- ದಿ ಬ್ಯಾಂಕಿಂಗ್ ವಾರಿಯರ್ಸ್.. - ಆಗಸ್ಟ್ 24, 2020
- ಆತ್ಮವನ್ನು ಗುರುತಿಸುವ ಬಗೆ - ಆಗಸ್ಟ್ 11, 2020
- ಬೆಣ್ಣೆ ಕದ್ದನಮ್ಮ ಕೃಷ್ಣ ಬೆಣ್ಣೆ ಕದ್ದನಮ್ಮ - ಆಗಸ್ಟ್ 10, 2020
ಆಷಾಢ ಮಾಸದ ಅಮಾವಾಸ್ಯೆಯ ದಿನದ ಮಾರನೆಯ ದಿನವೇ ಶ್ರಾವಣ ಪ್ರಾರಂಭವಾಗುವುದು. ಸಾಮಾನ್ಯವಾಗಿ ಎಲ್ಲರೂ ಶ್ರಾವಣವನ್ನು ಬರಮಾಡಿಕೊಳ್ಳಲು ಕಾಯುವುದು ಸಾಮಾನ್ಯದ ಸಂಗತಿ. ಹೊಸದಾಗಿ ಮದುವೆಯಾದ ದಂಪತಿಗಳು ಆಷಾಢ ಮಾಸದ ಒಂದು ತಿಂಗಳು ಬೇರೆ ಬೇರೆಯಾಗಿದ್ದು ಮರುಗೂಡಿಕೊಳ್ಳುವುದಾದರೆ, ಹಿರಿಯರು ಮತ್ತು ಮಕ್ಕಳಿಗೆ ಶ್ರಾವಣದಲ್ಲಿ ಬರುವ ಹಬ್ಬದ ಸಾಲನ್ನು ಎದುರು ನೋಡುವುದೇ ಸಂಭ್ರಮ.
ಮಹಾರಾಷ್ಟ್ರದಲ್ಲಂತೂ ಶ್ರಾವಣ – ಭಾದ್ರಪದ ಮಾಸಗಳಲ್ಲಿ ಪ್ರತಿ ದಿನವೂ ಏನಾದರೊಂದು ಹಬ್ಬಗಳು ಇದ್ದೇ ಇರುತ್ತವೆ. ಮುನ್ನಾದಿನದ ಈ ಅಮಾವಾಸ್ಯೆ ಯಾರಿಗೂ ಅಷ್ಟು ಮಹತ್ವದಲ್ಲದಿದ್ದರೂ, ಗಂಡಸರಿಗೆ ಅದರಲ್ಲೂ ಕುಡಿತದ ಚಟ ಇರುವವರಿಗೆ ಇಂದೊಂದು ದೊಡ್ಡದ ಹಬ್ಬದ ವಾತಾವರಣವನ್ನು ಸೃಷ್ಟಿಸುತ್ತದೆ. ಇದರ ಬಗ್ಗೆ ನನಗೆ ಏನೇನೂ ಗೊತ್ತಿರಲಿಲ್ಲ. ಅಂದು (ಶುಕ್ರವಾರ – 21/07/2006) ಬೆಳಗ್ಗೆ ಆಫೀಸಿಗೆ ಹೋಗುತ್ತಿದ್ದಂತೆಯೇ ನಮ್ಮಲ್ಲಿ ಹಲವಾರು ನೌಕರರು, ’ಇಂದು ಮನೆಯಲ್ಲಿ ಪೂಜೆ ಇದೆ, ಊರಿಗೆ ಹೋಗಬೇಕು’, ’ಪಕ್ಕದ ಮನೆಯಲ್ಲೊಬ್ಬರು ಸತ್ತು ಹೋಗಿದ್ದಾರೆ – ಸಂಜೆ ಅಂತ್ಯಕ್ರಿಯೆ ಇದೆ’, ’ನಮ್ಮ ಅಜ್ಜಿ ಊರಿನಲ್ಲಿ ಸತ್ತು ಹೋದರು – ಅರ್ಜಂಟಾಗಿ ಊರಿಗೆ ಹೋಗಬೇಕಿದೆ ’ಎಂದು ಸಬೂಬುಗಳನ್ನು ಹೇಳಿ, ಮಧ್ಯಾಹ್ನವೇ ಹೋಗುವೆವು ಎನ್ನುತ್ತಿದ್ದರು. ಇವತ್ತಿನ ದಿನ ಏಕೋ ಸರಿ ಇಲ್ಲ, ಎಲ್ಲರಿಗೂ ಏನೇನೋ ತೊಂದರೆಗಳಾಗಿವೆ ಎಂದುಕೊಂಡು ಅವರಿಗೆ ಬೇಗನೆ ಹೋಗಲು ಅನುಮತಿಯನ್ನಿತ್ತಿದ್ದೆ. ನಂತರ ನನ್ನ ಸ್ನೇಹಿತರು ಇವರೆಲ್ಲಾ ಎಲ್ಲಿ ಹೋದರು ಎಂದು ಕೇಳಿದಾಗ, ವಿಷಯವನ್ನು ತಿಳಿಸಿದೆ. ಅದಕ್ಕೆ ಅವರು ನಕ್ಕು, ನೀನೊಬ್ಬ ಕುರಿ, ಅವರು ಏನೋ ಹೇಳಿದರಂತೆ, ಇವನು ಅದನ್ನು ಕೇಳಿ, ನಂಬಿ ಅವರುಗಳನ್ನು ಬೇಗನೇ ಹೋಗಲು ಬಿಟ್ಟನಂತೆ. ಲೇ ಪೆಕರಾ! ಇವತ್ತು ಗಟಾರಿ ಅಮಾವಾಸ್ಯೆ ಅಲ್ವಾ? ನಿನಗೆ ತಿಳಿಯದೇ ಎಂದರು. ಇವತ್ತು ಅಮಾವಾಸ್ಯೆ ಎಂಬುದು ತಿಳಿದಿತ್ತು. ಆದರೇ ಇದ್ಯಾವುದಿದು ಗಟಾರಿ ಅಮಾವಾಸ್ಯೆ. ಗಟಾರ ಎಂದರೆ ಮೋರಿ. ಮೋರಿಗೂ ಅಮಾವಾಸ್ಯೆಗೂ ಎಲ್ಲಿಗೆಲ್ಲಿಯ ಸಂಬಂಧ. ವಿಷಯವನ್ನು ತಿಳಿದುಕೊಳ್ಳಲು ಉತ್ಸುಕನಾಗಿ ಅದೇನು ಇವತ್ತಿನ ವಿಶೇಷ ಎಂದು ಕೇಳಿದೆ. ಅದಕ್ಕೆ ಅವರು ಹೇಳಿದ್ದು ಹೀಗಿದೆ.
ಮಹಾರಾಷ್ಟ್ರದಲ್ಲಿ ಶ್ರಾವಣ-ಭಾದ್ರಪದ ಮಾಸಗಳಲ್ಲಿ (ವರ್ಷ ಋತು) ಹಿಂದೂಗಳಿಗೆ ಬಹಳ ವಿಶೇಷವಾದದ್ದು. ಈ ತಿಂಗಳುಗಳಲ್ಲಿ ಬರುವ ಸೋಮವಾರಗಳು, ಶನಿವಾರಗಳು, ಗಣೇಶ ಉತ್ಸವ (10 ದಿನಗಳು), ನಾಗರ ಪಂಚಮಿ, ಕೃಷ್ಣ ಜನ್ಮಾಷ್ಟಮಿ, ನಾರಿಯಲ ಪೂರ್ಣಿಮ (ಮೀನುಗಾರರ ವಿಶೇಷ ಹಬ್ಬ) ಮುಂತಾದ ದಿನಗಳಲ್ಲೂ ಹಬ್ಬಗಳನ್ನು ಆಚರಿಸುವರು. ಹಾಗಾಗಿ ಸಾಮಾನ್ಯವಾಗಿ ಜನಗಳು ಮಾಂಸಾಹಾರ ಮತ್ತು ಮದ್ಯವನ್ನು ಸೇವಿಸುವುದಿಲ್ಲ. ಆದ್ದರಿಂದ ಈ ತಿಂಗಳುಗಳು ಬರುವ ಮುಂಚಿನ ದಿನ ಎಂದರೆ ಆಷಾಢ ಮಾಸದ ಕೊನೆಯದಿನದಂದು ಹೆಚ್ಚಿನದಾದ ಗಂಡಸರು ಕಂಠಪೂರ್ತಿ ಮದ್ಯ ಕುಡಿದು ಬೀಳುವುದು ಸಾಮಾನ್ಯ ದೃಶ್ಯ. ಬಹುಶ: ಇವರುಗಳ ಕುಡಿತ ಹೆಚ್ಚಾಗಿ ಮೋರಿಗಳಲ್ಲಿ ಎಂದರೆ ಗಟಾರಗಳಲ್ಲಿ ಬೀಳುವ ಕಾರಣ, ಈ ದಿನವನ್ನು ಗಟಾರಿ ಅಮಾವಾಸ್ಯ ಎಂದೆನುವರು. ಇದೇ ಸಮಯದಲ್ಲಿ ಮೀನುಗಳು ಮೊಟ್ಟೆಗಳನ್ನು ಇಡುವ ಕಾರಣ, ಅವುಗಳನ್ನು ಬೆಳೆಯಲು ಬಿಡಲು ಇದೊಂದು ಸಕಾಲ.
ಜನಗಳು ಮದ್ಯದಂಗಡಿಗಳ ಮುಂದೆ ಸರತಿಯಲ್ಲಿ ನಿಂತಿರುವುದನ್ನು ಕಾಣಬಹುದು. ಕುಟುಂಬ ರಹಿತರಾಗಿದ್ದರೆ, ಮುಕ್ತವಾಗಿ ಕುಡಿದು ಬಿದ್ದಿರಬಹುದೆಂಬ ಕಾರಣದಿಂದ ಅಕ್ಕ ಪಕ್ಕದ ಸಮುದ್ರ ತೀರದ ಊರುಗಳಿಗೆ ಹೋಗುವರು. ಈ ಸಮಯದಲ್ಲಿ ಖಾಸಗೀ ವಾಹನಗಳು ಸಿಗುವುದು ಕಷ್ಟವಂತೆ. ಚಿಕನ್ ಮತ್ತು ಖಾಸಗೀ ಮದ್ಯಕ್ಕೆ ಬಹಳ ಬೇಡಿಕೆ ಇರುತ್ತದೆ. ವೃತ್ತಪತ್ರಿಕೆಗಳ ವರದಿಯ ಪ್ರಕಾರ ಹತ್ತು ಲಕ್ಷ ರೂಪಾಯಿಗಳಿಗೂ ಮಿಗಿಲಾದ ಮದ್ಯ ಮಾರಾಟವಾಗುವುದಂತೆ. ಮದ್ಯದಂಗಡಿಯ ಮಾಲೀಕರಿಗೆ ಈ ದಿನ ದೀಪಾವಳಿ ಇದ್ದಂತೆ ಎಂದು ವರದಿಯಾಗಿದೆ. ಸಂಜೆಯ ಮಾಮೂಲಿ ಸಮಯದಲ್ಲಿ ಲೋಕಲ್ ಟ್ರೈನ್ಗಳಲ್ಲಿ ಜನಸಂದಣಿ ಕಡಿಮೆ ಇರುವುದು. ಅದೇ ಸರಿರಾತ್ರಿಯಲ್ಲಿ ಹೆಚ್ಚಿನದಾದ ಜನಸಂದಣಿ ಇರುತ್ತದೆ. ಮೋರಿಗಳಲ್ಲಿ ಬಿದ್ದವರನ್ನು ಹುಡುಕಲು ಹೋಗುವ ಕುಟುಂಬ ಸದಸ್ಯರನ್ನು ಕಾಣುವುದು ಮತ್ತು ಕುಡಿದವರನ್ನು ಹೊತ್ತೊಯ್ಯುವುದನ್ನು ನೋಡುವುದೇ ಒಂದು ಮಜದ ವಿಷಯ. ಈ ಸಮಯದಲ್ಲಿ ಅವರುಗಳ ಬಾಯಲ್ಲಿ ಬರುವ ಮಾತುಗಳು ತಮಾಷೆಯಾಗಿದ್ದರೂ, ಅವರ ಬಾಯ ವಾಸನೆಯಿಂದ ನಾವುಗಳು ಮೂರ್ಛೆ ಹೋಗದಿದ್ದರೆ ಸಾಕಷ್ಟೆ.
ಈ ಉತ್ಸವದ ಬಗ್ಗೆ ನಿಮಗೆ ತಿಳಿದಿತ್ತಾ?
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್