- ಆದಿಯೂ… ನೆಟ್ನ ಪಾಠವೂ - ಆಗಸ್ಟ್ 11, 2021
- ಕಾವ್ಯ ಮತ್ತು ಕಾವ್ಯಾನುಸಂಧಾನ - ಜುಲೈ 16, 2021
- ದೇವರು, ಭೂತ, ಭಯ ಇತ್ಯಾದಿ - ಮೇ 23, 2021
ಟಿಪ್ಪಣಿ: ಮಾತಿನ ಸಾಮೋಪಾಸನೆ (ಆಸಕ್ತರು ಛಾಂದೋಗ್ಯ ಉಪನಿಷತ್ತಿನ ಸಪ್ತ ವಿಧ ಸಾಮೋಪಾಸನೆ ಓದಿಕೊಳ್ಳಬಹುದು)
ಮಾತು ಮಾತನಾಡುವಾಗ
ಹೀಗೇನಾದರೂ ಕಿಟಕಿ ತೆರೆದುಬಿಟ್ಟಿದ್ದರೆ
ಎಂಥ ಅನಾಹುತವಾಗುತ್ತಿತ್ತು
ತೂರಿ ಹೋಗಿ ಕೆಳಗೆ ರಸ್ತೆಯಲ್ಲಿ
ಬ್ಯಾಡ್ಮಿಂಟನ್ ಆಡುತ್ತಿರುವ ಚಿಣ್ಣರ
ರಾಕೆಟ್ ಮೇಲೆ ಬಿದ್ದು
ಆ ಕಡೆ ಈ ಕಡೆ ಹಾರಿ ಬಿದ್ದು ಹಾರಿ ಬಿದ್ದು
ಹೇಗೆ ಇಳಿಯಬಹುದಿತ್ತು
ಕುರ್ಚಿ ಹಾಕಿ ಮುಗುಮ್ಮಾಗಿ ಕೂತು
ಈ ಮಾಗಿಯ ಇಳಿ ಹೊತ್ತು
ತೆರೆದು ಕೂತು ಮಾತಿನ ಲೋಕ
ಎಂಥ ವಿಚಿತ್ರ ಈ ಮಾತಿನದು
ಮಾತು ಮಾತಾಗಲು ಕಂಠ
ನಾಲಗೆ ತುಟಿ ಅಷ್ಟೇ ಸಾಲದು
ಕಿವಿಯೂ ಬೇಕು
ಮೆದುಳಿಂದ ಕೇಳಿಸಿಕೊಳ್ಳುತ್ತಾರೆ ಅವರು
ಕೆಲವರು ಮಾತ್ರ ಒಡಲಿಂದ
ಮಾತು ಮಾತ್ರ ಮರಳುತ್ತದೆ
ಆಡಿದ ಮರುಕ್ಷಣ ಮೌನಕ್ಕೆ
ಗೂಡಿಗೆ ಮರಳುವ ಹಕ್ಕಿ
ಮತ್ತೆ ಎದ್ದಾಗ ಅದು ಅದೇ
ಮೌನವೇ ಮಾತು ಅದೇನೇ
ಬಣ್ಣ ಬೆಳಕು ಆಡಲು ಬೇಕು ಕತ್ತಲ
ಭಿತ್ತಿ ಮಾತಿಗೆ ಮೌನ
ಬೆಳೆ ಬೆಳೆದಂತೆಲ್ಲಾ ಅದು
ಕಡಲಿಂದ ಆವಿ ಎದ್ದು ಮೋಡವಾಗಿ
ಮಳೆ ಸುರಿದು ಮತ್ತೆ ಕಡಲನು ಕೂಡಿ
ತಾಸು ತಾಸು ಸನಿಹವಿದ್ದೂ ಮಾತೇ
ಆಡದ ಉಲ್ಲಾಸ ತನ್ನ ನಗೆಯಿಂದಲೇ
ಎಷ್ಟೋ ನುಡಿದಂತೆ
ಥಟ್ಟನೆ ಎದ್ದು ಹೊರಟೇ ಹೋದಾಗಲೂ
ಉಳಿದೇ ಇರುವಂತೆ
ಪರಿಮಳ- ಮಾತಿಲ್ಲದೆ.
ಮೌನದಲ್ಲಿ ನಿರುಮ್ಮಳತೆಯನ್ನು
ಶಬ್ದದಲ್ಲಿ ನಿರರ್ಥಕತೆಯನ್ನು
ಹುಡುಕಿ ಹೊರಟಾಗಲೂ
ಅದು ಇದ್ದೇ ಇರುತ್ತದೆ
ಕಾಗೆ ಕಾ ಎಂದರೂ ಎನ್ನದಿದ್ದರೂ
ಕಂಠವನ್ನು ಅದುಮಿ ಹಿಡಿದಾಗಲೂ
ಕಿಟಕಿ ತೆಗೆದಾಗಲೂ ಮುಚ್ಚಿದಾಗಲೂ
ಅಲ್ಲಿ ರಾಕೆಟ್ ಮೇಲೆ
ಆ ಕಡೆ ಈ ಕಡೆ ಆಡುತ್ತ
★ ಡಾ. ಗೋವಿಂದ ಹೆಗಡೆ
ಕವನ ಮಾತು ಮಾತನಾಡುವಾಗ ಎಂದು ಪ್ರಾರಂಭವಾಗುತ್ತದೆ. ಈ ಸಾಲನ್ನು ಎರಡು ರೀತಿಯಿಂದ
ಬಗೆಯಬಹುದು. “ಮಾತುಮಾತಿಗೆ, ಮಾತುಮಾತಲ್ಲಿ ಎಂದು ಬಳಸುವಂತೆಯೇ “ಮಾತು ಮಾತನಾಡುವಾಗ” ಎಂದು
ಬಳಸಿದರೆ ಮಾತು ನಮ್ಮ ನಿರ್ಲಕ್ಷ್ಯದಿಂದ ಅಪ್ಪಿತಪ್ಪಿ ಕಿಟಕಿಯಿಂದ ತೂರಿಹೋದರೆ
ಏನಾಗಬಹುದಿತ್ತು ಎಂದು ಕವಿ ಯೋಚಿಸುತ್ತಿದ್ದಾರೆ. ಇನ್ನೊಂದು ರೀತಿಯಲ್ಲಿ ನೋಡುವುದಾದರೆ
ಮಾತು ತನಗೆ ತಾನೇ ಮಾತನಾಡುತ್ತಿದ್ದರೆ ಎಂದೂ ಓದಿಕೊಳ್ಳಬಹುದು. ಇದೊಂದು ಸುಂದರ ಕಲ್ಪನೆ.
ಗೋವಿಂದ ಹೆಗಡೆಯವರ ಕವನಗಳನ್ನು ಓದುತ್ತಿರುವವರಿಗೆ ಅವರು ಶಬ್ದಗಳೊಡನೆ ಆಟವಾಡುವ ಪರಿ
ಹೊಸದೇನಲ್ಲ.
ಮಾತು ಮಾತನಾಡುವುದು ಎಂದರೇನು? ಮಾತು ಮಾತನಾಡುವುದು ಸಾಧ್ಯವೇ?
ಮಾತುಹುಟ್ಟುವುದಾದರೂ ಎಲ್ಲಿ? ಮಾತು ಒಂದು ಶಕ್ತಿ ಎಂಬುದು ನಿರ್ವಿವಾದ. ಈ ಶಕ್ತಿ
ಶರೀರದಲ್ಲಿ ಇರುತ್ತದೆ. ಎಲ್ಲ ಶಕ್ತಿಗಳಂತೆ ಮಾತೂ ಅಮೂರ್ತವಾಗಿರುತ್ತದೆ; ಜಡವಾಗಿರುತ್ತದೆ.
ಅದರ ಮೂಲ ಆಡುವವನ ಪ್ರಸ್ತಾವದಲ್ಲಿ ಇರುತ್ತದೆ, ಉದ್ದೇಶದಲ್ಲಿರುತ್ತದೆ. ಈ ಉದ್ದೇಶವು
ಮಾತುಗಳ ರೂಪ ತಳೆದು ಮಾತಾಗಿ ಧ್ವನಿರೂಪ ತಳೆಯುವುದರೊಳಗೆ ಅಂತರಂಗದಲ್ಲಿ ಸಾಕಷ್ಟು ಮಥನ
ನಡೆಯುತ್ತದೆ. ಜಡವಾಗಿರುವ ಮಾತಿನ ಶಕ್ತಿಗೆ ಉದ್ದೇಶದ ಚಾಲನೆ ದೊರೆತಾಗ ಧ್ವನಿಯಾಗುತ್ತದೆ.
ಈ ಮಾತು ನನಗೆ ಹಿತಕರವೇ? ಇದರಿಂದ ನನ್ನ ಉದ್ದೇಶ ಸಾಧನೆಯಾಗುವುದೇ? ಎಂಬ ವಿಚಾರಗಳು
ಮನಸ್ಸಿನಲ್ಲಿ ಏಳುತ್ತವೆ. ಇದನ್ನು ಸಾಮೋಪಾಸನೆ ಎಂದೂ ಕರೆಯುತ್ತಾರೆ. ಮಾತಿನ ಮೇಲೆ ಹಿಡಿತ
ಸಾಧಿಸಿರುವ ವ್ಯಕ್ತಿಯು ಹಿತಭಾಷಿ, ಮಿತಭಾಷಿ, ಸ್ಮಿತಭಾಷಿ ಮತ್ತು
ಪೂರ್ವಭಾಷಿಯಾಗಿರುತ್ತಾನೆ. ಈ ರೀತಿಯಾಗಿ ಮನಸ್ಸಿನಲ್ಲಿ ನಡೆಯುವ ಮಥನ ಕ್ರಿಯೆಯನ್ನು “ಮಾತು
ಮಾತನಾಡುವಾಗ” ಎಂದು ಸೂಚ್ಯವಾಗಿ ಕವಿ ಬಳಸಿರಬಹುದು. ನನಗೆ ಈ ವಿವರಣೆಯೇ ಹೆಚ್ಚು ಸರಿ
ಎನಿಸುತ್ತದೆ.
ಈ ರೀತಿಯಾಗಿ ಮಾತು ಮಾತನಾಡುವಾಗ ಎಚ್ಚರತಪ್ಪಿ ಮಾತು ಪಾತಗೊಂಡರೆ ಎಷ್ಟು ಅನಾಹುತವಾಗಬಹುದೆಂದು ಊಹಿಸಿ ನೋಡಿ. ಅರೆಹೊರೆದ ಮಾತು ಏನೂ ಅರಿಯದ ಮುಗ್ಧ ಮಕ್ಕಳ ಕಿವಿಗೆ
ಬಿದ್ದರೆ ಅವರೊಳಗೆ ಹೇಗೆ ಇಳಿಯಬಹುದಾಗಿತ್ತು? ತಮ್ಮ ಜವಾಬ್ದಾರಿಯನ್ನು ಮರೆತು ಆಟದಲ್ಲಿ
ಮಗ್ನರಾಗಿರುವ ಇಂಥ ಮಕ್ಕಳ ಕಿವಿಯ ಮೇಲೆ ನಮ್ಮ ನಿರ್ಲಕ್ಷ್ಯದ ಮಾತುಗಳು ಬಿದ್ದರೆ
ಅನಾಹುತವಾಗುವ ಸಂಭವ ಇದೆಯಲ್ಲವೇ? ಅದೇ ರೀತಿ ಬೇಜವಾಬ್ದಾರಿಯ ಜನರು ಆಟದ ಚೆಂಡಿನಂತೆ ತಮ್ಮ
ಮನರಂಜನೆಗಾಗಿ ಈ ಮಾತುಗಳನ್ನು ಬಳಸಿಕೊಂಡರೆ ಆಗುವ ಅನಾಹುತವನ್ನೂ ಊಹಿಸಿಕೊಳ್ಳಿ.
ಈಗ ಜೀವನದ ಮಾಗಿ ಕಾಲದಲ್ಲಿ, ಇಳಿಹೊತ್ತಿನಲ್ಲಿ ಆರಾಮವಾಗಿ ಕುಳಿತು ನಮ್ಮ ಅನುಭವಗಳ
ಹಿನ್ನೆಲೆಯಲ್ಲಿ ಮಾತು ಹೇಗೆ ಇಳಿಯಬಹುದಿತ್ತು ಎಂದು ಯೋಚಿಸೋಣ. (ಇಲ್ಲಿ ಕವನದ ಸೌಂದರ್ಯ
ಗಮನಿಸಿ: ಎರಡನೆಯ ಚರಣದ ಮೊದಲ ಸಾಲು ಮೊದಲನೆಯ ಚರಣದ ಕಡೆಯ ಸಾಲೂ ಆಗುತ್ತದೆ)
ಈಗ ನಾವು ಮಾತಿನ ವಿಶ್ಲೇಷಣೆಗೆ ತೊಡಗೋಣ. ಮಾತು ಹುಟ್ಟಿತು; ಇಷ್ಟಕ್ಕೆ ಅದು
ಮಾತಾಗುತ್ತದೆಯೇ? ಇಲ್ಲ, ಅದಕ್ಕೆ ಇನ್ನೊಂದು ಕಿವಿ ಬೇಕು. ನಾವು ಆಡಿದ ಮಾತು “ಆದಿ”ಯಾದರೆ
ಅದು ಅಂತ್ಯವಾಗುವುದು “ಉಪದ್ರವ” ಅಂದರೆ ಕೇಳುಗನನ್ನು ಸಮೀಪಿಸಿ ಅವನ ಕಿವಿಯನ್ನು
ತಟ್ಟಿದಾಗಲೇ. ಕಿವಿಯನ್ನು ತಟ್ಟಿದರೆ ಸಾಕೆ? ಅದು ಹೃದಯದಲ್ಲಿ ದ್ರವಿಸಬೇಕು. ಕೆಲವರು
ಭಾವನಾತ್ಮಕವಾಗಿ ನಮ್ಮೊಂದಿಗೆ ಸಂವಹನ ಮಾಡಿದರೆ ಇನ್ನು ಕೆಲವರು ಬೌದ್ಧಿಕವಾಗಿ ನಮ್ಮೊಂದಿಗೆ
ವ್ಯವಹರಿಸುತ್ತಾರೆ. ಹೀಗೆ ಮಾತನ್ನು ಕೇಳಿಸಿಕೊಳ್ಳುವವರು ತಮ್ಮ ತಮ್ಮ
ಸಂಸ್ಕಾರಗಳಿಗನುಗುಣವಾಗಿ ಸ್ವಭಾವಕ್ಕನುಗುಣವಾಗಿ ಅರ್ಥ ಮಾಡಿಕೊಳ್ಳುತ್ತಾರೆ.
ಮಾತು ಮಾತ್ರ ಮರಳುತ್ತದೆ
ಆಡಿದ ಮರುಕ್ಷಣ ಮೌನಕ್ಕೆ
ಮಾತನಾಡಿದ ಮೇಲೆ ಮಾತಾಡಿದವನ ಅಂತರಂಗಕ್ಕೆ ತಾತ್ಕಾಲಿಕ ವಿರಾಮ. ಮಾತಿನ ಪ್ರಭಾವವನ್ನು
ನಿರೀಕ್ಷಿಸುತ್ತ ಮನಸ್ಸು ತಾತ್ಕಾಲಿಕವಾಗಿ ಮೌನವಾಗುತ್ತದೆ. ಆಡಿದ ಮಾತು ಕೇಳುಗನನ್ನು ತಲುಪಿ
ಅದು ಕೇಳುಗನ ಪ್ರತಿಕ್ರಿಯೆ “ಪ್ರತಿಹಾರ”ವಾಗಿ ಆಡಿದವನ ಬಳಿಗೆ ಮರಳಿಬಂದು ಅವನಲ್ಲಿ
ನಿಧನವಾಗುತ್ತದೆ. ಈ ಮಾತೆಂಬ ಹಕ್ಕಿ ಇಷ್ಟೆಲ್ಲ ಪ್ರಯಾಣ ಮಾಡಿ ತನ್ನ ಗೂಡಿಗೆ ಮರಳಿ ಕೇಳುಗನ
ಪ್ರತಿಕ್ರಿಯೆಯನ್ನು ತಲುಪಿಸಿ ಮತ್ತೆ ಮೌನವಾಗುತ್ತದೆ. ಎರಡು ಮಾತುಗಳ ನಡುವೆ
ಮೌನವಿರುತ್ತದೆ. ಮಾತು-ಮೌನಗಳು ಹಾಸುಹೊಕ್ಕಾಗಿವೆ.
ಆಡಲು ಬಣ್ಣ ಬೆಳಕು ಬೇಕು. ನಾಟಕವಾಡಲು ಬಣ್ಣ ಬೆಳಕು ಎರಡೂ ಬೇಕು. ಅದೇ ರೀತಿ ಮಾತು ಕೇಳುಗನ
ಮೇಲೆ ಪ್ರಭಾವ ಬೀರಲು ಅದರಲ್ಲಿಯೂ ಬಣ್ಣವಿರಬೇಕು; ಬೆಳಕು ಇರಬೇಕು.
ಬಣ್ಣ ಬೆಳಕುಗಳ ಆಟಕ್ಕೆ ಕತ್ತಲೆಯ ಹಿನ್ನೆಲೆ ಬೇಕು. ಕತ್ತಲೆಯ ಭಿತ್ತಿಯ ಮೇಲೆ ಬಣ್ಣ
ಬೆಳಕುಗಳು ಎದ್ದು ಕಾಣಿಸುತ್ತವೆ. ಅದೇ ರೀತಿ ಮೌನದ ಭಿತ್ತಿಯ ಮೇಲೆ ಮೂಡುವ ಮಾತುಗಳು
ಸುಂದರವಾಗಿರುತ್ತವೆ. ಮಾತು ಮಾತನಾಡಿಕೊಳ್ಳಲು ಮೌನದ ಭಿತ್ತಿ ಬೇಕು.
ಈ ಮೌನ ತಳವಿರದ ವಿಶಾಲವಾದ ಸಾಗರ. ಕಡಲಿನಿಂದ ನೀರಾವಿ ಎದ್ದು ಮೇಲೇರಿ ದಟ್ಟೈಸಿ ಮೋಡವಾಗಿ
ಮಳೆಯಾಗಿ ಮತ್ತೆ ಕಡಲು ಸೇರುವಂತೆ ಮೌನದಿಂದ ಮಾತು ಹುಟ್ಟಿ ವ್ಯಾಪಿಸಿ ಘನಿಸಿ ಮತ್ತೆ
ಮೌನಕ್ಕೆ ಮರಳುತ್ತದೆ. ಈ ಮೌನದ ಸೊಬಗು ನೋಡಿ! ತನ್ನಲ್ಲಿಯೇ ಇರುವ ನೀರು ತನ್ನನ್ನು ಬಿಟ್ಟು
ಆವಿಯಾಗಿ ಮೇಲೇರುವುದನ್ನು ಅದು ತನ್ನಲ್ಲಿಯೇ ಇರುವ ವರೆಗೆ ಅದರ ಬಗ್ಗೆ ಏನನ್ನೂ
ಬಿಟ್ಟುಕೊಡುವುದಿಲ್ಲ. ಅದೇ ರೀತಿ ಮೌನವೂ ಮಾತು ತನ್ನಲ್ಲಿಯೇ ಹುದುಗಿಕೊಂಡಿರುವವರೆಗೆ
ಏನನ್ನೂ ಬಿಟ್ಟುಕೊಡುವುದಿಲ್ಲ. ಆದರೂ ಅದು ಏನನ್ನೋ ಹೇಳುತ್ತಿರುತ್ತದೆ. ನೀರು ಆವಿಯಾಗಿ
ಮಳೆಯಾಗಿ ಮತ್ತೆ ಕಡಲು ಸೇರಿ ಅಸ್ತಿತ್ವ ಕಳೆದುಕೊಂಡರೂ ಅದರ ಪ್ರಭಾವ ನೆಲದ ಮೇಲೆ ಕೊಂಚಕಾಲ
ಉಳಿದಿರುವಂತೆ; ಹೂವಿನಿಂದ ಹೊರಡುವ ಸುಗಂಧವು ಹೂವು ಎದುರಿಗಿಲ್ಲದಿದ್ದರೂ ಕೆಲಕಾಲ
ಸುಗಂಧವನ್ನು ಬೀರುತ್ತಿರುವಂತೆ ಮಾತು ಕೂಡ ಅಳಿದ ಮೇಲೂ ಅಲ್ಪಕಾಲ ಪ್ರಭಾವವನ್ನು
ಉಳಿಸಿಕೊಂಡಿರುತ್ತದೆ.
ಮೌನವಿರುವವರೆಗೆ ಕಲಹವಿಲ್ಲ. ಒಂದು ರೀತಿಯ ನಿರುಮ್ಮಳತೆ ಇರುತ್ತದೆ. ಆಡಿದ ಮಾತು
ನಿರರ್ಥಕವಾಗುತ್ತದೆ. ತನ್ನ ಉದ್ದೇಶವನ್ನು ಸಂಪೂರ್ಣವಾಗಿ ಸಂವಹನ ಮಾಡಲು ಮಾತು
ಅಸಮರ್ಥವಾಗುತ್ತದೆ. ಮೌನವನ್ನು ಎಷ್ಟು ಬಗೆದರೂ ಮೌನವೇ. ಮಾತುಗಳನ್ನು ಬಗೆದಷ್ಟೂ ಅದು
ತೆಳುವಾಗುತ್ತ ನಿರರ್ಥಕವಾಗುತ್ತದೆ. ಮಾತುಗಳಿಗೆ ಸ್ವತಂತ್ರ ಅಸ್ತಿತ್ವವಿಲ್ಲ. ಅದಕ್ಕೆ ಕಿವಿ
ಬೇಕು. ಮಾತನಾಡುವವನ ಮತ್ತು ಕೇಳುಗನ ಮೌನಗಳ ನಡುವೆ ಸಂಪರ್ಕ ಸೇತುವೆ ಇದ್ದರೆ ಮಾತ್ರ
ಮಾತುಗಳಿಗೊಂದಿಷ್ಟು ಅರ್ಥ. ಇಲ್ಲದಿದ್ದರೆ ನಿರರ್ಥಕ.
ಆಡುವವರು ಇಲ್ಲದಿದ್ದರೆ ಚೆಂಡು ತಟಸ್ಥವಾಗಿರುತ್ತದೆ. ಆಡುವವರು ದೊರೆತಾಗ ಅದು
ರ್ಯಾಕೆಟ್ಟುಗಳ ಮೇಲೆ ಆಚೆ-ಈಚೆ ಓಡಾಡುತ್ತಿರುತ್ತದೆ. ಆಟಗಾರರು ಬದಲಾಗಬಹುದು;
ರ್ಯಾಕೆಟ್ಟುಗಳು ಬದಲಾಗಬಹುದು. ಆದರೆ ಚೆಂಡು ಆಚೀಚೆ ಓಡಾಡುತ್ತ ವಿರೂಪಗೊಳ್ಳುತ್ತದೆ.
ಅದೇರೀತಿ ತಪ್ಪಿಸಿಕೊಂಡ ಮಾತುಗಳು ಕೇಳುವವರಿಲ್ಲದಿದ್ದರೆ ಅನಾಥವಾಗಿ ತಟಸ್ಥವಾಗಿರಬಹುದಾದರೂ
ಜನರ ನಡುವೆ ಹರಿದಾಡತೊಡಗಿದರೆ ಅರ್ಥ ಕಳೆದುಕೊಳ್ಳಬಹುದು. ವಿಕೃತವಾಗಬಹುದು. ಕೊನೆಗೊಮ್ಮೆ
ಇಲ್ಲವಾಗಬಹುದು. ಆಡಿದ ಮಾತನ್ನು ನಾವು ಮರೆಯಬಹುದು, ಆದರೆ ಅದರ ತಾಂಡವ ಸಮಾಜದಲ್ಲಿ
ಮುಂದುವರೆಯುತ್ತಲೇ ಇರುವ ಸಂಭವವಿರುತ್ತದೆ.
ಈಗ ಕವನದ ಮೊದಲನೆಯ ಚರಣದಿಂದ ಕೊನೆಯ ಚರಣಕ್ಕೆ ನೇರವಾಗಿ ಬನ್ನಿ. ಮಾತು ಮಾತನಾಡುವಾಗ
ಜನಾರ್ದನ ತುಂಗ, ಲೇಖಕರು
ಹೀಗೇನಾದರೂ ಕಿಟಕಿ ತೆರೆದು ಬಿಟ್ಟಿದ್ದರೆ ಅಲ್ಲಿ ರಾಕೆಟ್ಟುಗಳ ಮೇಲೆ ಕಿಟಕಿ ತೆರೆದಾಗಲೂ
ಮುಚ್ಚಿದ್ದಾಗಲೂ ಆ ಕಡೆ ಈ ಕಡೆ ಆಡುತ್ತಾ ಎಂಥ ಅನಾಹುತವಾಗುತ್ತಿತ್ತು, ಅಲ್ಲವೇ? ಆ ಕಡೆ ಈ
ಕಡೆ ಹಾರಿ ಬಿದ್ದು ಹಾರಿ ಬಿದ್ದು ಹೇಗೇಗೋ ಜನರ ಮನಸ್ಸಿನಲ್ಲಿ ಇಳಿದು ಎಂಥ
ಅನಾಹುತವಾಗುತ್ತಿತ್ತು, ಅಲ್ಲವೇ?
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಹಾಲಾಡಿಯಲ್ಲಿ ಹಾರುವ ಓತಿ