- ಗುಲಾಬಿ ಫ಼್ರಾಕಿನ ಹುಡುಗಿ - ಮೇ 24, 2020
ಸುಮಾರು ವರ್ಷಗಳ ಹಿಂದೆ ನಾನು ಆ ಕೆಟ್ಟ ಮನೆಯಲ್ಲಿ ಬರೋಬ್ಬರಿ ನಾಲ್ಕು ವರ್ಷಗಳಷ್ಟು ಕಾಲ ವಾಸ ಮಾಡಬೇಕಾಗಿ ಬಂತು. ದೂರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಪ್ಪ,ಅಮ್ಮ ಇಬ್ಬರೂ ವಾರಾಂತ್ಯದಲ್ಲಿ ಮಾತ್ರ ಬಂದು ಹೋಗುತ್ತಿದ್ದರು. ಪಕ್ಕದ ಸರಕಾರಿ ಶಾಲೆಯಲ್ಲಿ ನನ್ನ ವಿಧ್ಯಾಭ್ಯಾಸ ಸಾಗುತ್ತಿತ್ತು. ಸುತ್ತ ಮುತ್ತ ಮನೆಯೆಂದರೆ ಸುಮಾರು ಒಂದು ಕಿಲೊಮಿಟರ್ ದೂರದಲ್ಲಿ ಮಾತ್ರ. ಸಮಯ ಕಳೆಯಲು ಸಹ ಯಾರೂ ಇಲ್ಲ. ಆ ಮನೆಯಲ್ಲಿ , ಹನ್ನೊಂದರಿಂದ ಹದಿನಾರು ವಯಸ್ಸಿನ ವರೆಗೆ ನಾನು ಒಂದು ಭಯಂಕರ ಅನುಭವಗಳಲ್ಲಿ ಕಳೆದೆ. ಹಳೆಯ ಅಟ್ಟದ ಮನೆಯಲ್ಲಿ ನಾನು ಮತ್ತೆ ಮನೆ ಮತ್ತು ಅಡುಗೆ ಕೆಲಸದ ಒಬ್ಬ ಮುದುಕಿ ಮಾತ್ರ. ಅರ್ಧ ಕಿವಿ ಕೇಳದ ಅವಳೊಂದಿಗೆ ನಾನು ಜಾಸ್ತಿ ಮಾತುಕತೆ ನಡೆಸುತ್ತಿರಲಿಲ್ಲ. ನನಗೆ ಬುದ್ದಿ ಬಲಿತಂತೆ ಈ ಮನೆಯಲ್ಲಿ ಯಾಕೋ ಎಲ್ಲವೂ ಸರಿಯಿಲ್ಲ ಅಂತ ಅನ್ನಿಸೋಕೆ ಶುರುವಾಯ್ತು. ಇದ್ದಕ್ಕಿದ್ದಂತೆ ಹೊಡೆದುಕೊಳ್ಳುವ ಬಾಗಿಲು ಕಿಡಕಿಗಳು ಎಂದಿಗೂ ಇವಕ್ಕೆ ಕಾರಣವಾಗಿರಲಿಲ್ಲ. ಯಾಕಂದರೆ ಭೂತ ಪ್ರೇತಗಳ ಬಗ್ಗೆ ನಾನು ಅಷ್ಟಾಗಿ ನಂಬದ ಒರಟು ಗುಣದ ಹುಡುಗನಾಗಿದ್ದೆ. ವಾರದ ಹೆಚ್ಚಿನ ದಿನಗಳು ಶಾಲೆ, ಹೋಂ ವರ್ಕ್, ಮುದುಕಿ, ಅವಳು ಮಾಡುವ ಹಸಿವು ನೀಗಿಸುವ ಅಡುಗೆ, ನನ್ನ ಕೋಣೆ ಹಾಗೂ ಒಂಟಿತನ ಸತತವಾಗಿ ಯಾಂತ್ರಿಕವಾಗಿ ಕಾಲಚಕ್ರವನ್ನು ತಿರುಗಿಸುತ್ತಿದ್ದವು.
ಅಷ್ಟೇ ಜಗತ್ತು ಅಂದುಕೊಂಡವನಿಗೆ ಅದು ತಪ್ಪು ಅದರಾಚೆಗೆ ಇನ್ನೇನೋ ಇದೆ ಅಂತ ಅನ್ನಿಸಿದ್ದು ಹೀಗೆ. ನನ್ನ ಮಲಗುವ ಕೋಣೆಗೆ ತಾಗಿಕೊಂಡೇ ಹಳೆಯ ಬಾತ್ ರೂಮ್ ಇತ್ತು.ಆ ಬಾತ್ ರೂಮ್ ನ ಮುಂದೆಯೇ ಹಾದು ನನ್ನ ಕೋಣೆಗೆ ಹೋಗಬೇಕಿತ್ತು. ಇತ್ತೀಚೆಗೆ ಯಾಕೋ ನನಗೊಂದು ಅನುಮಾನ ಬರಲು ಶುರುವಾಯ್ತು. ರಾತ್ರಿ ವೇಳೆ ನನ್ನ ಬಾತ್ ರೂಮ್ ನಲ್ಲಿ ಯಾರೋ ಇದ್ದಾರೆ ಅನ್ನಿಸುತ್ತಿತ್ತು. ದಿನೇ ದಿನೇ ಈ ಅನುಮಾನ, ಅನುಭವಗಳು ತುಸು ತುಸುವೇ ಹೆಚ್ಚತೊಡಗಿದವು.. ಯಾವಾಗಲಾದರೂ ಆಕಸ್ಮಿಕವಾಗಿ ಬಾತ್ ರೂಮ್ ನ ಬಾಗಿಲು ತೆರೆದಿರುತ್ತಿತ್ತು. ಕೆಲ ತಿಂಗಳ ಬಳಿಕ ಅದೊಂದು ದಿನ ರಾತ್ರಿ ಒಳಗೆ ಕನ್ನಡಿಯ ಮುಂದೆ ಹಳೆಯ ಮರದ ಸ್ಟೂಲ್ ಮೇಲೆ ಒಬ್ಬ ಚಿಕ್ಕ ಬೆಳ್ಳಗಿನ ಹುಡುಗಿ ಕುಳಿತಿದ್ದು ಕಾಣಿಸ ಹತ್ತಿತು. ಗುಲಾಬಿ ಫ್ರಾಕ್ ಹಾಗೂ ಗುಂಗುರು ಕೂದಲಿನ ಅವಳು ಸುಮ್ಮನೆ ಹಳೆಯ ಭಾವಚಿತ್ರದಂತೆ ನನ್ನನ್ನೇ ದಿಟ್ಟಿಸುತ್ತಿದ್ದಳು. ಒಂದು ವೇಳೆ ನಾನು ಬಾತ್ರೂಮ್ ನ ಒಳಗೆ ಹೊಕ್ಕಂತೆ ಅವಳು ಮಾಯವಾಗುತ್ತಿದ್ದಳು. ಮನೆಯಲ್ಲಿ ಅಪ್ಪ ಅಮ್ಮ ಬಂದಾಗ ಈ ತರವೇನೂ ಆಗುತ್ತಿರಲಿಲ್ಲ. ಒಮ್ಮೆ ಈ ವಿಷಯದ ಬಗ್ಗೆ ಅವರಲ್ಲಿ ಪ್ರಸ್ತಾಪಿಸಿ ನನಗೆ ಭಯವಾಗ್ತಿದೆ ಅಂತ ಹೇಳಿದ್ದೆ. ನನ್ನ ಸ್ವಭಾವ ಅರಿತಿದ್ದ ಅವರು ನಿಂಗೆಂತ ಭಯಾನೋ..ಸುಮ್ನೆ ಯೋಚ್ನೆ ಮಾಡಬೇಡ.. ಅಭ್ಯಾಸದ ಬಗ್ಗೆ ಲಕ್ಷ್ಯ ಕೊಡು ಅಂದಿದ್ದರು. ಇನ್ನೂ ಪ್ರಯೋಜನ ವಿಲ್ಲಾ ಅನ್ನಿಸಿ ಸುಮ್ಮನಾದೆ. ಕೆಲವೊಮ್ಮೆ ಬಾತ್ರೂಮ್ ನೊಳಕ್ಕೆ ಹೋಗಿ ಯಾರು ನೀನು ಯಾಕೆ ಕಾಣಿಸ್ತಿಲ್ಲ ನಿನಗೆ ಏನು ಬೇಕು ಯಾಕ್ ಮಾತಾಡ್ತಿಲ್ಲ ಅಂತ ಕೇಳುವ ಪ್ರಯತ್ನ ಮಾಡಿದೆ. ಯಾವತ್ತಿಗೂ ಉತ್ತರ ಕೇಳಬರಲಿಲ್ಲ. ಎಲ್ಲೋ ಓದಿದ್ದೋ ಅಥವಾ ಕೇಳಿದ್ದೋ ನನ್ನ ಭ್ರಮೆಯ ರೂಪದಲ್ಲಿ ನನ್ನ ಕಾಡುತ್ತಿದೆ ಅಂತ ಹದಿನೈದರ ನನಗೆ ನಾನೇ ಹೇಳಿಕೊಳ್ಳುವ ಪ್ರಯತ್ನ ಮಾಡಿದೆ. ಉಹೂಂ.. ಆ ಚಿಕ್ಕ ಹುಡುಗಿ, ಗುಲಾಬಿ ಬಣ್ಣದ ಫ್ರಾಕು, ದಿಟ್ಟಿಸುವ ಕಣ್ಣುಗಳು, ಗುಂಗುರುಳಿನ ಕೂದಲು ಹಾಗೆಯೇ ಆಗಾಗ್ಗೆ ಕಾಣಿಸುವದು ಮಾತ್ರ ಮುಂದುವರೆಯಿತು.. ಇತ್ತೀಚಿಗೆ ಆಕೆ ಸ್ವಲ್ಪ ಕಪ್ಪಗಾಗುತ್ತಿದ್ದಾಳೋ ಅಂತ ಅನ್ನಿಸ ಹತ್ತಿತು. ಆದರೆ ಅದೇ ತರ ಬಾತ್ ರೂಮ್ ನ ಬಾಗಿಲು ತೆರೆದಾಗ ಮಾತ್ರ ಕಾಣಿಸುತ್ತಿದ್ದಳು. ಭ್ರಮೆಯೋ ವಾಸ್ತವವೋ ಯಾಕೆ ಈ ಮಗು ಇಲ್ಲಿ ಬಂಧಿಯಾಗಿದ್ದಾಳೆ ನನ್ನ ಹಾಗೆ ಅಂತ ಅಂದುಕೊಳ್ಳುತ್ತಿದ್ದೆ. ಬೇಸಗೆಯ ರಜೆ ಶುರುವಾಗುತ್ತಿದ್ದಂತೆ ಒಂದು ದಿನ ನನ್ನ ಚಿಕ್ಕಪ್ಪನ ಮಗ ಈ ಮನೆಗೆ ಬಂದ. ಕೆಲವು ದಿನ ಆಟವಾಡಿ ಸಮಯ ಕಳೆಯುವ ಇಚ್ಛೆ ಅವನದ್ದು. ಆ ದಿನ ನನಗೆ ಚೆನ್ನಾಗಿ ನೆನಪಿದೆ. ಬೆಳಗ್ಗೆ ಎದ್ದು ಆತ ನನ್ನ ಬಳಿ ಬಂದು ಮುಗ್ಡನಂತೆ ಕೇಳಿದ..”ಏನಪ್ಪಾ ನಾವಿಬ್ರೇ ಇರೋದು ಆಟ ಆಡೊದಕ್ಕೆ ಅಂದ್ಕೊಂಡಿದ್ದೆ ಚಿಕ್ಕ ಹುಡುಗಿನೂ ಇದ್ದಾಳಲ್ಲೋ.. ಬಾತ್ ರೂಮ್ ನಲ್ಲಿ ಕೂತ್ಕೊಂಡಿದ್ಲು..ಗುಂಗುರು ಕೂದಲಿನ ಹುಡುಗಿ..ನನ್ ಜತೆ ಆಡು ಬಾ ಅಂದು ಕರೆದೆ, ಇಲ್ಲ ನಿನ್ನ ಜತೇನೇ ಆಡಬೇಕಂತೆ..ಹೋಗ್ಲಿ ಬಿಡು ಅಂತೇಳಿ ಬಂದು ಬಿಟ್ಟೆ ಅಂದ.. ನನ್ನ ಜಂಘಾಬಲವೇ ಉಡುಗಿ ಹೋಗಿದ್ದು ಆಗ. ತರ ತರ ನಡುಗಿದೆ ಒಮ್ಮೆ. ಏನೂ ಮಾತಾಡಿಲ್ಲ. ಅಲ್ಲಿಂದ ಕಿಟಾರನೆ ಕಿರುಚಿ ಓಡುವ ಮನಸ್ಸಾಯಿತು. ಅವತ್ತಿಂದ ಆ ಬಾತ್ ರೂಮ್ ಉಪಯೋಗಿಸೊದನ್ನ ಬಿಟ್ಟು ಬಿಟ್ಟೆ. ಯಾವಾಗ್ಲೋ ಒಮ್ಮೆ ಹೀಗೆ ಹೋದಾಗ ಮತ್ತದೇ ಹುಡುಗಿ..ನಗುವಿಲ್ಲ ಅಳುವಿಲ್ಲ.. ಕೆಲ ಸಮಯದ ಬಳಿಕ ನನ್ನ ಅದೃಷ್ಟವೋ ಎಂಬಂತೆ ಅಪ್ಪ ಅಮ್ಮ ಕೆಲಸ ಮಾಡುತ್ತಿದ್ದಲ್ಲೇ ಹೊಸ ಮನೆ ಕೊಂಡರು, ನನ್ನನ್ನು ಅಲ್ಲಿಯ ಶಾಲೆಗೆ ವರ್ಗಾಯಿಸಿದರು.
ಅನೇಕ ವರ್ಷಗಳೇ ಕಳೆದವು. ನನ್ನ ವಿಧ್ಯಾಭ್ಯಾಸ ಮುಗಿದು ಕೆಲಸಕ್ಕೆ ಸೇರಿ ನನ್ನ ಬಾಲ್ಯವನ್ನು ಬಹುಪಾಲು ಮರೆತುಬಿಟ್ಟಿದ್ದೆ. ಬಹು ವರ್ಷಗಳ ನಂತರ ಕಷ್ಟಪಟ್ಟು ಆ ಮನೆ ಮಾರಾಟವಾಯ್ತು ಅಂತ ಕೇಳಿ ಅರಿತೆ. ಅಳಿದುಳಿದ ಹಳೆಯ ವಸ್ತುಗಳು ಹಾಗೂ ಟ್ರಂಕ್ ಗಳನ್ನೆಲ್ಲ ಅಲ್ಲಿಂದ ಅಪ್ಪ ತರಿಸಿಕೊಂಡರು. ಹಾಗೊಂದು ಟ್ರಂಕ್ ನ ಒಳಗೆ ಹಳೆಯ ಕಡತಗಳ ಕೆಳಗೆ ಒಂದು ಕಪ್ಪು ಬಿಳುಪು ಭಾವಚಿತ್ರ. ಗುಂಗುರು ಕೂದಲಿನ ಚಿಕ್ಕ ಮಗು.. ಅಪ್ಪ ನನ್ನನ್ನು ದಿಟ್ಟಿಸುತ್ತಾ ಹೇಳಿದರು..” ಇನ್ನೂ ಮುಚ್ಚಿಟ್ಟು ಫಲವಿಲ್ಲ, ನೀನು ದೊಡ್ಡವನಾಗಿದ್ದೀಯ. ನಿನಗಿಂತ ಮುಂಚೆ ಹುಟ್ಟಿದ ಈ ಮಗು ಎರಡನೇ ವಯಸ್ಸಿನಲ್ಲಿ ಆಟವಾಡುತ್ತದ್ದವಳು ಹಿತ್ತಲಿನ ತೆರೆದ ಭಾವಿಯಲ್ಲಿ ಮುಳುಗಿ ತೀರಿಕೊಂಡಿದ್ದಳು…ಈ ವಿಷಯ ನಿನ್ನಿಂದ ಮುಚ್ಚಿಟ್ಟಿದ್ದೆವು.. ಆ ದಿನ ಪೂರ್ತಿ ಮಲಗಲಿಲ್ಲ. ಮತ್ತೆ ಆ ಮನೆಗೆ ಹೊರಡುವ ಬಯಕೆಯಾಯ್ತು. ಈ ಭಾರೀ ಭಯವಿರಲಿಲ್ಲ. ಸಮಯ ಹೊಂದಿಸಿಕೊಳ್ಳುವಷ್ಟರಲ್ಲಿ ಒಂದು ಸುದ್ದಿ ಬಂತು… ಹಳೆಯ ಮನೆ ಕೆಡವಿ ಹೊಸ ಕಟ್ಟಡದ ಪಾಯ ತೋಡಿದ್ದಾರಂತೆ ಎಂಬುದು.
ಹೆಚ್ಚಿನ ಬರಹಗಳಿಗಾಗಿ
ಮಗುಚಿತೊಂದು ಮೀನು ಬುಟ್ಟಿ
ಶೂಟಿಂಗ್ ಅನ್ಯಾಯ
ಕಾಸಿಲ್ ಆಫ್ ಆಲ್ಬಕರ್ಕೀ