿತ್ತು ಎನ್ನುವಲ್ಲಿ ತನ್ನ ಛಲದಿಂದ ತಾನೇನೂ ಗೆಲ್ಲಲಿಲ್ಲವೆಂದು ಅರಿತುಕೊಳ್ಳುತ್ತಾರೆ.

ಅದೇ ಬೆಕ್ಕು ಮತ್ತೊಮ್ಮೆ ಎದುರಾದಾಗ, ಅದರದೇ ವ್ಯವಹಾರವಲಯದಲ್ಲಿ, ಕವಿ ಅಲ್ಲಿ ಅಪರಿಚಿತ. ಮೊದಲ ಭೇಟಿಯ ಅನಂತರ ಕೆಲಕಾಲ ಸಂದಿದೆ. ಎದುರಾದ ಬೆಕ್ಕಿನಲ್ಲಿ ಅಲ್ಲಲ್ಲಿ ಸುಕ್ಕುಗಳು ಮೂಡಿವೆ. ಅಂದರೆ, ಮೊದಲಸಲ ದಷ್ಟಪುಷ್ಟವಾಗಿದ್ದದ್ದು ಈಗ ತುಸು ಜಗ್ಗಿದೆ. ಮೊದಲು ಟಾಮ್ ಆಗಿದ್ದದ್ದು ಈಗ ಟೇಮ್ ಆಗಿದೆ. ತಾನೇ ಮಾತಾಡಿಸುತ್ತ ಕವಿಯ ಪದ್ಯವನ್ನು ಹೊಗಳುತ್ತ ದೈನ್ಯದಲ್ಲಿ ಎಂಟಾಣೆ ಕೇಳಿ ಜೋಲುಮೋರೆ ಹಾಕುವ ಬೆಕ್ಕು ತನ್ನ ಮೊದಲಿನ ಗಡವತನ ಕಳೆದುಕೊಂಡಿದೆ. ಕವಿಯ ಆ ಎದುರಾಳಿ ತನ್ನ ಕಸುವು ಕಳೆದುಕೊಂಡಿದ್ದಾನೆ. ಕವಿಯಿಂದ ಅನುಕಂಪ, ಪ್ರೀತಿ, ಸಲುಗೆ ಅಥವಾ ಯಾವುದೋ ಆತ್ಮೀಯತೆ ಬಯಸುತ್ತಾನೆ. ಕವಿಯೊಂದಿಗೆ ಗುರುತಿಸಲ್ಪಡಲು ಇಚ್ಚಿಸುತ್ತಾನೆ. ‘ಕವಿತೆ ಮತ್ತು ವಾಸ್ತವತೆಗಿರೋ ಅಂತರ ದಾಟಿಬಿಡಿ ನನ್ನ ಮುಖಾಂತರ’ ಅನ್ನುವಾಗ ಈ ಬೆಕ್ಕಿನಲ್ಲಿ ತನ್ನಿಂದಾಗಿ ಕವಿಗೆ ಹೆಸರು ಬಂದಿರುವುದೂ, ತಾನು ಆಗಿನ ತಾನಾಗಿಲ್ಲದಿರುವ ಅರಿವೂ ಈಗ ಕವಿಯ ಆಸರೆಯ ಆಸೆಯೂ ಹೊಮ್ಮುತ್ತವೆ. ಆದರೆ ಕವಿ ನಿರ್ದಾಕ್ಷಿಣ್ಯವಾಗಿ ನಿರಾಕರಿಸಿ ಮುನ್ನಡೆಯುತ್ತಾರೆ. ದೈನ್ಯದಿಂದ ಕೂಡಿದ ಈ ಬೆಕ್ಕಿನ ಆಕ್ರಂದನ ಕವಿಯನ್ನು ಬೆಚ್ಚಿಸುತ್ತದೆ. ಮತ್ತೆ ಮೊದಲಿನ ಕವಿತೆಯ ವಿಷಾದದ ಛಾಯೆಯೇ ಇಲ್ಲಿಗೂ ಹಾಯುತ್ತದೆ.

ಒಂದು ಕವಿತೆ ಒಮ್ಮೆ ಬರೆಯಿಸಿಕೊಂಡು ಕೆಲಕಾಲದ ಅನಂತರ ಮತ್ತೆ ಮುಂದುವರಿಸಿಕೊಳ್ಳುವುದು ಹೊಸತೇನಲ್ಲ. ಇಲ್ಲಿಯೂ ಅದೇ ಆಗಿದೆ, ಸ್ವರೂಪ ಬದಲಿಸಿಕೊಂಡಿದೆ, ಅಷ್ಟೇ. ಮೊದಲೊಮ್ಮೆ ಸುದೃಢನಾಗಿದ್ದಾಗ ಮುಖಾಮುಖಿಯಾಗಿದ್ದ ವ್ಯಕ್ತಿಯೇ ಮತ್ತೆ ಕಸುವು ಕಳಕೊಂಡು ಎದುರುನಿಂತಾಗಲೂ ಮೊದಲಿನ ಭೇಟಿಯ ಕಹಿ ಮಾಸದಿದ್ದಲ್ಲಿ ನಮ್ಮ ಮನಸ್ಸು ಈಗಲೂ ಆತನನ್ನು ಸ್ವೀಕರಿಸುವುದಿಲ್ಲ, ಯಾವುದೇ ರೀತಿಯಲ್ಲೂ ಪುರಸ್ಕರಿಸುವುದಿಲ್ಲ. ಮಾನವ ಸಂಬಂಧಗಳು ಉಳಿದು ಬೆಳೆಯಲು ಪರಸ್ಪರರ ಅಹಂಕಾರಗಳು ಅಳಿಸಿರಬೇಕು ಅಥವಾ ಹತೋಟಿಯಲ್ಲಿರಬೇಕು ಎನ್ನುವ ಸೂಕ್ಷ್ಮವನ್ನು ಈ ಎರಡೂ ಕವಿತೆಗಳು ಸಾರುತ್ತವೆ. ಬೆಕ್ಕೊಂದರ ಮುಖಾಂತರ ಇಂತಹ ಬಹುಬೆಲೆಬಾಳುವ, ಬಹುಕಾಲ ಬಾಳುವ ಕವನಗಳನ್ನು ಕಟ್ಟಿಕೊಟ್ಟ ಕವಿಗೆ ನಮನಗಳು.