- ರವಿಯಂತೆ ಕವಿಯೂ- ಅಂಬಾರಕೊಡ್ಲದ ವಿಷ್ಣುನಾಯ್ಕರು - ಫೆಬ್ರುವರಿ 27, 2024
- ಎರಡು ಅನುವಾದಿತ ಕವಿತೆಗಳು - ಸೆಪ್ಟೆಂಬರ್ 26, 2020
- ಬೇಲಿಗಳು - ಆಗಸ್ಟ್ 20, 2020
“ಅಮ್ಮಾ ತಿನ್ನೋಕೆ ಏನಿದೆ? ಚಾ ಕುಡಿಯೋಕೆ ಈರುಳ್ಳಿ ಭಜಿ ಮಾಡ್ಕೊಡು”ಶಾಲೆಯಿಂದ ಮರಳಿ ಬಂದ ಮಗಳು ಇನ್ನೂ ಶೂ ಬಿಚ್ಚಿ ಒಳ ಬರುವ ಮುನ್ನವೇ ಅಪ್ಪಣೆ ಕೊಡಿಸಿದಳು. ಒಗ್ಗರಣೆ ಅವಲಕ್ಕಿ ತೆಗೆದು, ಚಾ ಒಲೆ ಮೇಲಿಟ್ಟು ಕುದಿಯೋದನ್ನೆ ನೋಡುತ್ತ ಚಾ ಸೋಸಲು ತಯಾರಾಗಿರುತ್ತಿದ್ದ ನನಗೆ ಒಮ್ಮೆಲೆ ಇನ್ನೊಂದು ಕೆಲಸ ಹೇರಿದ ಮಗಳ ಮೇಲೆ ಕೋಪ ಬಂದರೂ ಮಕ್ಕಳ ಆ ವಯಸ್ಸಿನ ಆಶೆಗಳು ಸಹಜವೆಂಬ ಅರಿವಿತ್ತು.
ಹೌದಲ್ಲ.. ನಾನೂ ಕೂಡ ಹೀಗೆ ನನ್ನಮ್ಮನಿಗೆ ಅದು ಕೊಡು.. ಇದು ಕೊಡು.. ಎಂದು ತಲೆತಿನ್ನುತ್ತಿದ್ದ ಕಾಲ ಇತ್ತಲ್ಲ. ಆಗೆಲ್ಲ ಇಂದಿನ ಹಾಗೆ ಅಂಗಡಿ ಮುಂಗಟ್ಟುಗಳು ಎಲ್ಲೆಂದರಲ್ಲಿ ಇಲ್ಲದ ಸಣ್ಣ ಹಳ್ಳಿ ನನ್ನೂರು. ಆ ಕಾರಣ ಆಗಾಗ ಹೀಗೆ ಸತಾಯಿಸಿದಾಗಲೆಲ್ಲ ಅಮ್ಮ ‘ನನ್ನೇ ತಿಂದು ಬಿಡು .’ಎಂದು ಗದರುತ್ತಿದ್ದದು ನೆನಪಾಗುತ್ತಿತ್ತು. ಈ ನೆನಪುಗಳೇ ಹೀಗೆ.ಒಮ್ಮೇಲೆ . ಧೋ….! ಎಂದು ಸುರಿವ ಮಳೆ ಹಾಗೆ.
ಮಕ್ಕಳು ಸಣ್ಣವರಿದ್ದಾಗ ಬೆಳಿಗ್ಗೆ ಮಕ್ಕಳನ್ನೆಲ್ಲಾ ಸ್ಕೂಲಿಗೆ ಬಿಟ್ಟು ಬಂದ ಮೇಲೆ ಅಲ್ಲಿ ಇಲ್ಲಿ ಹರಡಿದ ಸಾಮಾನುಗಳನ್ನೆಲ್ಲಾ ಒಪ್ಪ ಓರಣಗೊಳಿಸಿ, ಚೊಕ್ಕಟವಾಗಿಡುವುದು ನನ್ನ ದಿನಚರಿಯಾಗಿತ್ತು. ಕೈಗೆ ಸಿಗಬೇಕಾದ್ದು ತಕ್ಷಣ ಸಿಗುವಂತೆ ಜೋಡಿಸಿಡದಿದ್ದಲ್ಲಿ ನಂಗೆ ಸಮಾಧಾನವಿರುತ್ತಿರಲಿಲ್ಲ. ಇಷ್ಟೆಲ್ಲಾ ಮುಗಿಸಿ ತಯಾರಾಗಿ ಕಾಲೇಜು ಸೇರಬೇಕೆಂದರೆ ಏಳು ಹನ್ನೊಂದು ಆಗೋದೆ. ಬೆಳಿಗ್ಗೆಯಿಂದ ಹನಿ ಪುರುಷೊತ್ತು ಇಲ್ಲದಂತೆ ನಸುಕಿನ 5.30ಯಿಂದ 9.00ಗಂಟೆವರೆಗೂ ದಿನವೂ ನಾನ್ ಸ್ಟಾಪ್ ಕೆಲಸ. ಸ್ವಲ್ಪ ಪುರುಷೊತ್ತು ಅಂದ್ರೆ ಅದು ಕಾಲೇಜಿನಿಂದ ಮನೆಗೆ ಮರಳಿದ ಮೇಲೆಯೇ ಆಗಿರುತ್ತಿತ್ತು. ನಿರಾಳ ಕೈಕಾಲು ತೊಳೆದು ಮುಖ ಬೆಳಗಿಸಿಕೊಂಡು ಆಗ ನಾನು ಪೇಪರ ಹಿಡಿಯುವುದು. ಬೆಳಿಗ್ಗೆಯಿಂದ ಮನೆಯ ಎಲ್ಲ ಸದಸ್ಯರೂ ಓದಿ ಇಟ್ಟ ಪೇಪರು ನಾನು ತೆಗೆಯುವುದು ಸಂಜೆಗೆ.ಒಂದರ್ಧ ಗಂಟೆ ಕಣ್ಣಾಡಿಸುತ್ತಲೂ ಆಗೇ ಬಿಡುತ್ತಿತ್ತು ನಾಲ್ಕೂವರೆ. ಮತ್ತೆ ಸ್ಕೂಟಿ ಏರಲೇಬೇಕು ಚಿಕ್ಕ ಮಗಳ ಹೊತ್ತು ತರಲು.ತಾಯ್ತನ ಅನ್ನೊದೇ ಒಂದು ವಿಶಿಷ್ಟ. ಇಷ್ಟೆಲ್ಲಾ ಸುಸ್ತಾಗಿದ್ದರೂ ಮಗಳ ಶಾಲೆ ಮುಂದೆ ಹೋಗುತ್ತಲೂ ಎಲ್ಲಾ ಆಯಾಸ ಜರ್ರನೇ ಇಳಿದೇ ಹೋಗುತ್ತಿತ್ತು. ಅಕ್ಕಪಕ್ಕ ನನ್ನ ಹಾಗೆ ಹೆಂಗಸರು ಕೂತು ಐದು ಹತ್ತು ನಿಮಿಷ ಮಾತಾಡಿ ಶಾಲೆ ಬಗ್ಗೆ, ಮಕ್ಕಳ ಬಗ್ಗೆನೇ ಚರ್ಚಿಸಿ ಮಕ್ಕಳನ್ನು ಹೊಗಳಿ, ಕೆಲವೊಮ್ಮೆ ತೆಗಳಿ, ಮಕ್ಕಳ ತಂದೆಯ ಬಗ್ಗೆ ಒಂದಿಷ್ಟು, ಶಾಲೆ ಹೆಡ್ ಮಿಸ್ಟ್ರೆಸ್ಸು, ಕ್ಲಾಸ್ ಟೀಚರುಗಳ ಬಗ್ಗೆ ಕಮೆಂಟು ಹೀಗೆ ಒಂದಿಲ್ಲದಿದ್ದರೆ ಒಂದು ಇದ್ದೇ ಇರುತ್ತಿತ್ತು. ಈ ಎಲ್ಲ ಮಾತುಗಳನ್ನು ತಾಯಿಯಾದ ಸುಶಿಕ್ಷಿತ ಎನ್ನುವ ಎಲ್ಲ ಹೆಣ್ಣು ಬಹುಮಟ್ಟಿಗೆ ಇಷ್ಟಪಟ್ಟೆ ಮಾತಾಡುತ್ತಿರುತ್ತಾರೆ ಅನ್ನೋದು ಇಂದಿಗೂ ಸತ್ಯ. ಅಲ್ಲೊಂದು ಮಾನಸಿಕ ರಿಲಾಕ್ಷೇಷನ್ ಸಿಗುತ್ತೇನೋ? ಬಹುಶಃ ಮಾತು ಹೆಣ್ಣಿಗೆ ಸಹನೆಯನ್ನು ತಂದುಕೊಡುವ ಅಸ್ತ್ರವೇ ಇರಬಹುದು ಅನ್ನುವುದು ನನ್ನ ಅನಿಸಿಕೆ.
ಮನೆಗೆ ಬರುತ್ತ ಮಗಳು ಇರುಳ್ಳಿ ಭಜಿ ಮಾಡೋಕೆ ಹಚ್ಚಿಬಿಡುತ್ತಿದ್ದಳು.’ “ಬರ್ತಾನೇ ತಿಂಡಿಪೋತಿ ಕರಕರೆ’ ಅನ್ನುತ್ತಾ ಈರುಳ್ಳಿ ಹೆಚ್ಚಿ ಹಿಟ್ಟು ಕಲಿಸಿ ಎಣ್ಣೆಯಲ್ಲಿ ಬಿಟ್ಟು ಆಯ್ತು, ತಿಂದಾಗುವವರೆಗೆ ಇನ್ನೊಂದು ರಾಗ ಶುರು. “ ಅಮ್ಮ ರಾತ್ರಿ ಊಟಕೇನು?” ‘ಮೀನು’ ಚಿಕ್ಕ ಮಗಳ ಜೊತೆ ಅಪ್ಪನ ತಾಳ, ಮೀಸೆಯಂಚಲ್ಲಿ ನಕ್ಕು ಹೇಳುತ್ತಿದ್ದರು. ಮತ್ತೀಗ ದೊಡ್ಡವಳ ರಾಗ ಶುರುವಾಗುತ್ತಿತ್ತು “ಮೀನು ಇವತ್ತು ಬೇಡ ಚಿಕನ್” ಅರೇ ಈ ಕಾಲದ ಏಳಸುಗಳು ತಿನ್ನೋದಕ್ಕೆ ಬದುಕ್ತಿವೆಯಾ? ಎನಿಸುತ್ತಿತ್ತಾದರೂ ಚಿಕ್ಕ ಮಕ್ಕಳ ತಿನ್ನುಣ್ಣುವ ಆಸೆ ಪೂರೈಸದೇ ತಂದೆ ತಾಯಿ ಖುಷಿಪಡಲುಂಟೇ? ಎಂದುಕೊಳ್ಳುತ್ತಿದ್ದೆ. ಮಾಡುವವರ್ಯಾರು? “ನಾನುಂಟು ಗಿಡ್ಡಣ್ಣ” ಸಣ್ಣವರಿದ್ದಾಗ ಬೆರಳ ಹಾಡು ಹೇಳುತ್ತಿದ್ದುದು ನೆನಪು. ಹೆಣ್ಣು ಹೊರಗೆ ದುಡಿದರೂ ಮನೆಯಲ್ಲಿ ಮನೆಯೊಡತಿಯಾಗಿ ಅಡುಗೆ ಮನೆಯಲ್ಲಿ ಇಲ್ಲದಿದ್ದರೆ ಶೋಭೆ ಇಲ್ಲ ಅನ್ನೋದು ಸತ್ಯ. ಅದೂ ಇದೂ ತಿನ್ನುವ ಮಕ್ಕಳನ್ನು ಆಗಾಗ ಹೊತ್ತು ಮಕ್ಕಳ ಡಾಕ್ಟರ ಜೇಬು ತುಂಬಿಸುತ್ತಿದ್ದದ್ದು ಕಡಿಮೆ ಇರಲಿಲ್ಲ. ಇವೆಲ್ಲಾ ನೆನಪಾದರೆ ಆ ಬದುಕು ಒಂದು ಥರಾ ಜಂಜಾಟಗಳ ನಡುವೆಯೇ ಬದುಕುವ ಛಲವನ್ನು ಹುಟ್ಟಿಸುತ್ತಿತ್ತು ಅನ್ನಿಸುತ್ತದೆ.
ಸಂಜೆಯಾಗುತ್ತಲೂ ಹಸಿಹಸಿ ತಾಜಾ ಬಂಗುಡೆ ಮನೆಗೆ ಬರುತ್ತಿತ್ತು. ಕರ್ರಗಿನ ಪ್ಲಾಸ್ಟಿಕ್ಕು ಚೀಲದಲ್ಲಿ ಬೆಳ್ಳಗೆ ಮೀರಿಮೀರಿ ಮಿಂಚುವ ಬಂಗುಡೆ, ಸಮದಾಳೆ, ಮೀನುಗಳು ಮೀನುಪ್ರಿಯರ ಬಾಯಲ್ಲಿ ನೀರೂರಿಸದೇ ಇರಲಾರವು. ಕಡಲ ತಡಿಯ ಬದುಕಿನ ನಮಗೆ ಮೀನು ಇಲ್ಲದಿದ್ದರೂ ಆಗದು. ಇನ್ನೊಂದೆಡೆ ಹಸಿಜೀವಗಳ ಎಷ್ಟೊಂದು ಕೊಲ್ಲುತ್ತೇವೆ ಎಂಬ ಪಾಪಪ್ರಜ್ಞೆ. ಇಂತಹುದಕ್ಕೆಲ್ಲಾ ನಮ್ಮ ಪೂರ್ವಿಕರು ‘ಕೊಂದ ಪಾಪ, ತಿಂದು ಪರಿಹಾರ’ ಎಂಬ ಸಮಜಾಯಿಸಿ ಬಿಟ್ಟು ಹೋಗಿದ್ದಾರೆ. ಈ ನುಡಿಯ ಗುಣುಗಿ ತಿನ್ನುವುದೇ ಉಪಾಯ ಎಂದುಕೊಳ್ಳುತ್ತೇವೆ. ಪಾತ್ರೆಗೆ ಸುರುವಿ ನೀರು ಹಾಕಿ ಮೆಟ್ಟುವ ಕತ್ತಿ [ಈಳಿಗೆ ಮಣೆ ] ಏರಿ ಮೀನು ಮಾಡಲು ಕುಳಿತರೆ ಒಂದೊಂದೆ ಮೀನುತೆಗೆದು ಮೇಲಿನ ಹಿಣಿಜು ಸವರಿ ತಲೆಕತ್ತರಿಸುವುದನ್ನು ಅದರೊಳಗಿನ ಕರುಳು ಬಗೆದು ಹೊರತೆಗೆಯುವುದನ್ನು ತದೇಕವಾಗಿ ನೊಡುತ್ತಿದ್ದಳು ಸಣ್ಣ ಮಗಳು. ಅವಳಿಗೆ ಅಡುಗೆ ಮಾಡುವುದೆಂದರೆ ಅದೇನೋ ಆಸೆ! ನಾನು ಅಡುಗೆ ಮಾಡುವಾಗಲೆಲ್ಲಾ ಆಗಾಗ ಎಡತಾಕುವ ಬೆಕ್ಕಿನಂತೆ ಪುಸ್ತಕ ಕೈಯಲ್ಲಿ ಹಿಡಿದೇ ಬಂದುಹೋಗಿ ಮಾಡುವುದು ಅವಳ ರೂಢಿ.ಯಾವ ಸಾಮಾನುಗಳು ಎಲ್ಲಿ ಇರುತ್ತಿದ್ದವು ಎಂಬುದು ಅವಳಿಗೆ ಚೆನ್ನಾಗಿ ತಿಳಿದಿರುತ್ತಿತ್ತು. ಆಗಾಗ ಕೈತುಂಬಾ ಬಳೆ ಹಾಕಿಕೊಂಡು ಸುಳ್ಳುಸುಳ್ಳೇ ಒಂದೆರಡು ಲೋಟಗಳ ಹಿಡಿದು ಸಿಂಕಲ್ಲಿ ಚೆಲ್ಲಿ ಪಾತ್ರೆ ತೊಳೆಯುವ ಕಸರತ್ತು ಮಾಡುವ ಅವಳನ್ನು ಅವಳ ಹಾವಭಾವಗಳನ್ನು ನೋಡುವುದೇ ಮೋಜೆನ್ನಿಸುತ್ತಿತ್ತು. ಆ ಹೂವಿನಂತಹ ಮನಸ್ಸು..ಆ ಪುಟ್ಟಪುಟ್ಟ ಕೈಗಳು, ಝಣಝಣ ಬಳೆಗಳ ಸದ್ದು ಎಲ್ಲ ಖುಷಿಕೊಡುತ್ತಿದ್ದವು. ಅವಳಿಗೆ ಮೀನು ಮಾಡುವ ಆಸೆಯೂ ಆಗಾಗ ಪುಟಿದೇಳುತ್ತಿತ್ತು. ನಾನು ಕತ್ತಿಗೆ ಮೀನು ಆನಿಸಿ ಸÀರಸರನೇ ಆಚೆ ಇಚೆ ಸರಿಸುತ್ತಿದ್ದರೆ ಅದ್ಹೇನೋ ಮಜವೆನ್ನಿಸಿ “ಅಮ್ಮ ನಾನೊಂದು ಸಲ ಮಾಡುವೆ” ಎಂದು ದುಂಬಾಲು ಬೀಳುತ್ತಿದ್ದಳು. ನಾನು ಕೈಗೆಲ್ಲಿಯಾದರೂ ತಾಗಿಸಿಕೊಂಡರೆ ಎಂಬ ಮುಂಜಾಗ್ರತೆಯಿಂದ “ ಈಗಲೇ ಬೇಡ ಮಗಳೇ ಇನ್ನಷ್ಟು ದೊಡ್ಡವಳಾಗು, ಮಾಡುವಿಯಂತೆ “ಎನ್ನುತ್ತಿದ್ದೆ. [ಈಗ ಮಾಡೆಂದರೂ ಆಗದೆನ್ನುವಳು]
ಮೀನು ಮಾಡುವುದು, ಕೆಂಪು ಮಸಾಲೆ ಸಿದ್ಧಮಾಡುವುದು, ನಮ್ಮಮ್ಮ ನಮಗೆ ಹೇಳಿಕೊಟ್ಟ ಅಡುಗೆ ಪಾಠ. ಒಂದಿಷ್ಟು ಬೆಳ್ಳುಳ್ಳಿ, ಶುಂಠಿ ರುಬ್ಬಿ ಪೇಸ್ಟ ಮಾಡಿ ಅದಕ್ಕೆ ಕೆಂಪು ಖಾರದ ಪುಡಿ ಬೆರೆಸಿ ಉಪ್ಪು ಹುಳಿ ಜೊತೆ ಚೆನ್ನಾಗಿ ಕಲಿಸಿಟ್ಟರೆ ಒಂದು ವಾರದವರೆಗೆ ಮೀನು ಪ್ರೈಗೆ ಬಳಸಬಹುದು. ಈ ಖಾರವನ್ನು ಸ್ವಚ್ಛಮಾಡಿದ ಮೀನಿನ ಸುತ್ತಲೂ ಒಳಹೊರಗೂ ಆಗುವಂತೆ ಚೆನ್ನಾಗಿ ಲೇಪಿಸಿ, ಒಂದೊಂದೆ ಖಾರ ಮೆತ್ತಿದ ಮೀನನ್ನು ರವಾದೊಳಗೆ ಹೊರಳಿಸಿ ಒಲೆ ಮೇಲಿಟ್ಟ ಎಣ್ಣೆ ತಾಗಿಸಿದ ಖಾವಲಿಗೆ ಬಿಟ್ಟು ಆಗಾಗ ತಿರುವಿ ಹಾಕುತ್ತ ಬೆಂದ ಮೇಲೆ ತಟ್ಟೆಗೆ ಹಾಕಿದರೆ ಅನ್ನ ಸಾರಿನೊಂದಿಗೆ ಊಟಕ್ಕೆ ರೆಡಿ. ಆ ದಿನವೆಲ್ಲ ತಂದೆ ಮಕ್ಕಳ ತಕರಾರು ಊಟದ ವಿಷಯದಲ್ಲಿರುತ್ತಿರಲಿಲ್ಲ. ಇಲ್ಲದಿರೆ ಅನ್ನದ ಅಗುಳು ಒಳಗೆ ಇಳಿಯುತ್ತಿರಲಿಲ್ಲ ಮಕ್ಕಳಿಗಷ್ಟೇ ಅಲ್ಲ, ಮಕ್ಕಳ ಅಪ್ಪನಿಗೂ ಕೂಡಾ. ನನಗೋ ಈ ಕೆಲಸಗಳ ನಡುವೆ ನಾನೇನು ತಿಂದೆನೆಂದೇ ತಿಳಿಯುತ್ತಿರಲಿಲ್ಲ.
ಈ ಮೀನಿನ ಪುರಾಣ ಈಗ ನನ್ನ ಮಕ್ಕಳು ಚೂರೂಚೂರೇ ಕಲಿಯುತ್ತಿದ್ದಾರೆ. ಪ್ರೈ ಮಾಡಿಕೊಂಡು ತಿನ್ನುವಷ್ಟರ ಮಟ್ಟಿಗೆ ಆ ರುಚಿ ಅಡುಗೆಯ ಬಗ್ಗೆ ಆಸಕ್ತಿ ಬೆಳೆಸಿದೆ. ನಾವೂ ಹಾಗೇ ಅಲ್ಲವೇ ಕಲಿತಿದ್ದು?ನಾವೆಲ್ಲ ಚಿಕ್ಕಂದಿನಲ್ಲಿರುವಾಗ ಚೀಲದ ತುಂಬ ತಂದೆ ಮೀನು ತರುತ್ತಿದ್ದರು. ಬರೀಯ ಇಪ್ಪತ್ತು ಇಲ್ಲ ಮೂವತ್ತು ರೂಪಾಯಿಗಳಿಗೆ ಎಷ್ಟೆಲ್ಲ ಮೀನು ಬರುತ್ತಿತ್ತು. ನಮ್ಮಮ್ಮ ಮನೆಯ ಹೊರಗೆ ಬಯಲಲ್ಲಿ ಕೂತು ದೊಡ್ಡ ಪಾತ್ರೆ ಇಟ್ಟುಕೊಂಡೇ ಮೀನು ಮಾಡುತ್ತಿದ್ದರು. ಆ ಕಡೆ ಈ ಕಡೆ ನಾಯಿ, ಬೆಕ್ಕು ಕೋಳಿಗಳು ತಮ್ಮ ಪಾಲಿಗಾಗಿ ಕಾಯುತ್ತಿದ್ದವು. ತಂದೆಯೋ ಇಲ್ಲ ಮಕ್ಕಳಾದ ನಾವು ಒಂದೆಡೆ ಕೋಲು ಹಿಡಿದು ನಿಲ್ಲುತ್ತಿದ್ದೆವು. ಇಲ್ಲದಿರೆ ಮೀನು ಮಾಡುವ ಆ ಕಣ ರಣರಂಗವಾಗುತ್ತಿತ್ತು. ನಾಯಿಗಳೋ ಬೆಕ್ಕುಗಳೋ ಯಾವುದಾದರೋ ತಮಗೆ ತಲೆಯ ಭಾಗ ಸಿಗಲಿಲ್ಲವೆಂದು ಇನ್ನೊಂದರ ಮೇಲೆ ಎಗರಿಬೀಳುತ್ತಿದ್ದವು. ಕಚ್ಚಾಡುತ್ತಿದ್ದವು. ಮೀನು ಸ್ವಚ್ಛ ಮಾಡಿ ತೊಳೆದು ಪಳದಿ [ಸಾರು] ಮಾಡಲು ಅಮ್ಮ ಸ್ವಲ್ಪ ಮೀನು ಒಳಗೊಯ್ದರೆ ಇನ್ನುಳಿದ ಮೀನುಗಳಿಗೆ ಹಸಿಮೆಣಸು ಉಪ್ಪು ಅರೆದು ಖಾರ ತಯಾರಿಸಿ ಅದನ್ನು ಬಂಗುಡೆ ಮೀನಿಗೆ ಲೇಪಿಸುತ್ತಿದ್ದರು ತಂದೆ. ಆಮೇಲೆ ಕಟ್ಟಿಗೆಯ [ಜಿಗ್ಗು] ಸಣ್ಣಸಣ್ಣ ತುಂಡುಗಳನ್ನು ಒಂದರ ಮೇಲೊಂದು ಜೋಡಿಸಿ ಅದರ ಮೇಲೆ ಈ ಮೀನು ಜೋಡಿಸಿ ಪುನಃ ಮತ್ತೆ ಸೌದೆಯ ತುಕಡಿಗಳ ಹಾಕುತ್ತಿದ್ದರು. ಅದು ಮೀನಿನ ಚಟ್ಟದಂತೆ ಕಾಣುತ್ತಿತ್ತು. ಈ ಸೌದೆಗಳು ಪುರಪುರನೇ ಕರಗಿ ಹೋಗುತ್ತಲೂ ಮೀನು ಹದವಾಗಿ ಬೆಂದಿರುತ್ತಿತ್ತು.ಆಗಾಗ ತಂದೆ ಮನೆಯಲ್ಲಿದ್ದಾಗಲೆಲ್ಲಾ ಈ ರೀತಿ ಮೀನು ಸುಡುವುದು ನಮಗೆಲ್ಲಾ ಮಜವೆನ್ನಿಸುತ್ತಿತ್ತು. ನೈಸರ್ಗಿಕವಾಗಿ ಹಿಂದಿನ ಆದಿ ಮಾನವ ಮೀನು ಬೇಯಿಸಿ ತಿನ್ನಲು ಕಲಿತ ಮೇಲೆ ಕಂಡುಹಿಡಿದ ವಿಧಾನವೆಂದು ತಂದೆ ಹೇಳುತ್ತಿದ್ದರು. ಅದರ ರುಚಿ ಎಣ್ಣೆ ಹಾಕಿ ಖಾವಲಿಯಲ್ಲಿ ಬೇಯಿಸಿದ ಮೀನು ಕೊಡಲಾರದು. ‘ಬಲ್ಲವನೇ ಬಲ್ಲ ಬೆಲ್ಲದ ರುಚಿಯ’ ಎಂಬಂತೆ ‘ಬಲ್ಲವನೆ ಬಲ್ಲ ಸೌದೆ ಅಟ್ಟಣಿಗೆ ಮೇಲೆ ಸುಟ್ಟ ಬಂಗುಡೆ ಮೀನಿನ ರುಚಿಯ’ ಅಂತ ಮೀನು ಪ್ರಿಯರು ಬಾಯಾಡಿಸಬಹುದು. ಅದರ ಸ್ವಾದವೇ ಹಾಗೆ! ಗಮ್ಮತ್ತಾಗಿರುತ್ತಿತ್ತು. ಮೇಲಿನ ಸುಟ್ಟು ಕಪ್ಪು ಕಪ್ಪಾದ ಭಾಗವನ್ನೆಲ್ಲಾ ತೆಗೆದು ತಿನ್ನುವ ಆ ಭಾಗ್ಯ ಆಹಾ! ಈ ಖಯಾಲಿ ಈಗಲೂ ನನ್ನಲ್ಲಿ ಇದೆಯಾದರೂ ಅದು ಸಾಧ್ಯವಾಗುತ್ತಿಲ್ಲ ಎಂಬ ನಿರಾಶೆ ನನ್ನದು.
ಈಗ ನನ್ನ ಮಕ್ಕಳು ದೊಡ್ಡವರಾಗಿದ್ದಾರೆ. ಅವರಿಗೆ ಈ ಸೌದೆ ಜೋಡಿಸಿ ಅಟ್ಟಣಿಗೆ ಮೇಲೆ ಸುಡುವ ಮೀನು ಸ್ವಾದ ಗೊತ್ತಿಲ್ಲ. ಕಲಿಯಲು ಹೊರಗಡೆ ಇರುವ ಮಕ್ಕಳು ಅಲ್ಲಿ ಫಾಸ್ಟ ಪುಡ್ಗಳ ಅಡಿಕ್ಟಗಳು. ಚೈನಾ ಜಪಾನ್ ರೆಸಿಪಿಗಳೋ, ಸುನೈನ್ ರೆಷ್ಟೋರೆಂಟಗಳು ಕೆಎಫ್.ಸಿ ಚಿಕನ್ಗಳು, ಫಿಜ್ಜಾಗಳು, ಬರ್ಗರಗಳು, ಹೀಗೆ ಯದ್ವಾತದ್ವಾ ಪದಗಳ ಊಟದ ಹೆಸರುಗಳನ್ನು ಹೇಳುತ್ತಾರೆ. ಅಪರೂಪಕ್ಕೆ ಅವರೊಂದಿಗೆ ಹೊರ ಊರಲ್ಲಿ ಹೋಟೆಲ್ಲುಗಳಿಗೆ ಊಟಕ್ಕೆ ಹೊರಟರೆ ಮೆನು ಅವರ ಕೈಯಲಿ. ಅದೇನೇನೋ ಆರ್ಡರು ಮಾಡುತ್ತಾರೆ. ನಮ್ಮ ಬಾಯಲ್ಲಿ ಇಳಿಯದ ಇಳಿದರೂ ಮಾರನೇ ದಿನ ತಿಣುಕಬೇಕಾದ ಅನಿರ್ವಾಯತೆ ಮಾಡಿಸುವಂತಹ ಆಹಾರಗಳು.
ಈಗೀಗ ಹೊರ ಊರಲ್ಲಿ ಕಲಿಯುವ ಮಕ್ಕಳು ಆಗಾಗ ಅಷ್ಟೇ ಮನೆಗೆ ಬರುತ್ತಾರೆ. ಮನೆಯಲ್ಲಿ ನಾವಿಬ್ಬರೂ ಅವರ ಬಾಲ್ಯದ ದಿನಗಳಲ್ಲಿ ಅವರು ಕಾಡುತ್ತಿದ್ದ ನೆನಪುಗಳ ಮಾಡುತ್ತ ಉಣ್ಣುತ್ತಿದ್ದರೆ ಗಂಟಲೊಳಗೆ ಅನ್ನ ಇಳಿಯಲಾರೆ ಅನ್ನುತ್ತದೆ. ಆಗೆಲ್ಲ ಅದು ಕೊಡು ಇದು ಕೊಡು ಎನ್ನುವ ಮಕ್ಕಳು ಇನ್ನು ಚಿಕ್ಕವರಾಗೇ ಇರಬಾರದಿತ್ತೇ ಎನ್ನಿಸುತ್ತದೆ. ಆದರೆ ಕಾಲ ಯಾರಿಗೂ ಕಾಯುವುದಿಲ್ಲ.ಬದಲಾವಣೆ ಜಗದ ನಿಯಮ..
ಹೆಚ್ಚಿನ ಬರಹಗಳಿಗಾಗಿ
ನಂಬಿಕೆಯ ವರ್ಷಧಾರೆ
ನಮ್ಮಲ್ಲೇ ಇಹುದೇ ನಮ್ಮ ಸುಖ!
ಹುಚ್ಚು ಅಚ್ಚುಮೆಚ್ಚಾದಾಗ