ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಗುಟ್ಟಿನ ಸಂತೆಯಲಿ ‘ಮಿಟ್ಟಿ’ಯ ಮಾಂಟೇಜ್

ಶ್ರೀ ತಲಗೇರಿ
ಇತ್ತೀಚಿನ ಬರಹಗಳು: ಶ್ರೀ ತಲಗೇರಿ (ಎಲ್ಲವನ್ನು ಓದಿ)

“And, when you want something, all the  universe conspires  in helping you to achieve it. ”

Paulo Coelho.

ಒಂದೊಮ್ಮೆ ಜಗತ್ತು ಸ್ತಬ್ಧವಾಗುತ್ತದೆ ಅಂತ ಸ್ವಲ್ಪ‌ ವರ್ಷಗಳ ಹಿಂದೆ ಯಾರಾದರೂ ಹೇಳಿದ್ದರೆ, ಅದು ತಮಾಷೆಯಾಗಿ ಕಾಣ್ತಾ ಇತ್ತು. ಆದರೆ ಅದರದ್ದೇ ಒಂದು ತುಣುಕು ಅನ್ನುವ ಹಾಗೆ ನಮ್ಮ ಕಾಲಘಟ್ಟದಲ್ಲಿ ನೋಡಿದ ಮೇಲೆ‌ ಒಂದೊಮ್ಮೆ ಜಗತ್ತು ಪೂರ್ಣವಾಗಿ ನಿಶ್ಶಬ್ದವಾದರೆ ಅದರ ಭೀಕರತೆ ಹೇಗಿರಬಹುದು ಅನ್ನುವುದನ್ನು ನಾವು ಚೂರಾದರೂ ಊಹಿಸಬಲ್ಲೆವು. ಮರಗಳ ಕಾಂಡಗಳನ್ನು ಸೀಳಿಕೊಂಡು, ಗಿಡಗಳ ಗುರುತೂ ಇಲ್ಲದೆಯೇ ಮೈಚಾಚಿದ ಡಾಂಬರು ರಸ್ತೆಗಳ ಮೇಲೆ ಆಗೆಲ್ಲೋ ಈಗೆಲ್ಲೋ ಹಾದುಹೋಗುವ ಗಾಡಿಗಳು, ಮೊದಲೇ‌ ಅಲ್ಲೊಬ್ಬರು ಇಲ್ಲೊಬ್ಬರು ವಿರಳವಾಗಿ ಎದುರಾಗುವಂಥ‌ ದೇಶಗಳಲ್ಲಿ ಮೈಲುಗಳಾಚೆಗೂ ಕಾಣದ ಮನುಷ್ಯ ಮುಖಗಳು, ರಾತ್ರಿಯೂ ಎದ್ದು ಕೂತಿರಬೇಕಾದ ನಿಯಾನ್ ದೀಪಗಳ ಕಟ್ಟಡಗಳಲ್ಲಿ ಒಂದೇ ಒಂದು ದೀಪದ ಕುರುಹೂ ಇಲ್ಲದಂಥ ದಿನಗಳು, ಯಾರನ್ನೂ ಮುಟ್ಟುವ ಹಾಗಿಲ್ಲ, ಯಾರೊಂದಿಗೂ ಸೇರುವ ಹಾಗಿಲ್ಲ, ಕಾಲು ಅಥವಾ ಅರ್ಧ ಭಾಗದಷ್ಟೇ ಜನ ಸೇರಬೇಕು ಇತ್ಯಾದಿಗಳ ನಡುವೆ ಇಡೀ ವಾತಾವರಣಕ್ಕೆ ಒದಗುವ ಒಂದು ಅನಾಮಿಕ ಒಂಟಿತನ. ಗಿಜಿಗುಡುವ​ ನಗರಗಳನ್ನು ಬಿಟ್ಟು ಒಮ್ಮೆಲೇ ವಾಪಸ್ಸು ತಮ್ಮ ತಮ್ಮ ಊರುಗಳಿಗೆ ಹೋಗುವವರ ನೆರಳುಗಳು ಈ ನಗರದ ಗೋಡೆಗಳ ಮೇಲೆಲ್ಲಾ ಬಿದ್ದು ಹಿಂಜುತ್ತವೆ. ಯಾವಾಗಲೂ ಅನಿಸೋದು, ಈ ನಗರಕ್ಕೊಂದು ನಿರಂತರ ಶೋಕವಿದೆ. ಹಳ್ಳಿಗಳಿಗೆ ಅವುಗಳದ್ದೇ ಆದ ಜೀವಂತಿಕೆಯಿದೆ, ಅಕ್ಕ ಪಕ್ಕದ ಮನಸ್ಸುಗಳಿವೆ. ಇಲ್ಲಿ ಕೇವಲ ಮನೆಗಳಿವೆ. ಹಾಗಂತ ನಗರ ಬಿಕ್ಕುವುದಿಲ್ಲ; ಅದು ಶಾಶ್ವತ ಮೌನಿ. ಆದರೂ ಇವೆಲ್ಲವುಗಳ ನಡುವೆ ಹೊರಗಿನ ಗದ್ದಲಗಳೇನೇ ಇರಲಿ ಬಿಡಲಿ, ಪ್ರತಿ ಕ್ಷಣ ನಮ್ಮೊಳಗಿನ ನಮ್ಮ ಹೋರಾಟ, ಯೋಚನೆಗಳ ದ್ವಂದ್ವ ಗುಣ, ಉಪಾಯ ಅಸ್ಥಿರತೆ ಅವಲಂಬನೆ ಪ್ರೇಮ ಇತ್ಯಾದಿಗಳ ಭಾವ ತೀವ್ರತೆಗಳು ಜಾಗ ಯಾವುದಾಗಿದ್ದರೂ ಸಮಯ ಯಾವುದಾಗಿದ್ದರೂ ಪರಿಸ್ಥಿತಿ ಯಾವುದಾಗಿದ್ದರೂ ನಿರಂತರವಾಗಿ ಮತ್ತೆ ಮತ್ತೆ ಆವರಿಸಿಕೊಳ್ಳುತ್ತಲೇ ಇರುತ್ತವೆ. ಬಹುಶಃ ಮನುಷ್ಯನನ್ನು ವಿಶೇಷ ಜೀವಿಯನ್ನಾಗಿ ಮಾಡುವುದೇ ಈ ಸಂಕೀರ್ಣ ಭಾವ ರೂಪರೇಖೆಗಳು. ನಮ್ಮ ಕಲ್ಪನೆಗಳಲ್ಲೇ, ಕೆಲವೊಮ್ಮೆ ಹಗಲುಗನಸುಗಳಲ್ಲೇ ಅವೆಷ್ಟೋ ಕೆಲಸಗಳನ್ನು ನಾವು ಸಾಧಿಸಿದೆವು ಅಂದುಕೊಂಡು ಖುಷಿಪಡುವುದು ಕೂಡಾ ಈ ವ್ಯವಸ್ಥೆಯ ಬಹುಮುಖ್ಯ ಭಾಗವೇ! ಅಂಥ ಒಂದು ವಿಷಯವನ್ನಾಧರಿಸಿದ ಚಿತ್ರ ‘ದಿ ಸಿಕ್ರೆಟ್ ಲೈಫ್ ಆಫ್ ವಾಲ್ಟರ್ ಮಿಟ್ಟಿ’

ನಾವು ಬದುಕುವುದು ಏಕಕಾಲಕ್ಕೆ ಒಂದು ಬದುಕನ್ನೇ ಆದರೂ, ಅದು ಹಲವು ಪದರಗಳನ್ನು ಒಳಗೊಂಡಿರುತ್ತದೆ. ಅದರಲ್ಲಿ ಕೆಲವು ಪದರಗಳು ಮಾತ್ರವೇ ಹೊರ ಜಗತ್ತಿಗೆ ಪರಿಚಿತವಾಗಿರುತ್ತವೆ. ಇನ್ನು ಕೆಲವು ಪದರಗಳು ನಮ್ಮ ನಮ್ಮ ಹತ್ತಿರದವರಿಗೆ ಮಾತ್ರ ಕಾಣುವಂತಿದ್ದರೆ, ಇನ್ನು ಕೆಲವು ನಮಗೆ ಮಾತ್ರವೇ ಗೊತ್ತಿರುವಂಥವುಗಳು. ಪ್ರತಿ ವ್ಯಕ್ತಿಯೊಂದಿಗೆ ಇನ್ನೊಬ್ಬ ವ್ಯಕ್ತಿಯ ಸಂಬಂಧ ಯಾವಾಗಲೂ ಖಾಸಗಿ. ಇಷ್ಟಲ್ಲದೆಯೇ ನಮ್ಮಿಂದಲೂ ಗುರುತಿಸಲಾಗದ ಇನ್ನೂ ಹಲವು ಪದರಗಳು ಇಲ್ಲಿ ಇರಬಹುದು. ತನ್ನನ್ನು ತಾನು ಪರಿಚಯಿಸಿಕೊಳ್ಳಲು ಯಾವುದೇ ವಿಶೇಷ ಗುಣೋಕ್ತಿಗಳನ್ನು ಬಳಸುವುದಕ್ಕೆ ಏನೂ ಇಲ್ಲದ ವ್ಯಕ್ತಿಯೊಬ್ಬ ಭರವಸೆ ಅನ್ನುವುದರ ಬೆರಳು ಹಿಡಿದು ಮುಂದೆ ಏನೆಲ್ಲಾ ಮಾಡಿದ ಅನ್ನುವುದು ಈ ಚಿತ್ರದ ಸ್ಥೂಲ ವಿವರಣೆ. ಹೊರ ಜಗತ್ತಿನ ನಮ್ಮ ಕತೆಗೂ ಒಳ ಜಗತ್ತಿನ ನಮ್ಮ ಕತೆಗೂ ಕೆಲವೊಮ್ಮೆ ಸಾಮ್ಯತೆ ಇರಬಹುದು, ಇನ್ನು ಕೆಲವೊಮ್ಮೆ ಎರಡೂ ಕತೆಗಳು ಒಂದಕ್ಕೊಂದು ಯಾವತ್ತೂ ಭೇಟಿಯೇ ಆಗದೇ ಹೋಗಬಹುದು. ಎರಡೂ ಕತೆಗಳಲ್ಲಿ ನಾವು ಪಾಲ್ಗೊಳ್ಳುತ್ತಲೇ ಎರಡರಲ್ಲೂ ನಮ್ಮನ್ನು ನಾವು ಪ್ರತಿನಿಧಿಸಿಕೊಳ್ಳಲು ಪಡುವ ಪರಿಪಾಟಲುಗಳ ನಡುವೆ ನಿಜವಾದ ವ್ಯಕ್ತಿತ್ವ ಯಾವುದು ಅನ್ನುವುದೊಂದು ಆಸಕ್ತಿದಾಯಕ ಪ್ರಶ್ನೆಯೇ ಆದೀತೇನೋ! ಇಂಥ ಭಾವ ಭಿನ್ನತೆಗಳನ್ನು ಉದ್ದೀಪಿಸುವುದಕ್ಕೆ ಏನಾದರೂ ಬೇಕಲ್ಲವಾ? ನಮ್ಮ ದೌರ್ಬಲ್ಯಗಳೇ ಇಲ್ಲಿನ ಮುಖ್ಯ ಅತಿಥಿಗಳು ಅಂತ ಅನಿಸಿದರೆ ಅದು ಸಹಜ ಸತ್ಯವೇ ಅನ್ನಬಹುದೇನೋ..

ನಮಗೆಲ್ಲರಿಗೂ ನಮ್ಮ ನಮ್ಮ ಕ್ಷಣಗಳನ್ನು ದಾಖಲು ಮಾಡುವ ಆಸೆ. ಅದೇನೇ ಕಂಡರೂ ಅದನ್ನು ದಾಖಲಿಸಿ‌ ಆಮೇಲೆ ಅದು ನೆನಪಾಗಿ ಪರಿವರ್ತನೆಯಾದ ಮೇಲೆ ಆ ಕ್ಷಣದ ಕುರಿತಾಗಿ‌ ಆಲೋಚಿಸುತ್ತೇವೆ ಬಹಳಷ್ಟು ಸಲ. ನೆನಪುಗಳನ್ನು ಪೇರಿಸುವವನಿಗೆ ಆ ಕ್ಷಣವನ್ನು ಅನುಭವಿಸುವ ಜೀವನ ಪ್ರೀತಿಯೂ ಇರಬೇಕಲ್ಲವಾ? ಹಲ್ಲುಗಳು ಕಟಕಟನೆ ಕಡಿವ ಚಳಿಯಲ್ಲಿ ಆ ಹಲ್ಲುಗಳ ಶಬ್ದ ಕೇಳಬೇಕು, ಕೈಯುಜ್ಜಿಕೊಳ್ಳುವಾಗ ಚರ್ಮಗಳು ತಿಕ್ಕುವ ಶಬ್ದ ಕೇಳಬೇಕು, ಕೂದಲುಗಳ ಬುಡದಲ್ಲಿ ಬೆವರು ಸೃಜಿಸುವುದನ್ನು ಹೊಸ ಜೀವವೇ ಹುಟ್ಟುತ್ತಿದೆಯೇನೋ ಅನ್ನುವಷ್ಟು ಆಸ್ಥೆಯಿಂದ ನೋಡಬೇಕು, ಮಳೆಯ ಮೊದಲ ಕೆಲ ಹನಿಗಳು ಮಣ್ಣ ರಸ್ತೆಗೆ ಬಿದ್ದಾಗ ಹಾರುವ ಧೂಳ ಕಣಗಳನ್ನು ಕಾಣಬೇಕು, ಎಲ್ಲಾ ಮಾನುಷ ಕ್ಷಣಗಳನ್ನೂ ದಾಖಲಿಸುವುದಕ್ಕಿಂತ ಅದನ್ನು ಹಾಗೇ ನೋಡುತ್ತಾ, ಕೆಲವೊಂದನ್ನು ಅದರ ಪಾಡಿಗೆ ಅದನ್ನು ಬಿಟ್ಟು ಬಿಡುವುದರಲ್ಲೂ ನೆಮ್ಮದಿಯಿದೆ. ಬದುಕಿಗೆ ಗುಟ್ಟುಗಳು ಬೇಕು.. ಹೇಳಿಯೂ ಒಂದಷ್ಟು ಹೇಳದೇ ಹಾಗೇ ಉಳಿದಿರಬೇಕು, ಮತ್ತೆ ನಾಳೆ‌ ಹೇಳಬಹುದಲ್ಲಾ, ನಾಳೆಯ ನಾಳೆಯೂ ಹೇಳಬಹುದಲ್ಲಾ !

ಸಿನೆಮಾ ಅದೆಷ್ಟೇ ಕತೆ, ಪಾತ್ರ, ಸಂಭಾಷಣೆಗಳದ್ದಾದರೂ ಕೊನೆಯಲ್ಲಿ ಈ ಎಲ್ಲವುಗಳು ಕೊಡುವ ‘ಅನುಭವ’ಕ್ಕೆ ಸೇರಿದ್ದು ಸಿನೆಮಾ. ಈ ಚಿತ್ರವನ್ನು ತೋರಿಸಿರುವ ರೀತಿ ಕ್ರಿಯಾತ್ಮಕವಾದದ್ದು. ಬಹುಶಃ ಇದು ಮನಸ್ಸಿಗೆ ಸಂಬಂಧಪಟ್ಟಿದ್ದಕ್ಕೋ ಏನೋ, ಸಿನೆಮಾದ ಬದಲಾಗುವ ದೃಶ್ಯಗಳು ಕೂಡಾ ಮನಸ್ಸಿನಲ್ಲಿ ಒಂದೊಂದಾಗಿ ಬಂದು ಮರೆಯಾಗುವ ಬಿಂಬಗಳ ಹಾಗೇ ಕಾಣುತ್ತವೆ. ಮುದ್ರಣ ಮಾಧ್ಯಮದಿಂದ ಡಿಜಿಟಲ್ ಮಾಧ್ಯಮಕ್ಕೆ ಬದಲಾಗುತ್ತಿರುವ ಪತ್ರಿಕೆಗಳ ಸ್ವರೂಪದ ಕುರಿತಾಗಿ ಕೂಡಾ ಇಲ್ಲಿ ಹೇಳಲಾಗಿದೆ ಮತ್ತು ಆ ಪತ್ರಿಕೆಗಳು ಹೊಸ ಸಾಧ್ಯತೆಗಳನ್ನು ತೆರೆದಿಟ್ಟರೂ ಮುದ್ರಿತ ಪತ್ರಿಕೆಗಳ ಪುಟಗಳ ಸ್ಪರ್ಶ ಸುಖದ ಅನುಭವ ಸಿಗುವುದಕ್ಕೆ ಸಾಧ್ಯವೇ ಇಲ್ಲ. ಭಾವನೆಗಳನ್ನು ದಾಟಿಸುವುದಕ್ಕೆ ಮಾಧ್ಯಮ ಬೇಕು, ಬೈನರಿಗಳು ಅದನ್ನು ಮಾಡಬಲ್ಲವಾ! ಅದು ಬಿಡಿ, ಈ ಅಗಾಧ ಪರ್ವತ ಶಿಖರಗಳು, ಪ್ರತಿಕೂಲ ಹವಾಮಾನ, ವಿಸ್ತಾರ ವಿಸ್ತಾರವಾಗಿ ಚಾಚಿರುವ ಹಸಿರು ಹೊದಿಕೆ, ಇದ್ದಕ್ಕಿದ್ದಂತೆಯೇ ಉಕ್ಕೇರಿ ಬರುವ ಜ್ವಾಲಾಮುಖಿ, ದಿಗಂತಗಳು ಸೇರುವವರೆಗೂ ಕಾಣುವ ಗಾಢ ನೀಲ ಸಾಗರ ಇವೆಲ್ಲಕ್ಕೂ ಮನುಷ್ಯ ಅಪ್ಪಿತಪ್ಪಿ ಬೈನರಿಯಂತೆಯೇ ಅಲ್ಲವಷ್ಟೇ?!

ನಿರ್ಬಂಧವನ್ನು ಪಾಲಿಸುವವರಿಗೆ ಮಾತ್ರ ಹೊರಗಡೆ ಪ್ರವಾಸಕ್ಕೆ ಹೋಗಲು ಅವಕಾಶವಿಲ್ಲದಿರುವಂಥ ಈ ಸಂದರ್ಭದಲ್ಲಿ ವಾಲ್ಟರ್ ಮಿಟ್ಟಿಯ ‘ಲೈಫ್’ನ ಸಿಕ್ರೆಟ್ ಕತೆಗಳಿಗೆ ಗಮನ ಕೊಡುವಿರಾದಲ್ಲಿ, ಅವನು ‘ಲ್ಯಾಂಡ್’ ಆಗಲು ಹಿಮಾಲಯದಂತೆ ತೆರೆದ ಎದೆಯಿಂದ ಸ್ವಾಗತಿಸುವಿರಾದಲ್ಲಿ, ರಾತ್ರಿ ಕಳೆದು ಮತ್ತೆ ಹೊಸ ಬೆಳಗು ಬರುತ್ತದೆ ಅಲ್ಲಿಯವರೆಗೆ ಬದುಕಿನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಳ್ಳುವಿರಾದಲ್ಲಿ, ನಿಮ್ಮೆಳಗೂ ಇರಬಹುದಾದ ಹಲವು ಸಂಗತಿಗಳಿಗೆ ರೆಕ್ಕೆ ಕೊಡುವಿರಾದಲ್ಲಿ ಈ ‘ರೀಲಿ’ನ ಕತೆ ಇಷ್ಟವಾದರೂ ಆಗಬಹುದು…