- ಸಾಧಕರು ಸಾಮ್ರಾಜ್ಯ ಕಟ್ಟಬಾರದು- ವೈಲ್ಡ್ ವೈಲ್ಡ್ ಕಂಟ್ರಿ - ನವೆಂಬರ್ 5, 2022
- ವ್ಹಾ ರಿಷಭ್ ವ್ಹಾ – ಕಾಂತಾರಕೆ ವ್ಹಾ ವ್ಹಾ - ಅಕ್ಟೋಬರ್ 8, 2022
- ಚೇರ್ಮನ್ ಅವರ ಕುರಿತ ಪುಸ್ತಕ ಮತ್ತು ನಾನು - ಆಗಸ್ಟ್ 22, 2022
ಗಾಂಧೀಜಿಯವರು ಕನಸು ಕಂಡಿದ್ದ ರಾಮ ರಾಜ್ಯಕೆ ಈಗ ಜಾಗ ಇಲ್ಲ ಬಿಡಿ.ಗ್ರಾಮೀಣ ಭಾರತ,ಗುಡಿ ಕೈಗಾರಿಕೆ, ಕೃಷಿ ಕೇಂದ್ರಿತ ಚಟುವಟಿಕೆಗಳು, ಖಾದಿ ಉಳಿವು,ಮಹಿಳಾ ಸ್ವಾತಂತ್ರ್ಯ ಇತ್ಯಾದಿ ಇತ್ಯಾದಿ ಬರೀ ಓದಲಷ್ಟೆ ಛಂದ.
‘ಮಧ್ಯರಾತ್ರಿ ಹನ್ನೆರಡು ಗಂಟೆಗೆ ಒಬ್ಬ ಹೆಣ್ಣು ಸುರಕ್ಷಿತವಾಗಿ ಮನೆ ತಲುಪಿದರೆ ಮಾತ್ರ ನಮ್ಮ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ದೊರೆತಂತೆ’ ಎಂಬ ಗಾಂಧಿಯವರ ಹೇಳಿಕೆಯಲ್ಲಿ ಎಂತಹ ನಿಗೂಢತೆ ಅಡಗಿತ್ತು.ಇಂತಹ ವಾತಾವರಣ ಸ್ವಾತಂತ್ರ್ಯ ದೊರೆತು ಏಳು ದಶಕ ಮುಗಿದರೂ ಸಾಧ್ಯವಾಗುತ್ತಿಲ್ಲ. ಬಹುಶಃ ಗಾಂಧೀಜಿ ನಮ್ಮ ಯೋಗ್ಯತೆಯನ್ನು ಗ್ರಹಿಸಿ ಈ ಮಾತನ್ನು ಹೇಳಿರಬಹುದೆಂಬ ಗುಮಾನಿ ಕಾಡುತ್ತದೆ.
ನೈತಿಕವಾಗಿ ಇನ್ನೂ ಅಧೋಗತಿಗೆ ಇಳಿದಿದ್ದೇವೆ.ರಾಜಕೀಯವಾಗಿ ದೇಶ ಹೇಗಿರಬೇಕು ಎಂದು ಗಾಂಧೀಜಿಯವರು ಬಯಸಿದ್ದರೋ ಅದು ಎಂದೋ ಮಣ್ಣು ಪಾಲಾಗಿದೆ.ರಾಜಕಾರಣವೆಂದರೆ ಅಪ್ಪಟ ಸಮಾಜ ಸೇವೆ ಎಂದು ಗಾಂಧಿವಾದಿಗಳು ನಂಬಿ ರಾಜಕಾರಣದಲ್ಲಿದ್ದರು.
ಆದರೆ ಈಗ ರಾಜಕೀಯ ಭ್ರಷ್ಟಾಚಾರ ಅತ್ಯಂತ ಅನಿವಾರ್ಯ ಎಂಬ ಮಾತನ್ನು ಭ್ರಷ್ಟ ಮತದಾರರಾದ ನಾವು ಒಪ್ಪಿಕೊಂಡಿದ್ದೇವೆ. ಭ್ರಷ್ಟಾಚಾರ ಎಲ್ಲಾ ರಾಜಕೀಯ ಪಕ್ಷಗಳ ಸ್ವೀಕೃತ ಅಲಿಖಿತ ಒಪ್ಪಂದವಾಗಿ ಬಿಟ್ಟಿದೆ.
ಜಾತ್ಯಾತೀತ ಪರಿಕಲ್ಪನೆ ಕೂಡ ಅಷ್ಟೇ ಹಾಸ್ಯಾಸ್ಪದ.ಏನಿದ್ದರೂ ಜಾತಿ ಆಧಾರಿತ ಚುನಾವಣಾ ಸೋಲು ಗೆಲುವುಗಳು. ದಲಿತರ ಬದುಕು ಹಸನಾಗಿಲ್ಲ, ಸಮಾನತೆಯೂ ಬಹು ದೂರದ ಮಾತಾಗಿ ಹೋಗಿದೆ.
ಶೈಕ್ಷಣಿಕ ಸಮಾನತೆ ಸಾಮಾಜಿಕ ಬದಲಾವಣೆಗೆ ಕಾರಣವಾಗಬಹುದು ಎಂಬ ನಂಬಿಕೆಯೂ ಮಾಯವಾಗಿದೆ.’ಹಾಗಾದರೆ ದೇಶ ಎತ್ತ ಸಾಗಿದೆ?’ ನಿಖರವಾಗಿ ಏನೂ ಹೇಳಲಾಗದ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವಿರುವಾಗ ಗಾಂಧಿ ತುಂಬಾ ಅಪ್ರಸ್ತುತ.
ಅದೇ ವಿಷಾದ ಕಾಡುತ್ತಿರುವಾಗ ಮರ್ಯಾದಾ ಹತ್ಯೆಗಳು ಮತ್ತು ಮಾನಭಂಗದಂತಹ ಘಟನೆಗಳು ಸಂಭವಿಸುತ್ತಲೇ ಇವೆ. ಮಹಿಳೆಯರ ಮಾನ ರಕ್ಷಣೆಯಲ್ಲಾದರೂ ಗಾಂಧೀಜಿಯವರ ಆತ್ಮಕ್ಕೆ ಶಾಂತಿ ಕೊಡುವಲ್ಲಿ ನಮ್ಮ ಸಮಾಜ ಸಂಪೂರ್ಣ ವಿಫಲವಾಗಿದೆ.
ಗಾಂಧಿ ಜಯಂತಿ ಹತ್ತಿರವಿರುವಾಗ ಉತ್ತರ ಪ್ರದೇಶದ ಹಾಥ್ರಸ್ ನಲ್ಲಿ ಮನಿಷಾ ವಾಲ್ಮೀಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ನಡೆದ ಘಟನೆಗಿಂತಲೂ ಅಮಾನವೀಯ ಎಂದರೆ ಅವಳ ಶವವನ್ನು ಪಾಲಕರಿಗೆ ನೀಡದೇ ಪೋಲಿಸರು ಸುಟ್ಟು ಹಾಕಿರುವುದು.ಮಧ್ಯ ರಾತ್ರಿಯ ಈ ಕಾರ್ಯ ಚಟುವಟಿಕೆಯನ್ನು ಇಂಡಿಯಾ ಟುಡೇ ಚಾನಲ್ ವರದಿಗಾರ್ತಿ ತನುಶ್ರೀ ಪಾಂಡೆ ಬಿತ್ತರಿಸುವ ಮೂಲಕ ಇಡೀ ಕ್ರೂರ ವ್ಯವಸ್ಥೆಯನ್ನು ಅನಾವರಣ ಮಾಡಿದ್ದಾರೆ. ಇಲ್ಲದಿದ್ದರೆ ಪ್ರಕರಣ ಬೆಳಕಿಗೆ ಬರುತ್ತಿರಲಿಲ್ಲ.
ಇಡೀ ಪ್ರಕರಣಕ್ಕೆ ಹೊಸ ತಿರುವು ನೀಡುವ ವಿಚಿತ್ರ ಹೇಳಿಕೆಯನ್ನು ಅಲ್ಲಿಯ ಹಿರಿಯ ಪೋಲಿಸ್ ಅಧಿಕಾರಿ ನೀಡಿದ್ದಾರೆ.ವ್ಯವಸ್ಥೆ ಮನಸ್ಸು ಮಾಡಿದರೆ ‘ಅತ್ಯಾಚಾರ ನಡೆದೇ ಇಲ್ಲ’ ಎಂದು ಪ್ರಕರಣ ಮುಚ್ಚಿ ಹಾಕಬಹುದು.ಆದರೆ ಪ್ರಶ್ನೆ ಅದಲ್ಲ. ‘ಈ ವ್ಯವಸ್ಥೆಗೆ ಕೊನೆ ಇದೆಯಾ?’ ಎಂಬುದಾಗಿದೆ. ನಮ್ಮ ಸಮಾಜದ ನೈತಿಕ ಮಟ್ಟ ಕುಸಿಯಲು ಇರಬಹುದಾದ ಕಾರಣ ಹುಡುಕಿ ಕೊಡುವ ಸಾಮರ್ಥ್ಯ ಯಾರಿಗಿದೆ?ಜನಪರವಾಗಿ ಕೆಲಸ ಮಾಡಬೇಕಾದ ಮಾಧ್ಯಮಗಳ ದಿವ್ಯ ಮೌನಕೆ ಕಾರಣವಾದರೂ ಏನು? ಉತ್ತರ ಗೊತ್ತಿದೆಯಾದರೂ ಪ್ರಶ್ನೆ ಕೇಳುವ ಅನಿವಾರ್ಯ ಹಿಂಸೆ.
ಹೀಗೆ ಚಿತ್ರ ವಿಚಿತ್ರ ಪ್ರಶ್ನೆಗಳನ್ನು ಕೇಳಿಕೊಳ್ಳುವ ತಲ್ಲಣದಲ್ಲಿರುವಾಗ ಗಾಂಧೀಜಿ ಮತ್ತೆ ಮತ್ತೆ ನೆನಪಾಗಿ ಕಾಡುತ್ತಾರೆ. ಗಾಂಧಿ ಜಯಂತಿ ಆಚರಿಸಿ ‘ಸಬಕೊ ಸನ್ಮತಿ ದೇ ಭಗವಾನ್’ ಎಂದು ಪ್ರಾರ್ಥಿಸಿ ಕಣ್ಣು ಮುಚ್ಚಿದಾಗ ಮನಿಷಾ ವಾಲ್ಮೀಕಿ ಕಿರುಚಿದಂತಾಗುತ್ತದೆ.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್