- ನನ್ನೂರಲ್ಲಿ ಕೋಳಿ ಕೂಗುವುದಿಲ್ಲ - ಅಕ್ಟೋಬರ್ 23, 2022
- ಗಮನಿಸಲಿಲ್ಲ - ನವೆಂಬರ್ 3, 2021
- ಕ್ವಾರಂಟೈನ್ - ಜೂನ್ 19, 2021
ಕರೋನ ಬಂದ ಮೇಲೆ ಬಂದ ಕ್ವಾರಂಟೈನ್ ಎಂಬ ಈ ಶಬ್ದ ಔಷಧದಷ್ಟೇ ಮುಂಚೂಣಿಯಲ್ಲಿ ಇದೆ.
ದೇಶ, ರಾಜ್ಯ, ಜಿಲ್ಲೆ,ಊರು, ಕೇರಿ, ಕೊನೆಗೆ ಪಕ್ಕದ ಮನೆಯಿಂದ ಬಂದ್ರೂ ಕ್ವಾರಂಟೈನ್ ಆಗ್ಬೇಕು ಅನ್ನೋ ಕಾಲ ಬಂದೇ ಹೋಯ್ತು.
ಅಯ್ಯೋ ನಂಬಲಾಗದು ಈ ಕಾಲದಲ್ಲಿ, ಜ್ವರ ಬಂದ್ರೂ ಬಂದೇ ಇಲ್ಲ ಅಂತ ಬಿಂದಾಸ್ ಓಡಾಡ್ಕೊಂಡು ಇರ್ತಾರೆ. ಯ್ಯೇ.. ಎಂತ ಇಲ್ರಿ ಸ್ವಲ್ಪ ವೈರಲ್ ಫೀವರ್ ಅಷ್ಟೇ ಅಂತ ಸಮಾಜಾಯಿಸಿ ಬೇರೆ. “ಪಕ್ಕದ ಮನೆಗೆ ಬಂದಿದ್ದು ಮಾತ್ರ ಕರೋನ” ಅನ್ನೋದು ಅಘೋಷವಾದ ವಾಕ್ಯ ಆಯ್ತು. ಅದೇನೇ ಇರ್ಲಿ, ಯಾರನ್ನೇ ಸಂಪರ್ಕ ಮಾಡಿದ್ರೂ ಕ್ವಾರಂಟೈನ್ ಬಹಳ ಮುಖ್ಯ ನೋಡು,ಇಲ್ಲ ಹೋಗ್ಬಾರ್ದು ಯಾರ ಸಂಪರ್ಕಕ್ಕೂ ಅನ್ನೋದು ಇದ್ದಿದ್ದರಲ್ಲೇ ಸ್ವಲ್ಪ ತಿಳಿದು ಕೊಂಡವರ ಅಭಿಮತ. ನಿಜ ಕೂಡ ಬಿಡಿ ಆ ಮಾತು. ಕರೋನ ಬರತ್ತೋ, ಬಿಡತ್ತೋ, ಅನುಮಾನಾಸ್ಪದ ಜಾಗಕ್ಕೆ ಹೋಗಿದ್ದೀವಿ ಅಂದ್ರೆ ಸ್ವಲ್ಪ ದಿನ ಬೇರೆ ಇದ್ಬಿಡೋದು ವಾಸಿ. ವಿಚಾರಣಾಧೀನ ಕೈದಿ ತರ.


ಎಷ್ಟೋ ಮನೆಗಳಲ್ಲಿ ಹೆಂಗಸರು ಹೊರಗೆ ಹೋಗೋದನ್ನು ನಿಷೇಧಿಸಲಾಯ್ತು. ಸ್ವಲ್ಪ ಇರಿ ಅರಬ್ಬರ ಕಾಲಕ್ಕೆ ಹೋಗ್ಬೇಡಿ. ಇದು “ಕರೋನ ಕಾಲ”.
“ಯೇ,, ನೀನು ಎಲ್ಲೂ ಹೋಗಬೇಡ್ವೇ”
ನೀವ್ ಹೆಂಗಸ್ರು ದೂರ ದೂರ ಅಂತೂ ಕುತ್ಕೋಳಲ್ಲ.
“ಅತ್ಗೆ ಬಾರೇ..
ಅತ್ತೆ ಬಾರೇ.. ಅಕ್ಕಯ್ಯ ಬಾ..ಬಾ..“
ಅಂತ ಇರೋ ಚೂರು ಜಾಗದಲ್ಲಿ ತೂರಿಸಿಕೊಂಡು ವಟ ವಟ ಅಂತ ಮಾಸ್ಕ್ ಕಿತ್ತು ಬಿಸಾಕಿ ಮುಖ ಹಚ್ಚಿ ಮಾತಾಡ್ತೀರ, ಮನೆಯ ಗೇಟು ದಾಟಿದರೂ ನಿಮ್ಮ ಹಿಂಬಾಲಿಸಿಕೊಂಡು ಬರುತ್ತೆ ಕೊಳ್ಳಿ ದೆವ್ವದಂತೆ ಕರೋನ ಎಂದು ಗಂಡಸರು ಮೋಹಿನಿ ಮೆಟ್ಕೊಂಡ ಹಾಗೇ ಆಡ್ತಾರೆ. ಆದ್ರೆ ಇವ್ರು ಹಾಗಲ್ವೆ ಉಮ್ ಅಂತ ಮುಖ ಊದಿಸಿಕೊಂಡೇ ದೇಶ ಬೇಕಾದ್ರೂ ಸುತ್ತಿ ಬರ್ತಾರೆ, ಅದ್ಕೆ ಊದ್ದುದ್ದ ಪೊಗರು. ನಮಗೆ ಆಗಲ್ವೆ! ಈಗ ಕಲಿತು ಕೊಡಿದ್ದೀವಿ ಬಿಡಿ. ಹಾಗೇ ನಾವು ಎಲ್ಲದಕ್ಕೂ ಅಡ್ಜೆಸ್ಟ್ ಆಗ್ಬಿಡ್ತೀವಿ. ಕಾಲಕ್ಕೆ ತಕ್ಕಂತೆ.
ಆದ್ರೆ ಅಸಲಿ ಕಾರಣ ಅವಳು ಕ್ವಾರಂಟೈನ್ ಗೆ ಒಳಪಡುವ ಪರಿಸ್ಥಿತಿ ಬಂದ್ರೆ?! ಅನ್ನೋದು ಅವರ ಒಳಗುಟ್ಟು. ಜವಾಬ್ದಾರಿನೂ ಇರುತ್ತೆ ಬಿಡಿ ಪಾಪ.
ಹೇಳಿ ಕೇಳಿ ದುರಿತ ಕಾಲ. ಮನೆ ತುಂಬಾ ಜನ ಮಕ್ಕಳ ಗದ್ದಲ ಬೇರೆ. “ಹೆಂಡತಿಯೊಬ್ಬಳು ಮನೆಯೊಳಗಿದ್ದರೆ” ಎಂದು ರಮಿಸುವಾಗ ಲೆಕ್ಕ ತಪ್ಪಿದ ಅಮಾಯಕ ಅವನು, ಬಿದ್ದ ಪೆದ್ದಿ ಇವಳು. ಅಲ್ಲಿಗೆ ಚಾಪ್ಟರ್ ಕ್ಲೋಸ್.
ಪ್ರತಿ ಮನೆಯಲ್ಲೂ ನಲ್ಲಿ ತಿರುಗಿಸಿದ ತಕ್ಷಣ ನೀರು ಬರಬೇಕು, ಅಕಸ್ಮಾತ್ ಬರಲಿಲ್ಲ ಅಂದ್ರೆ ಕೋಪ, ತಾಪ, ನೆತ್ತಿಗೇರಿ ಯುದ್ಧಕ್ಕೆ ಮುಂಚಿನ ಬಿಗುವಾದ ವಾತಾವರಣ ಅಲ್ಲಿರುತ್ತಲ್ವಾ! ಹಾಗಾಗುತ್ತೆ. ಕರೆದಾಗೆಲ್ಲ ಹೆಂಡತಿಯಾದವಳು ನೀರಿನಂತೆ ಬಂದು ಬಿಡಬೇಕು.ಇಲ್ಲದೇ ಹೋದರೆ ಯುದ್ಧವೇ ಆದ್ರೂ ಆಶ್ಚರ್ಯ ಇಲ್ಲ. ನನ್ ಪರ್ಸ್ ಎಲ್ಲಿ, ಕನ್ನಡಕ ಕೊಡು, ಸ್ವಲ್ಪ ಸ್ವಿಚ್ ಹಾಕು, ಗಾಡಿ ಕೀ ಸಿಕ್ತಾ?! ಎನ್ನುತ್ತಾ ಗಳಿಗೆಗೊಮ್ಮೆ ಕರೆಯುವ, ಕುಡಿದ ಹಾಲಿನ ತಟ್ಟೆ ಕೂಡ ಅಲ್ಲೇ ತಲೆ ತಿರುಗಿ ಬಿದ್ದು ಒದ್ದಾಡುತ್ತಿದ್ದರೂ ತಲೆ ಎತ್ತಿಯೂ ನೋಡದ ಗಂಡು ಜೀವಗಳು ಆರಾಮ್ ಆಗಿ ಕ್ವಾರಂಟೈನ್ ಆಗ್ತಾರೆ. ಊಟ ತಿಂಡಿ ಸಮಸ್ಯೆ ಇಲ್ಲ. “ಹೊತ್ತು ಹೊತ್ತಿಗೆ ಅನ್ನ ಉಣಿಸಿ” ಅಂತ ಹೇಳಾಗಿದೆ. ಈ ಗಂಡಸರು ಕೆಲಸ ಇಲ್ಲದೇ ಮನೇಲಿದ್ರೂ ಒಂಥರ ಕ್ವಾರಂಟೈನ್ ಲಿ ಇದ್ದಾಗೆ ಇರ್ತಾರೆ ಬಿಡಿ. ಹಾಗಾಗಿ ಅವರಿಗೆ ಅಂತ ಸಮಸ್ಯೆ ಏನಿಲ್ಲ. ಮೊಬೈಲ್ ನೋಡ್ತಾ ಕಿಸಕ್ ಪಿಸಕ್ ಅಂತ ನಗ್ತಾ ಶೇಷ ಶಯನನಂತೆ ಇದ್ರೆ ಆಯ್ತು. ಕಾಲ ಬಳಿ ಲಕ್ಷ್ಮಿ ಒಂದು ಕಡಿಮೆ ಅಷ್ಟೇ. ಅಚಾನಕ್ಕಾಗಿ ರೂಮಿಗೆ ಎಂಟ್ರಿ ಕೊಟ್ಟರೆ ಇವರನ್ನ ಕರೋನ ಆಸ್ಪತ್ರೆಗೆ ಸೇರಿಸಬೇಕಾ ಹುಚ್ಚಾಸ್ಪತ್ರೆಗಾ ಅನ್ನೋ ಅನುಮಾನ ಬಾಗಿಲು ತೆರೆದವರದ್ದು. ಟಿ ವಿ,ಮೊಬೈಲ್, ಪೇಪರ್, ಊಟ, ಇಷ್ಟು ಕೊಟ್ಟು ಬಿಟ್ರೆ ಹದಿನಾಲ್ಕು ದಿನ ಏನು ಇಪ್ಪತ್ತು ದಿನ ಆದ್ರೂ ಹೊರಗೆ ಬರಲ್ಲ.
“ಅಯ್ಯೋ”
“ಮುಗ್ದೇ ಹೋಯ್ತಾ ಹದಿನಾಲ್ಕು ದಿನ” ಅಂತಾರೆ.
“ಆಲಸ್ಯಮ್ ಪುರುಷ ಲಕ್ಷಣಂ” ಇಂತಿಪ್ಪ ಸಮಯದಲ್ಲಿ,ಅಂತಹ ಮನೆಯಲ್ಲಿ, ಮನೆಯಾಕೆಗೆ ಕರೋನ ಬಂತು ಅಂದ್ರೆ ಅವರ ಗತಿ ಏನು ಹೇಳಿ. ಅವಳ ಕೆಮ್ಮಿಗೆ,ಸೀನಿಗೆ ಆಯಾಸಕ್ಕೆ,ಭಯ ಬಿದ್ದು ಅವಳನ್ನು ರೂಮಿನೊಳಗೆ ತೂರಿ ಬಾಗಿಲೇನೊ ಹಾಕುತ್ತಾರೆ. ಇದು ಕರೋನ ಕಾಲದ ಬೆಳವಣಿಗೆ ಅಷ್ಟೇ. ಅವಳ ಆಯಾಸ, ಅರೋಗ್ಯ, ಗಮನಿಸುವಿಕೆಯ ಪಟ್ಟಿಯಲ್ಲಿ ಅವಳದೇನಿದ್ದರೂ ಕೊನೆಯ ಸ್ಥಾನ.


ಆದರೆ!? ಹೀಗೆ ಮನೆಯಾಕೆ ರೂಮಿಗೆ ಸೇರಿಕೊಂಡಮೇಲೆ ಗಂಡನ ಪಾಡು, “ಪಾಪಪಾಂಡು”ವಿನಂತೆ.
ಪದೇ ಪದೇ ಕೂಗುವ ಮಕ್ಕಳ ಹಸಿವಿಗೆ ಏನು ಕೊಡುತ್ತಾಳೆ ಅವಳು ಎಂದು ಗೊತ್ತಿಲ್ಲ. ಅಡುಗೆ ಮನೆಗೆ ಹೋದರೆ ಸಕ್ಕರೆ ಡಬ್ಬ ಟೀ ಪುಡಿಗಾಗಿ ರಾತ್ರಿ ಹೊಕ್ಕ ಇಲಿಯ ಹಿಡಿಯುವ ಕಸರತ್ತಿನಂತೆ ಇರುತ್ತೆ. ಇನ್ನು ಉಳಿದ ಸಾಮಾನು ಸಿಗೋದು ಇಲಿ ಹೊಡೆದಾಗಿನಷ್ಟೇ ದೂರದ ಮಾತು. ಸಾರಿನ ಪಾತ್ರೆಯಲ್ಲಿ ಚಹಾ ಕುದಿಯುತ್ತಿರುವುದು ನೋಡಿ ಚಹಾ ಪಾತ್ರೆ ಕಿಸಕ್ ಎಂದು ನಕ್ಕು ಜಾರಿ ಬಿದ್ದು ತನ್ನ ಇರವನ್ನು ತೋರಿಸಿಕೊಳ್ಳುತ್ತೆ. ಯಾರ್ಯಾರಿಗೆ ಏನೇನು ಸಿದ್ಧತೆ ಮಾಡ್ತಾಳೆ ಊಟಕ್ಕೆ,ಅದನ್ನ ಹೇಗೆ ಮಾಡ್ತಾಳೆ ಅನ್ನೋ ಗಂಧ ಗಾಳಿ ಕೂಡ ಇಲ್ಲ, ಹಾಲಿಗೆ ಹೆಪ್ಪು ಎಷ್ಟು, ಅನ್ನಕ್ಕೆ ಅಕ್ಕಿ ಎಷ್ಟು,ಸಾಂಬಾರ್ ಬಟ್ಟಲಿನಲ್ಲಿ ಇದ್ದ ಎಲ್ಲ ಪದಾರ್ಥ ಹಾಕಿ ಹುರಿದು ಉಸ್ಸ್ ಎಂದರೆ! ಸಾರಿಗೆ ಮೆಣಸೆಷ್ಟು ಗೊತ್ತಾಗಲ್ಲ.
ಎರಡನೇ ದಿನ ಊಟ ಕೊಡಲು ಹೋದವ ಮೆಲ್ಲಗೆ ಹೇಳ್ತಾನೆ. ಯೇ ನಿಂಗೆ ಕರೋನಾ ಗಿರೋನ ಏನ್ ಇಲ್ವೇ ಬಂದ ಮೇಲೆ ನೋಡೋಣ. ಸಣ್ಣ ನೆಗಡಿ ತಾನೇ?ಈಗ ಏನಿಲ್ಲ ಅಲ್ವಾ, ಹಾಗಿದ್ರೆ ಬಾ ಹೊರಗೆ ಎಂದು. ಇದು ತಮಾಷೆಯಾಗಿ ಕಂಡರೂ ಎಲ್ಲ ಮನೆಯೊಳಗಿನ ಸತ್ಯ. ಹೆಣ್ಣಿನಷ್ಟು ಸಹನೆಯಲ್ಲಿ ಅವಳ ಕೆಲಸವನ್ನು ಗಂಡಿನಿಂದ ಮಾಡಲಾಗದು.ಅದಕ್ಕೇ ಅವಳು ಒಂದು ದಿನ ಇಲ್ಲದೇ ಹೋದರೂ ತತ್ತರಿಸಿ ಹೋಗುತ್ತಾನೆ. ಅವಳು ಹೊಸ್ತಿಲು ದಾಟುತ್ತಿದ್ದರೆ ಇವನೊಳಗೆ ಅಸಾಧ್ಯ ಸಿಡಿಮಿಡಿ. ತವರಿಗೆ ಹೋಗಿ ಒಂದಿನ ಕೂಡ ಆಗಿರಲ್ಲ ನಾವು ಮನೆ ಬಿಟ್ಟೇ ಹೋಗಿದ್ದೀವೇನೋ ಅನ್ನೋರು ತರ ಆಡ್ತಾರೆ, ಒಂದು ದಿನಕ್ಕೆ ನಾಲ್ಕು ದಿನದ ಲೆಕ್ಕ. ಬರೋಕಾಗಿಲ್ವ ಇನ್ನೂ ಎನ್ನುವ ಗಡಸು ರಾಗ. ಅವನ ತಾಳ್ಮೆಯ ಮಿತಿ ಬಹಳ ಕಡಿಮೆ ಅವಧಿ.
ಹಿಂದೆಲ್ಲ ಹೆಣ್ಣಿನ ಮುಟ್ಟಿನ ಸಂದರ್ಭದಲ್ಲಿ ಅವಳು ಅಡುಗೆ ಮನೆಗೆ ಬರುವಂತಿರಲಿಲ್ಲ. ಆಗ ಅಲ್ಪ-ಸ್ವಲ್ಪ ಅಡುಗೆ ಮನೆ ಸಂಭಾಳಿಸುವುದನ್ನು ಕಲಿತಿದ್ದರು. ಆ ಮೂರೂ ದಿನವನ್ನೂ ಮೋಡ ಕವಿದ ವಾತಾವರಣದಲ್ಲೇ ಮುಗುಸಿ ಬರುತ್ತಿದ್ದಳು. ಮೂರೂ ಹೋಗಿ ಹದಿಮೂರೂ ದಿನ ಅಂದ್ರೆ ಸಹಿಸಿಕೊಳ್ತಾರೆಯೇ ಇವರು. ಅಡುಗೆಯೇನೋ ಮಾಡಿ ಬಿಡಬಹುದು. ಭೀಮ ನಳಮಹಾರಾಜರಂತ ಪೂರ್ವಜರನ್ನು ಪಡೆದವರು ಎಂದು ಮೀಸೆ ತಿರುವಬಹುದು. ಆದರೆ ಅಡುಗೆಮನೆಯನ್ನು ಸಂಬಾಳಿಸುವುದು ಇದೆಯಲ್ಲಾ ಅದು ಬಹಳ ಕಷ್ಟದ ಕೆಲಸ. ಹೆಣ್ಣಿಗಿದು ವರವೂ ಹೌದು,ಶಾಪವೂ ಹೌದು.
ಪ್ರತೀ ಮನೆ ಮನೆಗೂ ಕರೋನ ಕಾಲಿಟ್ಟ ಸಂದರ್ಭದಲ್ಲಿ ಮನೆಯಾಕೆ ಹದಿನಾಲ್ಕು ದಿನ ಬೇರೆ ಇದ್ದು ನಿಭಾಯಿಸಲಾಗುತ್ತಿಲ್ಲ. ಒಂದೆರಡು ದಿನಕ್ಕೆಲ್ಲ ಅವಳು ಸ್ವಲ್ಪ ಚೇತರಿಸಿಕೊಂಡಳು ಎಂದರೆ ಮತ್ತೆ ಅಡುಗೆ ಮನೆಗೆ ಮರಳುತ್ತಾಳೆ. ಅದು ಅವಳಿಗೆ ಅನಿವಾರ್ಯ ಕೂಡ. ಕರೋನಾ ಮನೆಯ ಉಳಿದ ಸದಸ್ಯರಿಗೆ ತಾಗಬಹುದು ಎನ್ನುವ ಪರಿಕಲ್ಪನೆ ಇದ್ದರೂ ಅಡುಗೆ ಮನೆ ಜವಾಬ್ದಾರಿ ತೆಗೆದುಕೊಳ್ಳುವ ಭಯದಿಂದ ಗಂಡಸರೂ ಮೌನವಾಗುತ್ತಾರೆ. ಹೋಮ್ ಕ್ವಾರಂಟೈನ್ ಇಂದ ಮನೆಯ ಎಲ್ಲ ಸದಸ್ಯರಿಗೂ ಬರಲು ಕಾರಣ ಇದೂ ಕೂಡ ಒಂದು ಅನ್ನಬಹುದು. ಸಮಸ್ಯೆ ವಿಕೋಪಕ್ಕೆ ಹೋಗುವವರೆಗೆ ಅದರ ತೀವ್ರತೆ ಅರಿವಾಗೋದಿಲ್ಲ. ನಿಯಮ ಪಾಲನೆಯಲ್ಲಿ ಹಿಂದೆ ಬೀಳುತ್ತಾರೆ.


ಇಲ್ಲಿ ಸಮಸ್ಯೆ ಆಗೋದು ನಮ್ಮ ನಮ್ಮ ಕೆಲಸಗಳನ್ನು ನಾವು ಮಾಡಿಕೊಳ್ಳಲು ಕಲಿಯದೇ ಇರುವುದು.
ಮಕ್ಕಳು ಒಂದು ಹಂತ ದಾಟಿದ ಮೇಲೆ ನಿನ್ನ ಬಟ್ಟೆ ನೀನೇ ಒಗಿದುಕೋ, ಹಾಸಿಗೆ ಹಾಸಿಕೊಳ್ಳುವುದು ಕಲಿ, ಇವತ್ತಿಂದ ಬೇರೆ ಮಲಗು,ಸಣ್ಣ ಪುಟ್ಟ ಅಡುಗೆ ಮಾಡುವದಕಲಿ, ಪಾತ್ರೆ ಜೋಡಿಸಿಡು ಎನ್ನುತ್ತಾ ಸ್ವತಂತ್ರವಾಗಿ ಬದುಕುವದ ಕಲಿಸುತ್ತಾಳೆ ಅಮ್ಮ. ಆದ್ರೆ ಯಾಕೋ ಗಂಡು ಮಕ್ಕಳಿಗೆ ಇದನ್ನೆಲ್ಲಾ ಹೇಳಿಕೊಡಲು ಸ್ವಲ್ಪ ಹಿಂದೆ ಬೀಳುತ್ತಾಳೆ. ಅದ್ಕಕೆ ಗಂಡು ಜೀವಿ ಅಡುಗೆ ಮನೆ ಹೆಣ್ಣಿಗೆ ಮಾತ್ರ ಸೀಮಿತ ಅಂದ್ಕೊಳ್ತಾನೆ. ಅದೂ ಅಲ್ಲದೇ ಅಡುಗೆ ಮನೆಯಲ್ಲಿ ಅಮ್ಮನನ್ನು ಮಾತ್ರ ನೋಡುತ್ತಾ ಬೆಳೆಯುತ್ತಾರೆ ಮಕ್ಕಳು. ಬಹುಶಃ ಇದೆಲ್ಲದರ ಪರಿಣಾಮ ಹೆಣ್ಣು ದಿಕ್ಕಿಲ್ಲದ ಮನೆಯಲ್ಲಿ ಹೈರಾಣ ಪರಿಸ್ಥಿತಿ ನಿರ್ಮಾಣವಾಗುತ್ತೆ. ಹೆಣ್ಣಾಗಲಿ ಗಂಡಾಗಲಿ ಜೀವನ ಶಿಕ್ಷಣವನ್ನು ಚಿಕ್ಕ ವಯಸ್ಸಿನಲ್ಲಿಯೇ ಕಲಿಯಬೇಕು ಆಗ ಮಾತ್ರ ಒಂದಿಲ್ಲೊಂದು ಕಾಲದಲ್ಲಿ ಉಪಯೋಗಕ್ಕೆ ಬರುವುದು.
ಒಂದಿನ ಪಕ್ಕದ ಮನೆಯವಳು ಬಂದು ಪಿಸಿ ಪಿಸಿ ಮಾತಾಡಿದ್ದು ನೆನಪಾಯ್ತು. ಹದಿನೆಂಟು ದಿನ ಆಯ್ತು ಕಣೇ ಕೆಳಗಿನ ಮನೆ ಮಮತಾ ಕರೋನ ಅಂತ ರೂಮ್ ಸೇರಿಕೊಂಡು. ಪಾಪ ಈ ವಯ್ಯನ ಪರಿಸ್ಥಿತಿ ದೇವರಿಗೇ ಪ್ರೀತಿ. ಆದ್ರೂ ಅಷ್ಟೂ ಕೆಲಸ ಮಾಡ್ತಾನೆ. ಪುಟ್ಟ ಮಗು ಬೇರೆ ಇದೆ ಅದನ್ನೂ ನೋಡ್ಕೋತಾನೆ ಅಬ್ಬಾ. ನಮ್ಮನೆಯವರಿಗೆ ಈ ಥರ ಬುದ್ಧಿ ಯಾವಾಗ ಬರುತ್ತೋ ಅಂತಿದ್ಲು. ನಂಗೂ ಕ್ವಾರಂಟೈನ್ ಆಗ್ಬೇಕು ಅನ್ನಿಸ್ತಿದೆ ಕಣೇ!
ಇರುತ್ತಾರಲ್ವಾ ಕೆಲವರು ಹೀಗೂ.
ಅಂತಹವರ ಬಗ್ಗೆ ನನ್ನದು ಮೌನಾಚರಣೆ.




ಆದ್ರೆ ನಿಜಕ್ಕೂ ಪ್ರತೀ ಮನೆಯಲ್ಲೂ ಹೀಗೊಂದು ಕರೋನ ವಾರಿಯರ್ಸ್ ಇದ್ದಾರೆ. ಎಲ್ಲರಿಗೂ ಗೊತ್ತು ಈ ಕರೋನ ಎಲ್ಲ ರೋಗದಂತೆ ಅಲ್ಲ ದೂರ ಇರಬೇಕು, ಬಹಳ ಕಾಳಜಿ ಬೇಕು, ಪ್ರೊಟೀನ್ ಯುಕ್ತ ಆಹಾರ ಕೊಡಬೇಕು. ಬಿಸಿ ನೀರು ಸ್ಟೀಮ್,ಹೀಗೆ ಆರೈಕೆ ಹಲವು. ಒಬ್ಬ ಕರೋನ ರೋಗಿ ಹೋಂ ಕ್ವಾರಂಟೈನ್ ನಲ್ಲಿ ಇದ್ದಾರೆ ಅಂದರೆ ಅವರನ್ನು ನಿಗಾ ವಹಿಸುವುದು ಸುಲಭದ ಕೆಲಸವಂತೂ ಅಲ್ಲ.
ಹೀಗೆ ಹದಿನೈದು ಇಪತ್ತು ದಿನಗಳು ಅಥವಾ ಅದಕ್ಕೂ ಹೆಚ್ಚು ಗಂಡ ಮಕ್ಕಳು ಅತ್ತೆ ಮಾವ ಹೀಗೆ ಯಾರೇ ಇದ್ದರೂ ಅವರನ್ನು ಅಕ್ಕರಿಯಿಂದ ಆರೈಕೆ ಮಾಡಿ ಅವರೊಳಗೊಂದು ಚೈತನ್ಯ ತುಂಬುತ್ತಾರಲ್ಲ
ಅವರಿಗೊಂದು ಮನ ತುಂಬಿ ಧನ್ಯವಾದ ಅರ್ಪಿಸುವದರಲ್ಲಿ ತಪ್ಪೇನಿದೆ. ಕರೋನನೇ ಬರಬೇಕು ಅಂತೇನಿಲ್ಲ ಆಗಾಗ ಅವಳನ್ನು ಪ್ರೀತಿಯಿಂದ ಕ್ವಾರಂಟೈನ್ ಮಾಡಲು. ಗಟ್ಟಿಯಾದ ಬಂಧ ಮತ್ತೆ ಬರಲಿರುವ ಕಷ್ಟ ಕಾಲವನ್ನು ಸಲೀಸಾಗಿಸಬಹುದು ಅಲ್ಲವೇ?
ಹೆಚ್ಚಿನ ಬರಹಗಳಿಗಾಗಿ
דירות דיסקרטיות בקריות במיקום מרכזי And The Mel Gibson Effect
The Secret For נערות ליווי בבאר שבע למסיבות פרטיות Revealed in Seven Simple Steps
What The Pope Can Teach You About ליווי בחינם בירושלים עם תמונות אמיתיות